ರಾವಣೇಶ್ವರನ ಮೂಲಬಲವೆಲ್ಲವೂ ಶ್ರೀರಾಮನ ಬಾಣದಿಂದ ಹತವಾದುದನ್ನು ಕೇಳಿ ಲಂಕಾನಿವಾಸಿಗಳೆಲ್ಲರೂ ಅತ್ಯಂತ ಶೋಕಸಂತಪ್ತರಾದರು. ಊರಲ್ಲಿ ಯಾವ ಮನೆಯಲ್ಲಿ ನೋಡಿದರೂ ಗಂಡನನ್ನು ಕಳೆದುಕೊಂಡವರೂ ಇತರ ಬಂಧುಬಾಂಧವರನ್ನು ಅಗಲಿದವರೂ ರೋದಿಸುವ ಧ್ವನಿ ಕೇಳಿ ಬರುತ್ತಿತ್ತು. ರಾಕ್ಷಸಾಂಗನೆಯರು ಅಲ್ಲಲ್ಲಿ ಗುಂಪು ಕೂಡಿ ಕಣ್ಣಿನಲ್ಲಿ ನೀರು ಸುರಿಸುತ್ತಾ “ಹಾಳು ಶೂರ್ಪನಖಿ ಮನ್ಮಥಸದೃಶನಾದ ಆ ಶ್ರೀರಾಮನನ್ನು ಏಕಾದರೂ ಕಾಮಿಸಿದಳೊ! ಎಂತಹ ವಿಷಗಳಿಗೆಯಲ್ಲಿ ಈ ಪಾಪಿಯ ಕಣ್ಣಿಗೆ ಆ ಸುಕುಮಾರ ಕಾಣಿಸಿದನೊ! ಮಹಾ ನೀಚಳಾದ ಅವಳೊಬ್ಬಳ ದೆಸೆಯಿಂದ ಈ ರಾಕ್ಷಸ ವಂಶವೆಲ್ಲವೂ ನಿರ್ಮೂಲವಾಗುವಂತಾಯಿತು. ಆ ದುರ್ಮಾರ್ಗಳ ಮಾತುಗಳನ್ನು ಕೇಳಿಯೇ ನಮ್ಮ ರಾಕ್ಷಸರಾಜನು ಶ್ರೀರಾಮ ಪತ್ನಿಯನ್ನು ಕದ್ದು ತಂದನು. ಆಕೆಯೊಡನೆ ಲಂಕೆಯ ಸರ್ವನಾಶವನ್ನೂ ಆತನು ಕರೆತಂದನು. ಖರದೂಷಣರನ್ನೂ ಕಬಂಧನನ್ನೂ ವಾಲಿಯನ್ನೂ ಸಂಹರಿಸಿದಾಗಲೆ ಆ ಶ್ರೀರಾಮನ ಪರಾಕ್ರಮವನ್ನು ಅರಿತುಕೊಳ್ಳಬಾರದಾಗಿದ್ದಿತೆ? ಹೋಗಲಿ, ವಿಭೀಷಣನು ಬುದ್ಧಿ ಹೇಳಿದ ಮೇಲಾದರೂ ಲಂಕೇಶ್ವರನಿಗೆ ಸದ್ಬುದ್ಧಿ ಹುಟ್ಟಬಾರದಾಗಿತ್ತೆ? ಈಗ ಲಂಕೆಯೆಲ್ಲವೂ ಶ್ಮಶಾನಸದೃಶವಾಗುತ್ತಿದೆಯಲ್ಲ! ಎಲ್ಲಿ ನೋಡಿದರೂ ‘ನನ್ನ ಮಗ ಮಡಿದ’, ‘ನಮ್ಮ ಅಣ್ಣ ಸತ್ತ’, ‘ಅಯ್ಯೋ ನನ್ನ ಗಂಡ ಗತಿಸಿದ’ – ಈ ಮಾತುಗಳೇ ಕೇಳಿ ಬರುತ್ತಿವೆಯಲ್ಲಾ! ಅಳಿದುಳಿದವರಾದರೂ ಬದುಕಲು ಅವಕಾಶವಿದೆಯೆ? ಇಲ್ಲ, ಇಲ್ಲ. ರಾಕ್ಷಸಘಾತುಕೆಯಾದ ಈ ಸೀತೆ ರಾವಣನನ್ನೂ ಉಳಿದವರನ್ನೂ ನುಂಗುವ ಮಹಾಮಾರಿಯಾಗಿದ್ದಾಳೆ. ರಾಮಬಾಣದಿಂದ ರಾಕ್ಷಸರನ್ನು ರಕ್ಷಿಸುವವರು ಈ ಮೂರು ಲೋಕದಲ್ಲಿ ಯಾರನ್ನೂ ಕಾಣೆವಲ್ಲಾ!” ಎಂದು ಹಂಬಲಿಸುತ್ತಾ ಗಟ್ಟಿಯಾಗಿ ಗೋಳಿಡುತ್ತಿದ್ದರು.

ಮನೆಮನೆಯಿಂದಲೂ ಬರುತ್ತಿದ್ದ ಈ ವಿಲಾಪ ಧ್ವನಿ ರಾವಣನಿಗೆ ಕೇಳಿಸಿತು. ಆತನು ದೀರ್ಘವಾದ ಒಂದು ನಿಟ್ಟುಸಿರಿಟ್ಟು ಮಹೋದರ, ಮಹಾಪಾರ್ಶ್ವ, ವಿರೂಪಾಕ್ಷ ಎಂಬ ಮೂವರು ಸೇನಾಪತಿಗಳನ್ನು ಕರೆಸಿ ಅವರಿಗೆ “ಎಲೈ ವೀರರೆ, ನಾನೀಗಲೆ ರಾಮಲಕ್ಷ್ಮಣರನ್ನು ಧ್ವಂಸಮಾಡುವುದಕ್ಕಾಗಿ ರಣರಂಗಕ್ಕೆ ತೆರಳುವೆನು. ಇದುವರೆಗೆ ಯುದ್ಧದಲ್ಲಿ ಮರಣ ಹೊಂದಿದ ಖರ, ಪ್ರಹಸ್ತ, ಕುಂಭಕರ್ಣ, ಇಂದ್ರಜಿತ್ತು ಮೊದಲಾದವರ ಆತ್ಮಗಳೆಲ್ಲವೂ ಸಂತೃಪ್ತಿಗೊಳ್ಳುವಂತೆ ಆ ಇಬ್ಬರನ್ನೂ ಯಮಾಲಯಕ್ಕೆ ಅಟ್ಟುವೆನು. ವಾನರ ವಂಶವೆಂಬುದೇ ಇಂದು ನನ್ನ ಬಾಣವರ್ಷದಲ್ಲಿ ಮುಳುಗಿ ಹೆಸರಿಲ್ಲದಂತಾಗಿ ಹೋಗುವುದು. ಊರಿನಲ್ಲಿ ಯಾರು ಯಾರು ತಮ್ಮ ಬಂಧುಬಾಂಧವರ ಮರಣಕ್ಕಾಗಿ ಗೋಳಿಡುತ್ತಿರುವರೊ ಅವರೆಲ್ಲರ ಕಣ್ಣೀರು ಆರುವಂತೆ ಶತ್ರುಗಳನ್ನು ಮರ್ದಿಸುತ್ತೇನೆ. . ಒಡನೆಯೆ ನನ್ನ ರಥವೂ ಧನುಸ್ಸೂ ಸಿದ್ಧವಾಗಲಿ. ಅಳಿದುಳಿದು ರಾಕ್ಷಸ ವೀರರು ನನ್ನನ್ನು ಹಿಂಬಾಲಿಸಲಿ” ಎಂದು ಆಜ್ಞಾಪಿಸಿದನು.

ರಾಜನ ಅಪ್ಪಣೆಯಂತೆ ಎಂಟು ಕುದುರೆಗಳನ್ನು ಹೂಡಿದ್ದ ಸುಸಜ್ಜಿತ ರಥವು ಆತನ ವಿಜಯಪ್ರಯಾಣಕ್ಕಾಗಿ ಸಿದ್ಧವಾಯಿತು. ರಾವಣೇಶ್ವರನು ಯುದ್ಧಕ್ಕೆ ತಕ್ಕ ಕವಚ ಆಯುಧಗಳನ್ನು ಧರಿಸಿ ರಥವೇರಿದನು. ಕಾಲ್ಕೆರೆಯುತ್ತಾ ನಿಂತಿದ್ದ ಕುದುರೆಗಳು ಸಾರಥಿ ಕಡಿವಾಣವನ್ನು ಸಡಿಲ ಬಿಡುತ್ತಲೆ ವೇಗವಾಗಿ ಹೊರಟುವು. ರಾಜನ ರಥದ ಹಿಂದೆ ಮೂರು ಸೇನಾಪತಿಗಳ ರಥಗಳೂ ವಾಯುವೇಗದಿಂದ ಹೊರಟುವು. ವಿವಿಧಾಯುಧಗಳನ್ನು ಧರಿಸಿ ಭಯಂಕರಾಕಾರರಾಗಿದ್ದ ರಾಕ್ಷಸ ಯೋಧರು ಭೂಮಿ ಬಿರಿಯುವಂತೆ ಸಿಂಹನಾದ ಮಾಡುತ್ತಾ ಆ ರಥಗಳನ್ನು ಹಿಂಬಾಲಿಸಿದರು. ರಾಜನು ಲಂಕೆಯ ರಾಜಬೀದಿಗಳಲ್ಲಿ ಹೊರಟು ಹೆಬ್ಬಾಗಿಲನ್ನು ಹಾಯುತ್ತಿದ್ದಂತೆಯೆ ಸೂರ್ಯನು ಕಾಂತಿಗುಂದಿದನು; ದಿಕ್ಕುಗಳೆಲ್ಲ ಕತ್ತಲಿಂದ ತುಂಬಿಹೋದುವು; ಹಕ್ಕಿಗಳೆಲ್ಲವೂ ಕರ್ಣಕಠೋರವಾಗಿ ಕಿರಿಚಿಕೊಂಡುವು; ರಕ್ತದ ಮಳೆ ಸುರಿಯಿತು; ಸಮಭೂಮಿಯಲ್ಲಿಯೆ ಹೋಗುತ್ತಿದ್ದರೂ ಕುದುರೆಗಳು ಮುಗ್ಗರಿಸಿದುವು. ರಥಾಗ್ರದ ಧ್ವಜವನ್ನು ರಣಹದ್ದು ಹೊಕ್ಕಿತು; ನರಿಗಳು ಅಮಂಗಳವಾಗಿ ಕೂಗಿಕೊಂಡುವು. ರಾವಣೇಶ್ವರನ ಎಡಗಣ್ಣೂ ಎಡಭುಜವೂ ಅದುರಿದುವು. ಈ ಅಪಶಕುನಗಳೊಂದನ್ನೂ ಲಕ್ಷಿಸದೆ ಆ ಲಂಕೇಶ್ವರನು ಪ್ರಯಾಣವನ್ನು ಮುಂದುವರಿಸಿ ರಣರಂಗವನ್ನು ಸೇರಿದನು.

ರಾಕ್ಷಸರ ರಣಘೋಷವನ್ನು ಕೇಳುತ್ತಲೆ ವಾನರರು ಯುದ್ಧೋತ್ಸಾಹದಿಂದ ಓಡಿಬಂದರು. ಇಬ್ಬಣದವರಿಗೂ ಕೈಗೆ ಕೈಹತ್ತಿ ಯುದ್ಧ ಮೊದಲಾಯಿತು. ಸ್ವತಃ ದಶಗ್ರೀವನೆ ರಣರಂಗದಲ್ಲಿದ್ದುದರಿಂದ ರಾಕ್ಷಸರು ಅತೀವ ಉತ್ಸಾಹದಿಂದ ಯುದ್ಧಮಾಡುತ್ತಿದ್ದರು. ರಾಕ್ಷಸೇಶ್ವರನ ಬಾಣಗಳಂತೂ ವಾನರ ಸೇನೆಯಲ್ಲಿ ಭಯಂಕರವಾದ ಕೋಲಾಹಲವನ್ನು ಹುಟ್ಟಿಸಿದುವು. ಎದೆ ಭೇದಿಸಿ ನೆಲಕ್ಕೆ ಬಿದ್ದವರಾರೊ! ತಲೆ ಕತ್ತರಿಸಿ ಸತ್ತು ಹೋದವರೆಷ್ಟೊ! ಕೆಲವರಿಗೆ ಕಿವಿ ಹರಿದುಹೋದುವು! ಕೆಲವರಿಗೆ ಪಕ್ಕೆ ಸೀಳಿದುವು! ಕೆಲವರಿಗೆ ಕಣ್ಣುಗಳೆ ಕಳಚಿಹೋದುವು! ವಾನರರು ಆತನ ಉಪಟಳವನ್ನು ಸಹಿಸಲಾರದೆ ಕಾಳ್ಕಿಚ್ಚಿಗೆ ಸಿಕ್ಕಿದ ಕಾಡಾನೆಗಳಂತೆ ದಿಕ್ಕೆಟ್ಟು ಕೂಗಿಕೊಳ್ಳುತ್ತಾ ಓಡಿಹೋದರು. ಇದನ್ನು ಕಂಡು ಸುಗ್ರೀವ ಮಹಾರಾಜನು ಓಡುತ್ತಿರುವ ವಾನರರಿಗೆಲ್ಲಾ ಧೈರ್ಯ ಹೇಳುತ್ತಾ ಹೆಮ್ಮರವನ್ನು ಕೈಲಿ ಹಿಡಿದು ರಾವಣನಿಗೆ ಇದಿರಾದನು.

ತನ್ನ ರಾಜನ ಮೇಲೆ ಸಾಗಿಬರುತ್ತಿರುವ ವಾನರ ವೀರನನ್ನು ಕಂಡು ರಾಕ್ಷಸ ವೀರನಾದ ವಿರೂಪಾಕ್ಷನು ತನ್ನ ಹೆಸರನ್ನು ಗಟ್ಟಿಯಾಗಿ ಕೂಗಿ ಹೇಳುತ್ತಾ ಆನೆಯ ಮೇಲೇರಿ ಅವನಿಗೆ ಇದಿರಾದನು. ವಾನರ ವೀರನು ಎತ್ತಿ ಹಿಡಿದಿದ್ದ ಮರವನ್ನು ಇದಿರಿಗೆ ಬಂದ ರಾಕ್ಷಸರ ಮೇಲೆಯೆ ಪ್ರಯೋಗಿಸಿದನು. ಆದರೆ ಆ ರಾಕ್ಷಸ ವೀರನು ಅದನ್ನು ತನ್ನ ಬಾಣದಿಂದ ಮಧ್ಯ ಮಾರ್ಗದಲ್ಲಿಯೆ ಭಂಗಿಸಿ, ಮತ್ತೊಂದು ನಿಶಿತವಾದ ಬಾಣದಿಂದ ಸುಗ್ರೀವನನ್ನು ಬಲವಾಗಿ ಗಾಯಗೊಳಿಸಿದನು. ಇದರಿಂದ ಕೆರಳಿದ ವಾನರ ವೀರನು ದೊಡ್ಡದೊಂದು ಮರದ ಬುಡದಿಂದ ರಾಕ್ಷಸನು ಏರಿದ್ದ ಆನೆಯ ಕುಂಭ ಸ್ಥಳಕ್ಕೆ ಹೊಡೆದನು. ಆ ಪೆಟ್ಟಿಗೆ ಆ ಪ್ರಾಣಿ ಗಟ್ಟಿಯಾಗಿ ಘೀಳಿಡುತ್ತಾ ಕೆಳಕ್ಕೆ ಬಿದ್ದು ಸತ್ತಿತು. ಅದು ಕೆಳಕ್ಕುರುಳುವುದರೊಳಗಾಗಿ ವಿರೂಪಾಕ್ಷನು ನೆಲಕ್ಕೆ ಹಾರಿ ಖಡ್ಗದಿಂದ ಆ ವಾನರ ರಾಜನನ್ನು ಹೊಡೆದನು. ಕನಲಿ ಕೆಂಗೆಂಡವಾದ ಸುಗ್ರೀವನು ಮುಂದಕ್ಕೆ ನುಗ್ಗಿ ವಜ್ರಮುಷ್ಟಿಯಿಂದ ಎದುರಾಳಿಯ ಎದೆಗೆ ಗುದ್ದಿದನು. ಆದರೂ ಆ ರಾಕ್ಷಸನು ಅಚಲನಾಗಿ ನಿಂತು ಮತ್ತೊಮ್ಮೆ ಕತ್ತಿಯಿಂದ ಹೊಡೆಯಲು ವಾನರ ವೀರನ ದೇಹವು ರಕ್ತದಿಂದ ತೊಯ್ದು ಹೋಯಿತು. ಆತನು ತನ್ನ ಬಲವನ್ನೆಲ್ಲಾ ಬಿಟ್ಟು ರಾಕ್ಷಸನ ಹಣೆಗೆ ಗುದ್ದಿದನು. ಈ ಪೆಟ್ಟಿನಿಂದ ವಿರೂಪಾಕ್ಷನು ರಕ್ತವನ್ನು ಕಾರುತ್ತ ನೆಲಕ್ಕುರುಳಿ ಸತ್ತು ಹೋದನು.

ವಿರೂಪಾಕ್ಷನು ಮಡಿದುದನ್ನು ಕಂಡು ರಾವಣೇಶ್ವರನು ಮನಸ್ಸಿನಲ್ಲೆ ಮಿಡುಕಿಕೊಳ್ಳುತ್ತಾ ಮಹೋದರನನ್ನು ಸುಗ್ರೀವನ ಮೇಲೆ ಯುದ್ಧಕ್ಕೆ ಕಳುಹಿಸಿದನು. ಮಹಾರಾಜನಿಂದ ಆಜ್ಞಪ್ತನಾಗಿ ವಿಜೃಂಭಿಸುತ್ತಾ ಬರುತ್ತಿದ್ದ ಆತನ ಮೇಲೆ ಸುಗ್ರೀವನು ದೊಡ್ಡದೊಂದು ಬಂಡೆಯನ್ನು ಎತ್ತಿ ಎಸೆದನು. ಆದರೆ ಅದು ರಾಕ್ಷಸನ ಬಾಣಕ್ಕೆ ತುತ್ತಾಯಿತು. ವಾನರ ರಾಜನು ಸಾಲವೃಕ್ಷವೊಂದನ್ನು ಕಿತ್ತು ಅದನ್ನು ಎದುರಾಳಿಯ ಮೇಲೆ ಎಸೆದನು. ಅದಕ್ಕೂ ಅದೇ ಗತಿಯಾಯಿತು. ಆದರೆ ಈ ಅವಕಾಶದಲ್ಲಿ ರಾಕ್ಷಸನ ಪರಿಘ ಜಾರಿ ನೆಲದ ಮೇಲೆ ಬಿತ್ತು. ಸುಗ್ರೀವನು ಅದನ್ನು ತೆಗೆದುಕೊಂಡು ಮಹೋದರನ ರಥದ ಕುದುರೆಯನ್ನು ಚಚ್ಚಿಹಾಕಿದನು. ಇದರಿಂದ ಆ ರಾಕ್ಷಸವೀರನು ನೆಲಕ್ಕೆ ಹಾರಿ, ಕೆಳಗೆ ನಿಂತೆ ಯುದ್ಧಮಾಡಬೇಕಾಯಿತು. ಬಹಳ ಹೊತ್ತು ಇಬ್ಬರೂ ಸರಿಸಮವಾಗಿ ಹೋರಾಡಿದಮೇಲೆ ಸುಗ್ರೀವನು ಎದುರಾಳಿಯ ಕತ್ತಿಯನ್ನು ಕಿತ್ತುಕೊಂಡು ಅವನ ಶಿರಚ್ಛೇದನ ಮಾಡಿದನು.

ಇನ್ನು ರಾವಣನು ಸೇನಾಪತಿಗಳಲ್ಲಿ ಉಳಿದವರು ಮಹಾಪಾರ್ಶ್ವ. ಜಾಂಬವನೂ ಅಂಗದನೂ ಸೇರಿಕೊಂಡು ಆತನೊಡನೆ ಸ್ವಲ್ಪಹೊತ್ತು ಹೋರಾಡುತ್ತಿದ್ದ ಮೇಲೆ, ಅಂಗದಕುಮಾರನು ಆ ರಾಕ್ಷಸ ವೀರನನ್ನು ಸಂಹರಿಸಿದನು. ಇದನ್ನು ಕಂಡು ಕೆರಳಿದ ರಾವಣೇಶ್ವರನು ತನ್ನ ಸಾರಥಿಯನ್ನು ಕುರಿತು “ಎಲೈ ಸೂತನೆ, ಈಗಲೆ ರಥವನ್ನು ರಾಮನಿರುವೆಡೆಗೆ ಕೊಂಡೊಯ್ಯಿ!” ಎಂದನು. ಸಾರಥಿ ಅದೇ ರೀತಿ ರಥವನ್ನು ಶ್ರೀರಾಮಚಂದ್ರನ ಸಮೀಪಕ್ಕೆ ತಂದು ನಿಲ್ಲಿಸಿದನು.