ಸೀತಾದೇವಿ ಅಗ್ನಿಪ್ರದಕ್ಷಿಣೆ ಮಾಡಿ ಚಿತೆಯನ್ನು ಹೊಕ್ಕಳು.

ಮಹಾಕಾರ್ಯವನ್ನು ಸಾಧಿಸಿ ಸಂತುಷ್ಟಾಂತರಂಗನಾಗಿದ್ದ ಶ್ರೀರಾಮನು ತನ್ನ ಬಳಿಯಲ್ಲಿ ಕುಳಿತಿದ್ದ ಲಕ್ಷ್ಮಣನನ್ನು ಕುರಿತು “ಸೌಮಿತ್ರಿ, ನನ್ನಲ್ಲಿ ಭಕ್ತನೂ ಅನುರಕ್ತನೂ ಆಗಿರುವ ಈ ವಿಭೀಷಣನನ್ನು ಲಂಕಾರಾಜ್ಯದಲ್ಲಿ ಅಭಿಷೇಕಿಸು. ಅದನ್ನು ಕಣ್ಣಾರೆ ಕಂಡು ಆನಂದಿಸುತ್ತೇನೆ” ಎಂದನು. ಲಕ್ಷ್ಮಣನು ಮಹಾಪ್ರಸಾದವೆಂದು ಹೇಳಿ, ಒಡನೆಯೆ ಸಪ್ತಸಾಗರಗಳಿಂದಲೂ ಪುಣ್ಯನದಿಗಳಿಂದಲೂ ತೀರ್ಥವನ್ನು ತರುವಂತೆ ವಾನರರಿಗೆ ಆಜ್ಞಾಪಿಸಿದನು. ಕ್ಷಣಮಾತ್ರದಲ್ಲಿ ಅವರು ಆ ಕೆಲಸವನ್ನು ಸಾಧಿಸಿದರು. ಅನಂತರ ಲಕ್ಷ್ಮಣಸ್ವಾಮಿ ವಿಭೀಷಣನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಮಂಗಳೋದಕದಿಂದ ಶಾಸ್ತ್ರೋಕ್ತವಾಗಿ ಮಿತ್ರರೆಲ್ಲರ ಸಮಕ್ಷ ಆತನಿಗೆ ಲಂಕಾರಾಜ್ಯಾಭಿಷೇಕವನ್ನು ಮಾಡಿದನು. ಹೀಗೆ ಅಭಿಷಿಕ್ತನಾದ ಆ ರಾಕ್ಷಸೇಶ್ವರನನ್ನು ಕಂಡು, ಆತನ ಮಂತ್ರಿಗಳೂ ಆಶ್ರಿತರೂ ಆನಂದಿಸಿದರು. ಅವರು ತಂದೊಪ್ಪಿಸಿದ ಪುಷ್ಪಗಳನ್ನೂ ಕಾಣಿಕೆಗಳನ್ನೂ ತೆಗೆದುಕೊಂಡು ವಿಭೀಷಣನು ಅವುಗಳಿಂದ ಶ್ರೀರಾಮನನ್ನು ಪೂಜಿಸಿದನು. ಶ್ರೀರಾಮನಾದರೊ ಆ ರಾಕ್ಷಸರಾಜನಿಗೆ ಶ್ರೇಯಸ್ಸನ್ನು ಕೋರುವುದಕ್ಕಾಗಿಯೆ ಅವೆಲ್ಲವನ್ನು ಸ್ವೀಕರಿಸಿದನು.

ವಿಭೀಷಣನ ರಾಜ್ಯಾಭಿಷೇಕವಾದ ಮೇಲೆ ಶ್ರೀರಾಮನು ತನ್ನ ಬಳಿಯಲ್ಲಿಯೆ ಬದ್ಧಾಂಜಲಿಯಾಗಿ ನಿಂತಿದ್ದ ಹನುಮಂತನನ್ನು ಕುರಿತು “ಮಾರುತಿ, ಈ ರಾಕ್ಷಸೇಶ್ವರನಾದ ವಿಭೀಷಣನ ಅನುಮತಿಯಿಂದ ಲಂಕಾ ನಗರಕ್ಕೆ ಹೋಗಿ, ಅಲ್ಲಿ ಅರಮನೆಯಲ್ಲಿರುವ ಸೀತಾದೇವಿಗೆ ನಮ್ಮ ವಿಜಯದ ಸಮಾಚಾರವನ್ನೂ ರಾವಣನ ಮರಣವೃತ್ತಾಂತವನ್ನೂ ತಿಳಿಸಿ, ಆಕೆಯ ಸಂದೇಶವನ್ನು ತೆಗೆದುಕೊಂಡು ಬಾ” ಎಂದು ಹೇಳಿದನು. “ಮಹಾಪ್ರಸಾದ”ವೆಂದು ಹೇಳಿ ಮಾರುತಿ ಒಡನೆಯೆ ರಾಕ್ಷಸರಾಜನ ಅನುಮತಿ ಪಡೆದು ಲಂಕಾನಗರಾಭಿಮುಖನಾದನು. ಆತನು ನಗರವನ್ನು ಪ್ರವೇಶಿಸುತ್ತಿದ್ದಂತೆಯೆ ಜನರು ಆತನನ್ನು ಆದರದಿಂದ ಇದಿರುಗೊಂಡು ಅರಮನೆಗೆ ಕರೆದೊಯ್ದರು. ಆತನು ಅರಮನೆಯನ್ನು ಪ್ರವೇಶಿಸಿ, ರಾಕ್ಷಸಿಯರಿಂದ ಪರಿವೇಷ್ಟಿತಳಾಗಿದ್ದ ಸೀತಾಮಾತೆಯನ್ನು ಕಂಡು ಆಕೆಗೆ ದೀರ್ಘದಂಡ ನಮಸ್ಕಾರಮಾಡಿದನು. ಆತನನ್ನು ಕಾಣುತ್ತಲೆ ಸೀತಾದೇವಿಯೂ ಪರಮಾನಂದಭರಿತೆಯಾಗಿ ಆತನನ್ನು ಆಶೀರ್ವದಿಸಿದಳು.

ಹನುಮಂತನು ಸೀತಾದೇವಿಗೆ ಶ್ರೀರಾಮ ಸಂದೇಶವನ್ನು ತಿಳಿಸುತ್ತಾ “ದೇವಿ, ಶತ್ರುವಾದ ರಾವಣನನ್ನು ಸಂಹರಿಸಿ ಪ್ರವರ್ಧಿಸುತ್ತಿರುವ ಶ್ರೀರಾಮಚಂದ್ರನು ತಮ್ಮನೊಡನೆಯೂ ಕಪಿನಾಯಕರೊಡನೆಯೂ ಸುಕ್ಷೇಮವಾಗಿರುವನು. ಆತನು ನಿನ್ನನ್ನು ಸಮಾಧಾನಚಿತ್ತಳಾಗಿರುವಂತೆ ತಿಳಿಸಿದ್ದಾನೆ. ನೀನಿನ್ನು ರಾವಣನ ಮನೆಯಲ್ಲಿರುವೆನೆಂದು ಖೇದಗೊಳ್ಳಬೇಕಾದುದಿಲ್ಲ. ಲಂಕಾರಾಜ್ಯವೆಲ್ಲವೂ ನಮ್ಮ ಮಿತ್ರನಾದ ವಿಭೀಷಣನ ಅಧೀನದಲ್ಲಿರುವುದು. ಆದ್ದರಿಂದ ನೀನು ಸ್ವಂತ ಮನೆಯಲ್ಲಿದ್ದಂತೆಯೆ ಸುಖವಾಗಿ ಇರಬಹುದೆಂದು ಆತನು ನಿನಗೆ ತಿಳಿಸಹೇಳಿರುವನು” ಎಂದನು. ಮಾರುತಿಯ ಮಾತುಗಳನ್ನು ಕೇಳಿ ಸೀತಾದೇವಿಗೆ ಸಂತೋಷದಿಂದ ಮಾತೇ ಹೊರಡಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಸಂವರಿಸಿಕೊಂಡು ಗದ್ಗದಸ್ವರದಿಂದ ಆಕೆ “ಮಾರುತಿ, ಸ್ವಾಮಿಯ ವಿಜಯವಾರ್ತೆಯನ್ನು ತಂದ ನಿನ್ನನ್ನು ಹೇಗೆ ಪುರಸ್ಕರಿಸಬೇಕೆಂಬುದೆ ನನಗೆ ತೋಚುತ್ತಿಲ್ಲ. ಅದಕ್ಕೆ ತಕ್ಕ ಪುರಸ್ಕಾರವೆಂಬುದು ಜಗತ್ತಿನಲ್ಲೆ ಇಲ್ಲ!” ಎಂದಳು.

ಸೀತಾಮಾತೆಯ ಮಧುರವಾದ ಮಾತುಗಳಿಂದ ಅತ್ಯಂತ ಆನಂದಿತನಾದ ಆಂಜನೇಯನು ಆಕೆಗೆ “ಅಮ್ಮಾ, ನೀನಾಡಿದ ಮಾತುಗಳ ಅನರ್ಘ್ಯವಾದುವು. ನಾನು ದೇವರಾಜ್ಯವನ್ನು ಪಡೆದವನಿಗಿಂತಲೂ ಹೆಚ್ಚಾಗಿ ಸಂತುಷ್ಟನಾಗಿದ್ದೇನೆ” ಎಂದನು. ಆತನ ನುಡಿಗಳಿಂದ ಸುಪ್ರೀತೆಯಾದ ಸೀತಾದೇವಿ ಆತನನ್ನೂ ಆತನ ಸದ್ಗುಣಗಳನ್ನೂ ಪ್ರಶಂಸಿಸಿದಳು. ಆಗ ಹನುಮಂತನು ಆಕೆಯನ್ನು ಕುರಿತು “ಓ ಮಾತೆ, ನೀನು ಅಪ್ಪಣೆಕೊಟ್ಟರೆ, ನಿನ್ನನ್ನು ಹಿಂಸಿಸಿದ ಈ ರಾಕ್ಷಸಿಯರನ್ನೆಲ್ಲ ಈಗಲೆ ಹೊಸಗಿಹಾಕಿಬಿಡುತ್ತೇನೆ. ಪತಿಗತಪ್ರಾಣಳಾದ ನಿನಗೆ ಈ ರಕ್ಕಸಿಯರು ಕೊಟ್ಟ ಸಂಕಟ ಅಷ್ಟಿಷ್ಟಲ್ಲ. ಕ್ರೂರೆಯರಾದ ಇವರನ್ನೆಲ್ಲ ಕೊಂದುಬಿಡಬೇಕೆಂಬ ಬಯಕೆ ನನ್ನ ಮನಸ್ಸಿನಲ್ಲಿ ಉದಿಸಿದೆ. ನೀನು ಆ ಕಾರ್ಯಕ್ಕೆ ಸಮ್ಮತಿಸುವ ವರವನ್ನು ನನಗೆ ದಯಪಾಲಿಸು” ಎಂದನು. ಆದರೆ ದಯಾಮಯಳಾದ ಸೀತಾಮಾತೆ ಅದಕ್ಕೆ ಸಮ್ಮತಿಸಲಿಲ್ಲ. “ಅಯ್ಯಾ ಮಾರುತಿ, ಇವರೆಲ್ಲರೂ ತಮ್ಮ ರಾಜನ ಅಪ್ಪಣೆಯನ್ನು ನೆರವೇರಿಸುವವರು, ದಾಸಿಯರು. ಆದ್ದರಿಂದ ಇವರಲ್ಲಿ ಕೋಪಗೊಳ್ಳುವುದು ಯೋಗ್ಯವಲ್ಲ. ನನ್ನ ಪಾಪಕರ್ಮ ನನ್ನನ್ನು ಕಾಡಿಸಿತು. ಆದ್ದರಿಂದ ಇವರನ್ನೆಲ್ಲಾ ಕ್ಷಮಿಸಿಬಿಡು” ಎಂದಳು. ದೇವಿಯ ಈ ಮಂಗಳ ನುಡಿಗಳನ್ನು ಕೇಳಿ ಹನುಮಂತನು ಆಕೆಗೆ ಭಕ್ತಿಯಿಂದ ನಮಿಸಿ “ಅಮ್ಮಾ, ಶ್ರೀರಾಮಪತ್ನಿಯಾದ ನೀನು ನಿನ್ನ ಯೋಗ್ಯತೆಗೆ ತಕ್ಕಂತೆ ನುಡಿದೆ. ಈಗ ಶ್ರೀರಾಮನಿಗೆ ನಿನ್ನಿಂದ ಯಾವ ಸಂದೇಶವನ್ನು ಒಯ್ಯಲಿ?” ಎಂದು ಕೇಳಿದನು. ಪತಿವ್ರತಾ ಶಿರೋಮಣಿಯಾದ ಆಕೆ “ಹೇ ವಾನರಪುಂಗವ, ನಾನು ನನ್ನ ಪತಿಯನ್ನು ನೋಡಲು ಅಪೇಕ್ಷಿಸುತ್ತೇನೆ” ಎಂದು ಮಾತ್ರ ಹೇಳಿದಳು. ಹನುಮಂತನು ಆಕೆಯನ್ನು ಕುರಿತು “ಮಾತೆ ಶಚೀದೇವಿ ದೇವೇಂದ್ರನನ್ನು ಕಾಣುವಂತೆ, ನೀನು ಕ್ಷಿಪ್ರದಲ್ಲಿಯೆ ಸೋದರನೊಡನಿರುವ ರಾಮಚಂದ್ರಮೂರ್ತಿಯನ್ನು ಕಾಣುವೆ” ಎಂದು ಹೇಳಿ, ಆಕೆಗೆ ನಮಸ್ಕರಿಸಿ, ಶ್ರೀರಾಮನ ಬಳಿಗೆ ಹಿಂದಿರುಗಿದನು.

ಹನುಮಂತನಿಂದ ಸೀತಾದೇವಿ ತನ್ನನ್ನು ಕಾಣಲು ಎಷ್ಟು ಆತುರಳಾಗಿರುವಳೆಂಬುದನ್ನು ಕೇಳಿ ಶ್ರೀರಾಮನು ಕಣ್ಣುಗಳಿಂದ ನೀರು ಸುರಿಸುತ್ತಾ ಕ್ಷಣಕಾಲ ಧ್ಯಾನಾಸಕ್ತನಾದನು. ತರುವಾಯ ನಿಟ್ಟುಸಿರೊಂದನ್ನು ಬಿಟ್ಟು ಪಕ್ಕದಲ್ಲಿದ್ದ ವಿಭೀಷಣನಿಗೆ ಒಡನೆಯೆ ಸೀತಾದೇವಿಗೆ ಮಂಗಳಸ್ನಾನ ಮಾಡಿಸಿ ಅಲ್ಲಿಗೆ ಕರೆತರುವಂತೆ ಆಜ್ಞಾಪಿಸಿದನು. ಆತನ ಅಪ್ಪಣೆಯಂತೆ ಅ ರಾಕ್ಷಸರಾಜನು ಸೀತಾದೇವಿಯ ಬಳಿಗೆ ಹೋಗಿ ಶ್ರೀರಾಮನ ಅಪ್ಪಣೆಯನ್ನು ಆಕೆಗೆ ತಿಳಿಸಿದನು. ಅದನ್ನು ಕೇಳಿ ದೇವಿ “ಅಯ್ಯಾ ಮಹನೀಯನೆ, ನನಗೆ ಸ್ನಾನವೂ ಬೇಡ, ಭೂಷಣಗಳೂ ಬೇಡ. ಅವುಗಳಿಲ್ಲದೆಯೆ ನನ್ನ ಪತಿಯನ್ನು ಕಾಣಬಯಸುವೆನು” ಎಂದಳು. ಆದರೆ ವಿಭೀಷಣನು ಅದಕ್ಕೆ ಒಪ್ಪಲಿಲ್ಲ. ಶ್ರೀರಾಮನ ಅಪ್ಪಣೆಯನ್ನು ಪಾಲಿಸುವುದೇ ಕರ್ತವ್ಯವೆಂದನು. ಪತಿಪರಾಯಣಳಾದ ಸೀತಾದೇವಿ ಹಾಗೆಯೆ ಆಗಲೆಂದು ಮಂಗಳಸ್ನಾಮಾಡಿ, ದಿವ್ಯದುಕೂಲಗಳನ್ನೂ ಆಭರಣಗಳನ್ನೂ ಧರಿಸಿ, ಪಲ್ಲಕ್ಕಿಯಲ್ಲಿ ಕುಳಿತು ಶ್ರೀರಾಮನ ಬಳಿಗೆ ಬಂದಳು.

ಪತ್ನಿಯನ್ನು ಕಾಣುತ್ತಲೆ ಶ್ರೀರಾಮನ ಮನಸ್ಸಿನಲ್ಲಿ ಬಗೆಬಗೆಯ ಭಾವನೆಗಳು ಉದಯಿಸಿದುವು. ಬಹುದಿನಕ್ಕೆ ತನ್ನ ನಲ್ಲೆಯನ್ನು ಕಂಡುದಕ್ಕೆ ಸಂತೋಷ, ತಾನು ಬದುಕಿದ್ದೂ ಇದುವರೆಗೂ ಆಕೆ ಕಷ್ಟಕ್ಕೊಳಗಾದುದಕ್ಕಾಗಿ ಕರುಣೆ, ಇವಳು ಇಷ್ಟು ದಿನಗಳೂ ವಿಷಯಲಂಪಟನಾದ ರಾವಣನ ಮನೆಯಲ್ಲಿ ಇದ್ದವಳಲ್ಲವೆ ಎಂಬುದಾಗಿ ರೋಷ ಏಕಕಾಲದಲ್ಲಿ ಕಾಣಿಸಿಕೊಂಡುವು. ಆತನ ಅಪ್ಪಣೆಯಂತೆ ಸೀತಾದೇವಿ ಪಲ್ಲಕ್ಕಿಯನ್ನಿಳಿದು ಆತನ ಬಳಿಗೆ ನಡೆದುಕೊಂಡು ಹೋದಳು. ಆಕೆ ಬರುತ್ತಿದ್ದ ಮಾರ್ಗದಲ್ಲಿದ್ದ ವಾನರರನ್ನೂ ರಾಕ್ಷಸರನ್ನೂ ರಾಜದೂತರು ದೂರ ಸರಿಸುತ್ತಿರಲು ಶ್ರೀರಾಮನು ಅವರನ್ನು ಗದರಿಸಿ “ಆ ಕಾರ್ಯವನ್ನು ನಿಲ್ಲಿಸಿ. ಇಲ್ಲಿ ನಿಂತಿರುವವರೆಲ್ಲಾ ನನ್ನ ಆಪ್ತವರ್ಗಕ್ಕೆ ಸೇರಿದವರು. ಇವರ ಇದಿರಿಗೆ ಸೀತೆ ಬರುವುದರಲ್ಲಿ ಏನೂ ತಪ್ಪಿಲ್ಲ. ಅಲ್ಲದೆ ಸ್ತ್ರೀಯರಿಗೆ ನಡತೆಯೆಂಬುದೆ ಆಭರಣವೆ ಹೊರತು ಬೇರೆಯ ಹೊದಿಕೆಗಳೂ ಆಭರಣಗಳೂ ಅರ್ಥವಿಲ್ಲದವು. ದುಃಸ್ಥಿತಿಯಲ್ಲಿರುವಾಗ ಸ್ತ್ರೀಯರನ್ನು ಪರರು ನೋಡುವುದರಿಂದ ದೋಷವೇನೂ ಇಲ್ಲ. ಆ ಸ್ಥಿತಿಯಲ್ಲಿರುವ ಸೀತೆ ಈಗ ಎಲ್ಲರ ಇದಿರಿಗೂ ಬರಲಿ” ಎಂದನು. ದುಃಸ್ಥಿತಿಯಲ್ಲಿರುವ ಸೀತೆ ಎಂಬ ಶ್ರೀರಾಮನ ಮಾತುಗಳನ್ನು ಕೇಳಿ ಲಕ್ಷ್ಮಣ ಸುಗ್ರೀವ ಹನುಮಂತ ಮೊದಲಾದವರೆಲ್ಲರೂ ಭಯಭೀತರಾಗಿ ವಿಕಂಪಿಸಿದರು.

ಸೀತಾದೇವಿ ತನಗೆ ಸ್ವಭಾವಸಹಜವಾದ ಲಜ್ಜೆಯಿಂದ ಅಂಗಾಂಗಗಳನ್ನೆಲ್ಲಾ ಒಳಗೆಳೆದುಕೊಳ್ಳುವಂತೆ ಅಡಗಿಸಿಕೊಂಡು ಶ್ರೀರಾಮನ ಬಳಿಗೆ ಬಂದು “ಆರ್ಯಪುತ್ರ!” ಎಂದಷ್ಟು ಮಾತ್ರ ನುಡಿದಳು. ದುಃಖ ಕುತ್ತಿಗೆಯನ್ನು ಒತ್ತಲು ಆಕೆಯಿಂದ ಮುಂದೆ ಮಾತಾಡುವುದಾಗಲಿಲ್ಲ. ಕಣ್ಣುಗಳಿಂದ ನೀರು ಸುರಿಸುತ್ತಾ ನೀರವವಾಗಿ ಅತ್ತಳು. ಹಾಗೆಯೆ ಒಮ್ಮೆ ತನ್ನ ತಲೆಯನ್ನೆತ್ತಿ ಗಂಡನ ಮುಖವನ್ನು ನೋಡಿದಳು. ಪೂರ್ಣಚಂದ್ರನ ಸಮಾನನಾದ ಆ ಮುಖವನ್ನು ಕಾಣುತ್ತಲೆ ಆಕೆಯ ಹೃದಯ ಸಂತೋಷದಿಂದ ನಲಿದು ನರ್ತಿಸಿತು. ಅಷ್ಟರಲ್ಲಿ ಶ್ರೀರಾಮನು ಆಕೆಯನ್ನು ಕುರಿತು “ಎಲೈ ಭದ್ರೆ, ನನ್ನ ಪೌರುಷದಿಂದ ಸಾಧಿಸಬೇಕಾದ ಕಾರ್ಯವನ್ನು ನಾನು ಸಾಧಿಸಿದುದಾಯಿತು. ಶತ್ರುವಾದ ರಾವಣನು ಸತ್ತು ನನ್ನ ರೋಷ ಶಾಂತವಾದಂತಾಯಿತು. ನಾನು ಪಟ್ಟ ಶ್ರಮವೆಲ್ಲವೂ ಅದರಿಂದ ಸಾರ್ಥಕವಾದಂತಾಯಿತು. ನನ್ನ ಪ್ರತಿಜ್ಞೆ ನೆರವೇರಿತು. ಸುಗ್ರೀವ ಹನುಮಂತರು ನನಗಾಗಿ ಪಟ್ಟ ಕಷ್ಟವೂ ಸಾರ್ಥಕವಾಯಿತು. ನನಗೆ ಬರಬಹುದಾಗಿದ್ದ ಅಪಕೀರ್ತಿ ನಿವಾರಣೆಯಾಗಿ ನನ್ನ ಪರಾಕ್ರಮ ಜಗತ್ತಿಗೆ ಅರಿವಾದಂತಾಯಿತು. ನಾನು ಧನ್ಯವಾದೆ!” ಎಂದನು.

ಶ್ರೀರಾಮನ ಮಾತುಗಳನ್ನು ಕೇಳಿ ಸೀತಾದೇವಿ ಬೆದರಿದ ಹೆಣ್ಣು ಜಿಂಕೆಯಂತೆ ನಡುಗುತ್ತಾ ಕಣ್ಣೀರು ತುಂಬಿದಳು. ಅದನ್ನು ಕಂಡು ಶ್ರೀರಾಮನ ಕೋಪಾಗ್ನಿ ಆಜ್ಯಾಹುತಿಗೊಂಡಂತೆ ಪ್ರಜ್ವಲಿಸಿತು. ಹುಬ್ಬು ಗಂಟುಹಾಕಿಕೊಂಡು ನಿಷ್ಠುರವಾದ ಧ್ವನಿಯಲ್ಲಿ ಆತನು “ಎಲೆ ಸೀತೆ, ನಾನು ರಾವಣನೊಡನೆ ಯುದ್ಧ ಹೂಡಿದುದು ನಿನಗಾಗಿ ಅಲ್ಲ; ನನ್ನ ಚರಿತ್ರೆಯನ್ನು ಕಾಪಾಡಿಕೊಂಡು ಅಪವಾದವನ್ನು ನಿವಾರಿಸಿಕೊಳ್ಳುವುದಕ್ಕಾಗಿ. ನಿನ್ನ ಚಾರಿತ್ರಶುದ್ಧಿಯ ವಿಚಾರದಲ್ಲಿ ನನಗೆ ಸಂದೇಹ ಮೂಡಿರುವುದರಿಂದ ನನ್ನ ಇದಿರಿಗೆ ನಿಂತಿರುವ ನೀನು ಕಣ್ಣುನೋವು ಬಂದವನಿಗೆ ಕಣ್ಣುಕುಕ್ಕುವ ದೀಪದಂತೆ ಅಸಹ್ಯಳಾಗಿರುವೆ. ಆದ್ದರಿಂದ, ಎಲೌ ಮೈಥಿಲಿ, ನಾನು ನಿನಗೆ ಈಗ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟಿರುತ್ತೇನೆ. ನೀನು ನಿನ್ನ ಮನಬಂದೆಡೆಗೆ ಹೊರಟುಹೋಗು. ಶತ್ರುವಿನ ಮನೆಯಲ್ಲಿ ಇಷ್ಟು ದೀರ್ಘಕಾಲ ನೆಲಸಿದ್ದ ಸ್ತ್ರೀಯನ್ನು ಸದ್ವಂಶದಲ್ಲಿ ಹುಟ್ಟಿದ ಯಾವ ಪುರುಷರು ತಾನೆ ಪರಿಗ್ರಹಿಸಿಯಾನು? ನನ್ನ ವಂಶಗೌರವ ನಿನ್ನ ಮೇಲಿನ ಮೋಹಕ್ಕಿಂತಲೂ ದೊಡ್ಡದು. ಆದುದರಿಂದ ಇಗೊ, ಇನ್ನು ಮೇಲೆ ನಿನ್ನ ದಾರಿ ನಿನಗೆ. ನನಗೆ ನಿನ್ನಲ್ಲಿ ವಿಶ್ವಾಸವಾಗಲಿ ಗೌರವವಾಗಲಿ ಸ್ವಲ್ಪವೂ ಉಳಿದಿರುವುದಿಲ್ಲ. ನೀನು ಯಥೇಷ್ಟವಾಗಿ ಹೊರಟುಹೋಗಬಹುದು. ಇಗೋ, ಲಕ್ಷ್ಮಣನಲ್ಲಿಯೊ, ಭರತನಲ್ಲಿಯೊ, ವಾನರೇಶ್ವರನಾದ ಸುಗ್ರೀವನಲ್ಲಿಯೊ, ರಾಕ್ಷಸೇಶ್ವರನಾದ ವಿಭೀಷಣನಲ್ಲಿಯೊ ಸೇರಿ ಸುಖವಾಗಿರು. ಎಲೆ ಸೀತೆ, ದಿವ್ಯರೂಪಿಣಿಯೂ ಮನೋಹಾರಿಯೂ ಆದ ನೀನು ತನ್ನ ಮನೆಯಲ್ಲಿ ಇಷ್ಟುಕಾಲವೂ ಇದ್ದರೂ ಆ ಕಾಮಿಯಾದ ರಾವಣನು ಮನೋನಿಗ್ರಹ ತಾಳಿರುವುದು ಎಂದಿಗೂ ಸಾಧ್ಯವಿಲ್ಲ!” ಎಂದನು.

ಶ್ರೀರಾಮನ ಕಠೋರವಚನಗಳನ್ನು ಕೇಳಿ ಸೀತಾದೇವಿ ಆನೆಯ ಸೊಂಡಿಲಿಗೆ ಸಿಕ್ಕ ಸಲ್ಲಕೀವೃಕ್ಷದಂತೆ ನಡುಗಿಹೋದಳು. ಅಷ್ಟು ಜನ ವಾನರರ ಮತ್ತು ರಾಕ್ಷಸರ ಇದಿರಿನಲ್ಲಿ ಆತನಾಡಿದ ಮಾತುಗಳನ್ನು ಕೇಳಿ ಆಕೆಗೆ ನಾಚಿಕೆಯಿಂದ ಸಾವು ಸಮನಿಸಿದಷ್ಟು ಸಂಕಟವಾಯಿತು. ಆಕೆ ಕುಗ್ಗಿ ಕರಗಿ, ಕಣ್ಣೀರುಗರೆಯುತ್ತಾ ಭೂಮಿಗಿಳಿದುಹೋದಳು. ಸ್ವಲ್ಪಕಾಲವಾದ ಮೇಲೆ ಆಕೆ ಸ್ವಲ್ಪ ಚೇತರಿಸಿಕೊಂಡು ಕಣ್ಣೀರನ್ನು ಒರಸಿಕೊಳ್ಳುತ್ತಾ ಗದ್ಗದಸ್ವರದಿಂದ ಗಂಡನಿಗೆ ಪ್ರತ್ಯುತ್ತರ ಕೊಟ್ಟಳು. “ಎಲೈ ಮಹಾವೀರ, ಅನಾಗರಿಕ ಮನುಷ್ಯನೊಬ್ಬನು ಅನಾಗರಿಕ ಹೆಣ್ಣೊಬ್ಬಳಿಗೆ ಹೇಳುವಂತೆ ಕರ್ಣಕಠೋರವಾದ ಈ ಅಯೋಗ್ಯವಾಕ್ಕುಗಳನ್ನು ನನಗೆ ಹೇಳುತ್ತಿರುವೆಯಲ್ಲಾ! ಎಲೈ ಮಹಾಬಾಹು, ನನ್ನ ಮಾತನ್ನು ನಂಬು. ನಿನ್ನ ಸಂದೇಹ; ಅರ್ಥವಿಲ್ಲದುದು. ನಾನು ಕಲುಷಿತೆಯಲ್ಲ. ನನ್ನ ನಡತೆಯಿಂದಲೆ ನಾನು ಪ್ರತಿಜ್ಞೆ ಮಾಡಿ ಹೇಳುತ್ತೇನೆ. ನಾನು ಕೇವಲ ಪರಿಶುದ್ಧಳು; ಪರಾಧೀನಳಾದ ನನ್ನನ್ನು ಮುಟ್ಟಿ ರಾವಣನು ಹೊತ್ತುಕೊಂಡು ಬಂದಿರಬಹುದು. ಆದರೆ ಆ ಸಂಸ್ಪರ್ಶ ನನ್ನ ಮನಃಪೂರ್ತಿಯಾದುದಲ್ಲ. ಅದು ನನ್ನ ಅಪರಾಧವೂ ಅಲ್ಲ. ಅದೇನಿದ್ದರೂ ದೈವಚೇಷ್ಟಿತ. ನನ್ನ ಅಧೀನದಲ್ಲಿರುವುದು ನನ್ನ ಮನಸ್ಸು ಅದು ನಿನ್ನಲ್ಲಿ ಸೇರಿಹೋಗಿದೆ. ಶರೀರ ಪರಾಧೀನವಾದಾಗ ಅನಾಥೆಯಾದ ನಾನು ಏನುಮಾಡಲು ಸಾಧ್ಯ? ನಿನ್ನೊಡನೆ ಹಲವು ವರ್ಷಗಳು ಆಡಿ ಬೆಳೆದ ನನ್ನ ಹೃದಯವನ್ನು ನೀನು ಅರಿತುಕೊಳ್ಳಲಾರೆಯಾದರೆ ನಾನು ಎಂದೆಂದಿಗೂ ಹತಭಾಗ್ಯಳಾಗಿ ಹೋದೆ. ಎಲೈ ಪುರುಷೋತ್ತಮನೆ, ಕೇವಲ ಪಾಮರನಂತೆ ಕೋಪವನ್ನು ನಂಬಿ ನನ್ನಲ್ಲಿ ಸಂದೇಹಗೊಳ್ಳುವುದೆ? ನಾನು ಜನಕರಾಜನ ಮಗಳು, ಭೂಜಾತೆ ಎಂಬುದು ನಿನಗೆ ಮರೆತೇಹೋಯಿತೆ? ನಿನ್ನಲ್ಲಿ ನನಗಿರುವ ಅಚಲವಾದ ಭಕ್ತಿ, ನನ್ನ ಶೀಲ – ಇವುಗಳೂ ಗಣನೆಗೆ ಬಾರದೆ ಹೋದುವೆ?”

ಸೀತೆಯ ಹಲುಬು ಶ್ರೀರಾಮನ ಸ್ಥಿರತೆಯನ್ನು ಕದಲಿಸಲಿಲ್ಲ. ಆತನು ನಿಷ್ಠುರನಾಗಿ ಸೆಟೆದು ನಿಂತಿದ್ದನು. ಅದನ್ನು ಕಂಡು ಆಕೆಗೆ ಅಸಹ್ಯವೇದನೆಯಾಯಿತು. ಬಳಿಯಲ್ಲಿಯೆ ಚಿಂತಾಪರನಾಗಿ ಬಾಡಿದ ಮುಖದಿಂದ ನಿಂತಿದ್ದ ಲಕ್ಷ್ಮಣನನ್ನು ಕುರಿತು “ಸೌಮಿತ್ರಿ, ಈ ಮಿಥ್ಯಾಪವಾದವನ್ನು ನಾನು ಸಹಿಸಲಾರೆ. ಈ ದುಃಖಕ್ಕೆ ಮದ್ದೆಂದರೆ ಚಿತಾರೋಹಣ, ಒಡನೆಯೆ ಚಿತೆಯನ್ನು ಸಿದ್ಧಪಡಿಸು” ಎಂದಳು. ಲಕ್ಷ್ಮಣನು ಕ್ರೋಧಾವಿಷ್ಟನಾಗಿ ಅಣ್ಣನ ಮುಖವನ್ನು ನೋಡಿದನು. ಆತನ ಮುಖದಲ್ಲಿ ಯಾವುದೊಂದು ವಿಕಾರವೂ ಕಾಣಬರಲಿಲ್ಲ. ಬೇಡವೆಂದು ಹೇಳುವ ಮುಖಚರ್ಯೆಯಲ್ಲ, ಅದು. ಲಕ್ಷ್ಮಣನು ಒಡನೆಯ ಅಗರು ಚಂದನಾದಿ ಕಾಷ್ಠಗಳನ್ನು ವಾನರರಿಂದ ತರಿಸಿ ಚಿತೆಯನ್ನು ಸಿದ್ಧಪಡಿಸಿದನು. ಸೀತಾದೇವಿ ತಲೆತಗ್ಗಿಸಿ ಕುಳಿತಿದ್ದ ಶ್ರೀರಾಮಚಂದ್ರನಿಗೆ ಪ್ರದಕ್ಷಿಣೆ ನಮಸ್ಕಾರಮಾಡಿ ಧಗಧಗನುರಿಯುತ್ತಿರುವ ಚಿತೆಯ ಬಳಿಗೆ ಬಂದಳು. ಅನಂತರ ಕೈಮುಗಿದುಕೊಂಡು “ಹೇ ಯಜ್ಞೇಶ್ವರ, ನನ್ನ ಪತಿಯಾದ ಶ್ರೀರಾಮನಿಂದ ನನ್ನ ಮನಸ್ಸು ಅತ್ತಿತ್ತ ಕದಲದೆ ಸ್ಥಿರವಾಗಿದ್ದುದು ನಿಜವಾದರೆ ಲೋಕಸಾಕ್ಷಿಯಾದ ನೀನು ನನ್ನನ್ನು ಕಾಪಾಡು. ಈತನು ಭಾವಿಸಿರುವಂತೆ ಪತಿತಳಾಗಿರದೆ ನಾನು ಶುದ್ಧ ಚಾರಿತ್ರೆಯಾಗಿರುವುದೆ ನಿಜವಾದರೆ ಲೋಕಸಾಕ್ಷಿಯಾದ ನೀನು ನನ್ನನ್ನು ಕಾಪಾಡು. ಹಗಲಿರುಳೂ ಸೂರ್ಯಚಂದ್ರರೂ ವಾಯುದೇವನೂ ನನ್ನನ್ನು ಪತಿವ್ರತೆಯಾಗಿ ಕಂಡಿರುವುದು ನಿಜವಾದರೆ ನನ್ನನ್ನು ಅಕ್ಷತೆಯನ್ನಾಗಿ ಕಾಪಾಡು!” ಎಂದು ಹೇಳಿ ಯಜ್ಞೇಶ್ವನಿಗೆ ಪ್ರದಕ್ಷಿಣೆಮಾಡಿ ಚಿತೆಯನ್ನು ಹೊಕ್ಕಳು.

ಸೀತಾದೇವಿ ಅಗ್ನಿ ಪ್ರವೇಶಮಾಡುತ್ತಲೆ ಅಲ್ಲಿ ನಿಂತಿದ್ದವರೆಲ್ಲರೂ ಒಮ್ಮೆಗೆ ಹಾಹಾಕಾರಮಾಡಿದರು. ಅವರ ಹಾಹಾಕಾರವನ್ನು ಕಂಡು ಶ್ರೀರಾಮಚಂದ್ರನ ಮನಸ್ಸೂ ಕ್ಷಣಕಾಲ ಕದಡಿತು; ಕಣ್ಣುಗಳಲ್ಲಿ ಕಂಬನಿಯುಕ್ಕಿತು.

ತನ್ನ ನಿಷ್ಠುರ ವರ್ತನೆಯನ್ನು ಕುರಿತು ತಮ್ಮಲ್ಲಿಯೆ ಮಾತನಾಡಿಕೊಳ್ಳುತ್ತಿದ್ದ ವಾನರರನ್ನು ಕಂಡು ಧರ್ಮಾತ್ಮನಾದ ಶ್ರೀರಾಮಚಂದ್ರನು ಬಾಷ್ಟವ್ಯಾಕುಲಲೋಚನನಾಗಿ ನಿಂತಿದ್ದನು. ಆ ಸಮಯದಲ್ಲಿ ಕುಬೇರ ಯಮ ದೇವೇಂದ್ರ ವರುಣರೂ ಪರಮೇಶ್ವರನೂ ಸಕಲಲೋಕ ಕರ್ತಾರನಾದ ಪರಬ್ರಹ್ಮನೂ ಸೂರ್ಯಸನ್ನಿಭವಾದ ತಮ್ಮ ವಿಮಾನಗಳಲ್ಲಿ ಕುಳಿತು ಅಲ್ಲಿಗೆ ಬಂದರು. ಅಂಜಲಿಬದ್ಧನಾಗಿ ನಿಂತು ತಮ್ಮನ್ನು ಗೌರವಿಸಿದ ಶ್ರೀರಾಮನನ್ನು ಕಂಡು ದೇವತೆಗಳೂ ತಾವೂ ಹೊನ್ನೊಡವೆ ಸಿಂಗರಿಸಿದ್ದ ತಮ್ಮ ಬಹುಭುಜಗಳನ್ನೆತ್ತಿ ನಮಸ್ಕರಿಸುತ್ತಾ ಹೇಳಿದರು – “ಸರ್ವಲೋಕ ಕರ್ತಾರನೂ ಸರ್ವಶ್ರೇಷ್ಠನೂ ಜ್ಞಾನಿಗಳಲ್ಲಿ ಜ್ಞಾನಿಯೂ ಆದ ನೀನು ಅಗ್ನಿ ಪ್ರವೇಶಮಾಡುತ್ತಿರುವ ಸೀತಾದೇವಿಯನ್ನು ತಡೆಯದೆ ಏಕೆ ಉಪೇಕ್ಷಿಸುತ್ತಿರುವೆ? ದೇವರುಗಳಲ್ಲಿ ನೀನು ಪರಮಶ್ರೇಷ್ಠನೆಂಬುದು ನಿನಗೇಕೆ ಬೋಧೆಯಾಗುತ್ತಿಲ್ಲ? ನೀನು ಋತಧಾಮನೆಂಬ ಅನಾದಿ ವಸ್ತುವಲ್ಲವೆ? ಮೂರು ಲೋಕಗಳನ್ನು ಸೃಷ್ಟಿಸಿದ ನೀನು ಸ್ವಯಂಪ್ರಭು. ರುದ್ರನಲ್ಲಿ ಎಂಟನೆಯವನಾದ ಮಹಾದೇವನು ನೀನು. ದ್ವಾದಶ ಸಾಧ್ಯರಲ್ಲಿ ಐದನೆಯವನಾದ ವೀರ್ಯವಂತ. ಹೇ ಪರಂತಪ, ಅಶ್ವಿನಿದೇವತೆಗಳೆ ನಿನ್ನೆರಡು ಕಿವಿ. ಚಂದ್ರ ಸೂರ್ಯರು ನಿನ್ನೆರಡು ಕಣ್ಣು. ಸೃಷ್ಟಿಯ ಆದಿ ಅಂತ್ಯಗಳಲ್ಲಿ ಪ್ರತ್ಯಕ್ಷವಾಗುವ ಮಹನೀಯನು ನೀನೆ. ಇಂತಹ ನೀನು ಪ್ರಾಕೃತಮಾನವನಂತೆ ವೈದೇಹಿಯನ್ನು ಉಪೇಕ್ಷಿಸಬಹುದೆ?”

ಲೋಕರಕ್ಷಕರಾದ ದೇವತೆಗಳ ಮಾತುಗಳನ್ನು ಕೇಳಿ ಧರ್ಮಸಂರಕ್ಷಕನದ ಶ್ರೀರಾಮಚಂದ್ರನು ಇಂತೆಂದನು – “ನನಗೆ ತಿಳಿದಮಟ್ಟಿಗೆ ನಾನು ರಾಮ, ದಶರಥನಮಗ, ಮನುಷ್ಯ. ನಾನು ಯಾರು? ಯಾರವನು? ಎಲ್ಲಿಂದ ಬಂದವನು? ಎಂಬುದನ್ನು ಪೂಜ್ಯನಾದ ಬ್ರಹ್ಮದೇವನು ಅಪ್ಪಣೆ ಕೊಡಿಸಲಿ. ” ಇದಕ್ಕೆ ಉತ್ತರವಾಗಿ ಬ್ರಹ್ಮವಿದರಲ್ಲಿ ವರಿಷ್ಠನಾದ ಬ್ರಹ್ಮದೇವನು ಹೇಳಲು ಮೊದಲುಮಾಡಿದನು.

“ಸತ್ಯಪರಾಕ್ರಮನಾದ ರಾಮನೆ, ಈ ಸತ್ಯವನ್ನಾಲಿಸು. ಚಕ್ರಾಯುಧನಾದ ಸರ್ವವಿಭು ಶ್ರೀಮನ್ನಾರಾಯಣನೆ ನೀನು. ಭೂತ ಭವ್ಯಸಪತ್ನಚಿತ್ತಾದ ಏಕಶೃಂಗ ವರಾಹನೂ ನೀನೆ. ಅದಿಮಧ್ಯಾಂತರಗಳಲ್ಲಿ ಚರಿಸುವ ಅಕ್ಷರಬ್ರಹ್ಮನೂ ನೀನೆ. ಲೋಕಗಳಿಗೆಲ್ಲ ಧರ್ಮಸ್ವರೂಪಿಯಾಗಿರುವ ನೀನು ಚತುರ್ಭುಜಯುಕ್ತನಾದ ವಿಷ್ವಕ್ಸೇನನು. ಶಾರ್ಙ್ಞಧನುರ್ಧಾರಿಯಾದ ಹೃಷೀಕೇಶನೂ ನೀನೆ. ಪುರುಷೋತ್ತಮನಾದ ಪುರುಷನು ನೀನೆ. ನೀನೆ ಖಡ್ಗಧರನಾದ ಅಜಿತವಿಷ್ಣು. ಬೃಹದ್ಬಲನಾದ ಕೃಷ್ಣನೂ ನೀನೆ. ಬುದ್ಧಿ ಸತ್ಯ ಕ್ಷಮಾ ದಮಗಳೂ ನೀನೆ. ಪ್ರಭವ ಪ್ರಳಯ ಶಕ್ತಿಗಳು ನೀನೆ. ಇಂದ್ರ ಕರ್ಮನಾದ ಮಹೇಂದ್ರನೂ ನೀನೆ. ರಣಾಂತಕೃತ್ತಾದ ಪದ್ಮನಾಭನೂ ನೀನೆ. ಶರಣ್ಯನೂ ಶರಣನೂ ನೀನೆ. ಹೀಗೆಂಬುದು ದಿವ್ಯಮಹರ್ಷಿಗಳ ವಾಣಿ. ಸಹಸ್ರಶೃಂಗನೂ ಶತಜಿಹ್ವನೂ ಆದ ವೇದಾತ್ಮಋಷಭನೂ ನೀನೆ. ಲೋಕತ್ರಯಗಳಿಗೂ ನೀನೆ ಆದಿಕರ್ತ. ಸಿದ್ಧರಿಗೆಲ್ಲಾ ಪೂರ್ವನೂ ಆಶ್ರಯರೂಪಿಯೂ ನೀನೆ. ನೀನೆ ಯಜ್ಞ; ವಷಟ್ಕಾರ ಓಂಕಾರಗಳೂ ನೀನೆ. ನಿನ್ನ ಪ್ರಭವ ನಿಧನಗಳನ್ನು ಯಾರುತಾನೆ ಬಲ್ಲರು? ನೀನು ಸರ್ವಭೂತಗಳಲ್ಲಿಯೂ ಕಂಡುಬರುತ್ತೀಯೆ. ಸಮಸ್ತ ದಿಕ್ಕುಗಳಲ್ಲಿಯೂ ಗಗನದಲ್ಲಿಯೂ ಪರ್ವತ ವನಗಳಲ್ಲಿಯೂ ಕಂಡುಬರುವ ಸರ್ವಾಂತರ್ಯಾಮಿ ನೀನು. ಸಹಸ್ರ ಚರಣನೂ ಸಹಸ್ರ ಶೀರ್ಷನೂ ಸಹಸ್ರ ಚಕ್ಷುವೂ ಆದ ನೀನು ಸಮಸ್ತ ಜೀವರಾಶಿಯನ್ನೂ ಪರ್ವತ ಚರಣನೂ ಸಹಸ್ರ ಶೀರ್ಷನೂ ಸಹಸ್ರ ಚಕ್ಷುವೂ ಆದ ನೀನು ಸಮಸ್ತ ಜೀವರಾಶಿಯನ್ನೂ ಪರ್ವತ ನದೀಕಾನನ ಸಹಿತವಾದ ಭೂಮಂಡಲವನ್ನೂ ಧರಿಸಿರುವೆ. ಹೇ ರಾಮಚಂದ್ರ, ಸೃಷ್ಟಿಯೆಲ್ಲವೂ ಲಯವಾದಾಗ ನೀನು ಚಿತ್ ಸಮುದ್ರದಲ್ಲಿ ಮಹೋರಗಸುಪ್ತನಾಗಿರುವೆ. ಆಗ ದೇವದಾನವ ಗಂಧರ್ವರ ಮೂರು ಲೋಕವನ್ನೂ ನೀನೆ ಒಳಕೊಂಡಿರುವೆ.

“ಅಹಂ ತೇ ಹೃದಯಂ ರಾಮ; ಜಿಹ್ವಾ ದೇವೀ ಸರಸ್ವತೀ;
ದೇವಾ ಗಾತ್ರೇಷು ರೋಮಾಣಿ; ನಿರ್ಮಿತಾ ಬ್ರಹ್ಮಣಾ ಪ್ರಭೋ.
ನಿಮೇಷಸ್ತೇ ಭವೇದ್ರಾತ್ರಿಃ; ಉನ್ಮೇಷಸ್ತೇ ಭವೇದ್ದಿವಾ.
ಸಂಸ್ಕಾರಾಸ್ತೇsಭವನ್ ವೇದಾಃ; ನ ತದಸ್ತಿ ತ್ವಯಾ ವಿನಾ.
ಜಗತ್ ಸರ್ವಂ ಶರೀರಂ ತೇ; ಸ್ಥೈರ್ಯಂ ತೇ ವಸುಧಾತಲಂ;
ಅಗ್ನಿಃ ಕೋಪಃ; ಪ್ರಸಾದಸ್ತೇ ಸೋಮಃ, ಶ್ರೀವತ್ಸಲಕ್ಷಣ!”

ನಾನು ನಿನ್ನಹೃದಯ; ಸರಸ್ವತಿ ನಿನ್ನ ಜಿಹ್ವೆ; ದೇವತೆಗಳೇ ನಿನ್ನ ರೋಮಾಳಿ. ನೀನು ಎವೆ ಮುಚ್ಚಿದರೆ ರಾತ್ರಿ; ತೆರೆದರೆ ಹಗಲು. ನಿನ್ನ ಸಂಸ್ಕಾರಗಳೆ ವೇದರಾಶಿ. ನೀನಿಲ್ಲದೆ ಏನಿಲ್ಲ. ಈ ಜಗತ್ತೆಲ್ಲವೂ ನಿನ್ನ ಶರೀರ. ನಿನ್ನ ಸ್ಥೈರ್ಯವೆ ಈ ವಸುಧಾತಲ. ನಿನ್ನ ಕೋಪವೆ ಅಗ್ನಿ; ನಿನ್ನ ಪ್ರಸಾದವೆ ಸೋಮ, ಹೇ ಶ್ರೀವತ್ಸಲಾಂಛನ! ಪೂರ್ವದಲ್ಲಿ ತ್ರಿವಿಕ್ರಮನಾಗಿ ಮೂರು ಲೋಕಗಳನ್ನೂ ಆಕ್ರಮಿಸಿ, ಮಹಾ ಅಸುರನಾದ ಬಲಿಯನ್ನು ಬಂಧಿಸಿ, ಇಂದ್ರನನ್ನು ರಾಜನಾಗಿ ಮಾಡಿದೆ. ಸೀತೆಯೆ ಮಹಾಲಕ್ಷ್ಮಿ. ದೇವನೂ ಕೃಷ್ಣನೂ ಪ್ರಜಾಪತಿಯೂ ಆದ ವಿಷ್ಣು ನೀನು. ರಾವಣ ವಧಾರ್ಥವಾಗಿ ಮಾನುಷದೇಹವನ್ನು ಪ್ರವೇಶಿಸಿರುವೆ. ಆದ್ದರಿಂದ, ಹೇ ಧರ್ಮಭೃತರಲ್ಲಿ ವರಿಷ್ಠನಾದ ರಾಮಚಂದ್ರ, ರಾವಣನು ಹತನಾದನು. ಪ್ರಹೃಷ್ಟನಾಗಿ ಸ್ವಲೋಕಪ್ರತಿಷ್ಠಿತನಾಗು.

“ಅಮೋಘಂ ಬಲವೀರ್ಯಂ ತೇ; ಅಮೋಘಸ್ತೇ ಪರಾಕ್ರಮಃ;
ಅಮೋಘಂ ದರ್ಶನಂ, ರಾಮ; ನ ಚ ಮೋಘಃ ಸ್ತವಸ್ತವ.
ಅಮೋಘಾಸ್ತೇ ಭವಿಷ್ಯಂತಿ ಭಕ್ತಿಮಂತಶ್ಚ ಯೇ ನರಾಃ!”

ನಿನ್ನ ಬಲವೀರ್ಯವು ಅಮೋಘವಾದುದು. ಅಮೋಘವಾದುದು ನಿನ್ನ ಪರಾಕ್ರಮ. ಹೇ ರಾಮಚಂದ್ರ, ನಿನ್ನ ಸಂದರ್ಶನವೂ ಅಮೋಘವೆ. ಮೋಘವಾಗುವುದೆ ಈ ನಿನ್ನ ಸ್ತೋತ್ರ? ನಿನ್ನ ಭಕ್ತರೂ ಅಮೋಘರೆ. ಪುರಾಣನೂ ಪುರುಷೋತ್ತಮನೂ ಆಗಿರುವ ನಿನ್ನಲ್ಲಿ ಭಕ್ತಿಯುಕ್ತರಾದವರು ಇಹಪರಗಳೆರಡರಲ್ಲಿಯೂ ತಮ್ಮ ಇಷ್ಟಾರ್ಥವನ್ನು ಪಡೆಯುತ್ತಾರೆ. ಪುರಾತನವಾದರೂ ನಿತ್ಯೇತಿಹಾಸವಾದ ಈ ಆರ್ಷಸ್ತವವನ್ನು ಯಾರು ಸಂಕೀರ್ತಿಸುವರೊ ಅವರಿಗೆ ಎಂದೂ ಪರಾಭವವಿಲ್ಲ!”

ಇದೇನು ಪವಾಡ! ಸಾಕಾರನಾದ ಯಜ್ಞೇಶ್ವರನು ಸೀತಾದೇವಿಯನ್ನು ತೊಡೆಯಮೇಲೆ ಕುಳ್ಳಿರಿಸಿಕೊಂಡು ಅಗ್ನಿಮಧ್ಯದಿಂದ ಮೇಲಕ್ಕೆದ್ದು ಬರುತ್ತಿದ್ದಾನೆ! ಆ ಸೀತಾಮಾತೆಯಾದರೂ ಆಗತಾನೆ ಉದಿಸುತ್ತಿರುವ ಸೂರ್ಯನಂತೆ ಬೆಳಗುತ್ತಾ ಅಕ್ಷತಶರೀರಳಾಗಿದ್ದಾಳೆ. ತಲೆಯಲ್ಲಿ ಮುಡಿದ ಹೂಗಳು ಕೂಡ ಬಾಡಿಲ್ಲ! ಯಜ್ಞೇಶ್ವರನು ಸೀತಾದೇವಿಯನ್ನು ಎತ್ತಿಕೊಂಡು ಬಂದು ಶ್ರೀರಾಮನಿಗೆ ಒಪ್ಪಿಸುತ್ತಾ “ರಾಮಚಂದ್ರ, ಈ ಜಾನಕಿ ನಿನ್ನವಳು. ಈಕೆ ಪಾಪವನ್ನು ಅರಿಯಳು. ಸದಾಚಾರಚಂಪನ್ನೆಯಾದ ಈಕೆ ಮಾತಿನಲ್ಲಾಗಲಿ ಮನಸ್ಸಿನಲ್ಲಾಗಲಿ ಬುದ್ಧಿಯಲ್ಲಾಗಲಿ ನಿನ್ನನ್ನಲ್ಲದೆ ಬೇರೊಬ್ಬರನ್ನು ನೆನೆದವಳಲ್ಲ. ಕೇವಲ ಮಂಗಳಕರೆಯಾದವಳು, ಈಕೆ. ಗರ್ವಾಂಧನಾದ ರಾವಣ ನೀನಿಲ್ಲದಾಗ ದೀನಳೂ ವಿವಶಳೂ ಆದ ಈಕೆಯನ್ನು ಹೊತ್ತುಕೊಂಡು ಹೋದನು. ಅಂದಿನಿಂದ ಇಂದಿನವರೆಗೆ ಆಕೆ ಎಂತಹ ರಾಕ್ಷಸಭಾಧೆಯನ್ನು ಸಹಿಸಿಕೊಂಡಿರುತ್ತಾಳೆ! ಪಾಪರಹಿತೆಯಾದ ಈ ಪರಿಶುದ್ಧೆಯನ್ನು ಸ್ವೀಕರಿಸು. ಇದು ನನ್ನ ಅಪ್ಪಣೆ. ಇದಕ್ಕೆ ಪ್ರತಿ ಹೇಳಬೇಡ!” ಎಂದು ಹೇಳಿದನು.

ಯಜ್ಞೇಶ್ವರನ ಮಾತುಗಳಿಂದ ಸಂತುಷ್ಟಾಂತರಂಗನಾದ ಶ್ರೀರಾಮಚಂದ್ರನು ಆನಂದಾಶ್ರುಗಳನ್ನು ಸುರಿಸುತ್ತಾ “ಸ್ವಾಮಿ, ಸೀತೆ ಪಾಪರಹಿತೆ ಎಂಬುದನ್ನು ನಾನೂ ಬಲ್ಲೆ. ಆಕೆ ರಾವಣನ ಅಂತಃಪುರದಲ್ಲಿ ಬಹುಕಾಲ ಇದ್ದುದರಿಂದಲೆ ಆಕೆಯ ನಡತೆ ಎಂದಿಗೂ ಕೊಂಕದೆಂಬುದೂ ನನಗೆ ಗೊತ್ತು. ಆದರೆ ಆಕೆಯನ್ನು ಪರೀಕ್ಷಿಸದೆಯೆ ಸ್ವೀಕರಿಸಿದ್ದರೆ ಲೋಕದ ಜನ ನನ್ನನ್ನು ವಿಷಯಲೋಲುಪನೆಂದೂ ರೂಪಮೋಹಿತನೆಂದೂ ಖಂಡಿಸುತ್ತಿದ್ದರಲ್ಲ? ಸ್ವತೇಜಸ್ಸಿನಿಂದಲೆ ತನ್ನನ್ನು ರಕ್ಷಿಸಿಕೊಳ್ಳಬಲ್ಲ ಈಕೆಯನ್ನು ರಾವಣನು ವಶಪಡಿಸಿಕೊಳ್ಳಬಲ್ಲನೆ? ಪ್ರಜ್ವಲಿಸುವ ಅಗ್ನಿಯಂತಿರುವ ಈಕೆಯ ಪಾತಿವ್ರತ್ಯವನ್ನು ಜಗತ್ತಿಗೆ ತೋರುವುದಕ್ಕಾಗಿಯೆ ನಾನು ಈಕೆಯನ್ನು ಪರೀಕ್ಷೆಗೆ ಒಳಪಡಿಸಿದುದು. ಈಕೆ ನನ್ನಿಂದ ಅನನ್ಯೆಯಾದವಳು; ಆದ್ದರಿಂದ ಈಕೆಯನ್ನು ತ್ಯಜಿಸುವುದೆಲ್ಲಿ ಬಂತು? ಪರಾಕ್ರಮಿ ತನ್ನ ಕೀರ್ತಿಯನ್ನೆಂತೊ ಅಂತು ನಾನು ಈಕೆಯನ್ನು ತ್ಯಜಿಸುವುದೆಂಬುದು ಅಸಾಧ್ಯ. ಸೂರ್ಯನಿಗೆ ಪ್ರಭಾದೇವಿಯಂತೆ ಸದಾ ಈಕೆ ನನ್ನನ್ನು ಅಗಲದಿರುವವಳೆ ಸರಿ!” ಎಂದು ಹೇಳಿ ಸೀತಾದೇವಿಯನ್ನು ಕೈಹಿಡಿದು ತನ್ನ ಬಳಿಗೆ ಕರೆದುಕೊಂಡನು.

ಶ್ರೀರಾಮನು ಸೀತಾದೇವಿಯನ್ನು ಸ್ವೀಕರಿಸುವ ಶುಭಮೂಹೂರ್ತದಲ್ಲಿಯೆ ದಶರಥ ಮಹಾರಾಜನು ವಿಮಾನರೂಢನಾಗಿ ಸ್ವರ್ಗದಿಂದ ಅಲ್ಲಿಗೆ ಇಳಿತಂದನು. ರಾಮಚಂದ್ರನು ತಮ್ಮನೊಡನೆ ತಂದೆಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ದಶರಥ ಮಹಾರಾಜನು ವಿಮಾನದಲ್ಲಿ ಕುಳಿತೆ ಮಗನನ್ನು ಬಾಚಿ ತಬ್ಬಿಕೊಂಡನು. ಅನಂತರ ಆತನನ್ನು ತೊಡೆಯಮೇಲೆ ಕುಳ್ಳಿರಿಸಿಕೊಂಡು ಆನಂದಬಾಷ್ಪಗಳನ್ನು ಸುರಿಸುತ್ತಾ “ಮಗು ರಾಮಚಂದ್ರ, ನಿನ್ನನ್ನಗಲಿದ ನನಗೆ ಸ್ವರ್ಗವೂ ಸುಖವಲ್ಲ. ವನವಾಸವನ್ನು ಮುಗಿಸಿ, ಶತ್ರುಜಯದಿಂದ ವರ್ಧಿಸುತ್ತಿರುವ ನಿನ್ನನ್ನು ಕಂಡು ನನಗೆ ಅತ್ಯಂತ ಸಂತೋಷವಾಗಿದೆ. ಆ ಕೈಕೆಯಾಡಿದ ಕ್ರೂರವಾಕ್ಯಗಳು ಈವರೆಗೂ ನನ್ನ ಮನಸ್ಸನ್ನು ಕೊರೆಯುತ್ತಿದ್ದುವು. ಸೀತಾಲಕ್ಷ್ಮಣಸಹಿತನಾಗಿ ಕುಶಲಿಯಾಗಿರುವ ನಿನ್ನನ್ನು ಕಂಡು ನನಗೆಷ್ಟೊ ಸಮಾಧಾನವಾಯಿತು. ರಾಮಾ, ನಿನ್ನಂತಹ ಮಗನನ್ನು ಪಡೆದು ನಾನೂ ಧನ್ಯನಾದೆ. ನೀನಿನ್ನು ಅಯೋಧ್ಯೆಗೆ ಹಿಂತಿರುಗಿ ಭರತನನ್ನೂ ನಿನ್ನ ಮಾತೆಯಾದ ಕೌಸಲ್ಯೆಯನ್ನೂ ಪ್ರಜಾಕೋಟಿಯನ್ನೂ ಆನಂದಪಡಿಸು. ದೀರ್ಘಾಯುವಾಗಿ ಬಾಳು” ಎಂದು ಹೇಳಿ ಲಕ್ಷ್ಮಣನನ್ನು ಕುರಿತು “ಮಗು ಸೌಮಿತ್ರಿ, ನಿನ್ನ ಅಣ್ಣನ ಶುಶ್ರೂಷೆಮಾಡಿ ಮಹತ್ತಾದ ಧರ್ಮಫಲವನ್ನು ಪಡೆದಿರುವೆ. ಅತುಲವಾದ ಪುಣ್ಯಕ್ಕೆ ಅಲ್ಲದೆ ಅಖಂಡವಾದ ಕೀರ್ತಿಗೂ ನೀನು ಭಾಗಿಯಾಗಿರುವೆ” ಎಂದು ಹರಸಿದನು.

ರಾಮಲಕ್ಷ್ಮಣರನ್ನು ಮಾತನಾಡಿಸಿ ಮುಗಿದಾದಮೇಲೆ ದಶರಥ ಮಹಾರಾಜನು ತಲೆಬಾಗಿ ನಿಂತಿದ್ದ ಸೀತೆಯ ಕಡೆಗೆ ತಿರುಗಿ ಅಮೃತದಂತಿರುವ ನುಡಿಗಳಿಂದ “ವೈದೇಹಿ, ಶ್ರೀರಾಮನು ನಿನ್ನನ್ನು ಪರೀಕ್ಷೆಗೆ ಒಳಗು ಮಾಡಿದನೆಂದು ಆತನ ಮೇಲೆ ಕೋಪಿಸಬೇಡ. ನಿನ್ನ ಹಿತೈಷಿಯಾದ ಆತನು ನಿನ್ನ ಪಾತಿವ್ರತ್ಯವನ್ನು ಜಗತ್ತಿಗೆ ಪ್ರದರ್ಶಿಸುವುದಕ್ಕಾಗಿಯೆ ಆ ರೀತಿ ಮಾಡಿದನು. ಮಗಳೆ, ನೀನು ಅಗ್ನಿಪ್ರವೇಶಮಾಡಿ ಹೊರಬಂದು, ನಿನ್ನ ಕೀರ್ತಿಯನ್ನು ದಿಗಂತ ವಿಶ್ರಾಂತವಾಗಿಮಾಡಿದೆ. ಪತಿವ್ರತೆಯಾದ ನಿನಗೆ ಹೇಳಿಕೊಡಬೇಕಾದುದೇನೂ ಇಲ್ಲವಾದರೂ ಇಷ್ಟನ್ನು ಹೇಳಲೇಬೇಕು. ನಿನ್ನ ಪತಿಯಾದ ಈತನು ನಿನಗೆ ದೇವತಾಸ್ವರೂಪನು. ಆದ್ದರಿಂದ ಆತನ ಮೇಲೆ ಕೋಪಿಸಬೇಡ” ಎಂದು ಹೇಳಿ ಆಕೆಯ ತಲೆಯನ್ನು ನೇವರಿಸಿದನು. ಅನಂತರ ಆತನು ಆಕೆಯಿಂದಲೂ ತನ್ನ ಮಕ್ಕಳಿಂದಲೂ ಬೀಳ್ಕೊಂಡು ಸ್ವರ್ಗಕ್ಕೆ ಹಿಂದಿರುಗಿದನು; ಆಕಾಶದಲ್ಲಿ ನಿಂತು ನೋಡುತ್ತಿದ್ದ ದೇವತೆಗಳೆಲ್ಲ ಸೀತಾರಾಮಲಕ್ಷ್ಮಣರನ್ನು ಬಾಯ್ತುಂಬ ಆಶೀರ್ವದಿಸಿ ತಮ್ಮ ತಮ್ಮ ಸ್ಥಾನಗಳಿಗೆ ಹಿಂದಿರುಗಿದರು.

ಅಗ್ನಿಪ್ರವೇಶದಿಂದ ತನ್ನ ಪಾತಿವ್ರತ್ಯವನ್ನು ಸ್ಥಾಪಿಸಿದ ಜಾನಕಿಯನ್ನು ಕಣ್ತುಂಬ ನೋಡಿ ಹಿಗ್ಗುತ್ತಾ ಶ್ರೀರಾಮಚಂದ್ರನು ಲಕ್ಷ್ಮಣನನ್ನು ಕುರಿತು “ಮಗು, ಸೌಮಿತ್ರಿ, ನಮ್ಮ ವಾಸಕ್ಕೆ ಉಚಿತವಾದ ಒಂದು ಪ್ರದೇಶವನ್ನು ನಿರ್ಮಿಸು. ಸೀತಾಪಹರಣಕ್ಕೆ ಮುನ್ನ ಇದ್ದ ನಮ್ಮ ಜೀವನ ಮತ್ತೆ ಆರಂಭವಾಗಲಿ” ಎಂದನು. ಸಮೀಪದಲ್ಲಿದ್ದ ವಾನರ ಸೈನ್ಯವು ನಡೆದ ಪವಾಡದಿಂದ ಆಶ್ಚರ್ಯಗೊಂಡು ಆನಂದದಲ್ಲಿ ನಲಿದಾಡುತ್ತಿತ್ತು.