ಶ್ರೀರಾಮನನ್ನು ಕಾಣುತ್ತಿದ್ದಂತೆಯೆ ರಾವಣೇಶ್ವರನ ಕ್ರೋಧಾಗ್ನಿ ಹೊತ್ತಿ ಧಗಧಗ ಉರಿಯಿತು. ಆತನು ರಥಾರೋಹಣ ಮಾಡಿ ಬಂದ ರಭಸಕ್ಕೆ ಭೂಮಿ ಜಗ್ಗನೆ ನಡುಗಿತು. ಈಗ ತನ್ನ ಘರ್ಜನೆಯಿಂದ ದಶದಿಕ್ಕುಗಳನ್ನೂ ಮೊಳಗಿಸುತ್ತಾ ಆತನು ಶ್ರೀರಾಮನ ಸುತ್ತಲಿದ್ದ ಕಪಿಗಳನ್ನೆಲ್ಲಾ ಧ್ವಂಸಮಾಡತೊಡಗಿದನು. ಆತನ ಪೆಟ್ಟನ್ನು ತಾಳಲಾರದೆ ಪಲಾಯನ ಮಾಡುತ್ತಿದ್ದ ವಾನರ ವೀರರನ್ನೂ ತನ್ನನ್ನೆ ಲಕ್ಷ್ಯದಲ್ಲಿಟ್ಟುಕೊಂಡು ಮುಂದುವರಿಯುತ್ತಿರುವ ರಾವಣನನ್ನೂ ಕಂಡು ಶ್ರೀರಾಮನು ಮಹೋತ್ಸಾಹದಿಂದ ತನ್ನ ದಿವ್ಯಧನುಸ್ಸನ್ನು ಒಮ್ಮೆ ಟಂಕಾರಮಾಡಿದನು. ಆ ಧ್ವನಿಗೆ ಭೂಮಿ ಅಂತರಿಕ್ಷಗಳು ಸ್ಪಂದಿಸಿದುವು. ಬಳಿಯಲ್ಲಿಯೆ ಇದ್ದ ಲಕ್ಷ್ಮಣದೇವನು ಅಣ್ಣನ ಉತ್ಸಾಹವನ್ನು ಕಂಡು, ತಾನೇ ಮೊದಲು ರಾವಣನೊಡನೆ ಯುದ್ಧಮಾಡಬೇಕೆಂಬ ಕುತೂಹಲದಿಂದ ಅಗ್ನಿಜ್ವಾಲೆಗೆ ಸಮಾನವಾದ ಅನೇಕ ಬಾಣಗಳನ್ನು ರಾವಣನ ಮೇಲೆ ಪ್ರಯೋಗಿಸಿದನು. ಆ ರಾಕ್ಷಸವೀರನು ಅವುಗಳನ್ನೆಲ್ಲಾ ಮಧ್ಯಮಾರ್ಗದಲ್ಲಿಯೆ ಕತ್ತರಿಸಿ, ಮತ್ತೆ ರಾಮನ ಕಡೆಗೆ ಮುಂದುವರಿದು, ಆತನ ಮೇಲೆ ಅಂಬುಗಳ ಮಳೆಯನ್ನು ಕರೆಯಲು ಆರಂಭಿಸಿದನು. ಶ್ರೀರಾಮನಾದರೊ ನಿರ್ಲಕ್ಷ್ಯಭಾವದಿಂದ ಬಾಣಪ್ರಯೋಗಮಾಡಿ ಅವುಗಳನ್ನೆಲ್ಲಾ ಮಧ್ಯಮಾರ್ಗದಲ್ಲಿಯೆ ಖಂಡಿಸಿದನು. ಬಹುದಿನಗಳ ಬಯಕೆ ಕೈಸಾರ್ದವರಂತೆ ಇಬ್ಬರೂ ಉತ್ಸಾಹಗೊಂಡು ಯುದ್ಧಮಾಡಲು ಆರಂಭಿಸಿದರು. ಒಬ್ಬರನ್ನೊಬ್ಬರು ಸಂಹರಿಸಬೇಕೆಂಬ ಆಕಾಂಕ್ಷೆಯಿಂದ ಇಬ್ಬರೂ ತುಂಬಿದವರು. ಇಬ್ಬರೂ ಶಸ್ತ್ರ ವಿದ್ಯಾವಿಶಾರದರು; ಉತ್ತಮೋತ್ತಮವಾದ ಶಸ್ತ್ರಾಸ್ತ್ರಗಳನ್ನು ಧರಿಸಿರುವವರು.

ಬರುಬರುತ್ತಾ ರಾಮರಾವಣರ ಯುದ್ಧ ಬಿಸಿಯೇರಿ ಬಿರುಸಾಗುತ್ತಾ ನಡೆಯಿತು. ಶ್ರೀರಾಮನು ಪ್ರಯೋಗಿಸಿದ ರೌದ್ರಾಸ್ತ್ರವನ್ನು ರಾವಣನು ತನ್ನ ಬಾಣದಿಂದ ಕತ್ತರಿಸಲು, ಅದು ಐದು ಹೆಡೆಗಳ ಸರ್ಪದಂತೆ ಭೂಮಿಯನ್ನು ಭೇದಿಸಿಕೊಂಡು ಹೋಯಿತು. ಈಗ ರಾವಣನು ತನ್ನ ಎದುರಾಳಿಯ ಮೇಲೆ ಅಸುರಾಸ್ತ್ರವನ್ನು ಬಿಟ್ಟನು. ಅದು ಮಹಾ ಕ್ರೂರಮೃಗಗಳ ಆಕಾರವನ್ನು ಧರಿಸಿಕೊಂಡು ತೆರೆದಬಾಯಿಯಿಂದ ಕಿಡಿಗಳನ್ನುಗುಳುತ್ತಾ ಒಂದಕ್ಕೆ ಹತ್ತಾಗಿ ನೂರಾಗಿ ಹೊರಟುಬರುತ್ತಿತ್ತು. ಶ್ರೀರಾಮನು ಆಗ್ನೇಯಾಸ್ತ್ರದಿಂದ ಅದನ್ನು ನಿವಾರಿಸಲು, ರಾವಣನು ದ್ವಿಗುಣಿತವಾದ ಕೋಪದಿಂದ ರೌದ್ರಾಸ್ತ್ರವನ್ನು ಬಿಟ್ಟನು. ಅದರ ಪ್ರಭಾವದಿಂದ ಶೂಲಗಳೂ ಲಾಳವಿಂಡಿಗೆಗಳೂ ಕೊಳ್ಳಿಗಳೂ ಸೃಷ್ಟಿಯಾಗಿ ಎಲ್ಲೆಲ್ಲಿಯೂ ಸಂಚರಿಸಲಾರಂಭಿಸಿದುವು. ಶ್ರೀರಾಮನು ಗಾಂಧರ್ವಾಸ್ತ್ರದಿಂದ ಅದನ್ನು ನಾಶಮಾಡಿದನು. ಆಮೇಲೆ ಸೌರಾಸ್ತ್ರ ಬಂದಿತು; ಶ್ರೀರಾಮನು ಅದನ್ನೂ ಕತ್ತರಿಸಿದನು. ಹೀಗೆ ಅಣ್ಣನು ರಾಕ್ಷಸೇಶ್ವರನೊಡನೆ ಹೋರಾಡುತ್ತಿರುವುದನ್ನು ಕಂಡು ಲಕ್ಷ್ಮಣಸ್ವಾಮಿ ಆತನಿಗೆ ಸ್ವಲ್ಪ ವಿಶ್ರಾಂತಿ ಸಿಕ್ಕಲೆಂದು ಏಳು ಬಾಣಗಳನ್ನು ಪ್ರಯೋಗಿಸಿ ರಾಕ್ಷಸೇಶ್ವರನ ಧ್ವಜವನ್ನು ಕತ್ತರಿಸಿ ಸಾರಥಿಯನ್ನು ಸಂಹರಿಸಿದನು. ಮತ್ತೈದು ಬಾಣಗಳಿಂದ ಆ ಶೂರನು ರಾವಣನ ಧನುಸ್ಸನ್ನು ಕತ್ತರಿಸಿ ಹಾಕಿದನು. ಅದೇ ವೇಳೆಗೆ ವಿಭೀಷಣನು ಮುಂದಕ್ಕೆ ನುಗ್ಗಿ ಲಂಕೇಶ್ವರನ ರಥಕ್ಕೆ ಹೂಡಿದ್ದ ಕುದುರೆಗಳನ್ನು ಹೊಡೆದು ಕೆಡಹಿದನು.

ತನ್ನ ರಥದ ಕುದುರೆಗಳು ನೆಲಕ್ಕುರುಳುವಷ್ಟರಲ್ಲಿಯೆ ನೆಲಕ್ಕೆ ಲಂಘಿಸಿ ನಿಂತ ವೀರ ರಾವಣನು ಕೆಂಗಣ್ಣಿನಿಂದ ವಿಭೀಷಣನನ್ನು ದುರುಗುಟ್ಟಿಕೊಂಡು ನೋಡುತ್ತಾ ವಜ್ರಾಯುಧಕ್ಕೆ ಸಮಾನವಾದ ಶಕ್ತ್ಯಾಯುಧವನ್ನು ಅವನ ಮೇಲೆ ಪ್ರಯೋಗಿಸಿದನು. ಅದನ್ನು ಕಂಡು ಲಕ್ಷ್ಮಣನು ಮೂರು ಬಾಣಗಳನ್ನು ಬಿಟ್ಟು ಅದನ್ನು ಪುಡಿಪುಡಿಮಾಡಿದನು. ಈ ಉದ್ಧಟತನದಿಂದ ಕೋಪಗೊಂಡ ರಾವಣೇಶ್ವರನು ಮತ್ತೊಂದು ಶಕ್ತ್ಯಾಯುಧವನ್ನು ತೆಗೆದುಕೊಂಡು ಲಕ್ಷ್ಮಣನ ಮೇಲೆ ಪ್ರಯೋಗಿಸಿದನು. ಕಿಡಿಗಾರುತ್ತಾ ಬರುತ್ತಿರುವ ಆ ಶಕ್ತಿಯನ್ನು ಕಂಡು ಶ್ರೀರಾಮಚಂದ್ರನು “ಲಕ್ಷ್ಮಣನಿಗೆ ಕ್ಷೇಮವಾಗಲಿ!” ಎಂದು ಜಪಿಸಹತ್ತಿದನು. ಆದರೇನು? ಅಮೋಘವಾದ ಆ ಶಕ್ತಿ ಕ್ರೋಧಗೊಂಡ ಸರ್ಪದಂತೆ ಮಹಾ ವೇಗದಿಂದ ಬಂದು ಲಕ್ಷ್ಮಣನ ವಕ್ಷಸ್ಥಳಕ್ಕೆ ಬಡಿಯಿತು. ಅದರಿಂದ ತರಹರಿಸಿಕೊಳ್ಳಲಾರದೆ ಆತನು ಮೂರ್ಛಿತನಾಗಿ ನೆಲಕ್ಕುರುಳಿದನು.

ಲಕ್ಷ್ಮಣನು ನೆಲಕ್ಕುರುಳಿದುದನ್ನು ಕಾಣುತ್ತಲೆ ಶ್ರೀರಾಮನ ಕಣ್ಣುಗಳು ಕಂಬನಿದುಂಬಿದುವು. ಆದರೆ ಮರುಕ್ಷಣದಲ್ಲಿಯೆ ಪ್ರಳಯ ಭೈರವನಂತೆ ವಿಜೃಂಭಿಸಿ, ರಾವಣನನ್ನು ನಿಶಿತ ಶರಗಳಿಂದ ಮುಚ್ಚಿ ಹಾಕಿದನು. ಅತ್ತ ರಾವಣೇಶ್ವರನು ಪ್ರಯೋಗಿಸಿದ ಶಕ್ತಿ ಲಕ್ಷ್ಮಣನ ಹೃದಯವನ್ನು ಭೇದಿಸಿಕೊಂಡು ಹೊರಬಂದಿತು. ಅದನ್ನು ಮುಟ್ಟಲು ವಾನರರಿಗೆಲ್ಲಾ ಹೆದರಿಕೆ. ಶ್ರೀರಾಮಚಂದ್ರನೇ ಅದನ್ನು ಕೈಲಿ ತೆಗೆದುಕೊಂಡು ಮುರಿದು ಹಾಕಿದನು. ಅಲ್ಲದೆ, ರಾವಣೇಶ್ವರನು ತನ್ನ ಮೇಲೆ ಸುರಿಸುತ್ತಿರುವ ಬಾಣವರ್ಷವನ್ನು ಸ್ವಲ್ಪವೂ ಲಕ್ಷಿಸದೆ ಲಕ್ಷ್ಮಣನನ್ನು ಎತ್ತಿಕೊಂಡು ಹನುಮಂತ ಸುಗ್ರೀವರ ವಶಕ್ಕೊಪ್ಪಿಸಿ, ಅನಂತರ ಶತ್ರುವನ್ನು ಮರ್ದಿಸಲು ಮೊದಲು ಮಾಡಿದನು. ಆತನ ಉರುಬನ್ನು ತಾಳಲಾರದೆ ರಾಕ್ಷಸರಾಜನು ಯುದ್ಧರಂಗದಿಂದ ಕಾಲ್ದೆಗೆದು ಲಂಕಾಭಿಮುಖನಾಗಿ ಓಡಬೇಕಾಯಿತು.

ಅತ್ತ ರಾವಣನು ಬೆನ್ನಿತ್ತು ಓಡುತ್ತಲೆ ಇತ್ತ ರಾಮಚಂದ್ರನು ತಮ್ಮನ ಯೋಗಕ್ಷೇಮದಲ್ಲಿ ತೊಡಗಿದನು. ನೆಲದ ಮೇಲೆ ಬಿದ್ದು ನೋವಿನಿಂದ ನರಳುತ್ತಿರುವ ತಮ್ಮನನ್ನು ಸುಷೇಣನಿಗೆ ತೋರಿಸಿ “ಅಯ್ಯಾ ವಾನರೋತ್ತಮನೆ, ರಕ್ತದಲ್ಲಿ ಮುಳುಗಿ ಬಿದ್ದಿರುವ ಈ ನನ್ನ ತಮ್ಮನನ್ನು ಕಾಣುತ್ತಲೆ ನನ್ನ ಶಕ್ತಿಯೆಲ್ಲವೂ ಉಡುಗಿದಂತಾಗಿ ಹೋಗಿದೆ. ನನಗೆ ಇನ್ನು ಯುದ್ಧ ಮಾಡುವ ಶಕ್ತಿ ಎಲ್ಲಿಯದು? ಈ ನನ್ನ ತಮ್ಮನಿಗೆ ಅಪಾಯವಾದ ಮೇಲೆ ನಾನು ಜೀವಿಸಿದ್ದು ತಾನೆ ಏನು ಪ್ರಯೋಜನ? ನನಗಿನ್ನು ಜೀವಿತದಲ್ಲಿ ಆಶೆಯಿಲ್ಲ. ಅಯ್ಯೊ, ಈ ನನ್ನ ವತ್ಸನು ಕ್ಷಣಕ್ಷಣಕ್ಕೂ ನಂದಿಹೋಗುತ್ತಿದ್ದಾನೆಯಲ್ಲಾ! ಇನ್ನು ಆ ಸೀತೆಯಿಂದ ತಾನೆ ಏನಾಗಬೇಕು? ಲೋಕದಲ್ಲಿ ಹೆಂಡತಿ ಹೋದರೆ ಮತ್ತೊಬ್ಬ ಹೆಂಡತಿ ದೊರೆತಾಳು. ಆದರೆ ತಮ್ಮ ಹೋದರೆ ಪುನಃ ತಮ್ಮ ದೊರೆತಾನೆ?” ಎಂದು ದೀರ್ಘವಾಗಿ ನಿಟ್ಟುಸಿರುಬಿಡುತ್ತಾ ಕಣ್ಣೀರುಗರೆದನು. ದುಃಖದಿಂದ ಆತನ ಇಂದ್ರಿಯಗಳೆಲ್ಲವೂ ಕದಡಿಹೋಗಿದ್ದುವು. ಇಂತಹ ಸ್ಥಿತಿಯಲ್ಲಿದ್ದ ಆ ರಘುವೀರನನ್ನು ಸುಷೇಣನು ಸಮಾಧಾನಪಡಿಸುತ್ತಾ “ಎಲೈ ಮಹಾಬಾಹು, ಲಕ್ಷ್ಮಣನೇನೊ ಮೃತಿ ಹೊಂದಿಲ್ಲ. ಆದ್ದರಿಂದ ನೀನು ಇಷ್ಟು ದುಃಖಿಸುವುದಕ್ಕೆ ಕಾರಣಗಳೇನೂ ಇಲ್ಲ” ಎಂದು ಹೇಳಿ ಹನುಮಂತನ ಕಡೆಗೆ ತಿರುಗಿ, “ಮಾರುತಿ, ನೀನೀಗಲೆ ಓಷಧಿಪರ್ವತಕ್ಕೆ ಹೋಗಿ ವಿಶಲ್ಯಕರಣಿ, ಸಾವರ್ಣಕರಣಿ, ಸಂಧಾನಕರಣಿ ಎಂಬ ಮೂಲಿಕೆಗಳನ್ನು ತೆಗೆದುಕೊಂಡು ಬಾ! ಅವುಗಳನ್ನು ತಂದಲ್ಲಿ ಲಕ್ಷ್ಮಣದೇವ ಬದುಕುತ್ತಾನೆ” ಎಂದು ಹೇಳಿದನು.

ಸುಷೇಣನು ಹೇಳಿದುದೆ ತಡ, ಹನುಮಂತನು ಒಂದೇ ಉಸಿರಿಗೆ ಓಷಧಿ ಪರ್ವತಕ್ಕೆ ಹಾರಿದನು. ಆದರೆ ಓಷಧಿಗಳು ಆತನಿಗೆ ಕಾಣಿಸಲಿಲ್ಲ. ಆದ್ದರಿಂದ ಆ ಪರ್ವತದ ಶಿಖರವನ್ನೇ ಕಿತ್ತುಕೊಂಡು ಹಿಂದಿರುಗಿದನು. ಆ ಶಿಖರವನ್ನು ಸುಷೇಣನ ಮುಂದಿಟ್ಟು “ಅಯ್ಯಾ ವಾನರಶ್ರೇಷ್ಠನೆ, ಮೂಲಿಕೆ ಯಾವುದೆಂಬುದು ನನಗೆ ತಿಳಿಯಲಿಲ್ಲ. ಆದ್ದರಿಂದ ಶಿಖರವನ್ನೆ ತಂದಿದ್ದೇನೆ. ನಿನಗೆ ಬೇಕಾದುದನ್ನು ನೀನೇ ಹುಡುಕಿಕೊ” ಎಂದನು. ಸುಷೇಣನು ನಕ್ಕು ಅದರಲ್ಲಿದ್ದ ಮೂಲಿಕೆಗಳನ್ನು ತೆಗೆದುಕೊಂಡು ಲಕ್ಷ್ಮಣನ ಮೂಗಿನಲ್ಲಿ ಹಿಡಿದನು. ಅದರ ಗಂಧವನ್ನು ಆಪ್ರಾಣಿಸುತ್ತಿದ್ದಂತೆಯೆ ಲಕ್ಷ್ಮಣಸ್ವಾಮಿ ನಿರೋಗಿಯಾಗಿ ಎದ್ದು ಕುಳಿತನು. ವಾನರರೆಲ್ಲರೂ ಮಹದಾನಂದದಿಂದ ಸುಷೇಣನನ್ನೂ ಹನುಮಂತನನ್ನೂ ಬಾಯ್ತುಂಬ ಹೊಗಳಿದರು. ಶ್ರೀರಾಮಚಂದ್ರನು ಅಕ್ಷತನಾಗಿದ್ದ ತಮ್ಮನನ್ನು ಆಲಿಂಗಿಸಿ ಆನಂದಬಾಷ್ಪಗಳನ್ನು ಸುರಿಸಿದನು.

* * *