ಅಕಂಪನನ ಮರಣವನ್ನು ಕೇಳಿ ರಾವಣನ ಮುಖ ಕಂದಿಹೋಯಿತು. ಕ್ಷಣಕಾಲ ಚಿಂತಿಸಿ, ಮಂತ್ರಿಗಳೊಡನೆ ಮುಂದಿನ ಕಾರ್ಯವನ್ನು ಕುರಿತು ಆಲೋಚನೆಮಾಡಿ, ಆ ದಿನ ಮಧ್ಯಾಹ್ನದವರೆಗೂ ನಗರದ ಮುಖ್ಯವಾದ ಸೇನಾನಿವೇಶನಗಳನ್ನು ಪರೀಕ್ಷೆಮಾಡಿದನು. ಆ ಬಳಿಕ ಯುದ್ಧದಲ್ಲಿ ನಿಪುಣನಾದ ಪ್ರಹಸ್ತನನ್ನು ಕುರಿತು “ಪ್ರಹಸ್ತ, ಶತ್ರುಗಳು ನಗರವನ್ನು ಮುತ್ತಿರುವ ಈ ವೇಳೆಯಲ್ಲಿ ಯುದ್ಧಮಾಡದೆ ಬೇರೆ ವಿಧಿಯಿಲ್ಲ. ನಾನು, ಕುಂಭಕರ್ಣ, ಇಂದ್ರಜಿತ್ತು ಮತ್ತು ನೀನು ಈಗ ಈ ಯುದ್ಧದ ಭಾರವನ್ನು ವಹಿಸಲೇಬೇಕಾಗಿದೆ. ಆದ್ದರಿಂದ ರಾಕ್ಷಸಸೇನೆಯೊಡನೆ ಈಗ ಯುದ್ಧಕ್ಕಾಗಿ ಹೊರಡು. ನಿನ್ನನ್ನು ಕಂಡ ವಾನರಸೇನೆ ಅಪಜಯದಿಂದ ಓಡಿಹೋಗುವುದರಲ್ಲಿ ಸಂದೇಹವಿಲ್ಲ. ಸಿಂಹವನ್ನು ಕಂಡ ಆನೆಗಳಂತೆ ವಾನರಸೇನೆ ಓಡಿಹೋಗಲು ರಾಮಲಕ್ಷ್ಮಣರು ಸುಲಭವಾಗಿಯೆ ನಿನ್ನ ವಶರಾಗುತ್ತಾರೆ. ಯುದ್ಧಕಾಲದಲ್ಲಿ ಮರಣವುಂಟಾದರೆ ಅದಕ್ಕಿಂತಲೂ ಮಿಗಿಲಾದ ಶ್ರೇಯಸ್ಸು ಮತ್ತೇನಿದೆ? ಈ ವಿಷಯದಲ್ಲಿ ನಿನ್ನ ಅಭಿಪ್ರಾಯವೇನು?” ಎಂದನು.

ಶುಕ್ರಾಚಾರ್ಯರು ರಾಕ್ಷಸೇಂದ್ರನಿಗೆ ಬುದ್ಧಿ ಹೇಳುವಂತೆ, ಪ್ರಹಸ್ತನು ರಾವಣನಿಗೆ ಈ ರೀತಿ ನುಡಿದನು. “ಈ ವಿಷಯವನ್ನು ಮಂತ್ರಿಗಳೊಡನೆ ಆಲೋಚಿಸಿ ಈ ರೀತಿ ನಿಶ್ಚಯಕ್ಕೆ ಬಂದಿದ್ದೇನೆ. ಈ ಸಂದರ್ಭದಲ್ಲಿ ಸೀತೆಯನ್ನು ರಾಮನಿಗೊಪ್ಪಿಸುವುದೇ ಲೇಸು. ಹಾಗಲ್ಲದಿದ್ದರೆ ಯುದ್ಧ ಮಾಡದೆ ವಿಧಿಯಿಲ್ಲ. ನಿನ್ನಿಂದ ಇದುವರೆಗೂ ಸತ್ಕೃತನಾಗಿರುವ ನಾನು, ನಿನಗೆ ಹಿತವನ್ನೇ ಮಾಡಬಯಸುತ್ತೇನೆ. ಯುದ್ಧದಲ್ಲಿ ಪ್ರಾಣವನ್ನು ಒಪ್ಪಿಸಲು ಹಿಂಜರಿಯುವುದಿಲ್ಲ” ಹೀಗೆಂದು ನುಡಿದು ತನ್ನ ಸೇನೆಗೆ ಯುದ್ಧಕ್ಕೆ ಸಿದ್ಧವಾಗಲು ಅಪ್ಪಣೆಮಾಡಿದನು. ಕ್ಷಣಮಾತ್ರದಲ್ಲಿ ಲಂಕಾನಗರವೆಲ್ಲ ರಾಕ್ಷಸರಿಂದ ತುಂಬಿಹೋಯಿತು. ಅಗ್ನಿಯನ್ನು ಪೂಜಿಸಿ, ಬ್ರಾಹ್ಮಣರಿಗೆ ನಮಸ್ಕರಿಸಿ, ರಾವಣನ ಅಪ್ಪಣೆಯನ್ನು ಬೇಡಿ ಪ್ರಹಸ್ತನು ಯುದ್ಧಕ್ಕೆ ಹೊರಟನು. ಆಗ ರಣಭೇರಿಯನ್ನು ಭಯಂಕರವಾಗಿ ಹೊಡೆಯಲಾಯಿತು. ಬಂಗಾರದ ಒಡವೆಗಳಿಂದ ಅಲಂಕೃತವಾದ, ಸರ್ಪಧ್ವಜದಿಂದ ಶೋಭಿತವಾದ, ಎಲ್ಲ ಸಾಮಗ್ರಿಗಳಿಂದ ತುಂಬಿದ ರಥವನ್ನೇರಿ ಪ್ರಹಸ್ತನು ಹೊರಟನು. ಅವನ ಮುಂದೆ ರಾಕ್ಷಸವೀರರು ಶಂಖದುಂದುಭಿಗಳನ್ನು ಬಾರಿಸುತ್ತ. ಸಿಂಹನಾದಮಾಡುತ್ತ ಮುನ್ನುಗ್ಗಿದರು. ನಗರದ ಪೂರ್ವದ್ವಾರದಿಂದ ರಾಕ್ಷಸಸೇನೆ ರಣರಂಗಕ್ಕೆ ಹೊರಡಲು, ಮಾಂಸವನ್ನು ತಿನ್ನುವ ಪಕ್ಷಿಗಳು ಅಂತರಿಕ್ಷದಲ್ಲಿ ರಥಗಳನ್ನು ಅಪ್ರದಕ್ಷಿಣವಾಗಿ ಸುತ್ತಿದುವು. ನರಿಗಳು ಬೆಂಕಿಯನ್ನು ಉಗುಳುತ್ತ ಕೂಗಿದುವು. ಮುಗಿಲಿನಿಂದ ಉಲ್ಕೆಗಳು ಉದುರಿದವು. ಪ್ರಹಸ್ತನ ರಥದ ಮೇಲೆ ರಕ್ತದ ಮಳೆ ಸುರಿಯಿತು. ಅವನ ಸಾರಥಿಯ ಚಾಟಿ ಇದ್ದಕ್ಕಿದ್ದಂತೆ ಬಿದ್ದುಹೋಯಿತು. ಕುದುರೆಗಳು ಮುಗ್ಗುರಿಸಿದುವು. ಆದರೆ ಪ್ರಹಸ್ತನು ಇವುಗಳನ್ನು ಲಕ್ಷಿಸದೆ ಜಯಪಡೆಯುವ ಆಸೆಯಿಂದ ವಾನರ ಸೇನೆಗೆ ಇದಿರಾಗಿ ಬಂದನು.

ಇತ್ತ ಶ್ರೀರಾಮನಿಗೆ ರಾವಣನ ಸೈನ್ಯದ ಮೂರನೆಯ ಒಂದು ಭಾಗಕ್ಕೆ ಪ್ರಹಸ್ತನೆ ಸೇನಾಪತಿ ಎಂಬ ವಿಷಯ ವಿಭೀಷಣನಿಂದ ತಿಳಿಯಿತು. ಪ್ರಹಸ್ತನು ವೀರ; ಅಸ್ತ್ರಗಳನ್ನು ಚೆನ್ನಾಗಿ ತಿಳಿದವನು; ಯುದ್ಧದಲ್ಲಿ ನಿಪುಣ ಎಂಬುದೂ ತಿಳಿಯಿತು. ಅಷ್ಟರಲ್ಲಿಯೆ ಕತ್ತಿ ಗದೆ ಒನಕೆ ಮುಂತಾದ ನಾನಾ ಆಯುಧಗಳನ್ನು ಧರಿಸಿದ ರಾಕ್ಷಸಸೇನೆ ಎದುರಾಯಿತು. ವಾನರರೂ ಯುದ್ಧಮಾಡಲು ಬಯಸಿ ಹೂಬಿಟ್ಟ ಮರಗಳನ್ನೂ ಅಗಲವೂ ಉದ್ದವೂ ಆದ ಕಲ್ಲುಗಳನ್ನೂ ಹಿಡಿದು ನಿಂತರು.

ರಾಕ್ಷಸರಿಗೂ ವಾನರರಿಗೂ ಮೊದಲಾದ ಅಂದಿನ ಯುದ್ಧದಲ್ಲಿ ರಾಕ್ಷಸರು ಬಾಣದ ಮಳೆಯನ್ನು ಕರೆದು ವಾನರರನ್ನು ನೋಯಿಸಿದರು. ವಾನರರೂ ಪ್ರತಿಯಾಗಿ ಕಲ್ಲುಗಳನ್ನಿಟ್ಟು ರಾಕ್ಷಸರನ್ನು ಹೊಡೆದರು. ಎದೆ ಒಡೆದು ಬಿದ್ದ, ರುಂಡಮುಂಡಗಳು ಬೇರೆಯಾದ, ಎರಡೆರಡು ಸೀಳಾಗಿ ಬಿದ್ದ ವೀರರಿಗೆ ಲೆಕ್ಕವೆ ಇಲ್ಲ. ಮುಖದಿಂದ ರಕ್ತವನ್ನು ಕಾರುತ್ತ ಚೀರಿಡುತ್ತ ಒಬ್ಬರೊಬ್ಬರು ಹೋರಾಡಿದರು. ವಾನರರು ಹೋರಾಡಲು ತಂದ ಶೈಲ ವೃಕ್ಷಗಳೊಡನೆ ಸತ್ತುಬಿದ್ದ ವೀರರ ಹಣದರಾಶಿ ಪರ್ವತದಂತೆ ತೋರುತ್ತಿತ್ತು. ಪ್ರಹಸ್ತನ ಮಂತ್ರಿಗಳಾದ ನರಾಂತಕ, ಕುಂಭಹನು, ಮಹಾನಾದ ಮತ್ತು ಸಮುನ್ನತರು ಅನೇಕ ವಾನರರನ್ನು ಕೊಂದು ತಾವೂ ಪ್ರಾಣಬಿಟ್ಟರು. ತನ್ನ ಮಂತ್ರಿಗಳು ಸತ್ತುದನ್ನು ಕಂಡು ಪ್ರಹಸ್ತನು ಕೋಪದಿಂದ ಬಿಲ್ಲನ್ನು ಹಿಡಿದು ತಾನೆ ಯುದ್ಧಕ್ಕೆ ಬಂದನು. ಬಿಲ್ಲನ್ನು ಭಯಂಕರವಾಗಿ ಧ್ವನಿಮಾಡುತ್ತ, ವಾನರರನ್ನು ಕೊಲ್ಲುತ್ತಿದ್ದ ಪ್ರಹಸ್ತನನ್ನು ನೋಡಿ, ನೀಲನೆಂಬ ವಾನರವೀರನು ಅವನನ್ನು ಎದುರಿಸಿದನು. ಬಿಲ್ಲನ್ನು ಸೆಳೆದು ಬಿಟ್ಟೊಡನೆ ಸರ್ಪಗಳಿಗೆ ಸಮಾನವಾದ ಪ್ರಹಸ್ತನ ಬಾಣಗಳು ನೀಲನನ್ನು ನೋಯಿಸಿದುವು. ಆಗ ನೀಲನು ದೊಡ್ಡದೊಂದು ಮರವನ್ನು ಕಿತ್ತು ಪ್ರಹಸ್ತನನ್ನು ಹೊಡೆದನು. ಮತ್ತೆ ಪ್ರಹಸ್ತನು ಬಾಣಗಳನ್ನು ಬಿಡಲು, ಶರತ್ಕಾಲದಲ್ಲಿ ಬಂದ ಮಳೆಯನ್ನು ಗೂಳಿ ಕಣ್ಣುಮುಚ್ಚಿಕೊಂಡು ಸಹಿಸುವಂತೆ, ನೀಲನು ಅವುಗಳನ್ನು ಸಹಿಸಿದನು. ಆ ಬಳಿಕ ನೀಲನು ಸಾಲವೃಕ್ಷದಿಂದ ಪ್ರಹಸ್ತನ ಕುದುರೆಗಳನ್ನು ಕೊಂದು, ಹಾರಿ ನೆಗೆದು ಅವನ ಕೈಯಿಂದ ಬಲಾತ್ಕಾರವಾಗಿ ಬಿಲ್ಲನ್ನು ಸೆಳೆದು ಮುರಿದುಹಾಕಿ ಸಿಂಹನಾದಮಾಡಿದನು. ಬಿಲ್ಲು ಮುರಿದು, ಕುದುರೆ ಸಾಯಲು, ರಥದಿಂದ ಪ್ರಹಸ್ತನು ಧುಮುಕಿ ಒನಕೆಯಂತಹ ಮುಸಲಾಯುಧವನ್ನು ಹಿಡಿದು ಯುದ್ಧಕ್ಕೆ ನಿಂತನು. ಹುಟ್ಟು ಹಗೆಗಳಾದ ಆನೆಗಳಂತೆ ಅವರಿಬ್ಬರೂ ಕಾಣಿಸಿಕೊಂಡರು. ರಕ್ತದಿಂದ ತೊಯ್ದ ದೇಹವುಳ್ಳ ಅವರಿಬ್ಬರೂ ಬಹುಕಾಲ ವೃತ್ತಾಸುರ ದೇವೇಂದ್ರರಂತೆ ಹೋರಾಡಿದರು. ಆಗ ಕೋಪದಿಂದ ಪ್ರಹಸ್ತನು ತನ್ನ ಒನಕೆಯನ್ನೆತ್ತಿ ನೀಲನಿಗೆ ಇದಿರಾಗಿ ಬರಲು, ದೊಡ್ಡದೊಂದು ಕಲ್ಲನ್ನೆತ್ತಿಕೊಂಡು ನೀಲನು ಅವನನ್ನು ಹೊಡೆದನು. ತಲೆಗೆ ತಗುಲಿದ ಆ ಕಲ್ಲಿನ ಹೊಡೆತದಿಂದ ಪ್ರಹಸ್ತನ ತಲೆ ಚೂರುಚೂರಾಗಿ ಅವನು ಪ್ರಾಣಬಿಟ್ಟನು. ಬುಡ ಕತ್ತರಿಸಲು ಬೀಳುವ ಮರದಂತೆ ರಕ್ತ ಸುರಿಯುತ್ತ ಬಿದ್ದು ಸೇನಾಪತಿ ಸಾಯಲು ರಾಕ್ಷಸರು ಹೆದರಿ ಲಂಕೆಗೆ ಓಡಿಹೋದರು. ಕಟ್ಟೆಯೊಡೆದ ಕೆರೆಯ ನೀರಿನಂತೆ ಅವರು ಅಲ್ಲಿ ನಿಲ್ಲಲಾಗಲಿಲ್ಲ.