ಮಕರಾಕ್ಷ ಮಡಿದ ಸುದ್ದಿಯನ್ನು ಕೇಳಿ ರಾವಣೇಶ್ವರನು ಮಹಾವ್ಯಸನದಿಂದ ಮತ್ತೊಮ್ಮೆ ತನ್ನ ಮಗನಾದ ಇಂದ್ರಜಿತ್ತುವನ್ನು ರಾಮಲಕ್ಷ್ಮಣರ ಮೇಲೆ ಯುದ್ಧಕ್ಕೆ ಕಳುಹಿಸಿದನು. ಆತನು ಮೊದಲಿನಂತೆಯೆ ಯುದ್ಧರಂಗದ ಬಳಿ ಯಜ್ಞೇಶ್ವರನನ್ನು ಪೂಜಿಸಿ, ಕರಿಯ ಮೆಕೆಯೊಂದನ್ನು ಹೋಮಮಾಡದನು. ಇದರಿಂದ ತೃಪ್ತನಾದ ಯಜ್ಞ ಪುರುಷನು ಆತನಿಗೆ ಅನೇಕ ನಿಶಿತಾಸ್ತ್ರಗಳನ್ನು ಕೊಟ್ಟನು. ಇಂದ್ರಜಿತ್ತು ಆ ಆಯುಧಗಳನ್ನು ಧರಿಸಿ, ಮಾಯಾರಥವೊಂದನ್ನೇರಿ ಯುದ್ಧರಂಗವನ್ನು ಪ್ರವೇಶಿಸಿದನು. ಆ ರಥವಾಗಲಿ, ರಥಕ್ಕೆ ಕಟ್ಟಿದ್ದ ಅಶ್ವಚತುಷ್ಟವಾಗಲಿ ಯಾರಿಗೂ ಕಾಣಬರುತ್ತಿರಲಿಲ್ಲ. ಇಂತಹ ರಥವನ್ನೇರಿದ ಅವನು ರಾಮಲಕ್ಷ್ಮಣರನ್ನೂ ವಾನರರನ್ನೂ ನಿಶ್ಶೇಷವಾಗಿ ನಾಶಗೊಳಿಸುವುದಾಗೆ ಪ್ರತಿಜ್ಞೆಮಾಡಿ ಅಂತರಿಕ್ಷಕ್ಕೆ ತನ್ನು ರಥವನ್ನು ನಡೆಸಿದನು.

ಇದ್ದಕ್ಕಿದಂತೆ ಆಕಾಶದಿಂದ ರಾಮಲಕ್ಷ್ಮಣರ ಮೇಲೆ ಶರವರ್ಷ ಸುರಿಯಲು ಆರಂಭವಾಯಿತು. ಆ ಸೋದರರು ಕನಲಿ ಆಕಾಶವನ್ನೆಲ್ಲ ತಮ್ಮ ಬಾಣಗಳಿಂದ ತುಂಬಿದರು. ಆದರೆ ಅವುಗಳಿಂದ ಪ್ರಯೋಜನವೇನೂ ಆಗಲಿಲ್ಲ. ಮೇಲೆ ಮರೆಯಾಗಿದ್ದ ಇಂದ್ರಜಿತ್ತು ತನ್ನ ವಿದ್ಯಾಚಾತುರ್ಯದಿಂದ ಆಕಾಶದಲ್ಲೆಲ್ಲಾ ಅಂಧಕಾರ ಕವಿಯುವಂತೆ ಮಾಡಿದನು. ಅವನು ಮಾಡುತ್ತಿದ್ದ ಧನುಷ್ಟಂಕಾರ ಕೇಳಿಬರುತ್ತಿತ್ತೆ ಹೊರತು ಅವನು ಕಾಣುತ್ತಿರಲಿಲ್ಲ. ಅವನು ಪ್ರಯೋಗಿಸುವ ಬಾಣಗಳೆಲ್ಲವೂ ಗುರಿತಪ್ಪದೆ ಬಂದು ರಾಮಲಕ್ಷ್ಮಣರಿಗೆ ತಾಕುತ್ತಿದ್ದುವು. ಅವರು ಬಿಟ್ಟು ಪ್ರತಿಬಾಣಗಳೆಲ್ಲವೂ ಶೂನ್ಯವನ್ನು ಮುಟ್ಟಿ ಹಿಂದಿರುಗುತ್ತಿದ್ದುವು. ಇದನ್ನು ಕಂಡು ಲಕ್ಷ್ಮಣನಿಗೆ ರೇಗಿಹೋಯಿತು. ಆತನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವೆನೆಂದು ಅಣ್ಣನಿಗೆ ತಿಳಿಸಿದನು. ಆದರೆ ಅದರಿಂದ ನಿರಪರಾಧಿಗಳಾದ ರಾಕ್ಷಸರೂ ಮಡಿಯುವರಾದುದರಿಂದ ಅದನ್ನು ಪ್ರಯೋಗಿಸಬಾರದೆಂದು ಹೇಳಿ, ಶ್ರೀರಾಮನು ಆ ರಾಕ್ಷಸನ ಮಾಯಾವಿದ್ಯೆಯನ್ನು ತಾನು ಛೇಧಿಸುವುದಾಗಿ ನುಡಿದನು. ಇದನ್ನು ಕೇಳಿದ ಇಂದ್ರಜಿತ್ತು ತನ್ನ ಉಪಾಯ ವಿಫಲವಾದೀತೆಂದು ಹೆದರಿ, ಯುದ್ಧಮಾಡುವುದನ್ನು ನಿಲ್ಲಿಸಿ ಲಂಕೆಗೆ ಹಿಂದಿರುಗಿದನು.

ಲಂಕೆಯಲ್ಲಿ ಕ್ಷಣಕಾಲ ವಿಶ್ರಮಿಸಿಕೊಂಡ ಮೇಲೆ ಮಾಯಾವಿಯಾದ ಇಂದ್ರಜಿತ್ತು ರಾಮಲಕ್ಷ್ಮಣರಿಗೆ ದಿಗ್ಬ್ರಾಂತಿಯುಂಟಾಗುವಂತಹ ಉಪಾಯವೊಂದನ್ನು ಅಲೋಚಿಸಿದನು. ತನ್ನ ಮಾಯಾ ವಿದ್ಯೆಯಿಂದ ಅವನು ಸೀತೆಯ ಆಕಾರವನ್ನು ಸೃಷ್ಟಿಸಿದನು ಅದನ್ನು ರಥದಲ್ಲಿಟ್ಟು ಅವನು ಸೀತೆಯ ಆಕಾರವನ್ನು ಸೃಷ್ಟಿಸಿದನು. ಅದನ್ನು ರಥದಲ್ಲಿಟ್ಟುಕೊಂಡು ಯುದ್ದರಂಗವನ್ನು ಪ್ರವೇಶಿಸಿ, ವಾನರರ ಇದಿರಿನಲ್ಲಿಯೆ ಆ ಮಾಯಾ ಸೀತೆಯನ್ನು ವಧಿಸಲು ಕದ್ಯೂಕ್ತನಾದನು. ವಾನರಸೇನೆಯ ಮುಂದುಗಡೆಯಲ್ಲಿಯೆ ಇದ್ದ ಆಂಜನೇಯನಿಗೆ ಆ ಕಪಟಸೀತೆಯ ಆಕಾರ ಕಾಣಿಸಿತು. ಆತನು ಆಕೆಯೆ ನಿಜವಾದ ಸೀತೆಯೆಂದು ಭ್ರಮಿಸಿ, ಆಕೆಯ ವಿಪತ್ತಿಗಾಗಿ ಕಣ್ಣೀರು ಸುರಿಸಿದನು. ವಾನರರನ್ನು ಕಾಣುತ್ತಲೆ ಇಂದ್ರಜಿತ್ತು ಹಿರಿದ ಖಡ್ಗವನ್ನು ಹಿಡಿದು ಕಪಟಸೀತೆಯ ಕೇಶರಾಶಿಯನ್ನು ಹಿಡೆದೆಳೆಯುತ್ತಾ ವಾನರರ ಮೇಲೆ ಬಾಣದ ಮಳೆಯನ್ನು ಸುರಿಸಿದನು. ರಥದಲ್ಲಿದ್ದ ಕಪಟದ ಹೆಣ್ಣು “ರಾಮ! ರಾಮ!” ಎಂದು ದುಃಖಭರದಿಂದ ಕೂಗಿಡುತ್ತಿದ್ದಳು. ಅದನ್ನು ಕಂಡು ಮಾರುತಿ ಕಣ್ಣೀರು ಸುರಿಸುತ್ತಾ” ಎಲವೋ ದುರ್ಮಾರ್ಗ, ನಿನ್ನ ಸರ್ವನಾಶಕ್ಕಾಗಿ ಆ ಜಗನ್ಮಾತೆಯ ಕೇಶರಾಶಿಯನ್ನು ಎಳೆದಾಡುತ್ತಿರುವೆ. ನಿನ್ನ ಪಾಪ ಮಿತಿಮೀರಿತು. ಸ್ತ್ರೀವಧೆಗೆ ನಿನ್ನ ಮನಸ್ಸು ಹೇಗೆ ಒಪ್ಪಿತು? ನೀನಿನ್ನು ಕ್ಷಣಕಾಲವೂ ಭೂಮಿಯಮೇಲೆ ಇರಬಾರದು” ಎಂದು ಹೇಳಿ ಅವನನ್ನು ಕೊಲ್ಲುವುದಕ್ಕಾಗಿ ಅವನ ಬಳಿಗೆ ನುಗ್ಗಿದನು. ಆಗ ಇಂದ್ರಜಿತ್ತು ಆತನನ್ನು ಕುರಿತು – “ಎಲವೊ ವಾನರ, ನೀವು ಸೀತೆಗಾಗಿಯೆ ಅಲ್ಲವೆ ಇಲ್ಲಿಗೆ ಬಂದುದು” ಇಗೋ ಮೊದಲು ಇವಳನ್ನು ಕೊಲ್ಲುತ್ತೇನೆ. ಅನಂತರ ರಾಮಲಕ್ಷ್ಮಣರು ನನ್ನ ಬಾಣಕ್ಕೆ ಬಲಿಯಾಗುತ್ತಾರೆ. ಅವರಿಬ್ಬರಾದ ಮೇಲೆ ನಿನ್ನ ಮತ್ತು ಸುಗ್ರೀವನ ಸರದಿ. ನೀವೆಲ್ಲರೂ ತೀರಿದ ಮೇಲೆ ವಿಭೀಷಣನನ್ನು ವಿಚಾರಿಸಿಕೊಳ್ಳುತ್ತೇನೆ”. ಹೀಗೆಂದು ಹೇಳುತ್ತಾ ಆ ರಾಕ್ಷಸನು ತನ್ನ ಕತ್ತಿಯಿಂದ ಮಾಯಾಸೀತೆಯ ತಲೆಯನ್ನು ಕತ್ತರಿಸಿ ನೆಲಕ್ಕೊಗೆದನು.

ಇಂದ್ರಜಿತ್ತುವಿನ ಕ್ರೂರಕಾರ್ಯವನ್ನು ಕಂಡು ಹನುಮಂತನು ರೋಷಾವೇಶದಿಂದ ರಾಕ್ಷಸರನ್ನೆಲ್ಲ ಹುಡಿಗಟ್ಟಿದನಾದರೂ ಆತನಿಗೆ ಯುದ್ಧದಲ್ಲಿ ಆಸಕ್ತಿ ಕಡಿಮೆಯಾಯಿತು. “ಯಾವ ದೇವಿಯ ನಿಮಿತ್ತವಾಗಿ ಈ ಯುದ್ಧ ಆರಂಭವಾಯಿತೊ ಆಕೆಯು ಮೃತಿಹೊಂದಿದ ಮೇಲೆ ಇನ್ನು ಯುದ್ಧದಿಂದ ಏನು ಪ್ರಯೋಜನ? ಈ ವೃತ್ತಾಂತವನ್ನು ಸುಗ್ರೀವನಿಗೂ ಶ್ರೀರಾಮಲಕ್ಷ್ಮಣರಿಗೂ ತಿಳಿಸುವುದೊಂದೇ ನಾನೀಗ ಮಾಡಬೇಕಾದ ಕಾರ್ಯ” ಎಂಬುದಾಗಿ ಯೋಚಿಸಿದ ಆ ಮಾರುತಿ ಕಪಿವೀರರೊಡನೆ ಹಿಂದಿರುಗಿದನು. ತನ್ನ ಉಪಾಯ ಫಲಿಸಿದುದಕ್ಕಾಗಿ ಇಂದ್ರಜಿತ್ತು ಅತ್ಯಂತ ಸಂತುಷ್ಟನಾಗಿ, ಚೈತ್ಯನಿಕುಂಭಿಲವೆಂಬ ದೇವಸ್ಥಾನವನ್ನು ಕುರಿತು ಹೊರಟವನಾದನು. ಅಲ್ಲಿ ಆತನು ದೊಡ್ಡ ಹೋಮವೊಂದನ್ನು ಮಾಡಲು ಉಪಕ್ರಮಿಸಿದನು.

ಮಾರುತಿ ತನ್ನ ಅನುಯಾಯಿಗಳೊಡನೆ ಉದ್ವಿಗ್ನಹೃದಯದಿಂದ ಶ್ರೀರಾಮಚಂದ್ರನ ಬಳಿಗೆ ಬಂದು ದಾರುಣ ದುಃಖದಿಂದ “ಪ್ರಭು, ಮಹಾ ಅನರ್ಥವಾಗಿಹೋಯಿತು. ರಾವಣನ ಮಗನಾದ ಇಂದ್ರಜಿತ್ತು ನಮ್ಮೊಡನೆ ಯುದ್ಧವಾಡುತ್ತಿರುವಾಗ, ನಮ್ಮೆದುರಿನಲ್ಲಿಯೆ ಸೀತಾಮಾತೆಯ ಶಿರಚ್ಛೇದ ಮಾಡಿದನು. ಆ ಭಯಂಕರ ಕೃತ್ಯವನ್ನು ಕಣ್ಣಾರೆ ಕಂಡು, ಇನ್ನು ಯುದ್ಧಮಾಡಲು ಮನಸ್ಸಾಗದೆ ನಿನಗೆ ಸುದ್ದಿಯನ್ನು ಕೊಡಲು ಹೊರಟುಬಂದೆವು” ಎಂದನು. ಆ ಮಾತುಗಳು ಕಿವಿಗೆ ತಾಕುತ್ತಿದ್ದಂತೆಯೆ ಶ್ರೀರಾಮನು ಮೂರ್ಛಿತನಾಗಿ ಬುಡಕಡಿದ ಮರದಂತೆ ಕೆಳಕ್ಕೆ ಬಿದ್ದನು. ಸುತ್ತಲೂ ನೆರೆದಿದ್ದ ವಾನರರು ಕಣ್ಣೀರುಗರೆಯುತ್ತಾ ಆತನಿಗೆ ಶೈತ್ಯೋಪಚಾರಮಾಡಿದರು. ಅಣ್ಣನ ದುರವಸ್ಥೆಯನ್ನು ಕಂಡು ಲಕ್ಷ್ಮಣನೂ ಕಂಗಾಲಾದನು. ಅಣ್ಣನನ್ನು ಎತ್ತಿ ತೊಡೆಯಮೇಲೆ ಮಲಗಿಸಿಕೊಂಡು ಮಿತಿಯಿಲ್ಲದ ಚಿಂತೆಯಲ್ಲಿ ಮುಳುಗಿಹೋದನು. ಧರ್ಮದ ಮೂರ್ತಿಯಂತಿದ್ದ ಅಣ್ಣನಿಗೆ ಈ ದುರವಸ್ಥೆ ಪ್ರಾಪ್ತವಾದಮೇಲೆ, ಧರ್ಮವೆಂಬುದು ಕೇವಲ ಅರ್ಥವಿಲ್ಲದ ಮಾತು ಎನ್ನಿಸಿತು ಆತನಿಗೆ. ದುರ್ಮಾರ್ಗನಾದ ರಾವಣನು ವರ್ಧಿಸುತ್ತಾ, ಶ್ರೀರಾಮನಿಗೆ ಪತ್ನಿವಿಯೋಗದಂತಹ ದಾರುಣ ದುಃಖ ಪ್ರಾಪ್ತವಾದಮೇಲೆ ಲೋಕದಲ್ಲಿ ಪುಣ್ಯಪಾಪಗಳಿಗೆ ಬೆಲೆಯೆಲ್ಲಿಯದು? ಆ ಕ್ಷಣದಲ್ಲಿ ರಾವಣನನ್ನೂ ಅವನ ಲಂಕೆಯನ್ನೂ ಸುಟ್ಟು ಹಾಕಬೇಕೆನ್ನುವಷ್ಟು ರೋಷಹುಟ್ಟಿತು ಆತನಿಗೆ. ಅಣ್ಣನನ್ನು ಕುರಿತು “ಪೂಜ್ಯನೆ, ದುಃಖವನ್ನು ತೊರೆ. ಈ ನಿಮಿಷದಲ್ಲಿಯೆ ರಾಕ್ಷಸ ವಂಶವೆಲ್ಲವನ್ನೂ ನಿರ್ಮೂಲಮಾಡಿ ನಿನ್ನ ದುಃಖಕ್ಕೆ ಪ್ರತೀಕಾರಮಾಡುತ್ತೇನೆ” ಎಂದನು. ಅಷ್ಟರಲ್ಲಿ ಆತನಿಗೆ ತನ್ನ ಅಣ್ಣನು ಸಾಮಾನ್ಯ ಪುರಷನಲ್ಲವೆಂಬ ವಿವೇಕವುದಿಸಿತು. ಆದ್ದರಿಂದ ಮಾತಿನ ಸರಣಿಯನ್ನು ಬದಲಾಯಿಸಿ “ಹೇ ಪುರುಷೋತ್ತಮ, ನೀನು ಪರಮಾತ್ಮ ಸ್ವರೂಪಿಯಂಬುದನ್ನು ಮರೆತೆಯಾ? ಹೇ ಅನಘನೆ, ಮಹಾಮಹಿಮೆಯುಳ್ಳ ನಿನ್ನ ಆತ್ಮವನ್ನು ನೀನು ಅರಿತವನಲ್ಲವೆ? ನಿನಗೆ ಈ ದುಃಖವೆಲ್ಲಿಯದು? ಏಳು, ಅಣ್ಣ! ಸೀತಾದೇವಿಯ ಮರಣವೃತ್ತಾಂತವನ್ನು ಕೇಳಿ ನಿನಗೆ ಪ್ರಿಯವಾಗಲೆಂದು ನಾನು ರೋಷಾವಿಷ್ಟನಾಗಿ ಮಾತನಾಡಿದೆನು. ಮಹಾಜ್ಞಾನಿಯಾದ ನೀನು ಮೇಲಕ್ಕೆದ್ದು ಮುಂದಿನ ಕಾರ್ಯವನ್ನು ಕೈಕೊಳ್ಳು” ಎಂದನು.

ಲಕ್ಷ್ಮಣನು ಶ್ರೀರಾಮಚಂದ್ರನನ್ನು ಸಮಾಧಾನಮಾಡುತ್ತಾ ಇರಲು, ವಿಭೀಷಣನು ವಾನರಸೇನೆಯನ್ನೆಲ್ಲ ರಣರಂಗದಲ್ಲಿ ಉಚಿತಸ್ಥಾನಗಳಲ್ಲಿ ನಿಲ್ಲಸಿ, ಅಲ್ಲಿಗೆ ಬಂದನು. ಶ್ರೀರಾಮಚಂದ್ರನು ಮೂರ್ಛಿತನಾಗಿ ಬಿದ್ದಿರುವುದನ್ನೂ ಲಕ್ಷ್ಮಣನು ಆತನನ್ನು ತೊಡೆಯಮೇಲೆ ಮಲಗಿಸಿಕೊಂಡು ಕಣ್ಣೀರುಗರೆಯುತ್ತಿದ್ದುದನ್ನೂ ಕಂಡು ಆತನಿಗೆ ಆಶ್ಚರ್ಯವಾಯಿತು. ಆ ವೇಳೆಗೆ ಸುಗ್ರೀವನು ಅಲ್ಲಿಗೆ ಬಂದನು. ನಡೆದ ಸಮಾಚಾರವನ್ನು ಲಕ್ಷ್ಮಣನು ಅವರಿಬ್ಬರಿಗೂ ಬಿಕ್ಕಿಬಿಕ್ಕಿ ಅಳುತ್ತಾ ತಿಳಿಸಿದನು. ಅದನ್ನು ಕೇಳುತ್ತಲೆ ವಿಭೀಷಣನು ಅಳುವನ್ನು ನಿಲ್ಲಿಸುವಂತೆ ಆತನಿಗೆ ತಿಳಿಸಿ “ಅಯ್ಯಾ ರಘುಕುಲೋತ್ತಮಾ, ನೀನು ಕೇಳಿರುವ ಸುದ್ದಿಯೆಲ್ಲವೂ ಸುಳ್ಳು ಸುದ್ದಿ. ಸೀತಾಹತ್ಯೆಯೆಂಬುದು ರಾಕ್ಷಸಮಾಯೆಯೆ ಹೊರತು ನಿಜವಲ್ಲ. ಸಮುದ್ರವನ್ನು ಬತ್ತಿಸುವುದು ಹೇಗೆ ಅಸಾಧ್ಯವೊ ಹಾಗೆ ಸೀತೆಯನ್ನು ವಧಿಸುವುದೆಂಬುದು ಆಗಹೋಗದ ಮಾತು. ಈ ಇಂದ್ರಜಿತ್ತು ನಿಕುಂಭಿಲಾ ಎಂಬ ದೇವಾಲಯದಲ್ಲಿ ಮಹಾಯಾಗವೊಂದನ್ನು ಆರಂಭಿಸಿದ್ದಾನೆ. ಆ ಯಾಗ ಸಂಪೂರ್ತಿಯಾದೊಡನೆಯೆ ಆತನು ದೇವಾದಾನವರಿಗೂ ಅಜೇಯನಾಗಿ ಹೋಗುತ್ತಾನೆ. ಆ ಕಾರ್ಯಕ್ಕೆ ನಿಮ್ಮಿಂದ ವಿಘ್ನಬಾರದಿರುವುದಕ್ಕಾಗಿಯೆ ಅವನು ಈ ಮಾಯೆಯಿಂದ ನಿಮ್ಮನ್ನು ಮೋಸಗೊಳಿಸಿದ್ದಾನೆ. ಈಗ ಈ ವ್ಯರ್ಥವಾದ ವ್ಯಸನವನ್ನು ತ್ಯಜಿಸಿ, ಮೊದಲು ಆ ರಾಕ್ಷಸಕುಮಾರನನ್ನು ಸಂಹರಿಸುವ ಕಾರ್ಯವನ್ನು ಕೈಕೊಳ್ಳಿರಿ” ಎಂದನು.

ವಿಭೀಷಣನ ಮಾತುಗಳನ್ನು ಕೇಳಿ ಎಲ್ಲರಿಗೂ ಸಮಾಧಾನವಾಯಿತು. ಮೈತಿಳಿದೆದ್ದ ಶ್ರೀರಾಮಚಂದ್ರನು ಮತ್ತೊಮ್ಮೆ ವಿಭೀಷಣನಿಂದ ಸಮಾಚಾರವನ್ನೆಲ್ಲಾ ವಿವರವಾಗಿ ಅರಿತುಕೊಂಡು, ಆತನ ಸೂಚನೆಯಮತೆ ಲಕ್ಷ್ಮಣನನ್ನು ಇಂದ್ರಜಿತ್ತುವಿನ ಮೇಲೆ ಯುದ್ಧಕ್ಕೆ ಕಳುಹಿಸಲು ಸಿದ್ಧನಾದನು. ವಿಭೀಷಣನನ್ನು ಕುರಿತು ಆತನು “ಎಲೈ ರಾಕ್ಷಸರಾಜನೆ, ಇಂದ್ರಜಿತ್ತುವಿನ ಭಯಂಕರವಾದ ಮಾಯೆಯನ್ನು ನಾನು ಬಲ್ಲೆ. ರಣಪಂಡಿತನಾದ ಆ ರಾಕ್ಷಸಕುಮಾರನು ಬ್ರಹ್ಮಾಸ್ತ್ರದ ಮಹಿಮೆಯಿಂದ ಈಗಾಗಲೆ ದೇವದಾನವರಿಗೂ ಅಜೇಯನಾಗಿದ್ದಾನೆ. ಗಗನದಲ್ಲಿಯೆ ನಿಂತು ಮೋಡ ಮುಚ್ಚಿದ ದಿನಕರನಂತೆ, ಯಾರಿಗೂ ಕಾಣದಂತೆಯೆ ಶತ್ರುಗಳೊಡನೆ ಹೋರಾಡಬಲ್ಲನೆಂಬುದೂ ನನ್ನ ಅನುಭವಕ್ಕೆ ಬಂದಿದೆ” ಎಂದು ಹೇಳಿ ಲಕ್ಷ್ಮಣನ ಕಡೆ ತಿರುಗಿ “ವತ್ಸ, ಹನುಮಂತನನ್ನೂ ಜಾಂಬವಂತನನ್ನೂ ವಾನರಸೇನೆಯನ್ನೂ ನಿನ್ನೊಡನೆ ಕರೆದುಕೊಂಡು ಈಗಲೇ ಆ ಇಂದ್ರಜಿತ್ತುವಿನ ವಧೆಗಾಗಿ ಪ್ರಯಾಣಮಾಡು. ಮಹಾತ್ಮನಾದ ವಿಭೀಷಣನು ನಿನಗೆ ದಾರಿ ತೋರಿಸುತ್ತಾನೆ” ಎಂದು ಹೇಳಿದನು. ಲಕ್ಷ್ಮಣನು ಅಣ್ಣನ ಮಾತಿಗೆ “ಮಹಾಪ್ರಸಾದ” ಎಂದು ಹೇಳಿ, ದಿವ್ಯವಾದ ಕವಚವನ್ನು ತೊಟ್ಟು, ದಿವ್ಯವಾದ ಧನುರ್ಭಾಣಗಳನ್ನು ಧರಿಸಿದನು. ಅನಂತರ ಅಣ್ಣನ ಪಾದಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಆತನಿಂದ ಆಶೀರ್ವಾದವನ್ನು ಪಡೆದು ಪ್ರಯಾಣೋನ್ಮುಖನಾದನು.

* * *