ಶ್ರೀರಾಮನು ಸುವೇಲಪರ್ವತದ ಬಳಿ ಬೀಡುಬಿಟ್ಟಿರುವುದನ್ನು ಕೇಳಿ ರಾವಣನು ಭಯಗೊಂಡನು. ಬಳಿಕ ಮಂತ್ರಿಗಳನ್ನು ತನ್ನಲ್ಲಿಗೆ ಕರೆಸಿಕೊಂಡು ಮುಂದೆ ಮಾಡಬೇಕಾದ ಕಾರ್ಯವನ್ನು ನಿರ್ಧರಿಸಿ ಅವರನ್ನು ಬೀಳ್ಕೊಟ್ಟನು. ಸೀತೆಯಲ್ಲಿ ಮಾಯೆಯಿಂದ ಮೋಹವನ್ನುಂಟುಮಾಡಲು ವಿದ್ಯುತ್‌ಜಿಹ್ವನೆಂಬ ರಾಕ್ಷಸನಿಗೆ ಮಾಯೆಯಿಂದ ರಾಮನ ತಲೆಯನ್ನೂ ಬಿಲ್ಲನ್ನೂ ಮಾಡಿಕೊಂಡು ತನ್ನನ್ನು ಹಿಂಬಾಲಿಸುವಂತೆ ಅಪ್ಪಣೆಮಾಡಿದನು.

ಅನಂತರ ಸೀತೆಯನ್ನು ನೋಡುವ ಆತುರವುಳ್ಳ ರಾವಣನು ಅಶೋಕವನವನ್ನು ಹೊಕ್ಕನು. ಅಶೋಕವನದಲ್ಲಿ ರಾಕ್ಷಸಿಯರಿಂದ ಸತ್ತುವರಿದ ಸೀತೆ ದೀನಳಾಗಿ ತಲೆತಗ್ಗಿಸಿಕೊಂಡು ಗಂಡನನ್ನೇ ಚಿಂತಿಸುತ್ತ ಕುಳಿತಿದ್ದಳು. ಆಕೆಯ ಬಳಿಗೆ ರಾವಣನು ಬಂದು ಸಂತೋಷದಿಂದ ಈ ರೀತಿಯಾಗಿ ಕ್ರೂರವಾಗಿ ನುಡಿದನು: “ಎಲೈ ಮಂಗಳಾಂಗಿ, ಖರನನ್ನು ಕೊಂದ ನಿನ್ನ ಗಂಡನು ಪ್ರಹಸ್ತನಿಂದ ಯುದ್ಧದಲ್ಲಿ ಹತನಾದನು. ನಿನ್ನ ಗರ್ವ ಈಗಲಾದರೂ ಮುರಿಯಿತಲ್ಲವೆ? ಈಗಲಾದರೂ ವ್ಯಸನವನ್ನು ಬಿಟ್ಟು, ನನ್ನ ಹೆಂಡತಿಯರಿಗೆಲ್ಲ ರಾಣಿಯಾಗು. ಸಮುದ್ರದ ಉತ್ತರ ತೀರದಲ್ಲಿ ಬೀಡುಬಿಟ್ಟಿದ್ದ ರಾಮನು ಸಂಜೆಯಾಗುತ್ತಲೆ ಸೈನ್ಯದೊಡನೆ ಮಲಗಿದ್ದನು. ಆಗ ಪ್ರಹಸ್ತನಿಂದ ವಾನರಸೇನೆ ಧ್ವಂಸ ಮಾಡಲ್ಪಟ್ಟಿತು. ಮಲಗಿದ್ದ ರಾಮನ ತಲೆಯನ್ನು ಶೂರನಾದ ಪ್ರಹಸ್ತನು ಕತ್ತಿಹಿರಿದು ಕತ್ತರಿಸಿಬಿಟ್ಟನು. ಲಕ್ಷ್ಮಣನು ಕಪಿಗಳೊಡನೆ ಓಡಿಹೋದನು. ಸುಗ್ರೀವನ ತಲೆಯನ್ನು ಕತ್ತರಿಸಲಾಯಿತು. ಹನುಮಂತನು ದವಡೆಗಳು ಸೀಳಿಹೋಗಿ ನೆಲಕ್ಕುರುಳಿದನು. ಕೆಲವರು ವಾನರರು ಓಡಿಹೋಗಿ ಮರಗಳಲ್ಲಿಯೂ ಬೆಟ್ಟಗಳಲ್ಲಿಯೂ ಅಡಗಿಕೊಂಡರು. ಹೀಗೆ ಪರಾಜಿತನಾದ ನಿನ್ನ ಗಂಡನ ಶಿರಸ್ಸನ್ನು ಪ್ರಹಸ್ತನು ತಂದಿದ್ದಾನೆ.”

ಹೀಗೆಂದು ಹೇಳಿ ರಾವಣನು ರಾಮನ ತಲೆಯನ್ನೂ ಬಿಲ್ಲನ್ನೂ ತರುವಂತೆ ವಿದ್ಯುಜ್ಜಿಹ್ವನಿಗೆ ಅಪ್ಪಣೆಮಾಡಿದನು. ಅದರಂತೆಯೆ ಅವನು ಶ್ರೀರಾಮನ ಮಾಯಾಶಿರಸ್ಸನ್ನೂ ಬಿಲ್ಲನ್ನೂ ರಾವಣನ ಮುಂದಿರಿಸಿ, ನಮಸ್ಕರಿಸಿ ನಿಂತನು. ರಾಕ್ಷಸೇಂದ್ರನು ಅವುಗಳನ್ನು ಸೀತೆಗೆ ತೋರಿಸುತ್ತ ಆಕೆ ತನ್ನವಳಾಗಬೇಕೆಂದು ಬೇಡಿಕೊಂಡನು.

ಆಗ ಸೀತಾದೇವಿ ಆ ಶಿರಸ್ಸನ್ನೂ ಬಿಲ್ಲನ್ನೂ ನೋಡಿ ಹೇಳಲಾರದಷ್ಟು ದುಃಖಿತೆಯಾದಳು. ಕುರುರ ಪಕ್ಷಿಯಂತೆ ಗೋಳಿಡುತ್ತ “ಎಲೈ ಕೈಕೆ, ನನ್ನ ಗಂಡನು ಹತನಾದನು. ನಿನ್ನ ಬಯಕೆ ಕೈಗೂಡಿತಲ್ಲವೆ? ಅಯ್ಯೋ, ನಿನ್ನಿಂದ ವಂಶವೇ ನಾಶವಾಯಿತು. ಇದಕ್ಕಾಗಿಯೆ ನೀನು ರಾಮನನ್ನು ಕಾಡಿಗೆ ಕಳುಹಿದೆಯಾ? ಶ್ರೀರಾಮನು ನಿನಗಾವ ರೀತಿಯಲ್ಲಿ ಅಪಕಾರ ಮಾಡಿದನು?” ಎನ್ನುತ್ತಾ ದುಃಖವುಕ್ಕಿ ಮೂರ್ಛೆಹೊಂದಿದಳು. ಹಾಗೆಯೆ ಮತ್ತೆ ಎಚ್ಚತ್ತು ತನ್ನನ್ನು ತಾನೆ ಸಮಾಧಾನಪಡಿಸಿಕೊಂಡು “ಪ್ರಿಯನೆ, ಹೆಂಡತಿಗೆ ಮೊದಲು ಗಂಡನು ಮಡಿಯುವುದು ಯುಕ್ತವಲ್ಲ. ನನ್ನನ್ನು ದುಃಖದಿಂದ ಬಿಡಿಸಲು ಬಂದ ನಿನಗೆ ಈ ಗತಿಯುಂಟಾಯಿತು. ಕರುವಿಲ್ಲದ ತಾಯಿಯಂತೆ ಕೌಸಲ್ಯೆ ಪುತ್ರಹೀನೆಯಾದಳು. ಲಕ್ಷ್ಮಣನಿಂದ ನಿನ್ನ ಸಾವಿನ ಸಂಗತಿಯನ್ನು ಕೇಳಿ ಆಕೆ ಎದೆಯೊಡೆದು ಸಾಯುವಳು. ಈಗ ನೀನು ನನ್ನನ್ನು ಬಿಟ್ಟು ಎಲ್ಲಿಗೆ ಹೋದೆ? ಸ್ವರ್ಗದಲ್ಲಿರುವ ನಿನ್ನ ತಂದೆಯನ್ನು ಸೇರಲು ನಿನಗೆ ಬಯಕೆಯಾಯಿತೆ? ನನ್ನೊಡನೆ ನೀನೇಕೆ ಮಾತನಾಡದಿರುವೆ? ನನಗಾಗಿ ನೀನು ಮೃತನಾದೆಯಲ್ಲವೆ? ನಿನ್ನ ಹೆಂಡತಿಯಾದ ನಾನೆ ಮೃತ್ಯುಸ್ವರೂಪಿಯಾದೆನು. ರಾಕ್ಷಸೇಂದ್ರ, ರಾಮನ ಶಿರಸ್ಸನ್ನು ದೇಹದೊಡನೆ ಸೇರಿಸು, ನಾನು ಗಂಡನನ್ನು ಅನುಸರಿಸುತ್ತೇನೆ” ಎಂದು ಕಮಲಲೋಚನೆಯಾದ ಸೀತೆ ಮತ್ತೆ ಮತ್ತೆ ಗೋಳಿಟ್ಟಳು. ಅಷ್ಟರಲ್ಲೆ ದ್ವಾರಪಾಲಕರು ಬಂದು, ರಾಜಕಾರ್ಯಕ್ಕಾಗಿ ಪ್ರಹಸ್ತನು ಮಂತ್ರಿಗಳೊಡನೆ ಬಂದಿರುವುದಾಗಿ ತಿಳಿಸಿದನು. ದೂತನ ಮಾತನ್ನು ಕೇಳಿ ರಾವಣನು ಅಲ್ಲಿಂದ ಹೊರಡಲು ಕೂಡಲೆ ರಾಮನ ಮಾಯಾಶಿರಸ್ಸೂ ಬಿಲ್ಲೂ ಅಲ್ಲಿಂದ ಮಾಯವಾದುವು.

ರಾವಣನು ಅಲ್ಲಿಂದ ಹೊರಟುಹೋದ ಮೇಲೆ ವಿಭೀಷಣನ ಹೆಂಡತಿಯಾದ ಸರಮೆ ಆಕೆಯನ್ನು ಸಮಾಧಾನಪಡಿಸಿದಳು: “ಪ್ರಿಯಸಖಿ, ರಾವಣನೊಂದಿಗೆ ನೀನಾಡಿದ ಮಾತುಗಳನ್ನೆಲ್ಲ ಕೇಳಿದೆ. ಮಲಗಿದ್ದ ಶ್ರೀರಾಮನನ್ನು ಸಂಹರಿಸುವುದೆಂದರೇನು? ಕಪಿಗಳಿಂದ ರಕ್ಷಿತನಾದ ರಾಮನ ವಿಷಯದಲ್ಲಿ ಅದು ಅಸಂಭವ. ಇದೆಲ್ಲ ರಾವಣನ ಮಾಯೆ. ಇನ್ನು ಮುಂದೆ ನಿನ್ನ ವ್ಯಸನಕಾಲ ಕಳೆದುಹೋಯಿತು. ಶುಭ ಸಮೀಪಿಸುತ್ತಿದೆ. ಕಪಿಸೈನ್ಯದಿಂದ ಕೂಡಿ ಶ್ರೀರಾಮನು ಸಮುದ್ರತೀರದಲ್ಲಿ ಬೀಡುಬಿಟ್ಟಿರುವುದನ್ನು ನಾನೆ ನೋಡಿದೆ. ಈ ವರ್ತಮಾನವನ್ನು ಕೇಳಿ ಭಯಗೊಂಡ ರಾವಣನು ಮಂತ್ರಿಗಳೊಡನೆ ಮುಂದಿನ ಕಾರ್ಯವನ್ನು ಕುರಿತು ಯೋಚಿಸುತ್ತಿದ್ದಾನೆ. ” ಸರಮೆ ಈ ರೀತಿ ಹೇಳುತ್ತಿರುವಂತೆಯೆ, ಯುದ್ಧಸನ್ನಾಹ ಸೂಚಕವಾದ ಭೇರಿ ಶಬ್ದ ಕೇಳಿ ಬಂತು. ಆಗ ಸರಮೆ ಮತ್ತೆ ಸೀತೆಯನ್ನು ಕುರಿತು “ಎಲೈ ಭೀರು, ಈ ಯುದ್ಧಸೂಚಕವಾದ ಭೇರಿಶಬ್ದವನ್ನು ಕೇಳಿದೆಯಾ? ನಿಮಗೆ ಕಲ್ಯಾಣವೂ ರಾಕ್ಷಸರಿಗೆ ಭಯವೂ ಉಂಟಾಗುವ ಕಾಲ ಸಮೀಪಿಸಿತು. ಶ್ರೀರಾಮನು ರಾವಣನನ್ನು ಕೊಂದು ನಿನ್ನ ಬಳಿಗೆ ಬರುವನು. ಬೇಗನೆ ನೀನು ರಾಮನ ತೊಡೆಯನ್ನೇರಿ ಪತಿವ್ರತೆಯಾಗಿ ಮೆರೆಯುವುದನ್ನು ನೋಡಲು ಬಯಸುತ್ತೇನೆ. ನಿನಗೆ ಬಹುಬೇಗ ಸುಖ ದೊರಕಲಿ!” ಎಂದು ಸಂತೈಸಿದಳು. ಅಷ್ಟರಲ್ಲಿಯೆ ವಾನರಸೇನೆಯ ಕಂಠಘೋಷ ಭೂಮಿಯನ್ನೇ ನಡುಗಿಸಿತು. ಆ ಶಬ್ದವನ್ನು ಕೇಳಿ ರಾಕ್ಷಸರು ಎದೆಗುಂದಿದರು.

ಶ್ರೀರಾಮನು ತನ್ನ ಬಲದೊಡನೆ ಲಂಕೆಯನ್ನು ಸಮೀಪಿಸಿದನೆಂಬ ಸುದ್ದಿಯನ್ನು ಕೇಳಿ, ರಾವಣನು ಕ್ಷಣಕಾಲ ಚಿಂತಿಸಿ ಮಂತ್ರಿಗಳನ್ನು ತನ್ನಲ್ಲಿಗೆ ಬರಮಾಡಿಕೊಂಡನು. ಮುಂದೆ ರಾಮನೊಡನೆ ಯುದ್ಧಮಾಡುವ ವಿಷಯದಲ್ಲಿ ಅವರ ಅಭಿಪ್ರಾಯವನ್ನು ಕೇಳಲು ರಾವಣನ ಮಾವನು ಎದ್ದುನಿಂತು ಈ ರೀತಿ ನುಡಿದನು: “ಎಲೈ ರಾವಣೇಶ್ವರ, ಬಲಹೀನನಾದವನು ಬಲವಂತನೊಡನೆ ಸಂಧಿಮಾಡಿಕೊಳ್ಳುವುದು ಉತ್ತಮವಾದ ಮಾರ್ಗ. ಆದ್ದರಿಂದ ಹೀನಬಲನಾಗುತ್ತಿರುವ ನೀನು ಶ್ರೀರಾಮನೊಡನೆ ಸಂಧಿಮಾಡಿಕೊಳ್ಳುವುದು ಹಿತವೆಂದು ನನಗೆ ತೋರುತ್ತದೆ. ಸೀತಯಿಂದ ನಮಗೆ ಈ ವಿಪತ್ತು ಉಂಟಾಗಿದೆಯಷ್ಟೆ. ಅಂಥ ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸು. ದೇವದಾನವರಿಂದಲೂ ಗೆಲ್ಲಲು ಅಸಾಧ್ಯನಾದ ಶ್ರೀರಾಮನೊಡನೆ ಹಗೆತನ ಬೇಡ. ಲಂಕೆಯಲ್ಲಿ ತೋರುತ್ತಿರುವ ಅಪಶಕುನಗಳಿಂದ ನಮಗೆ ಸೋಲು ಸಿದ್ಧ. ಆದ್ದರಿಂದ ಈಗ ನಡೆಯುತ್ತಿರುವ ವಿಷಯಗಳನ್ನು ಪರಿಶೀಲಿಸಿ, ಮುಂದಿನ ಕಾರ್ಯವನ್ನು ಕೈಗೊಳ್ಳು.”

ಮಾವನಾದ ಮಾಲ್ಯವಂತನ ಮಾತು ರಾವಣನಿಗೆ ರುಚಿಸಲಿಲ್ಲ. ಕೋಪದಿಂದ ಹುಬ್ಬನ್ನು ಗಂಟಿಕ್ಕಿ ಸಭೆಯನ್ನು ನೋಡುತ್ತ ಮಾಲ್ಯವಂತನಿಗೆ ಈ ರೀತಿ ನುಡಿದನು: “ನೀನು ಹಿತವಚನವೆಂದು ಹೇಳಿದ ಅಪ್ರಿಯವಾದ ಮಾತುಗಳು ನನ್ನ ಕಿವಿಯಮೇಲೆ ಬೀಳಲೆ ಇಲ್ಲ. ಕಪಿಗಳಿಂದ ಒಡಗೂಡಿ, ಒಬ್ಬೊಂಟಿಗನಾದ ರಾಮನನ್ನು ಮಹಾಸಮರ್ಥನೆಂದು ತಿಳಿದೆಯೇನು? ಶತ್ರುಗಳಲ್ಲಿರುವ ಪಕ್ಷಪಾತದಿಂದ, ನಾನು ವೀರನೆಂಬ ಹೊಟ್ಟೆಯುರಿಯಿಂದ ನೀನು ಈ ತೆರನಾದ ಕಠಿಣೋಕ್ತಿಗಳನ್ನಾಡಿದೆಯೆಂದು ತಿಳಿಯುತ್ತೇನೆ. ರಾಮನಿಗೆ ಹೆದರಿ ಸೀತೆಯನ್ನು ಒಪ್ಪಿಸುವೆನೆಂದು ತಿಳಿದೆಯೇನು? ಸುಗ್ರೀವ ಲಕ್ಷ್ಮಣರಿಂದ ಪರಿವೃತನಾದ ರಾಮನನ್ನು ಇನ್ನು ಸ್ವಲ್ಪ ದಿನಗಳಲ್ಲಿ ನಾಶಮಾಡುವುದನ್ನು ನೀನೆ ನೋಡುವೆ. ನನ್ನನ್ನು ಎರಡು ತುಂಡಾಗಿಸಿದರೂ ನಾನು ಇನ್ನೊಬ್ಬರಿಗೆ ತಲೆಬಾಗೆನು. ಇದು ನನ್ನ ಸ್ವಭಾವ. ಸಮುದ್ರವನ್ನು ದಾಟಿ ಬಂದ ರಾಮನು ಹಿಂದಿರುಗಿ ಹೋಗಲಾರನು.”

ಹೀಗೆಂದು ನುಡಿದು ರಾವಣನು ಮಂತ್ರಿಗಳೊಡನೆ ಆಲೋಚಿಸಿ, ನಗರವನ್ನು ಭದ್ರಪಡಿಸುವ ಏರ್ಪಾಡುಮಾಡಿದನು. ಪೂರ್ವ ದಿಕ್ಕಿನಲ್ಲಿ ಪ್ರಹಸ್ತನನ್ನೂ, ಪಶ್ಚಿಮದಲ್ಲಿ ಶೂರನಾದ ತನ್ನ ಮಗ ಇಂದ್ರಜಿತ್ತುವನ್ನೂ, ಉತ್ತರದಲ್ಲಿ ಶುಕಸಾರಣರನ್ನೂ, ದಕ್ಷಿಣದಲ್ಲಿ ಮಹಾಪಾರ್ಶ್ವ ಮಹೋದರರನ್ನೂ, ನಗರದ ಮಧ್ಯದಲ್ಲಿ ಪುರರಕ್ಷಣೆಗಾಗಿ ವಿರೂಪಾಕ್ಷನನ್ನೂ ನಿಯಮಿಸಿದನು. ಹೀಗೆ ವಿಧಿವಶನಾದ ರಾವಣನು ತಾನು ಮಾಡಿದ ಏರ್ಪಾಡಿಗೆ ತಾನೆ ಸಂತೋಷಗೊಂಡು ಅಂತಃಪುರವನ್ನು ಹೊಕ್ಕನು.

ಇತ್ತ ಸುಗ್ರೀವನು ವಿಭೀಷಣ ಜಾಂಬವಂತ ಆಂಜನೇಯ ಮುಂತಾದ ಕಪಿವೀರರೊಡನೆ ಲಂಕೆಯನ್ನು ಮುತ್ತುವ ವಿಷಯದಲ್ಲಿ ಆಲೋಚನೆ ನಡಸಿದನು. ಆ ವೇಳೆಗೆ ವಿಭೀಷಣನ ನಾಲ್ವರು ಮಂತ್ರಿಗಳು ಪಕ್ಷಿರೂಪವನ್ನು ಧರಿಸಿ ಲಂಕೆಯನ್ನು ಹೊಕ್ಕು ರಾವಣನು ನಡೆಸಿದ ಏರ್ಪಾಟನ್ನು ತಿಳಿದು ಬಂದಿದ್ದರು. ಇದನ್ನು ವಿಭೀಷಣನು ತಿಳಿಸಿ “ಶೂರರಾದ ರಾಕ್ಷಸರು ಆಯುಧಪಾಣಿಗಳಾಗಿ ನಗರವನ್ನು ಕಾಯುತ್ತಿದ್ದಾರೆ. ಸಾವಿರಾರು ಶೂರರಿಂದ ಪರಿವೃತನಾದ ರಾವಣನೆ ಉತ್ತರದ್ವಾರವನ್ನು ರಕ್ಷಿಸುತ್ತಿದ್ದಾನೆ. ವಿರೂಪಾಕ್ಷನಂತೂ ಹೆಸರಾದ ಬಿಲ್ಲುಗಾರ. ಇವನು ನಗರದ ಮಧ್ಯದಲ್ಲಿದ್ದಾನೆ. ಲೆಕ್ಕವಿಲ್ಲದಷ್ಟು ರಾಕ್ಷಸರೂ ಆನೆ ಕುದುರೆ ತೇರುಗಳೂ ನಗರದ ರಕ್ಷಣೆಗೆ ಸಿದ್ಧವಾಗಿವೆ” ಎಂದನು. ಆ ಬಳಿಕ ಈ ವಿಷಯವನ್ನು ರಾಮನಿಗೆ ತಿಳಿಸಿ “ರಾಮಚಂದ್ರ, ಹಿಂದೆ ರಾವಣನು ಕುಬೇರನೊಡನೆ ಯುದ್ಧಮಾಡಿದನು. ವೀರ್ಯದಲ್ಲಿ ಅವನಿಗೆ ಸಮಾನರಾದ ಅರವತ್ತು ಲಕ್ಷ ಜನ ರಾಕ್ಷಸರು ಅವನನ್ನು ಹಿಂಬಾಲಿಸಿದ್ದರು. ಈ ರೀತಿಯ ಸೈನ್ಯ ಅವನ ಬಳಿ ಲೆಕ್ಕವಿಲ್ಲದಷ್ಟಿದೆ. ನಿನ್ನನ್ನು ಕೋಪಗೊಳಿಸುವುದಕ್ಕಾಗಲಿ ಹೆದರಿಸುವುದಕ್ಕಾಗಲಿ ನಾನು ಈ ರೀತಿ ಮಾತನಾಡುತ್ತಿಲ್ಲ. ದೇವತೆಗಳನ್ನೆ ಸಂಹರಿಸುವ ಶಕ್ತಿ ನಿನಗಿಲ್ಲವೆ? ಈಗ ರಾಕ್ಷಸಸೈನ್ಯಕ್ಕೆ ಇದಿರಾಗಿ ವಾನರ ಸೇನೆಯನ್ನು ವ್ಯೂಹರೂಪವಾಗಿ ನಿಲ್ಲಿಸು” ಎಂದನು. ವಿಭೀಷಣನ ಮಾತನ್ನು ಕೇಳಿ ಶ್ರೀರಾಮನು ಪ್ರಹಸ್ತನಿಗಿದಿರಾಗಿ ಯುದ್ಧ ನಡೆಸಲು ವಾನರಶ್ರೇಷ್ಠನಾದ ನೀಲನನ್ನು ಪೂರ್ವದಿಕ್ಕಿನಲ್ಲಿ, ಮಹಾಪಾರ್ಶ್ವ ಮಹೋದರರೊಡನೆ ಯುದ್ಧಮಾಡಲು ಅಂಗದನನ್ನು ದಕ್ಷಿಣ ದಿಕ್ಕಿನಲ್ಲಿ ನಿಲ್ಲಿಸಿದನು. ಇಂದ್ರಜಿತ್ತುವನ್ನು ಎದುರಿಸಲು ಹನುಮಂತನಿಗೆ ಅಪ್ಪಣೆ ಮಾಡಿದನು. ರಾವಣನನ್ನು ಎದುರಿಸಲು ಲಕ್ಷ್ಮಣನೊಡನೆ ತಾನೆ ಸಿದ್ಧನಾದನು. ವಿರೂಪಾಕ್ಷನನ್ನು ಎದುರಿಸಲು ಸುಗ್ರೀವ ವಿಭೀಷಣರನ್ನು ನಿಯಮಿಸಲಾಯಿತು. ವಾನರರು ಮನುಷ್ಯ ರೂಪವನ್ನು ಧರಿಸಕೂಡದೆಂದೂ, ಹಾಗೆ ಧರಿಸಿದ ಪಕ್ಷದಲ್ಲಿ, ರಾಕ್ಷಸರೂ ಧರಿಸಿದರೆ ತನಗೆ ಶತ್ರುಗಳನ್ನು ಕೊಲ್ಲುವುದು ಕಷ್ಟವಾಗುವುದೆಂದೂ ಶ್ರೀರಾಮನು ಅಪ್ಪಣೆ ಮಾಡಿದನು.

ಈ ರೀತಿಯಾಗಿ ಏರ್ಪಾಟನ್ನು ನಡೆಸಿದ ಮೇಲೆ ಶ್ರೀರಾಮನು ಲಂಕೆಯನ್ನು ನೋಡುವ ಉದ್ದೇಶದಿಂದ ಸುವೇಲಪರ್ವತವನ್ನು ಹತ್ತಿದನು. ಸುಗ್ರೀವ ವಿಭೀಷಣರೂ ಇತರ ವಾನರವೀರರೂ ಅವನನ್ನು ಹಿಂಬಾಲಿಸಿದರು. ಆ ಪರ್ವತದ ಶಿಖರವನ್ನೇರಿದ ಅವರಿಗೆ, ಪೂರ್ಣಚಂದ್ರನ ಬೆಳದಿಂಗಳಿನ ಆ ರಾತ್ರಿಯಲ್ಲಿ ಪ್ರಾಕಾರಗಳಿಂದ ಕೂಡಿ, ಅನೇಕ ದ್ವಾರಗಳಿಂದ ಅಲಂಕೃತವಾದ ಆ ಲಂಕಾನಗರ ಬಹು ಚೆನ್ನಾಗಿ ಕಾಣಿಸಿತು. ಆ ನಗರದ ಉದ್ಯಾನಗಳನ್ನು ಕಂಡು ವಾನರರು ಸೋಜಿಗಗೊಂಡರು. ಸಂಪಗೆ, ಅಶೋಕ, ಮಾವು, ಹಲಸು, ಪುನ್ನಾಗ ಮುಂತಾದ ಮರಗಳಿಂದ ಕೂಡಿದ ಆ ಉದ್ಯಾನಗಳು ಇಂದ್ರನ ನಂದನವನಗಳಂತೆ ಶೋಭಿಸುತ್ತಿದ್ದವು. ಎಲ್ಲ ಋತುಗಳಲ್ಲಿಯೂ ಫಲಬಿಡುವ ವೃಕ್ಷಗಳು, ಗಾನಮಾಡುವ ಕೋಗಿಲೆಗಳು, ನರ್ತನಮಾಡುವ ನವಿಲುಗಳು, ಶಬ್ದಮಾಡುವ ದುಂಬಿಗಳು ವಾನರರನ್ನು ಸಂತೋಷಗೊಳಿಸಿದುವು. ಅಲ್ಲದೆ ನೂರು ಗಾವುದ ವಿಸ್ತೀರ್ಣವುಳ್ಳ ಮೂವತ್ತು ಗಾವುದ ಉದ್ದವುಳ್ಳ ಆ ಲಂಕಾನಗರಿ ಉನ್ನತವಾದ ಶಿಖರಗಳಿಂದಲೂ ಪ್ರಾಕಾರಗಳಿಂದಲೂ ವಿಮಾನಗಳಿಂದಲೂ ದೇವಸ್ಥಾನಗಳಿಂದಲೂ ಕೂಡಿ ಶಿಖರಗಳಿಂದ ಕೂಡಿದ ಕೈಲಾಸದಂತೆ ಶೋಭಿಸುತ್ತಿತ್ತು. ಇವುಗಳ ನಡುವೆ ಪಟ್ಟಣಕ್ಕೆ ಅಲಂಕಾರಪ್ರಾಯವಾಗಿದ್ದ, ಚಿತ್ರಗಳಿಂದಲೂ ಉದ್ಯಾನಗಳಿಂದಲೂ ಐಶ್ವರ್ಯದಿಂದಲೂ ಸಮೃದ್ಧವಾದ ರಾವಣನ ಅರಮನೆಯನ್ನು ಕಂಡು ರಾಮನು ಆಶ್ಚರ್ಯಹೊಂದಿದನು.