ಇತ್ತ ವಾನರರ ಹರ್ಷಸೂಚಕಧ್ವನಿಯನ್ನು ಕೇಳಿ, ಮಂತ್ರಿಗಳನ್ನು ನೋಡಿ ರಾವಣನು ಈ ರೀತಿ ನುಡಿದನು: “ಮೇಘದಂತೆ ಧ್ವನಿಮಾಡುತ್ತಿರುವ ಈ ವಾನರರ ಸಂತೋಷ ಮೇರೆಯನ್ನು ಮೀರಿದಂತಿದೆ. ಇದರಲ್ಲಿ ಸಂಶಯವೆ ಇಲ್ಲ. ರಾಮಲಕ್ಷ್ಮಣರು ನಾಗಪಾಶದಿಂದ ಬಂಧಿತರಾಗಿದ್ದರೂ ವಾನರರ ಸಂತೋಷ ನನ್ನಲ್ಲಿ ಸಂಶಯವನ್ನುಂಟುಮಾಡುತ್ತಿದೆ” ಹೀಗೆಂದು ನುಡಿದು, ಕಪಿಗಳ ಸಂತೋಷಕ್ಕೆ ಕಾರಣವನ್ನು ತಿಳಿದುಬರಲು ದೂತನೊಬ್ಬನನ್ನು ಕಳುಹಿಸಿದನು. ಲಂಕಾನಗರದ ಪ್ರಾಕಾರವನ್ನು ಏರಿ, ವಾನರಸೇನೆಯ ನಿಜವಾದ ಸಮಾಚಾರವನ್ನು ತಿಳಿದು ಬಂದ ಚಾರನು, ರಾಮಲಕ್ಷ್ಮಣರು ನಾಗಪಾಶದಿಂದ ಬಿಡುಗಡೆ ಹೊಂದಿದುದನ್ನೂ ಅದಕ್ಕಾಗಿ ವಾನರರು ಹರ್ಷಗೊಂಡಿರುವರೆಂಬುದನ್ನೂ ತಿಳಿಸಿದನು. ದೂತನ ಮಾತನ್ನು ಕೇಳಿ ಚಿಂತೆಯಿಂದ ರಾವಣನ ಮುಖ ಕುಗ್ಗಿತು. ಇಂದ್ರಜಿತ್ತುವಿನ ನಾಗಪಾಶ ವ್ಯರ್ಥವಾದುದನ್ನು ಕೇಳಿ ರಾವಣನಿಗೆ ಒಂದೇಕಾಲದಲ್ಲಿ ಕೋಪವೂ ಆಶ್ಚರ್ಯವೂ ಉಂಟಾದುವು. ಕೋಪಗೊಂಡ ಹಾವಿನಂತೆ ನಿಟ್ಟುಸಿರುಬಿಡುತ್ತ ವೀರನಾದ ಧೂಮ್ರಾಕ್ಷನೆಂಬ ರಾಕ್ಷಸನನ್ನು ಕುರಿತು ರಾಮನ ಮೇಲೆ ಯುದ್ಧಕ್ಕೆ ಹೊರಡುವಂತೆ ಅಪ್ಪಣೆಮಾಡಿದನು.

ಧೂಮ್ರಾಕ್ಷನ ಮಾತಿನಂತೆ ರಾಕ್ಷಸರ ಸೇನೆ ಯುದ್ಧಕ್ಕೆ ಹೊರಟಿತು. ದೇಹಕ್ಕೆ ಗಂಟೆಗಳನ್ನು ಕಟ್ಟಿಕೊಂಡ ಭಯಂಕರಾಕಾರದ ರಾಕ್ಷಸರು ಸೇನಾಪತಿಯ ಸುತ್ತಲೂ ನೆರೆದರು. ಗದೆ ಕತ್ತಿ ಈಟಿ ಖಡ್ಗ ಮುಂತಾದ ಆಯುಧಗಳನ್ನು ಧರಿಸಿ ರಾಕ್ಷಸವೀರರು ಮುಂದೆ ನುಗ್ಗಿದರು. ಕಪಿ ಮತ್ತು ಸಿಂಹದ ಮುಖಗಳಂತಿದ್ದ ಕತ್ತೆಗಳನ್ನು ಕಟ್ಟಿದ ಮನೋಹರವಾದ ಬಂಗಾರದ ತೇರನ್ನು ಏರಿ ಧೂಮ್ರಾಕ್ಷನು ಹೊರಟನು. ಆಗ ಹದ್ದುಗಳು ರಾಕ್ಷಸ ಸೇನೆಗೆ ಅಡ್ಡವಾಗಿ ಹಾರಿದುವು. ಸೇನಾಪತಿಯ ಸಮೀಪದಲ್ಲಿ ರಕ್ತದಿಂದ ನೆನೆದ ತಲೆಯಿಲ್ಲದ ಮುಂಡವು ವಿಕಾರವಾಗಿ ಕೂಗಿ ನೆಲಕ್ಕೆ ಬಿತ್ತು. ಮುಗಿಲು ರಕ್ತದ ಮಳೆಯನ್ನು ಸುರಿಸಿತು. ಭೂಮಿ ನಡುಗಿತು. ಬಿರುಗಾಳಿ ಬೀಸಿ ಕತ್ತಲೆ ಕವಿಯಿತು. ಈ ಅಪಶಕುನಗಳಿಂದ ಸೇನಾಪತಿಯ ಮನಸು ಕಳವಳಗೊಂಡರೂ ತನ್ನ ಸೇನೆಯನ್ನು ಹನುಮಂತನಿದ್ದ ದಿಕ್ಕಿಗೆ ಇದಿರಾಗಿ ಒಯ್ದನು.

ಯುದ್ಧಮಾಡಲು ರಾಕ್ಷಸಸೇನೆ ಬರುತ್ತಿರುವುದನ್ನು ಕಂಡು ವಾನರರು ಉತ್ಸಾಹದಿಂದ ಸಿಂಹನಾದ ಮಾಡಿದರು. ರಾಕ್ಷಸರಿಗೂ ಕಪಿಗಳಿಗೂ ದ್ವಂದ್ವಯುದ್ಧ ಮೊದಲಾಯಿತು. ಬಂಡೆ ಗಿಡ ಇವುಗಳಿಂದ ವಾನರರು ರಾಕ್ಷಸರನ್ನು ಸೀಳಿದರು. ರಾಕ್ಷಸರೂ ವಾನರರನ್ನು ಗದೆಗಳಿಂದಲೂ ಕತ್ತಿಗಳಿಂದಲೂ ಸೀಳಿದರು. ಆ ಯುದ್ಧದಲ್ಲಿ ಕೆಲವರು ರಕ್ತವನ್ನು ಕಾರಿದರು; ಕೆಲವರು ಅಂಗವಿಹೀನರಾದರು. ಆನೆಕುದುರೆಗಳು ಲೆಕ್ಕವಿಲ್ಲದಷ್ಟು ಮಡಿದುಬಿದ್ದುವು. ಕಪಿಗಳು ಮೇಲಕ್ಕೆ ಹಾರಿ ಉಗುರುಗಳಿಂದ ರಾಕ್ಷಸರನ್ನು ಗಾಯಗೊಳಿಸಿದರು. ವಾನರರ ಏಟನ್ನು ಸಹಿಸಲಾರದೆ ರಾಕ್ಷಸಸೇನೆ ಓಡತೊಡಗಿತು. ಓಡುತ್ತಿರುವ ರಾಕ್ಷಸ ಸೇನೆಯನ್ನು ಕಂಡು ಕೋಪಗೊಂಡ ಧೂಮ್ರಾಕ್ಷನು ಕಪಿಗಳನ್ನು ಎದುರಿಸಿದನು. ಅವನ ಹೊಡೆತವನ್ನು ಸಹಿಸದೆ ಕೆಲವರು ಕಪಿಗಳು ಭೂಮಿಯಲ್ಲಿ ಸುತ್ತುಬಿದ್ದರು. ಮತ್ತೆ ಕೆಲವರು ಮೂರ್ಛೆಗೊಂಡರು. ಇನ್ನು ಕೆಲವರು ರಕ್ತದಲ್ಲಿ ನೆನೆದರು. ಉಳಿದವರು ಓಡತೊಡಗಿದರು. ಹೀಗೆ ಧನುರ್ಧಾರಿಯಾದ ಧೂಮ್ರಾಕ್ಷನು ನಗುತ್ತ, ವಾನರಸೇನೆಯನ್ನು ಮುರಿಯುತ್ತ ಯುದ್ಧಭೂಮಿಯಲ್ಲಿ ತಾನೇ ತಾನಾಗಿ ಸಂಚರಿಸಿದನು.

ವಾನರಸೇನೆ ಹೀಗೆ ನಾಶವಾಗುತ್ತಿದ್ದುದನ್ನು ನೋಡಿ ಹನುಮಂತನು ದೊಡ್ಡದೊಂದು ಬಂಡೆಯನ್ನು ಹಿಡಿದುಕೊಂಡು ಕೋಪದಿಂದ ಧೂಮ್ರಾಕ್ಷನನ್ನು ಎದುರಿಸಿ ಅವನ ರಥದ ಮೇಲೆ ಆ ಬಂಡೆಯನ್ನು ಎಸೆದನು. ಬೀಳುತ್ತಿರುವ ಬಂಡೆಯನ್ನು ಕಂಡು ರಾಕ್ಷಸನು ಸಂಭ್ರಮದಿಂದ ತೇರಿನಿಂದ ಧುಮುಕಿ ಗದೆಯನ್ನು ಹಿಡಿದು ನಿಂತನು. ಹನುಮಂತನು ಬೀಸಿದ ಬಂಡೆಯಿಂದ ರಾಕ್ಷಸನ ತೇರು ಕತ್ತೆಸಹಿತವಾಗಿ ಮುರಿದುಬಿತ್ತು. ಅನಂತರ ಹನುಮಂತನು ವೃಕ್ಷಗಳನ್ನು ಹಿಡಿದು ರಾಕ್ಷಸರನ್ನು ಕೊಂದು ಅವರಿಗೆ ಭಯವನ್ನುಂಟುಮಾಡಿದನು. ಆ ಬಳಿಕ ಹನುಮಂತನು ಗದೆ ಹಿಡಿದು ಅಟ್ಟಿಬರುತ್ತಿರುವ ಧೂಮ್ರಾಕ್ಷನನ್ನು ಬೆಟ್ಟದಿಂದ ಹೊಡೆದನು. ಆ ಏಟನ್ನು ಸಹಿಸದೆ ಧೂಮ್ರಾಕ್ಷನು ಭೂಮಿಯಲ್ಲಿ ಮಲಗಲು, ರಾಕ್ಷಸರು ಹೆದರಿ ಲಂಕೆಯನ್ನು ಹೊಕ್ಕರು. ಧೂಮ್ರಾಕ್ಷನನ್ನು ಕೊಂದು ರಕ್ತದ ಹೊಳೆಯನ್ನು ಹರಿಯಿಸಿ ಹನುಮಂತನು ವಾನರರಿಗೆ ಸಂತೋಷವನ್ನು ತಂದನು.

ಧೂಮ್ರಾಕ್ಷನ ವಧೆಯನ್ನು ಕೇಳಿ ಕೋಪಗೊಂಡ ರಾವಣನು ರಾಮಲಕ್ಷ್ಮಣರನ್ನು ಜಯಿಸಲು ವಜ್ರದಂಷ್ಟ್ರನನ್ನು ಕಳುಹಿಸಿಕೊಟ್ಟನು. ಶೂರರಾದ ರಾಕ್ಷಸವೀರರು ಪರ್ವತಕ್ಕೆ ಸಮಾನವಾದ ಆನೆಗಳನ್ನು ಏರಿ, ಬಂಗಾರದ ತೇರನ್ನು ಏರಿ ಹೊರಟ ಮಾಯಾವಿಯಾದ ವಜ್ರದಂಷ್ಟ್ರನನ್ನು ಅನುಸರಿಸಿ ಹೊರಟರು. ಧೂಮ್ರಾಕ್ಷನಿಗುಂಟಾದ ಅಪಶಕುನಗಳೆ ವಜ್ರದಂಷ್ಟ್ರನಿಗೂ ಆದುವು. ಆದರೂ ಅವನು ಅವುಗಳನ್ನು ಲೆಕ್ಕಿಸದೆ ಧೈರ್ಯ ತಂದುಕೊಂಡು ಅಂಗದನಿದ್ದ ದಿಕ್ಕಿಗೆ ಹೊರಟನು. ರಾಕ್ಷಸರನ್ನು ನೋಡಿದೊಡನೆಯೆ ವಾನರರು ಹರ್ಷದಿಂದ ಹುರಿಗೊಂಡು ಬಾಹುಯುದ್ಧವನ್ನು ಪ್ರಾರಂಭಿಸಿದರು. ಮತ್ತೊಮ್ಮೆ ವಾನರರಿಗೂ ರಾಕ್ಷಸರಿಗೂ ಘೋರಯುದ್ಧವಾಯಿತು. ವಜ್ರದಂಷ್ಟ್ರನಾದರೂ ವಾನರರನ್ನು ಹೆದರಿಸುತ್ತ ಪ್ರಳಯಕಾಲದಲ್ಲಿ ಪಾಶವನ್ನು ಧರಿಸಿದ ಯಮನಂತೆ ಯುದ್ಧಭೂಮಿಯಲ್ಲಿ ಸಂಚರಿಸಿದನು. ರಾಕ್ಷಸರೂ ಮೈಮೇಲೆ ಎಚ್ಚರವಿಲ್ಲದವರಾಗಿ ಕಪಿಗಳನ್ನು ಹೊಡೆದರು. ರಾಕ್ಷಸರ ಈ ಕಾರ್ಯವನ್ನು ಕಂಡು ಇಮ್ಮಡಿ ಆವೇಶಹೊಂದಿದ ಅಂಗದನು ಕೋಪದಿಂದ ಸಿಂಹವು ಕುದ್ರಮೃಗಗಳನ್ನು ತರಿಯುವಂತೆ ರಾಕ್ಷಸರನ್ನು ಹೊಡೆದನು. ಅಂಗದನ ಹೊಡೆತವನ್ನು ತಾಳಲಾರದೆ, ವಾಯುವಿನಿಂದ ಚೆದರಿಸಲ್ಪಟ್ಟ ಮೇಘದಂತೆ ರಾಕ್ಷಸಸೇನೆ ತತ್ತರಿಸಿ ಹೋಯಿತು.

ಈ ಸಮಯದಲ್ಲಿ ವಜ್ರದಂಷ್ಟ್ರನು ಬಾಣದ ಮಳೆಯನ್ನೆ ಸುರಿಸುತ್ತ ಅಂಗದನನ್ನು ಎದುರಿಸಿದನು. ತನ್ನಮೇಲೆ ಬೀಳುತ್ತಿದ್ದ ಬಾಣಗಳನ್ನು ನಿವಾರಿಸಿಕೊಂಡು, ರಕ್ತದಿಂದ ತೊಯ್ದುಹೋಗಿದ್ದ ಅಂಗದನು ವಜ್ರದಂಷ್ಟ್ರನನ್ನು ಮರದಿಂದ ಹೊಡೆದನು. ಆದರೆ ವಜ್ರದಂಷ್ಟ್ರನು ಆ ಮರವನ್ನು ಬಾಣದಿಂದ ಕತ್ತರಿಸಲು ಮತ್ತೆ ಬೆಟ್ಟದಿಂದ ಅಂಗದನು ಅವನ ರಥವನ್ನು ಹುಡಿಗಟ್ಟಿದನು. ಆ ಬಳಿಕ ಅವರಿಬ್ಬರಿಗೂ ಗದೆಯಿಂದಲೂ, ಮುಷ್ಟಿಯಿಂದಲೂ ಯುದ್ಧ ಜರುಗಿತು. ಜಯವನ್ನು ಬಯಸಿ ಅಂಗದ ವಜ್ರದಂಷ್ಟ್ರರು ಬಹುಕಾಲ ಹೋರಾಡಿದರು. ಕೊನೆಗೆ ಅಂಗದನು ಹರಿತವಾದ ಖಡ್ಗವನ್ನು ಸೆಳೆದು ವಜ್ರದಂಷ್ಟ್ರನ ತಲೆಯನ್ನು ಕತ್ತರಿಸಿದನು. ವಜ್ರದಂಷ್ಟ್ರನ ಸಾವನ್ನು ಕಂಡು ರಾಕ್ಷಸರು ನಾಚಿಕೆಯಿಂದ ತಲೆತಗ್ಗಿಸಿಕೊಂಡು ಲಂಕೆಗೆ ಓಡಿಹೋದರು.

ವಜ್ರದಂಷ್ಟ್ರನ ವಧೆಯನ್ನು ಕೇಳಿ ರಾವಣನು ಪರಾಕ್ರಮಿಯೂ ಯುದ್ಧಪ್ರಿಯನೂ ಆದ ಅಕಂಪನನನ್ನು ರಾಮಲಕ್ಷ್ಮಣರೊಡನ ಯುದ್ಧಮಾಡಲು ಕಳುಹಿಸಿಕೊಟ್ಟನು. ರಾವಣನ ಆಜ್ಞೆಯಂತೆ, ಮುಗಿಲಿನ ಬಣ್ಣವುಳ್ಳ ಆತನು ಚಿನ್ನದ ಕುಂಡಲಗಳಿಂದ ಶೋಭಿಸುತ್ತ ದೊಡ್ಡ ರಥವನ್ನೇರಿ ಭಯಂಕರರಾದ ರಾಕ್ಷಸರಿಂದ ಸುತ್ತುವರಿದು ಯುದ್ಧಕ್ಕೆ ನಡೆದನು. ದೇವತೆಗಳಿಗೂ ಹೆದರದ, ಹೆಸರಿಗೆ ತಕ್ಕಂತಿದ್ದ ಅಕಂಪನನು ರಾಕ್ಷಸರ ನಡುವೆ ಸೂರ್ಯನಂತೆ ಹೊಳೆಯುತ್ತಿದ್ದನು. ಯುದ್ಧಕ್ಕೆ ಹೊರಟ ಅಕಂಪನನ ಎಡಗಣ್ಣು ಅದುರಿತು. ಕತ್ತು ಬಿಗಿಯಿತು. ಮುಖದ ಕಾಂತಿ ಕುಗ್ಗಿತು. ಮೋಡಗಳು ಸೂರ್ಯನನ್ನು ಮುಚ್ಚಿ ಕತ್ತಲೆಯನ್ನುಂಟು ಮಾಡಿದುವು. ರಥದ ಕುದುರೆಗಳು ಮುಗ್ಗರಿಸಿದುವು. ಆದರೆ ಆ ಶಕುನಗಳಿಗೆ ಹೆದರದೆ ರಾಕ್ಷಸವೀರನು ಮುಂದೆ ನುಗ್ಗಿದನು.

ವಾನರಸೇನೆಗೂ ರಾಕ್ಷಸಸೇನೆಗೂ ಯುದ್ಧ ಮೊದಲಾಯಿತು. ರಾಕ್ಷಸರ ಮತ್ತು ವಾನರರ ಕಾಲಿನ ಹೊಡೆತದಿಂದುಂಟಾದ ರೇಸಿಮೆಯಂತಹ ಧೂಳು ಭೂಮಿ ಆಕಾಶಗಳನ್ನು ವ್ಯಾಪಿಸಿತು. ಆ ಧೂಳಿನಿಂದ ಒಬ್ಬರನೊಬ್ಬರು ನೋಡಲಾಗಲಿಲ್ಲ. ರಥವಾಗಲಿ ಆನೆಕುದುರೆಗಳಾಗಲಿ ಬಾವುಟಗಳಾಗಲಿ ಕಾಣಿಸಲಿಲ್ಲ. ಈ ಧೂಳಿನ ಕೋಲಾಹಲದಲ್ಲಿ ರಾಕ್ಷಸರು ರಾಕ್ಷಸರನ್ನೇ ಹೊಡೆದರು. ವಾನರರು ವಾನರರನ್ನೇ ಹೊಡೆದರು. ಅಂತೂ ಇಬ್ಬರಿಗೂ ಭಯಂಕರವಾದ ಯುದ್ಧವಾಗಿ ರಣರಂಗವು ಶವಗಳಿಂದ ತುಂಬಿಹೋಯಿತು. ಆ ಸಮಯದಲ್ಲಿ ಅಕಂಪನು ರಾಕ್ಷಸರನ್ನು ಉತ್ಸಾಹಗೊಳಿಸಿದನು. ಹಾಗೆಯೆ ತಾನೂ ಮದಿಸಿ, ರಥದಲ್ಲಿ ಕುಳಿತು ಬಿಲ್ಲನ್ನು ಧ್ವನಿಮಾಡುತ್ತ, ವಾನರವೀರರ ಮೇಲೆ ಬಾಣದ ಮೇಲೆ ಕರೆದನು. ಅವನ ಬಾಣಗಳೆದುರಿಗೆ ಕಪಿಗಳು ನಿಲ್ಲದಾದರು. ಅಕಂಪನನಿಂದ ಕಪಿಗಳಿಗಾಗುತ್ತಿದ್ದ ಅವಸ್ಥೆಯನ್ನು ಕಂಡು ಹನುಮಂತನು ಅವನ ಮೇಲೆ ನುಗ್ಗಿಬಂದನು. ಆಗ ವಾನರವೀರರು ಆಂಜನೇಯನನ್ನು ಸುತ್ತುವರಿದುನಿಂತರು. ಅಕಂಪನನು ಆತನನ್ನು ಬಾಣಗಳಿಂದ ನೋಯಿಸಲು, ಆತನು ಆ ರಾಕ್ಷಸನನ್ನು ಕೊಲ್ಲಲು ನಿಶ್ಚೈಸಿ ಹೊಳೆಯುತ್ತಿರುವ ಅಗ್ನಿಯಂತೆ ಅವನ ಇದಿರಾಗಿ ಓಡಿಬಂದನು. ಬೆಟ್ಟವೊಂದನ್ನು ಕೈಯಲ್ಲಿ ಹಿಡಿದು ತಿರುಗಿಸುತ್ತ ದೇವೇಂದ್ರನು ವಜ್ರಾಯುಧದಿಂದ ವೃತ್ರಾಸುರನನ್ನು ಹೊಡೆದಂತೆ ಹನುಮಂತನು ಅಕಂಪನನನ್ನು ಹೊಡೆದನು. ಆದರೆ ರಾಕ್ಷಸನ ಬಾಣಗಳಿಂದ ಅದು ಪುಡಿಪುಡಿಯಾಯಿತು. ಕ್ರೋಧದಿಂದ ತಪ್ತನಾದ ಮಾರುತಿ ವೃಕ್ಷವೊಂದನ್ನು ಕಿತ್ತು ಯಮನಂತೆ ರಾಕ್ಷಸರನ್ನು ಸಂಹರಿಸತೊಡಗಿದನು. ಅಲ್ಲದೆ ಶರದಿಂದ ತನ್ನನ್ನು ಹೊಡೆದ ಅಕಂಪನನ್ನನ ತಲೆಯ ಮೇಲೆ ಹೊಡೆದನು. ಆ ಹೊಡೆತದ ರಭಸವನ್ನು ತಾಳಲಾರದೆ ರಾಕ್ಷಸನು ಕೆಳಕ್ಕೆ ಬಿದ್ದು ಮರಣಹೊಂದಿದನು. ಸತ್ತ ರಾಕ್ಷಸವೀರನನ್ನು ಕಂಡು, ಉಳಿದವರು ಬಿಟ್ಟಮಂಡೆಗಳಿಂದ ಬಾರಿಬಾರಿಗೂ ಭಯದಿಂದ ತತ್ತರಿಸಿ ಹಿಂದುಮುಂದು ನೋಡುತ್ತ ಲಂಕೆಗೆ ಓಡಿಹೋದರು. ಇತ್ತ ಗೆದ್ದ ವಾನರರು ಹನುಮಂತನನ್ನು ಕೊಂಡಾಡಿ ಸಿಂಹನಾದಮಾಡಿದರು.