ಶ್ರೀರಾಮನು ದೂತರ ಮೂಲಕ ರಾವಣನಿಧನದ ವೃತ್ತಾಂತವನ್ನು ಲಂಕೆಯಲ್ಲಿದ್ದ ರಾವಣನ ಅಂತಃಪುರದವರಿಗೆ ಹೇಳಿಕಳುಹಿಸಿದನು. ಅದನ್ನು ಕೇಳುತ್ತಲೆ ಅವರೆಲ್ಲರೂ “ಹಾ ನಾಥ! ಹಾ ರಾಜಪುತ್ರ!” ಎಂದು ಒರಲುತ್ತಾ ರಣಭೂಮಿಗೆ ಹೊರಟುಬಂದರು. ರಕ್ತದಿಂದ ನೆನೆದ ರಣಭೂಮಿಯಲ್ಲಿ ಕಾಲು ಜಾರುವುದನ್ನೂ, ಕೆಸರಿನಲ್ಲಿ ನಾಟಿದ್ದ ಅಲುಗುಗಳು ಕಾಲಿಗೆ ನಾಟುವುದನ್ನೂ ಲಕ್ಷಿಸದೆ ಅವರು ರಾವಣನ ಶವದ ಬಳಿಗೆ ಓಡಿಬಂದರು. ಆತನನ್ನು ಕಾಣುತ್ತಲೆ ಅವರು ಮುರಿದ ಬಳ್ಳಿಗಳಂತೆ ಆತನ ದೇಹದ ಮೇಲೆ ಬಿದ್ದು ಕಣ್ಣೀರಿನಿಂದ ಆತನ ಮೃತಕಳೇಬರವನ್ನು ತೋಯಿಸಿದರು. ಯಾರು ದೇವೇಂದ್ರನನ್ನೇ ನಡುಗಿಸಿದನೊ, ಯಾವನಿಗೆ ಯಮನೂ ಸಹ ಬೆದರಿ ಬೆವರಿ ಹೋಗುತ್ತಿದ್ದನೊ, ಯಾರು ರಾಜರಾಜನಾದ ಕುಬೇರನಿಂದ ಪುಷ್ಪಕವಿಮಾನವನ್ನು ಕಸಿದುಕೊಂಡಿದ್ದನೊ, ಯಾರ ಹೆಸರನ್ನು ಕೇಳಿದರೆ ಮೂರು ಲೋಕವೂ ಭಯದಿಂದ ನಡುಗುತ್ತಿದ್ದಿತೊ ಅಂತಹ ಶೂರನು ದಿಕ್ಕಿಲ್ಲದೆ ಅನಾಥನಂತೆ ರಣರಂಗದಲ್ಲಿ ಮಡಿದು ಮಲಗಿದ್ದನು. ಆತನ ಹಿಂದಿನ ಶೌರ್ಯ ವೈಭವಗಳನ್ನೆಲ್ಲಾ ಅವನ ರಾಣಿಯರು ಹಾಡಿಕೊಂಡು ಅಳುತ್ತಾ ತಮ್ಮ ಪಾಡನ್ನು ನೆನೆದು ಮರುಗಿದರು.

ರಾಣಿಯರೆಲ್ಲರೂ ರಾವಣೇಶ್ವರನ ಶವದ ಸುತ್ತಲೂ ಮುತ್ತಿಕೊಂಡು ಬಿಕ್ಕಿಬಿಕ್ಕಿ ಅಳುತ್ತಿರುವಾಗ ಪಟ್ಟದ ರಾಣಿಯಾದ ಮಂಡೋದರಿ ದೀನವದನಳಾಗಿ ಅಲ್ಲಿಗೆ ಬಂದಳು. ಗಂಡನ ಶವವನ್ನು ಕಾಣುತ್ತಲೆ ಆಕೆ ಕುಸಿದು ಕುಪ್ಪೆಯಾಗಿ ಕುಳಿತು ಕಣ್ಣೀರುಗರೆಯುತ್ತಾ “ಅಯೋ ಮಹಾನುಭಾವ, ಕುಬೇರನ ತಮ್ಮನಾದ ನೀನು ಕನಲಿ ನಿಂತರೆ ದೇವೇಂದ್ರನೆ ನಿನ್ನೆದುರು ಸುಳಿಯಲು ಹೆದರುತ್ತಿದ್ದನಲ್ಲವೆ? ಅಂಥಾ ವೀರಾಧಿವೀರನಾದ ನೀನು ಕೇವಲ ಮನುಷ್ಯಮಾತ್ರನಾದ ಶ್ರೀರಾಮನಿಗೆ ಸೋತು ಸತ್ತೆಯಾ? ಇದೇನು ನಾಚಿಕೆಗೇಡು? ಮೂರು ಲೋಕಗಳನ್ನೂ ಗೆದ್ದ ವೀರನಾದ ನೀನು ಅರಣ್ಯವಾಸಿಯಾದ ಒಬ್ಬ ಮಾನವನಿಗೆ ಸೋತುದಾದರೂ ಹೇಗೆ? ಇದುವರೆಗೆ ಸೋಲನ್ನೆ ಕಾಣದಿದ್ದ ನಿನಗೆ ಸೋಲಾಯಿತೆಂದರೆ ನಂಬಿಕೆಯೆ ಹುಟ್ಟಲೊಲ್ಲದು. ಈ ರಾಮಚಂದ್ರನು ನಿಜವಾಗಿ ಮಾನವನಲ್ಲ. ಖರಾಸುರನನ್ನು ಕೊಂದಾಗಲೆ ಇದು ನಿಶ್ಚಯವಾದಂತಾಯಿತು. ವಾನರನೊಬ್ಬನು ಲಂಕೆಯನ್ನು ಪ್ರವೇಶಿಸಿದುದೂ ವಾನರರು ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದುದೂ ಶ್ರೀರಾಮನು ಮಾನವನಲ್ಲವೆಂಬುದಕ್ಕೆ ಪ್ರತ್ಯಕ್ಷ ಪ್ರಮಾಣಗಳು. ಶ್ರೀರಾಮನು ಮಹಾವಿಷ್ಣುವೇ ನಿಶ್ಚಯ. ಆತನೊಡನೆ ದ್ವೇಷ ಬೇಡವೆಂದು ನಾನು ಹೇಳಿದ ಮಾತು ನಿನಗೆ ರುಚಿಸದೆ ಹೋಯಿತು. ಪತಿವ್ರತೆಯಾದ ಆ ಸೀತೆಯನ್ನು ಕಾಮಿಸಿ, ಆಕೆಯನ್ನು ಕದ್ದುತಂದು ನಿನ್ನ ಮೃತ್ಯುವನ್ನು ನೀನೇ ತಂದುಕೊಂಡೆ. ಹೋಗಲಿ, ನಿನ್ನ ಇಷ್ಟವಾದರೂ ಈಡೇರಿತೆ? ಅದೂ ಇಲ್ಲ. ನಿನ್ನನ್ನು ನಿಜವಾಗಿಯೂ ಕೊಂದವನು ಶ್ರೀರಾಮನಲ್ಲ, ಆ ಸೀತೆಯೇ! ಅವಳಿಗಿಂತಲೂ ರೂಪವತಿಯರಾದ ರಾಣಿಯರು ನಿನಗೆ ಎಷ್ಟು ಜನರಿರಲಿಲ್ಲ? ಕಾಮದಿಂದ ಕುರುಡನಾಗಿದ್ದ ನಿನಗೆ ಅವರು ಕಣ್ಣಿಗೆ ಬೀಳಲೆ ಇಲ್ಲ. ವಂಶದಿಂದಾಗಲಿ ರೂಪದಿಂದದಾಗಲಿ ದಾಕ್ಷಿಣ್ಯದಿಂದಾಗಲಿ ಆ ಮೈಥಿಲಿ ನಿನಗೆ ಹೇಗೆ ಹೆಚ್ಚಿನವಳಾಗಿ ಕಂಡುಬಂದಳು? ಈ ಸೀತಾರೂಪದ ಮೃತ್ಯುವನ್ನು ಕರೆತಂದು ಮನೆಯಲ್ಲಿಟ್ಟುಕೊಂಡೆ. ಈಗ ಅವರು ತನ್ನ ಗಂಡನೊಡನೆ ವಿಹರಿಸುವಳು. ಮಂದಭಾಗ್ಯಳಾದ ನಾನಾದರೊ ಭಯಂಕರವಾದ ದುಃಖ ಸಾಗರದಲ್ಲಿ ಮುಳುಗಿಹೋದೆ. ಮಹೇಂದ್ರನ ನಂದನೋದ್ಯಾನದಲ್ಲಿ ನಿನ್ನೊಡನೆ ವಿಮಾನದಲ್ಲಿ ಕುಳಿತು ವಿಹರಿಸುತ್ತಿದ್ದ ನಾನು ಈಗ ನಿನ್ನ ವಧೆಯಿಂದ ಕಾಮಭೋಗಗಳಿಗೆ ಎರವಲಾದೆನು. ಪಾನಭೂಮಿಗಳಲ್ಲಿ ನಗುನಗುತ್ತಾ ಮಾತನಾಡುತ್ತಿದ್ದ ನಿನ್ನ ಶ್ರೀಮುಖ ಇಂದು ಕಾಂತಿಹೀನವಾಯಿತಲ್ಲಾ! ಅಯ್ಯೋ ಪ್ರಭು ನನ್ನನ್ನು ವಿಧವೆಯನ್ನಾಗಿ ಮಾಡಿ ನೀನು ಹೊರಟು ಹೋದೆಯಲ್ಲವೆ? ‘ತಂದೆ ಮಯಾಸುರ, ಕೈಹಿಡಿದವನು ಲಂಕೇಶ್ವರ’ ಎಂದು ಹೆಮ್ಮೆಯಿಂದಿದ್ದ ನಾನು ಈಗ ಶತ್ರುಗಳ ಹಾಸ್ಯಕ್ಕೆ ಗುರಿಯಾದೆನಲ್ಲವೆ? ಮಿಂಚುನೊಡಗೂಡಿದ ಮುಗಿಲಿನಂತೆ ಚಲಿಸುತ್ತಿದ್ದ ದೇಹ ಈಗ ನಿಶ್ಚಲವಾಗಿ ನೆಲದಮೇಲೆ ಬಿದ್ದಿರುವುದನ್ನು ನೋಡಿ ಹೇಗೆ ಸಹಿಸಲಿ? ಅಕಟಕಟಾ! ಈ ನಿನ್ನ ಸಾವೆಂಬುದು ನಿಜವಿರಬಹುದೆ? ಅಥವಾ ನಾನು ಸ್ವಪ್ನವನ್ನು ಕಾಣುತ್ತಿರುವೆನೆ? ಯಮನಿಗೂ ಯಮನಂತಿದ್ದ ನೀನು ಮೃತಿ ಹೊಂದುವುದೆಂದರೇನು? ಇಲ್ಲ. ನೀನು ಮೃತಿ ಹೊಂದಿರಲಾರೆ. ಆದರೆ ಸತ್ತುಬಿದ್ದಿರುವ ನಿನ್ನನ್ನು ಕಣ್ಣಾರೆ ಕಾಣುತ್ತಿರುವೆನಲ್ಲವೆ? ಇದನ್ನು ಕಂಡೂ ನಾನು ಹೇಗೆ ಪ್ರಾಣಗಳನ್ನು ಧರಿಸಿರಲಿ? ಇಂದ್ರಜಿತ್ತುವನ್ನು ಲಕ್ಷ್ಮಣನು ಸಂಹರಿಸಿದಾಗಲೆ ನನ್ನ ಜೀವಕ್ಕೆ ದೊಡ್ಡ ಪೆಟ್ಟುಬಿದ್ದಂತಾಯಿತು. ಈಗ ನೀನು ಸತ್ತುದರಿಂದ ನನ್ನ ಬಾಳಿನ ಸಮಾಪ್ತಿಯಾದಂತಾಯಿತು. ಉಳಿದವರು ಸತ್ತುದಕ್ಕಾಗಿ ಆದ ಸಂತಾಪವನ್ನೆಲ್ಲಾ ನಿನ್ನನ್ನು ಕಂಡು ಮರೆತಿದ್ದೆ. ನೀನೊಬ್ಬನಿದ್ದರೆ ನನಗೆ ಎಲ್ಲವೂ ಇದ್ದಂತೆಯೆ. ನೀನಿಲ್ಲದೆ ಕ್ಷಣಕಾಲವೂ ನಾನು ಜೀವಿಸಿರಲಾರೆ. ಓ ನನ್ನ ದೊರೆ, ನನ್ನನ್ನೂ ನಿನ್ನೊಡನೆ ಕರೆದೊಯ್ಯಿ. ಸ್ವಾಮಿ, ಅದೇಕೆ ನನ್ನೊಡನೆ ಮಾತನಾಡದಿರುವೆ? ಮೊಗದ ತೆರೆಯನ್ನು ತೆಗೆದುಹಾಕಿ ಈ ರಣಭೂಮಿಗೆ ನಡೆದು ಬಂದುದರಿಂದ ನಿನಗೆ ಕೋಪವೆ? ಇತ್ತ ನೋಡು, ನಿನ್ನ ರಾಣಿಯರೆಲ್ಲರೂ ನನ್ನ ಹಾಗೆಯೆ ಮಾಡಿದ್ದಾರೆ. ಗೋಳಿಡುತ್ತಿರುವ ನಮ್ಮೆಲ್ಲರನ್ನೂ ಸಂತೈಸಬೇಡವೆ! ಅಯ್ಯೊ ಮಹಾರಾಜ! ಈ ಸೀತೆಯ ದೆಸೆಯಿಂದ ಎಂತಹ ಅನರ್ಥ ಪ್ರಾಪ್ತವಾಯಿತು! ರಾಕ್ಷಸಕುಲವೆ ದಿಕ್ಕಿಲ್ಲದಂತೆ ಹಾಳಾಗಿ ಹೋಯಿತು. ಆಯಿತು; ಇನ್ನು ನಿನಗಾಗಿ ನಾನು ಅತ್ತು ಏನು ಪ್ರಯೋಜನ? ನಿನ್ನ ಪುಣ್ಯವನ್ನೊ ಪಾಪವನ್ನೊ ಕೊಂಡು ನಿನ್ನ ದಾರಿಯನ್ನು ನೀನು ಹಿಡಿದೆ. ನಿನಗಾಗಿ ನಾನೇಕೆ ದುಃಖಿಸಬೇಕು? ಆದರೆ, ನಿನ್ನ ವಿಯೋಗದಿಂದ ನನಗಾಗಿ ನಾನು ಅಳಬೇಕಾಗಿದೆ. ಕಾರ್ಮುಗಿಲಂತಿರುವ ದೇಹವುಳ್ಳ ಹೇ ರಾವಣೇಶ್ವರಾ! ಪೀತಾಂಬರದಿಂದ ಅಲಂಕೃತನಾದ ಹೇ ದಿವ್ಯದೇಹಿ! ನಿನ್ನ ದೇಹವೆಲ್ಲವೂ ರಕ್ತದಿಂದ ನೆನೆದು ಮಣ್ಣುಮೆತ್ತಿ ನೆಲದಲ್ಲಿ ಹೊರಳಾಡುತ್ತಿದೆಯಲ್ಲಾ! ನಾನಿದನ್ನು ಈ ಪಾಪಿ ಕಣ್ಣುಗಳಿಂದ ನೋಡಲಾರೆ!” ಎಂದು ಹಲುಬಿ ಹಾಗೆಯೆ ಮೂರ್ಛೆಯಿಂದ ನೆಲಕ್ಕೆ ಬಿದ್ದಳು.

ಮೂರ್ಛೆಗೊಂಡ ರಾಣಿಯನ್ನು ಕಂಡು ಆಕೆಯ ಸವತಿಯರೆಲ್ಲರೂ ಗಟ್ಟಿಯಾಗಿ ಅಳುತ್ತಾ ಆಕೆಯ ಬಳಿಗೆ ಬಂದು “ದೇವಿ, ಅತ್ತರೇನಾದಂತಾಯಿತು? ಸಂತೈಸಿಕೊ ಸಂತೈಸಿಕೊ!” ಎಂದು ಸಮಾಧಾನ ಮಾಡಿದರು. ಸಮಾಧಾನದ ನುಡಿಗಳಿಂದ ಆಕೆಯ ದುಃಖ ಮತ್ತಷ್ಟು ಹೆಚ್ಚಿತು. ಆಕೆ ಗಟ್ಟಿಯಾಗಿ ಅಳತೊಡಗಿದಳು. ಆ ಸಮಯಕ್ಕೆ ಸರಿಯಗಿ ಶ್ರೀರಾಮಚಂದ್ರನು ಅಲ್ಲಿಗೆ ಬಂದು ವಿಭೀಷಣನೊಡನೆ “ರಾಕ್ಷಸೇಶ್ವರಾ, ನಿಮ್ಮಣ್ಣನಿಗೆ ಅಂತ್ಯಕ್ರಿಯೆಗಳನ್ನು ನಡಸು; ಈ ಸ್ತ್ರೀಯರನ್ನೆಲ್ಲಾ ಸಮಾಧಾನಮಾಡಿ ಕಳುಹಿಸು” ಎಂದನು. ವಿಭೀಷಣನು ಅದರಂತೆ ಸ್ತ್ರೀಯರನ್ನು ದೂರವಾಗುವಂತೆ ತಿಳುಹಿಸಿ, ಗಂಧದ ಮರಗಳಿಂದಲೂ ಪರಿಮಳ ದ್ರವ್ಯಗಳಿಂದಲೂ ಕೂಡಿದ ಚಿತೆಯನ್ನು ಮಂತ್ರೋಚ್ಚಾರಣಪೂರ್ವಕವಾಗಿ ನಿರ್ಮಿಸಿದನು. ಅನಂತರ ಮಂತ್ರಾಗ್ನಿಯನ್ನು ರಚಿಸಿ ಶಾಸ್ತ್ರೋಕ್ತವಾಗಿ ಆತನು ಭ್ರಾತೃವಿನ ದಹನ ಸಂಸ್ಕಾರಗಳನ್ನು ನಡಸಿದನು. ತರುವಾಯ ಸ್ನಾನಮಾಡಿ ಮೃತನ ಆತ್ಮಕ್ಕೆ ತೃಪ್ತಿಯಾಗುವಂತೆ ತಿಲೋದಕವನ್ನು ಕೊಟ್ಟು, ಆಮೇಲೆ ರಾಣಿವಾಸದವರನ್ನು ಮೃದು ವಚನಗಳಿಂದ ಸಂತೈಸಿ, ಮನೆಗೆ ಹಿಂದಿರುಗುವಂತೆ ಮಾಡಿದನು.

ಶತ್ರುಸಂಹರಣದ ಮಹಾಕಾರ್ಯವನ್ನು ಸಾಧಿಸಿ ಸಂತುಷ್ಟನಾದ ಶ್ರೀರಾಮಚಂದ್ರನು ದಹನಕ್ರಿಯೆಯನ್ನು ನಡೆಸಿಬಂದು ತನಗೆ ನಮಸ್ಕರಿಸಿದ ವಿಭೀಷಣನನ್ನು ಆಶೀರ್ವದಿಸಿದನು.