ಪುಷ್ಪಕ ವಿಮಾನವು ದೊಡ್ಡ ಮೋಡಂದಂತೆ ಆಕಾಶದಲ್ಲಿ ಹಾರುತ್ತಾ ಅಯೋಧ್ಯಯತ್ತ ಪ್ರಯಾಣ ಹೊರಟಿತು

ಸೀತಾಲಕ್ಷ್ಮಣ ಸಹಿತನಾಗಿ ಶ್ರೀರಾಮಚಂದ್ರನು ತನಗಾಗಿ ನಿರ್ಮಿಸಿದ್ದ ಪ್ರದೇಶದಲ್ಲಿ ಸುಖವಾಗಿ ನಿದ್ರಿಸಿದನು. ಮರುದಿನ ಬೆಳಗ್ಗೆ ಆತನು ಮೇಲಕ್ಕೇಳುವ ಹೊತ್ತಿಗೆ, ರಾಕ್ಷಸಪ್ರಭುವಾದ ವಿಭೀಷಣನು ಆತನಿಗಾಗಿ ಕಾದಿದ್ದು ಆತನನ್ನು ಮಂಗಳಸ್ನಾನಮಾಡಿ ವಸ್ತ್ರಭೂಷಣಗಳಿಂದ ಅಲಂಕೃತನಾಗುವಂತೆ ಬೇಡಿದನು. ಆದರೆ ರಾಮಚಂದ್ರನು ಆತನನ್ನು ಕುರಿತು “ಅಯ್ಯಾ ಮಿತ್ರನೆ, ಸುಗ್ರೀವನೆ ಮೊದಲಾದ ವಾನರವೀರರಿಗೆಲ್ಲಾ ಆ ವೈಭವ ನಡೆಯಲಿ. ನಾನು ಭರತಕುಮಾರನನ್ನು ನೋಡಿದ ಹೊರತು ಯಾವ ಸುಖಸಂತೋಷಗಳನ್ನೂ ಅನುಭವಿಸಲಾರೆ. ನನ್ನ ಮೇಲಿನ ಭಕ್ತಿ ಪ್ರೇಮಗಳಿಂದ ತನ್ನ ಸೌಖ್ಯಗಳನ್ನೆಲ್ಲಾ ತೊರೆದಿರುವ ಆ ಸುಕುಮಾರನನ್ನು ಕಾಣುವುದಕ್ಕಾಗಿ ನನಗೀಗಲೆ ಅಯೋಧ್ಯೆಗೆ ಹಿಂದಿರುಗಲು ಅಪೇಕ್ಷೆ. ಆದರೂ ಮಾರ್ಗವು ಮಾತ್ರ ಬಹಳ ದುರ್ಗಮವಾಗಿದೆ!” ಎಂದನು.

ಶ್ರೀರಾಮನ ಮತುಗಳಿಗೆ ಪ್ರತ್ಯುತ್ತರವಾಗಿ ವಿಭೀಷಣನು “ಪ್ರಭು, ನಾನು ನಿನ್ನನ್ನು ಒಂದು ದಿನದೊಳಗಾಗಿ ಅಯೋಧ್ಯೆಗೆ ಕೊಂಡೊಯ್ಯುತ್ತೇನೆ. ನನ್ನ ಅಣ್ಣನಿಗೆ ಸೇರಿದ ಪುಷ್ಪಕವಿಮಾನ ನಿನ್ನ ಪ್ರಯಾಣಕ್ಕೆ ಸಿದ್ಧವಾಗಿದೆ. ಮೇಘೋಪಮವಾದ ಆ ವಿಮಾನವು ಬಯಸಿದಲ್ಲಿಗೆ ಕೊಂಡೊಯ್ಯಬಲ್ಲುದು. ನೀನು ಇಂದು ನನ್ನ ಆತಿಥ್ಯವನ್ನು ಸ್ವೀಕರಿಸಿ, ಅನಂತರ ಪ್ರಯಾಣ ಬೆಳಸಬೇಕು” ಎಂದು ಕೇಳಿಕೊಂಡನು. ಆಗ ಶ್ರೀರಾಮನು “ಮಿತ್ರಾ, ನಿನ್ನ ಮಾತುಗಳಿಂದಲೆ ಪರಮ ಸಂತುಷ್ಟನಾಗಿರುತ್ತೇನೆ. ಆದ್ದರಿಂದ ನಿನ್ನ ಮಾತಿನಂತೆ ನಡೆಯಲಿಲ್ಲವೆಂಬ ದುಗುಡವೇನೂ ಬೇಡ. ಭರತನನ್ನೂ ಮಾತೆಯರನ್ನೂ ಕಾಣಲು ನನ್ನ ಮನಸ್ಸು ಆತುರಪಡುತ್ತಿದೆ. ಸಮಸ್ತಕಾರ್ಯಗಳೂ ನೆರವೇರಿರುವುದರಿಂದ ನನಗೆ ಇಲ್ಲಿ ಇರುವ ಇಷ್ಟವಿಲ್ಲ. ಶೀಘ್ರವಾಗಿ ನನ್ನನ್ನು ಕಳುಹಿಸುವುದಕ್ಕೆ ಏರ್ಪಡಿಸು” ಎಂದನು.

ಶ್ರೀರಾಮಚಂದ್ರನ ಅಪೇಕ್ಷೆಯಂತೆ ಒಡನೆಯೆ ಪ್ರಯಾಣಮಾಡಲು ಪುಷ್ಪಕವಿಮಾನ ಸಿದ್ಧವಾಗಿ ನಿಂತಿತು. ಆತನು ವಿಭೀಷಣನಿಂದ ವಾನರರೆಲ್ಲರಿಗೂ ರತ್ನಭೂಷಣಾದಿ ಬಹುಮಾನಗಳನ್ನು ಕೊಡಿಸಿ, ಅವರೆಲ್ಲರಿಂದಲೂ ಬೀಳ್ಕೊಂಡು ಸೀತಾಲಕ್ಷ್ಮಣರೊಡನೆ ವಿಮಾನವನ್ನೇರಿದನು. ಸೀತಾದೇವಿ ನಾಚಿಕೆಯಿಂದ ನಸು ತಲೆಬಾಗಿಕೊಂಡು ಗಂಡನ ತೊಡೆಯ ಮೇಲೆ ಕೂತಳು. ವಾನರವೀರನಾದ ಸುಗ್ರೀವನಿಗೂ ರಾಕ್ಷಸವೀರನಾದ ವಿಭೀಷಣನಿಗೂ ಹೋಗಿಬರುವೆನೆಂದು ಹೇಳಿ, ಇನ್ನೇನು ಹೊರಡಬೇಕು, ಅಷ್ಟರಲ್ಲಿ ಆತನನ್ನು ಅಗಲಿರಲಾರದೆ, ಆತನ ಪಟ್ಟಾಭಿಷೇಕವನ್ನು ನೋಡಬೇಕೆಂಬ ಆಕಾಂಕ್ಷೆಯಿಂದ ತಮ್ಮ ಪರಿವಾರದೊಡನೆ ತಾವೂ ಜೊತೆಯಲ್ಲಿ ಬರುವುದಾಗಿ ಅವರು ಅಪೇಕ್ಷಿಸಿದರು. ಶ್ರೀರಾಮನು ಸಂತೋಷದಿಂದ ಅದಕ್ಕೆ ಸಮ್ಮತಿಸಲು ಅವರೆಲ್ಲರೂ ವಿಮಾನವನ್ನು ಹತ್ತಿದರು. ಅಷ್ಟು ಜನರೂ ಏರಿ ಕುಳಿತರೂ ವಿಮಾನದಲ್ಲಿ ಜನಸಮ್ಮರ್ದವೇನೂ ಆಗಲಿಲ್ಲ. ಆ ವಿಮಾನವು ದೊಡ್ಡ ಮೋಡದಂತೆ ಆಕಾಶದಲ್ಲಿ ಹಾರುತ್ತಾ ಪ್ರಯಾಣ ಹೊರಟಿತು.

ಪ್ರಯಾಣ ಹೋಗುತ್ತಾ ಹೋಗುತ್ತಾ ಶ್ರೀರಾಮನು ತನ್ನ ಮಡದಿಗೆ ತಾವು ಹಿಂದೆ ಕಂಡಿದ್ದ ಸ್ಥಳಗಳನ್ನೆಲ್ಲಾ ಒಂದೊಂದನ್ನಾಗಿ ಬೆರಳಿಂದ ತೋರಿಸುತ್ತಾ ಹೊರಟನು. “ವೈದೇಹಿ, ಅಗೊ ಆ ಹಿಂದೆ ಕಾಣಿಸುತ್ತಿರುವುದು ಲಂಕಾನಗರ. ಅದರ ಈಚೆ ರಕ್ತಮಾಂಸಗಳಿಂದ ಕೆಸರಾಗಿ ನಿಂತಿರುವ ಆ ಸ್ಥಳವೆ ಯುದ್ಧರಂಗ. ಬ್ರಹ್ಮನಿಂದ ವರ ಪಡೆದು ಅಜೇಯನಾಗಿದ್ದ ರಾಣಾಸುರನೂ ಆತನ ಪರಿವಾರದವರೂ ಹೇಳಹೆಸರಿಲ್ಲದಂತಾದುದು ಆ ಯುದ್ಧಭೂಮಿಯಲ್ಲಿಯೆ. ಸುಂದರಿ, ಇತ್ತ ನೋಡು, ಈ ಸಾಗರ ತೀರ್ಥದ ಬಳಿಯಲ್ಲಿಯೆ ನಾವು ಸಮುದ್ರವನ್ನು ದಾಟಿದ ದಿನ ಬೀಡುಬಿಟ್ಟುಕೊಂಡಿದ್ದುದು. ಅದರ ಸಮೀಪದಲ್ಲಿಯೆ ವಿಸ್ತಾರವಾದ ಸಮುದ್ರದ ಮೇಲೆ ಉದ್ದಕ್ಕೂ ಕಾಣಬರುತ್ತಿರುವುದೆ ನಳನಿರ್ಮಿತವಾದ ಸೇತುವೆ. ಹನುಮಂತನು ಸಮುದ್ರವನ್ನು ದಾಟಿದಾಗ ಮೇಲಕ್ಕೆ ತಲೆಯೆತ್ತಿ ನಿಂತ ಕಾಂಚನ ಪರ್ವತ, ಅಗೊ ನೋಡು, ಅಲ್ಲಿ ಕಾಣುತ್ತಿದೆ. ನನಗೆ ವರುಣನು ಪ್ರತ್ಯಕ್ಷನಾದ ಸೇತುಬಂಧವೆಂಬ ತೀರ್ಥಕ್ಷೇತ್ರವಿದು. ಈ ಪ್ರದೇಶದಲ್ಲಿಯೆ ವಿಭೀಷಣನು ನನ್ನನ್ನು ಕಾಣಲು ಬಂದುದು. ಸೀತಾ, ಅಗೊ ನೋಡು, ಅಲ್ಲಿ ಕಾಣುತ್ತಿರುವುದು ಕಿಷ್ಕಿಂಧಾನಗರ. ಅಲ್ಲಿಯೆ ನಾನು ವಾಲಿಯನ್ನು ಕೊಂದುದು.”

ಕಿಷ್ಕಿಂಧೆಯ ಸುದ್ದಿಯನ್ನೆಲ್ಲ ಹಿಂದೆಯೆ ಕೇಳಿದ್ದ ಸೀತಾದೇವಿಗೆ ತಾರಾದೇವಿ ಮೊದಲಾದ ವಾನರಸ್ತ್ರೀಯರನ್ನೂ ಅಯೋಧ್ಯೆಗೆ ಕರೆದುಕೊಂಡು ಹೋಗಬೇಕೆನ್ನಿಸಿತು. ಗಂಡನಲ್ಲಿ ತನ್ನ ಅಭೀಷ್ಟವನ್ನು ಹೇಳಿಕೊಂಡಳು. ಒಡನೆಯೆ ಶ್ರೀರಾಮನು ವಾನರರನ್ನೆಲ್ಲಾ ಪುಷ್ಪಕದಿಂದಿಳಿಸಿ, ತಮ್ಮ ತಮ್ಮ ಭಾರ್ಯೆಯರೊಡನ ಬರುವಂತೆ ಅಪ್ಪಣೆಮಾಡಿದನು. ಆತನ ಅಪ್ಪಣೆಯಂತೆ ಅವರೆಲ್ಲರೂ ಕಿಷ್ಕಿಂಧೆಗೆ ಹೋಗಿ ತಮ್ಮ ಭಾರ್ಯೆಯರೊಡನೆ ಹಿಂದಿರುಗಿ ವಿಮಾನವನ್ನೇರಿದರು. ಮತ್ತೊಮ್ಮೆ ವಿಮಾನ ಮುಂದುವರಿಯಿತು. ಋಷ್ಯಮೂಕಪರ್ವತವು ಸಮೀಪಿಸಿದೊಡನೆಯೆ ಶ್ರೀರಾಮನು ತನ್ನ ಮಡದಿಯನ್ನು ಕುರಿತು “ಜಾನಕಿ, ಮಿಂಚಿನ ಬಳ್ಳಿಯೊಡಗೂಡಿರುವ ಮುಗಿಲಿನಂತೆ ಕಾಣುತ್ತಿದೆಯಲ್ಲಾ, ಅದೇ ಋಷ್ಯಮೂಕ ಪರ್ವತ. ಅದರ ಬಳಿಯಲ್ಲಿಯೆ ನಾನು ಸುಗ್ರೀವನೊಡನೆ ಸಖ್ಯವನ್ನು ಮಾಡಿಕೊಂಡುದು. ಅಗೊ ಅಲ್ಲಿ ಕಾಣುತ್ತಿರುವ ಜಲರಾಶಿಯೆ ಪಂಪಾಸರೋವರ. ಅದರ ತೀರದಲ್ಲಿಯೆ ಶಬರಿಯನ್ನು ಸಂದರ್ಶಿಸಿದ್ದು. ಅಗೋ ಆ ಪ್ರದೇಶದಲ್ಲಿಯೆ ಕಬಂಧನನ್ನು ಕೊಂದುಹಾಕಿದ್ದು. ಅದನ್ನು ದಾಟಿದೊಡನೆಯೆ ಕಾಣಿಸುತ್ತಿರುವ ಪ್ರದೇಶವೆ ಜನಸ್ಥಾನ. ಅಗೋ ನೋಡು, ಆ ಮಹಾವೃಕ್ಷದ ಬಳಿಯಲ್ಲಿಯೆ ಜಟಾಯು ರಾವಣನೊಡನೆ ಯುದ್ಧಮಾಡಿದ್ದು, ಆ ವೃಕ್ಷದ ಆ ಕಡೆಯೆ ನಾನು ಖರದೂಷಣರನ್ನೂ ತ್ರಿಸಿರಸ್ಕನನ್ನೂ ಬಲಿಹಾಕಿದ್ದು, ಅಗೊ ನಾವು ವಾಸಮಾಡುತ್ತಿದ್ದ ಪರ್ಣಶಾಲೆ! ಅಲ್ಲಿಂದಲೆ ಪಾಪಿಯಾದ ರಾವಣನು ನಿನ್ನನ್ನು ಕರೆದೊಯ್ದುದು. ಸಮೀಪದಲ್ಲಿಯೆ ಗೋದಾವರಿ ಎಷ್ಟು ಮನೋಹರವಾಗಿ ಹರಿಯುತ್ತಿದೆ! ಅದರ ತಡಿಯಿಲ್ಲಯೆ ಅತ್ತ ಕಾಣುತ್ತಿರುವ ಬಾಳೆಯ ಮರಗಳುಳ್ಳುದೆ ಅಗಸ್ತ್ಯರ ಆಶ್ರಮ. ಅತ್ತ ನೋಡು, ಅಲ್ಲಿ ಕಾಣುತ್ತಿರುವುದು ಶರಭಂಗಾಶ್ರಮ; ಅಲ್ಲಲ್ಲಿ ಓಡಾಡುತ್ತಿರುವ ಋಷಿಗಳು ಕೂಡ ಕಾಣುತ್ತಿದ್ದಾರೆ. ಜಾನಕಿ. ಈಗ ಕಾಣಬರುತ್ತಿರುವುದು ಕುಲಪತಿಯಾದ ಅತ್ರಿಮುನಿಯ ಆಶ್ರಮ; ಅಲ್ಲಿಯೆ ಪತಿವ್ರತಾಶಿರೋಮಣಿಯಾದ ಅನುಸೂಯಾದೇವಿಯನ್ನು ಕಂಡದ್ದು. ದೇವಿ ಅಗೋ, ಚಿತ್ರಕೂಟ ಪರ್ವತ! ಇಲ್ಲಿಗೇ ಭರತಕುಮಾರ ನಮ್ಮನ್ನು ಹುಡುಕಿಕೊಂಡು ಬಂದಿದ್ದುದು. ದಟ್ಟವಾದ ವನದ ಮಧ್ಯೆ ಹರಿಯುತ್ತಿರುವುದೆ ಯಮುನಾ ನದಿ. ಮೈಥಿಲಿ, ಅಗೊ, ಆಗಲೆ ಭರದ್ವಾಜಾಶ್ರಮ ಕಾಣಬರುತ್ತಿದೆ! ಉಪವನಗಳಿಂದ ವಿರಾಜಿಸುತ್ತಿರುವ ದಡಗಳುಳ್ಳ ಆ ನದಿಯೆ ಗಂಗಾನದಿ! ಇಗೊ ಇದು ಶೃಂಗಿಬೇರಪುರ. ಇಲ್ಲಿಯೆ ನನ್ನ ಮಿತ್ರನಾದ ಗುಹನು ವಾಸವಾಗಿರುವುದು. ಸೀತಾ, ಅಗೋ ಅಗೋ ನಮ್ಮ ಸರಯೂ ನದಿ! ಅಯೋಧ್ಯಾಪಟ್ಟಣ! ಜಾನಕಿ, ಅಯೋಧ್ಯೆಗೆ ನಮಸ್ಕರಿಸು!” ಎಂದನು. ಅಯೋಧ್ಯೆಯೆಂಬ ಮಾತನ್ನು ಕೇಳುತ್ತಲೆ ವಿಮಾನದಲ್ಲಿ ಕುಳಿತಿದ್ದವರೆಲ್ಲರೂ ಒಮ್ಮೆಯೆ ಆನಂದದಿಂದ ಬಾಗಿ ಬಾಗಿ ಆ ಊರನ್ನು ನೋಡಿದರು. ಉಪ್ಪರಿಗೆಯ ಮನೆಗಳಿಂದಲೂ ಪ್ರಾಕಾರಗಳಿಂದಲೂ ಕಂಗೊಳಿಸುತ್ತಿದ್ದ ಆ ನಗರವನ್ನು ಕಂಡು ದೇವೇಂದ್ರನ ಅಮರಾವತಿಯನ್ನು ಕಂಡವರಂತೆ ಆನಂದಭರಿತರಾದರು.