ಧಗಧಗನೆ ಉರಿಯುತ್ತಾ ಕಿಡಿಗಾರುತ್ತಿದ್ದ ಐಂದ್ರಾಸ್ತ್ರವು ನಿವಾರಿಸಲಸಾಧ್ಯವಾಗಿ ನುಗ್ಗಿ ಇಂದ್ರಜಿತ್ತುವನ್ನು ವಧಿಸಿತು.

ರಾಕ್ಷಸವೀರನಾದ ವಿಭೀಷಣನ ಪರಾಮರ್ಶದಂತೆ ಲಕ್ಷ್ಮಣನು ಸೈನ್ಯ ಸಮೇತನಾಗಿ ನಿಕುಂಭಿಲಾ ದೇವಾಲಯದ ಬಳಿಗೆ ಬಂದನು. ಅದರ ದ್ವಾರದಲ್ಲಿ ಸರ್ವಸಜ್ಜಿತವಾದ ದೊಡ್ಡ ರಾಕ್ಷಸಸೇನೆ ಯುದ್ಧಕ್ಕೆ ಸಿದ್ಧವಾಗಿ ನಿಂತಿತ್ತು. ವಿಭೀಷಣನು ಆ ಸೇನೆಯೊಡನೆ ಹೋರಾಟವನ್ನು ಆರಂಭಿಸುವಂತೆ ವಾನರರ ಸೇನೆಗೆ ಹೇಳಿ ಲಕ್ಷ್ಮಣನನ್ನು ಕುರಿತು, “ರಘೋತ್ತಮಾ, ಶತ್ರುಸೈನ್ಯ ಚದುರುವವರೆಗೂ ನಮಗೆ ಇಂದ್ರಜಿತ್ತು ಕಾಣುವುದಿಲ್ಲ. ಆದ್ದರಿಂದ ದಿವ್ಯವಾದ ಬಾಣಗಳನ್ನು ಪ್ರಯೋಗಿಸಿ, ಈ ರಾಕ್ಷಸಸೈನ್ಯವನ್ನೆಲ್ಲಾ ಭೇದಿಸುವವನಾಗು” ಎಂದನು. ಒಂದು ಕಡೆ ವಾನರರ ಕಲ್ಲುಮರಗಳ ಸುರಿಮಳೆ, ಮತ್ತೊಂದು ಕಡೆ ಲಕ್ಷ್ಮಣನ ಬಾಣಗಳ ಬಿರುಮಳೆ, ಇವುಗಳಿಗೆ ಸಿಕ್ಕಿ ರಾಕ್ಷಸಸೈನ್ಯವೆಲ್ಲವೂ ಧೂಳೆದ್ದು ಹೋಗುತ್ತಿರಲು, ಯಾಗ ಮಾಡುತ್ತಾ ಕುಳಿತಿದ್ದ ಇಂದ್ರಜಿತ್ತು ಇದನ್ನು ನೋಡಿ ಸಹಿಸಲಾರದೆ, ಯಾಗವನ್ನು ಮಧ್ಯಕ್ಕೇ ಬಿಟ್ಟು ಲಕ್ಷ್ಮಣನ ಮೇಲೆ ಯುದ್ಧಕ್ಕೆ ಹೊರಟುಬಂದನು. ಶತ್ರುದಮನಕ್ಕಾಗಿ ಆತನು ರಥವೇರಿದೊಡನೆಯೆ, ಕಂಗೆಟ್ಟಿದ್ದ ರಾಕ್ಷಸಸೇನೆಯೆಲ್ಲವೂ ಮತ್ತೊಮ್ಮೆ ಉತ್ಸಾಹಗೊಂಡು ಸಿಂಹನಾದ ಮಾಡಿತು.

ರಾಕ್ಷಸರ ಸಿಂಹನಾದವನ್ನು ಕೇಳಿ ವಾಯುಪುತ್ರನಿಗೆ ರೇಗಿತು. ಆತನು ಮಹಾವೃಕ್ಷವೊಂದನ್ನು ತೆಗೆದುಕೊಂಡು ರಾಕ್ಷಸರನ್ನೆಲ್ಲಾ ಸದೆಬಡಿಯಹತ್ತಿದನು. ಅದನ್ನು ಕಂಡು ಇಂದ್ರಜಿತ್ತು ತನ್ನ ರಥವನ್ನು ಅವನ ಬಳಿಗೆ ಹರಿಸುವಂತೆ ಸಾರಥಿಗೆ ಆಜ್ಞಾಪಿಸಿ ಅವನ ಸಮೀಪವನ್ನು ಸಾರುತ್ತಲೆ ಕ್ರೂರವಾದ ಆಯುಧಗಳಿಂದ ಮಾರುತಿಯನ್ನು ಪ್ರಹರಿಸಿದನು. ಆದರೆ ಮಾರುತಿ ಆ ಪ್ರಹಾರಗಳನ್ನು ಲೆಕ್ಕಿಸದೆ, ಶೂರನಾದರೆ ತನ್ನೊಡನೆ ಮಲ್ಲ ಕಾಳಗಕ್ಕೆ ನಿಲ್ಲುವಂತೆ ಎದುರಾಳಿಯನ್ನು ಮೂದಲಿಸಿದನು. ಅವನ ಮೂದಲಿಕೆಯಿಂದ ಕೆರಳಿದ ಇಂದ್ರಜಿತ್ತು ಆ ಕಪಿವೀರನನ್ನು ತೀರಿಸಿಬಿಡಬೇಕೆಂದು ದಿವ್ಯಾಸ್ತ್ರವೊಂದನ್ನು ಕೈಗೆ ತೆಗೆದುಕೊಂಡನು. ಇದು ವಿಭೀಷಣನಿಗೆ ಕಾಣಬರಲು, ಆತನು ಆ ವಾನರವೀರನನ್ನು ರಕ್ಷಿಸುವಂತೆ ಲಕ್ಷ್ಮಣನನ್ನು ಎಚ್ಚಿರಿಸಿದನು. ಇಷ್ಟೆ ಅಲ್ಲ, ತಾನೆ ಲಕ್ಷ್ಮಣನಿಗೆ ದಾರಿತೋರುತ್ತಾ ಆತನನ್ನು ಇಂದ್ರಜಿತ್ತುವಿನ ಬಳಿಗೆ ಕರೆತಂದನು.

ಇಂದ್ರಜಿತ್ತು ಯುದ್ಧಮಾಡುತ್ತಾ ನಿಂತಿದ್ದ ಎಡೆಯಲ್ಲಿಯೇ ಒಂದು ದೊಡ್ಡ ಆಲದಮರವಿತ್ತು. ಅದರ ಅಡಿಯಲ್ಲಿಯೆ ಆತನು ಯಜ್ಞಕಾರ್ಯವನ್ನು ನಡೆಸುತ್ತಾ ಇದ್ದುದು. ಭೂತಬಲಿಯನ್ನಿತ್ತು ಯಾಗವನ್ನು ಸಾಂಗಗೊಳಿಸಿದನೆಂದರೆ, ಆತನು ಅದೃಶ್ಯನಾಗಿ ಅಜೇಯನಾಗಿಬಿಡುತ್ತಿದ್ದನು. ಆದ್ದರಿಂದ ಮೊದಲೇ ಅವನನ್ನು ಕೊಲ್ಲಬೇಕೆಂದುಕೊಂಡು ನಿಂತಿದ್ದೇನೆ. ಸಾಧ್ಯವಿದ್ದರೆ ನನ್ನೊಡನೆ ಯುದ್ಧ ಮಾಡ” ಎಂದನು. ಇಂದ್ರಜಿತ್ತು ಅವನ ಕಡೆ ತಿರುಗಿ, ಬಳಿಯಲ್ಲೆ ನಿಂತಿದ್ದ ತನ್ನ ಚಿಕ್ಕಪ್ಪನನ್ನು ಕಂಡು ಅತ್ಯಂತ ಕ್ರೋಧದಿಂದ “ಎಲಾ ವಿಭೀಷಣಾ, ನೀನು ನನಗೆ ಚಿಕ್ಕ ತಂದೆ. ಆದರೂ ನನಗೆ ಪರಮದ್ರೋಹವನ್ನು ಬಗೆದು ಶತ್ರುವನ್ನು ಇಲ್ಲಿಗೆ ಕರೆತಂದಿರುವೆ. ಸ್ನೇಹ, ಕುಲ, ಬಾಂಧವ್ಯಗಳೊಂದನ್ನೂ ಗಮನಿಸದ ಬಾಹಿರ ನೀನು. ಸ್ವಜನರನ್ನು ತ್ಯಜಿಸಿ ಶತ್ರುಗಳ ಸೇವಕನಾಗಿರುವ ನಿನಗೆ ಯುಕ್ತಾಯಕ್ತಾ ವಿವೇಚನೆಯೆ ಇಲ್ಲದೆ ಹೋಯಿತಲ್ಲವೆ? ಈಗಲಾದರೂ ನಿನ್ನ ಹೀನಕಾರ್ಯಕ್ಕಾಗಿ ಪಶ್ಚಾತಾಪಪಟ್ಟು. ಶತ್ರುಗಳ ಆಶ್ರಯವನ್ನು ತ್ಯಯಜಿಸು. ಬಂಧುದ್ರೋಹಕ್ಕೆ ಮನಸ್ಸು ಮಾಡಬೇಡ” ಎಂದನು.

ಇಂದ್ರಜಿತ್ತುವಿನ ಕಟುನುಡಿಗಳಿಂದ ನೊಂದ ವಿಭೀಷಣನು ಅವನನ್ನು ಕುರಿತು “ಎಲವೋ ದುರಾತ್ಮ, ನಿನ್ನ ಸ್ತೋತ್ರಕ್ಕಾಗಲಿ ನಿಂದೆಗಾಗಲಿ ಏನೂ ಬೆಲೆಯಿಲ್ಲ. ರಾವಣಾಸುರನ ಮಗನಾದ ನಿನ್ನ ಬಾಯಲ್ಲಿ ಇನ್ನೆಂತಹ ಮಾತು ಹೊರಟೀತು? ನಾನು ರಾಕ್ಷಸವಂಶದಲ್ಲಿಯೆ ಹುಟ್ಟಿದರೂ ಪರಪೀಡನೆಗೆ ಹೇಸುತ್ತೇನೆ. ಸಮಸ್ತಭೂತಗಳ ಶ್ರೀಯಸ್ಸಿಗಾಗಿ ನಾನು ಶ್ರೀರಾಮಮೂರ್ತಿಯನ್ನು ಆಶ್ರಯಿಸಿದೆನೆ ಹೊರತು ನನ್ನ ಸ್ವಂತ ಸುಖವನ್ನು ಸಾಧಿಸುವುದಕ್ಕಲ್ಲ. ಪಾಪಕರ್ಮಗಳಿಗೆ ಹೇಸಿ, ಅವುಗಳಿಂದ ದೂರನಾಗುವುದಕ್ಕಾಗಿ ನಿಮ್ಮನ್ನು ತ್ಯಜಿಸಬೇಕಾಯಿತು. ಇನ್ನು ಆ ಮಾತನ್ನೆತ್ತಿ ಪ್ರಯೋಜನವಿಲ್ಲ, ಇಗೊ ನಿನ್ನ ಪಾಲಿನ ಮೃತ್ಯುವಿನಂತೆ ಲಕ್ಷ್ಮಣನು ನಿನ್ನ ಇದಿರಿಗೆ ನಿಂತಿದ್ದಾನೆ. ಆತನೊಡನೆ ಯುದ್ಧಕ್ಕೆ ನಿಲ್ಲು” ಎಂದನು.

ಚಿಕ್ಕಪ್ಪನ ಮಾತುಗಳಿಂದ ಇಂದ್ರಜಿತ್ತು ಕ್ರೋಧತಾಮ್ರಾಕ್ಷನಾಗಿ ನಿಶಿತವಾದ ಬಾಣಗಳನ್ನು ಬಿಲ್ಲಿನಲ್ಲಿ ಹೂಡುತ್ತಾ ಲಕ್ಷ್ಮಣನನ್ನು ಕುರಿತು “ಅಯ್ಯ ಲಕ್ಷ್ಮಣ, ಹತ್ತಿಯ ರಾಶಿಯನ್ನು ಸುಡುವ ಅಗ್ನಿಯಂತೆ ನಿನ್ನ ಅವಯವಗಳನ್ನೆಲ್ಲ ದಹಿಸಿಹಾಕುವ ಬಾಣಗಳು ನಿನ್ನ ಪ್ರಾಣಗಳನ್ನು ಹೀರಲು ಬರುತ್ತಿವೆ. ಯಮಾಲಯಕ್ಕೆ ಪ್ರಸ್ಥಾನ ಹೊರಡಲು ಸಿದ್ಧನಾಗು. ಹಿಂದೊಮ್ಮೆ ರಾತ್ರಿಯ ಯುದ್ಧದಲ್ಲಿ ನಿನ್ನನ್ನೂ ನಿನ್ನ ಅಣ್ಣನನ್ನೂ ನೆಲ್ಲಕ್ಕೆ ಕೆಡವಿ ನೀವು ಸತ್ತೇಹೋದಿರೆಂದುಕೊಂಡಿದ್ದೆ. ಆದರೆ ನೀವಿನ್ನೂ ಬದುಕಿರುವಿರಲ್ಲವೆ? ಅವನನ್ನು ಛೀಗುಟ್ಟುತ್ತಾ” ಎಲವೋ ರಾಕ್ಷಸಾಧಮ, ಅಗೋಚರನಾಗಿ ಕಳ್ಳನಂತೆ ನಮ್ಮ ಮೇಲೆ ಬಾಣಪ್ರಯೋಗ ಮಾಡಿದುದನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ನಾಚಿಕೆಯಾಗುವುದಿಲ್ಲವೇ? ಈಗ ನಾನು ಪ್ರತ್ಯಕ್ಷವಾಗಿ ಎದುರಿಗೆ ನಿಂತಮೇಲೆ ನೀನು ಬದುಕಿ ಹಿಂದಿರುಗುವುದುಂಟೆ? ಇಗೋ, ಇದೀಗ ಕೂರಂಬುಗಳಿಂದ ನಿನ್ನ ಇಹಜೀವನವನ್ನು ಸಮಾಪ್ತಿಗೊಳಿಸುತ್ತೇನೆ” ಎಂದನು.

ಪರಸ್ಪರ ಮೂದಲಿಕೆಯ ಮಾತುಗಳಿಂದ ಇಬ್ಬರ ಕ್ಷಾತ್ರವೂ ಕೆರಳಿತು. ಶೂರರಾದ ಆ ಯೋಧರಿಬ್ಬರೂ ತಮ್ಮ ಬಾಣಕೌಶಲ್ಯವನ್ನು ಮರೆಯತೊಡಗಿದರು. ಒಬ್ಬರನ್ನೊಬ್ಬರು ಜಯಿಸಬೇಕೆಂಬ ಉತ್ಸಾಹದಿಂದ ಇಬ್ಬರೂ ವಿಜೃಂಭಿಸಿದರು. ಪರಸ್ಪರ ಬಾಣಾಘಾತದಿಂದ ಇಬ್ಬರ ದೇಹಗಳೂ ರಕ್ತದಲ್ಲಿ ತೊಯ್ದುವು. ಮೇಘಗಳಿಂದ ಸುರಿವ ಮಳೆಯಂತೆ ಇಬ್ಬರ ಧನುಸ್ಸುಗಳಿಂದಲೂ ಬಾಣಗಳು ಸುರಿಯುತ್ತಿದ್ದುವು. ನಡುನಡುವೆ ಮೂದಲೆಯ ಮಾತುಗಳಿಂದ ಎದುರಾಳಿಯನ್ನು ಕೆರಳಿಸುತ್ತಾ ಇಬ್ಬರೂ ಸಮಸಮನಾಗಿ ಕಾದುತ್ತಿರಲು, ಬಾಣಗಳನ್ನು ಯಾವಾಗ ತೊಡುತ್ತಿದ್ದರೊ, ಯಾವಾಗ ಬಿಡುತ್ತಿದ್ದರೊ, ತಿಳಿಯದಷ್ಟು ಕೈಚಳಕ ಇಬ್ಬರದೂ. ಹೇಗೆ ಬಹಳ ಹೊತ್ತು ಕಾದುತ್ತಿರಲು, ಬರಬರುತ್ತಾ ಇಂದ್ರಜಿತ್ತುವಿನ ಶಕ್ತಿ ಕುಗ್ಗುತ್ತಾ ಬಂತು. ಆತನ ಮುಖ ಕಳೆಗೆಟ್ಟಿತು. ಅದೇ ಸಮಯದಲ್ಲಿಯ ವಿಭೀಷಣನು ಲಕ್ಷ್ಮಣನನ್ನು” ಸೌಮಿತ್ರಿ, ಇನ್ನು ನಿನ್ನ ಶತ್ರು ನೆಲಕ್ಕೊರಗಿದಂತೆಯೆ; ತೊಡು ದಿವ್ಯಾಸ್ತ್ರಗಳನ್ನು” ಎಂದು ಪ್ರೋತ್ಸಾಹಿಸಿದನು. ಇದರಿಂದ ಉತ್ತೇಜಿತನಾದ ಆತನು ತೀಕ್ಷ್ಣವಾದ ಬಾಣಗಳನ್ನು ಎದುರಾಳಿಯ ಮೇಲೆ ಎಸೆದನು. ವಜ್ರಾಯುಧದಂತಿದ್ದ ಆ ಬಾಣಗಳು ಸೋಕಿದೊಡನೆಯೆ ಪರ್ವತದಂತಿದ್ದ ಇಂದ್ರಜಿತ್ತುವಿನ ಇಂದ್ರಿಯಗಳೆಲ್ಲವೂ ಕಲಕಿದಂತಾಗಿ, ಕ್ಷಣಕಾಲ ಪ್ರಜ್ಞೆ ತಪ್ಪಿದಂತಾದನು. ಆದರೆ ಮರುಕ್ಷಣದಲ್ಲಿಯೆ ಚೇತರಿಸಿಕೊಂಡು, ಇಮ್ಮಡಿಯಾದ ಉತ್ಸಾಹದಿಂದ ಏಳು ಬಾಣಗಳಿಂದ ಲಕ್ಷ್ಮಣನನ್ನೂ ಹತ್ತು ಬಾಣಗಳಿಂದ ಹನುಮಂತನನ್ನೂ ನೂರು ಬಾಣಗಳಿಂದ ವಿಭೀಷಣನನ್ನೂ ಘಾತಿಸಿದನು.

ಇಂದ್ರಜಿತ್ತುವಿನ ಬಾಣಘಾತವನ್ನು ಸೈರಿಸಿಕೊಂಡು “ಎಲವೊ ರಾಕ್ಷಸ, ನಿನ್ನ ಬಾಣಗಳು ನನ್ನ ಶರೀರಕ್ಕೆ ಸುಖಸ್ಪರ್ಶಗಳಾಗಿವೆ. ಯುದ್ಧದಲ್ಲಿ ವಿಜಯ ಸಾಧಿಸಬೇಕೆನ್ನುವವನು ಇಂತಹ ದುರ್ಬಲ ಯುದ್ಧವನ್ನು ಮಾಡುವುದೆ?” ಎಂದು ಹೇಳಿ ಲಕ್ಷ್ಮಣನು ತೀಕ್ಷ್ಣವಾದ ಬಾಣವನ್ನು ಪ್ರಯೋಗಿಸಿದನು. ಅದರಿಂದ ಇಂದ್ರಜಿತ್ತುವಿನ ಕವಚವು ಪುಡಿಪುಡಿಯಾಗಿ ಅಂತರಿಕ್ಷದಿಂದ ಉದುರುವ ನಕ್ಷತ್ರಗಳಂತೆ ಕೆಳಕ್ಕೆ ಬಿದ್ದಿತು. ಎದುರಾಳಿಯ ಮಾತುಗಳಿಂದಲೂ ಅವನ ಬಾಣಪ್ರಯೋಗದಿಂದಲೂ ಕನಲಿದ ಇಂದ್ರಜಿತ್ತು ಮಹಾಸ್ತ್ರವೊಂದನ್ನು ಪ್ರಯೋಗಿಸಿ ಲಕ್ಷ್ಮಣನ ಕವಚವನ್ನು ಕತ್ತರಿಸಿ ಹಾಕಿದುದಲ್ಲದೆ ಮಹಾಸರ್ಪದಂತೆ ನಿಟ್ಟುಸಿರುಬಿಡುತ್ತಾ ಬಾಣವರ್ಷದಿಂದ ದಿಕ್ಕುಗಳನ್ನೆಲ್ಲಾ ತುಂಬಿಬಿಟ್ಟನು.

ಲಕ್ಷ್ಮಣ ಇಂದ್ರಜಿತ್ತುಗಳಲ್ಲಿ ಒಬ್ಬರೂ ಹಿಮ್ಮೆಟ್ಟುವಂತಿರಲಿಲ್ಲ. ಇಬ್ಬರೂ ಸಮಾನಬಲರೆ ಸರಿ. ಇಬ್ಬರ ದೇಹಗಳೂ ರಕ್ತದಲ್ಲಿ ತೊಯ್ದು ಹೂತ ಮುತ್ತುಗದ ಮರದಂತಾಗಿದ್ದರೂ ಅದನ್ನು ಲಕ್ಷಿಸದೆಯೆ ಇಬ್ಬರೂ ಸಮರಕರ್ಮದಲ್ಲಿ ತೊಡಗಿದ್ದಾರೆ. ಇಬ್ಬರಲ್ಲಿ ಒಬ್ಬರಾದರೂ ವಿಶ್ರಾಂತಿ ಬಯಸುವಂತಿಲ್ಲ. ನೋಡುವವರಿಗೆ ಯುದ್ಧ ಕೊನೆಗೊಳ್ಳುವುದೇ ಇಲ್ಲವೇನೊ ಎನ್ನಿಸಿತು. ಇದನ್ನು ಕಂಡು ವಿಭೀಷಣನು ಲಕ್ಷ್ಮಣನು ಸಹಾಯಕ್ಕಾಗಿ ಆತನ ಪಕ್ಕಕ್ಕೆ ಬಂದು ನಿಂತನು. ಆತನೂ ಆತನ ಅನುಚರರೂ ಇಂದ್ರಜಿತ್ತುವಿನ ಸಹಾಯಕರನ್ನು ಸಂಹರಿಸುವ ಕಾರ್ಯದಲ್ಲಿ ತೊಡಗಿದರು. ಅಲ್ಲದೆ ಆತನು ಕಪಿವೀರರನ್ನೂ ಕುರಿತು “ಎಲೈ ವಾನರವೀರರೆ, ರಾವಣನಿಗೆ ಬೆಂಬಲವಾಗಿ ಉಳಿದಿರುವವನು ಈ ಇಂದ್ರಜಿತ್ತು ಒಬ್ಬನೆ. ಇವನ ಸಂಹಾರದಲ್ಲಿ ಸ್ಥಿರಚಿತ್ತವುಳ್ಳವರಾಗಿ ಯುದ್ಧ ಮಾಡುವವರಾಗಿ. ಇವನೊಬ್ಬನು ಮಡಿದರೆ, ಇನ್ನು ಉಳಿಯುವವನು ರಾವಣನೊಬ್ಬನೆ. ಮಹಾಸಾಗರವನ್ನು ಗೋಷ್ಪಾದದಂತೆ ಭಾವಿಸಿ ದಾಟಿಬಂದಿರುವ ನಿಮಗೆ ಇನ್ನು ಉಳಿದಿರುವ ಕೆಲಸ ಗೋಷ್ಪಾದದಷ್ಟೆ. ಗರ್ವಾಂಧರಾದ ರಾಕ್ಷಸವೀರರನ್ನೆಲ್ಲಾ ಸಂಹರಿಸಿರುವಿರಿ. ಈ ಇಂದ್ರಜಿತ್ತುವೊಬ್ಬನನ್ನೂ ಅವರ ಹಿಂದೆ ಕಳುಹಿಸಿಬಿಡಿ. ನಾನೆ ಆ ಕಾರ್ಯವನ್ನು ಮಾಡುತ್ತಿದ್ದೆ. ಆದರೆ ನನ್ನ ಅಣ್ಣನ ಮಗನಾದುದರಿಂದ ಮನಸ್ಸು ಒಡಂಬಡದು. ಆ ಕಾರ್ಯವನ್ನು ಲಕ್ಷ್ಮಣ ಸ್ವಾಮಿಯೆ ನೆರವೇರಿಸಲಿ, ನೀವೆಲ್ಲರೂ ನನ್ನೊಡನೆ ಸೇರಿ ರಾಕ್ಷಸ ಯೋಧರನ್ನೆಲ್ಲಾ ವಧಿಸಿರಿ” ಎಂದು ಪ್ರೋತ್ಸಾಹಿಸಿದನು.

ವಿಭೀಷಣನ ಹಿತವಚನಗಳನ್ನು ಕೇಳಿ ವಾನರರೆಲ್ಲರೂ ಬಾಲವನ್ನು ನೆಲಕ್ಕೆ ಅಪ್ಪಳಿಸಿ ಕುಪ್ಪಳಿಸಿದರು. ಕಲ್ಲುಗಳೂ ಮರಗಳೂ ಆಕಾಶದಲ್ಲಿ ಹಾರಾಡಲು ಆರಂಭವಾಯಿತು. ರಾಕ್ಷಸರೂ ಹುರುಪಿನಿಂದ ಯುದ್ಧಮಾಡುತ್ತಿದ್ದರಾದರೂ ಹನುಮಂತನ ಕೈಲಿದ್ದ ಸಾಲವೃಕ್ಷ ಅವರನ್ನು ಒಂದು ಕಡೆಯಿಂದ ಸವರುತ್ತಾ ಬರುತ್ತಿರಲು, ಕ್ಷಣಕ್ಷಣಕ್ಕೂ ಅವರ ಸಂಖ್ಯೆ ಕಡಮೆಯಾಗುತ್ತಾ ಹೋಗುತ್ತಿತ್ತು. ಅತ್ತ ರಾಕ್ಷಸರ ತೊಂದರೆ ತಪ್ಪಿ, ತನ್ನ ಇದಿರಾಳಿಯೊಡನೆ ಮಾತ್ರ ಯುದ್ಧಮಾಡಲು ಅವಕಾಶ ಸಿಕ್ಕಿದುದಕ್ಕಾಗಿ ಲಕ್ಷ್ಮಣನು ಸಂತೋಷಿಸಿ, ನಾಲ್ಕು ನಿಶಿತವಾದ ಬಾಣಗಳನ್ನು ಪ್ರಯೋಗಿಸಿ, ಎದುರಾಳಿಯ ರಥಾಶ್ವಗಳನ್ನು ದಿಕ್ಕೆಡುವಂತೆ ಮಾಡಿದನು. ಅದರಿಂದ ಶತ್ರು ಚೇತರಿಸಿಕೊಳ್ಳುವಷ್ಟರಲ್ಲಿ ಆತನು ಮತ್ತೊಂದು ಕೂರಂಬಿನಿಂದ ಸಾರಥಿಯನ್ನು ಕಡಿದು ಕೆಳಕ್ಕೆ ಕೆಡವಿದನು. ಆದರೂ ಇಂದ್ರಜಿತ್ತು ಧೃತಿಗೆಡಲಿಲ್ಲ. ತಾನೇ ಸಾರಥ್ಯವನ್ನೂ ವಹಿಸಿ ಯುದ್ಧಮಾಡಲು ಆರಂಭಿಸಿದನು. ನಾಲ್ವರು ವಾನರ ಯೋಧರು ಜೀವದ ಹಂಗುದೊರೆದು ಆ ರಾಕ್ಷಸಕುಮಾರನ ರಥಕ್ಕೆ ಇದಿರಾಗಿ ಹೋಗಿ ರಭಸದಿಂದ ರಥಾಶ್ವಗಳ ಮೇಲೆ ಎರಗಿದರು. ಆ ವೇಗಕ್ಕೆ ಅವು ರಕ್ತಕಾರಿಕೊಂಡು ಸತ್ತುಬಿದ್ದುವು. ಅನಂತರ ಆ ನಾಲ್ವರೂ ಸೇರಿ ರಥವನ್ನು ಪುಡಿಗಟ್ಟಿ, ಶತ್ರುವಿನ ಬಾಣಾಘಾತಕ್ಕೆ ಸಿಕ್ಕದೆ ಲಕ್ಷ್ಮಣನ ಬಳಿಗೆ ಓಡಿ ಬಂದರು.

ಈಗ ಇಂದ್ರಜಿತ್ತು ನೆಲದಮೇಲೆಯೆ ನಿಂತು ಯುದ್ಧವನ್ನು ಮುಂದುವರಿಸಿದನು. ಆದರೆ ಹಾಗೆ ಬಹುಕಾಲ ಯುದ್ಧಮಾಡುವುದು ಸಾಧ್ಯವಿಲ್ಲವೆಂದು ತೋರಿದುದರಿಂದ ಆತನು ಶರವರ್ಷದಿಂದ ಕತ್ತಲೆಗವಿಯುವಂತೆ ಮಾಡಿ ಆ ಕತ್ತಲೆಯಲ್ಲಿ ಯಾರಿಗೂ ಕಾಣದಂತೆ ಲಂಕೆಗೆ ಹಿಂದಿರುಗಿ, ಹೊಸ ರಥವನ್ನೇರಿ ಯುದ್ಧರಂಗಕ್ಕೆ ಹಿಂದಿರುಗಿದನು. ಅವನ ಸಾಹಸವನ್ನು ಕಂಡು ಲಕ್ಷ್ಮಣಸ್ವಾಮಿ ಆಶ್ಚರ್ಯಪಡುತ್ತಿರಲು, ಆ ರಾಕ್ಷಸನು ನಿಶಿತ ಶರವರ್ಷದಿಂದ ವಾನರ ಸೈನ್ಯವನ್ನೆಲ್ಲ ಧ್ವಂಸಮಾಡತೊಡಗಿದನು. ಆಗ ಲಕ್ಷ್ಮಣನು ತನ್ನ ಬಿಲ್ಲುವಿದ್ಯೆಯ ಜಾಣ್ಮೆಯಿಂದ ಎದುರಾಳಿಯ ಬಿಲ್ಲನ್ನೇ ಕತ್ತರಿಸಿ ಹಾಕಿದನು. ಆದರೇನು? ಒಂದು ಹೋದರೆ ಮತ್ತೊಂದು ರಥದಲ್ಲಿ ಸಿದ್ಧವಾಗಿತ್ತು; ಅದನ್ನು ಧರಿಸಿ, ಆತನು ವಾನರರ ಪಾಲಿನ ಯಮನಂತೆ ವ್ಯವಹರಿಸತೊಡಗಿದನು. ಅವನನ್ನು ಅಡಗಿಸುವುದಕ್ಕಾಗಿ ಲಕ್ಷ್ಮಣನು ಬಾಣವೊಂದನ್ನು ಇಂದ್ರಜಿತ್ತುವಿನ ಎದೆಯಲ್ಲಿ ಕೀಲಿಸಿ, ಅದರಿಂದ ಆತನು ಎಚ್ಚತ್ತುಕೊಳ್ಳುವುದರೊಳಗಾಗಿ ಅವನ ಸಾರಥಿಯನ್ನು ಸಂಹರಿಸಿದನು. ಆಗ ಮತ್ತೊಮ್ಮೆ ಇಂದ್ರಿಜಿತ್ತು ತಾನೇ ರಥವನ್ನು ನಡೆಸುತ್ತಾ ಯುದ್ಧಮಾಡಬೇಕಾಯಿತು. ಆದರೂ ಆತನು ಕುಗ್ಗದೆ ಶತ್ರುವಿನ ಬಾಣಗಳನ್ನೆಲ್ಲಾ ಕತ್ತರಿಸಿ ಹಾಕುತ್ತಾ ಮೂರು ಕೂರಂಬುಗಳಿಂದ ಎದುರಾಳಿಯ ಹಣೆಗೆ ಗುರಿಯಿಟ್ಟು ಹೊಡೆದನು. ಅವು ಆತನ ಹಣೆಯಲ್ಲಿ ಆಳವಾಗಿ ನಾಟಿಕೊಂಡುವು. ಕಣ್ಣುಮುಚ್ಚಿ ತೆಗೆಯುವುದರಲ್ಲಿ ಮತ್ತೆ ಮೂರು ಬಾಣಗಳು ಬಂದು ವಿಭೀಷಣನ ಹಣೆಗೆ ನಾಟಿದವು. ಆ ನೋವಿನಿಂದ ರೋಷಗೊಂಡ ಆ ರಾಕ್ಷಸರಾಜನು ಇಂದ್ರಜಿತ್ತುವಿನ ಬಳಿಗೆ ನುಗ್ಗಿ, ತನ್ನ ದೊಡ್ಡ ಗದೆಯಿಂದ ಅವನ ರಥವನ್ನು ಹುಡಿಗುಟ್ಟಿದನು.

ತನ್ನ ರಥ ಭಗ್ನವಾಗಲು ಇಂದ್ರಜಿತ್ತು ಧರಾತಲಕ್ಕೆ ಲಂಘಿಸಿ, ಉರಿಯುವ ಕೋಪದಿಂದ ಯಮನು ತನಗೆ ಕೊಟ್ಟಿದ್ದ ಮಹಾಸ್ತ್ರವನ್ನು ಚಿಕ್ಕಪ್ಪನ ಮೇಲೆ ಪ್ರಯೋಗಿಸಿದನು. ಇನ್ನೇನು ವಿಭೀಷಣನ ಕಥೆ ಮುಗಿದಂತೆಯೆ ಎಂಬಂತಿರುವಾಗ ಲಕ್ಷ್ಮಣನು ಕುಬೇರನು ತನಗೆ ಸ್ವಪ್ನದಲ್ಲಿ ಕರುಣಿಸಿದ್ದ ಮಹಾಸ್ತ್ರವನ್ನು ಅದಕ್ಕೆ ಇದಿರಾಗಿ ಪ್ರಯೋಗಿಸಿದನು. ಎರಡು ಬಾಣಗಳೂ ಅಂತರಿಕ್ಷದಲ್ಲಿ ಪರಸ್ಪರ ತಾಕಿ, ಭಯಂಕರಾಕಾರದಿಂದ ಉರಿದು ತಣ್ಣಗಾದವು. ಅನಂತರ ಲಕ್ಷ್ಮಣನ ವಾರುಣಾಸ್ತ್ರ ಇಂದ್ರಜಿತ್ತುವಿನ ರೌದ್ರಾಸ್ತ್ರದಿಂದ ಭಿನ್ನವಾಯಿತು. ಆತನ ಆಗ್ನೇಯಾಸ್ತ್ರ ಈತನ ಸೌರಾಸ್ತ್ರದಿಂದ, ಒಬ್ಬನ ಆಸುರಾಸ್ತ್ರ ಮತ್ತೊಬ್ಬನ ಮಹೇಶ್ವರಾಸ್ತ್ರದಿಂದ ಪರಸ್ಪರ ನಿವಾರಿತವಾದುವು. ಕಡೆಗೆ ಲಕ್ಷ್ಮಣನು ಐಂದ್ರಾಸ್ತ್ರವನ್ನು ಧನುಸ್ಸಿನಲ್ಲಿ ಅನುಸಂಧಾನಮಾಡಿ “ಎಲೈ ಬಾಣವೆ, ದಶರಥನಂದನನಾದ ಶ್ರೀರಾಮಮೂರ್ತಿ ಧರ್ಮಾತ್ಮನೂ ಸತ್ಯಸಂಧನೂ ಅಸಮಾನವೀರನೂ ಆಗಿರುವುದು ನಿಜವಾದರೆ ನೀನು ಇಂದ್ರಜಿತ್ತುವನ್ನು ವಧಿಸು” ಎಂದು ಹೇಳಿ, ಆ ಬಾಣವನ್ನು ಕಿವಿಯವರೆಗೂ ಎಳೆದು ಪ್ರಯೋಗಿಸಿದನು. ಧಗಧಗನೆ ಉರಿಯುತ್ತಾ ಕಿಡಿಗಾರುತ್ತಿದ್ದ ಆ ಅಸ್ತ್ರ ನಿವಾರಿಸಲಸಾಧ್ಯವಾಗಿ ಇಂದ್ರಜಿತ್ತುವಿನ ರುಂಡವನ್ನು ಕತ್ತರಿಸಿ ದೇಹದಿಂದ ಬೇರ್ಪಡಿಸಿತು. ಆ ಮಹಾವೀರನ ದೇಹ ಭೂಮಿಯ ಮೇಲೆ ಕೆಡೆದುಬಿದ್ದಿತು. ಅಳಿದುಳಿದಿದ್ದ ರಾಕ್ಷಸರೆಲ್ಲರೂ ಆಯುಧಗಳನ್ನು ಬಿಟ್ಟು ಪ್ರಾಣಭಯದಿಂದ ಓಡಿಹೋದರು. ಸೂರ್ಯ ಮುಳುಗಿದೊಡನೆಯೆ ಆತನ ಕಿರಣಗಳು ಮರೆಯಾಗುವಂತೆ ರಾಕ್ಷಸರೆಲ್ಲರೂ ರಣರಂಗದಿಂದ ಅಂತರ್ಹಿತರಾದರು.

ಪ್ರಬಲಶತ್ರು ಮಡಿದುಬಿದ್ದುದನ್ನು ಕಂಡು ವಾನರರೆಲ್ಲರೂ ವಿವಿಧ ರೀತಿಯಲ್ಲಿ ವಿನೋದಮಾಡುತ್ತಾ ಕುಣಿಯುತ್ತಾ ಕೂಗುತ್ತಾ ನಲಿದರು. ಗಗನದಲ್ಲಿದ್ದ ದೇವತೆಗಳು ಹೂಮಳೆಯನ್ನು ಸುರಿಸಿ, ಜಯಜಯಕಾರ ಮಾಡಿದರು. ದೇವದುಂದುಭಿಗಳು ಮೊಳಗಿದುವು. ಗಂಧರ್ವರು ಗಾಯನ ಮಾಡಿದರು. ದಿಕ್ಕುಗಳು ಪ್ರಸನ್ನವಾದುವು. ವಿಭೀಷಣನೂ ಹನುಮಂತನೆ ಮೊದಲಾದ ವಾನರ ಪ್ರಮುಖರೂ ಲಕ್ಷ್ಮಣಸ್ವಾಮಿಯನ್ನು ಬಾಯ್ತುಂಬ ಹೊಗಳಿ ಗೌರವಿಸಿದರು. ಆತನು ಆ ಪರಿವಾರದೊಡನೆ ಶ್ರೀರಾಮನ ಬಳಿಗೆ ಹಿಂದಿರುಗಿ ಆತನಿಗೆ ಮಣಿದು ಯುದ್ಧವಾರ್ತೆಯನ್ನೆಲ್ಲ ಅರುಹಿದನು. ವಿಜಯಶಾಲಿಯಾದ ತಮ್ಮನನ್ನು ಕಂಡು ಶ್ರೀರಾಮನು ಆನಂದಬಾಷ್ಪಗಳನ್ನು ಸುರಿಸುತ್ತಾ, ಆತನನ್ನು ಬಾಚಿ ತಬ್ಬಿಕೊಂಡು ತೊಡೆಯಮೇಲೆ ಕೂಡಿಸಿಕೊಂಡನು. ಅನಂತರ ಆತನು ತಮ್ಮನ ಮೈಯನ್ನೆಲ್ಲಾ ಮೃದುವಾಗಿ ಸವರುತ್ತಾ, ಗದ್ಗದಕಂಠದಿಂದ “ವತ್ಸ, ಎಂತಹ ಮಹತ್ಕಾರ್ಯವನ್ನು ಸಾಧಿಸಿದೆ! ಇಂದ್ರಜಿತ್ತುವಿನ ವಧೆಯಿಂದ ನಮಗೆ ವಿಜಯ ಶತಸ್ಸಿದ್ಧವಾದಂತಾಯಿತು. ಇನ್ನು ರಾಣಾಸುರನು ಸಂಹೃತನಾದಂತೆಯೆ. ಆತನ ಬಲ ತೋಳು ಆಗಲೆ ಕತ್ತರಿಸಿದಂತಾಗಿದೆ, ಇಂದ್ರಜಿತ್ತು ವಧೆಯಿಂದ. ಈಗ ನೀನು ನನಗೆ ಸೀತೆಯನ್ನು ಸಂಪಾದಿಸಿಕೊಟ್ಟಂತಾಯಿತು” ಎಂದನು.