ಶ್ರೀರಾಮಬಾಣದ ಪೆಟ್ಟಿನಿಂದ ರಾವಣನ ಮದವುಡುಗಿತು; ಪರಿತಪಿಸುತ್ತಾ ಆತನು ಲಂಕೆಯನ್ನು ಪ್ರವೇಶಿಸಿದನು. ಮಾನವನಿಂದ ತನಗೆ ಭಯವಡಸುವುದೆಂದು ಬ್ರಹ್ಮನು ಹಿಂದೆ ಹೇಳಿದ್ದ ಮಾತು ಈಗ ಆತನ ಜ್ಞಾಪಕಕ್ಕೆ ಬಂದಿತು. ಅಲ್ಲದೆ ಹಿಂದೆ ತಾನು ಚೈತ್ರಯಾತ್ರೆಗಾಗಿ ಹೋಗುತ್ತಿದ್ದಾಗ ತಪೋನಿರತಳಾಗಿದ್ದ ವೇದವತಿಯನ್ನು ಕೆಣಕಿ ಆಕೆಯಿಂದ ಶಪಿತನಾಗಿದ್ದುದೂ, ಮೇರುಪರ್ವತವನ್ನು ಅಲ್ಲಾಡಿಸಹೊರಟಾಗ ಉಮಾದೇವಿಯೂ ನಂದೀಶ್ವರನೂ ಶಾಪವಿತ್ತುದೂ ಜ್ಞಪ್ತಿಗೆ ಬಂದುವು. ಅನೇಕ ಋಷಿಗಳನ್ನೂ ಸಂಕಟಪಡಿಸಿ ಅವರ ಶಾಪಕ್ಕೆ ಪಾತ್ರನಾಗಿದ್ದುದೂ ನೆನಪಾಯಿತು. ಬಹುಜನರನ್ನು ತನ್ನ ಔದ್ಧತ್ಯದಿಂದ ಸಂಕಟಕ್ಕೆ ಗುರಿಪಡಿಸಿದ್ದ ಪಾಪ ಈಗ ಫಲಕೊಡಲು ಆರಂಭವಾಯಿತೆಂದು ಎನಿಸಿತು, ಆತನಿಗೆ. ಪ್ರಹಸ್ತನ ಮರಣವೂ ತನ್ನ ಅಪಜಯವೂ ಮುಂದೆ ಕಾದಿರುವ ವಿಪತ್ತಿನ ಸೂಚನೆಗಳೆಂದು ಆತನು ಭಾವಿಸಿದನು. ಆದರೂ ಹಿಡಿದ ಕೆಲಸವನ್ನು ಕೊನೆಮುಟ್ಟಿಸದೆ ಬಿಡುವ ಸ್ವಭಾವವಲ್ಲ, ರಾವಣನದು. ಆದ್ದರಿಂದ ಆತನು ಪಟ್ಟಣದ ಕಾವಲನ್ನು ಭದ್ರಪಡಿಸುವಂತೆ ಅಧಿಕಾರಿಗಳನ್ನು ನೇಮಿಸಿ, ನಿದ್ರೆಯಲ್ಲಿ ಮುಳುಗಿದ್ದ ಕುಂಭಕರ್ಣನನ್ನು ಎಬ್ಬಿಸಿ ಕರೆತರುವಂತೆ ದೂತರನ್ನಟ್ಟಿದನು.

ಕುಂಭಕರ್ಣನೆಂದರೆ ಯುದ್ಧದಲ್ಲಿ ಧ್ವಜಪ್ರಾಯನಾದವನು. ದೇವದಾನವ ಮಾನವರಲ್ಲಿ ಅವನನ್ನು ಇದಿರಿಸುವವರೇ ಇರಲಿಲ್ಲ. ಆದರೆ ಅವನು ಕೀಳುಸುಖಗಳಲ್ಲಿ ಲೋಲುಪ್ತನಾಗಿ ಸದಾ ನಿದ್ರೆಮಾಡುವುದರಲ್ಲಿಯೇ ಮುಳುಗಿರುತ್ತಿದ್ದನು. ಒಮ್ಮೆ ಮಲಗಿದನೆಂದರೆ ಆರು ತಿಂಗಳೊ ಏಳು ತಿಂಗಳೊ ಎಂಟು ತಿಂಗಳೊ ಮೇಲಕ್ಕೇಳು ವಂತಿರಲಿಲ್ಲ. ಆಗ ಅವನು ಮಲಗಿ ಕೇವಲ ಒಂಬತ್ತು ದಿನಗಳಾಗಿದ್ದುವು. ತನ್ನನ್ನು ಎಚ್ಚರಗೊಳಿಸಕೂಡದೆಂದು ಹೇಳಿ ಅವನು ನಿದ್ರೆಹೋಗಿದ್ದನು. ಆದರೆ ಅವನನ್ನು ಎಬ್ಬಿಸುವುದು ಅನಿವಾರ್ಯವಾದುದರಿಂದ ರಾವಣಾಸುರನು ಆ ಕಾರ್ಯಕ್ಕಾಗಿ ದೂತರನ್ನು ಅಟ್ಟಬೇಕಾಯಿತು. ಅವರು ರಕ್ತಮಾಂಸಗಳ ಭಾಂಡಗಳನ್ನೂ ಭಕ್ಷ್ಯಭೋಜ್ಯಗಳ ಬುಟ್ಟಿಗಳನ್ನೂ ಹೊತ್ತುಕೊಂಡು ಕುಂಭಕರ್ಣನ ಅರಮನೆಯ ಬಳಿಗೆ ಬಂದರು. ಅವನು ಎದ್ದೊಡನೆಯೆ ಅವನ ಹಸಿವನ್ನು ನೀಗುವುದಕ್ಕಾಗಿ ಇವು ಅಗತ್ಯವಾಗಿದ್ದುವು.

ಕುಂಭಕರ್ಣನ ಅರಮನೆ ಒಂದು ಯೋಜನ ವಿಸ್ತಾರವಾಗಿತ್ತು. ಅದರಲ್ಲಿ ಬಹುಭಾಗ ಒಂದು ಗುಹೆಯಂತಿತ್ತು. ಅದೇ ಅವನ ಶಯನಗೃಹ, ತೀನಿಯನ್ನು ಹೊತ್ತು ಬಂದ ರಾಕ್ಷಸರಿಗೆ ಅವನ ಮನೆಯ ಹೆಬ್ಬಾಗಿಲಿನಲ್ಲಿಯೆ ಅವನ ನಿದ್ರೆಯ ಬಿಸಿ ತಾಕಿತು. ನಿದ್ರೆಯಲ್ಲಿ ಅವನು ಬಿಡುತ್ತಿದ್ದ ನಿಶ್ವಾಸದ ಉಸಿರು ಅವರನ್ನು ಒಳಗೆ ಪ್ರವೇಶಿಸದಂತೆ ದಬ್ಬುತ್ತಿತ್ತು. ಆದರೂ ಅವರು ಕಷ್ಟಪಟ್ಟುಕೊಂಡು ಒಳಗೆ ಪ್ರವೇಶಿಸಿದರು. ದೊಡ್ಡ ಪರ್ವತವೊಂದು ಅಡ್ಡ ಬಿದ್ದಂತೆ ಮಲಗಿದ್ದ ಆ ರಾಕ್ಷಸನ ದೇಹದ ರೋಮಗಳು ನಿಮಿರಿ ನೆಟ್ಟಗೆ ನಿಂತಿದ್ದುವು. ದೊಡ್ಡ ಗುಹೆಗಳಂತಿರುವ ಅವನ ಹೊಳ್ಳೆಗಳು, ಪ್ರಪಾತದಂತಿರುವ ಬಾಯಿ, ಗುಡುಗಿನಂತಿರುವ ಗೊರಕೆಗಳು – ಇವುಗಳನ್ನು ಕಂಡವರು ಭಯದಿಂದ ನಡುಗಿಹೋಗುವುದೆ! ಆತನನ್ನು ಎಬ್ಬಿಸಬಂದ ರಾಕ್ಷಸರು ಆತನ ಸಮೀಪದಲ್ಲಿ ಮಾಂಸವನ್ನು ರಾಶಿರಾಶಿಯಾಗಿ ಸುರಿದರು; ಅಸಂಖ್ಯಾತವಾದ ಮದ್ಯದ ಮತ್ತು ನೆತ್ತರಿನ ಗಡಿಗೆಗಳನ್ನು ಸಾಲುಸಾಲಾಗಿ ಇರಿಸಿದರು. ಅನಂತರ ಆ ರಾಕ್ಷಸವೀರನನ್ನು ಎಬ್ಬಿಸುವ ಪ್ರಯತ್ನವನ್ನು ಆರಂಭಿಸಿದರು. ಸಹಸ್ರಜನ ರಾಕ್ಷಸರು ಏಕಕಾಲದಲ್ಲಿ ಭೇರಿ ಮೃದಂಗ ಮೊದಲಾದ ವಾದ್ಯ ವಿಶೇಷಗಳನ್ನು ಮೊಳಗಿಸಲಾರಂಭಿಸಿದರು; ಇದರಿಂದ ಏನೂ ಪ್ರಯೋಜನವಾಗಲಿಲ್ಲ. ಎಲ್ಲರೂ ಸೇರಿ ಏಕಕಾಲದಲ್ಲಿ ಸಿಂಹನಾದ ಮಾಡಿದರು; ಕರತಾಡನ ಮಾಡಿದರು; ಆ ಧ್ವನಿ ಪ್ರತಿಧ್ವನಿತವಾಗಿ ಅರಮನೆಯ ಸುತ್ತುಮುತ್ತಿನ ಮರಗಳಿಂದ ಗಾಬರಿಗೊಂಡ ಹಕ್ಕಿಗಳು ಹಾರಿಹೋದವೆ ಹೊರತು ಕುಂಭಕರ್ಣನಿಗೇನೂ ಎಚ್ಚರವಾಗಲಿಲ್ಲ. ಈ ಉಪಾಯ ಸರಿಹೋಗಲಿಲ್ಲವೆಂದು ಗದೆ ಮುಸಲ ಮೊದಲಾದ ಆಯುಧಗಳಿಂದಲೂ ಮುಷ್ಟಿಯಿಂದಲೂ ಪ್ರಹರಿಸಿದರು. ಆದರೂ ಆ ಮಹಾರಾಯ ಕದಲಲಿಲ್ಲ. ಆನೆ ಕುದುರೆ ಒಂಟೆ ಮೊದಲಾದ ವಾಹನಗಳನ್ನು ಅವನ ಮೇಲೆ ಹಾಯಿಸಿದರು, ಕೊರಡೆಗಳಿಂದ ಹೊಡೆದರು, ಅಂಕುಶದಿಂದ ತಿವಿದರು; ಆದರೂ ಏನೂ ಪ್ರಯೋಜನವಾಗಲಿಲ್ಲ. ಮುಂದೇನು ಮಾಡಬೇಕೆಂಬುದೇ ಅ ರಾಕ್ಷಸರಿಗೆ ತಿಳಿಯಲಿಲ್ಲ. ಅವರೆಲ್ಲರೂ ಸೇರಿ ಪರಿಪರಿಯಾಗಿ ಅವನನ್ನು ಹಿಂಸಿಸತೊಡಗಿದರು. ಬಿಂದಿಗೆಗಟ್ಟಲೆ ನೀರನ್ನು ಅವನ ಕಿವಿಗಳಲ್ಲಿ ಸುರಿದು, ಈಟಿಯಿಂದ ತಿವಿದು, ಆನೆಗಳಿಂದ ತುಳಿಸಿ, ವೃಕ್ಷಗಳಿಂದಲೂ ಕಲ್ಲುಬಂಡೆಗಳಿಂದಲೂ ಅವನನ್ನು ಪ್ರಹರಿಸಿ ಕೊನೆಗೂ ಅವನನ್ನು ನಿದ್ರೆಯಿಂದ ಎಬ್ಬಿಸಿದರು.

ಕುಂಭಕರ್ಣನು ಪಾತಾಳದಂತಿದ್ದ ಬಾಯನ್ನು ಒಮ್ಮೆ ತೆರೆದು ಆಕಳಿಸಿದನು. ಪರ್ವತಸಮಾನವಾದ ದೇಹವನ್ನು ಒಮ್ಮೆ ಮುರಿದು ಮೇಲಕ್ಕೆದ್ದನು. ಕಿಡಿಗಾರುತ್ತಿದ್ದ ಕೆಂಗಣ್ಣುಗಳಿಂದ ಅವನು ಒಮ್ಮೆ ಸುತ್ತಲೂ ನೋಡಿದೊಡನೆಯೆ ರಾಕ್ಷಸರೆಲ್ಲರೂ ಬೆದರಿ, ಕಣ್ಣುಸನ್ನೆಯಿಂದಲೆ ಅಲ್ಲಿ ಸುರಿದಿದ್ದ ಆಹಾರದ ರಾಶಿಯನ್ನು ತೋರಿಸಿದರು. ಇದರಿಂದ ಕುಂಭಕರ್ಣನು ಸಂತೋಷಗೊಂಡು ಅದನ್ನೆಲ್ಲಾ ಭಕ್ಷಿಸಿ, ಅಲ್ಲಿದ್ದ ಮದ್ಯವನ್ನೂ ರಕ್ತವನ್ನೂ ನಿಶ್ಶೇಷವಾಗಿ ಹೀರಿದನು. ಅನಂತರ ತನ್ನನ್ನು ಏಕೆ ಎಬ್ಬಿಸಿರಬಹುದೆಂದು ಆಶ್ಚರ್ಯಪಡುತ್ತಾ ಸುತ್ತಲಿದ್ದ ರಾಕ್ಷಸರನ್ನು ಪ್ರಶ್ನಿಸಿದನು – “ಏನಯ್ಯಾ! ಈ ಅರೆನಿದ್ರೆಯಲ್ಲಿ ನನ್ನನ್ನು ಎಬ್ಬಿಸುವ ಅವ್ಹಸರವೇನಿತ್ತು? ಒಡೆಯನಾದ ರಾವಣಾಸುರನು ಸುಕ್ಷೇಮವಾಗಿರುವನಷ್ಟೆ! ಆತನಿಗೇನಾದರೂ ತೊಂದರೆಯಾಗಿದ್ದರೆ ತಿಳಿಸಿ; ಹಾಗೆ ತೊಂದರೆಗೊಳಿಸಿದವನು ಸ್ವತಃ ದೇವೇಂದ್ರನಾಗಿದ್ದರೂ ಅವನನ್ನು ಕ್ರೂರವಾಗಿ ಶಿಕ್ಷಿಸುತ್ತೇನೆ” ಎಂದನು. ಆಗ ರಾಕ್ಷಸರು ತಮ್ಮ ಒಡೆಯನಿಗೆ ಒದಗಿದ್ದ ಸಂಕಟವನ್ನು ವಿವರಿಸಿ ಹೇಳಿದರು – “ಪ್ರಭು, ದೇವೇಂದ್ರನಿಂದ ನಮಗೇನೂ ಈಗ ತೊಂದರೆಯೊದಗಿಲ್ಲ. ಆದರೆ ಪರ್ವತಾಕಾರರಾದ ವಾನರರು ಲಂಕೆಯನ್ನೇ ವ್ಯಾಪಸಿ, ಅಗಾಧವಾದ ಹಾವಳಿಯನ್ನು ಮಾಡುತ್ತಿದ್ದಾರೆ. ಈ ಮೊದಲೆ ಒಬ್ಬ ವಾನರ ಇಲ್ಲಿಗೆ ಬಂದು ಊರನ್ನೆಲ್ಲಾ ಸುಟ್ಟುಹೋದನಷ್ಟೆ. ಅದೇ ವಾನರನೆ ಈಗ ಪುನಃ ಬಂದಿದ್ದಾನೆ. ಅವನ ಜೊತೆಯಲ್ಲಿ ಬಂದಿರುವ ಶ್ರೀರಾಮನೆಂಬ ಮಾನವನು ಭಯಂಕರವಾಗಿ ಯುದ್ಧಮಾಡುತ್ತಾ ರಾವಣೇಶ್ವರನಿಗೆ ಪದೇ ಪದೇ ಭಂಗವನ್ನುಂಟುಮಾಡುತ್ತಿದ್ದಾನೆ. ಅವನಿಂದಲೂ ಅವನ ತಮ್ಮನಾದ ಲಕ್ಷ್ಮಣನಿಂದಲೂ ಮಹತ್ತಾದ ಭಯವು ಪ್ರಾಪ್ತವಾಗಿದೆ” ಎಂದರು.

ತನ್ನ ಅಣ್ಣನಿಗೆ ಅಪಜಯವಾಯಿತೆಂದು ಕೇಳುತ್ತಲೇ ಕುಂಭಕರ್ಣನು ಕೋಪದಿಂದ ಕಾಯ್ದು ಕೆಂಗೆಂಡವಾದನು; ಕಣ್ಣಾಲಿಗಳು ರಥಚಕ್ರದಂತೆ ಗಿರಿಗಿರಿ ತಿರುಗಿದುವು. ಸಿಡಿಲಿನಂತಹ ಧ್ವನಿಯಿಂದ “ಎಲೈ ರಾಕ್ಷಸರೆ, ಈ ಕ್ಷಣದಲ್ಲಿಯೆ ಆ ರಾಮನನ್ನು ಸಂಹರಿಸಿ, ವಾನರರ ರಕ್ತದಿಂದ ರಾಕ್ಷಸರನ್ನೆಲ್ಲಾ ತೃಪ್ತಿಪಡಿಸುತ್ತೇನೆ. ಆ ರಾಮಲಕ್ಷ್ಮಣರ ರಕ್ತವನ್ನು ನಾನೇ ಕುಡಿಯುತ್ತೇನೆ” ಎಂದು ಗರ್ಜಿಸಿದನು. ಇದನ್ನು ಕೇಳಿ, ರಾಕ್ಷಸರು ಕೃತಕಾರ್ಯರಾದೆವೆಂದು ಸಂತೋಷಪಡುತ್ತಾ ಓಡಿಬಂದು ರಾವಣೇಶ್ವರನಲ್ಲಿ ನಡೆದುದನ್ನೆಲ್ಲಾ ನಿವೇದಿಸಿದರು. ಆತನಿಗೆ ಅದನ್ನು ಕೇಳಿ ಬಹು ಸಂತೋಷವಾಯಿತು; ತಮ್ಮನನ್ನು ತನ್ನಲ್ಲಿಗೆ ಕರೆತರುವಂತೆ ದೂತರನ್ನಟ್ಟಿದನು. ಅವರು ಕುಂಭಕರ್ಣನಿಗೆ ಮಧ್ಯದ ಕಾಣಿಕೆಯನ್ನು ಕೊಟ್ಟು ಕಾಣಿಸಿಕೊಂಡು ಆತನನ್ನು ರಾವಣೇಶ್ವರನಲ್ಲಿಗೆ ಕರೆತಂದರು. ಆತನು ನಡೆದುಬರುತ್ತಿರುವಾಗ ಹೆಜ್ಜೆಹೆಜ್ಜೆಗೂ ಭೂಮಿ ನಡುಗಿಹೋಗುತ್ತಿತ್ತು. ಬೀದಿಯಲ್ಲಿ ಕಂಡ ರಾಕ್ಷಸರೆಲ್ಲರೂ ಈತನಿಗೆ ನಮಸ್ಕರಿಸಿ ಗೌರವಿಸುತ್ತಿದ್ದರು. ಹೊರಗಿನ ಪ್ರಾಕಾರದಲ್ಲಿ ಸಂಚರಿಸುತ್ತಿದ್ದ ವಾನರರಿಗೆ ಈ ಜಂಗಮ ಪರ್ವತ ಕಾಣಿಸಿತು. ನೋಡಿ, ಅವರು ಭಯದಿಂದ ತತ್ತರಿಸಿಹೋದರು. ಕೆಲವರು ಶ್ರೀರಾಮನ ಬಳಿಗೆ ಓಡಿಹೋಗಿ ಆತನಿಗೆ ಆ ಸುದ್ಧಿಯನ್ನು ತಿಳಿಸಿದರು. ಮತ್ತೆ ಕೆಲವರು ಭಯದಿಂದ ನಡುಗುತ್ತಾ ಅಲ್ಲಿಯೇ ನೆಲಕ್ಕೆ ಬಿದ್ದರು. ಉಳಿದವರು ದಿಕ್ಕುದಿಕ್ಕಿಗೆ ಪಲಾಯನಮಾಡಿದರು. ಶ್ರೀರಾಮನು ದೂರದಿಂದಲೆ ಆ ವ್ಯಕ್ತಿಯನ್ನು ಕಂಡು ವಿಸ್ಮಿತನಾದನು. ತಾನು ಅಂತಹ ಭೂತಸ್ವರೂಪವನ್ನು ಎಂದೂ ಕಂಡಿರಲಿಲ್ಲವೆಂದುಕೊಂಡು ಅವನಾರೆಂದು ವಿಭೀಷಣನನ್ನು ವಿಚಾರಿಸಿದನು. ಆತನು “ಈ ಕುಂಭಕರ್ಣನು ತನ್ನ ಬಾಹುಬಲದಿಂದ ಸಾಕ್ಷಾತ್ ಯಮನನ್ನೇ ಸೋಲಿಸಿದ ಮಹಾಪರಾಕ್ರಮಿ. ದಿನದಿನವೂ ಅವನಿಂದ ಆಗುತ್ತಿದ್ದ ಪ್ರಾಣಿಹತ್ಯೆಯನ್ನು ಕಂಡು ದೇವತೆಗಳು ಮೊರೆಯಿಡಲು ಆತನು ಅವನಿಗೆ ಸದಾ ನಿದ್ರೆ ಅಡಸಿರುವಂತೆ ಶಾಪಕೊಟ್ಟನು. ಆದರೆ ರಾವಣನು ಬ್ರಹ್ಮನಲ್ಲಿ ಬೇಡಿಕೊಂಡು ಆರು ತಿಂಗಳು ನಿದ್ರೆಯಾದ ಮೇಲೆ ಒಂದು ದಿನ ಮಾತ್ರ ಅವನು ಎಚ್ಚೆತ್ತಿರುವಂತೆಯೂ ಆ ದಿನ ಅವನನ್ನು ಇದಿರಿಸುವವರೆ ಇರದಿರುವಂತೆಯೂ ವರ ಪಡೆದಿದ್ದಾನೆ. ಇವನು ರಾವಣನ ಅಚ್ಚುಮೆಚ್ಚಿನ ತಮ್ಮ. ಈ ದಿನ ಆತನ ಅಪ್ಪಣೆಯಂತೆ ಅವನನ್ನು ಎಬ್ಬಿಸಿದ್ದಾರೆ. ಇವನನ್ನು ನಮ್ಮ ಕಪಿಸೇನೆ ಇದಿರಿಸುವುದು ಬಹು ಕಷ್ಟ ಸಾಧ್ಯವೆ ಸರಿ” ಎಂದನು.