ಲಕ್ಷ್ಮಣನು ಒಮ್ಮೆ ಅಪಾಯಕ್ಕೊಳಗಾದುದನ್ನು ಕಂಡು ಶ್ರೀರಾಮಚಂದ್ರನಿಗೆ ಯುದ್ಧವನ್ನು ಅಲ್ಲಿಗೇ ನಿಲ್ಲಿಸಿಬಿಡಬೇಕೆನ್ನಿಸಿತು. ಆದರೆ ಲಕ್ಷ್ಮಣನು ಆತನನ್ನು ಕುರಿತು “ಅಣ್ಣಾ, ರಾವಣನನ್ನು ಸಂಹರಿಸುವೆನೆಂಬ ನಿನ್ನ ಪ್ರತಿಜ್ಞೆ ಏನಾಯಿತು? ಸತ್ಪುರುಷರು ತಮ್ಮ ಪ್ರತಿಜ್ಞೆಯನ್ನು ಉಳಿಸಿಕೊಳ್ಳದೆ ಇರುತ್ತಾರೆಯೆ? ನೀನು ಆ ದುರಾತ್ಮನಾದ ರಾವಣನನ್ನು ಕೊಲ್ಲುವುದನ್ನೆ ಕಾಯುತ್ತಿರುವೆನು. ನನ್ನ ಕೋರಿಕೆಯನ್ನು ಸಲ್ಲಿಸು” ಎಂದನು. ತಮ್ಮನ ಮಾತಿನಂತೆ ಶ್ರೀರಾಮನು ಕೋದಂಡಪಾಣಿಯಾಗಿ ಯುದ್ಧರಂಗವನ್ನು ಪ್ರವೇಶಿಸಿ ಟಂಕಾರಮಾಡಿದನು. ಅದನ್ನು ಕೇಳಿದೊಡನೆಯೆ ರಾವಣನು ರಥವನ್ನು ಆತನ ಬಳಿಗೆ ಹರಿಯಿಸಿದನು. ಇಬ್ಬರು ಮಹಾಯೋಧರು ಪರಸ್ಪರ ಇದಿರಾಗಲು ಅವರ ರಣಕೌಶಲವನ್ನು ನೋಡುವುದಕ್ಕಾಗಿ ದೇವತೆಗಳು ಆಕಾಶದಲ್ಲಿ ನೆರೆದರು. ರಾವಣನು ರಥವನ್ನೇರಿ ಯುದ್ಧ ಮಾಡುತ್ತಿರಲು ಶ್ರೀರಾಮನು ನೆಲದ ಮೇಲೆ ನಿಂತು ಯುದ್ಧಮಾಡಬೇಕಾಗಿತ್ತು. ಇದನ್ನು ನೋಡಿ ದೇವೇಂದ್ರನು ತನ್ನ ಸಾರಥಿಯಾದ ಮಾತಲಿಯೊಡನೆ ತನ್ನ ರಥವನ್ನು ಆತನಿಗಾಗಿ ರಣರಂಗಕ್ಕೆ ಕಳುಹಿಸಿಕೊಟ್ಟನು. ಶ್ರೀರಾಮನು ಆ ರಥಕ್ಕೆ ಪ್ರದಕ್ಷಿಣೆ ಮಾಡಿ ಏರಿದನು.

ರಾಮರಾವಣ ಯುದ್ಧ ಆರಂಭವಾಯಿತು. ಗಂಧರ್ವಾಸ್ತ್ರವನ್ನು ಗಂಧರ್ವಾಸ್ತ್ರದಿಂದಲೂ ದೈವಾಸ್ತ್ರವನ್ನು ದೈವಾಸ್ತ್ರದಿಂದಲೂ ಹೊಡೆದು ಕೆಡವಿದರು. ರಾವಣನ ಸರ್ಪಾಸ್ತ್ರ ಶ್ರೀರಾಮನ ಗರುಡಾಸ್ತ್ರದಿಂದ ನಾಶವಾಯಿತು. ಕುಪಿತನಾದ ಲಂಕೇಶ್ವರನು ಕೂರಂಬಿನಿಂದ ಇಂದ್ರರಥದ ಧ್ವಜವನ್ನು ಕೆಡವಿ, ಹಲವು ಬಾಣಗಳಿಂದ ಅಶ್ವಗಳನ್ನೂ ಸಾರಥಿಯನ್ನೂ ನೋಯಿಸಿದನು. ಅಷ್ಟೇ ಅಲ್ಲ, ಆತನ ಬಾಣವರ್ಷದಿಂದ ಶ್ರೀರಾಮನೂ ಗಾಸಿಯಾದನು. ಅದನ್ನು ಕಂಡು ದೇವತೆಗಳು ನಡುಗಿದರು. ಹೀಗೆ ಎದುರಾಳಿಯಿಂದ ಗಾಯಗೊಂಡ ಶ್ರೀರಾಮನು ಕೆಂಗಣ್ಣಿನಿಂದ ಅವನನ್ನು ದಿಟ್ಟಿಸುತ್ತಾ ಔಡುಗಚ್ಚಿದನು. ಆತನ ಕೋಪದಿಂದ ಜಗತ್ತಿನ ಸಮಸ್ತ ಜೀವರಾಶಿ ಭಯದಿಂದ ತಲ್ಲಣಗೊಂಡುವು. ಭೂಮಿ ನಡುಗಿ ಹೋಯಿತು. ಅನೇಕ ಉತ್ಪಾತಗಳು ಕಾಣಿಸಿಕೊಂಡುವು. ಇವುಗಳನ್ನು ಕಂಡು ಮಹಾವೀರನಾದ ದಶಶಿರನೂ ನಡುಗಿಹೋದನು. ತನಗೇನೂ ಕೇಡು ಸಂಭವಿಸುವುದೆಂದುಕೊಂಡು ಆತನು ತನ್ನ ಆಯುಧಗಳಲ್ಲೆಲ್ಲಾ ಮಹಾ ಕ್ರೂರವಾದ ಶೂಲಾಯುಧವನ್ನು ಶ್ರೀರಾಮನ ಮೇಲೆ ಪ್ರಯೋಗಿಸಿ, ಸಿಂಹನಾದ ಮಾಡಿದನು. ಎಂಟು ಘಂಟೆಗಳಿಂದ ಅಲಂಕೃತವಾದ ಆ ಶೂಲಾಯುಧವು ಕಿಡಿಗಾರುತ್ತಾ ರಾಮನ ಪ್ರಾಣಗಳನ್ನು ಹುಡುಕುತ್ತಾ ಹೊರಟಿತು. ಅದನ್ನು ನಾಶಮಾಡುವುದಕ್ಕಾಗಿ ರಾಘವನು ಪ್ರಯೋಗಿಸಿದ ಬಾಣಗಳನ್ನೆಲ್ಲಾ ಆ ಶೂಲ ಸುಟ್ಟು ಭಸ್ಮಮಾಡಿತು. ಅದರಿಂದ ಆತನು ರೋಷಾವಿಷ್ಟನಾಗಿ ಇಂದ್ರನು ಕಳುಹಿಸಿದ್ದ ಶಕ್ತ್ಯಾಯುಧವನ್ನು ಅದರ ಮೇಲೆ ಪ್ರಯೋಗಿಸಿದನು. ಪ್ರಳಯಕಾಲದ ಮಹೋಲ್ಕೆಯಂತೆ ಹೊರಟ ಆ ಶಕ್ತಿ ರಾವಣನ ಶೂಲವನ್ನು ಸುಟ್ಟು ಹಾಕಿತು. ಹಿಂದೆಯೆ ಶ್ರೀರಾಮನು ಮೂರು ಬಾಣಗಳನ್ನು ರಾವಣನ ಹಣೆಗೆ ಗುರಿಯಿಟ್ಟು ಹೊಡೆದನು. ಅವು ಗುರಿಯನ್ನು ಮುಟ್ಟಿ ಎದುರಾಳಿಯ ರಕ್ತವನ್ನು ಕುಡಿದುವು. ಆ ಪೆಟ್ಟಿಗೆ ರಾವಣನು ತತ್ತರಿಸಿ ಹೋದನು.

ರಾಮಬಾಣದಿಂದ ಗಾಸಿಗೊಂಡ ರಾವಣೇಶ್ವರನು ಏಕಕಾಲದಲ್ಲಿಯೆ ಅಸಂಖ್ಯಾತವಾದ ಬಾಣಗಳನ್ನು ಆತನ ಮೇಲೆ ಸುರಿಸಿದನು. ಶ್ರೀರಾಮನೂ ಅವುಗಳನ್ನು ತಡೆಯಲು ಅಷ್ಟೇ ಬಾಣಗಳನ್ನು ಪ್ರಯೋಗಿಸಿದನು. ಇಬ್ಬರೂ ರಕ್ತದಿಂದ ನೆನೆದುಹೋಗಿ ಹೂಬಿಟ್ಟ ಮುತ್ತುಗದ ಮರಗಳಂತೆ ಕಾಣುತ್ತಿದ್ದರು. ದಿಕ್ಕುಗಳೆಲ್ಲವೂ ಬಾಣಗಳಿಂದ ತುಂಬಿಹೋಗಿ ಕತ್ತಲೆಗವಿಯಿತು. ಎದುರಾಳಿಗೆ ಶ್ರೀರಾಮನು ಕೂಗಿ ಹೇಳಿದನು – “ಎಲವೊ ರಾಕ್ಷಸಾಧಮ, ನಾನಿಲ್ಲದಾಗ ವೇಷಾಂತರದಿಂದ ಬಂದು ಜಾನಕಿಯನ್ನು ಕದ್ದುತಂದೆ. ಪರಸ್ತ್ರೀಯನ್ನು ಕದ್ದುತಂದ ಪರಮಪಾಪಿಯಾದ ನೀನು ವೀರನೆಂದು ಹೇಳಿಕೊಳ್ಳುವಿಯಲ್ಲವೆ? ನೀನು ಕದ್ದುತಂದಾಗಲೇ ಸಿಕ್ಕಿದ್ದರೆ ಅಂದೇ ನಿನ್ನನ್ನು ಯಮಾಲಯಕ್ಕೆ ಕಳುಹಿಸುತ್ತಿದ್ದೆ. ಹೋಗಲಿ ಇಂದಾದರೂ ನನ್ನ ಕೈಗೆ ಸಿಕ್ಕಿಬಿದ್ದೆಯಲ್ಲವೆ? ಈಗ ನಿನಗಿನ್ನು ನಿಸ್ತಾರವಿಲ್ಲ. ನಿನ್ನ ಮಾಂಸವನ್ನು ಹದ್ದು ಕಾಗೆಗಳಿಗೆ ಉಣಿಸಾಗಿ ಮಾಡುತ್ತೇನೆ. ”

ಮಾತನಾಡುತ್ತಾ ಹೋದಂತೆ ಶ್ರೀರಾಮನ ರಕ್ತ ಕಾಯುತ್ತಾ ಹೋಯಿತು. ಆತನ ಉತ್ಸಾಹ ಸಂತೋಷಗಳೂ ಬಲಪರಾಕ್ರಮಗಳೂ ಇಮ್ಮಡಿಸಿದುವು. ಮಹಾತ್ಮನಾದ ಆತನಿಗೆ ಸಮಸ್ತ ಶಸ್ತ್ರಾಸ್ತ್ರಗಳೂ ಗೋಚರವಾದುವು. ಪರಮಾಶ್ಚರ್ಯಕರವಾಗಿ ಕರಲಾಘವನ್ನು ತೋರಲು ಆತ ಉಪಕ್ರಮಿಸಿದನು. ಇಂಥ ಶುಭಲಕ್ಷಣಗಳು ಕಾಣುಬರುತ್ತಿರುವಾಗಲೆ ಶತ್ರುವನ್ನು ತೀರಿಸಿಬಿಡಬೇಕೆಂದು ಆತನು ನಿಶ್ಚಯಿಸಿದನು. ರಾಮಬಾಣಗಳ ಬಿರುಸನ್ನು ಕಂಡು ರಾವಣನಿಗೆ ಧನುರ್ಬಾಣಗಳನ್ನು ಹಿಡಿಯಲು ಶಕ್ತಿಯಿಲ್ಲದಂತಾಯಿತು. ತನಗಿನ್ನು ಮೃತ್ಯು ಸನ್ನಿಹಿತವಾಗಿದೆಯೆಂದುಕೊಂಡನು ಅವನು. ಆಗ ಅವನ ಸಾರಥಿ ತನ್ನ ಒಡೆಯನ ದುರವಸ್ಥೆಯನ್ನು ಕಂಡು ಆತನನ್ನು ಮೆಲ್ಲಮೆಲ್ಲನೆ ಯುದ್ಧರಂಗದಿಂದ ಹಿಂದಕ್ಕೆ ಕರೆದೊಯ್ದನು.

ಕೇವಲ ತನ್ನ ಮೇಲಿನ ಮೋಹದಿಂದ ತನ್ನನ್ನು ರಣರಂಗದಿಂದ ಹಿಂದಕ್ಕೆ ಕರೆದೊಯ್ದನು. ಸಾರಥಿಯನ್ನು ಕಂಡು ರಾವಣೇಶ್ವರನಿಗೆ ರೇಗಿಹೋಯಿತು. ಆತನು ಅವನನ್ನು ಕುರಿತು “ಎಲವೊ ದುರಾತ್ಮ, ನನ್ನನ್ನು ಹೀನಬಲನೆಂದು ಭಾವಿಸಿಯಲ್ಲವೆ ನೀನು ರಣರಂಗದಿಂದ ರಥವನ್ನು ಹಿಮ್ಮೆಟ್ಟಿಸಿದುದು? ಇದು ಎಂತಹ ಅವಮಾನವೆಂದು ಅರಿತುಕೊಳ್ಳುವ ಶಕ್ತಿ ನಿನಗೆ ಇಲ್ಲದೆ ಹೋಯಿತಲ್ಲವೆ? ಶತ್ರುವಿನ ಇದಿರಿನಿಂದ ರಥವನ್ನು ಹಿಂದಿರುಗಿಸಿ ಬಹುಕಾಲದಿಂದ ಗಳಿಸಿದ್ದ ನನ್ನ ಕೀರ್ತಿಗೆ ಮಸಿಯನ್ನು ಮೆತ್ತಿರುವೆ. ನನಗೆ ಹಿತವನ್ನು ಆಚರಿಸುವ ನೆಪದಲ್ಲಿ ಶತ್ರುವಿಗೆ ಸಂತೋಷವನ್ನುಂಟುಮಾಡಿದ ನೀನೂ ನನ್ನ ಶತ್ರುವಿನ ಕಡೆಯವನೆಂದೆ ಭಾವಿಸಬೇಕಾಗಿದೆ. ಇಷ್ಟು ಕಾಲ ನನ್ನ ಸಾರಥಿಯಾಗಿದ್ದುಕೊಂಡು ನನ್ನ ಗುಣ ಸ್ವಭಾವವನ್ನು ಅರಿತಿದ್ದರೂ ನೀನೀರೀತಿ ಹೇಯಕಾರ್ಯವನ್ನು ಆಚರಿಸಿದುದು ಆಶ್ಚರ್ಯಕರವಾಗಿದೆ. ಮೊದಲು ರಥವನ್ನು ಹಿಂದಿರುಗಿಸಿ, ರಣರಂಗಕ್ಕೆ ಚೋದಿಸು” ಎಂದನು. ಆ ಕಠಿಣ ನುಡಿಗಳಿಂದ ಮನನೊಂದ ಸಾರಥಿ ವಿನಯಪೂರ್ವಕವಾಗಿ ತನ್ನ ಸ್ವಾಮಿಯನ್ನು ಕುರಿತು “ಮಹಾರಾಜ, ನಾನು ಬುದ್ಧಿಹೀನನಾಗಿ ಹೀಗೆ ಮಾಡಿದೆನೆಂದಾಗಲಿ ಶತ್ರುವಿನ ಬೋಧೆಗೊಳಗಾಗಿ ಹೀಗೆ ಮಾಡಿದೆನೆಂದಾಗಲಿ ತರ್ಕಿಸಬಾರದು, ಸ್ವಾಮಿ! ನಿಮ್ಮ ಅಪಾರವಾದ ಪ್ರೇಮಕ್ಕೆ ಪಾತ್ರನಾದ ನನ್ನಲ್ಲಿ ಸದಾ ನಿಮ್ಮ ಶ್ರೇಯಸ್ಸಾಧನೆಯ ಹೊರತು ಬೇರೊಂದು ನೀಚಭಾವ ಉದಿಸಲು ಸಾಧ್ಯವಿಲ್ಲ. ನೀವು ಯುದ್ಧದಲ್ಲಿ ಬಹಳವಾಗಿ ದಣಿದಿದ್ದಿರಿ; ನಿಮ್ಮ ರಣೋತ್ಸಾಹ ಕುಗ್ಗುತ್ತಿತ್ತು; ಯುದ್ಧವೂ ನಿಮಗೆ ಸುಮುಖವಾಗಿರಲಿಲ್ಲ ಇದರ ಮೇಲೆ ಅಮಂಗಳಕರವಾದ ಅನೇಕ ಉತ್ಪಾತಗಳು ಬೇರೆ ಕಂಡುಬಂದುವು. ಆದ್ದರಿಂದ, ನಿಮ್ಮ ಕೃಪೆಯಿಂದ ಉತ್ತಮವಾದ ಸಾರಥಿಯ ಲಕ್ಷಣಗಳೆಲ್ಲವನ್ನೂ ಚೆನ್ನಾಗಿ ಅರಿತುಕೊಂಡಿರುವ ನಾನು ನನ್ನ ಕರ್ತವ್ಯವನ್ನು ನೇರವೇರಿಸಿದೆ. ನಿಮ್ಮಲ್ಲಿ ರೂಢಮೂಲವಾಗಿರುವ ಪ್ರೇಮವೆ ನನ್ನಿಂದ ಈ ಕಾರ್ಯವನ್ನು ಮಾಡಿಸಿತು. ಈಗ ನೀವು ಅಪ್ಪಣೆ ಮಾಡಿದುದನ್ನು ತಲೆಯಲ್ಲಿ ಹೊತ್ತು ನಡೆಸಲು ಸಿದ್ಧನಾಗಿದ್ದೇನೆ” ಎಂದು ಹೇಳಿದನು.

ಸೂತನ ನುಡಿಗಳಿಂದ ಸಂತುಷ್ಟನಾದ ರಾವಣೇಶ್ವರನು ಆತನನ್ನು ಸಮಾಧಾನಪಡಿಸಿ, ಒಡನೆಯೆ ರಥವನ್ನು ರಣರಂಗಕ್ಕೆ ಕೊಂಡೊಯ್ಯುವಂತೆ ಅಪ್ಪಣೆಮಾಡಿದನು. ಸಾರಥಿ ಆತನ ಅಪ್ಪಣೆಯಂತೆ ಕುದುರೆಗಳನ್ನು ಚಪ್ಪರಿಸಿ ಕ್ಷಣಮಾತ್ರದಲ್ಲಿ ರಥವನ್ನು ಶ್ರೀರಾಮಮೂರ್ತಿಗೆ ಅಭಿಮುಖವಾಗಿ ತಂದು ನಿಲ್ಲಿಸಿದನು. ಶತ್ರುವನ್ನು ಕಾಣುತ್ತಲೆ ರಘುವೀರನು ಸಂತೋಷದಿಂದ ತನ್ನ ಧನುಸ್ಸನ್ನು ಟಂಕಾರಮಾಡಿ, ಸಾರಥಿಯಾದ ಮಾತಲಿಗೆ ಎಲೈ ಪುರಂದರ ಸಾರಥಿ, ಈಗ ನಾನು ರಾವಣನನ್ನು ವಧಿಸಲು ನಿಶ್ಚಯಿಸಿದ್ದೇನೆ. ಬೆಂಕಿಯನ್ನು ಬಯಸಿಬರುವ ಪತಂಗದಂತೆ ಅವನೂ ನನ್ನನ್ನೆ ಅರಸುತ್ತಿದ್ದಾನೆ. ತನ್ನ ಮೃತ್ಯುವನ್ನು ತಾನೆ ಬಯಸುತ್ತಿರುವ ಅವನೆದುರಿಗೆ ರಥವನ್ನು ಹರಿಸು. ಮಹೇಂದ್ರನಿಗೆ ಸಾರಥ್ಯವನ್ನು ಮಾಡುವ ನಿನಗೆ ನಾನು ಹೇಳಿಕೊಡಬೇಕಾದುದೇನೂ ಇಲ್ಲ. ಆದರೂ ನನ್ನ ಯುದ್ಧಕ್ಕೆ ಉಚಿತವಾದ ರೀತಿಯಲ್ಲಿ ಚಿತ್ತೈಕಾಗ್ರತೆಯಿಂದ ರಥವನ್ನು ನಡಸೆಂದು ನಿನಗೆ ಜ್ಞಾಪಿಸುತ್ತೇನೆ” ಎಂದು ಹೇಳಿದನು. ವಿನಯದಿಂದ ತುಂಬಿದ ಆತನ ನುಡಿಗಳಿಂದ ಸುಪ್ರೀತನಾದ ಮಾತಲಿ ಬಹು ಜಾಣ್ಮೆಯಿಂದ ರಥವನ್ನು ನಡಸುತ್ತಾ ತನ್ನ ರಥದ ಧೂಳಿನಿಂದ ರಾವನನ ರಥವೆಲ್ಲವೂ ಮುಚ್ಚಿಹೋಗುವಂತೆ ಮಾಡಿದನು. ಕಂಗಾಣದಂತಾದ ದೈತ್ಯೇಂದ್ರನು ತೋಚಿದತ್ತ ಬಾಣಗಳನ್ನು ಸುರಿಸುತ್ತಾ ಭಯಂಕರವಾದ ಹಾವಳಿಯನ್ನು ಉಂಟುಮಾಡಿದನು.

ರಾಮರಾವಣರ ಯುದ್ಧ ಕಾವೇರುತ್ತಾ ಹೋದಂತೆ ಮತ್ತೊಮ್ಮೆ ರಾವಣನಿಗೆ ಅಪಶಕುನಗಳು ಕಾಣಿಸಿಕೊಂಡುವು. ಆತನ ತಲೆಯ ಮೇಲೆ ರಕ್ತದ ಮಳೆ ಸುರಿಯಿತು. ಆತನ ರಥ ಹೋಗುತ್ತಿದ್ದ ದಿಕ್ಕನ್ನೆಲ್ಲಾ ಹದ್ದುಗಳು ಹಿಂದಟ್ಟಿಹೋದುವು. ಹಗಲಿನಲ್ಲೆಲ್ಲಾ ಉಲ್ಕಾಪಾತಗಳಾದುವು. ಇದನ್ನು ಕಂಡು ರಾಕ್ಷಸರೆಲ್ಲರೂ ಚಿಂತಾಕ್ರಾಂತರಾದರು. ಸ್ವತಃ ರಾವಣೇಶ್ವರನೆ ನಡುಗಿದುದಲ್ಲದೆ ಭೂಮಿಯೆ ನಡುಗಿತು. ಯುದ್ಧಮಾಡುತ್ತಿದ್ದ ರಾಕ್ಷಸರ ಬಾಹುಗಳೆಲ್ಲವೂ ಸ್ತಬ್ಧವಾಗಿ ನಿಂತುವು. ಆತನು ಬದುಕಿರುವಂತೆಯೆ ರಾವಣನ ಹತ್ತಿರ ಸುಳಿದಾಡುತ್ತಿದ್ದ ನರಿಗಳು ಕೆಟ್ಟ ಧ್ವನಿಯಲ್ಲಿ ಕೂಗಿಕೊಂಡುವು. ಗಾಳಿ ಕೂಡ ಆತನಿಗೆ ವ್ಯತಿರಿಕ್ತವಾಗಿ ಬೀಸಿ ಆತನ ಕಣ್ಣುಗಳಲ್ಲಿ ಧೂಳೆರಚಿತು. ರಥದ ಕುದುರೆಗಳು ಕಣ್ಣೀರುಗರೆಯುತ್ತಾ ಹೆಜ್ಜೆ ಹೆಜ್ಜೆಗೂ ಎಡವಿದವು. ಅದೇ ಸಮಯದಲ್ಲಿಯೆ ಶ್ರೀರಾಮನಿಗೆ ಅನೇಕ ಶುಭ ಶಕುನಗಳಾದುವು. ಅದರಿಂದ ಉತ್ಸಾಹಗೊಂಡ ಆತನು ಇನ್ನು ತನ್ನ ಶತ್ರುವಿಗೆ ಕಡೆಗಾಲ ಸನ್ನಿಹಿತವಾಯಿತೆಂದು ಸಂತೋಷಪಟ್ಟನು.

ರಾಮರಾವಣರ ಭಯಂಕರ ದ್ವಂದ್ವಯುದ್ಧವನ್ನು ನೋಡುವುದರಲ್ಲಿ ಎರಡು ಸೈನ್ಯದವರೂ ತಮ್ಮ ರಣಕರ್ಮವನ್ನು ಮರೆತುಬಿಟ್ಟರು. ರಣಭೂಮಿಯೆಲ್ಲವೂ ಬರೆದಿಟ್ಟ ಚಿತ್ರದಂತೆ ಸ್ತಬ್ದರಾಗಿ ನಿಂತು ನೋಡುತ್ತಿರುವ ಯೋಧರಿಂದ ತುಂಬಿಹೋಯಿತು. ರಾವಣನು ಬಿಡುತ್ತಿದ್ದ ಬಾಣಗಳು ವ್ಯರ್ಥವಾಗಲಾರಂಭಿಸಿದುವು. ಶ್ರೀರಾಮನ ಬಾಣಗಳು ತಪ್ಪದೆ ಗುರಿಯನ್ನು ಭೇದಿಸುತ್ತಿದ್ದುವು. ಆತನ ಬಾಣಗಳಿಂದ ಎದುರಾಳಿಯ ರಥಧ್ವಜ ಭಗ್ನವಾಗಿ ಕೆಳಗೆ ಬಿತ್ತು. ರಾವಣನು ಅದೇ ಪ್ರಯತ್ನದಿಂದ ಪ್ರಯೋಗಿಸಿದ ಬಾಣ ವ್ಯರ್ಥವಾಯಿತು. ತನ್ನ ಕಾರ್ಯ ವಿಫಲವಾದಂತೆಲ್ಲಾ ಆತನ ರೋಷ ಹೆಚ್ಚುತ್ತಿತ್ತು. ಜ್ವಲಿಸುವ ಬಾಣಗಳನ್ನು ಅತನು ಎದುರಾಳಿಯ ರಥಾಶ್ವಗಲ ಮೇಲೆಬಿಟ್ಟನು. ಅವು ಕುದುರೆಗಳಿಗೆ ತಾಕಿದರೂ ಅದರಿಂದೇನೂ ಪ್ರಯೋಜನವಾಗಲಿಲ್ಲ. ಆದರೂ ಆತನು ನಿರರ್ಗಳವಾಗಿ ಬಾಣಗಳನ್ನು ಕರೆಯುತ್ತಾ ಹೋದನು. ಆದರೇನು? ರಾಮಬಾಣಗಳಿಂದ ಅವೆಲ್ಲವೂ ಮಧ್ಯಮಾರ್ಗದಲ್ಲಿಯೆ ಮುರಿದು ನೆಲಕ್ಕುರುಳಿದುವು.