ದಿಕ್ಕಾಪಾಲಾಗಿ ಚೆದುರಿ ಓಡಿಬರುತ್ತಿದ್ದ ರಾಕ್ಷಸ ಸೈನ್ಯವು ರಾವಣನ ಮಗನಾದ ಅತಿಕಾಯನಿಗೆ ಕಾಣಿಸಿತು. ಅತಿಕಾಯನೆಂದರೆ ಸಾಮಾನ್ಯನಲ್ಲ. ಅವನ ಹೆಸರಿಗೆ ತಕ್ಕಂತೆ ಭಯಂಕರವಾದ ಆಕಾರವುಳ್ಳವನು. ಯುದ್ಧದಲ್ಲಿ ದುರ್ಜಯನಾಗುವಂತೆ ಬ್ರಹ್ಮನಿಂದ ವರವನ್ನು ಪಡೆದಿದ್ದವನು. ದೇವದಾನವ ಮಾನವರಲ್ಲಿ ಯಾರೂ ಆತನನ್ನು ಇದಿರಿಸುವವರಿಲ್ಲವೆಂಬ ಕೀರ್ತಿಯನ್ನು ತಾಳಿದ್ದನು. ಇಂತಹ ಆತನು, ಓಡಿಬರುತ್ತಿದ್ದ ರಾಕ್ಷಸಯೋಧರನ್ನು ನಿಲ್ಲಿಸಿ, ರಣರಂಗದ ಸಮಾಚಾರವನ್ನೆಲ್ಲ ತಿಳಿದುಕೊಂಡನು. ತನ್ನ ತಮ್ಮಂದಿರೂ ಚಿಕ್ಕಪ್ಪನಾದ ಮಹಾಪಾರ್ಶ್ವನೂ ಮಡಿದುದನ್ನು ಕೇಳಿ ಆತನಿಗೆ ಕೋಪವುಕ್ಕಿತು. ಓಡಿಬರುತ್ತಿದ್ದ ಸೈನ್ಯವನ್ನೆಲ್ಲ ಒಟ್ಟುಗೂಡಿಸಿಕೊಂಡು, ತನ್ನ ದಿವ್ಯ ರಥವನ್ನೇರಿ ಹಾಗಿಂದ ಹಾಗೆಯೆ ರಣಾಂಗಣಕ್ಕೆ ಹೊರಟನು.

ದೂರದಿಂದ ಬರುತ್ತಿದ್ದ ಅತಿಕಾಯನನ್ನು ಕಂಡು ವಾನರರೆಲ್ಲರೂ ಕುಂಭಕರ್ಣನೆ ಮತ್ತೊಮ್ಮೆ ಯುದ್ಧಕ್ಕೆ ಎದ್ದು ಬಂದಿರುವನೆಂದು ಭಾವಿಸಿ, ಓಡಿ ಹೋಗಿ ಶ್ರೀರಾಮನ ಮೊರೆಹೊಕ್ಕರು. ಆ ಅತಿಕಾಯನ ಆಕಾರವನ್ನು ಕಂಡು ಶ್ರೀರಾಮನಿಗೂ ಭ್ರಾಂತಿ ಹುಟ್ಟಿತು. ಪಕ್ಕದಲ್ಲಿದ್ದ ವಿಭೀಷಣನನ್ನು ಕುರಿತು “ಏನಯ್ಯಾ ವಿಭೀಷಣ? ಈ ಮಹಾಕಾಯನಾರು? ಎಂದು ಕೇಳಿದನು. ಆತನು “ಪ್ರಭು, ರಾಮಚಂದ್ರ, ಇವನು ರಾವಣನ ಮಗನು. ಅತಿಕಾಯನೆಂದು ಇವನ ಹೆಸರು. ಯುದ್ಧ ವಿದ್ಯೆಯಲ್ಲಿ ಇವನು ಮಹಾಚತುರ. ಸಕಲ ಶಸ್ತ್ರಾಸ್ತ್ರ ಶಾಸ್ತ್ರಗಳಲ್ಲಿಯೂ ಪಾರಂಗತನಾದವನು. ಯುದ್ಧದಲ್ಲಿ ಅಜೇಯನಾಗುವಂತೆ ಬ್ರಹ್ಮನಿಂದ ಇವನು ವರ ಪಡೆದಿರುವನು. ಇವನ ರಥ ಕವಚಗಳೆರಡೂ ದಿವ್ಯವಾದುವು. ಇವನು ತನ್ನ ಬಾಣಗಳಿಂದ ವಾನರ ಸೇನೆಯನ್ನೆಲ್ಲಾ ನಾಶಮಾಡುವುದರೊಳಗಾಗಿ ನೀನು ಈತನೊಡನೆ ಯುದ್ಧ ಮಾಡಿ ಈತನನ್ನು ಗೆಲ್ಲಬೇಕು” ಎಂದನು. ಅಷ್ಟರಲ್ಲಿ ಅತಿಕಾಯ ರಣಾಂಗಣವನ್ನು ಪ್ರವೇಶಿಸಿ, ಒಮ್ಮೆ ಸಿಂಹನಾದಮಾಡಿದನು.

ಅತಿಕಾಯನ ಸಿಂಹನಾದಕ್ಕೆ ಪ್ರತ್ಯುತ್ತರವಾಗಿ ಕುಮುದ, ದ್ವಿವಿದ, ಮೈಂದ, ನೀಲ, ಶರಭ ಎಂಬ ಐವರು ವಾನರ ಸೇನಾನಿಗಳು ಮರಗಳನ್ನೂ ಪರ್ವತಶಿಖರಗಳನ್ನೂ ಹಿಡಿದು ಆತನಿಗೆ ಇದಿರಾದರು. ಆದರೇನು? ಬಿರುಗಾಳಿಗೆ ಇದಿರಾದ ಮೊಡಗಳಂತೆ ಇವರು ಕ್ಷಣಮಾತ್ರದಲ್ಲಿ ಧ್ವಂಸವಾಗಿ ಹೋದರು. ಧರ್ಮಯುದ್ಧವನ್ನು ಕೈಗೊಂಡಿದ್ದ ಅತಿಕಾಯನು ಯುದ್ಧಕ್ಕೆ ಇದಿರಾದವರನ್ನು ಮಾತ್ರ ಸಂಹರಿಸುತ್ತಾ ಹೊರಟನೆ ಹೊರತು ಓಡಿಹೋಗುತ್ತಿದ್ದವರನ್ನು ಘಾತಿಸಲಿಲ್ಲ. ಕ್ಷಣಮಾತ್ರದಲ್ಲಿ ವಾನರ ಸೇನೆಯೆಲ್ಲವೂ ಬಯಲಾದುದನ್ನು ಕಂಡು ಆತನು ನೇರವಾಗಿ ಶ್ರೀರಾಮನ ಬಳಿಗೆ ಬಂದು “ಅಯ್ಯಾ ರಾಮ, ನಾನು ಅತಿಕಾಯನೆಂಬ ರಾಕ್ಷಸಯೋಧ. ನಿನ್ನೊಡನೆ ಕಾಳಗವನ್ನು ಬಯಸಿ ಬಂದಿದ್ದೇನೆ. ಸಾಮಾನ್ಯ ಯೋಧರೊಡನೆ ಯುದ್ಧ ಮಾಡಲು ನನಗೆ ಇಷ್ಟವಿಲ್ಲ. ನಿನ್ನ ಸೈನ್ಯದಲ್ಲೆಲ್ಲಾ ಅತ್ಯಂತ ಸಮರ್ಥನಾದವನನ್ನು ನನ್ನ ಮೇಲೆ ಯುದ್ಧಕ್ಕೆ ಕಳುಹಿಸು. ಅಥವಾ ನೀನೇ ನನ್ನೊಡನೆ ಯುದ್ಧಕ್ಕೆ ನಿಲ್ಲು” ಎಂದನು.

ಗರ್ವದಿಂದ ತುಂಬಿದ್ದರೂ ಗಂಭೀರವಾಗಿದ್ದ ಅತಿಕಾಯನ ನುಡಿಗಳನ್ನು ಕೇಳಿ ಲಕ್ಷ್ಮಣನು ಅವನೊಡನೆ ಯುದ್ಧಕ್ಕೆ ನಿಂತನು. ಬಿಲ್ಲಿಗೆ ನಾರಿಯನ್ನು ಬಿಗಿದು ಒಮ್ಮೆ ಆತನು ಟಂಕಾರ ಮಾಡಿದೊಡನೆಯ ಧ್ವನಿಯಿಂದ ದಶದಿಕ್ಕುಗಳೂ ತುಂಬಿಹೋದುವು. ಆದರೂ ಅತಿಕಾಯನು ಆತನನ್ನು ಕುರಿತು “ಅಯ್ಯಾ ನೀನಿನ್ನೂ ಬಾಲಕ. ಯಮಸದೃಶನಾದ ನನ್ನೊಡನೆ ನೀನೇನು ಯುದ್ಧ ಮಾಡಬಲ್ಲೆ? ಬಾಲಚಾಪಲ್ಯದಿಂದ ಕಾಲಾಗ್ನಿಯನ್ನೇಕೆ ಕೆರಳಿಸಲು ಬರುತ್ತಿರುವೆ? ಬಾಣವನ್ನು ಕೆಳಗಿಟ್ಟು ಹೊರಟುಹೋಗು” ಎಂದನು. ಅವನ ಕೊಬ್ಬಿನ ನುಡಿ ಶೂರನಾದ ಲಕ್ಷ್ಮಣನಿಗೆ ಸಹಿಸಲಿಲ್ಲ ಆತನು ಕೋಪದಿಂದ “ಎಲ್ಲಾ! ಮಾತಿನ ಮಲ್ಲರು ಮಹನೀಯರಾಗುತ್ತಾರೆಯೆ? ಸುಮ್ಮನೆ ಕೂಗಾಡುವುದನ್ನು ಬಿಟ್ಟು ನಿನ್ನ ಪೌರಷವೆಷ್ಟಿದೆಯೋ ಅಷ್ಟನ್ನು ಇಲ್ಲಿ ಪ್ರದರ್ಶಿಸು. ಅದನ್ನು ನೋಡಿದ ಮೇಲೆ, ಕಳಿತ ತಾಳೆಯ ಹಣ್ಣನ್ನು ತೊಟ್ಟಿನಿಂದ ಕೆಡಹುವಂತೆ, ನಿನ್ನ ತಲೆಯನ್ನು ನೆಲಕ್ಕುರುಳಿಸುತ್ತೇನೆ. ನಾನು ನಿನ್ನ ಪಾಲಿನ ಮೃತ್ಯುವೆಂಬುದನ್ನು ಮರೆಯಬೇಡ” ಎಂದನು.

ಮೂದಲಿಕೆಯ ಮಾತುಗಳ ಹಿಂದುಗಡೆಯೆ ಬಾಣಗಳ ಸುರಿಮಳೆಗಳು ಆರಂಭವಾಯಿತು. ಅತಿಕಾಯನು ಪ್ರಯೋಗಿಸಿದ ದಿವ್ಯವಾದ ಬಾಣವನ್ನು ಲಕ್ಷ್ಮಣನು ಅರ್ಧಚಂದ್ರಕಾರದ ಬಾಣದಿಂದ ಮಾರ್ಗಮಧ್ಯದಲ್ಲಿಯೆ ಕತ್ತರಿಸಿ ಹಾಕಿದನು. ರಾಕ್ಷಸವೀರನು ಮತ್ತೈದು ಬಾಣಗಳನ್ನು ಬಿಟ್ಟನು. ಅವುಗಳಿಗೂ ಅದೇ ಗತಿಯಾಯಿತು. ಆತನು ಮತ್ತೊಮ್ಮೆ ಬಾಣವನ್ನು ಹೂಡುವುದರೊಳಗಾಗಿ ಲಕ್ಷ್ಮಣನು ದಿವ್ಯವಾದ ಒಂದು ಬಾಣವನ್ನು ಎದುರಾಳಿಯ ಮೇಲೆ ಪ್ರಯೋಗಿಸಿದನು. ಅದು ನೇರವಾಗಿ ಬಂದು ರಾಕ್ಷಸನ ಹಣೆಯಲ್ಲಿ ನಾಟಿಕೊಂಡಿತು. ಒಡನೆಯೆ ಛಿಲ್ಲೆಂದು ನೆತ್ತರು ಸುರಿದು ಆ ರಾಕ್ಷಸನ ದೇಹವೆಲ್ಲವೂ ರಕ್ತಮಯವಾಯಿತು. ಕುಪಿತನಾದ ರಾಕ್ಷಸನು ತನ್ನ ರಥವನ್ನು ಲಕ್ಷ್ಮಣನ ಸಮೀಪಕ್ಕೆ ನಡೆಸಿಕೊಂಡು ಬಂದು ಬಾಣಗಳ ಮಳೆಯನ್ನೆ ಸುರಿಸುತ್ತಾ ಕ್ರೂರವಾದ ಒಂದು ಬಾಣವನ್ನು ಎದುರಾಳಿಯ ಎದೆಗೆ ಗುರಿಯಿಟ್ಟು ಹೊಡೆದನು. ಆ ಪೆಟ್ಟು ತಾಕಿದೊಡನೆಯೆ ಲಕ್ಷ್ಮಣನು ಕ್ಷಣಕಾಲ ತತ್ತರಿಸಿ ಮೈಮರೆತನು. ನೋವಿನಿಂದ ಆತನ ಕೋಪ ಕೆರಳಿತು; ಆಗ್ನೇಯಾಸ್ತ್ರವನ್ನು ಅಭಿಮಂತ್ರಿಸಿ ರಾಕ್ಷಸನ ಮೇಲೆ ಪ್ರಯೋಗಿಸಿದನು. ಆದರೇನು? ಅತಿಕಾಯನು ಸೌರಾಸ್ತ್ರವನ್ನು ಪ್ರಯೋಗಿಸಿ, ಆಗ್ನೇಯಾಸ್ತ್ರವನ್ನು ವ್ಯರ್ಥಮಾಡಿದನು. ಅತಿಕಾಯನು ಪ್ರಯೋಗಿಸಿದ ಐಷೀಕಾಸ್ತ್ರವು ಲಕ್ಷ್ಮಣನ ಐಂದ್ರಾಸ್ತ್ರದಿಂದ ಭಗ್ನವಾಯಿತು. ಹೀಗೆಯೇ ವಾರುಣಾಸ್ತ್ರ, ವಾಯವ್ಯಾಸ್ತ್ರ, ಸರ್ಪಾಸ್ತ್ರ, ಗರುಡಾಸ್ತ್ರ, ಮೊದಲಾದ ಅಸ್ತ್ರಗಳನ್ನೆಲ್ಲಾ ಪ್ರಯೋಗಿಸಿದರೂ ಒಬ್ಬರಿಗೊಬ್ಬರು ಸೋಲಲಿಲ್ಲ.

ಅತಿಕಾಯ ಲಕ್ಷ್ಮಣರಿಬ್ಬರೂ ಸರಿಸಮಾನಸ್ಕಂಧರಾಗಿ ಹೋರಾಡುತ್ತಾ ಬಹುಕಾಲ ಕಳೆಯಿತು. ಆಗ ವಾಯುದೇವನು ಪ್ರತ್ಯಕ್ಷನಾಗಿ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವಂತೆ ಲಕ್ಷ್ಮಣನಿಗೆ ಸೂಚಿಸಿದನು. ಬ್ರಹ್ಮ ವರಪ್ರಸಾದದಿಂದ ಅಜೇಯನಾಗಿರುವ ಆ ರಾಕ್ಷಸನನ್ನು ಕೊಲ್ಲಲು ಅದೊಂದೇ ಮಾರ್ಗವೆಂದು ಆತನು ತಿಳಿಸಿದನು. ಆ ಸೂಚನೆಯಂತೆ ಲಕ್ಷ್ಮಣನು ದಿವ್ಯವಾದ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಅದನ್ನು ಕಂಡು ಅತಿಕಾಯನು ಕಂಗೆಟ್ಟು ಸಹಸ್ರಾರು ಬಾಣಗಳಿಂದ ಆ ಅಸ್ತ್ರವನ್ನು ನಿವಾರಿಸಲು ಪ್ರಯತ್ನಿಸಿದನು. ಆದರೆ ಅದೆಲ್ಲವೂ ವಿಫಲವಾಯಿತು. ಆ ಅಸ್ತ್ರವು ನೇರವಾಗಿ ಬಂದು ಅತಿಕಾಯನ ಶಿರಸ್ಸನ್ನು ಹಾರಿಸಿಕೊಂಡೇ ಹೋಯಿತು. ಹಿಮವತ್ಪರ್ವತದ ಶಿಖರದಂತೆ ಅವನ ತಲೆ ಧರೆಗುರುಳಿತು. ಅದನ್ನು ಕಂಡ ರಾಕ್ಷಸರು ಯುದ್ಧದಲ್ಲಿ ಜುಗುಪ್ಸೆ ತಾಳಿ, ಭಯದಿಂದ ನಡುಗುತ್ತಾ ದಾರಿ ಸಿಕ್ಕತ್ತ ಓಡಿದರು. ವಾನರರೆಲ್ಲರೂ ಲಕ್ಷ್ಮಣನ ಸುತ್ತಲೂ ನೆರೆದು ಆನಂದದಿಂದ ಕುಣಿದಾಡಿದರು.