ಹನುಮಂತನ ದಯೆಯಿಂದ ನವಚೇತನಗೊಂಡ ವಾನರರೆಲ್ಲರೂ ನೂತನವಾದ ಉತ್ಸಾಹದಿಂದ ವಿಜೃಂಬಿಸುತ್ತಾ ಸುಗ್ರೀವನ ಆಜ್ಞೆಯಂತೆ ಅಂದು ರಾತ್ರಿ ಲಂಕಾಪಟ್ಟಣಕ್ಕೆ ಬೆಂಕಿಹೊತ್ತಿಸಿದರು. ಅಗ್ನಿಜ್ವಾಲೆಯಿಂದ ಮನೆಗಳೆಲ್ಲವೂ ಸುಟ್ಟುಹೋಗುತ್ತಿರಲು, ಮುಪ್ಪಿನ ಮುದುಕರೂ ಸ್ತ್ರೀಯರೂ ಮಕ್ಕಳೂ ಗೋಳೋ ಎಂದು ಅಳುತ್ತಾ ಜೀವವುಳಿಸಿಕೊಳ್ಳುವುದಕ್ಕಾಗಿ ದಾರಿಸಿಕ್ಕತ್ತ ಓಡಹತ್ತಿದರು. ಯುವಕರೂ ವೀರರೂ ಆಯುಧಗಳನ್ನು ಹಿಡಿದು ವಾನರರ ಮೇಲೆ ಬೀಳಲು ಧಾವಿಸಿದರು. ಊರಿನ ಹೆಬ್ಬಾಗಿಲಿನಲ್ಲೆಲ್ಲಾ ಬರಿಯ ವಾನರರೆ ತುಂಬಿಕೊಂಡು ಅಲ್ಲಿಗೆ ಬಂದವರನ್ನೆಲ್ಲಾ ಸಂಹರಿಸ ಹತ್ತಿದರು. ನೆಲ ಬೆಸಲೆಯಾದಂತೆ ತುಂಬಿದ ಆ ಅಸಂಖ್ಯಾತರಾದ ವಾನರರನ್ನು ಕಂಡು ರಾಕ್ಷಸರಿಗೆ ದಿಕ್ಕೇ ತೋಚದಂತಾಯಿತು. ಮಾರಿಯ ಇದಿರಿನ ಕುರಿಗಳಂತೆ ಅವರೆಲ್ಲರು ಕ್ಷಣಮಾತ್ರದಲ್ಲಿ ಧ್ವಂಸರಾಗುತ್ತಾ ಹೋದರು. ಇದನ್ನು ಕಂಡು ಅಕಂಪನನೆಂಬ ರಾಕ್ಷಸವೀರನು ತನ್ನ ಗದೆಯನ್ನು ತಿರುಗಿಸುತ್ತಾ ಪ್ರಳಯರುದ್ರನಂತೆ ವಾನರ ಸಮೂಹವನ್ನು ಹೊಕ್ಕನು. ಇದನ್ನು ಕಂಡ ಅಂಗದನು ದೊಡ್ಡದೊಂದು ಬೆಟ್ಟವನ್ನು ಎತ್ತಿ ಅವನ ತಲೆಯ ಮೇಲೆ ಎಸೆದನು. ಅದರಿಂದ ರಾಕ್ಷಸನ ತಲೆಯೊಡೆದು ಅವನು ಸತ್ತು ಬಿದ್ದನು. ಅವನ ಪತನವನ್ನು ಕಂಡು ಶೋಣಿತಾಕ್ಷನೆಂಬ ರಾಕ್ಷಸನು ರಥವನ್ನೇರಿ ಅಂಗದಮೇಲೆ ಯುದ್ಧಕ್ಕೆ ಬಂದನು. ಅಂಗದಕುಮಾರನು ಅವನ ರಥದೊಳಕ್ಕೆ ನುಗ್ಗಿ ಆ ರಥವನ್ನು ಮುರಿದುಹಾಕಿದುದಲ್ಲದೆ ಅವನ ಕೈಲಿದ್ದ ಆಯುಧಗಳನ್ನೂ ಕಿತ್ತುಕೊಂಡು ಮುರಿದುಹಾಕಿದನು. ಕೂಡಲೆ ಆ ರಾಕ್ಷಸನು ಹಿರಿದ ಕತ್ತಿಯೊಡನೆ ಆಕಾಶಕ್ಕೆ ನೆಗೆದನು. ಅಂಗದನೂ ಜೊತೆಯಲ್ಲಿಯೆ ನೆಗೆದು, ಅವನ ಕೈಲಿದ್ದ ಕತ್ತಿಯನ್ನು ಕಿತ್ತುಕೊಂಡು ಅವನನ್ನು ಘಾತಿಸಿ ಕೆಳಕ್ಕೆ ಕೆಡವಿದನು. ಅದನ್ನು ಕಂಡು ಯೂಕಾಕ್ಷನೆಂಬ ರಾಕ್ಷಸಯೋಧನು ಪ್ರಜಂಘಾಸುರನೆಂಬುವನೊಡನೆ ಅಂಗದನನ್ನು ತರುಬಿದನು. ಆ ವೇಳೆಗೆ ಶೋಣಿತಾಕ್ಷನೂ ಎಚ್ಚತ್ತುಕೊಂಡು ಮೇಲಕ್ಕೆ ಬಂದನು. ಹೀಗೆ ಮೂವರೂ ಅಂಗದಕುಮಾರನ ಮೇಲೆ ಕೈಮಾಡ ಹೊರಟುದನ್ನು ಕಂಡು ಮೈಂದ ದ್ವಿವಿದರೆಂಬ ವಾನರವೀರರು ಆತನ ಸಹಾಯಕ್ಕೆ ಬಂದರು. ಮೂವರೂ ಸೇರಿ ಮೂವರು ರಾಕ್ಷಸ ವೀರರನ್ನೂ ಕೊಂದು ಹಾಕಿದರು.

ತಮ್ಮ ಮೂವರು ಮುಂದಾಳುಗಳು ಮಡಿದುದನ್ನು ಕಂಡು ಅವರ ಸುತ್ತಲಿದ್ದ ರಾಕ್ಷಸರು ಓಡಿಹೋಗಿ ಕುಂಭಕರ್ಣನ ಮಗನಾದ ಕುಂಭನ ಮರೆಹೊಕ್ಕರು. ಧನುರ್ವಿದ್ಯೆಯಲ್ಲಿ ಚತುರನಾದ ಕುಂಭನು ತೀಕ್ಷಣವಾದ ಬಾಣವೊಂದನ್ನು ಬಿಟ್ಟು ದ್ವಿವಿದನನ್ನು ನೆಲಕ್ಕುರುಳಿಸಿದನು. ಅಷ್ಟರಲ್ಲಿ ಮೈಂದನು ದೊಡ್ಡ ಬಂಡೆಯೊಂದನ್ನು ತನ್ನ ಮೇಲೆಸೆಯಲು, ಕುಂಭನು ಐದುಬಾಣಗಳಿಂದ ಅದನ್ನು ತುಂಡು ತುಂಡಾಗಿ ಕತ್ತಿರಿಸಿಹಾಕಿ, ಮತ್ತೊಂದು ನಿಶಿತಶರದಿಂದ ಮೈಂದನನ್ನು ನೆಲಕ್ಕುರುಳಿಸಿದನು. ಆ ವೇಳೆಗೆ ಸರಿಯಾಗಿ ಅಂಗದಕುಮಾರನು ಅಲ್ಲಿಗೆ ಬಂದು ದೊಡ್ಡದೊಂದು ವೃಕ್ಷದಿಂದ ಆ ರಾಕ್ಷಸನನ್ನು ಪ್ರಹರಿಸಲು ಪ್ರಯತ್ನಿಸಿದನು. ಆದರ ಅವನ ಪ್ರಯತ್ನಸಾಗಲಿಲ್ಲ. ಅದಕ್ಕೆ ಬದಲಾಗಿ ಕುಂಭನು ಪ್ರಯೋಗಿಸಿದ ಬಾಣದಿಂದ ಆ ವಾನರವೀರನ ಹಣೆಯೊಡೆದು ಕೆನ್ನೀರು ಪ್ರವಾಹದಂತೆ ಹರಿಯಿತು. ಆ ಏಟನ್ನು ತಾಳಲಾರದೆ ಆತನು ತತ್ತರಿಸಿ ಸಮೀಪದಲ್ಲಿದ್ದೊಂದು ಮರವನ್ನು ಒರಗಿನಿಂತನು. ಈ ವಿಚಾರವನ್ನು ವಾನರರು ಒಡನೆಯೆ ಶ್ರೀರಾಮಚಂದ್ರನಿಗೆ ಅರಿಕೆಮಾಡಿದರು. ಆತನು ಜಾಂಬವಂತನನ್ನು ಅಂಗದನ ಸಹಾಯಕ್ಕೆ ಅಟ್ಟಿದನು.

ಶ್ರೀರಾಮಚಂದ್ರನಿಂದ ಆಜ್ಞಪ್ತನಾದ ಜಾಂಬವಂತನು ಸುಷೇಣ ವೇಗದರ್ಶಿಗಳೆಂಬ ಕಪಿವೀರರೊಡನೆ ಕುಂಭನನ್ನು ಇದಿರಿಸಿದನು. ಆದರೆ ಆ ರಾಕ್ಷಸನು ಕ್ಷಣಮಾತ್ರದಲ್ಲಿ ಆ ಮೂವರನ್ನು ತನ್ನ ಬಾಣಘಾತದಿಂದ ಹಿಂದಿಕ್ಕಿ ಬೊಬ್ಬಿರಿದನು. ದೂರದಲ್ಲಿ ನಿಂತು ಇದನ್ನು ನೋಡುತ್ತಿದ್ದ ಸುಗ್ರೀವನು ದೊಡ್ಡದೊಂದು ಬೆಟ್ಟವನ್ನು ಹೊತ್ತುಕೊಂಡು ಆ ರಾಕ್ಷಸನ ಮೇಲೆ ಯುದ್ಧಕ್ಕೆ ಬಂದನು. ಇಬ್ಬರಿಗೂ ಘೋರವಾದ ಯುದ್ಧ ಆರಂಭವಾಯಿತು. ಕುಂಭನು ಬಿಟ್ಟ ಬಾಣದಿಂದ ವಾನರರಾಜನ ಕಲ್ಮರಗಳ ಆಯುಧಗಳೆಲ್ಲವೂ ಬರಿದಾಗಲು, ಆತನು ಭರದಿಂದ ಆ ರಾಕ್ಷಸನ ಬಳಿಗೆ ನುಗ್ಗಿ ಅವನ ಕೈಲಿದ್ದ ಬಿಲ್ಲನ್ನು ಕಿತ್ತುಕೊಂಡು ಮುರಿದುಹಾಕಿದನು. ಆನಂತರ ಇಬ್ಬರೂ ಮಲ್ಲ ಯುದ್ಧ ಮಾಡಲು ಮೊದಲುಮಾಡಿದರು. ಒಮ್ಮೆ ಸುಗ್ರೀವನು ಕುಂಭನನ್ನು ಎತ್ತಿ ಸಮುದ್ರಕ್ಕೆ ಎಸೆದನು. ಆದರೆ ಕ್ಷಣಮಾತ್ರದಲ್ಲಿ ಅವನು ಅಲ್ಲಿಂದ ಎದ್ದುಬಂದು, ಸುಗ್ರೀವನ ವಕ್ಷಸ್ಥಳವನ್ನು ವಜ್ರಮುಷ್ಟಿಯಿಂದ ಗುದ್ದಿದನು. ಆ ಪೆಟ್ಟಿಗೆ ರಾಕ್ಷಸನು ಉರಿಯುಡುಗಿದ ಬೆಂಕಿಯಂತಾಗಿ ನೆಲಕ್ಕುರುಳಿ ಪ್ರಾಣ ಬಿಟ್ಟನು. ಅದನ್ನು ಕಂಡು ರಾಕ್ಷಸರು ಭಯದಿಂದ ಹೌಹಾರಿಹೋದರು.

ಕುಂಭನು ಸುಗ್ರೀವನ ಮುಷ್ಟಿ ಪ್ರಹಾರದಿಂದ ಮರಣಹೊಂದಿದುದನ್ನು ಕೇಳಿ, ಅವನ ಅಣ್ಣನಾದ ನಿಕುಂಭನು ಕನಲಿ ಕೆಂಗಂಡವಾದನು. ಸುಗ್ರೀವನನ್ನು ತನ್ನ ಕಣ್ಣುಗಳಿಂದಲೆ ಸುಟ್ಟುಬಿಡುವನೆಂಬಂತೆ ಬಿರುಗಣ್ಣುಗಳಿಂದ ಕಿಡಿಗಳನ್ನು ಕಾರುತ್ತಾ ತನ್ನ ಪರಿಘಾಯುಧದೊಡನೆ ಸುಗ್ರಿವನ ಮೇಲ ಏರಿಬಂದನು. ಆತನು ತನ್ನ ಆಯುಧವನ್ನು ಗರಗರ ತಿರುಗಿಸಿದ ರಭಸಕ್ಕೆ ಬೆಂಕಿಯುದಿಸಿ ವಾನರಸೈನ್ಯವೆಲ್ಲವೂ ತಲ್ಲಣಿಸಿದಂತಾಯಿತು. ಅದನ್ನು ಕಂಡು ಆಂಜನೇಯನು ರಾಕ್ಷಸನ ಬಳಿಗೆ ಧಾವಿಸಿದನು. ತನ್ನ ಗುರಿಗೆ ಅಡ್ಡಿಯಾದ ಆ ಮಾರುತಿಯನ್ನು ರಾಕ್ಷಸನು ತನ್ನ ಪರಿಘದಿಂದ ಪ್ರಹರಿಸಿದನು. ಆ ಏಟಿಗೆ ಮಹಾ ಪರಾಕ್ರಮಿಯಾದ ಮಾರುತಿಯೂ ಕ್ಷಣಕಾಲ ತತ್ತರಿಸಿಹೋದನು ಮುಹೂರ್ತಕಾಲವಾದ ಮೇಲೆ ಮಾರುತಿ ಪ್ರಜ್ಞೆ ತಿಳಿದು ಆ ರಾಕ್ಷಸನ ಎದೆಗೆ ಬಲವಾಗಿ ಗುದ್ದಿದನು. ಅಷ್ಟು ಸಾಲದೆಂದು ಹಿಡಿದೆಳೆದು ಅವನನ್ನು ನೆಲಕ್ಕೆ ಕೆಡವಿ ನಾದಿದನು. ಅವನ ತಲೆಗೂದಲನ್ನು ಹಿಡಿದು ತಿರಿವಿ, ತಲೆಯನ್ನು ಹಿಡೆದೆಳೆದು ಕಿತ್ತುಹಾಕಿದನು.

ಇತ್ತ ಮಾರುತಿ ನಿಕುಂಭ ಸಂಹಾರದಲ್ಲಿ, ಅತ್ತಿ ಶ್ರೀರಾಮಚಂದ್ರನ ಮಕರಾಕ್ಷನೆಂಬ ರಾಕ್ಷಸನೊಡನೆ, ಘೋರವಾದ ಯುದ್ಧದಲ್ಲಿ ತೊಡಗಿದ್ದನು. ಮಕರಾಕ್ಷನು ಖರನ ಮಗ. ಅವನು ಮೊದಲೆ ಮಹಾ ಗರ್ವಿಷ್ಠ. ಅದರೊಳಗೆ ರಾವಣನು ಬೇರೆ “ವತ್ಸ, ನೀನೀಗಲೇ ಸೇನೆಯೊಡನೆ ರಣರಂಗಕ್ಕೆ ಹೋಗಿ ರಾಮಲಕ್ಷ್ಮಣರನ್ನೂ ಕಪಿಸೇನೆಯನ್ನೂ ಒಕ್ಕಲಿಕ್ಕಿ ಬಾ” ಎಮದು ಪ್ರೋತ್ಸಾಹಿಸಿದ್ದನು. ಆದ್ದರಿಮದ ಅ ದುರಹಂಕರಿ ರಥವನ್ನೇರಿ ರಣಾಂಗಣಕ್ಕೆ ಹೋಗುತ್ತಾ, ಜೊತೆಯಲ್ಲಿದ್ದ ಸೈನಿಕರನ್ನು ಕುರಿತು “ಎಲೈ ರಕ್ಷಸರೆ, ನೀವೆಲ್ಲರೂ ನನ್ನ ಮುಂಗಡೆಯೆ ಆ ಕಪಿಗಳೊಡನೆ ಕಾದಾಡುತ್ತಿರಿ. ನಾನು ರಾಮಲಕ್ಷ್ಮಣರೊಡನೆ ಯುದ್ಧ ಮಾಡಿ ಅವರನ್ನು ಧ್ವಂಸಮಾಡಿ ಬಿಡುತ್ತೇನೆ” ಎಂದು ಹೇಳಿದನು. ದಾರಿಯಲ್ಲಿ ಬರುತ್ತಿರುವಾಗ ಹಲವು ದುಶ್ಶಕುನಗಳಾದುದಾದರೂ, ಆ ಉದ್ಧಟನು ಅವುಗಳನ್ನು ಲಕ್ಷಿಸದೆ ರಣರಂಗವನ್ನು ಪ್ರವೇಶಿಸಿದ್ದನು. ರಣರಂಗದಲ್ಲಿ ರಾಕ್ಷಸರನ್ನು ಕಾಣುತ್ತಲೆ ವಾನರರು ಅವರನ್ನು ಸಂಹರಿಸಲು ಮೊದಲುಮಾಡಿದರು. ಆದರೆ ಮಕರಾಕ್ಷನ ಬಾಣಾಹತಿಯಿಂದ ಅವರೆಲ್ಲರೂ ಪಲಾಯನ ಪರರಾಗಲು ಶ್ರೀರಾಮನೆ ಸ್ವತಃ ಆ ರಾಕ್ಷಸನನ್ನು ಇದಿರಿಸಿ ನಿಂತನು.

ಶ್ರೀರಾಮನನ್ನು ಕಾಣುತ್ತಲೆ ರಾಕ್ಷಸನಿಗೆ ತನ್ನ ತಂದೆಯ ನೆನಪು ಬಂದಿತು. “ಎಲವೂ ರಾಮ, ನೀನು ದಂಡಕಾರಣ್ಯದಲ್ಲಿ ನನ್ನ ತಂದೆಯನ್ನು ಕೊಂದೆಯಲ್ಲವೆ? ನನ್ನ ಭಾಗ್ಯವಶದಿಂದ ನೀನೀಗ ನನ್ನ ಕೈಗೆ ಸಿಕ್ಕಿ ಬಿದ್ದರುವೆ. ನಿನ್ನನ್ನು ದಿಗ್ಬಲಿಕೊಟ್ಟು ಪಿತೃಋಣವನ್ನು ತೀರಿಸುತ್ತೇನೆ. ನಿನಗೆ ಇಷ್ಟವಾದ ಆಯುಧವನ್ನು ಧರಿಸಿ ಯುದ್ಧಕ್ಕೆ ಸಿದ್ಧನಾಗು” ಎಂದು ಗರ್ಜಿಸಿದನು. ಮಾತಿನ ಜೊತೆಗೆ ಮೊನಚಾದ ಬಾಣಗಳು ಶ್ರೀರಾಮನನ್ನು ಭೇದಿಸ ಹೊರಟುವು. ಶ್ರೀರಾಮನು ಸ್ವಲ್ಪಹೊತ್ತು ಅವನ ಬಾಣಗನ್ನೆಲ್ಲ ಮಧ್ಯಮಾರ್ಗದಲ್ಲಿಯೆ ಖಂಡಿಸುತ್ತಾ ಹೋದನು. ಬರಬರುತ್ತಾ ಯುದ್ಧ ಬಿರುಸಾಯಿತು. ಇಬ್ಬರೂ ಎಸೆದ ಬಾಣಗಳಿಂದ ಅಂತರಿಕ್ಷ ಮರೆಯಾಗಿ ಹೋಯಿತು. ಕಡೆಗೆ ಶ್ರೀರಾಮಚಂದ್ರನು ಪ್ರಯೋಗಿಸಿದ ಆಗ್ನೇಯಾಸ್ತ್ರ ಆ ರಾಕ್ಷಸನ ಪ್ರಾಣವನ್ನು ಹೀರಿ, ಅವನನ್ನು ಕೆಳಗೆ ಕೆಡವಿತು. ಇದನ್ನು ಕಂಡು ವಾನರರು ಕುಣಿದಾಡಿದರು; ರಾಕ್ಷಸರು ಲಂಕೆಯತ್ತ ಪಲಾಯನ ಮಾಡಿದರು.

* * *