ಜಾಂಬುವಂತನ ಮಾತಿನಂತೆ ಮಾರುತಿ ತ್ರಿಕೂಟ ಪರ್ವತವನ್ನೇರಿ ಅಲ್ಲಿ ಮಹದಾಕಾರ ತಾಳಿ ಸಮುದ್ರದ ಮೇಲೆ ಲಂಘಿಸಿದನು.

ಅತಿಕಾಯನ ಮರಣದ ಅತಿದಾರುಣವಾರ್ತೆಯಿಂದ ರಾವಣೇಶ್ವರನು ಮುಂಗಾಣದಷ್ಟು ಕಂಗೆಟ್ಟಹೋದನು. ತನ್ನ ಬಲಭುಜದಂತಿದ್ದ ರಾಕ್ಷಸರೆಲ್ಲರೂ ರಾಮಲಕ್ಷ್ಮಣರ ಬಾಣಕ್ಕೆ ತುತ್ತಾಗಿ ಹೋದುದನ್ನು ಕಂಡು ಆತನಿಗೆ ನಿರಾಶೆ ಮುಸುಕಿದಂತಾಯಿತು. “ಆಹ! ಆಶ್ಚರ್ಯ ಆಶ್ಚರ್ಯ! ರಾಮನು ಮಹಾ ಬಲಾಢ್ಯ. ಆತನ ಅಸ್ತ್ರಬಲ ಪರಮಾಶ್ಚರ್ಯಕರ! ಆತನು ನಿಜವಾಗಿಯೂ ನಾರಾಯಣ ಸ್ವರೂಪಿಯೆಂದೆ ತೋರುತ್ತಿದೆ” ಎಂಬ ಉದ್ಗಾರಗಳು ಆತನ ಬಾಯಿಂದ ಹೊರಬಿದ್ದುವು. ಸತ್ತ ತನ್ನ ಪುತ್ರರನ್ನೆಲ್ಲ ನೆನೆನೆನೆದು ನಿಟ್ಟುಸಿರಿಡುತ್ತಾ, ಆತನು ಮುರ್ಛೆಹೋದನು. ಇದನ್ನು ಕಂಡು ಆತನ ಹಿರಿಯ ಮಗನಾದ ಇಂದ್ರಜಿತ್ತು ಆತನನ್ನು ಕುರಿತು “ತಂದೆಯೆ, ನಾನು ಜೀವಂತವಾಗಿರುವಾಗ ನಿನಗೆ ದುಃಖವೆಂದರೇನು? ನನ್ನ ಬಾಣಹತಿಗೆ ತುತ್ತಾಗಿ ಉಳಿಯುವವರಾರು? ಆ ರಾಮಲಕ್ಷ್ಮಣರು ನನ್ನ ಅಮೋಘವಾದ ಬಾಣಗಳಿಗೆ ಪ್ರಾಣಗಳನ್ನೊಪ್ಪಿಸಿ ನೆಲಕ್ಕುರುಳುವುದನ್ನು ಕಂಡು ಸಂತೋಷ ಪಡುವವನಾಗು. ಇನ್ನು ನಿನ್ನ ಚಿಂತೆಯನ್ನು ಬಿಡು” ಎಂದು ಸಮಾಧಾನ ಮಾಡಿದನು. ತಂದೆಯ ಆಶೀರ್ವಾದದೊಡನೆ ಅನುಜ್ಞೆಯನ್ನು ಪಡೆದು ಉತ್ತಮವಾದ ಹೇಸರುಕತ್ತೆಗಳನ್ನು ಹೂಡಿದ ರಥವನ್ನೇರಿ ರಣರಂಗಾಭಿಮುಖನಾದನು. ಅನೇಕ ರಾಕ್ಷಸರು ಧನುಷ್ಪಾಣಿಗಳಾಗಿ ಆತನನ್ನು ಅನುಸರಿಸಿ ಹೊರಟರ.

ಇಂದ್ರಜಿತ್ತು ರಣಭೂಮಿಯನ್ನು ಸಮೀಪಿಸುತ್ತಲೆ ತನ್ನ ಸೈನ್ಯವನ್ನೆಲ್ಲ ಉಚಿತ ಪ್ರದೇಶದಲ್ಲಿ ನಿಲ್ಲಸಿ, ರಥದಿಂದಿಳಿದು ವಿಧಿಪೂರ್ವಕವಾಗಿಯೂ ಮಂತ್ರವತ್ತಾಗಿಯೂ ಯಜ್ಞೇಶ್ವರನಲ್ಲಿ ಹೋಮಕಾರ್ಯವನ್ನು ಆಚರಿಸಿದನು. ಶಸ್ತ್ರಗಳೆ ಸಮಿತ್ತು, ಅಸ್ತ್ರಗಳೇ ದರ್ಭೆ, ಉಳಿದ ಆಯುಧಗಳೇ ಹೋಮ ಸಾಧನಗಳು; ಕಪ್ಪು ಮೇಕೆಯೊಂದನ್ನು ಹೊಗೆಯಿಲ್ಲದ ಅಗ್ನಿಯಲ್ಲಿ ಹೋಮ ಮಾಡಿ, ಆತನು ಅಗ್ನಿದೇವನನ್ನು ಮೆಚ್ಚಿಸಿದನು. ಯಜ್ಞೇಶ್ವರನು ಪ್ರತ್ಯಕ್ಷನಾಗಿ ಆತನಿಗೆ ಬ್ರಹ್ಮಾಸ್ತ್ರಾದಿ ಮಹಾಸ್ತ್ರಗಳನ್ನು ಕರುಣಿಸಿ ಕೊಟ್ಟನು. ಆ ಸಮಯದಲ್ಲಿ ಅಂತರಿಕ್ಷವೆಲ್ಲವೂ ಗಡಗಡ ನಡುಗಿತು. ದೈವದತ್ತವಾದ ಬಾಣಗಳನ್ನು ಧರಿಸಿ ಸೂರ್ಯನಂತೆ ಹೊಳೆಯುತ್ತಾ ಇಂದ್ರಜಿತ್ತು ಯುದ್ಧ ರಂಗವನ್ನು ಪ್ರವೇಶಿಸಿದನು. ಒಡನೆಯೆ ರಾಕ್ಷಸರಿಗೂ ವಾನರರಿಗೂ ಯುದ್ಧ ಆರಂಭವಾಯಿತು. ರಾಕ್ಷಸ ರಾಜಕುಮಾರನು ತನ್ನವರನ್ನು ಕುರಿತು “ಎಲೆ ರಾಕ್ಷಸೋತ್ತಮರೆ, ನಿರಾತಂಕವಾಗಿ ಸಂತೋಷದಿಂದ ಯುದ್ಧಮಾಡಿ ನಿಮ್ಮ ಸೇಡನ್ನು ತೀರಿಸಿಕೊಳ್ಳಿರಿ” ಎಂದು ಪ್ರೋತ್ಸಾಹಿಸಿದನು.

ಇಂದ್ರಜಿತ್ತು ರಣರಂಗವನ್ನು ಮೆಟ್ಟಿದೊಡನೆಯೆ ವಾನರ ಮೃತ್ಯು ಮೂಡಿದಂತಾಯಿತು. ವಾನರ ಸಂಹಾರಕಾರ್ಯ ನಿರರ್ಗಳವಾಗಿ ನಡೆಯಲಾರಂಭಿಸಿತು. ಒಂದೊಂದು ಬಾಣದ ಏಟಿಗೂ ಹತ್ತಾರು ಜನ ವಾನರರು ನೆಲಕ್ಕುರುಳತೊಡಗಿದರು. ಅವರು ಪ್ರಯೋಗಿಸುತ್ತಿದ್ದ ಮರಗಳೂ ಬೆಟ್ಟದ ಕೋಡುಗಳಲ್ಲುಗಳೂ ರಾಕ್ಷಸವೀರನ ಬಾಣಕ್ಕೆ ಸಿಕ್ಕಿ ಪುಡಿಪುಡಿಯಾಗುತ್ತಿದ್ದವು. ತಲೆತಲೆಯಾದ ವಾನರರೆಲ್ಲಾ ಒಬ್ಬೊಬ್ಬರಾಗಿ ಉರುಳುತ್ತಾ ಹೊರಟು. ಅಗೊ ಗಂಧಮಾದನ ನೆಲಕ್ಕುರುಳಿದ; ನಳ ಕೆಳಗೆ ಬಿದ್ದ; ಗಜ, ಜಾಂಬವಂತ, ನೀಲ, ಋಷಭ, ಸುಗ್ರೀವ, ಅಂಗದ, ಹನುಮಂತ, ದಧಿಮುಖ, ಪಾವಕಾಕ್ಷ ಎಲ್ಲರೂ ಪೆಟ್ಟುತಿಂದು ನಿಶ್ಚೇಷ್ಟರಾದರು. ಸೈನ್ಯದಲ್ಲೆಲ್ಲಾ ವಿಕಾರವಾಗಿ ಕಿರಿಚಿಕೊಳ್ಳುವ ಧ್ವನಿ ಎದ್ದಿತು. ಅಷ್ಟರಲ್ಲಿ ಇಂದ್ರಜಿತ್ತು ಆಕಾಶಕ್ಕೆ ಹಾರಿ ಮಾಯಾಯುದ್ಧಕ್ಕೆ ಮೊದಲಿಟ್ಟನು. ಅವನು ಪ್ರಯೋಗಿಸಿದ ಬಾಣಗಳು ರಾಮಲಕ್ಷ್ಮಣರನ್ನೂ ತಾಕಿದುವು. ಶ್ರೀರಾಮಚಂದ್ರನು ಈ ವಾನರ ಸೈನ್ಯವನ್ನೆಲ್ಲ ಭಂಗಿಸಿರುವನು. ಬ್ರಹ್ಮಾಸ್ತ್ರದ ಪ್ರಭಾವದಿಂದ ಈತನು ಅಜೇಯನಾಗಿರುವಂತೆ ತೋರುತ್ತದೆ. ಆತನು ಪ್ರಯೋಗಿಸಿರುವ ಬಾಣವರ್ಷದಿಂದ ದಿಕ್ಕುಗಳೆ ತಿಳಿಯದಂತಾಗಿದೆ. ನಮ್ಮನ್ನು ಮೂರ್ಛೆಗೊಳಿಸದ ಹೊರತು ಈ ರಾಕ್ಷಸ ಕುಮಾರನು ಲಂಕೆಗೆ ಹಿಂದಿರುಗುವುದಿಲ್ಲವೆಂದು ತೋರುತ್ತದೆ” ಎಂದು ಹೇಳಿದನು.

ಶ್ರೀರಾಮನ ಮಾತುಗಳು ಮುಗಿಯುವಷ್ಟರಲ್ಲಿಯೆ ಇಂದ್ರಜಿತ್ತು ಪ್ರಯೋಗಿಸಿದ ಬಾಣಗಳು ಬಂದು ರಾಮಲಕ್ಷ್ಮಣರಿಬ್ಬರಿಗೂ ತಾಕಿದುವು; ಇಬ್ಬರೂ ಪರವಶರಾಗಿ ನೆಲಕ್ಕುರುಳಿದರು. ಇದನ್ನು ಕಂಡು ಇಂದ್ರಜಿತ್ತು ಪರಮಾನಮದಭರಿತನಾಗಿ ಸಿಂಹನಾದ ಮಾಡುತ್ತಾ ಲಂಕೆಗೆ ಹಿಂದಿರುಗಿದನು.

ರಾಮಲಕ್ಷ್ಮಣರು ಮೂರ್ಛಿತರಾಗಿ ಬಿದ್ದುದನ್ನು ಕಾಣುತ್ತಲೆ ವಾನರರರೆಲ್ಲರೂ ಮತಿಗೆಟ್ಟು ಮುಂಗಾಣದವರಾದರು. ಅವರ ಜಂಘಾಬಲವೆ ಉಡುಗಿಹೋಯಿತು. ಹೀಗೆ ನಿಸ್ಸತ್ವರಾಗಿ ಕುಳಿತಿರುವ ವಾನರರನ್ನು ಕುರಿತು ವಿಭೀಷಣನು ಸಮಾಧಾನಮಾಡಿದನು: “ಅಯ್ಯಾ, ಹೀಗೆ ಹೆದರಿ ಮುದುರಿಕೊಳ್ಳುವುದು ಸರಿಯಲ್ಲ. ಬ್ರಹ್ಮಾಸ್ತ್ರಕ್ಕೆ ಗೌರವ ತೋರುವುದಕ್ಕಾಗಿ ಶ್ರೀರಾಮ ಲಕ್ಷ್ಮಣರು ಆ ಅಸ್ತ್ರಕ್ಕೆ ಕಟ್ಟುಬಿದ್ದು ಭೂಮಿಯಲ್ಲಿ ಪವಡಿಸಿರುವರೆ ಹೊರತು ಅವರು ಮುರ್ಛಿತರಾಗಿಲ್ಲ”. ವಿಭೀಷಣನು ಅಷ್ಟು ಮಾತನಾಡುವ ವೇಳೆಗೆ ಮುಹೂರ್ತ ಮಾತ್ರ ಬ್ರಹ್ಮಾಸ್ತ್ರಕ್ಕೆ ಒಳಗಾಗಿದ್ದ ಹನುಮಂತನು ಮೇಲಕ್ಕೆದ್ದು ಆತನ ಬಳಿಗೆ ಬಂದನು. ಇಬ್ಬರೂ ಸೇರಿ ರಣಭೂಮಿಯಲ್ಲಿ ಜೀವಂತರಾಗಿದ್ದ ವಾನರವೀರರೆಲ್ಲರಿಗೂ ಸಮಾಧಾನ ಹೇಳುತ್ತಾ ಹೊರಟರು. ಹೀಗೆ ಹೋಗುತ್ತಿರುವಾಗ ಜಾಂಬವಂತನು ಕಾಣಿಸಿದನು. ವಿಭೀಷಣನು ಆತನನ್ನು ಉಚಿತೋಕ್ತಿಗಳಿಂದ ಸಮಾಧಾನಪಡಿಸುತ್ತಿರಲು ಆತನು “ಅಯ್ಯಾ, ನಿನ್ನ ಧ್ವನಿಯಿಂದ ನೀನು ವಿಭೀಷಣನೆಂದು ಗೊತ್ತಾಯಿತು. ಹೇಳು ಹೇಳು, ಅಂಜನಾತನಯನಾದ ಮಾರುತಿ ಜೀವಂತವಾಗಿರುವನೆ? ಎಂದನು. ರಾಮಲಕ್ಷ್ಮಣರು ಹೆಸರನ್ನು ಕೂಡ ಎತ್ತದೆ ಹನುಮಂತನಿಗಾಗಿ ಹಂಬಲಿಸುತ್ತಿರುವ ಆ ಮುದುಕನನ್ನು ಕಂಡು ವಿಭೀಷಣನಿಗೆ ಆಶ್ಚರ್ಯವಾಯಿತು. ಆತನು “ಅಯ್ಯಾ ವೃದ್ಧನೆ, ರಾಮಲಕ್ಷ್ಮಣರನ್ನು ಕೂಡ ವಿಚಾರಿಸದೆ ಮಾರುತಿಯ ಕ್ಷೇಮವನ್ನು ವಿಚಾರಿಸುತ್ತಿರುವೆ. ಮಾರುತಿಯ ಮೇಲಿನ ನಿನ್ನ ಮೈತ್ರಿ ಅಸದೃಶವಾದುದೆ ಸರಿ!” ಎಂದನು. ಒಡನೆಯೆ ಜಾಂಬವಂತನು “ಅಯ್ಯಾ, ನನ್ನ ಅಭಿಪ್ರಾಯವನ್ನು ನೀನು ಅರಿಯೆ! ಒಬ್ಬ ಮಾರುತಿ ಬದುಕಿದ್ದರೆ ಉಳಿದವರೆಲ್ಲರೂ ಜೀವಿಸಿದಂತೆಯೆ; ಆತನು ಅಸುದೊರೆದಿದ್ದರೆ ನಾವೆಲ್ಲರೂ ಸತ್ತಂತೆಯೆ ಸರಿ ಎಂದನು.

ಜಾಂಬವನ ಮಾತು ವಿಭೀಷಣನಿಗೆ ಅರ್ಥವಾಗಲಿಲ್ಲ. ಅಷ್ಟರಲ್ಲಿ ಹನುಮಂತನೆ ತನ್ನ ಹೆಸರನ್ನು ಹೇಳಿಕೊಂಡು ಆತನ ಪಾದ ಮುಟ್ಟಿ ನಮಸ್ಕರಿಸಿದನು. ಮಾರುತಿಯ ಧ್ವನಿ ಕಿವಿಗೆ ಬೀಳುತ್ತಿದ್ದಂತೆಯೆ ಕಳೆಗೆಟ್ಟಿದ್ದ ಜಾಂಬವಂತನ ಮುಖದ ಮೇಲೆ ಕಳೆಮೂಡಿದಂತಾಯಿತು. ಉತ್ಸಾಹತುಂಬಿದ ದನಿಯಲ್ಲಿ ಆತನನ್ನು ಕುರಿತು “ಮಾರುತಿ, ಬಾ ಬಾ! ಈಗ ನೀನೇ ಅಳಿದು ಬಿದ್ದಿರುವವರಿಗೆಲ್ಲಾ ಜೀವದಾನಮಾಡಬೇಕು. ಶ್ರೀರಾಮಲಕ್ಷ್ಮಣರನ್ನು ಬಂಧಮುಕ್ತರನ್ನಾಗಿ ಮಾಡುವ ಮಹಾಕಾರ್ಯವೂ ನಿನ್ನಿಂದಲೆ ನಡೆಯಬೇಕು. ನೀನೀಗಲೆ ಸಾಗರವನ್ನು ದಾಟಿ ಹಿಮವತ್ಪರ್ವತಕ್ಕೆ ಹೋಗಬೇಕು. ಅಲ್ಲಿ “ಋಷಭ”ವೆಂಬ ಕಾಂಚನ ಪರ್ವತವೂ ಕೈಲಾಸ ಪರ್ವತವೂ ಕಾಣುತ್ತವೆ. ಅವೆರಡರ ಮಧ್ಯದಲ್ಲಿ ಔಷಧಿ ಪರ್ವತವೆಂಬ ಪರ್ವತದಲ್ಲಿ ದಶದಿಕ್ಕುಗಳನ್ನು ಬೆಳಗುತ್ತಿರುವ ನಾಲ್ಕು ಮೂಲಿಕೆಗಳಿವೆ. ನೀನು ಆದಷ್ಟು ಬೇಗ ಆ ನಾಲ್ಕು ಮೂಲಿಕೆಗಳನ್ನೂ ತರುವವನಾಗು. ಅವುಗಳಿಂದ ಮರಣೋನ್ಮುಖರಾಗಿರುವ ವಾನರರರೆಲ್ಲರೂ ಬದುಕುತ್ತಾರೆ” ಎಂದನು.

ಜಾಂಬವಂತನ ಮಾತಿನಂತೆ ಮಾರುತಿ ತ್ರಿಕೂಟಪರ್ವತವನ್ನೇರಿ ಅಲ್ಲಿಂದ ಮಹದಾಕಾರವನ್ನು ತಾಳಿ, ಸಮುದ್ರದ ಮೇಲೆ ಲಂಘಿಸಿದನು. ಮಹಾಸರ್ಪಗಳ ಹೆಡೆಗಳಂತಿದ್ದ ತನ್ನ ಹಸ್ತಗಳನ್ನು ಮುಂದಕ್ಕೆ ಚಾಚಿಕೊಂಡು ಆತನು ದಿಕ್ಕುಗಳನ್ನೆ ಹಿಡಿದು ಸೆಳೆಯುವವನಂತೆ ಅಂತರಿಕ್ಷದಲ್ಲಿ ತೇಲಿಕೊಂಡು ಮೇರು ಪರ್ವತದ ಕಡೆ ಹೊರಟನು. “ವಾನರವೀರರನ್ನೂ ಶ್ರೀರಾಮಲಕ್ಷ್ಮಣರನ್ನೂ ರಕ್ಷಿಸು” ಎಂಬ ಜಾಂಬವಂತನ ಮಾತು ಆತನ ಕಿವಿಗಳಲ್ಲಿ ಅನುರಣಿತವಾಗುತ್ತಿರಲು, ಆತನು ವಾಯುವೇಗವನ್ನೂ ಮೀರದ ವೇಗದಿಂದ ಹಾರಿ ತನ್ನ ಗುರಿಯನ್ನು ಮುಟ್ಟಿದನು. ಔಷಧಿ ಪರ್ವತದಲ್ಲಿದ್ದ ಮಹೌಷಧಿಗಳು ಮಾತ್ರ ಎಷ್ಟು ಹುಡಿಕಿದರೂ ಆತನಿಗೆ ಕಾಣಿಸಲಿಲ್ಲ. ಅರ್ಥಿಯಾಗಿ ಬಂದಿದ್ದ ಆತನಿಗೆ ಕಾಣದಂತೆ ಅವು ಮಾಯವಾಗಿದ್ದವು. ಮಾರುತಿಗೆ ಹುಡಿಕಿ ಹುಡಿಕಿ ಬೇಸರವಾಗಯಿತು. ರೋಷದಿಂದ ಆತನು ಆ ಪರ್ವತವೆ ಸೀಳುವಂತೆ ಗರ್ಜಿಸುತ್ತಾ, ಶಿಖರ ಸಹಿತವಾದ ಆ ಪರ್ವತವನ್ನು ಬುಡಸಹಿತವಾಗಿ ಕಿತ್ತುಕೊಂಡು ಹಿಂದಿರುಗಿದನು. ದೊಡ್ಡ ಪರ್ವತವೊಂದನ್ನು ಹಿಡಿದುಕೊಂಡು ಹಾರಿಬರುತ್ತಿರುವ ಆತನನ್ನು ಕಾಣುತ್ತಲೆ ವಾನರರೆಲ್ಲರೂ ಹೊಸಜೀವ ಮೂಡಿದಂತೆ ಆನಂದದಿಂದ ಸಿಂಹನಾದ ಮಾಡಿದರು. ಹನುಮಂತನು ಪರ್ವತದೊಡನೆ ತ್ರಿಕೂಟಾಚಲದ ಮೇಲೆ ಅವತರಿಸಿ, ರಾಮಲಕ್ಷ್ಮಣರ ಬಳಿಗೆ ಬಂದನು. ಔಷಧಿ ಪರ್ವತದಲ್ಲಿದ್ದ ಮೂಲಿಕೆಗಳ ವಾಸನೆಯಿಂದಲೆ ರಾಮಕ್ಷ್ಮಣರಿಗೆ ಎಚ್ಚರಿಕೆಯಾಯಿತು. ಅವರು ಏನೊಂದೂ ಬಾಧೆಯಿಲ್ಲದವರಂತೆ ಮೈಮುರಿದು ಮೇಲಕ್ಕೆದ್ದರು. ಅಷ್ಟೇ ಅಲ್ಲ ಆ ಮೂಲಿಕೆಗಳ ಪ್ರಭಾವದಿಂದ ಅವರಿಗೆ ಯುದ್ಧದಲ್ಲಿ ಮಡಿದಿದ್ದ ವಾನರರೆಲ್ಲರೂ ಪುನಃ ಚೇತನಗೊಂಡರು. ಯುದ್ಧದಲ್ಲಿ ಮಡಿದಿದ್ದ ರಾಕ್ಷಸರನ್ನೆಲ್ಲಾ ರಾವಣನ ಆಜ್ಞೆಯಂತೆ ಸಮುದ್ರಕ್ಕೆ ಎಸೆದಿದ್ದುದರಿಂದ ಅವರು ಮತ್ತೆ ಬದುಕುವುದಕ್ಕಿಲ್ಲವಾಯಿತು.

ಇಷ್ಟಾದಮೇಲೆ ಹನುಮಂತನು ಆ ಔಷಧಿ ಪರ್ವತವನ್ನು ಮತ್ತೆ ಅದರ ಸ್ವಸ್ಥಾನಕ್ಕೆ ಸೇರಿಸಿ ಬಂದನು.

* * *