ಶ್ರೀರಾಮನು ಸುಗ್ರೀವನೆ ಮೊದಲಾದ ಕಪಿವೀರರಿಂದ ಕೂಡಿ, ಆ ಪರ್ವತದ ತುತ್ತತುದಿಯ ಕೋಡುಗಲ್ಲನ್ನೇರಿ ಒಂದು ಕ್ಷಣಕಾಲ ನಿಂತು ವಿಶ್ವಕರ್ಮನಿಂದ ನಿರ್ಮಿತವಾದ ಆ ಲಂಕಾನಗರದ ಚೆಲುವನ್ನು ನೋಡಿದನು. ಆ ನಗರದ ಹೆಬ್ಬಾಗಿಲಿನಲ್ಲಿ ಕೆಂಪು ಗಂಧವನ್ನು ಲೇಪಿಸಿಕೊಂಡು, ರತ್ನಾಭರಣಗಳಿಂದ ಭೂಷಿತನಾಗಿ ಕೆಂಪುವಸ್ತ್ರವನ್ನುಟ್ಟು ಕೆಂಪುವಸ್ತ್ರವನ್ನು ಹೊದ್ದು, ಬೈಗುಗೆಂಪು ಅಂಚುಕಟ್ಟಿದ್ದ ಕರಿಮೋಡದಂತೆ ನಿಂತಿದ್ದ ಪರಾಕ್ರಮಿಯಾದ ರಾವಣನು ಕಾಣಿಸಿಕೊಂಡನು. ಐರಾವತದ ದಂತದ ಹೊಡೆತದಿಂದ ಅವನೆದೆಯಲ್ಲಿ ಉಂಟಾದ ಗಾಯದ ಗಂಟುಗಳು ಕಾಣಬರುತ್ತಿದ್ದುವು. ವಾನರಸೇನೆಯನ್ನು ನೋಡುತ್ತಿದ್ದ ರಾವಣನನ್ನು ಕಂಡು ರೋಷದಿಂದ ಸುಗ್ರೀವನು ರಾವಣನಿದ್ದ ಸ್ಥಳಕ್ಕೆ ಹಾರಿದನು. ಕ್ಷಣಮಾತ್ರದಲ್ಲಿಯೆ ಸುಗ್ರೀವನು ರಾವಣನನ್ನು ಕಂಡು ಭಯವಿಲ್ಲದೆ “ಎಲೈ ರಾಕ್ಷಸ, ನಾನು ಲೋಕನಾಥನಾದ ಶ್ರೀರಾಮನ ಸ್ನೇಹಿತ, ಹಾಗೂ ಭೃತ್ಯ. ಈಗ ನೀನು ನನ್ನ ಶಕ್ತಿಯಿಂದ ತಪ್ಪಿಸಿಕೊಂಡು ಹೋಗಲಾರೆ” ಎಂದು ಹೇಳಿ ಅವನ ಕಿರೀಟವನ್ನು ಸೆಳೆದು ಭೂಮಿಯಲ್ಲಿ ಕೆಡವಿ, ಅವನನ್ನೂ ಭೂಮಿಗೆ ಬೀಳಿಸಿದನು. ರಾವಣನಾದರೊ ಜಾಗ್ರತೆಯಾಗಿ ಮೇಲಕ್ಕೆ ಎದ್ದು ಸುಗ್ರೀವನಾದ ನಿನ್ನನ್ನು ಹೀನಗ್ರೀವನನ್ನಾಗಿ ಮಾಡುವೆನೆಂದು ಹೇಳಿ ತನ್ನೆರಡು ತೋಳುಗಳಿಂದ ಅವನನ್ನು ಅಪ್ಪಿಕೊಂಡು ಆ ಗೋಪುರದಿಂದ ನೂಕಿದನು. ಪುಟಹೊಡೆದ ಚೆಂಡಿನಂತಿದ್ದ ಸುಗ್ರೀವನು ಆ ರಾವಣನನ್ನು ಮತ್ತೆ ಎತ್ತಿಹಾಕಿದನು. ಹೀಗೆ ಒಬ್ಬರೊಡನೊಬ್ಬರು ಹೋರಾಡುತ್ತ ರಕ್ತದಿಂದ ಕೆಂಪಾದ ದೇಹವುಳ್ಳ ಅವರು ಹೂಬಿಟ್ಟಿರುವ ಬೂರುಗದ ಮರದಂತೆಯೂ ಮುತ್ತುಗದ ಮರದಂತೆಯೂ ತೋರಿಬರುತ್ತಿದ್ದರು. ಮುಷ್ಟಿ ಅಂಗೈಗಳಿಂದ ಹೊಡೆದಾಡುತ್ತ ಅವರು ಬಹುಕಾಲ ಕ್ರೂರವಾಗಿ ಹೋರಾಡಿದರು. ಗೋಪುರದಿಂದ ಕೆಳಗೆ ಬಿದ್ದು ಹೋರಾಡಿದರು. ನಿಂತು, ಒಬ್ಬರನ್ನೊಬ್ಬರು ಬಿಗಿಯಪ್ಪಿಕೊಂಡು, ಕ್ರೋಧದಿಂದ ಹುಲಿಸಿಂಹಗಳಿಂತೆ, ಆನೆಯ ಮರಿಗಳಂತೆ ಯುದ್ಧಮಾಡಿದರು. ಹೀಗೆ ಬಹುಕಾಲ ಒಬ್ಬರನ್ನೊಬ್ಬರು ಅಪ್ಪಳಿಸುತ್ತ ಯುದ್ಧಮಾಡಿದರೂ ಯಾರಿಗೂ ಆಯಾಸವಾಗಲಿಲ್ಲ. ಒಬ್ಬರನ್ನೊಬ್ಬರು ನುಂಗಲು, ಸಂಹರಿಸಲು ಮಾರ್ಜಾಲದಂತೆ ನಿಂತರು. ಹೀಗೆ ಇಬ್ಬರೂ ವಿಚಿತ್ರವಾಗಿ ತಿರುಗುತ್ತ ಒಬ್ಬರ ಹೊಡೆತವನ್ನು ಮತ್ತೊಬ್ಬರು ತಪ್ಪಿಸಿಕೊಳ್ಳುತ್ತ ಬಗ್ಗುತ್ತ ಹಿಂದಿರುಗುತ್ತ ವಂಚಿಸುತ್ತ ಕಾದಿದರು. ಈ ನಡುವೆ ರಾವಣನು ತನ್ನ ಮಾಯೆಯನ್ನು ತನ್ನಮೇಲೆ ಪ್ರಯೋಗಿಸಬೇಕೆಂದಿರುವುದನ್ನರಿತು ಸುಗ್ರೀವನು ಅಂತರಿಕ್ಷಕ್ಕೆ ಹಾರಿದನು. ಸುಗ್ರೀವನಿಂದ ವಂಚಿತನಾದ ರಾವಣನು ಗೋಪುರ ದ್ವಾರದ ಬಳಿಯಲ್ಲಿಯೆ ನಿಂತನು.

ರಾವಣನೊಡನೆ ಯುದ್ಧಮಾಡಿ ಬಂದ ಸುಗ್ರೀವನ ಗಾಯಗಳನ್ನು ನೋಡಿ ಅವನನ್ನು ಅಪ್ಪಿಕೊಂಡು ಶ್ರೀರಾಮನು ಈ ರೀತಿ ನುಡಿದನು:

“ಮಿತ್ರನೆ, ನನ್ನೊಡನೆ ಆಲೋಚಿಸದೆ ವಾನರೇಶ್ವರನಾದ ನೀನು ಈ ಸಾಹಸ ಮಾಡಬಹುದೆ? ನಿನ್ನ ಕೆಲಸದಿಂದ ನನ್ನನ್ನೂ ಈ ವಿಭೀಷಣನನ್ನೂ ದೊಡ್ಡ ಆಶಂಕೆಗೆ ಗುರಿಮಾಡಿದ್ದೆ. ನೀನು ಇಂದ್ರಸಮಾನನಾದ ಪರಾಕ್ರಮಿಯಾದರೂ ನಿನಗೆ ಆಪತ್ತು ಒದಗಿದ್ದರೆ ಸೀತೆಯಿಂದಾಗಲಿ ಭರತ ಶತ್ರುಘ್ನರಿಂದಾಗಲಿ ರಾಜ್ಯದಿಂದಾಗಲಿ ಏನು ಪ್ರಯೋಜನವಾಗುತ್ತಿತ್ತು? ಆಮೇಲೆ ನಾನು ಬದುಕಿದ್ದರೂ ಏನು ಉಪಯೋಗ?”

ಆ ಮಾತನ್ನು ಕೇಳಿ “ನಿನ್ನ ಹೆಂಡತಿಯನ್ನು ಕದ್ದೊಯ್ದ ರಾವಣನನ್ನು ಕಂಡೊಡನೆಯೆ ನನಗೆ ರೋಷವುಕ್ಕಿತು, ಸಹಿಸಲಾಗಲಿಲ್ಲ” ಎಂದು ಸುಗ್ರೀವನು ರಾಮನ ಗೌರವಕ್ಕೆ ಪಾತ್ರನಾದನು.

ಆಗ ಉಂಟಾಗುತ್ತಿದ್ದ ಕೆಟ್ಟ ಶಕುನಗಳನ್ನು ಕಂಡು ರಾಕ್ಷಸರ ನಾಶಕಾಲ ಹತ್ತಿರವಾಗುತ್ತಿರುವುದನ್ನರಿತು, ಲಂಕೆಯನ್ನು ಪ್ರವೇಶಿಸಲು ಸೈನ್ಯವನ್ನು ಗರುಡವ್ಯೂಹವನ್ನಾಗಿ ನಿಲ್ಲಿಸಬೇಕೆಂದು ಲಕ್ಷ್ಮಣನಿಗೆ ಅಪ್ಪಣೆಮಾಡಿ ರಾಮನು ಪರ್ವತದಿಂದ ಇಳಿದನು. ಹಾಗೆ ಇಳಿದು ವಾನರ ಸೇನೆಯನ್ನು ಯುದ್ಧಕ್ಕೆ ಹುರಿದುಂಬಿಸಿ, ವಾನರವೀರರೊಡನೆ ರಾಮನು ಧನುಸ್ಸನ್ನು ಧರಿಸಿ, ಲಂಕೆಗೆ ಎದುರಾಗಿ ಹೊರಟನು. ರಾಮನನ್ನು ಅನುಸರಿಸಿ ಹೋದ ಕಪಿಸೈನ್ಯದಿಂದ ಭೂಮಿಯೆಲ್ಲವೂ ಮುಚ್ಚಿಹೋಯಿತು. ಹೀಗೆ ಲಂಕೆಯನ್ನು ವಾನರಸೇನೆ ಸಮೀಪಿಸಿದೊಡನೆಯೆ, ಶ್ರೀರಾಮನು ತಮ್ಮನಾದ ಲಕ್ಷ್ಮಣನೊಡನೆ ಲಂಕೆಯ ಉತ್ತರದ್ವಾರವನ್ನು ಅಡ್ಡಗಟ್ಟಿ ನಿಂತನು. ಆ ದ್ವಾರವನ್ನು ಆಯುಧಪಾಣಿಗಳಾದ ರಾಕ್ಷಸರಿಂದ ರಾವಣನು ರಕ್ಷಿಸುತ್ತಿದ್ದನು. ನೀಲನು ಪೂರ್ವದ್ವಾರದಲ್ಲಿಯೂ ಅಂಗದನು ದಕ್ಷಿಣದ್ವಾರದಲ್ಲಿಯೂ ಹನುಮಂತನು ಪಶ್ಚಿಮದ್ವಾರದಲ್ಲಿಯೂ ತಮ್ಮ ಸೇನೆಗಳೊಡನೆ ಹೋಗಿ ನಿಂತರು. ಪ್ರತಿಯೊಂದು ದ್ವಾರದಲ್ಲಿಯೂ ರಾಮನ ಅಪ್ಪಣೆಯಂತೆ ಲಕ್ಷ್ಮಣನು ಒಂದೊಂದು ಕೋಟಿ ವಾನರರನ್ನು ನಿಲ್ಲಿಸಿದನು. ಸೈನ್ಯದ ಮಧ್ಯಭಾಗದಲ್ಲಿ ಸುಗ್ರೀವನು ಜಾಂಬವಂತನೊಡನೆ ನಿಂತನು. ಮಿಡತೆಗಳಂತೆ ಲಂಕೆಯನ್ನು ಮುತ್ತಿದ ಈ ವೀರರನ್ನು ಕಂಡು ಲಂಕಾನಗರಿಯ ಜನರಿಗೆ ಆಶ್ಚರ್ಯವಾಯಿತು. ಭೂಮಿ ಆಕಾಶ ಬೆಟ್ಟ ಗಿಡ ಮರಗಳಲ್ಲಿ ಎಲ್ಲೆಲ್ಲಿ ನೋಡಿದರೂ ವಾನರರೇ ವಾನರರು! ರಾಮಲಕ್ಷ್ಮಣರಿಂದಲೂ ಸುಗ್ರೀವನಿಂದಲೂ ರಕ್ಷಿತವಾದ ಈ ಸೇನೆಯನ್ನು ದೇವತೆಗಳಾಗಲಿ ರಾಕ್ಷಸರಾಗಲಿ ಮನಸ್ಸಿನಿಂದಲೂ ಕೂಡ ಜಯಿಸಲು ಅಸಾಧ್ಯವಾಗಿತ್ತು.

ರಾವಣನೊಡನೆ ಯುದ್ಧಕ್ಕೆ ಸೈನ್ಯವನ್ನು ಸಿದ್ಧಗೊಳಿಸಿದಮೇಲೆ, ಶ್ರೀರಾಮನು ನೀತಿಶಾಸ್ತ್ರಕ್ಕೆ ಅನುಸಾರವಾಗಿ ಮಂತ್ರಿಗಳೊಡನೆ ಆಲೋಚಿಸಿ, ರಾವಣನಲ್ಲಿಗೆ ದೂತನೊಬ್ಬನನ್ನು ಕಳುಹಿಸಲು ನಿಶ್ಚೈಸಿದನು. ಇದಕ್ಕೆ ವಿಭೀಷಣನ ಅನುಮತಿ ದೊರೆಯಲು ವಾಲಿಪುತ್ರನಾದ ಅಂಗದನನ್ನು ಕುರಿತು ಈ ರೀತಿ ನುಡಿದನು:

“ಅಂಗದ, ನೀನು ನಿರ್ಭಯನಾಗಿ ಲಂಕೆಗೆ ಹೋಗಿ ಈ ನನ್ನ ಮಾತನ್ನು ರಾವಣನಿಗೆ ತಿಳಿಸು – ‘ಸಾಯಲು ಬಯಸುವ ಎಲೈ ರಾವಣನೆ, ದೇವಗಂಧರ್ವರಿಗೆ ಋಷಿಗಳಿಗೆ ಅಪ್ಸರೆಯರಿಗೆ ತೊಂದರೆ ಕೊಟ್ಟು ಕೊಬ್ಬಿಹೋಗಿರುವ ನಿನಗೆ ಯಮನಂತೆ ನಾನು ಈ ಲಂಕಾನಗರದ ಹೆಬ್ಬಾಗಿಲಿನಲ್ಲಿ ಬಂದು ನಿಂತಿದ್ದೇನೆ. ಬ್ರಹ್ಮನ ವರಬಲದಿಂದ ಕೊಬ್ಬಿದ ನಿನಗೆ ಕೊನೆಗಾಲ ಸಮೀಪಿಸಿದೆ. ಆದ್ದರಿಂದ ನೀನು ಸೀತೆಯನ್ನು ನನಗೆ ತಂದೊಪ್ಪಿಸಿ ಶರಣಾಗತನಾಗದಿದ್ದರೆ, ನನ್ನ ಹರಿತವಾದ ಬಾಣಗಳಿಂದ ನಿನ್ನನ್ನು ಕೊಂದು ನನ್ನ ಬಳಿಯಿರುವ ವಿಭೀಷಣನಿಗೆ ಲಂಕೆಯ ಪಟ್ಟಗಟ್ಟುತ್ತೇನೆ. ಮೂರ್ಖರಿಂದ ಕೂಡಿ ಅಧರ್ಮದಿಂದ ರಾಜ್ಯವಾಳಲು ಇನ್ನು ಕ್ಷಣಕಾಲವೂ ನಿನಗೆ ಸಾಧ್ಯವಾಗದು. ಸೀತೆಯನ್ನು ಒಪ್ಪಿಸಲು ಇಷ್ಟವಿಲ್ಲದಿದ್ದರೆ ನನ್ನೊಡನೆ ಯುದ್ಧ ಮಾಡು; ನಿನ್ನ ಪ್ರಾಣ ನನ್ನ ವಶದಲ್ಲಿದೆ. ‘”

ಶ್ರೀರಾಮನ ಸಂದೇಶವನ್ನು ಸ್ವೀಕರಿಸಿ ತೇಜಸ್ವಿಯಾದ ಅಂಗದನು ಅಂತರಿಕ್ಷದಲ್ಲಿ ಹಾರಿ, ಕ್ಷಣಕಾಲದಲ್ಲಿ ಅರಮನೆಯನ್ನು ಹೊಕ್ಕು ಮಂತ್ರಿಗಳಿಂದ ಕೂಡಿದ ರಾವಣನನ್ನು ಕಂಡನು. ಹರಿಪುಂಗವನಾದ ಅಂಗದನು ರಾವಣನ ಸಮೀಪದಲ್ಲಿ ನಿಂತು ಅವನಿಗೆ ರಾಮಸಂದೇಶವನ್ನು ಹೆಚ್ಚು ಕಡಮೆಮಾಡದೆ ಈ ರೀತಿ ನುಡಿದನು.

“ಎಲೈ ನೀಚ, ನಾನು ಶ್ರೀರಾಮಚಂದ್ರನ ದೂತ. ವಾಲಿಪುತ್ರನಾದ ಅಂಗದನ ಹೆಸರನ್ನು ನೀನು ಕೇಳಿರಬಹುದು. ಅವನೇ ನಾನು. ಶ್ರೀರಾಮನು ನಿನಗೆ ಈ ರೀತಿ ಅಪ್ಪಣೆಮಾಡಿರುತ್ತಾನೆ – ‘ನೀನು, ಗಂಡಸಾದರೆ ಊರಿನಿಂದ ಹೊರಗೆ ಬಂದು ಯುದ್ಧಮಾಡು. ನಿನ್ನನ್ನು ಬಂಧುಬಾಂಧವರೊಡನೆ ಕೊಲ್ಲುತ್ತೇನೆ. ನೀನು ಸಾಯಲು ಮೂರು ಲೋಕಗಳಿಗೂ ಕ್ಷೇಮವುಂಟಾಗುವುದು. ಸೀತೆಯನ್ನೊಪ್ಪಿಸಿ ನನಗೆ ಶರಣಾಗತನಾಗದಿದ್ದರೆ, ನೀನು ಸತ್ತು ವಿಭೀಷಣನು ಲಂಕೆಗೆ ಪ್ರಭುವಾಗುವವನು. ”

ಅಂಗದನು ನುಡಿದ ರಾಮಸಂದೇಶವನ್ನು ಕೇಳಿ ರೋಷಗೊಂಡ ರಾವಣನು ಅಂಗದನನ್ನು ಹಿಡಿದು ಕೊಲ್ಲುವಂತೆ ಮಂತ್ರಿಗಳಿಗೆ ಅಪ್ಪಣೆ ಮಾಡಿದನು. ರಾಮನ ಅಪ್ಪಣೆಯಂತೆ ನಾಲ್ವರು ಅಂಗದನನ್ನು ಹಿಡಿದುಕೊಂಡರು. ರಾಕ್ಷಸರ ನಡುವೆ ತನ್ನ ಪರಾಕ್ರಮವನ್ನು ತೋರಬಯಸಿದ ಅಂಗದನು ತನ್ನೆರಡು ತೋಳುಗಳಲ್ಲಿ ಆ ರಾಕ್ಷಸರನ್ನು ಇರುಕಿಕೊಂಡು ಆಕಾಶಕ್ಕೆ ಹಾರಿ, ಅಲ್ಲಿಂದ ಅವರನ್ನು ಕೊಡವಿಬಿಟ್ಟನು. ಅನಂತರ ಅಂಗದನು ಪರ್ವತ ಶಿಖರದಂತೆ ಎತ್ತರವಾದ ರಾವಣನ ಅರಮನೆಯ ಶಿಖರವನ್ನು ಹಿಂದೆ ದೇವೇಂದ್ರನು ಹಿಮವತ್ ಪರ್ವತದ ಶಿಖರವನ್ನು ಸೀಳಿದಂತೆ, ಮುರಿದು ಬಿಟ್ಟನು. ಹೀಗೆ ರಾವಣನಿಗೆ ಸಂಕಟವನ್ನುಂಟುಮಾಡಿ, ಅಂತರಿಕ್ಷದಲ್ಲಿ ನಿಂತು ರಾಕ್ಷಸರೆಲ್ಲರಿಗೂ ಕೇಳುವಂತೆ ತನ್ನ ಹೆಸರನ್ನು ಗಟ್ಟಿಯಾಗಿ ಕೂಗಿ ಹೇಳಿ, ಶ್ರೀರಾಮನಲ್ಲಿಗೆ ಬಂದು, ವಾನರರಿಗೆ ಹರ್ಷತಂದನು. ರಾವಣನು ತನ್ನ ನಾಶ ಸಮೀಪಿಸಿತೆಂದುಕೊಂಡು ಕೋಪದಿಂದ ನಿಟ್ಟುಸಿರುಬಿಟ್ಟನು. ಇತ್ತ ರಾಮನು ಸುಗ್ರೀವನ ಮಾತಿನಂತೆ ಲಂಕೆಯನ್ನು ನಾಲ್ಕು ದಿಕ್ಕಿನಿಂದಲೂ ಮುತ್ತಿದನು. ವಾನರಸೇನೆಯನ್ನು ಕಂಡು ದೀನರಾದ ರಾಕ್ಷಸರು ಭಯದಿಂದ ಕೂಗಿಕೊಂಡರು, ಗೋಳಿಟ್ಟರು.