ಶ್ರೀರಾಮನು ಬ್ರಹ್ಮಾಸ್ತ್ರವನ್ನು ಕೈಗೆ ತೆಗೆದುಕೊಂಡು ವೇದವಿಧಿಯಿಮದ ಅದನ್ನು ಅಭಿಮಂತ್ರಿಸಿ ಹೂಡಿದನು

ರಾಮರಾವಣರು ತಮ್ಮಿಬ್ಬರಲ್ಲಿ ಒಬ್ಬರು ಉಳಿಯಬೇಕು ಮತ್ತೊಬ್ಬರು ಅಳಿಯಲೇಬೇಕೆಂಬ ನಿಶ್ಚಯದಿಂದ ಕೂಡಿದವರಾಗಿ ಭಯಂಕರವಾದ ರಣಕರ್ಮದಲ್ಲಿ ತೊಡಗಿದರು. ನೀರು ತುಂಬಿದ ಮೋಡಗಳಂತೆ ಯುದ್ಧರಂಗದಲ್ಲಿ ಸುಳಿದಾಡುತ್ತಿದ್ದ ಅವರಿಬ್ಬರ ರಥಗಳಿಂದ ಬಾಣಗಳ ಮಳೆ ಒಂದೇ ಸಮನಾಗಿ ಸುರಿಯುತ್ತಿತ್ತು. ಆ ಇಬ್ಬರು ರಣವೀರರ ಬಾಣಚಾತುರ್ಯವನ್ನು ಕಂಡು ಎರಡು ಸೈನ್ಯದವರೂ ರೋಮಾಂಚಗೊಂಡರು. ಮೇಲೆ ನಿಂತು ವೀಕ್ಷಿಸುತ್ತಿದ್ದ ದೇವತೆಗಳೆಲ್ಲರೂ “ಸಾಧು ಸಜ್ಜನರಿಗೆ ಶುಭವಾಗಲಿ! ಸಮಸ್ತ ಲೋಕಗಳಿಗೂ ಮಂಗಳವುಂಟಾಗಲಿ! ಶ್ರೀರಾಮಚಂದ್ರನು ರಣದಲ್ಲಿ ವಿಜಯಶಾಲಿಯಾಗಲಿ!” ಎಂದು ಹರಕೆ ಹೊತ್ತರು. “ಗಗನಕೆಣೆ ಗಗನವೆ, ಕಡಲಿಗೆ ಹೋಲಿಕೆ ಕಡಲೆ; ಹಾಗೆಯೆ ರಾಮ – ರಾವಣರಲ್ಲಿ ಯುದ್ಧಕ್ಕೆ ರಾಮ – ರಾವಣರ ಯುದ್ಧವೆ ಹೋಲಿಕೆ!” ಎಂದು ಯುದ್ಧವನ್ನು ನೋಡುತ್ತಿದ್ದವರೆಲ್ಲರೂ ಹೇಳಿಕೊಂಡರು.

ಶ್ರೀರಾಮಮೂರ್ತಿ ಸಮಯ ಸಾಧಿಸಿ “ಕ್ಷರ”ವೆಂಬ ತೀಕ್ಷ್ಣವಾದ ಬಾಣವನ್ನು ರಾವಣನ ಕಂಠಕ್ಕೆ ಗುರಿಯಿಟ್ಟು ಹೊಡೆದನು. ರತ್ನಕುಂಡಲಗಳಿಂದ ಬೆಳಗುತ್ತಿದ್ದ ಆತನ ತಲೆ ತತ್‌ಕ್ಷಣವೇ ದೇಹದಿಂದ ಬೇರೆಯಾಗಿ ಭೂಮಿಯ ಮೇಲೆ ಬಿತ್ತು. ಆದರೆ, ಇದೇನು? ಕತ್ತರಿಸಿದ್ದ ತಲೆಯಿದ್ದ ಕಡೆ ಹೊಸ ತಲೆಯೊಂದು ಚಿಗುರಿತು. ಶ್ರೀರಾಮಚಂದ್ರನು ಮತ್ತೊಂದು ದಿವ್ಯಾಸ್ತ್ರವನ್ನು ಬಿಟ್ಟು ಆ ರಾಕ್ಷಸೇಶ್ವರನ ಎರಡನೆಯ ತಲೆಯನ್ನೂ ಕತ್ತರಿಸಿದನು. ಯಥಾಪ್ರಕಾರ ಅದರ ಸ್ಥಳದಲ್ಲಿ ಹೊಸತಲೆಯೊಂದು ಹುಟ್ಟಿಕೊಂಡಿತು. ಶ್ರೀರಾಮನು ಆ ತಲೆಯನ್ನೂ ಕತ್ತರಿಸುವುದು, ಮತ್ತೆ ಅದರ ಸ್ಥಳದಲ್ಲಿ ಹೊಸ ತಲೆ ಹುಟ್ಟುವುದು – ಹೀಗೇ ನಡೆಯಿತು. ನೂರುಬಾರಿ ಆ ತಲೆಗಳನ್ನು ಕತ್ತರಿಸಿಹಾಕಿದರೂ ರಾವಣನು ಬೇರೆ ಸಾಯಲಿಲ್ಲ. ಶ್ರೀರಾಮನ ಶ್ರಮವೆಲ್ಲವೂ ವ್ಯರ್ಥವಾಯಿತು. ಆತನಿಗೆ ದೊಡ್ಡ ಯೋಚನೆ ಹತ್ತಿತು. ಮಾರೀಚ, ಖರ, ದೂಷಣ, ವಿರಾಧ, ಕಬಂಧ – ಮೊದಲಾದ ಸಹಸ್ರಸಹಸ್ರ ರಾಕ್ಷಸರನ್ನು ಸಂಹರಿಸಿದ ಬಾಣಗಳೆಲ್ಲಾ ವ್ಯರ್ಥವಾದುವು.

ಒಂದು ದಿನ, ಒಂದು ರಾತ್ರಿ ಕ್ಷಣವೂ ವಿರಾಮವಿಲ್ಲದೆ ರಾಮ – ರಾವಣರ ಯುದ್ಧ ನಡೆಯಿತು. ಆದರೂ ಜಯವನ್ನು ಕಾಣದೆ ವ್ಯಾಕುಲನಾಗಿದ್ದ ಶ್ರೀರಾಮಚಂದ್ರನನ್ನು ಕಂಡು ಮಾತಲಿಗೆ ಥಟ್ಟನೆ ಒಂದು ವಿಷಯ ಜ್ಞಾಪಕಕ್ಕೆ ಬಂತು. ಆ ದೇವಸಾರಥಿ ಆತನನ್ನು ಕುರಿತು “ಪ್ರಭು ಶ್ರೀರಾಮಚಂದ್ರ, ಏನೂ ಅರಿಯದವನಂತೆ ನೀನೇಕೆ ಹೀಗೆ ಚಿಂತಿಸುತ್ತಿರುವೆ? ನಿನಗೆ ತಿಳಿಯದುದು ಯಾವುದು? ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಇವನನ್ನು ಸಂಹರಿಸಬಾರದೆ?” ಎಂದನು. ಒಡನೆಯೆ ರಾಘವನು ಬ್ರಹ್ಮಾಸ್ತ್ರವನ್ನು ಜ್ಞಾಪಿಸಿಕೊಂಡನು. ಬ್ರಹ್ಮನು ತನಗೆ ಕೊಟ್ಟಿದ್ದ ಆ ಅಸ್ತ್ರವನ್ನು ಅಗಸ್ತ್ಯಋಷಿ ಶ್ರೀರಾಮನಿಗೆ ಅನುಗ್ರಹಿಸಿಕೊಟ್ಟಿದ್ದನು. ಈಗ ರಾಘವನು ನೆನೆದೊಡನೆಯೆ ಅದು ಪ್ರತ್ಯಕ್ಷವಾಗಿ ಇದಿರಿಗೆ ನಿಂತಿತು. ಶ್ರೀರಾಮನು ಅದನ್ನು ಕೈಗೆ ತೆಗೆದುಕೊಂಡು ವೇದವಿಧಿಯಿಂದ ಅದನ್ನು ಅಭಿಮಂತ್ರಿಸಿ ಧನುಸ್ಸಿನಲ್ಲಿ ಹೂಡಿದನು. ಅನಂತರ, ಜಗತ್ತೆಲ್ಲವೂ ಅದರ ಕಾವಿನಿಂದ ತಲ್ಲಣಗೊಳ್ಳುತ್ತಿರಲು ಕಿವಿಯವರೆಗೆ ಎಳೆದು ಎದುರಾಳಿಯ ಎದೆಗೆ ಗುರಿಯಿಟ್ಟು ಹೊಡೆದನು. ಗುರಿತಪ್ಪದೆ ವಕ್ಷಸ್ಥಳವನ್ನು ತಾಕಿದ ಆ ಮಹಾಸ್ತ್ರ ರಾವಣೇಶ್ವರನ ಎದೆಯನ್ನು ಭೇದಿಸಿಕೊಂಡು, ಆತನ ಪ್ರಾಣಗಳೊಡನೆ ಭೂಮಿಯನ್ನು ಪ್ರವೇಶಿಸಿ ಮತ್ತೆ ಮೇಲಕ್ಕೆದ್ದು ಶ್ರೀರಾಮನ ಬತ್ತಳಿಕೆಯನ್ನು ಸೇರಿಕೊಂಡಿತು. ಗತಪ್ರಾಣನಾದ ಲಂಕೇಶ್ವರನ್ನು ವಜ್ರದಿಂದ ಹತನಾದ ವೃತ್ರಾಸುರನಂತೆ ರಥದಿಂದ ಕೆಳಕ್ಕೆ ಬಿದ್ದನು.

ತಮ್ಮ ಒಡೆಯನ ಸಾವನ್ನು ಕಂಡು ರಾಕ್ಷಸರೆಲ್ಲರೂ ಪ್ರಾಣದಾಸೆಯನ್ನು ತೊರೆದು ದಾರಿಸಿಕ್ಕತ್ತ ಓಡಿಹೋದರು. ಅವರನ್ನು ವಾನರರು ಹಿಂದಟ್ಟಿ ಹೋಗಿ ಕೈಗೆ ಸಿಕ್ಕವರನ್ನೆಲ್ಲ ಬಡಿದು ಕೊಂದು ಹಾಕಿದರು. ಅಳಿದುಳಿದ ರಾಕ್ಷಸರು ಕಣ್ಣೀರಿಡುತ್ತಾ ಲಂಕೆಯನ್ನು ಪ್ರವೇಶಿಸಿದರು. ವಾನರರೆಲ್ಲರೂ ಸಂತೋಷ ಸಂಭ್ರಮಗಳಿಂದ ಕೋಲಾಹಲ ಧ್ವನಿಮಾಡಿದರು. ಅಂತರಿಕ್ಷದಲ್ಲಿ ದೇವದುಂದುಭಿ ಮೊಳಗಿದುವು. ಸುಖಸ್ಪರ್ಶವಾದ ಗಾಳಿ ಮೆಲ್ಲಮೆಲ್ಲನೆ ಬೀಸಿತು. ಪುಷ್ಪವೃಷ್ಟಿಯಾಯಿತು. ದೇವತೆಗಳೆಲ್ಲರೂ ಶ್ರೀರಾಮನನ್ನು ‘ಘೇ ಉಘೇ!’ ಎಂದು ಶ್ಲಾಘಿಸಿದರು. ಸುಗ್ರೀವ ವಿಭೀಷಣಾದಿಗಳು ಲಕ್ಷ್ಮಣಸ್ವಾಮಿಯೊಡಗೂಡಿ ವಿಜಯಿಯಾದ ಶ್ರೀರಾಮಚಂದ್ರನನ್ನು ಸಂತೋಷ ಸಂಭ್ರಮಗಳಿಂದ ಶಾಸ್ತ್ರೋಕ್ತವಾಗಿ ಪೂಜೆಮಾಡಿದರು. ಆತನು ಆ ವಾನರವೀರರ ಮಧ್ಯದಲ್ಲಿ ಸುರಗಣ ಮಧ್ಯದಲ್ಲಿರುವ ಮಹೇಂದ್ರನಂತೆ ವಿರಾಜಿಸುತ್ತಿದ್ದನು.

ಶ್ರೀರಾಮ ಪೂಜಾನಂತರ ವಿಭೀಷಣನು ರಣರಂಗಕ್ಕೆ ಬಂದು ಅಲ್ಲಿ ಸತ್ತುಬಿದ್ದಿದ್ದ ಅಣ್ಣನನ್ನು ಕಾಣುತ್ತಲೇ ಕಣ್ಣೀರು ತುಂಬಿದವನಾಗಿ “ಅಯ್ಯೊ ಅಣ್ಣ! ನಿನ್ನಂತಹ ಶೂರನಾದವನಿಗೆ ಎಂತಹ ದುರವಸ್ಥೆ ಪ್ರಾಪ್ತವಾಯ್ತು! ನಾನು ಹಿಂದೆಯೆ ನಿನಗೆ ಈ ದುರವಸ್ಥೆ ಪ್ರಾಪ್ತವಾಗುವುದೆಂದು ಭವಿಷ್ಯ ಹೇಳಿದ್ದುದು ನಿಜವಾಯಿತಲ್ಲವೆ? ಅಯ್ಯೊ! ಕಾಮದಿಂದ ಕುರುಡನಾಗಿದ್ದ ನಿನಗೆ ನಾನು ಹೇಳಿದ ಧರ್ಮ ಗೋಚರಿಸದೆ ಹೋಯಿತು. ಸೀತಾಪಹರಣದ ಪಾಪ ಎಂತಹ ಫಲ ಕೊಡುವುದೆಂಬುದನ್ನು ಅರಿಯದೆ ಹೋದೆ. ಮಹಾಶಸ್ತ್ರಾಸ್ತ್ರಕೋವಿದನಾದ ನೀನು ಹೀಗೆ ಮಡಿದು ಧೂಳಿನಲ್ಲಿ ಹೊರಳುತ್ತಿರುವಾಗ ಭೂಮಿಯೆಲ್ಲವೂ ಶೂನ್ಯಶೂನ್ಯವಾಗಿರುವಂತೆ ತೋರುತ್ತಿದೆ. ಧೈರ್ಯದ ಚಿಗುರುಗಳಿಂದಲೂ ಸಾಮರ್ಥ್ಯದ ಹೂಗಳಿಂದಲೂ ತುಂಬಿದ ರಾವಣೇಶ್ವರನೆಂಬ ವೃಕ್ಷ ಶ್ರೀರಾಮನೆಂಬ ಪ್ರಳಯಮಾರುತದಿಂದ ನಾಶವಾಗಿ ಹೋಯಿತಲ್ಲವೆ? ಅಕಟಕಟಾ! ಇದ್ದಕಿದ್ದ ಹಾಗೆ ಎಷ್ಟು ಬೇಗ ಈ ದುರಂತ ನಡೆದುಹೋಯಿತು!” ಎಂದು ಹಲುಬಿದನು.

ಅಣ್ಣನಿಗಾಗಿ ಮರುಗುತ್ತಿರುವ ವಿಭೀಷಣನನ್ನು ಕುರಿತು ರಘುರಾಮನು “ಅಯ್ಯಾ ರಾಕ್ಷಸೋತ್ತಮನೆ, ವೀರೋಚಿತವಾಗಿ ಯುದ್ಧಮಾಡಿ ಸತ್ತವರಿಗಾಗಿ ಕಣ್ಣೀರುಗರೆಯುವುದು ಉಚಿತವಲ್ಲ. ಮೃತ್ಯುವೆಂಬುದು ಕಾಲ ಧರ್ಮದಿಂದ ಎಲ್ಲರಿಗೂ ಪ್ರಾಪ್ತವಾಗತಕ್ಕುದೆ. ಆದ್ದರಿಂದ ದುಃಖವನ್ನು ಶಮನಮಾಡಿಕೊಂಡು ಮುಂದೆ ಮಾಡಬೇಕಾದ ಕಾರ್ಯಗಳನ್ನು ಆಲೋಚಿಸು” ಎಂದನು. ಆಗ ವಿಭೀಷಣನು ಶ್ರೀರಾಮನನ್ನು ಕುರಿತು “ರಾಘವ, ಈ ರಾವಣೇಶ್ವರ ಇದುವರೆಗೆ ಎಂದೂ ಎಲ್ಲಿಯೂ ಸೋಲನ್ನು ಕಂಡವನಲ್ಲ. ಯಥೇಷ್ಟವಾಗಿ ದಾನಧರ್ಮಗಳನ್ನು ಮಾಡಿದ್ದಾನೆ; ದೇವತಾಪೂಜೆಯನ್ನು ಮನಮುಟ್ಟಿ ಸಲ್ಲಿಸಿದ್ದಾನೆ; ತನ್ನ ಭೃತ್ಯರನ್ನು ಮಕ್ಕಳಂತೆ ಕಾಪಾಡಿದ್ದಾನೆ; ನಿಷ್ಠನಾದ ಈತನು ಅಗ್ನಿಹೋತ್ರಿಯಾಗಿ, ವೇದಾಧ್ಯಯನ ಸಂಪನ್ನನಾಗಿದ್ದನು. ಇಂತಹ ಈತನು ಈಗ ಮೃತಹೊಂದಿರುವುದರಿಂದ ವೇದೋಕ್ತ ವಿಧಿಯಿಂದಲೆ ಈತನ ದಹನ ಕರ್ಮಗಳನ್ನು ನಡೆಸಬೇಕೆಂದಿರುತ್ತೇನೆ. ದಯೆಯಿಟ್ಟು ಅನುಜ್ಞೆಕೊಡು” ಎಂದನು. ಧರ್ಮಾತ್ಮನಾದ ಶ್ರೀರಾಮನು ಒಡನೆಯೆ ಅದಕ್ಕೆ ಸಮ್ಮತಿಸಿದನು. ಹಗೆತನವೆಂಬುದೇನಿದ್ದರೂ ಶತ್ರು ಮಡಿಯುವವರೆಗೆ. ಈಗ ಆತನಿಗೆ ರಾವಣನಲ್ಲಿ ಲವಲೇಶವಾದರೂ ಶತ್ರುತ್ವವಿರಲಿಲ್ಲ.