ಯುದ್ಧದಲ್ಲಿ ಪ್ರಹಸ್ತನು ಮಡಿದನೆಂಬ ಸಮಾಚಾರವನ್ನು ಕೇಳಿ ಕ್ಷಣಕಾಲ ರಾವಣನು ದುಃಖಕ್ಕೀಡಾದನು. ಆ ಬಳಿಕ ಕೋಪದಿಂದ ಅವನು ರಾಕ್ಷಸವೀರರಿಗೆ “ಚತುರಂಗಸೇನೆಯೊಡಗೂಡಿ ಯುದ್ಧಕ್ಕೆ ಹೊರಟ ಪ್ರಹಸ್ತನು ವಾನರರಿಂದ ಮಡಿದನಲ್ಲವೆ? ಹಗೆ ಪ್ರಬಲನಾಗಿರುವ ಕಾರಣ, ಅವನ ವಿಷಯದಲ್ಲಿ ನಾವು ಉದಾಸೀನರಾಗಿರಕೂಡದು. ಹಗೆಯನ್ನು ಗೆಲ್ಲುವುದಕ್ಕೆ ನಾನೇ ರಣರಂಗಕ್ಕೆ ಹೋಗುತ್ತೇನೆ. ಕಾಡುಕಿಚ್ಚು ವನವನ್ನು ಸುಡುವಂತೆ, ರಾಮಲಕ್ಷ್ಮಣರನ್ನೂ ಕಪಿಸೇನೆಯನ್ನೂ ನನ್ನ ಬಾಣಗಳಿಂದಲೇ ಸುಡುತ್ತೇನೆ” ಎಂದು ನುಡಿದು, ಅಗ್ನಿಯಂತೆ ಹೊಳೆಯುವ, ಉತ್ತಮವಾದ ಕುದುರೆಗಳನ್ನು ಕಟ್ಟಿದ ರಥವನ್ನು ಏರಿದನು. ಆಗ ಶಂಖ ದುಂದುಭಿಗಳನ್ನು ಬಾರಿಸಿದರು. ರಾವಣನ ಬಿರುದುಗಳನ್ನು ಹೊಗಳಿದರು. ರಾಕ್ಷಸರಿಂದ ಸುತ್ತುವರಿದ ರಾವಣನು ಭೂತಗಳಿಂದ ಸುತ್ತುವರಿದ ರುದ್ರನಂತೆ ಹೊಳೆಯುತ್ತ, ಸಮುದ್ರಕ್ಕೆ ಸಮಾನವಾದ ಕಪಿಸೇನೆಗೆ ಇದಿರಾಗಿ ನಡೆದನು.

ತನ್ನೆದುರಿಗೆ ಬರುತ್ತಿದ್ದ ಕ್ರೂರವಾದ ರಾಕ್ಷಸಸೇನೆಯನ್ನು ಕಂಡು ಅದು ಯಾರ ಸೇನೆಯೆಂದು ಶ್ರೀರಾಮನು ವಿಭೀಷಣನನ್ನು ಕೇಳಿದನು. ವಿಭೀಷಣನು ರಾವಣನ ಸೇನೆಯಲ್ಲಿ ಅಕಂಪನ, ಇಂದ್ರಜಿತ್ತು, ಅತಿಕಾಯ, ಮಹೋದರ, ತ್ರಿಶಿರ, ಕುಂಭ, ನಿಕುಂಭ ಮುಂತಾದ ವೀರರನ್ನು ತೋರಿಸಿ, ಶ್ವೇತಚ್ಛತ್ರದ ಕೆಳಗೆ ಬರುತ್ತಿದ್ದ ದೇವತೆಗಳನ್ನು ಗೆದ್ದ ಮಹಾನುಭಾವನಾದ ರಾವಣನನ್ನು ತೋರಿಸಿದನು. ರಾವಣನನ್ನು ನೋಡಿ ಶ್ರೀರಾಮ ವಿಭೀಷಣನಿಗೆ ಈ ರೀತಿ ನುಡಿದನು. “ರಾವಣನ ತೇಜಸ್ಸು ಆಶ್ಚರ್ಯವನ್ನುಂಟುಮಾಡುತ್ತಿದೆ. ಸೂರ್ಯನಂತಿರುವ ಇವನ ತೇಜಸ್ಸನ್ನು ನೋಡಲಸಾಧ್ಯ. ದೇವದಾನವರಲ್ಲಿಯೂ ಈ ತೆರನಾದ ರೂಪ ಇರಲಾರದು. ಪರ್ವತಾಕಾರರಾದ ಇವನ ಭಟರು ತೇಜಸ್ವಿಗಳಾಗಿದ್ದಾರೆ. ಇವರಿಂದ ಸುತ್ತುವರಿದ ಇವನು ಯಮನಂತೆ ಶೋಭಿಸುತ್ತಿದ್ದಾನೆ. ಸೀತಾಪಹರಣದಿಂದ ಉಂಟಾದ ಕ್ರೋಧವನ್ನು ನಾನು ಈಗ ಇವರನಲ್ಲಿ ತೀರಿಸಿಕೊಳ್ಳುತ್ತೇನೆ” ಹೀಗೆಂದು ನುಡಿದು ಬಿಲ್ಲನ್ನು ಹಿಡಿದು ಯುದ್ಧಸನ್ನದ್ಧನಾಗಿ ನಿಂತನು.

ಇತ್ತ ರಾವಣನು ಬರಿದಾದ ಪಟ್ಟಣವನ್ನು ವಾನರರು ಹಾಳುಮಾಡಬಹುದೆಂದು ಶಂಕಿಸಿ, ನಗರವನ್ನು ಕಾಯಲು ರಾಕ್ಷಸವೀರರನ್ನು ಕಳುಹಿಸಿಕೊಟ್ಟನು. ಆ ಬಳಿಕ ಅವನು ತಿಮಿಂಗಿಲವು ಸಮುದ್ರವನ್ನು ಸೀಳುವಂತೆ ವಾನರಸೇನೆಯನ್ನು ಭೇದಿಸಿದನು. ಆಗ ಸುಗ್ರೀವನು ದೊಡ್ಡದೊಂದು ಬೆಟ್ಟವನ್ನೆತ್ತಿಕೊಂಡು ರಾವಣನಿಗಿದಿರಾಗಲು ರಾವಣನು ಅದನ್ನು ಬಾಣಗಳಿಂದ ಪುಡಿಮಾಡಿ, ಹರಿತವಾದ ಬಾಣವೊಂದರಿಂದ ಸುಗ್ರೀವನನ್ನು ಭೇದಿಸಿದನು. ಆ ಬಾಣದ ಏಟನ್ನು ಸಹಿಸಲಾರದೆ ಚೀರುತ್ತ ಸುಗ್ರೀವನು ಎಚ್ಚರ ತಪ್ಪಿ ನೆಲಕ್ಕುರುಳಿದನು. ಇದನ್ನು ಕಂಡು ರಾಕ್ಷಸರು ಸಂತೋಷದಿಂದ ಸಿಂಹನಾದಮಾಡಿದರು. ಸುಗ್ರೀವನು ಬಿದ್ದುದನ್ನು ಕಂಡು, ಬೆಟ್ಟಗಳನ್ನೆತ್ತಿಕೊಂಡು ಮೇಲುವಾಯ್ದು ಬಂದ ಗವಯ ಗವಾಕ್ಷ ಮುಂತಾದ ವಾನರವೀರರ ಗತಿಯೂ ಸುಗ್ರೀವನ ಗತಿಯೇ ಆಯಿತು. ರಾವಣನು ಕಪಿಸೇನೆಯನ್ನು ಬಾಣಗಳಿಂದ ಮುಚ್ಚಿ ಹೆದರಿಸಲು ಅವನ ಏಟನ್ನು ತಡೆಯಲಾರದೆ ವಾನರರು ಶ್ರೀರಾಮನನ್ನು ಮರೆಹೊಕ್ಕರು.

ರಾವಣನಿಂದ ಕಪಿಗಳನ್ನು ಕಾಪಾಡಲು ಶ್ರೀರಾಮನು ಬಿಲ್ಲನ್ನು ಹಿಡಿದು ಯುದ್ಧಕ್ಕೆ ಸಿದ್ಧನಾಗಲು, ಲಕ್ಷ್ಮಣನು ರಾವಣನನ್ನು ವಧಿಸಲು ತನಗೆ ಅಪ್ಪಣೆಕೊಡಬೇಕೆಂದು ಅಣ್ಣನನ್ನು ಕೈಮುಗಿದು ಬೇಡಿಕೊಂಡನು. “ಲಕ್ಷ್ಮಣ, ರಾವಣನು ಕೋಪಗೊಂಡರೆ ಮೂರುಲೋಕಗಳಲ್ಲಿ ಯಾರೂ ಅವನನ್ನು ಇದಿರಿಸಲಾರರು. ಇದರಲ್ಲಿ ಅನುಮಾನವೇ ಇಲ್ಲ. ಆದ್ದರಿಂದ ನಿನ್ನ ರಕ್ಷಣೆಯ ವಿಷಯದಲ್ಲಿ ಎಚ್ಚರಿಕೆಯಿಂದಿದ್ದು ಯುದ್ಧಮಾಡು” ಹೀಗೆಂದು ನುಡಿದು ತಮ್ಮನನ್ನು ಅಪ್ಪಿಕೊಂಡು ಬೀಳ್ಕೊಟ್ಟನು.

ಬಿಲ್ಲನ್ನು ಹಿಡಿದು ಯುದ್ಧಕ್ಕೆ ಹೊರಟ ಲಕ್ಷ್ಮಣನೊಡನೆ ಹನುಮಂತನು ಹಿಂಬಾಲಿಸಿ, ರಾವಣನ ಬಾಣಗಳೆಲ್ಲವನ್ನೂ ನಿವಾರಿಸಿಕೊಳ್ಳುತ್ತ ಅವನ ಇದಿರಾಗಿ ಬಂದನು. “ರಾವಣ, ದೇವದಾನವ ಯಕ್ಷಗಂಧರ್ವರು ನಿನ್ನನ್ನು ಕೊಲ್ಲಲಾರರೆಂಬುದು ನಿಜ. ಆದರೆ ಕಪಿಗಳೆಂದರೆ ನಿನಗೆ ಭಯವಲ್ಲವೆ? ಇಗೊ ನನ್ನ ಬಲಗೈ ಮುಷ್ಟಿಯಿಂದ ನಿನ್ನ ಪ್ರಾಣವನ್ನು ತೆಗೆಯುತ್ತೇನೆ. ನಿನ್ನ ಮಗನಾದ ಅಕ್ಷಕುಮಾರನನ್ನು ಕೊಂದುದನ್ನು ನೆನೆದುಕೊ” ಹೀಗೆಂದು ನುಡಿದ ಹನುಮಂತನ ವಿಷಯದಲ್ಲಿ ಕೋಪಗೊಂಡು ರಾವಣನು ಅವನನ್ನು ತನ್ನ ಬಲಗೈ ಮುಷ್ಟಿಯಿಂದ ಹೊಡೆದನು. ಆ ಹೊಡೆತದಿಂದ ಕ್ಷಣಕಾಲ ತತ್ತರಿಸಿ ಹೋದ ಹನುಮಂತನು ಅಂಗೈಯಿಂದ ರಾವಣನನ್ನು ಹೊಡೆಯಲು ಸಿಡಿಲು ಬಡಿದ ಬೆಟ್ಟದಂತೆ ರಾವಣನು ತತ್ತರಿಸಿ ಹೋದನು. ಹನುಮಂತನನ್ನು ಅವನ ಪರಾಕ್ರಮಕ್ಕಾಗಿ ಹೋಗಳಿ, ಮತ್ತೊಮ್ಮೆ ಬಲಮುಷ್ಠಿಯಿಂದ ಹನುಮಂತನ ಎದೆಗೆ ಹೊಡೆದನು. ಆ ಹೊಡೆತದಿಂದ ಚೇತನ ತಪ್ಪಿದ ಹನುಮಂತನ ಸಹಾಯಕ್ಕಾಗಿ ನೀಲನು ಬರಬೇಕಾಯಿತು. ಅವರಿಬ್ಬರಿಗೂ ನಡೆದ ಭಯಂಕರವಾದ ಯುದ್ಧದಲ್ಲಿ ರಾವಣನು ನೀಲನನ್ನು ಅಗ್ನೇಯಾಸ್ತ್ರದಿಂದ ಗಾಯಗೊಳಿಸಿದನು.

ಸುಗ್ರೀವಾದಿಗಳನ್ನು ತಡೆದು ರಾವಣನು ಲಕ್ಷ್ಮಣನ ಕಡೆ ನುಗ್ಗಿ ಬಿಲ್ಲನ್ನು ಧ್ವನಿಮಾಡಿದನು. ರಾವಣನನ್ನು ನೋಡಿ ಲಕ್ಷ್ಮಣನು ಹೇಳಿದನು: “ರಾವಣ, ಕಪಿಗಳೊಡನೆ ನಿನಗೆ ಯುದ್ಧಸಲ್ಲದು, ನನ್ನೊಡನೆ ಬಾ.” ಲಕ್ಷ್ಮಣನ ಮಾತಿಗೆ ಪ್ರತ್ಯುತ್ತರವಾಗಿ ರಾವಣನು ಹೇಳಿದನು: “ಲಕ್ಷ್ಮಣಾ, ನಿನಗೆ ಕೊನೆಗಾಲ ಹತ್ತಿರವಾಗಿರುವುದರಿಂದ ನನ್ನ ಕಣ್ಣಿಗೆ ಬಿದ್ದಿರುವೆ. ನನ್ನ ಬಾಣಗಳಿಂದ ಬಹುಬೇಗ ನೀನು ಮರಣಹೊಂದುವೆ.” ವೀರರು ತಮ್ಮನ್ನು ತಾವೆ ಹೊಗಳಿಕೊಳ್ಳರೆಂದೂ ಅವನ ಪರಾಕ್ರಮ ಈ ಮೊದಲೆ ತಿಳಿದಿದೆಯೆಂದೂ ಹೇಳಿ ಲಕ್ಷ್ಮಣನು ಏಳು ಬಾಣಗಳನ್ನು ಬಿಟ್ಟನು. ಲಕ್ಷ್ಮಣನ ಬಾಣಗಳನ್ನು ಕತ್ತರಿಸಿ ರಾವಣನು ಮತ್ತೆ ಬಾಣಗಳನ್ನು ಬಿಟ್ಟನು. ಹೀಗೆ ಕೆಲವು ಕಾಲ ಇಬ್ಬರಿಗೂ ಯುದ್ಧ ನಡೆಯಲು, ಕೋಪಗೊಂಡ ರಾವಣನು ಶಕ್ತ್ಯಾಯುಧದಿಂದ ಲಕ್ಷ್ಮಣನನ್ನು ಹೊಡೆದನು. ಬಾಣಗಳಿಂದ ಅದನ್ನು ತಡೆದರೂ ಉಪಯೋಗವಾಗದೆ ಅದು ಲಕ್ಷ್ಮಣನ ಎದೆಗೆ ನಾಟಿ ಅವನ ಪ್ರಜ್ಞೆಯನ್ನು ತಪ್ಪಿಸಿತು. ರಾವಣನು ಅವನ ಬಳಿಗೆ ಬಂದು ಲಕ್ಷ್ಮಣನನ್ನು ತನ್ನೆರಡು ತೋಳುಗಳಿಂದ ಎತ್ತಲು ಯತ್ನಿಸಿದರೂ, ಕೈಲಾಸವನ್ನು ಎತ್ತಿದವರಿಗೆ ಲಕ್ಷ್ಮಣನನ್ನು ತನ್ನೆರಡು ತೋಳುಗಳಿಂದ ಎತ್ತಲು ಯತ್ನಿಸಿದರೂ, ಕೈಲಾಸವನ್ನು ಎತ್ತಿದವರಿಗೆ ಲಕ್ಷ್ಮಣನನ್ನು ಎತ್ತಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿಯೆ ಹನುಮಂತನು ಲಕ್ಷ್ಮಣನ ಸ್ಥಿತಿಯನ್ನು ಕಂಡು ಅವನ ಸಹಾಯಕ್ಕೆ ಬಂದು ಬಾಯಿಮೂಗುಗಳಿಂದ ರಕ್ತಕಾರುವಂತೆ ರಾವಣನನ್ನು ಹೊಡೆದನು. ಈ ಹೊಡೆತದಿಂದ ರಾವಣನು ಮೂರ್ಛೆಹೊಂದಲು, ಹನುಮಂತನು ಲಕ್ಷ್ಮಣನನ್ನು ಎತ್ತಿತಂದು ರಾಮನ ಬಳಿ ಮಲಗಿಸಿದನು. ಕೂಡಲೆ ಆ ಶಕ್ತ್ಯಾಯುಧವು ಲಕ್ಷ್ಮಣನನ್ನು ಬಿಟ್ಟು ಹೋಯಿತು. ಇತ್ತ ಮೂರ್ಛೆ ತಿಳಿದ ರಾವಣನೂ ಯುದ್ಧಕ್ಕೆ ಸಿದ್ಧನಾದನು.

ಲಕ್ಷ್ಮಣನು ಗುಣಗೊಂಡ ಮೇಲೆ ಶ್ರೀರಾಮನು, ಮಹಾವಿಷ್ಣು ಗರುಡನನ್ನೇರುವಂತೆ ಹನುಮಂತನ ಭೂಜಗಳ ಮೇಲೆ ಕುಳಿತು ರಾವಣನನ್ನು ಎದುರಿಸಿದನು. ಶ್ರೀರಾಮನು ತನ್ನ ಬಿಲ್ಲನ್ನು ಧ್ವನಿಮಾಡಿ ರಾವಣನನ್ನು ಕುರಿತು ನುಡಿದನು: “ಎಲೈ ರಾಕ್ಷಸಶ್ರೇಷ್ಠನೆ, ನನಗೆ ಈ ತೆರನಾದ ಅಪಕಾರ ಮಾಡಿ ನೀನೆಲ್ಲಿಗೆ ಹೋಗುವೆ? ಇಂದ್ರ ಯಮ ಸೂರ್ಯರನ್ನಾಗಲಿ ದಶದಿಕ್ಕುಗಳನ್ನಾಗಲಿ ಮರೆಹೊಕ್ಕರೂ ನೀನು ಬದುಕಿ ಹೋಗಲಾರೆ. ಹಿಂದೆ ಜನಸ್ಥಾನದಲ್ಲಿ ವೀರರಾದ ರಾಕ್ಷಸರನ್ನು ಕೊಂದಂತೆ ನಿನ್ನನ್ನು ಕೊಲ್ಲುತ್ತೇನೆ.” ರಾಮನ ಮಾತನ್ನು ಕೇಳಿ ಕೋಪಗೊಂಡ ರಾವಣನು ಹನುಮಂತನನ್ನು ಅಗ್ನಿಜ್ವಾಲೆಗೆ ಸಮಾನನಾದ ಬಾಣಗಳಿಂದ ಹೊಡೆದನು. ಇದರಿಂದ ಹನುಮಂತನ ತೇಜಸ್ಸು ಇಮ್ಮಡಿಸಿತೇ ಹೊರತು ಅವನಿಗೆ ಗಾಯವಾಗಲಿಲ್ಲ. ರಾವಣನು ಹನುಮಂತನನ್ನು ಗಾಯಗೊಳಿಸಿದುದನ್ನು ಕಂಡು ಕೋಪಗೊಂಡ ರಾಮನು ವಜ್ರಾಯುಧಕ್ಕೆ ಸಮಾನವಾದ ಬಾಣಗಳಿಂದ ರಾವಣನ ಸಾರಥಿಯನ್ನು ಕೊಂದು, ತೇರನ್ನು ಪುಡಿಗುಟ್ಟಿ, ಬಿಲ್ಲನ್ನು ಕತ್ತರಿಸಿದನು. ಆ ಬಳಿಕ ಅವನ ಎದೆಗೆ ಹೊಡೆದು ಅವನನ್ನು ಗಾಯಗೊಳಸಿದನು. ರಾಮನ ಏಟಿನಿಂದ ರಾವಣನು ನಡುಗಿದನು. ಕೈಯಲ್ಲಿದ್ದ ಬಿಲ್ಲು ಜಾರಿತು. ಇನ್ನೊಂದು ಅರ್ಧಚಂದ್ರಾಕಾರವಾದ ಬಾಣದಿಂದ ರಾಮನು ರಾವಣನ ಕಿರೀಟವನ್ನು ಕತ್ತರಿಸಿ ಬೀಳಿಸಿದನು. ವಿಷವಳಿದ ಸರ್ಪದಂತೆ, ಶಾಂತನಾದ ಸೂರ್ಯನಂತೆ ರಣದಲ್ಲಿ ನಿಂತ ರಾವಣನನ್ನು ನೋಡಿ ರಾಮನು ಮೂದಲಿಸಿದನು. “ರಾವಣ ಯುದ್ಧದಿಂದ ನೀನು ಬಳಲಿರುವೆ. ಈಗಲೆ ನಿನ್ನನ್ನು ಕೊಲ್ಲಲು ನನಗೆ ಇಷ್ಟವಿಲ್ಲ. ಲಂಕೆಗೆ ಹೋಗಿ ವಿಶ್ರಮಿಸಿಕೊಂಡು ಬಾ. ಆಗ ನಿನ್ನ ಬಲವನ್ನು ನೋಡುತ್ತೇನೆ. ” ರಥಸಾರಥಿಗೆಟ್ಟು ಬಿಲ್ಲೂ ಮುರಿದ ರಾವಣನು ಮದ ಕುಗ್ಗಿ ಲಂಕೆಯನ್ನು ಹೊಕ್ಕನು.