ರಾಮಚಂದ್ರ, ನಾನು ನಿನ್ನ ಸ್ನೇಹಿತ, ನಿನ್ನ ಹೊರಗಿನ ಪ್ರಾಣ ಗರುಡನಾದ ನಾನು ನಿನಗೆ ಉಂಟಾಗಿರುವ ವಿಪತ್ತನ್ನು ಕೇಳಿ ಇಲ್ಲಿಗೆ ಬಂದೆ.

ಇತ್ತ ರಾವಣನು ಇಂದ್ರಜಿತ್ತುವಿನಿಂದ ರಾಮಲಕ್ಷ್ಮಣರು ಮಡಿದರೆಂದು ತಿಳಿದು ಲಂಕೆಯನ್ನು ಧ್ವಜಗಳಿಂದ ಅಲಂಕರಿಸಿ, ರಾಮಲಕ್ಷ್ಮಣರ ಮರಣವನ್ನು ಸಾರುವಂತೆ ಅಪ್ಪಣೆಮಾಡಿದನು. ಅನಂತರ ಸೀತಾದೇವಿಯನ್ನು ಕಾಯುತ್ತಿದ್ದ ತ್ರಿಜಟೆ ಮುಂತಾದ ರಾಕ್ಷಸಿಯರನ್ನು ತನ್ನಲ್ಲಿಗೆ ಬರಮಾಡಿಕೊಂಡು, ಸಂತೋಷದಿಂದ ಹೇಳಿದನು: “ಇಂದ್ರಜಿತ್ತುವಿನಿಂದ ರಾಮಲಕ್ಷ್ಮಣರು ಮಡಿದರೆಂದು ಹೇಳಿ ಸೀತೆಯನ್ನು ಪುಷ್ಪಕವಿಮಾನದಲ್ಲಿ ಕುಳ್ಳಿರಿಸಿಕೊಂಡು ಹೋಗಿ ಅವರನ್ನು ತೋರಿಬನ್ನಿ. ರಣದಲ್ಲಿ ಮಲಗಿರುವ ಆ ಅಣ್ಣತಮ್ಮಂದಿರನ್ನು ಕಂಡು ವಿಶಾಲಾಕ್ಷಿಯಾದ ಸೀತೆ ಆಶೆಯೆಲ್ಲವನ್ನೂ ತೊರೆದು ನನ್ನನ್ನು ಸೇರುವಳು.”

ರಾವಣನ ಅಪ್ಪಣೆಯಂತೆ ಆ ರಾಕ್ಷಸಸ್ತ್ರೀಯರು, ದುಃಖದಿಂದ ಸೋತಿದ್ದ ಸೀತೆಯಲ್ಲಿಗೆ ಬಂದು, ಪುಷ್ಪಕವಿಮಾನದಲ್ಲಿ ಆಕೆಯನ್ನು ಕೂರಿಸಿ, ರಾಮಲಕ್ಷ್ಮಣರನ್ನು ತೋರಿಸಲು ನಡೆದರು. ರಣಭೂಮಿಗೆ ಬಂದು ವಿಮಾನದಿಂದಲೆ ಸೀತೆ, ಸತ್ತ ಕಪಿಸೇನೆಯನ್ನೂ ಬಾಣದ ಹಾಸಿಗೆಯಲ್ಲಿ ಎಚ್ಚರವಿಲ್ಲದೆ ಮಲಗಿ ಜಾರಿದ ಬಿಲ್ಲುಗಳನ್ನುಳ್ಳ ರಾಮಲಕ್ಷ್ಮಣರನ್ನೂ ಕಂಡಳು. ಪುರುಷಶ್ರೇಷ್ಠನಾದ ರಾಮನನ್ನೂ ಅವರ ಬಳಿ ಮಲಗಿದ್ದ ಲಕ್ಷ್ಮಣನನ್ನೂ ನೋಡಿ ಸೀತೆಗೆ ದುಃಖದ ಕಟ್ಟೆ ಒಡೆಯಿತು. ಅವರು ಮಡಿದರೆಂದೆ ಆಕೆ ಭಯಗೊಂಡಳು. “ಅಯ್ಯೋ, ನಾನು ಸುಮಂಗಲಿಯೆಂದೂ ಪುತ್ರವತಿಯಾಗುವೆನೆಂದೂ ಹೇಳಿದ ವಿದ್ವಾಂಸರ ಮಾತು ಸುಳ್ಳಾಯಿತು. ಇವರು ನನಗಾಗಿ ಕಡಲನ್ನು ದಾಟಿ ಇಲ್ಲಿಗೆ ಬಂದರಲ್ಲವೆ? ಆದರೇನು? ಅದೆಲ್ಲವೂ ನಿಷ್ಫಲವಾಯಿತು. ಬ್ರಹ್ಮಾಸ್ತ್ರಗಳೆ ಮೊದಲಾದ ಮಹಾಸ್ತ್ರಗಳನ್ನು ಪಡೆದು ವೀರರೆಂದು ಹೆಸರುಗೊಂಡ ನೀವು ಇಂದ್ರಜಿತ್ತುವಿನಿಂದ ಮಡಿದಿರಾ? ಯುದ್ಧದಲ್ಲಿ ನಿಮ್ಮನ್ನು ಇದಿರಿಸಿ ಯಮನೂ ಬದುಕಿಹೋಗಲಾರನೆಂದಮೇಲೆ ನೀವು ಮಡಿದಿರುವುದು ನನ್ನ ದೌರ್ಭಾಗ್ಯವೇ ಸರಿ. ನಾನು ರಾಮನಿಗಾಗಲಿ ಲಕ್ಷ್ಮಣನಿಗಾಗಲಿ ಶೋಕಪಡುತ್ತಿಲ್ಲ. ವನವಾಸವನ್ನು ಮುಗಿಸಿಕೊಂಡು ಬರುವ ಮಕ್ಕಳನ್ನು ಕಾಣಲು ತವಕಪಡುತ್ತಿರುವ ನಮ್ಮ ಅತ್ತೆಯಾದ ಕೌಸಲ್ಯೆಗಾಗಿ ದುಃಖಿಸುತ್ತೇನೆ” ಎಂದು ಸೀತೆ ಗೋಳಿಟ್ಟಳು. ಆಗ ತ್ರಿಜಟೆಯೆಂಬ ರಾಕ್ಷಸಿ ಸೀತೆಯನ್ನು ಸಮಾಧಾನಪಡಿಸುತ್ತ ನುಡಿದಳು: “ಎಲೈ ಸೀತೆ, ಅಣ್ಣತಮ್ಮಂದಿರಾದ ರಾಮಲಕ್ಷ್ಮಣರು ಸತ್ತಿಲ್ಲವೆಂದು ನಾನು ತಿಳಿಯುತ್ತೇನೆ. ರಾಮಲಕ್ಷ್ಮಣರು ಸತ್ತಿದ್ದರೆ ವಾನರರ ಮುಖಗಳು ಕ್ರೋಧದಿಂದಲೂ ಉತ್ಸಾಹದಿಂದಲೂ ಇರುತ್ತಿದ್ದುವೆ? ಹಾಗಿದ್ದರೆ ವಾನರಸೇನೆ ಧ್ವಜಪಟವಿಲ್ಲದ ನಾವೆಯಂತೆ ಉತ್ಸಾಹಹೀನವಾಗಿರುತ್ತಿತ್ತು. ಈ ರಘುವೀರರನ್ನು ಯಾರೂ ಕೊಲ್ಲಲಾರರು. ನಾನು ಸುಳ್ಳನ್ನು ಹೇಳುತ್ತಿಲ್ಲ. ನಿನ್ನಲ್ಲಿರುವ ಸ್ನೇಹಭಾವದಿಂದ ಈ ಮಾತನ್ನು ನುಡಿಯುತ್ತಿದ್ದೇನೆ. ನಿನ್ನ ಪಾತಿವ್ರತ್ಯ ನನ್ನ ಮನಸ್ಸನ್ನು ಸೂರೆಗೊಂಡಿದೆ. ಇವರ ಮುಖ ಕಾಂತಿಯೆ ಇವರು ಮಡಿದಿಲ್ಲವೆಂಬುದನ್ನು ಸೂಚಿಸುತ್ತದೆ. ಆದ್ದರಿಂದ ಇವರು ಬದುಕುವುದಿಲ್ಲವೆಂದು ತಿಳಿಯಬೇಡ. ಶೋಕವನ್ನು ಬಿಡು. ” ತ್ರಿಜಟೆಯ ಮಾತನ್ನು ಕೇಳಿ ಸೀತೆಗೆ ಸಮಾಧಾನವಾಗಲು ಪುಷ್ಪಕವಿಮಾನವು ಆಕೆಯನ್ನು ಹೊತ್ತು ಅಶೋಕವನಕ್ಕೆ ಹಿಂದಿರುಗಿತು. ಆದರೆ ಸೀತೆ ರಾಮಲಕ್ಷ್ಮಣರ ಸ್ಥಿತಿಯನ್ನು ನೆನೆಸಿಕೊಂಡು ದುಃಖಿಸುತ್ತ ಅವರಿಗಾಗಿ ಚಿಂತಿಸತೊಡಗಿದಳು.

ಇತ್ತ ರಾಮಲಕ್ಷ್ಮಣರಿಗಾಗಿ ದುಃಖಿಸುತ್ತ ವಾನರವೀರರು ಅವರನ್ನು ಸುತ್ತುವರಿದು ನಿಂತಿರಲು, ಧೈರ್ಯವಂತನಾದ ರಾಮನು ಮೂರ್ಛೆ ತಿಳಿದೆದ್ದನು. ಪಕ್ಕದಲ್ಲಿಯೆ ರಕ್ತದಿಂದ ನೆನೆದ ದೇಹದಿಂದ ನೆಲದಮೇಲೆ ಮಲಗಿದ್ದ ಲಕ್ಷ್ಮಣನನ್ನು ನೋಡಿ ಕಣ್ಣೀರು ಸುರಿಸಿ ಗೋಳಿಟ್ಟನು. “ಅಯ್ಯೋ, ಯುದ್ಧದಲ್ಲಿ ಮಡಿದು ಬಿದ್ದಿರುವ ಲಕ್ಷ್ಮಣನನ್ನು ನೋಡಿದ ಮೇಲೆ ಸೀತೆಯಿಂದ ಏನು ಪ್ರಯೋಜನ? ನನ್ನ ಬದುಕಿನಿಂದೇನು? ಸೀತೆಯಂತಹ ಹೆಂಡತಿ ಹುಡುಕಿದರೆ ಈ ಲೋಕದಲ್ಲಿ ದೊರಕಬಹುದು. ಆದರೆ ಲಕ್ಷ್ಮಣನಂತಹ ತಮ್ಮ ಮಾತ್ರ ಎಲ್ಲಿ ದೊರಕಿಯಾನು? ಲಕ್ಷ್ಮಣನಿಲ್ಲದೆ ನಾನು ಜೀವದಿಂದಿರಲಾರೆ. ತಾಯಿಯಾದ ಕೌಸಲ್ಯೆಗೆ, ಕೈಕೆಗೆ, ಮಗನು ಬರುವನೆಂದು ಹಂಬಲಿಸುತ್ತಿರುವ ಸುಮಿತ್ರೆಗೆ ಹೇಗೆ ಮುಖ ತೋರಿಸಲಿ? ಏನೆಂದು ನುಡಿಯಲಿ? ಹೇಗೆ ಸಮಾಧಾನಪಡಿಸಲಿ? ಭರತ ಶತ್ರುಘ್ನರಿಗೆ ಏನೆಂದು ಉಸುರಲಿ? ನನಗಾಗಿ ಲಕ್ಷ್ಮಣನಿಗೆ ಈ ಅವಸ್ಥೆ ಬಂದುದಲ್ಲವೆ? ನನ್ನ ಬಾಳಿಗೆ ಧಿಕ್ಕಾರವಿರಲಿ. ಲಕ್ಷ್ಮಣ, ನಿತ್ಯವೂ ನನ್ನೊಡನೆ ಮಾತನಾಡುತ್ತಿದ್ದ ನೀನು ಈಗೇಕೆ ಮಾತನಾಡದಿರುವಿ? ನನ್ನನ್ನು ಲಕ್ಷ್ಮಣನು ಅನುಸರಿಸಿ ಬಂದಂತೆಯೆ ಈಗ ನಾನೂ ಅವನನ್ನು ಅನುಸರಿಸಿಹೋಗುತ್ತೇನೆ. ಸ್ವಭಾವದಿಂದ ಕೋಪಿಷ್ಠನಾದರೂ ನನ್ನ ವಿಷಯದಲ್ಲಿ ಒಂದು ದಿನವೂ ಅಪ್ರಿಯವಾದ ಮಾತನ್ನಾಡಲಿಲ್ಲ. ಸಾವಿರ ತೋಳುಗಳಿಂದ ಕಾರ್ತವೀರ್ಯಾರ್ಜುನನು ಸಾಧಿಸಿದ ಕೆಲಸವನ್ನು ಲಕ್ಷ್ಮಣನು ಎರಡೇ ತೋಳುಗಳಿಂದ ಸಾಧಿಸಿದನು. ವಿಭೀಷಣನಿಗೆ ನಾನು ಕೊಟ್ಟ ಮಾತು ಸುಳ್ಳಾಯಿತು. ಸುಗ್ರೀವ, ಅಂಗದನನ್ನು ಮುಂದಿಟ್ಟುಕೊಂಡು ವಾನರ ಸೇನೆಯೊಂದಿಗೆ ಕಿಷ್ಕಿಂಧೆಗೆ ಹಿಂದಿರುಗು. ಹನುಮಂತನು ನನಗಾಗಿ ಮಹತ್ಕಾರ್ಯವನ್ನು ಮಾಡಿದನು. ವಾನರರು ಪರಾಕ್ರಮವನ್ನು ಮೆರೆದರು. ಸ್ನೇಹಿತರು ಮಾಡಬೇಕಾದ ಕಾರ್ಯವನ್ನೂ ತೋರಬೇಕಾದ ಪ್ರೀತಿಯನ್ನೂ ನೀನು ಮಾಡಿ ಮೆರೆದೆ. ನೀವೆಲ್ಲರೂ ಹೋಗಬಹುದು.” ರಾಮನ ದುಃಖಪೂರಿತವಾದ ಮಾತುಗಳನ್ನು ಕೇಳಿ ಕಪಿಗಳು ಕಣ್ಣೀರು ಸುರಿಸಿದರು.

ಈ ವೇಳೆಗೆ ಗದೆಯನ್ನು ಧರಿಸಿದ ವಿಭೀಷಣನು ರಾಮಲಕ್ಷ್ಮಣರಿದ್ದಲ್ಲಿಗೆ ಬಂದನು. ರಾಮಲಕ್ಷ್ಮಣರ ಮರಣದಿಂದ ತನ್ನ ಬಯಕೆಗಳೆಲ್ಲವೂ ಮುರಿದು ಬಿದ್ದುವೆಂದು ಅವನು ಬಹುವಾಗಿ ಶೋಕಿಸುತ್ತಿರಲು ಸುಗ್ರೀವನು ಅವನನ್ನು ಸಮಾಧಾನಪಡಿಸಿದನು. ಆಗ ಸುಷೇಣನು “ಸುಗ್ರೀವ, ಹಿಂದೆ ದೇವಾಸುರರಿಗೆ ನಡೆದ ಯುದ್ಧದಲ್ಲಿ, ದೇವತೆಗಳನ್ನು ಬದುಕಿಸಲು ಬೃಹಸ್ಪತಿ ಉಪಯೋಗಿಸಿದ ಮೂಲಿಕೆಗಳು ಕ್ಷೀರಸಮುದ್ರದ ತಳದಲ್ಲಿವೆ. ಕ್ಷೀರಸಮುದ್ರದ ಬಳಿಯಿರುವ ಚಂದ್ರ ಮತ್ತು ದ್ರೋಣ ಪರ್ವತಗಳಲ್ಲಿ ವಿಶಲ್ಯವೆಂಬ ಮೂಲಿಕೆ ಇದೆ. ಹನುಮಂತನು ಅಲ್ಲಿಂದ ಆ ಮೂಲಿಕೆಯನ್ನು ತರಲಿ” ಎಂದನು. ಈ ನಡುವೆ ಮೇಘಗಳನ್ನು ಚೆದರಿಸುತ್ತ, ಸಮುದ್ರದ ನೀರನ್ನು ಎರಚುತ್ತಾ, ಭೂಮಿಯನ್ನು ನಡುಗಿಸುತ್ತ ಗಾಳಿಯೊಂದು ಬೀಸಿತು. ಆ ಗಾಳಿಯಿಂದ ಮರಗಳು ಬುಡಮೇಲಾದುವು. ಸರ್ಪಗಳು ಹೆದರಿ ಸಮುದ್ರವನ್ನು ಹೊಕ್ಕವು. ಅಷ್ಟರಲ್ಲೆ ವಾನರರು ಅಗ್ನಿಯಂತೆ ತೇಜಸ್ವಿಯಾದ ಗರುಡನು ಬರುತ್ತಿದ್ದುದನ್ನು ಕಂಡರು. ಗರುಡನನ್ನು ನೋಡಿದೊಡನೆಯೆ ರಾಮಲಕ್ಷ್ಮಣರನ್ನು ಬಂಧಿಸಿದ್ದ ಹಾವುಗಳು ಹೆದರಿ ಓಡಿಹೋದುವು. ಗರುಡನು ರಾಮಲಕ್ಷ್ಮಣರ ಬಳಿಗೆ ಬಂದು ಸಂತೋಷದಿಂದ ಅವರ ದೇಹವನ್ನು ತನ್ನ ಕೈಗಳಿಂದ ಸವರಿದನು. ರಾಮಲಕ್ಷ್ಮಣರ ಗಾಯಗಳು ಮಾಯವಾಗಿ ಅವರ ತೇಜಸ್ಸೂ ವೀರ್ಯವೂ ಇಮ್ಮಡಿಯಾದುವು. ಹಾಗೆ ಎದ್ದು ಕುಳಿತ ರಾಮಲಕ್ಷ್ಮಣರನ್ನು ಅಪ್ಪಿಕೊಂಡು ಅವರಿಗೆ ಸಂತೋಷವನ್ನು ತಂದನು. ತಮ್ಮನ್ನು ಆ ಮಹತ್ತಾದ ಕಷ್ಟದಿಂದ ಬಿಡಿಸಿದ ಅವನಾರೆಂದು ಕೇಳಲು ಅವರ ಮಾತಿಗೆ ಗರುಡನು ಹೇಳಿದನು: “ರಾಮಚಂದ್ರ, ನಾನು ನಿನ್ನ ಸ್ನೇಹಿತ, ನಿನ್ನ ಹೊರಗಿನ ಪ್ರಾಣ. ಗರುಡನಾದ ನಾನು ನಿನಗೆ ಉಂಟಾಗಿರುವ ವಿಪತ್ತನ್ನು ಕೇಳಿ ಇಲ್ಲಿಗೆ ಬಂದೆ. ದೇವೇಂದ್ರನೆ ಬಂದರೂ ಇಂದ್ರಜಿತ್ತುವಿನ ಈ ನಾಗಪಾಶವನ್ನು ಬಿಡಿಸಲು ಸಾಧ್ಯವಿಲ್ಲ. ಈ ಕ್ರೂರಸರ್ಪಗಳೆಲ್ಲ ಕದ್ರುವಿನ ಮಕ್ಕಳು. ರಾಕ್ಷಸನ ಮಾಯೆಯಿಂದ ನಿಮ್ಮ ದೇಹವನ್ನು ಬಾಣರೂಪವಾಗಿ ಹೊಕ್ಕಿವೆ. ಈಗ ನಿಮಗೆ ಬಂದ ಈ ವಿಪತ್ತು ನಾಶವಾದರೂ ಮಾಯಾಯುದ್ಧವನ್ನು ಮಾಡುವ ಈ ರಾಕ್ಷಸರ ವಿಷಯದಲ್ಲಿ ಇನ್ನುಮುಂದೆ ಎಚ್ಚರಿಕೆಯಿಂದಿರಬೇಕು. ಪರಾಕ್ರಮಿಯಾದ ನೀನು ಬಹುಬೇಗ ರಾವಣನನ್ನು ಕೊಂದು ಸೀತೆಯನ್ನು ಪಡೆಯುವೆ. ನನಗೆ ಹೋಗಲು ಅಪ್ಪಣೆಕೊಡು.” ಹೀಗೆಂದು ಹೇಳಿ ಗರುಡನು ರಾಮಲಕ್ಷ್ಮಣರನ್ನು ಬೀಳ್ಕೊಂಡು ಆಕಾಶಮಾರ್ಗವಾಗಿ ಹಾರಿಹೋದನು. ರಾಮಲಕ್ಷ್ಮಣರು ಮೂರ್ಛೆ ತಿಳಿದು ಮೊದಲಿನಂತಾದುದನ್ನು ಕಂಡು ವಾನರರು ಸಂತೋಷದಿಂದ ಭೇರಿಶಂಖಗಳನ್ನು ಶಬ್ದಮಾಡಿ ಯುದ್ಧಮಾಡಲು ಉತ್ಸಾಹದಿಂದ ಸಿದ್ಧರಾದರು.