ಲಂಕೇಶ್ವರನಾದ ದಶಕಂಠನು ತನ್ನ ಮಗನ ಮರಣವಾರ್ತೆಯನ್ನು ಕೇಳಿ, ತಳಕಾಣದ ದುಃಖದಲ್ಲಿ ಮುಳುಗಿ ಮೂರ್ಛಿತನಾದನು. ಕ್ಷಣಕಾಲದ ಮೇಲೆ ಆತನು ಎಚ್ಚತ್ತು ಕಲ್ಲುಮರಗಳು ಕೂಡ ಕರಗಿಹೋಗುವಂತೆ ದೈನ್ಯದಿಂದ ಗೋಳಿಟ್ಟನು: “ಅಯ್ಯೋ, ಮಗು! ಇಂದ್ರಜಿತ್ತು, ಮಹೇಂದ್ರನನ್ನೂ ಗೆದ್ದು ಜಗದ್ವಿಖ್ಯಾತನೆಂಬ ಕೀರ್ತಿಗೆ ಭಾಜನನಾದ ನೀನು ಆ ಪಾಪಿ ಲಕ್ಷ್ಮಣನಿಂದ ಮೃತನಾದೆಯಾ? ಯಮನನ್ನು ಕೂಡ ವಧಿಸಬಲ್ಲ ನಿನ್ನ ಬಾಣಗಳು ಮಾನವಮಾತ್ರನಲ್ಲಿ ವ್ಯರ್ಥವಾಗಿ ಹೋದುವೆ? ನೀನಿಲ್ಲದ ಮೇಲೆ ನನಗೆ ಈ ಬಾಳು ಹಾಳು ಹಾಳು. ನಾನಿನ್ನು ಜೀವಿಸಿರಲಾರೆ. ನೀನೀಗ ರಣಾಂಗಣದಲ್ಲಿ ಮಡಿದು ವೀರಸ್ವರ್ಗಕ್ಕೆ ಹೋಗುತ್ತಿರುವೆ. ನೀನಿಲ್ಲದ ಈ ನರಕದಲ್ಲಿ ನಾನು ಹೇಗೆ ಜೀವಿಸಲಿ? ನೀನು ಗತಾಸುವಾದೆಯೆಂಬುದನ್ನು ಕೇಳಿ ನನ್ನ ಶತ್ರುಗಳೆಲ್ಲರೂ ನನ್ನನ್ನು ಇನ್ನು ಧಿಕ್ಕರಿಸುವರು; ಅವರ ಹಾಸ್ಯ ಪರಿಹಾಸ್ಯಗಳಿಗೆ ಒಳಗಾಗಿ ನಾನು ಜೀವಿಸಿರಬೇಕೆ? ನೀನೊಬ್ಬನು ಇಲ್ಲದುದರಿಂದ ಆ ಲೋಕವೆಲ್ಲವೂ ನನಗೆ ಕತ್ತಲೆಗವಿದಿದೆ; ಜಗತ್ತೆಲ್ಲವೂ ಶೂನ್ಯವಾಗಿದೆ. ನಿನ್ನನ್ನು ಹೆತ್ತ ತಾಯಿಯನ್ನೂ ನನ್ನನ್ನೂ ಅನಾಥರನ್ನಾಗಿ ಮಾಡಿ ನೀನು ಹೇಗೆ ಹೊರಟುಹೋದೆ? ಕಂದಾ, ನನ್ನ ಹೊಟ್ಟೆ ಉರಿದುಹೋಗುತ್ತಿದೆ. ನಾನು ಮೃತಿಹೊಂದಿದ ಮೇಲೆ ನಿನ್ನಿಂದ ಪಿತೃಕಾರ್ಯಗಳನ್ನು ಪಡೆಯುವೆನೆಂದಿದ್ದೆ. ಈಗ ಇದೇನಾಯಿತು? ನಾನೇ ನಿನ್ನ ಪ್ರೇತಕಾರ್ಯಗಳನ್ನು ನಡೆಸಬೇಕಾಯಿತೆ! ಮಗು, ಇಂದ್ರಜಿತ್ತು ಇನ್ನಾರನ್ನು ಆ ಹೆಸರಿನಿಂದ ಕರೆಯಲಿ? ರಾಮಲಕ್ಷ್ಮಣರೂ ಸುಗ್ರೀವನೂ ಬದುಕಿರುವಾಗಲೆ ನೀನು ಮಡಿದು ಹೋದೆಯಾ?”

ರಾಕ್ಷಸೇಶ್ವರನ ಹೃದಯವೇದನೆ ಹಲುಬಿದಷ್ಟೂ ಹೆಚ್ಚಾಯಿತು. ಅದು ಹೆಚ್ಚಿದಷ್ಟೂ ಆತನ ರೋಷವು ಉಲ್ಬಣಗೊಂಡಿತು. ಲಲಾಟದಲ್ಲಿ ಹುಬ್ಬುಗಂಟಿಕ್ಕಿದುವು. ಮೂಗುಬಾಯಿಗಳಿಂದ ನಿಶ್ವಾಸದೊಡನೆ ಬೆಂಕಿಯ ಜ್ವಾಲೆ ಹೊರಹೊರಟಿತು. ಕಿಡಿಗಾರುವ ಕಣ್ಣುಗಳಿಂದ ಆತನು ಒಮ್ಮೆ ಸುತ್ತಲೂ ನೋಡಿದನು. ಸಹಜ ಭಯಂಕರವಾದ ಆತನ ಆಕಾರ ಪ್ರಳಯಕಾಲದ ರುದ್ರನಂತೆ ಮತ್ತಷ್ಟು ಭಯಂಕರಾಕಾರವನ್ನು ತಾಳಿತು. ಪ್ರಜ್ವಲಿಸುವ ದೀಪದಿಂದ ತೈಲಬಿಂದುಗಳು ತೊಟ್ಟಿಡುವಂತೆ ಆತನ ಕಣ್ಣುಗಳಿಂದ ಉರಿಗಂಬನಿ ಉದುರಿದವು. ಘರಟ್ಟ ಯಂತ್ರದಂತೆ ಆತನ ಹಲ್ಲುಗಳು ಕಟಕಟ ಶಬ್ದ ಮಾಡಿದುವು. ಆತನ ಆ ಕ್ರೋಧಮೂರ್ತಿಯನ್ನು ಕಂಡು ಪರಿಚರರೆಲ್ಲರೂ ತತ್ತರಿಸುತ್ತಾ ದೂರ ಸರಿದರು. ಪ್ರಳಯಕಾಲದ ಸಿಡಿಲಿನ ಧ್ವನಿಯಿಂದ ಆ ರಾಕ್ಷಸರಾಜನು ತನ್ನವರಿಗೆ ಕೂಗಿ ಹೇಳಿದನು – ಎಲೈ ರಾಕ್ಷಸರೆ, ದಿವ್ಯಸಹಸ್ರ ವರ್ಷಗಳಕಾಲ ತಪಸ್ಸನ್ನಾಚರಿಸಿ ಬ್ರಹ್ಮನಿಂದ ನಾನು ಪಡೆದುಕೊಂಡಿರುವ ಅಭೇದ್ಯವಾದ ಕವಚವನ್ನೂ ಧನುಸ್ಸನ್ನೂ ಯುದ್ಧಕ್ಕೆ ಸಿದ್ಧಪಡಿಸಿರಿ. ಈ ಕ್ಷಣದಲ್ಲಿಯೆ ಆ ರಾಮಲಕ್ಷ್ಮಣರನ್ನು ಸಂಹರಿಸಲು ನಾನು ರಣರಂಗಕ್ಕೆ ತೆರಳುತ್ತೇನೆ.”

ಯುದ್ಧರಂಗಕ್ಕೆ ಹೊರಡಬೇಕೆಂದಿದ್ದ ರಾವಣನು ತನ್ನ ಮನಸ್ಸನ್ನು ಬದಲಾಯಿಸಿದನು. ಎಲ್ಲ ಅನರ್ಥಗಳಿಗೂ ಮೂಲಕಾರಣ ಆ ಜಾನಕಿ; ಆಕೆಯನ್ನು ಮೊದಲು ಸಂಹರಿಸಿ ಬಿಡಬೇಕೆನ್ನಿಸಿತು, ಆತನಿಗೆ. ಆದ್ದರಿಂದ ತನ್ನ ಹಿಂಬಾಲಕರನ್ನು ಕುರಿತು “ಎಲೈ ರಾಕ್ಷಸರೆ, ನನ್ನ ಮಗನಾದ ಇಂದ್ರಜಿತ್ತು ತನ್ನ ಮಾಯೆಯಿಂದ ಕಲ್ಪಿಸಿದ ಸೀತೆಯೆಂಬ ಒಂದು ಪದಾರ್ಥವನ್ನು ಯುದ್ಧಭೂಮಿಯಲ್ಲಿ ವಧಿಸಿದನು; ಅಷ್ಟರಿಂದಲೆ ಆತನಿಗೆ ತೃಪ್ತಿಯಾಯಿತು. ನಾನೀಗ ಯಥಾರ್ಥವಾದ ಸೀತೆಯನ್ನು ಸಂಹರಿಸಿ ಸಂತುಷ್ಟನಾಗುತ್ತೇನೆ. ತನ್ನ ಪ್ರಿಯ ಪತ್ನಿಯ ಮರಣದಿಂದ ರಾಮನಿಗೆ ಅಸಹ್ಯವೇದನೆಯನ್ನು ಕಲ್ಪಿಸಿ, ಅನಂತರ ಅವನನ್ನು ಸಂಹರಿಸುತ್ತೇನೆ” ಎಂದು ಹೇಳಿ ಒರೆಯುರ್ಚಿದ ಖಡ್ಗದೊಡನೆ ಅಶೋಕವನಕ್ಕೆ ಧಾವಿಸಿದನು. ಆತನ ಮಂತ್ರಿಗಖೂ ಹಿಂದೆಯೆ ಓಡಿದರು. ಅವರೆಷ್ಟು ಸಮಾಧಾನಮಾಡಲು ಪ್ರಯತ್ನಿಸಿದರೂ ಕ್ರೋಧಾಂಧನಾದ ಆತನಿಗೆ ಅವರ ಮಾತು ಹಿಡಿಸಲಿಲ್ಲ.

ಖಡ್ಗಧಾರಿಯಾಗಿ ತನ್ನ ಬಳಿಗೆ ಧಾವಿಸುತ್ತಿರುವ ರಾವಣನನ್ನು ಕಂಡು ಸೀತಾದೇವಿ ಭಯದಿಂದ ನಡುಗಿದಳು. ಆಕೆಯ ಮನಸ್ಸಿನಲ್ಲಿ ಪರಿಪರಿಯ ವಿಚಾರತರಂಗಗಳೆದ್ದುವು. “ಈ ದುರಾತ್ಮನು ರಾಮಲಕ್ಷ್ಮಣರನ್ನು ವಧಿಸಿ, ಆ ಬಳಿಕ ತನ್ನ ಬಳಿಗೆ ಬರುತ್ತಿರುವನೊ ಏನೊ? ಹಲವು ಬಾರಿ ತನ್ನ ಭಾರ್ಯೆಯಾಗುವಂತೆ ನನ್ನನ್ನು ಪೀಡಿಸಿದ್ದನು. ಆ ಸಮಯಗಳಲ್ಲೆಲ್ಲ ನಾನು ಅವನನ್ನು ತಿರಸ್ಕರಿಸಿದ್ದೆನು. ಈಗ ಇನ್ನೇನು ವಿಪತ್ತು ಕಾದಿದೆಯೊ! ರಾಮಲಕ್ಷ್ಮಣರನ್ನು ಜಯಿಸಲಾರದೆ ನನ್ನನ್ನು ಕೊಂದು ಅವರ ಮೇಲಿನ ಸೇಡನ್ನು ತೀರಿಸಿಕೊಳ್ಳಲು ಹೊರಟಿರುವನೊ ಏನೊ! ನಾನೆಂತಹ ಅವಿವೇಕಿ? ಹನುಮಂತನು ಹಿಂದೆ ಇಲ್ಲಿಗೆ ಬಂದಿದ್ದಾಗ, ಆತನ ಬುದ್ಧಿವಾದದಂತೆ ಅವನ ಹೆಗಲ ಮೇಲೆ ಕುಳಿತು ಶ್ರೀರಾಮನ ಸನ್ನಿಧಿಯನ್ನು ಸೇರಿದ್ದರೆ ಈ ಅನರ್ಥಗಳೆಲ್ಲ ತಪ್ಪುತ್ತಿದ್ದುವಲ್ಲವೇ? ಈಗ ನಾನೇನು ಮಾಡಲಿ?” ಎಂದು ಆಕೆ ಅವಿರಳವಾಗಿ ಕಣ್ಣೀರುಗರೆಯುತ್ತಾ ಕುಳಿತಳು. ಆಕೆಯ ಕರುಣಾಜನಕ ಸ್ಥಿತಿಯನ್ನು ಕಂಡು ರಾವಣನ ಮಂತ್ರಿಯಾದ ಸುಪಾರ್ಶ್ವನಿಗೆ ಕರುಳು ಕರಗಿತು. ಆತನು ತನ್ನ ಸ್ವಾಮಿಯನ್ನು ಕುರಿತು “ಪ್ರಭು, ನೀನು ಕುಬೇರನ ತಮ್ಮ; ಧರ್ಮಾತ್ಮ; ಕೀರ್ತಿಶಾಲಿ; ನೀನು ಸ್ತ್ರೀಹತ್ಯೆಗೆ ಕೈಯಿಡುವುದು ಸರ್ವಥಾ ಅಯೋಗ್ಯ. ನಿನ್ನ ಕ್ರೋಧೋದ್ವೇಗವನ್ನು ನಿನ್ನ ಶತ್ರುವಾದ ರಾಮನ ಕಡೆ ತಿರುಗಿಸು. ಈ ದಿನ ಕೃಷ್ಣ ಪಕ್ಷದ ಚತುರ್ದತಿ. ಈ ದಿನ ಯುದ್ಧವನ್ನು ಆರಂಭಿಸು. ನಾಳೆ ಅಮಾವಾಸ್ಯೆ. ನಾಳೆಯೆ ನಿನಗೆ ವಿಜಯ ದೊರೆಯುತ್ತದೆ. ನಿನ್ನಂತಹ ತ್ರಿಭುವನ ಪರಾಕ್ರಮಿ ರಾಮನಂತಹ ಮಾನವನನ್ನು ಗೆಲ್ಲುವುದೂ ಕೊಲ್ಲುವುದು ಕಷ್ಟವಲ್ಲ. ಅದಾದಮೇಲೆ ಸೀತೆಯನ್ನು ಹೊಂದಿಯೆ ಹೊಂದುವೆ” ಎಂದನು.

ರಾವಣೇಶ್ವರನಿಗೆ ಮಂತ್ರಿಯ ಮಾತು ಸಂದರ್ಭೋಚಿತವಾದುದೆಂದು ತೋರಿತು. ಆತನು ಬಂದ ದಾರಿಯಿಂದಲೆ ಹಿಂದಿರುಗಿದನು. ಅರಮನೆಯನ್ನು ಸೇರುತ್ತಲೆ ಆತನು ತನ್ನ ಉಳಿದ ರಾಕ್ಷಸವೀರರೆಲ್ಲರನ್ನೂ ರಾಮಲಕ್ಷ್ಮಣರ ಮೇಲೆ ಯುದ್ಧಕ್ಕೆ ಹೊರಡುವಂತೆ ಪ್ರೇರೇಪಿಸಿದನು. ಒಂದು ವೇಳೆ ಅವರು ರಾಮನನ್ನು ಸಂಹರಿಸದಿದ್ದರೂ ಆತನನ್ನು ಚೆನ್ನಾಗಿ ಘಾತಿಸಬೇಕೆಂದೂ ತಾನು ಮರುದಿನ ರಾಮನನ್ನು ವಧಿಸುವುದಾಗಿಯೂ ಅವರಿಗೆ ಭರವಸೆಯಿತ್ತನು. ಲಂಕೆಯ ರಕ್ಷಣೆಗಾಗಿ ನಿಯಮಿತವಾಗಿದ್ದ ಮೂಲಬಲವೆಲ್ಲವೂ ಆತನ ಅಪ್ಪಣೆಯಂತೆ ಯುದ್ಧರಂಗಕ್ಕೆ ತೆರಳಿ, ಜೀವದ ಹಂಗುದೊರೆದು ಕಾದುವುದಕ್ಕೆ ಮೊದಲುಮಾಡಿತು. ತಮ್ಮ ಸ್ವಾಮಿಯ ಮನೋವ್ಯಥೆಯನ್ನು ಶಮನಮಾಡುವ ಮಹೋದ್ದೇಶದಿಂದ ಹೊಡೆದಾಡುತ್ತಿದ್ದ ಅವರ ಪೆಟ್ಟಿನಿಂದ ವಾನರ ಸೈನ್ಯವೆಲ್ಲವೂ ತಲ್ಲಣಿಸಿಹೋಯಿತು. ವೀರಾವೇಶದಿಂದ ಕಾಯುತ್ತಿದ್ದ ಎರಡು ಕಡೆಯವರಲ್ಲಿಯೂ ಅಸಂಖ್ಯಾತರಾದ ಜನ ಸತ್ತು ರಕ್ತ ಕೋಡಿಗಟ್ಟಿ ಹರಿಯಿತು. ಹಣ್ಣು ಬಿಟ್ಟು ಮರಗಳಿಗೆ ಗುಂಪುಗುಂಪಾಗಿ ಹಾರಿಹೋಗುವ ಹಕ್ಕಿಗಳಂತೆ ಹಲವು ವಾನರರು ಒಟ್ಟಾಗಿ ಒಬ್ಬ ರಾಕ್ಷಸನನ್ನು ಮುತ್ತಿಕೊಂಡು, ತಮ್ಮ ಮೊನಚಾದ ಉಗುರುಗಳಿಂದಲೂ ಹಲ್ಲುಗಳಿಂದಲೂ ಅವನ ಕಿವಿ ಮೂಗುಗಳನ್ನೂ ಹಣೆಯನ್ನೂ ಕಚ್ಚಿ ಸಿಗಿದುಹಾಕುತ್ತಿದ್ದರು. ಆದರೂ ರಾಕ್ಷಸರ ಏಟನ್ನು ತಾಳುವುದು ವಾನರರಿಗೆ ಸಾಧ್ಯವಾಗಲಿಲ್ಲ. ಅವರೆಲ್ಲರೂ ಓಡಿಹೋಗಿ ಶ್ರೀರಾಮನಲ್ಲಿ ದೂರಿಕೊಂಡರು. ಆದ್ದರಿಂದ ಆತನೆ ಸ್ವತಃ ಧನುರ್ಧಾರಿಯಾಗಿ ಆ ರಾವಣನ ಮೂಲಬಲವನ್ನು ಇದಿರಿಸಬೇಕಾಯಿತು. ಆತನ ಬಾಣಗಳ ಮಳೆಯನ್ನು ಸುರಿಸುವುದಕ್ಕೆ ಆರಂಭಿಸಿದೊಡನೆಯೆ ರಾಕ್ಷಸಬಲದ ವಿನಾಶ ಆರಂಭವಾಯಿತು. ಆ ದಿನ ಆತನು ಸಂಹರಿಸಿದ ರಾಕ್ಷಸ ಸೈನ್ಯದ ಸಂಖ್ಯೆ ನೂರೆಪ್ಪತ್ತಾರೆ ಕೋಟಿಗೂ ಮೀರಿದ್ದಿತೆಂದಮೇಲೆ ಆತನ ರಣಕೌಶಲವನ್ನು ವರ್ಣಿಸುವುದೆಂತು? ಅಳಿದುಳಿದ ಅಲ್ಪಸ್ವಲ್ಪ ರಾಕ್ಷಸರು ಭಯಗ್ರಸ್ಥರಾಗಿ ಲಂಕೆಗೆ ಓಡಿಹೋದರು. ರಾವಣನ ಪುತ್ರವ್ಯಥೆ ಶಮನವಾಗುವುದಕ್ಕೆ ಬದಲಾಗಿ ಅದಿನ್ನೂ ಉಲ್ಬಣಗೊಂಡಿತು.