ಕುಂಭಕರ್ಣನ ಮರಣವೃತ್ತಾಂತವನ್ನು ಕೇಳಿ ರಾವಣೆಶ್ವರನು ದುಃಖದಿಂದ ಮುಂಗಾಣದವನಾದನು. “ಅಯ್ಯೋ! ನಿನ್ನಂತಹ ಅಸಹಾಯಶೂರನಾದ ತಮ್ಮನನ್ನು ಕಳೆದುಕೊಂಡು ನಾನಿನ್ನೂ ಬಾಳಬೇಕೆ! ನನಗಿನ್ನು ಈ ರಾಜ್ಯದಿಂದ ಏನು ಪ್ರಯೋಜನ? ಸೀತೆಯಿಂದ ಏನು ಪ್ರಯೋಜನ? ನಾನೀಗಲೇ ಆ ನನ್ನ ಅಣುಗದಮ್ಮನನ್ನು ಅನುಸರಿಸಿ ಹೊರಡುತ್ತೇನೆ. ಆತನನ್ನು ಅಗಲಿ ನಾನು ಕ್ಷಣಕಲವೂ ಜೀವಿಸರಲಾರೆ” ಎಂದು ಆತನು ಪ್ರಲಾಪಿಸುತ್ತಾ ಮೂರ್ಛೆಹೋಗಿ ನೆಲಕ್ಕೆ ಬಿದ್ದನು.

ತನ್ನು ಸ್ವಾಮಿ ದುಃಖದಲ್ಲಿ ಮುಳುಗಿರುವುದನ್ನು ಕಂಡು ತ್ರಿಶಿರಸ್ಕನೆಂಬ ರಾಕ್ಷಸನು ಆತನನ್ನು ಸಂತೈಸಿದನು. ತ್ರಿಭುವನ ಶೂರನಾದ ಆತನು ಹೆಣ್ಣಿನಂತೆ ಅಳುತ್ತಾ ಕೂಡುವುದು ಅಯೋಗ್ಯವೆಂದು ಹೇಳಿದನು. ತಾನು ರಣರಂಗಕ್ಕೆ ಹೋಗಿ ರಾಮಲಕ್ಷಮಣರ ಹುಟ್ಟಡಗಿಸುವುದಾಗಿ ಭರವಸೆಯಿತ್ತನು. ದೇವಾಂತಕ ನರಾಂತರಕ ಅತಿಕಾಯರೆಂಬ ಮಹಾಶೂರರಾದ ರಾ‌ಕ್ಷಸ ರಾಜಪುತ್ರರೂ ಯುದ್ಧಕ್ಕೆ ಹೊರಟ ನಾಲ್ವರಲ್ಲಿ ಒಬ್ಬೊಬ್ಬರೂ ವಿಶಾಲಕೀರ್ತಿಶಾಲಿಗಳು; ಮಹಾಮಾಯಾವಿಗಳು; ಯುದ್ಧದಲ್ಲಿ ಹಿಮ್ಮೆಟ್ಟಿದ ಕಡುಗಲಿಗಳು. ರಾವಣೇಶ್ವರನು ಅವರನ್ನು ಅನರ್ಘ್ಯವಾದ ರತ್ನಾಭರಣಗಳಿಂದ ಪುರಸ್ಕರಿಸಿ, ಆಶೀರ್ವಾದ ಪೂರ್ವಕವಾಗಿ ಯುದ್ಧಕ್ಕೆ ಬೇಳ್ಕೊಟ್ಟನು.

ತ್ರಿಶಿರಸ್ಕನಿಗೆ ಅವನ ಹೆಸರೇ ಸೂಚಿಸುವಂತೆ ಮೂರು ತಲೆಗಳು. ಒಂದೊಂದು ತಲೆಯೂ ರತ್ನಖಚಿತವಾದ ಕಿರೀಟಗಳಿಂದ ಅಲಂಕೃತವಾಗಿತ್ತು. ಮೂರು ಶಿಖರಗಳಿಂದ ಬೇಳಗುವ ಬೆಟ್ಟದಂತೆ ಬೆಳಗುತ್ತಾ ಆತನು ದಿವ್ಯ ರಥವೊಂದನ್ನೇರಿ ಯುದ್ಧಕ್ಕೆ ಹೊರಟನು. ಆತನ ರಥದ ಹಿಂದೆ ಅತಿಕಾಯನ ರಥ ಹೊರಟಿತು. ನರಾಂತಕನು ಬೆಂಕಿಯಂತೆ ಬೆಳಗುವ ಆಯುಧಗಳನ್ನು ಧರಿಸಿ, ಉಚ್ಚ್ಯಶ್ರವಸ್ಸಿನಂತಹ ಉತ್ತಮಾಶ್ವವನ್ನೇರಿ ಅಸಂಖ್ಯಾತವಾದ ರಾಕ್ಷಸರ ಪರಿವಾರದೊಡನೆ ರಣರಂಗಕ್ಕೆ ಹೊರಟನು. ದೇವಾಂತಕ ಮಹಾಪಾರ್ಶ್ವರು ಪರಿಘವನ್ನೂ ಗದೆಯನ್ನೂ ಧರಿಸಿ, ತಮ್ಮ ನೋಟಗಳಿಂದ ಗರ್ವಪ್ರವಾಹವನ್ನು ಪಸರಿಸುತ್ತಾ ಯುದ್ಧಕ್ಕೆ ಹೊರಟುರ. “ರಣರಂಗದಲ್ಲಿ ಸಾಯಬೇಕು, ಇಲ್ಲವೆ ಗೆಲ್ಲಬೇಕು” ಎಂಬ ನಿಶ್ಚಯ ಅವರ ಮುಖಗಳಲ್ಲಿ ಮುದ್ರಿತವಾಗಿತ್ತು. ಈ ರಾಕ್ಷಸನಾಯಕರೆಲ್ಲರೂ ಅಪಾರ ಸೈನ್ಯದೊಡನೆ ಯುದ್ಧ ರಂಗವನ್ನು ಪ್ರವೇಶಿಸಿ, ಏಕಕಾಲದಲ್ಲಿ ಭಯಂಕರವಾಗಿ ಸಿಂಹನಾದ ಮಾಡಿದರು. ಆ ಶಬ್ದದಿಂದ ಅಂತರಿಕ್ಷವೇ ಒಡೆದು ಹೋಗುವಂತಾಯಿತು.

ರಾಕ್ಷಸರ ಸಿಂಹನಾದವನ್ನು ಕೇಳಿ ವಾನರರೂ ಸಿಂಹನಾದ ಮಾಡಿದರು. ಕ್ಷಣಮಾತ್ರದಲ್ಲಿ ಇಬ್ಬಣದವರಿಗೂ ಕೈಗೆ ಕಯ ಕಲೆಯಿತು. ರಾಕ್ಷಸರ ಬಾಣಗಳ ಸುರಿಮಳೆ ವಾನರರ ಕಲ್ಗುಂಡುಗಳ ಪ್ರವಾಹ – ಇವು ಅಂತರಿಕ್ಷವನ್ನೆ ತುಂಬಿಬಿಟ್ಟವು. ಎರಡು ಗುಂಪುಗಳಲ್ಲಿಯೂ ಸಹಸ್ರಾರು ಜನ ಮಡಿದುರುಳಿ ರಕ್ತ ಪ್ರವಾಹ ಹರಿಯಿತು. ರಾಕ್ಷಸರ ಕಡೆ ನರಾಂತಕನು ಯಮನಂತೆ ವಿಜೃಂಭಿಸುತ್ತಾ ಸಹಸ್ರಾರು ವಾನರರ ಮರಣಕ್ಕೆ ಕಾರಣನಾದನು. ಇದನ್ನು ಕಂಡು ಸುಗ್ರೀವನು ಆ ರಾಕ್ಷಸನನ್ನು ಬಲಿಯಿಕ್ಕುವಂತೆ ಅಂಗದಕುಮಾರನಿಗೆ ಆಜ್ಞಾಪಿಸಿದನು. ಒಡನೆಯೆ ಆ ವಾನರವೀರನು ಮುಗಿಲಮಧ್ಯದಿಂದ ಹೊರಬಮದ ಸೂರ್ಯನಂತೆ ವಾನರ ಸೈನ್ಯದಿಂದ ಹೊರಟು ನರಾಂತಕನನ್ನು ಇದಿರಿಸಿದನು. ತನ್ನ ಸಂಹಾರಕಾರ್ಯಕ್ಕೆ ಅಡ್ಡಿಯಾದ ಈ ವಾನರನನ್ನು ಆ ರಾಕ್ಷಸವೀರನು ತನ್ನ ಪ್ರಾಸಾಯುಧದಿಂದ ಪ್ರಹರಿಸಿದನು; ಆ ಆಯುಧ ಪುಡಿಪುಡಿಯಾಯಿತು. ಕೋಪಗೊಂಡ ಅಂಗದನು ಒಂದು ಗುದ್ದಿನಿಂದ ಆ ರಾಕ್ಷಸನೇರಿದ್ದ ಕುದುರೆಯನ್ನು ಶತಖಂಡವಾಗಿ ಭಗ್ನಮಾಡಿದನು. ಮತ್ತೊಂದು ಗುದ್ದಿಗೆ ನರಾಂತಕನು ರಕ್ತವನ್ನು ಕಾರುತ್ತಾ ನರಕದ ದಾರಿ ಹಿಡಿದನು. ಇದನ್ನು ಕಂಡು ಕಪಿಯೋಧರೆಲ್ಲರೂ ಪರಮಾನಂದಭರಿತರಾಗಿ ಕುಣಿದಾಡಿದರು.

ನರಂತಕನ ತಮ್ಮನಾದ ಮಹೋದರನು ಅಣ್ಣನಿಗಾದ ದುರಂತವನ್ನು ಕಂಡು ಕೋಪದಿಂದ ಕಿಡಿಕಿಡಿಯಾಗಿ ಅಂಗದನ ಮೇಲೆ ಏರಿಬಂದನು. ಅದೇ ವೇಳೆಗೆ ದೇವಾಂತಕನೂ ಆತನ ಮೇಲೆ ಏರಿಬಂದನು; ಮತ್ತೊಂದು ಕಡೆಯಿಂದ ತ್ರಿಶಿರಸ್ಕನೂ ಅವರಿಬ್ಬರೊಡನೆ ಬಂದು ಸೇರಿದನು. ಅಂಗದನೊಬ್ಬನೇ ಮೂವರೊಡನೆಯೂ ಹೋರಾಡಬೇಕಾಯಿತು. ಆದರೂ ಎದೆಗೆಡಲಿಲ್ಲ. ಸುಂಟರ ಗಾಳಿಯಂತೆ ಗಿರಿಗಿರನೆ ತಿರುಗುತ್ತಾ, ಅವರು ಪ್ರಯೋಗಿಸುತ್ತಿದ್ದ ಕೂರಂಬುಗಳಿಂದ ತಪ್ಪಿಸಿಕೊಂಡು, ಅವರೊಡನೆ ಸೆಣಸುತ್ತಿದ್ದನು. ಒಮ್ಮೆ ಆತನು ಮಹೋದರನು ಏರಿದ್ದ ಆನೆಯ ಕುಂಭಸ್ಥಳಕ್ಕೆ ತನ್ನ ವಜ್ರಮುಷ್ಟಿಯಿಂದ ಗುದ್ದಿದನು. ಆ ಪೆಟ್ಟಿಗೆ ಆನೆಯ ಕಣ್ಣುಗಳು ಕಳಚಿ ಬಿದ್ದವು. ಅದು ಘೀಳಿಡುತ್ತಾ ಸೊಂಡಿಲನ್ನು ಎತ್ತುವಷ್ಟರಲ್ಲಿ ಆ ವಾನರವೀರನು ಅದರ ದಂತವನ್ನು ಕಿತ್ತು ಅದರಿಂದಲೆ ದೇವಾಂತಕನನ್ನು ಮೋದಿದನು. ಪರಿಘದಿಂದ ತನ್ನನ್ನು ಹೊಡೆಯಬಂದ ತ್ರಿಶಿರಸ್ಕನ ತಲೆಯನ್ನು ಮೆಟ್ಟಿದನು. ಹೀಗೆ ಅತುಲ ಸಾಹಸವನ್ನು ಪ್ರದರ್ಶಿಸುತ್ತಿದ್ದರೂ ಒಬ್ಬನೆ ಮೂವರೊಡನೆ ಸರಿಸಮನಾಗಿ ಕೊನೆಯವರೆಗೂ ಹೋರಾಡುವುದು ಸಾಧ್ಯವಿರಲಿಲ್ಲ. ಕ್ರಮಕ್ರಮೇಣ ಆತನ ಶಕ್ತಿ ಕುಗ್ಗಿ ಹೋಗುವುದರಲ್ಲಿತ್ತು. ಅಷ್ಟರಲ್ಲಿ ಹನುಮಂತನೂ ನೀಲನೂ ಆ ವಾನರನ ಸಹಾಯಕ್ಕಾಗಿ ನುಗ್ಗಿಬಂದರು. ನೀಲನು ತ್ರಿಶಿರಸ್ಕನನ್ನು ಎದುರಿಸಿದನು. ಹನುಮಂತನ ವಜ್ರಮುಷ್ಟಿಗೆ ಸಿಕ್ಕಿದ ದೇವಾಂತಕನ ತಲೆ ಜಜ್ಜಿಹೋಗಿ ಅದರಲ್ಲಿದ್ದ ಕಣ್ಣುಗುಡ್ಡೆಗಳೂ ಹಲ್ಲುಗಳೂ ನಾಲಿಗೆಯೂ ಕಳಚಿ ಕೆಳಗೆ ಬಿದ್ದುವು. ಅಸುದೊರೆದ ಆ ರಾಕ್ಷಸನ ದೇಹ ದೊಪ್ಪನೆ ನೆಲಕ್ಕುರುಳಿತು.

ತ್ರಿಶಿರಸ್ಕನೊಡನೆ ಹೋರಾಡುತ್ತಿದ್ದ ನಳನನ್ನು ಕಂಡು ಮಹೋದರನು ಮೊನಚಾದ ಬಾಣವೊಂದನ್ನು ಗುರುಯಿಟ್ಟು ಅವನೆದೆಗೆ ಹೊಡೆದನು. ಆ ಬಾಣದ ಹೊಡೆತಕ್ಕೆ ನಳನು ಕ್ಷಣಕಾಲ ತತ್ತರಿಸಿಹೋದನು. ಮರುಕ್ಷಣದಲ್ಲಿಯೇ ಆತನು ಅತ್ಯಂತ ಕೋಪಾವಿಷ್ಟನಾಗಿ ಮರವೊಂದರ ಬುಡದಿಂದ ಮಹೋದರನ ತಲೆಯ ಮೇಲೆ ಹೊಡೆದನು. ಅಷ್ಟರಲ್ಲಿ ಹನುಮಂತನು ತ್ರಿಶಿರಸ್ಕನ ಮೇಲೆ ಹೆಮ್ಮರಗಳ ಮಳೆಯನ್ನು ಸುರಿಸಲು ಮೊದಲು ಮಾಡಿದನು. ಶೂರನಾದ ತ್ರಿಶಿರಸ್ಕನು ಆ ಮರಗಳನ್ನೆಲ್ಲ ತನ್ನ ಬಾಣಗಳಿಂದ ನಿವಾರಿಸಿಕೊಳ್ಳುತ್ತಾ ತನ್ನಲ್ಲಿದ್ದ ಶಕ್ತಾಯುಧವನ್ನು ಎದುರಾಳಿಯ ಮೇಲೆ ಪ್ರಯೋಗಿಸಿದನು. ಉಲ್ಕಾಪಾತವಾದಂತೆ ಉರಿಯುತ್ತಾ ಬರುತ್ತಿದ್ದ ಆ ಶಕ್ತಿಯನ್ನು ಹನುಮಂತನು ಕೈಲಿ ಹಿಡಿದು ಮುರಿದುಹಾಕಿದನು. ಇದರಿಂದ ಕುಪಿತನಾದ ಅ ರಾಕ್ಷಸನು ತನ್ನ ಖಡ್ಗದಿಂದ ಮಾರುತಿಯ ವಕ್ಷಸ್ಥಳಕ್ಕೆ ಹೊಡೆದನು. ಅದನ್ನು ಲಕ್ಷಿಸದೆ ಮಾರುತಿ ಅವನ ನೆತ್ತಿಯ ಮೇಲೆ ಗುದ್ದಿ ಅವನ ಕೈಲಿದ್ದ ಖಡ್ಗವನ್ನು ಕಿತ್ತುಕೊಂಡನು. ಆತನ ಈ ಸಾಹಸವನ್ನು ಕಂಡು ವಾನರರೆಲ್ಲರೂ ಸಂತೋಷದಿಂದ ಬೊಬ್ಬಿರಿದರು. ಇದನ್ನು ಕಂಡ ತ್ರಿಶಿರಸ್ಕನು ಕ್ರೋಧಾಂಧನಾದನು. ಓಡಿಬಂದು ತನ್ನ ಮುಷ್ಟಿಯಿಂದ ಮಾರುತಿಯನ್ನು ಪ್ರಹರಿಸಿದನು. ಹನುಮಂತನು ಅವನ ಈ ಅವಿನಯವನ್ನು ಕಂಡು ಕೋಪದಿಂದ ಅವನ ಕಿರೀಟಗಳನ್ನು ಹಿಡಿದುಕೊಂಡು ಶಿರಸ್ಸುಗಳನ್ನು ಛೇದಿಸಿಹಾಕಿದನು.

ರಾವಣನಿಂದ ಅನುಜ್ಞೆಪಡೆದು ಹೊರಟುಬಂದವರಲ್ಲಿ ಮಹಾಪಾರ್ಶ್ವನೊಬ್ಬನು ಉಳಿದಿದ್ದನು. ಋಷಭನೆಂಬ ವಾನರವೀರನು ಅವನೊಡನೆ ಹೋರಾಡುತ್ತಿದ್ದನು. ಆ ರಾಕ್ಷಸನ ಗದಾಘಾತದಿಂದ ವಾನರನ ತಲೆಯೊಡೆದು ರಕ್ತ ಸುರಿಯಿತು. ಕುಪಿತನಾದ ಋಷಭನು ವೇಗದಿಂದ ಆ ರಾಕ್ಷಸನ ಮೇಲೆ ಬಿದ್ದು, ಅವನ ಕೈಲಿದ್ದ ಗದೆಯನ್ನು ಕಿತ್ತುಕೊಂಡು, ಅದನ್ನು ಗರಗರ ತಿರುಗಿಸಿ ಅವನ ತಲೆಯ ಮೇಲೆ ಹೊಡೆದನು. ಆ ಹೊಡೆತಕ್ಕೆ ಆ ರಾಕ್ಷಸನ ತಲೆಯೊಡೆದು ಅವನು ಸತ್ತುಬಿದ್ದನು. ತಮ್ಮ ಕಡೆಯ ಪ್ರಮುಖರೆಲ್ಲರೂ ಮಡಿದುರುಳಿದುದನ್ನು ಕಂಡು, ರಾಕ್ಷಸರು ದಿಕ್ಕೆಟ್ಟು ಪಲಾಯನ ಮಾಡಿದರು.

* * *