ಶ್ರೀರಾಮನು ಲಂಕೆಯನ್ನು ಮುತ್ತಿದ ಸಮಾಚಾರವನ್ನು ರಾವಣನು ದೂತರಿಂದ ತಿಳಿದನು. ನಗರದ ರಕ್ಷಣೆಯನ್ನು ಮೊದಲಿಗಿಂತಲೂ ಇಮ್ಮಡಿಸಿ ಉಪ್ಪರಿಗೆಯನ್ನು ಏರಿ ಭೂಮಿಯೆಲ್ಲವೂ ವಾನರಮಯವಾಗಿರುವುದನ್ನು ಕಂಡನು. ನಗರವನ್ನು ಮುತ್ತಿದ ಕಪಿಗಳನ್ನು ಹೇಗೆ ನಾಶಪಡಿಸಬೇಕೆಂಬ ಯೋಚನೆ ಅವನಲ್ಲಿ ಬಲವಾಯಿತು. ಇತ್ತ ತನ್ನನ್ನೇ ನೆನೆಯುತ್ತ, ಶೋಕದಿಂದ ಬೆಂದು ಸಂಕಟಪಡುತ್ತಿರುವ ಸೀತೆಯನ್ನು ನೆನೆದು ರಾಮನು ಕ್ರೋಧಗೊಂಡು ಶತ್ರುಗಳನ್ನು ವಧಿಸಲು ವಾನರರಿಗೆ ಅಪ್ಪಣೆಮಾಡಿದನು. ಶ್ರೀರಾಮನ ಅಪ್ಪಣೆಯನ್ನು ಕೇಳಿದಕೂಡಲೆ ವಾನರರು ಸಿಂಹನಾದಮಾಡುತ್ತ, ಬೆಟ್ಟಗಳನ್ನೂ ಮರಗಳನ್ನೂ ಹೊತ್ತು ನಿಂತರು, ರಾಮನಿಗಾಗಿ ಪ್ರಾಣಬಿಡಲು ಸಿದ್ಧರಾದ ವಾನರರು ಕೋಟೆಯ ಗೋಡೆಗಳನ್ನೂ ಬಾಗಿಲುಗಳನ್ನೂ ಮುರಿಯುತ್ತ ಬಂದರು. ಮತ್ತೆ ಕೆಲವರು ಕೋಟೆಯ ಗೋಡೆಗಳನ್ನೇರಿ, ಗೋಪುರಗಳನ್ನೂ ಕಾಂಚನ ತೋರಣಗಳನ್ನೂ ಮುರಿದರು. “ಶ್ರೀರಾಮನಿಗೆ ಜಯವಾಗಲಿ! ಸುಗ್ರೀವನಿಗೆ ಜಯವಾಗಲಿ!” ಎಂದು ಘೋಷಿಸುತ್ತ ನಗರದಲ್ಲಿ ಸಂಚರಿಸಿದರು. ಕುಮುದನು ಪೂರ್ವದ್ವಾರದಲ್ಲಿ, ಶತಬಲಿ ದಕ್ಷಿಣದ್ವಾರದಲ್ಲಿ, ಸುಷೇಣನು ಪಶ್ಚಿಮದ್ವಾರದಲ್ಲಿ ರಾಕ್ಷಸರನ್ನು ಎದುರಿಸಿದರು. ಶ್ರೀರಾಮನಿಗೆ ಸಹಾಯಕನಾಗಿ ಗದಾಪಾಣಿಯಾದ ವಿಭೀಷಣನು ತನ್ನ ಮಂತ್ರಿಗಳೊಡನೆ ನಿಂತನು.

ಇತ್ತ ರಾವಣನ ಅಪ್ಪಣೆಯಂತೆ ರಾಕ್ಷಸಸೇನೆ ಯುದ್ಧಕ್ಕೆ ಹೊರಟಿತು. ಚಂದ್ರನಂತೆ ಬೆಳ್ಳಗಿರುವ ಮುಖವುಳ್ಳ ಭೇರಿಗಳನ್ನು ಬಂಗಾರದ ಕೋಲುಗಳಿಂದ ಬಾರಿಸಿದರು. ಇದರೊಡನೆ ರಾಕ್ಷಸರು ಶಂಖಗಳನ್ನೂ ಮೊಳಗಿಸಿದರು. ಚಂದ್ರೋದಯ ಕಾಲದಲ್ಲಿ ಉಬ್ಬಿದ ಸಮುದ್ರದಂಎ ರಾಕ್ಷಸರು ತಂಡತಂಡವಾಗಿ ಹೊರಟರು. ಶಂಖದ ಘೋಷ, ಆನೆ ಕುದುರೆಗಳ ಗರ್ಜನೆ, ರಾಕ್ಷಸರ ಸಿಂಹನಾದ ಇವುಗಳಿಂದ ಭೂಮಿ ಆಕಾಶಗಳು ತುಂಬಿಹೋದುವು. ಈ ಕೋಲಾಹಲದ ನಡುವೆ ವಾನರರಿಗೂ ರಾಕ್ಷಸರಿಗೂ ಯುದ್ಧ ಮೊದಲಾಯಿತು. ರಾಕ್ಷಸಶ್ರೇಷ್ಠರು ಚಿನ್ನದ ಗಂಟೆಗಳನ್ನು ಕಟ್ಟಿದ ಕುದುರೆಗಳನ್ನು ಬಿಗಿದ ರಥಗಳಲ್ಲಿ ಕುಳಿತು, ಕವಚಗಳನ್ನು ತೊಟ್ಟು ‘ರಾಕ್ಷಸೇಶ್ವರನಿಗೆ ಜಯವಾಗಲಿ!’ ಎಂದು ಸಿಂಹನಾದಮಾಡುತ್ತ ವಾನರಸೇನೆಯ ಮೇಲೆ ಬಿದ್ದರು. ಇತ್ತ ಶ್ರೀರಾಮನಿಗೆ ಜಯವನ್ನು ಕೋರಿ ರಾಕ್ಷಸಸೇನೆಯನ್ನು ಎದುರಿಸಿದ ವಾನರ ಸೇನೆಗೂ ರಾವಣಸೇನೆಗೂ ದ್ವಂದ್ವಯುದ್ಧ ಮೊದಲಾಯಿತು. ಈಶ್ವರನೊಡನೆ ಯುದ್ಧಮಾಡುವ ಯಮನಂತೆ ಇಂದ್ರಜಿತ್ತು ಅಂಗದನೊಡನೆ ಹೋರಾಡಿದನು. ಹಾಗೆಯೇ ವಾನರರನ್ನು ಪ್ರಧಾನರಾದ ವೀರರಿಗೂ ರಾಕ್ಷಸವೀರರಿಗೂ ಘೋರಯುದ್ಧವಾಯಿತು. ಶ್ರೀರಾಮನನ್ನು ರಶ್ಮಿಕೇತು, ಅಗ್ನಿಕೇತು, ಸುಪ್ತಘ್ನ, ಯಜ್ಞಕೋಪರೆಂಬ ರಾಕ್ಷಸರು ಮುತ್ತಿ ಬಾಣಗಳಿಂದ ಹೊಡೆದರು. ಆದರೇನು ಶ್ರೀರಾಮನ ಬಾಣಗಳಿಂದ ಕ್ಷಣಮಾತ್ರದಲ್ಲಿ ಅವರು ಪ್ರಾಣಗಳನ್ನು ನೀಗಿದರು. ಇತ್ತ ವಾನರರು ಅನೇಕ ರಾಕ್ಷಸ ವೀರರನ್ನು ದ್ವಂದ್ವಯುದ್ಧದಲ್ಲಿ ಕೊಂದರು. ಮುರಿದ ಕತ್ತಿಗಳಿಂದ, ರಥಗಳಿಂದ, ಸತ್ತುಬಿದ್ದ ವಾನರ ರಾಕ್ಷಸರಿಂದ, ಆನೆ ಕುದುರೆಗಳಿಂದ ರಣರಂಗ ತುಂಬಿ ಹೋಯಿತು. ತಲೆಯಿಲ್ಲದ ಮುಂಡಗಳು ದಿಕ್ಕುದಿಕ್ಕಿಗೆ ಹಾರಿದುವು. ರಕ್ತ ಪ್ರವಾಹರೂಪವಾಗಿ ಹರಿಯಿತು. ರಾಕ್ಷಸರಾದರೊ ಮೊದಲಿಗಿಂತಲೂ ದೊಡ್ಡ ಯುದ್ಧವನ್ನು ಮಾಡಲು ಸಂಜೆಯಾಗುವುದನ್ನೆ ಕಾಯುತ್ತಿದ್ದರು.

ಹೀಗೆ ರಾಕ್ಷಸವಾನರರು ಯುದ್ಧ ಮಾಡುತ್ತಿರಲು ಸೂರ್ಯನು ಮುಳುಗಿ ಕತ್ತಲಾಯಿತು. ಬದ್ಧವೈರಿಗಳಾದ ಇವರು ಗೆಲ್ಲುವ ಬಯಕೆಯಿಂದ, ಒಬ್ಬರ ಗುರುತನ್ನು ಮತ್ತೊಬ್ಬರು ಅರಿಯದೆ ಹೊಡೆಯಲಾರಂಭಿಸಿದರು. ಆ ಕಗ್ಗತ್ತಲೆಯಲ್ಲಿ “ಹೊಡಿ, ಬಡಿ ಕೊಲ್ಲು, ಎಲ್ಲಿಗೆ ಓಡಿಹೋಗುತ್ತಿರುವೆ?” ಎಂಬ ಶಬ್ದಗಳೆ ಸುತ್ತಲೂ ಕೇಳಿಬರುತ್ತಿತ್ತು. ಆ ಕಗ್ಗತ್ತಲೆಯಲ್ಲಿ ಕಪ್ಪಾದ ದೇಹವುಳ್ಳ ರಾಕ್ಷಸರು ತಮ್ಮ ಬಂಗಾರದ ಕವಚದ ಕಾಂತಿಯಿಂದ, ಜ್ಯೋತಿರ್ಲತೆಗಳನ್ನುಳ್ಳ ದೊಡ್ಡ ಪರ್ವತಗಳಂತೆ ಕಾಣಿಸಿದರು. ಆ ಕಗ್ಗತ್ತಲಲ್ಲಿ. ವೇಗವಾಗಿ ಸಂಚರಿಸುತ್ತ ರಾಕ್ಷಸರು ಕಪಿಗಳನ್ನು ತಿಂದರು. ಕಪಿಗಳೂ ಕೂಡ ಕೋಪದಿಂದ ರಥದಿಂದ ರಥಕ್ಕೆ ಹಾರುತ್ತ ಆನೆ ಕುದುರೆಗಳನ್ನು ಸೀಳುತ್ತ ರಾಕ್ಷಸರನ್ನು ಸಂಕಟಗೊಳಿಸಿದರು. ಮಾವಟಿಗರನ್ನೂ ಸಾರಥಿಗಳನ್ನೂ ಕೆಳಕ್ಕೆ ನೂಕಿದರು. ಬಾವುಟದ ಬಟ್ಟೆಗಳನ್ನು ಹರಿದರು. ರಾಮಲಕ್ಷ್ಮಣರೂ ಸರ್ಪಕ್ಕೆ ಸಮಾನವಾದ ಬಾಣಗಳಿಂದ ರಾಕ್ಷಸವೀರರನ್ನು ತರಿದರು. ಹೊಡೆತ ತಿಂದು ಬೀಳುತ್ತಿರುವ ವಾನರ ರಾಕ್ಷಸರ ಕ್ರೂರವಾದ ಕೋಲಾಹಲದ್ವನಿ ಹೃದಯವನ್ನು ಬಿರಿಯಿಸುತ್ತಿತ್ತು. ಹೀಗೆ ಭಯಂಕರವಾಗಿ ಪ್ರಳಯಕ್ಕೆ ಸಮಾನವಾದ ಯುದ್ಧವಾಗುತ್ತಿರಲು ರಾಕ್ಷಸರೆಲ್ಲರೂ ಬಾಣದ ಮಳೆ ಕರೆಯುತ್ತ ಶ್ರೀರಾಮನನ್ನು ಎದುರಿಸಿದರು. ಸಮುದ್ರಘೋಷದಂತೆ ಗರ್ಜಿಸುತ್ತ ಆರು ಮಂದಿ ರಾಕ್ಷಸವೀರರು ರಾಮನ ಮೇಲೆ ಶರವರ್ಷವನ್ನು ಕರೆಯಲು ರಾಮನು ಹರಿತವಾದ ಬಾಣಗಳಿಂದ ಅವರನ್ನೂ ಶುಕಸಾರಣರನ್ನೂ ಹೊಡೆದು ಓಡಿಸಿದನು. ಬೆಂಕಿಯಲ್ಲಿ ಬೀಳುವ ಹುಳುಗಳಂತೆ ರಾಮಬಾಣಗಳಿಂದ ರಾಕ್ಷಸರು ಹತರಾಗುತ್ತಿದ್ದರು.

ಇತ್ತ ಅಂಗದನು ಇಂದ್ರಜಿತ್ತನ್ನು ಎದುರಿಸಿ ಅವನ ಸಾರಥಿಯನ್ನೂ ಕುದುರೆಯನ್ನೂ ಬಲವಾಗಿ ಹೊಡೆದನು. ಸಾರಥಿ ರಥ ಕುದುರೆಗಳು ನಾಶವಾದುದನ್ನು ಕಂಡು ಇಂದ್ರಜಿತ್ತು ಮರೆಯಾದನು. ಇಂದ್ರನನ್ನೆ ಗೆದ್ದ ಇಂದ್ರಜಿತ್ತುವನ್ನು ಭಂಗಪಡಿಸಿದ ಅಂಗದನ ಕಾರ್ಯವನ್ನು ಕಂಡು ರಾಮಲಕ್ಷ್ಮಣರೂ ಸುಗ್ರೀವನೂ ಹರ್ಷಗೊಂಡರು. ಈ ನಡುವೆ ಕುಪಿತನಾದ ಇಂದ್ರಜಿತ್ತು ಅದೃಶ್ಯನಾಗಿಯೆ ಸಿಡಿಲಿಗೆ ಸಮಾನವಾದ ಬಾಣಗಳನ್ನು ಕಪಿಸೈನ್ಯದ ಮೇಲೆ ಪ್ರಯೋಗಿಸಿದನು. ಅವನು ಪ್ರಯೋಗಿಸಿದ ಬಾಣಗಳಿಂದ ರಾಮಲಕ್ಷ್ಮಣರ ಅಂಗಾಂಗಗಳಲ್ಲಿ ಗಾಯವುಂಟಾಯಿತು. ಆ ಕಗ್ಗತ್ತಲೆಯಲ್ಲಿ ಇಂದ್ರಜಿತ್ತುವನ್ನು ಹುಡುಕಲು ವಾನರವೀರರು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾದುವು. ಆಗ ಇಂದ್ರಜಿತ್ತು ಕ್ರೂರವಾದ ಸರ್ಪ ಬಾಣಗಳಿಂದ ರಾಮಲಕ್ಷ್ಮಣರನ್ನು ಬಂಧಿಸಿದನು. ರಕ್ತದಿಂದ ಕೂಡಿದ ರಾಮಲಕ್ಷ್ಮಣರ ದೇಹ ಹೂಬಿಟ್ಟ ಮುತ್ತುಗದ ಮರದಂತೆ ಕಾಣಬರುತ್ತಿತ್ತು. ಆ ರಾಕ್ಷಸವೀರನ ಬಾಣಗಳ ವೇಗವನ್ನು ಸಹಿಸದೆ ರಾಮಲಕ್ಷ್ಮಣರು ತತ್ತರಿಸಿಹೋದರು. ಮಹಾ ಧನುರ್ಧಾರಿಗಳಾದ ಆ ಅಣ್ಣತಮ್ಮಂದಿರು ನಾಗಪಾಶದಿಂದ ಬಂಧಿತರಾಗಿ ಹಗ್ಗ ಕಿತ್ತ ಇಂದ್ರಧ್ವಜದಂತೆ ಭೂಮಿಯಲ್ಲಿ ಮಲಗಿದರು. ಅವರ ದೇಹದಲ್ಲಿ ಬಾಣಗಳ ಹೊರತು ಇನ್ನೇನೂ ಕಾಣಬರುತ್ತಿರಲಿಲ್ಲ. ಬಿಚ್ಚಿಹೋದ ಹೆದೆಯುಳ್ಳ ಬಿಲ್ಲನ್ನೆ ಹಿಡಿದು ಮೂರ್ಛೆಹೋದ ರಾಮನನ್ನು ಕಂಡು ಲಕ್ಷ್ಮಣನು ಬದುಕುವ ಆಶೆಯನ್ನೆ ಬಿಟ್ಟನು. ಕಪಿವೀರರೂ ರಾಮನನ್ನು ಸುತ್ತುವರಿದು ಅವನಿಗಾಗಿ ಗೋಳಿಟ್ಟರು.

ಮಳೆ ಸುರಿಸಿದ ಮೇಘದಂತೆ ಇಂದ್ರಜಿತ್ತು ಬಾಣಪ್ರಯೋಗವನ್ನು ನಿಲ್ಲಿಸಲು ವಿಭೀಷಣ ಸುಗ್ರೀವರು ರಾಮಲಕ್ಷ್ಮಣರು ಮೂರ್ಛೆಹೊಂದಿ ಮಲಗಿದ್ದ ಪ್ರದೇಶಕ್ಕೆ ಬಂದರು. ಹನುಮಂತನಿಗೆ ನೆಲದಮೇಲೆ ಮಲಗಿದ್ದ ಅಣ್ಣತಮ್ಮಂದಿರನ್ನು ಕಂಡು ದುಃಖ ಉಕ್ಕೇರಿತು. ಉಳಿದ ಎಲ್ಲ ವಾನರರು ನಿಟ್ಟುಸಿರುಬಿಡುತ್ತ ಸುತ್ತಲೂ ಸ್ತಬ್ಧರಾಗಿ ನಿಂತರು. ಇತ್ತ ಮಾಯಾವಿಯಾದ ಇಂದ್ರಜಿತ್ತು ಖರದೂಷಣಸಂಹಾರಕನಾದ ಶ್ರೀರಾಮ ತಿರುಗಿ ಏಳಲಾರನೆಂದೂ, ವಾನರರ ಪ್ರಯತ್ನಗಳು ನಿಷ್ಫಲವಾದುವೆಂದೂ, ರಾಕ್ಷಸರು ಇನ್ನುಮುಂದೆ ನಿರ್ಭೀತರಾಗಿರಬಹುದೆಂದೂ ಹೇಳಿ ನೀಲ, ನಳ, ಜಾಂಬವಂತ, ಹನುಮಂತ ಮುಂತಾದ ವೀರರನ್ನು ಬಾಣಗಳಿಂದ ನೋಯಿಸಿದನು. ಇಂದ್ರಜಿತ್ತುವಿನ ಮಾತನ್ನು ಕೇಳಿ ಶ್ರೀರಾಮನು ಸತ್ತನೆಂದು ತಿಳಿದು ರಾಕ್ಷಸರು ಹರ್ಷಧ್ವನಿಮಾಡಿ ಲಂಕೆಯನ್ನು ಹೊಕ್ಕರು. ರಾಮಲಕ್ಷ್ಮಣರನ್ನು ಜಯಿಸಿ ತನಗೆ ಹರುಷವನ್ನು ತಂದ ಮಗನನ್ನು ರಾವಣನು ಗಾಢವಾಗಿ ಅಪ್ಪಿಕೊಂಡನು. ಇಂದ್ರಜಿತ್ತುವಿನ ಗೆಲುವಿನಿಂದ ಅವನ ಮನಸ್ಸಿಗೆ ನೆಮ್ಮದಿಯುಂಟಾಯಿತು.

ಇತ್ತ ರಾಮಲಕ್ಷ್ಮಣರ ಸ್ಥಿತಿಯನ್ನು ಕಂಡು ಸುಗ್ರೀವನು ಭಯಗೊಂಡು ಕಣ್ಣೀರು ಬಿಡುತ್ತ ನಿಂತುಕೊಂಡನು. ಇದನ್ನು ಕಂಡ ವಿಭೀಷಣನು “ಸುಗ್ರೀವ, ಹೆದರಿಕೆಯನ್ನು ಬಿಡು. ಕಣ್ಣೀರು ಬಿಡುವುದನ್ನು ತಡೆದುಕೊ. ಅದೃಷ್ಟವಿದ್ದರೆ ಈ ಇಬ್ಬರು ವೀರರು ಬಹುಬೇಗ ಮೂರ್ಛೆ ತಿಳಿದೇಳುತ್ತಾರೆ. ಈ ಸಂದರ್ಭದಲ್ಲಿ ನಿನ್ನ ಮನಸ್ಸನ್ನು ಸ್ಥಿರಪಡಿಸಿಕೊಂಡು, ನನ್ನನ್ನು ಕಾಪಾಡು. ಸತ್ಯವಂತರಿಗೆ ಅಪಮೃತ್ಯುವಿನ ಭಯವಿಲ್ಲ. ಇವರು ಮೂರ್ಛೆ ತಿಳಿದು ಏಳುವವರೆಗೆ ಪಲಾಯನಕ್ಕೆ ಸಿದ್ಧವಾಗಿರುವ ಈ ವಾನರ ಸೇನೆಗೆ ಧೈರ್ಯ ಹೇಳಿ, ಇದನ್ನು ರಕ್ಷಿಸು” ಎಂದು ಸಮಾಧಾನಪಡಿಸಿ ಅವನ ಕಣ್ಣೀರನ್ನು ನೀರಿನಿಂದ ಒರಸಿದನು. ಅನಂತರ ಆಂಜನೇಯ, ಅಂಗದ, ನಳ, ನೀಲ ಮುಂತಾದ ವೀರರು ರಾಮಲಕ್ಷ್ಮಣರನ್ನು ಸುತ್ತುವರಿದು ದೀನರಾಗಿ, ಕೈಯಲ್ಲಿ ಮರಗಳನ್ನು ಹಿಡಿದು ನಿಂತು ಅವರನ್ನು ರಾಕ್ಷಸರಿಂದ ರಕ್ಷಿಸಿದರು.