ಉತ್ಸಾಹಿತನಾದ ಕುಂಭಕರ್ಣನು ಅಣ್ಣನಿಗೆ ನಮಸ್ಕರಿಸಿ ಒಡನೆಯೆ ಯುದ್ಧಕ್ಕೆ ಹೊರಡಲು ಸಿದ್ಧನಾದನು.

ತನ್ನ ಹೆಜ್ಜೆಗಳಿಂದ ಭೂಮಿಯನ್ನು ನಡುಗಿಸುತ್ತಾ ನಡೆತಂದ ಕುಂಭಕರ್ಣನು ಅಣ್ಣನ ಅರಮನೆಯನ್ನು ಪ್ರವೇಶಿಸಿದನು. ಆತನನ್ನು ಕಾಣುತ್ತಲೆ ರಾವಣೇಶ್ವರನು ಪರಮಾನಂದದಿಂದ ಮೇಲಕ್ಕೆದ್ದು ಬಂದು ಆತನನ್ನು ಆಲಿಂಗಿಸಿದನು; ಕೈಹಿಡಿದು ಕರೆದೊಯ್ದು ತನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡನು. ಕುಂಭಕರ್ಣನು ಅಣ್ಣನಿಗೆ ಭಕ್ತಿಯಿಂದ ನಮಸ್ಕರಿಸಿ “ಅಣ್ಣಾ, ನನ್ನನ್ನು ಏಕೆ ಇಷ್ಟು ಆತುರವಾಗಿ ಕರೆಸಿದೆ? ನಿನಗೆ ಯಾರಿಂದ ತೊಂದರೆ ಸಂಭವಿಸಿದೆ? ಯಾವ ಪಾಪಿಗೆ ಮೃತ್ಯುವಿನಲ್ಲಿ ಆಸೆ ಹುಟ್ಟಿತು?” ಎಂದು ಕೇಳಿದನು. ತಮ್ಮನ ಮಾತುಗಳನ್ನು ಕೇಳಿ ರಾವಣೇಶ್ವರನು “ತಮ್ಮಾ ಕುಂಭಕರ್ಣಾ, ಸುಖನಿದ್ರೆಯಲ್ಲಿದ್ದ ನಿನಗೆ ನಡೆದಿರುವ ಕಾರ್ಯಗಳೊಂದೂ ಅರಿವಾಗಿಲ್ಲ. ಸೋದರನೆ ಕೇಳು! ದಶರಥಸುತನಾದ ಆ ರಾಮನು ಸುಗ್ರೀವನ ವಾನರ ಸೈನ್ಯದೊಡನೆ ಸಾಗರವನ್ನು ದಾಟಿಬಂದು ನಮ್ಮ ರಾಜಧಾನಿಯನ್ನೆಲ್ಲ ಸಮೂಲವಾಗಿ ನಾಶಮಾಡುತ್ತಿದ್ದಾನೆ. ನಗರದಲ್ಲಿನ ಉಪವನಗಳೂ ರಾಜೋದ್ಯಾನಗಳೂ ಹಾಳಾಗಿವೆ. ಅವರೊಡನೆ ಯುದ್ಧಕ್ಕೆ ಹೋದ ರಾಕ್ಷಸಪ್ರಮುಖರೆಲ್ಲರೂ ರಣರಂಗದಲ್ಲಿ ಮೃತ್ಯುಮುಖರಾದರು. ಈ ವಾನರರಿಂದ ನನಗೆ ಈಗ ಮಹದ್ಭಯ ಪ್ರಾಪ್ತವಾಗಿದೆ. ನೀನೀಗ ಅವರಿಂದ ನನ್ನನ್ನು ರಕ್ಷಿಸಬೇಕಾಗಿದೆ. ಲಂಕೆಯಲ್ಲಿ ಅಳಿದುಳಿದಿರುವ ಸ್ತ್ರೀಬಾಲರನ್ನಾದರೂ ನೀನು ಸಂರಕ್ಷಿಸು. ನೀನು ಶತ್ರುಭಯಂಕರನೆಂಬ ಕೀರ್ತಿಗೆ ಪಾತ್ರನಾದವನು. ಆ ಕೀರ್ತಿ ಅಳಿಯದೆ ಉಳಿಯುವಂತೆ ಹೋರಾಡಿ ನಿನ್ನ ಪರಾಕ್ರಮವನ್ನು ಪ್ರದರ್ಶಿಸು. ನಿನ್ನ ದೆಶೆಯಿಂದ ಚಂಡಮಾರುತಕ್ಕೆ ಸಿಕ್ಕ ಮೋಡಗಳಂತೆ ಶತ್ರುಸೈನ್ಯವೆಲ್ಲವೂ ಪಲಾಯನವಾಗಿ ಹೋಗಲಿ” ಎಂದನು.

ಅಣ್ಣನ ಮಾತುಗಳನ್ನು ಕೇಳಿ ಕುಂಭಕರ್ಣನಿಗೆ ನಗು ಬಂದಿತು. ಹಿಂದೆ ತುಂಬಿದ ಸಭೆಯಲ್ಲಿ ಹಿತ ಬೋಧೆಮಾಡಿದವರನ್ನೆಲ್ಲಾ ಆತನು ಅಪಮಾನಗೊಳಿಸಿ, ಅವರ ಮಾತುಗಳನ್ನು ತಳ್ಳಿಹಾಕಿದ ವಿಷಯವನ್ನು ಆತನಿಗೆ ಜ್ಞಾಪಿಸುತ್ತಾ “ಅಣ್ಣಾ, ಹಿತಬೋಧಕರ ನುಡಿಗೆ ಕಿವಿಗೊಡದೆ ನೀನು ಆಪತ್ತನ್ನು ತಂದುಕೊಂಡೆ. ಸೀತಾಪರಹಣರೂಪವಾದ ಪಾಪಕ್ಕೆ ಈ ಫಲ ದೊರೆಯಿತು. ನಾನು ಹೇಳುವ ಮಾತುಗಳನ್ನು ನಿನಗೆ ಅಪಮಾನ ಮಾಡುವ ಉದ್ದೇಶದಿಂದ ಹೇಳುತ್ತಿರುವೆನೆಂದು ಭಾವಿಸಬೇಡ. ವಿಭೀಷಣನು ಹಿಂದೆ ನಿನಗೆ ಹೇಳಿದ ಹಿತನುಡಿಗಳನ್ನು ಈಗಲಾದರೂ ಸ್ವೀಕರಿಸು. ಅದೇ ಹಿತವೆಂದು ನನಗೂ ತೋರುತ್ತಿದೆ. ನಿನ್ನ ಒಡಹುಟ್ಟಿದವನೆಂಬ ಸಲಿಗೆಯಿಂದ ಇಷ್ಟು ಸ್ಪಷ್ಟವಾಗಿ ಹೇಳಿದುದಕ್ಕಾಗಿ ಕ್ಷಮಿಸು” ಎಂದನು. ತಮ್ಮನ ಈ ಸ್ಪಷ್ಟವಾದ ನುಡಿಗಳನ್ನು ಕೇಳಿ ರಾವಣೇಶ್ವರನಿಗೆ ಕೋಪ ಬಂದಿತು. ಆತನು ಹುಬ್ಬುಗಂಟುಹಾಕಿಕೊಂಡು “ಎಲಾ ಕುಂಭಕರ್ಣಾ, ಪೂಜ್ಯನಾದ ಗುರು ಶಿಷ್ಯನಿಗೆ ಉಪದೇಶಮಾಡಿ ಶಿಕ್ಷಿಸುವಂತೆ ನನ್ನನ್ನು ಶಿಕ್ಷಿಸಹೊರಟಿರುವೆ. ಇದು ನಿನಗೆ ಉಚಿತವಲ್ಲ. ನಾನು ತಿಳಿದೊ ತಿಳಿಯದೆಯೊ ಕಾರ್ಯವನ್ನು ಆಚರಿಸಿದೆನು. ಅದನ್ನು ವಿಮರ್ಶಿಸಿ ಪ್ರಯೋಜನವಿಲ್ಲ. ಈಗ ಒದಗಿರುವ ವಿಷಮ ಸನ್ನಿವೇಶದಲ್ಲಿ ಏನುಮಾಡಬೇಕೆಂಬುದನ್ನು ಕುರಿತು ಆಲೋಚಿಸುವುದೆಷ್ಟೊ ಅಷ್ಟೆ ಈಗ ನೀನು ಮಾಡಬೇಕಾಗಿರುವುದು. ನಾನು ಅವಿವೇಕದಿಂದ ಆಕಾರ್ಯವನ್ನು ಮಾಡಿದ್ದರೆ ನೀನು ಪರಾಕ್ರಮದಿಂದ ಅದನ್ನು ಸರಿಪಡಿಸು. ನನ್ನಲ್ಲಿ ನಿನಗೆ ಪ್ರೀತಿವಿಶ್ವಾಸಗಳಿದ್ದರೆ ನಿನ್ನ ಪರಾಕ್ರಮವನ್ನು ಶತ್ರುಮರ್ದನದಲ್ಲಿ ಪ್ರಯೋಗಿಸು. ಇಲ್ಲವಾದರೆ ನಿನ್ನ ಮನಬಂದಂತೆ ಮಾಡು. ಆಪತ್ಕಾಲದಲ್ಲಿ ಆದವನೆ ನಂಟನಷ್ಟೆ” ಎಂದನು.

ಗಂಭೀರವಾದರೂ ದಾರುಣವಾಗಿದ್ದ ಅಣ್ಣನ ನುಡಿಗಳನ್ನು ಕೇಳಿ ಕುಂಭಕರ್ಣನು “ರಾಕ್ಷಸರಾಜ, ಸಂತಾಪಬೇಡ. ರೋಷವನ್ನು ತೊರೆ. ನಿನ್ನ ತಮ್ಮನಾದ ನಾನು ಇರುವಾಗ ನಿನಗೆ ಅನುತಾಪವೆಂದರೇನು? ಇದುವರೆಗೆ ನಾನು ಹೇಳಿದ ಮಾತುಗಳನ್ನೆಲ್ಲಾ ಮರೆತು ನನ್ನನ್ನು ಕ್ಷಮಿಸು. ನಿನ್ನ ಪರಿತಾಪಕ್ಕೆ ಒಳಗುಮಾಡಿದ ಆ ರಾಮನನ್ನು ಹೇಳಹೆಸರಿಲ್ಲದಂತೆ ಮಾಡುತ್ತೇನೆ. ನನ್ನ ಮಾತನ್ನು ನಂಬು. ಯುದ್ಧದಲ್ಲಿ ಆ ರಾಮನನ್ನು ಕೊಂದು, ಅವನ ತಲೆಯನ್ನು ನಿನ್ನ ಪಾದಗಳಿಗೆ ಒಪ್ಪಿಸುವೆನೆಂದು, ಇಗೊ ಪ್ರಮಾಣಮಾಡಿ ಹೇಳುತ್ತೇನೆ. ಇದುವರೆಗೆ ವಾನರರಿಂದ ಮಡಿದ ವೀರರ ಪತ್ನಿಯರೂ ಇನ್ನು ತಮ್ಮ ಕಣ್ಣೀರನ್ನು ಒರೆಸಿಕೊಳ್ಳಲಿ. ಅವರ ದುಃಖಕ್ಕೆ ಕಾರಣರಾದ ವಾನರರನ್ನೆಲ್ಲಾ ಸಮೂಲವಾಗಿ ನಾಶಮಾಡುತ್ತೇನೆ. ನಾನು ಕೆರಳಿ ಯುದ್ಧಕ್ಕೆ ನಿಂತರೆ ಎದುರಾಗಬಲ್ಲ ಶೂರರು ಯಾರಿರುವರು? ನೀನಿನ್ನು ನಿನ್ನ ಚಿಂತೆಯನ್ನು ಬಿಟ್ಟು, ಮನೋಹರವಾದ ಮದ್ಯಪಾನಮಾಡುತ್ತಾ ಯಥೇಚ್ಛೆಯಾಗಿ ವಿಹರಿಸು. ನಾನು ಅತ್ತ ರಾಮನನ್ನು ಕೊಲ್ಲುತ್ತಲೆ ಇತ್ತ ಹಟಗಾತಿಯಾದ ಸೀತೆ ನಿನ್ನ ವಶವಾಗಿಹೋಗುತ್ತಾಳೆ” ಎಂದನು.

ಕುಂಭಕರ್ಣನ ವೀರವಾಕ್ಯಗಳನ್ನು ಕೇಳಿ ರಾವಣನ ಬಳಿಯಲ್ಲಿದ್ದ ಅತಿಕಾಯನೆಂಬ ರಾಕ್ಷಸನಿಗೆ ಕೋಪಬಂದಿತು. ಅವನು ಕುಂಭಕರ್ಣನನ್ನು ಕುರಿತು “ಅಯ್ಯಾ, ಕುಂಭಕರ್ಣ, ನೀನೆ ಸರ್ವಜ್ಞನಂತೆ ಮೊದಲು ರಾವಣೇಶ್ವರನಿಗೆ ಬುದ್ಧಿವಾದ ಹೇಳಹೊರಟೆ. ಈಗ ನೀನೇ ಸರ್ವಶಕ್ತನೆಂಬಂತೆ ಏಕಾಂಗಿಯಾಗಿ ಯುದ್ಧಕ್ಕೆ ಹೋಗುವೆನೆಂದು ಹೇಳುತ್ತಿರುವೆ. ಕಾರ್ಯವು ಬಾಯಿಂದ ಆಡುವಷ್ಟು ಸುಲಭವಲ್ಲ. ನಿನ್ನ ದುಡುಕುತನ ರಾಮಲಕ್ಷ್ಮಣರ ಬಳಿಯಲ್ಲಿ ಕೆಲಸಕ್ಕೆ ಬಾರದು. ದೇವೇಂದ್ರನೊಡನೆಯೂ ಯಮನೊಡನೆಯೂ ಏಕಕಾಲದಲ್ಲಿ ಯುದ್ಧಕ್ಕೆ ನಿಲ್ಲುವುದು ಎಂತಹ ಜಾಣತನ?” ಎಂದು ಗದರಿಸಿದನು. ಅನಂತರ ಅವನು ರಾವಣೇಶ್ವರನ ಕಡೆ ತಿರುಗಿ “ಪ್ರಭು, ನಿನ್ನ ಇಷ್ಟಾರ್ಥ ನೆರವೇರುವ ಉಪಾಯವನ್ನು ನಾನು ಸೂಚಿಸುತ್ತೇನೆ. ಅದರಂತೆ ನಡೆದರೆ ಶತ್ರುಸಂಹಾರವಾಗಿ ಸೀತೆ ನಿನ್ನ ವಶವಾಗುತ್ತಾಳೆ. ಈ ಕುಂಭಕರ್ಣನ ಜೊತೆಯಲ್ಲಿ ನನ್ನನ್ನೂ ದ್ವಿಜಿಹ್ವ, ಸಂಹ್ರಾದಿ, ವಿತರ್ದನರನ್ನೂ ಯುದ್ಧಕ್ಕೆ ಕಳುಹಿಸು. ನಾವು ಐವರೂ ಸೇರಿ ಯುದ್ಧಮಾಡಿದರೆ ಶತ್ರುಗಳು ನಿಶ್ಶೇಷವಾಗಿ ಹತರಾಗುತ್ತಾರೆ. ಅವರು ಹತರಾದ ಮೇಲೆ ಸೀತೆ ನಿನ್ನ ವಶಳಾದಂತೆಯೆ. ಒಂದು ಪಕ್ಷ ಹಾಗೆ ಹತರಾಗದೆ ನಾವೇ ಯುದ್ಧದಲ್ಲಿ ಸೋತುಹೋದರೆ, ಅದನ್ನು ಬಹಿರಂಗಪಡಿಸಬೇಡ; ನಾವೇ ಗೆದ್ದೆವೆಂದು ಊರಿನಲ್ಲೆಲ್ಲಾ ಡಂಗುರ ಹಾಕಿಸು. ರಾಮಲಕ್ಷ್ಮಣರು ಸತ್ತುಹೋದರೆಂದು ಸುಳ್ಳುಪ್ರವಾದವನ್ನು ಊರಿನಲ್ಲೆಲ್ಲಾ ಹರಡು. ಅದನ್ನು ಕೇಳಿ ನಿರಾಶಳಾದ ಸೀತೆ ಗತ್ಯಂತರವಿಲ್ಲದೆ ನಿನ್ನನ್ನು ವರಿಸುತ್ತಾಳೆ” ಎಂದನು.

ಅತಿಕಾಯನ ಮಾತುಗಳು ರಾವಣೇಶ್ವರನಿಗೆ ರುಚಿಸಲಿಲ್ಲ. ಹೇಡಿಯೆಂದು ಅವನನ್ನು ಹೀಯಾಳಿಸಿ, ಕುಂಭಕರ್ಣನನ್ನು ಒಡನೆಯ ಯುದ್ಧಕ್ಕೆ ಹೊರಡುವಂತೆ ಪ್ರೋತ್ಸಾಹಿಸಿ, ಅಮೂಲ್ಯವಾದ ರತ್ನಹಾರವನ್ನು ಆತನ ಕೊರಳಲ್ಲಿ ಹಾಕಿದನು. ಇದರಿಂದ ಉತ್ಸಾಹಿತನಾದ ಕುಂಭಕರ್ಣನು ಅಣ್ಣನಿಗೆ ನಮಸ್ಕರಿಸಿ, ಆಶೀರ್ವಾದವನ್ನು ಪಡೆದು, ಒಡನೆಯೆ ಯುದ್ಧಕ್ಕೆ ಹೊರಡಲು ಸಿದ್ಧವಾದನು. ಕವಚವನ್ನು ಧರಿಸಿ ನಿಂತ ಆ ರಾಕ್ಷಸನು ಮೋಡವನ್ನು ಹೊದ್ದ ಪರ್ವತದಂತೆ ಶೋಭಿಸುತ್ತಾ, ತನ್ನ ಶೂಲಾಯುಧವನ್ನು ಕೈಯಲ್ಲಿ ಹಿಡಿದು ಯುದ್ಧಕ್ಕೆ ಹೊರಡುತ್ತಲೆ ರಾಕ್ಷಸರ ದೊಡ್ಡಸೇನೆಯೊಂದು ನಿರ್ಭಯವಾಗಿ ಆತನನ್ನು ಹಿಂಬಾಲಿಸಿತು. ಶಂಖ ದುಂದುಭಿಗಳು ದಿಕ್ಕುಗಳೆಲ್ಲ ಒಡೆದುಹೋಗುವಂತೆ ಮೊಳಗಿದುವು. ನೂರು ಧನುಸ್ಸುಗಳ ಅಡ್ಡಳತೆ, ಆರುನೂರು ಧನುಸ್ಸುಗಳ ಉದ್ದಳತೆ ಇದ್ದ ಆ ಕುಂಭಕರ್ಣನು ತನ್ನ ಅನುಯಾಯಿಗಳನ್ನು ಕುರಿತು “ಎಲೆ ರಾಕ್ಷಸರೆ, ಇಲ್ಲಿಗೆ ಬಂದಿರುವ ಕೋತಿಗಳೆಲ್ಲ ನಮ್ಮ ವನದಲ್ಲಿ ಸದ್ಯಕ್ಕೆ ಉಳಿದುಕೊಂಡಿರಲಿ; ಮೊದಲು ಆ ರಾಮಲಕ್ಷ್ಮಣರನ್ನು ಸಂಹಾರಮಾಡಿಬಿಡುತ್ತೇನೆ. ಅವರು ಸತ್ತರೆ ಎಲ್ಲವೂ ಮುಗಿದಂತೆಯೆ” ಎಂದು ಅವರನ್ನು ಹುರಿದುಂಬಿಸಿದನು. ಆ ಮಾತನ್ನು ಕೇಳಿ ಅವರು ಸಂತೋಷದಿಂದ ಸಿಂಹನಾದಮಾಡಿದರು. ತನ್ನ ಹಿಂಬಾಲಕರೊಡನೆ ರಣಭೂಮಿಗೆ ಬಂದುನಿಂತ ಕುಂಭಕರ್ಣನು ಒಮ್ಮೆ ಸುತ್ತಲೂ ನೋಡಿ ಸಿಂಹನಾದಮಾಡಿದನು. ಪರ್ವತಗಳು ಸೀಳಿಹೋಗುವಂತಹ ಆ ಭಯಂಕರ ಧ್ವನಿಯನ್ನು ಕೇಳಿ, ಆ ಧ್ವನಿಗೆ ತಕ್ಕ ಬೃಹದಾಕಾರವನ್ನು ನೋಡಿ, ರಣಭೂಮಿಯಲ್ಲಿದ್ದ ವಾನರರೆಲ್ಲರೂ ಭಯದಿಂದ ತತ್ತರಿಸಿ ಹೋದರು. ಮಹಾಬಲಾಢ್ಯರಾದ ನಳ ನೀಲ ಗವಾಕ್ಷ ಕುಮುದ ಮೊದಲಾದ ಸೇನಾಪತಿಗಳು ಕೂಡ ಪಲಾಯನಮಾಡಿದರು. ಇದನ್ನು ಕಂಡು ರಾಜಕುಮಾರನಾದ ಅಂಗದನು “ಅಯ್ಯಾ, ಹೆದರಬೇಡಿ, ಈ ವ್ಯಕ್ತಿ ರಾಕ್ಷಸನಲ್ಲ. ನಮ್ಮನ್ನು ಭಯಗೊಳಿಸುವುದಕ್ಕಾಗಿ ಶತ್ರುವು ನಿರ್ಮಿಸಿ ಕಳುಹಿಸಿರುವ ಒಂದು ಬೆಚ್ಚಲು ಭೂತವೆಂದು ತಿಳಿಯಿರಿ. ನಮ್ಮ ಪರಾಕ್ರಮದಿಂದ ಇದನ್ನು ಭೇದಿಸಿಬಿಡೋಣ. ಹೆದರದೆ ಹಿಂದಿರುಗಿ” ಎಂದು ಅವರನ್ನು ಹಿಂದಕ್ಕೆ ಕರೆದನು. ಅದನ್ನು ಕೇಳಿ ಆ ವಾನರಮುಖ್ಯರೆಲ್ಲರೂ ಹೇಗೋ ಧೈರ್ಯ ತಾಳಿ ವೃಕ್ಷಗಳನ್ನೂ ಪರ್ವತಗಳನ್ನೂ ಕೈಲಿ ಹಿಡಿದು ಯುದ್ಧರಂಗಕ್ಕೆ ಹಿಂದಿರುಗಿದರು. ಅಂಗದನ ಮಾತನ್ನು ನಂಬಿ ಅವರು ತಮ್ಮ ಕೈಲಿದ್ದ ವೃಕ್ಷಗಳಿಂದಲೂ ಪರ್ವತಗಳಿಂದಲೂ ಕುಂಭಕರ್ಣನನ್ನು ಮರ್ದಿಸಿ ನೋಡಿದರು. ಮರಗಳು ಮುರಿದುವು; ಪರ್ವತಗಳು ಪುಡಿಯಾದುವು. ಆದರೆ ಆ ರಾಕ್ಷಸನ ಕೂದಲು ಕೊಂಕಲಿಲ್ಲ.

ಕೋತಿಗಳ ಉಪಟಳವನ್ನು ಕಂಡು ಕುಂಭಕರ್ಣನಿಗೆ ಕೋಪ ಬಂದಿತು. ಅಗ್ನಿದೇವನು ವನವನ್ನು ಸುಡುವಂತೆ ಆ ವಾನರ ಸಮುದಾಯವನ್ನೆಲ್ಲಾ ಮರ್ದಿಸಿ ನೆಲಕ್ಕುರುಳಿಸಿದನು. ರಕ್ತದಲ್ಲಿ ಮುಳುಗಿದ ವಾನರರೆಲ್ಲರೂ ಹೂತ ಮುತ್ತುಗದ ಮರಗಳಂತೆ ಭೂಮಿಯಮೇಲೆ ಕೆಡೆದು ಬಿದ್ದರು. ಮುಂದೆ ಬಿದ್ದವರಿಗೆ ಆದ ಈ ದುರ್ಗತಿಯನ್ನು ಕಂಡು ಉಳಿದವರು ಕಾಲೆಳೆದತ್ತ ಓಡಿಹೋದರು. ಹಿಂದಕ್ಕೆ ತಿರುಗಿ ಕೂಡ ನೋಡದೆ ಸಮುದ್ರದಲ್ಲಿ ಬಿದ್ದವರು ಯಾರೊ, ಮರಗಳನ್ನು ಏರಿದವರು ಯಾರೊ, ತಗ್ಗುಗಳಲ್ಲಿ ಬಚ್ಚಿಟ್ಟುಕೊಂಡವರಾರೊ, ಭೂಮಿಯ ಮೇಲೆ ಸತ್ತವರಂತೆ ನಟಿಸುತ್ತಾ ಮಲಗಿದವರಾರೊ! ಹೀಗೆ ಕ್ಷಣಮಾತ್ರದಲ್ಲಿ ರಣಗಂಗವೆಲ್ಲ ಬಯಲಾಯಿತು. ಅಂಗದನು ಕೂಗಿ ಕೂಗಿ ಧೈರ್ಯ ಹೇಳುತ್ತಿದ್ದರೂ ಅದರ ಲಕ್ಷ್ಯವೇ ಇಲ್ಲ, ಅವರಿಗೆ. ಮರ್ಯಾದೆಗಿಂತಲೂ ಪ್ರಾಣವೇ ಹೆಚ್ಚು ಪ್ರಿಯಕರವಾಗಿ ತೋರಿತು. ಅಷ್ಟರಲ್ಲಿ ಆಂಜನೇಯನು ರಣರಂಗವನ್ನು ಪ್ರವೇಶಿಸಿದನು. ಆತನನ್ನು ಕಾಣುತ್ತಲೆ ಓಡುತ್ತಿದ್ದವರೆಲ್ಲರೂ ಹಿಂದಿರುಗಿ ಹನುಮಂತನ ಸುತ್ತಲೂ ನೆರೆದರು. ಪ್ರಾಣದ ಮೇಲೆ ಹಂಗುರದೊರೆದು ಮತ್ತೊಮ್ಮೆ ಆ ಕೋಟೆಯಂತಿದ್ದ ರಾಕ್ಷಸನ ಮೇಲೆ ಲಗ್ಗೆಯೇರಲು ಆರಂಭಿಸಿದರು.

ಕುಂಭಕರ್ಣನಿಗೆ ವಾನರರೆಂದರೆ ನೊಣಗಳಿದ್ದ ಹಾಗೆ. ಒಂದು ಸಾರಿ ಗದೆಯನ್ನು ತಿರುಗಿಸಿ ಅವರ ಮೇಲೆ ಪ್ರಯೋಗಿಸಲು ಎಂಟು ಸಹಸ್ರಮಂದಿ ವಾನರರು ಅಪ್ಪಚ್ಚಿಯಾದರು. ಉಳಿದವರನ್ನು ಒಂದೊಂದು ಬಾರಿಗೆ ಹತ್ತರಂತೆ ಇಪ್ಪತ್ತರಂತೆ ಹಿಡಿದು ಗುಳಕ್ಕನೆ ಕಬಳಿಸಲು ಮೊದಲುಮಾಡಿದನು. ಆದರೂ ವಾನರವೀರರು ಧೃತಿಗೆಡದೆ ಕೋಡುಗಲ್ಲುಗಳಿಂದಲೂ ದೊಡ್ಡದೊಡ್ಡ ವೃಕ್ಷಗಳಿಂದಲೂ ಆ ರಾಕ್ಷಸನನ್ನು ಪ್ರಹರಿಸುತ್ತಿದ್ದರು. ಅವನ ಮೇಲೆ ತಮ್ಮ ಕೈಸಾಗದುದನ್ನು ಕಂಡು ಅವರು ಆತನ ಬೆನ್ನಹಿಂದೆ ಬಂದಿದ್ದ ರಾಕ್ಷಸರನ್ನೆಲ್ಲ ಬಡಿದು ಸಾಯಿಸಿದರು. ಅಷ್ಟರಲ್ಲಿ ಮಾರುತಿ ದೊಡ್ಡದೊಂದು ಪರ್ವತಶಿಖರವನ್ನು ತಂದು ಅವನ ಮೇಲೆ ಎಸೆದನು. ಕುಂಭಕರ್ಣನು ಅದನ್ನು ಮುಷ್ಟಿಯಿಂದ ಗುದ್ದಿದನು; ಆ ಪರ್ವತಶಿಖರ ಚೂರುಚೂರಾಯಿತು. ಮತ್ತೊಮ್ಮೆ ಆ ಭಯಂಕರ ರಾಕ್ಷಸನು ವಾನರರನ್ನೆಲ್ಲ ಕಬಳಿಸಲು ಪ್ರಾರಂಭಿಸಿದನು. ಆದರೆ ಅವನು ಗಬಗಬ ನುಂಗಿದ ವಾನರರೆಲ್ಲರೂ ಮತ್ತೆ ಬಾಯಿಂದಲೂ ಮೂಗಿನಿಂದಲೂ ಗುಹೆಯ ಡೊಗರುಗಳಿಂದ ಹತ್ತಿಬರುವಂತೆ ಹೊರಬರಲು ಆರಂಭಿಸಿದರು. ಇದನ್ನು ಕಂಡು ಕುಪಿತನಾದ ಕುಂಭಕರ್ಣನು ಅವರನ್ನೆಲ್ಲ ಮತ್ತೆಮತ್ತೆ ಮುರಿದು ತಿನ್ನಲು ಪ್ರಾರಂಭಿಸಿದನು. ಇದನ್ನು ಕಂಡು ವಾನರರೆಲ್ಲರೂ ಓಡಿಹೋಗಿ ಶ್ರೀರಾಮನ ಬೆನ್ನ ಮರೆಹೊಕ್ಕರು.

ವಾನರ ಸೈನ್ಯವೆಲ್ಲವೂ ಪಲಾಯನ ಮಾಡಿದುದನ್ನು ಕಂಡ ಅಂಗದನು ರೋಷದಿಂದ ದೊಡ್ಡದೊಂದು ಪರ್ವತವನ್ನು ಎತ್ತಿತಂದು ಕುಂಭಕರ್ಣನ ತಲೆಯಮೇಲೆ ಎಸೆದನು. ಆ ಪೆಟ್ಟಿನಿಂದ ನೊಂದ ರಾಕ್ಷಸನು ಖತಿಯಿಂದ ತನ್ನ ಶೂಲವನ್ನು ಅಂಗದನ ಮೇಲೆ ಪ್ರಯೋಗಿಸಿದನು. ಅಂಗದನು ಉಪಾಯದಿಂದ ಆ ಹೊಡೆತವನ್ನು ತಪ್ಪಿಸಿಕೊಂಡು ಆಕಾಶಕ್ಕೆ ನೆಗೆದು ಕುಂಭಕರ್ಣನ ವಕ್ಷಸ್ಥಳವನ್ನು ಕಾಲಿಂದ ಬಲವಾಗಿ ಒದೆದನು. ಆ ಹೊಡೆತಕ್ಕೆ ಕ್ಷಣಕಾಲ ಮೂರ್ಛಿತನಾಗಿ ಮೈಮರೆತು ಬಿದ್ದಿದ್ದು ಮರುಕ್ಷಣದಲ್ಲಿಯೆ ಸುಧಾರಿಸಿಕೊಂಡವನಾಗಿ ಮುಷ್ಟಿಯಿಂದ ಆ ವಾನರವೀರನನ್ನು ಪ್ರಹರಿಸಿದನು. ಕೂಡಲೆ ಅಂಗದನು ಜ್ಞಾನತಪ್ಪಿ ನೆಲಕ್ಕುರುಳಿದನು. ಇದನ್ನು ಕಂಡು ಸುಗ್ರೀವನು ತಾನೇ ಸ್ವತಃ ಆ ಘೋರ ರಕ್ಕಸನಿಗೆ ಇದಿರಾದನು. ಇಬ್ಬರೂ ಒಬ್ಬರನೊಬ್ಬರು ಮೂದಲಿಸುತ್ತಾ ಸಮವಾಗಿ ಕ್ಷಣಕಾಲ ಯುದ್ಧಮಾಡಿದರು. ಸುಗ್ರೀವನು ಒಗೆದ ಪರ್ವತ ರಾಕ್ಷಸನ ಎದೆಗೆ ತಗುಲಿ ಚೂರುಚೂರಾಗಿ ಕೆಳಗೆ ಬಿತ್ತು. ರಾಕ್ಷಸನು ತನ್ನ ಶೂಲವನ್ನು ಎದುರಾಳಿಯ ಮೇಲೆ ಪ್ರಯೋಗಿಸಿದನು. ಕಾಲಾಗ್ನಿಯಂತೆ ಬರುತ್ತಿದ್ದ ಆ ಆಯುಧವನ್ನು ಆಂಜನೇಯನು ಮಧ್ಯಮಾರ್ಗದಲ್ಲಿಯೆ ಹಾರಿ ಹಿಡಿದು ಮುರಿದುಹಾಕಿದನು. ಸರ್ವಕಾಲಾಯಸ ನಿರ್ಮಿತವಾದ ಆ ಆಯುಧ ಮುರಿದುಹೋದುದರಿಂದ ರಕ್ಕಸನಿಗೆ ವ್ಯಥೆಯಾಯಿತು. ಆತನು ಪರ್ವತದ ಕೋಡುಗಲ್ಲೊಂದನ್ನು ತೆಗೆದುಕೊಂಡು ಸುಗ್ರೀವನನ್ನು ಹೊಡೆದನು. ಆ ಪೆಟ್ಟನ್ನು ತಾಳಲಾರದೆ ಆ ಕಪಿವೀರನು ನೆಲಕ್ಕುರುಳಿದನು. ಒಡನೆಯೆ ಕುಂಭಕರ್ಣನು ಕೆಳಗೆ ಬಿದ್ದ ಅವನನ್ನು ಎತ್ತಿಕೊಂಡು ಲಂಕೆಯ ಕಡೆ ಹೊರಟನು.

ಕುಂಭಕರ್ಣನ ಕ್ರೂರಕರ್ಮವನ್ನು ಕಂಡು ವಾನರರೆಲ್ಲರೂ ಭಯದಿಂದ ತಳಮಳಿಸುತ್ತಿರಲು ರಾಕ್ಷಸರು ಆನಂದದಿಂದ ನಲಿದು ನರ್ತಿಸಿದರು. ಬೀದಿಗಳಲ್ಲಿ ಬರುತ್ತಿದ್ದ ಆತನಮೇಲೆ ರಾಕ್ಷಸಾಂಗನೆಯರು ಹೂಮಳೆ ಸುರಿಸಿದರು; ಗಂಧ ಪನ್ನೀರುಗಳನ್ನು ಆತನ ಮೇಲೆ ಚೆಲ್ಲಿದರು. ಅದೇ ಶೈತ್ಯೋಪಚಾರವಾಗಿ ಸುಗ್ರೀವನ ಮೂರ್ಛೆ ತಿಳಿಯಿತು. ಎಚ್ಚತ್ತವನೆ ಆತನು ಕುಂಭಕರ್ಣನ ಮೈಯನ್ನೆಲ್ಲ ಪರಚಿ, ಅವನ ಕಿವಿ ಮೂಗುಗಳನ್ನು ಕಚ್ಚಿಬಿಟ್ಟನು. ರಾಕ್ಷಸನ ವೇಷವೆಲ್ಲವೂ ರಕ್ತದಿಂದ ತೊಯ್ದು ಹೋಯಿತು. ಆತನು ಆ ಸುಗ್ರೀವನನ್ನು ನೆಲಕ್ಕೆ ಎತ್ತಿಹಾಕಿ ಕಾಲಿಂದ ತುಳಿದನು. ಸುತ್ತಮುತ್ತಲಿದ್ದ ರಾಕ್ಷಸರೆಲ್ಲರೂ ಆ ಕಪಿವೀರನನ್ನು ಚೆನ್ನಾಗಿ ಪ್ರಹರಿಸಿದರು. ಸುಗ್ರೀವನೂ ಅದನ್ನೆಲ್ಲ ಸಹಿಸುತ್ತಾ ಹೇಗೊ ಅವರ ಕೈಯಿಂದ ನುಣುಚಿಕೊಂಡು ಶ್ರೀರಾಮನ ಬಳಿಗೆ ಹಾರಿಬಂದನು.

ಕೈಗೆ ಸಿಕ್ಕ ತುತ್ತು ಬಾಯಿಗಿಲ್ಲದಂತಾದುದನ್ನು ಕಂಡು ಕುಂಭಕರ್ಣನಿಗೆ ರೇಗಿಹೋಯಿತು. ಕೈಗೆ ಸಿಕ್ಕಿದ ಪರಿಘವೊಂದನ್ನು ಮುಷ್ಟಿಯಿಂದ ಹಿಡಿದು ಅವನು ಸುಗ್ರೀವನ ಹಿಂದೆಯೆ ರಣಭೂಮಿಗೆ ಧಾವಿಸಿದನು. ಕೋಪದಿಂದ ಮೈಮರೆತಿದ್ದ ಅವನಿಗೆ ಇವರು ವಾನರರು ಇವರು ರಾಕ್ಷಸರು ಎಂಬ ಪ್ರಜ್ಞೆಯೆ ಇಲ್ಲದೆ ಕೈಗೆ ಸಿಕ್ಕಿದವರನ್ನೆಲ್ಲಾ ಭಕ್ಷಿಸುತ್ತಾ ಹೊರಟನು. ಪ್ರಳಯಕಾಲದ ಮೃತ್ಯುವಿನಂತಿದ್ದ ಇವನ ಕೃತ್ಯವನ್ನು ಕಂಡು ವಾನರರು ಓಡಿಬಂದು ಶ್ರೀರಾಮನಲ್ಲಿ ಮೊರೆಯಿಟ್ಟರು. ಅವರ ಆರ್ತನಾದವನ್ನು ಕೇಳಿ ಲಕ್ಷ್ಮಣನು ಆ ರಾಕ್ಷಸನಿಗೆ ಇದಿರಾದನು. ಆತನು ಏಳು ಕೂರಂಬುಗಳನ್ನು ಏಕಕಾಲದಲ್ಲಿ ಹೂಡಿ ಆ ರಾಕ್ಷಸನ ಮೇಲೆ ಪ್ರಯೋಗಿಸಿದನು, ಆದರೆ ಆ ಭಯಂಕರ ರಾಕ್ಷಸನು ಆ ಬಾಣಗಳನ್ನು ಲೆಕ್ಕಿಸದೆ ಶ್ರೀರಾಮನನ್ನು ಹಿಡಿದು ತಿನ್ನುವುದಕ್ಕಾಗಿ ಆತನ ಕಡೆಗೆ ಓಡಿದನು. ಇದನ್ನು ಕಂಡು ಶ್ರೀರಾಮಚಂದ್ರನು ಭಯಂಕರವಾದ ಬಾಣಗಳನ್ನು ಅವನ ಮೇಲೆ ಸುರಿಸಿದನು. ಅವುಗಳಿಂದ ಗಾಸಿಗೊಂಡು ಉಬ್ಬಸಪಡುತ್ತಿದ್ದರೂ ಆ ರಾಕ್ಷಸನು ನಿಲ್ಲಲಿಲ್ಲ. ಕೈಗೆ ಸಿಕ್ಕ ವಾನರರನ್ನು ಭಕ್ಷಿಸುತ್ತಾ ಶ್ರೀರಾಮನ ಕಡೆಗೆ ಧಾವಿಸುತ್ತಲೆ ಬಂದನು. ತನ್ನ ಕಣ್ಣಿದಿರಿನಲ್ಲಿಯೆ ವಾನರ ಭಕ್ಷಣೆಯಾಗುತ್ತಿರುವುದನ್ನು ಕಂಡು ಕನಲಿದ ರಾಮಚಂದ್ರನು ಮತ್ತೊಂದು ಮಹಾಸ್ತ್ರವನ್ನು ಆ ರಾಕ್ಷಸನ ಎದೆಗೆ ಗುರಿಯಿಟ್ಟು ಹೊಡೆದನು. ಆ ಬಾಣ ತಾಕುತ್ತಲೆ ರಾಕ್ಷಸನ ಕೈಲಿದ್ದ ಪರಿಘ ಕೆಳಕ್ಕೆ ಜಾರಿಬಿತ್ತು; ಅವನು ನಿರಾಯುಧನಾದನು.

ಕುಂಭಕರ್ಣನಿಗೆ ಆಯುಧ ಬಿದ್ದು ಹೋದುದರಿಂದ ಯಾವ ನಷ್ಟವೂ ಆಗಲಿಲ್ಲ. ದೊಡ್ಡದಾದ ಒಂದು ಪರ್ವತವನ್ನು ಎತ್ತಿ ಶ್ರೀರಾಮನ ಮೇಲೆ ಒಗೆದನು. ಆತನು ಬಾಣವೊಂದರಿಂದ ಆ ಪರ್ವತವನ್ನು ನಿವಾರಿಸಿಕೊಂಡು ಎದುರಾಳಿಯ ಮೇಲೆ ಬಾಣದ ಮಳೆಯನ್ನು ಕರೆದನು. “ಎಲವೊ ರಾಕ್ಷಸಾ, ನೋಡು ಶ್ರೀರಾಮನ ಬಾಣಗಳ ರುಚಿಯನ್ನು!” ಎಂದು ಆತನು ಹೇಳಿದರೆ, ಆ ರಾಕ್ಷಸನು ಪಕಪಕ ನಗುತ್ತ “ಎಲೊ ರಾಮ, ನಾನೇನೂ ವಿರಾಧನಲ್ಲ, ಕಬಂಧನಲ್ಲ, ಖರನಲ್ಲ, ವಾಲಿಯಂತೂ ಮೊದಲೇ ಅಲ್ಲ. ನಾನು ಕುಂಭಕರ್ಣ. ನಿನ್ನ ಪರಾಕ್ರಮವನ್ನೆಲ್ಲಾ ಪ್ರರ್ಶಿಸಿಬಿಡು. ಅದನ್ನು ನೋಡಿ ಆಮೇಲೆ ನಿನ್ನನ್ನು ಭಕ್ಷಿಸುತ್ತೇನೆ” ಎಂದು ಹೇಳಿ, ಇದಿರಾಳಿ ಸುರಿಸಿದ ಬಾಣಗಳನ್ನು ನಿರ್ಲಕ್ಷಿಸಿ ವಿಫಲಗೊಳಿಸುತ್ತಾ ಬಂದನು. ಬರುಬರುತ್ತಾ ಶ್ರೀರಾಮನ ಬತ್ತಳಿಕೆ ಬರಿದಾಗುವ ಸ್ಥಿತಿಗೆ ಬಂತು. ಆತನು ಕನಲಿ ವಾಯವ್ಯಾಸ್ತ್ರವನ್ನು ಪ್ರಯೋಗಿಸಿದನು. ಒಡನೆಯೆ ರಾಕ್ಷಸನ ತೋಳು ಹಾರಿಹೋಯಿತು. ಅದು ಕೆಳಕ್ಕೆ ಬಿದ್ದ ಕಡೆ ಹಲವಾರು ವಾನರರು ಅದರಡಿ ಸಿಕ್ಕಿ ಸತ್ತುಹೋದರು. ಆದರೂ ಒಂದೇ ತೋಳಿನಿಂದ ಯುದ್ಧಮಾಡುತ್ತಿದ್ದ ಆ ರಾಕ್ಷಸನ ಮತ್ತೊಂದು ತೋಳೂ ಶ್ರೀರಾಮನ ಐಂದ್ರಸ್ತ್ರದಿಂದ ಕತ್ತರಿಸಿ ಹೋಯಿತು. ಮತ್ತೆರಡು ಬಾಣಗಳಿಂದ ಕುಂಭಕರ್ಣನ ಎರಡು ಕಾಲುಗಳೂ ಕತ್ತರಿಸಿಹೋದುವು. ಇಷ್ಟಾದರೂ ಆ ರಾಕ್ಷಸನ ಆಟೋಪ ಕಡಮೆಯಾಗಲೊಲ್ಲದು. ಬಡವಾಗ್ನಿ ಸಮನಾದ ತನ್ನ ಬಾಯನ್ನು ತೆರೆದುಕೊಂಡು ಆಕಾಶದಲ್ಲಿ ಚಂದ್ರನನ್ನು ನುಂಗಬರುವ ರಾಹುವಿನಂತೆ ಶ್ರೀರಾಮನನ್ನು ನುಂಗಬಯಸಿ ಕುಪ್ಪಳಿಸಿ ಬರುತ್ತಿದ್ದನು. ಶ್ರೀರಾಮನು ಅವನ ಸಾಹಸವನ್ನು ಕಂಡು ಆಶ್ಚರ್ಯಪಡುತ್ತಾ ಸಹಸ್ರಾರು ಬಾಣಗಳನ್ನು ಕರೆದು ಅವನ ಬಾಯನ್ನೆಲ್ಲ ಬಾಣಗಳಿಂದ ಗಿಡಿದನು. ಅನಂತರ ಆತನು ಮತ್ತೊಮ್ಮೆ ಐಂದ್ರಾಸ್ತ್ರವನ್ನು ಪ್ರಯೋಗಿಸಿ, ಆ ರಾಕ್ಷಸನ ರುಂಡವನ್ನು ಮುಂಡದಿಂದ ಬೇರ್ಪಡಿಸಿದನು. ಮುಂಡ ರುಂಡಗಳು ಬೇರೆಬೇರೆಯಾಗಿ ಭೂಮಿಯ ಮೇಲೆ ಬಿದ್ದ ರಭಸಕ್ಕೆ ಭೂಮಿ ಅದುರಿತು. ಆಕಾಶದಲ್ಲಿದ್ದ ದೇವತೆಗಳೆಲ್ಲರೂ ಆ ಘೋರ ರಾಕ್ಷಸನ ಮರಣವನ್ನು ಕಂಡು ಆನಂದದಿಂದ ಪುಷ್ಪವುಷ್ಟಿ ಕರೆದರು. ವಾನರರೆಲ್ಲರೂ ಕುಕಿಲಿರಿಯುತ್ತಾ ಬಾಲಗಳನ್ನು ಎತ್ತಿಕೊಂಡು ಕುಣಿದಾಡಿದರು. ಶ್ರೀರಾಮನು ರಣಭಯಂಕರನಾದ ಆ ರಕ್ಕಸನನ್ನು ಕೊಂದು ಸಂತುಷ್ಟನಾಗಿ, ಒಮ್ಮೆ ಮುಗುಳ್ನಗೆ ನಕ್ಕನು.