ಸೀತಾರಾಮಲಕ್ಷ್ಮಣರು ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ, ಚೈತ್ರಶುದ್ಧ ಪಂಚಮಿಯ ದಿನ ಅಯೋಧ್ಯೆಗೆ ಹಿಂದಿರುಗಿದ್ದಾಯಿತು. ಆದರೆ ಅವರು ಅಯೋಧ್ಯೆಯಲ್ಲಿ ಕೆಳಕ್ಕಿಳಿಯದೆ, ಭರದ್ವಾಜಾಶ್ರಮದಲ್ಲಿ ಇಳಿದರು. ಶ್ರೀರಾಮನು ಹೆಂಡತಿಯೊಡನೆಯೂ ತಮ್ಮನೊಡನೆಯೂ ಆಶ್ರಮವನ್ನು ಪ್ರವೇಶಿಸಿ, ಮಹರ್ಷಿಗೆ ನಮಸ್ಕರಿಸಿ, ಭರತಕುಮಾರನ ಮತ್ತು ಅಯೋಧ್ಯೆಯಲ್ಲಿರುವ ಇತರರ ಆರೋಗ್ಯಭಾಗ್ಯವನ್ನು ಕುರಿತು ಪ್ರಶ್ನಿಸಿದನು. ಭರದ್ವಾಜ ಮಹರ್ಷಿ ಮಹಾದಾನಂದದಿಂದ ಮುಗುಳ್ನಗೆ ನಗುತ್ತಾ “ರಾಮಚಂದ್ರ, ಜಟಾವಲ್ಕಲ ಧಾರಿಯಾದ ಭರತಕುಮಾರನು ನಿನ್ನ ಪಾದುಕೆಗಳ ಹೆಸರಿನಲ್ಲಿ ರಾಜ್ಯಭಾರಮಾಡುತ್ತಾ, ನಿನ್ನ ಬರುವಿಕೆಯನ್ನೆ ನಿರೀಕ್ಷಿಸುತ್ತಿದ್ದಾನೆ. ಅಯೋಧ್ಯೆಯಲ್ಲಿ ಎಲ್ಲರೂ ಕುಶಲರಾಗಿರುವರು. ಅದು ಹಾಗಿರಲಿ. ನೀನು ತಂದೆಯ ಮಾತನ್ನು ನಡೆಸುವುದಕ್ಕಾಗಿ ಸಮಸ್ತ ಭೋಗಗಳನ್ನೂ ತೊರೆದು, ಸ್ವರ್ಗದಿಂದ ಜಾರಿದ ದೇವತೆಯಂತೆ ಅರಣ್ಯವಾಸಕ್ಕೆ ಹೊರಟುದನ್ನು ಕಂಡದ್ದು ನನಗೆ ಬಹು ಸಂಕಟವಾಗಿತ್ತು. ಇಂದು ಶತ್ರುಗಳನ್ನೆಲ್ಲಾ ಜಯಿಸಿ ಮಿತ್ರವೃಂದಪರಿವೃತನಾಗಿ ಹಿಂದಿರುಗಿದ ನಿನ್ನನ್ನು ಕಂಡು ಬಹು ಸಂತೋಷವಾಗಿದೆ. ಧರ್ಮವತ್ಸಲನಾದ ರಾಮಚಂದ್ರ, ನೀನು ಅರಣ್ಯವಾಸದಲ್ಲಿ ಇದ್ದಾಗ ಶತ್ರುಗಳೊಡನೆ ಹೋರಾಡಿದುದೂ, ಸೀತಾಪಹರಣ, ಸುಗ್ರೀವ ಸಖ್ಯ, ರಾವಣ ಸಂಹಾರ ಇತ್ಯಾದಿ ಸಮಸ್ತವೂ ನನಗೆ ಜ್ಞಾನ ದೃಷ್ಟಿಯಿಂದ ವೇದ್ಯವಾಗಿಯೆ ಇದೆ. ನೀನು ಇಂದು ಇಲ್ಲಿಯೆ ಇದ್ದು, ನಾನು ಮಾಡುವ ಅತಿಥಿ ಸತ್ಕಾರವನ್ನು ಕೈಗೊಂಡು ನಾಳೆ ಅಯೋಧ್ಯೆಗೆ ಪ್ರಯಾಣಮಾಡು” ಎಂದನು.

ಮಹರ್ಷಿಯ ಮಾತುಗಳಿಗೆ ಮಹಾಪ್ರಸಾದವೆಂದು ಹೇಳಿ, ಶ್ರೀರಾಮನು ಆತನನ್ನು ಕುರಿತು “ಋಷಿಶ್ರೇಷ್ಠನೆ, ಇಲ್ಲಿಂದ ಅಯೋಧ್ಯೆಗೆ ಹೋಗುವ ದಾರಿಯಲ್ಲಿ ಮರಗಳೆಲ್ಲವೂ ಫಲಪುಷ್ಪಗಳಿಂದ ಸಮೃದ್ಧವಾಗುವಂತೆ ಅನುಗ್ರಹಿಸು” ಎಂದು ಬೇಡಿಕೊಂಡನು. ಮಹರ್ಷಿ ‘ಅಸ್ತು’ ಎಂದೊಡನೆಯೆ ಆ ಋಷ್ಯಾಶ್ರಮದಿಂದ ಅಯೋಧ್ಯೆವರೆಗೆ ಮೂರು ಯೋಜನ ದೂರ ವೃಕ್ಷಗಳೆಲ್ಲವೂ ಫಲಸಮೃದ್ಧವಾದುವು. ಒಣಮರಗಳೂ ಕೂಡ ಚಿಗುರಿ ಹೂ ಹಣ್ಣುಗಳಿಂದ ತುಂಬಿದುವು. ವಾನರರೆಲ್ಲರೂ ಪರಮಾನಂದದಿಂದ ಆ ವೃಕ್ಷಗಳಲ್ಲಿದ್ದ ಫಲಗಳನ್ನು ಭುಜಿಸಿ ಸ್ವರ್ಗವನ್ನೇ ಪಡೆದವರಂತೆ ನಲಿದು ನರ್ತಿಸಿದರು.

ಅನಂತರ ಶ್ರೀರಾಮಚಂದ್ರನು ಹನುಮಂತನನ್ನು ಕರೆದು “ಮಾರುತಿ, ನೀನೀಗಲೆ ಇಲ್ಲಿಂದ ಹೊರಟು ಶೃಂಗಿಬೇರಪುರದಲ್ಲಿರುವ ಗುಹ ರಾಜನಿಗೂ ಅಯೋಧ್ಯೆಯಲ್ಲಿ ಇರುವವರಿಗೂ ತಿಳಿಸು, ಭರತನಿಗೆ ಇದುವರೆಗೆ ನನ್ನ ಅರಣ್ಯವಾಸದಲ್ಲಿ ನಡೆದಿರುವುದೆಲ್ಲವನ್ನೂ ತಿಳಿಸಿ, ಈಗ ಸುಗ್ರೀವರಾಜನೊಡನೆಯೂ ವಿಭೀಷಣನೊಡನೆಯೂ ಬಂದು ಈ ಆಶ್ರಮದಲ್ಲಿರುವ ವಿಚಾರವನ್ನು ತಿಳಿಸು. ಅದನ್ನು ಕೇಳಿ ಆತನ ಮುಖದಲ್ಲಿ ಮೂಡುವ ಬದಲಾವಣೆಗಳನ್ನೂ ಮನಸ್ಸಿನಲ್ಲಿ ಏಳಬಹುದಾದ ಭಾವಗಳನ್ನೂ ಅರಿತುಕೊಂಡು ಬರುವವನಾಗು. ಆತನಿಗೆ ರಾಜ್ಯಭಿಷೇಕದ ಮೇಲೆ ಆಸೆಯಿದ್ದರೆ ಅಗತ್ಯವಾಗಿಯೂ ಆತನೆ ರಾಜ್ಯಭಾರ ಮಾಡಿಕೊಂಡಿರಲಿ. ಅದು ನನಗೆ ಅತ್ಯಂತ ಆನಂದವೇ ಸರಿ. ನಾನು ಇಲ್ಲಿಂದ ಹೊರಟು ಅಯೋಧ್ಯೆಯನ್ನು ಸೇರುವುದರೊಳಗಾಗಿ ನೀನು ಆ ಸುದ್ದಿಯನ್ನು ತರಬೇಕು” ಎಂದು ಹೇಳಿದನು.

ಶ್ರೀರಾಮನ ಆಜ್ಞೆಯಾದೊಡನೆಯೆ ಮಾರುತಿ ಮಾನವರೂಪವನ್ನು ಧರಿಸಿ, ಗರುತ್ಮಂತನಂತೆ ಆಕಾಶಮಾರ್ಗವಾಗಿ ಅಯೋಧ್ಯೆಯ ಹಾದಿಯಲ್ಲಿ ಹಿಡಿದನು. ಗಂಗಾ ಯಮುನಾ ನದಿಗಳ ಸಂಗಮ ಸ್ಥಾನದಲ್ಲಿ ಕೆಳಕ್ಕಿಳಿದು ಶೃಂಗಿಬೇರಪುರವನ್ನು ಸೇರಿ ಗುಹನೊಡನೆ ಶ್ರೀರಾಮಚಂದ್ರನ ವೃತ್ತಾಂತವನ್ನೆಲ್ಲಾ ತಿಳಿಸಿದನು. ಅನಂತರ ಮತ್ತೊಮ್ಮೆ ಆಕಾಶಕ್ಕೆ ಹಾರಿ, ಅನೇಕ ನದಿ ವನಗಳನ್ನು ದಾಟಿ ನಂದಿಗ್ರಾಮವನ್ನು ಸೇರಿದನು. ಅಲ್ಲಿ ನಾರುಡೆಯುಟ್ಟು, ಕೃಷ್ಣಾಜಿನವನ್ನು ಹೊದೆದು, ಆಶ್ರಮಸ್ಥನಾಗಿರುವ ಭರತಕುಮಾರನನ್ನು ಆತ ನೋಡಿದನು. ಆತನ ಮಂತ್ರಿಪುರೋಹಿತರೂ ಕಾಷಾಯವಸ್ತ್ರಧಾರಿಗಳಾಗಿದ್ದರು. ನಂದಿಗ್ರಾಮದ ಪ್ರಜೆಗಳೂ ಕೂಡ ಋಷಿಜೀವನವನ್ನು ನಡೆಸುತ್ತಿದ್ದರು. ಇದನ್ನು ಕಂಡು ಆಶ್ಚರ್ಯಪಡುತ್ತಾ, ವ್ಯಸನದಿಂದ ಕೃಶನಾಗಿದ್ದ ಭರತನ ಬಳಿ ಸಾರಿ, ಕೈಗಳನ್ನು ಜೋಡಿಸಿಕೊಂಡು “ಎಲೈ ರಘುಕುಲೋತ್ತಮನೆ, ಯಾವ ಮಹನೀಯನಿಗಾಗಿ ನೀನು ಹೀಗೆ ಸಂತಪ್ತನಾಗಿರುವೆಯೊ ಆ ಶ್ರೀರಾಮನು ತನ್ನ ಕುಶಲವಾರ್ತೆಯನ್ನು ನಿನಗೆ ತಿಳಿಸಿರುವಂತೆ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ. ಆತನು ರಾವಣನನ್ನು ಸಂಹರಿಸಿ, ಸೀತಾಮಾತೆಯೊಡನೆಯೂ ಲಕ್ಷ್ಮಣಸ್ವಾಮಿಯೊಡನೆಯೂ ಅರಣ್ಯದಿಂದ ಹಿಂದಿರುಗಿ ನಿನ್ನ ಬಳಿಗೆ ಬರುತ್ತಿದ್ದಾನೆ” ಎಂದು ಹೇಳಿದನು.

ಹನುಮಂತನು ಹೇಳಿದ ಸಂತೋಷವಾರ್ತೆ ಕಿವಿಗೆ ಬೀಳುತ್ತಿದ್ದಂತೆಯೆ ಭರತನು ಆನಂದಾಧಿಕ್ಯದಿಂದ ಮೈಮರೆತು ಮೂರ್ಛಿತನಾದನು. ಕ್ಷಣಕಾಲದ ಮೇಲೆ ಆತನು ಎಚ್ಚತ್ತು ಹನುಮಂತನನ್ನು ಗಾಢವಾಗಿ ಆಲಿಂಗಿಸಿಕೊಂಡನು. ಕಣ್ಣುಗಳಲ್ಲಿ ಆನಂದಬಾಷ್ಪವನ್ನು ಸುರಿಸುತ್ತಾ ಆತನು, “ಎಲೈ ಪುರುಷೋತ್ತಮನೆ, ನೀನು ಮಾನವನೊ ದೇವನೊ; ಯಾರಾದರೂ ಸರಿ. ಈ ವಾರ್ತೆಯನ್ನು ಹೇಳಿದ ನಿನಗೆ ಒಂದು ಲಕ್ಷ ಗೋಗಳನ್ನೂ ದಿವ್ಯಾಂಬರ ಧಾರಿಣಿಯರಾದ ಹದಿನಾರುಮಂದಿ ಚಂದ್ರಮುಖಿಯರನ್ನೂ ಬಹುಮಾನವಾಗಿ ಕೊಟ್ಟಿರುತ್ತೇನೆ. ಆಹಾ! ನಾನೆಂತಹ ಭಾಗ್ಯಶಾಲಿ! ಅಯ್ಯಾ ಮಹನೀಯನೆ! ‘ಜೀವನ್ ಭದ್ರಾಣಿ ಪಶ್ಯತಿ’ ಎಂಬ ಮಾತು ಸುಳ್ಳಲ್ಲ. ಶ್ರೀರಾಮನ ವೃತ್ತಾಂತವನ್ನೆಲ್ಲಾ ನನಗೆ ಸಮಗ್ರವಾಗಿ ತಿಳಿಸು” ಎಂದು ಕೇಳಿಕೊಂಡನು.

ಭರತನ ಪ್ರಾರ್ಥನೆಯಂತೆ ಹನುಮಂತನು ಭದ್ರಾಸನದಲ್ಲಿ ಕುಳಿತು ಶ್ರೀರಾಮನ ವನವಾಸ ವೃತ್ತಾಂತವನ್ನೆಲ್ಲಾ ಸಮಗ್ರವಾಗಿ ತಿಳಿಸಿದನು. “ಎಲೈ ಭರತ ಕುಮಾರ, ಶ್ರೀರಾಮನ ಪಾದುಕೆಗಳನ್ನು ತೆಗೆದುಕೊಂಡು ಚಿತ್ರಕೂಟದಿಂದ ಹಿಂದಿರುಗಿದ ಮೇಲೆ ಆತನು ಸೀತಾಲಕ್ಷ್ಮಣರೊಡನೆ ದಂಡಕಾರಣ್ಯವನ್ನು ಪ್ರವೇಶಿಸಿದನು. ಅಲ್ಲಿ ವಿರಾಧನೆಂಬ ರಾಕ್ಷಸನನ್ನು ಸಂಹರಿಸಿ, ಶರಭಂಗಋಷಿಗಳ ಆಶ್ರಮಕ್ಕೆ ಹೋದನು. ಆ ದಿನವೆ ಮಹರ್ಷಿಯು ಶ್ರೀರಾಮನ ಅನುಜ್ಞೆಯನ್ನು ಪಡೆದು ಸ್ವರ್ಗಲೋಕಕ್ಕೆ ಹೊರಟು ಹೋದನು. ತರುವಾಯ ಶ್ರೀರಾಮನು ಜನಸ್ಥಾನವನ್ನು ಪ್ರವೇಶಿಸಿದನು. ಅಲ್ಲಿ ಶೂರ್ಪನಖಿಯೆಂಬ ರಾಕ್ಷಸಿಯ ಕಿವಿ ಮೂಗುಗಳನ್ನು ಕತ್ತರಿಸಿ ಆಕೆಯ ಸಹಾಯಕ್ಕಾಗಿ ಬಂದ ಹದಿನಾಲ್ಕುಸಹಸ್ರ ರಾಕ್ಷಸರನ್ನು ರಾಮ ಲಕ್ಷ್ಮಣರು ಸಂಹರಿಸಿದರು. ಹೀಗೆ ಭಂಗಿತಳಾದ ರಾಕ್ಷಸಿ ತನ್ನ ಅಣ್ಣನಾದ ರಾವಣನ ಬಳಿ ಹೋಗಿ ತನ್ನ ದುರವಸ್ಥೆಯನ್ನೂ ರಾಕ್ಷಸರಿಗಾದ ದುರವಸ್ಥೆಯನ್ನೂ ಹೇಳಿಕೊಂಡಳು. ಆಗ ರಾಕ್ಷಸ ರಾಜನಾದ ರಾವಣನು ಮೋಸದಿಂದ ಸೀತಾದೇವಿಯನ್ನು ಅಪಹರಿಸಿ ಲಂಕೆಗೆ ಒಯ್ದನು. ಆಕಾಶಮಾರ್ಗದಿಂದ ಆಕೆಯನ್ನು ಅವನು ಒಯ್ಯುತ್ತಿದ್ದುದನ್ನು ಋಷ್ಯಮೂಕದ ಬಳಿಯಲ್ಲಿದ್ದ ವಾನರರು ಕಂಡು, ಸೀತೆಯನ್ನು ಅರಸುತ್ತಾ ಅಲ್ಲಿಗೆ ಬಂದ ರಾಮನಿಗೆ ತಿಳಿಸಿದರು. ಅಲ್ಲಿ ಆತನಿಗೂ ಸುಗ್ರೀವನೆಂಬ ವಾನರರಾಜನಿಗೂ ಸ್ನೇಹವಾಯಿತು. ಶ್ರೀರಾಮನು ಸುಗ್ರೀವನ ಅಣ್ಣನಾದ ವಾಲಿಯನ್ನು ಸಂಹರಿಸಿ, ಸುಗ್ರೀವನಿಗೆ ಪಟ್ಟಕಟ್ಟಿದನು. ಆ ಮಹಾರಾಜನ ಅಪ್ಪಣೆಯಂತೆ ನಾನೂ ಇತರ ಕೆಲವು ವಾನರ ವೀರರೂ ಸೀತಾಮಾತೆಯನ್ನು ಹುಡುಕುವುದಕ್ಕಾಗಿ ದಕ್ಷಿಣ ದಿಕ್ಕಿಗೆ ಹೊರಟೆವು. ವಿಂಧ್ಯಪರ್ವತದ ಬಳಿಯಲ್ಲಿ ನಾವಿದ್ದಾಗ ಸಂಪಾತಿಯೆಂಬ ಗೃಧ್ರರಾಜನಿಂದ ಸೀತಾಮಾತೆ ಲಂಕಾಪಟ್ಟಣದಲ್ಲಿರುವಳೆಂಬ ಸಮಾಚಾರ ಕೇಳಿ, ನಾನು ಸಾಗರವನ್ನು ದಾಟಿ ಲಂಕೆಗೆ ಹೋದೆ. ಅಲ್ಲಿ ರಾವಣನ ಬಂಧನಕ್ಕೆ ಒಳಗಾಗಿ ಅತ್ಯಂತ ದುಃಖಕ್ಕೆ ಒಳಗಾಗಿದ್ದ ಸೀತಾಮಾತೆಯನ್ನು ಅಶೋಕವನದಲ್ಲಿ ಕಂಡು ಶ್ರೀರಾಮನ ಮುದ್ರೆಯುಂಗುರವನ್ನು ಆಕೆಗೆ ಒಪ್ಪಿಸಿದೆ. ಆಕೆ ತನ್ನ ಗುರುತಿಗಾಗಿ ಶ್ರೀರಾಮನಿಗೆ ಚೂಡಾಮಣಿಯನ್ನು ಕೊಡಲು ಅದನ್ನು ತೆಗೆದುಕೊಂಡು ಶ್ರೀರಾಮನ ಬಳಿಗೆ ಬಂದು ಆಕೆಯ ವೃತ್ತಾಂತವನ್ನೆಲ್ಲಾ ತಿಳಿಸಿದೆ. ಶ್ರೀರಾಮನು ಕ್ರುದ್ಧನಾಗಿ ವಾನರ ಸೇನೆಯೊಡನೆ ರಾವಣನ ಮೇಲೆ ಯುದ್ಧಕ್ಕೆ ಹೊರಟನು. ವಾನರ ವೀರನಾದ ನಳನು ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು ಅದರ ಮೇಲೆ ವಾನರ ಸೇನೆ ಸಮುದ್ರವನ್ನು ದಾಟಿ ಲಂಕೆಯನ್ನು ಸೇರಿತು. ವಾನರರಿಗೂ ರಾಕ್ಷಸರಿಗೂ ಘೋರ ಯುದ್ಧವಾಯಿತು. ಶ್ರೀರಾಮನ ಬಾಣಗಳಿಂದ ರಾಕ್ಷಸ ವಂಶವೆಲ್ಲವೂ ನಾಶವಾಗಿಹೋಯಿತು. ಆಗ ದೇವತೆಗಳೆಲ್ಲರೂ ಪ್ರತ್ಯಕ್ಷರಾಗಿ ಶ್ರೀರಾಮನನ್ನು ಆಶೀರ್ವದಿಸಿದರು. ಅನಂತರ ಅವರು ಮೂವರು ವಾನರ ಪರಿವಾರದೊಡನೆ ಗಂಗಾ ತೀರದಲ್ಲಿರುವ ಭರದ್ವಾಜ ಮುನಿಗಳ ಆಶ್ರಮಕ್ಕೆ ಬಂದು ಇಳಿದುಕೊಂಡಿದ್ದಾರೆ. ನಾಳೆ ಅವರೆಲ್ಲರೂ ಇಲ್ಲಿಗೆ ಹೊರಟು ಬರುತ್ತಾರೆ. ನೀನು ನಿನ್ನ ಅಣ್ಣನಾದ ರಾಮಚಂದ್ರನನ್ನು ನಾಳೆ ನೋಡುವೆ”

ಶ್ರೀರಾಮ ವೃತ್ತಾಂತವನ್ನು ಭಕ್ತಿಯಿಂದ ಕೇಳುತ್ತಿದ್ದ ಭರತನು ಹನುಮಂತನು ಮಾತನ್ನು ಮುಗಿಸುತ್ತಲೆ ಆತನನ್ನು ಕುರಿತು “ಮಹಾನುಭಾವ, ನನ್ನ ಮನೋರಥ ಇಂದು ಪೂರ್ಣವಾಯ್ತು” ಎಂದನು. ಅನಂತರ ಸಮೀಪದಲ್ಲಿ ನಿಂತಿದ್ದ ಶತ್ರುಘ್ನನನ್ನು ಕುರಿತು ಆತನು “ತಮ್ಮ ಅಯೋಧ್ಯಾ ನಗರದ ದೇವಾಲಯಗಳಲ್ಲೆಲ್ಲಾ ವಿಜೃಂಭಣೆಯಿಂದ ಪೂಜೆ ನಡೆಯಲಿ. ಅಂತಃಪುರದವರೂ ನಮ್ಮ ಮಾತೆಯರೂ ಊರಿನ ಸಮಸ್ತ ಜನರೂ ಶ್ರೀರಾಮನನ್ನು ಇದಿರುಗೊಳ್ಳಲು ಈಗಲೇ ತೆರಳಲಿ” ಎಂದನು. ಆತನ ಅಪ್ಪಣೆಯಂತೆ ಕೆಲಸಗಾರರು ನಂದಿಗ್ರಾಮದಿಂದ ಅಯೋಧ್ಯೆಯವರೆಗೆ ದಾರಿಯೆಲ್ಲವನ್ನೂ ನೇರ್ಪುಗೊಳಿಸಿ ಪನ್ನೀರನ್ನು ಸಿಂಚಿಸಿದರು. ಎಲ್ಲೆಲ್ಲಿಯೂ ತಳಿರು ತೋರಣಗಳು ರಾರಾಜಿಸಿದುವು. ಅಯೋಧ್ಯೆಯನ್ನೆಲ್ಲಾ ಧ್ವಜಪತಾಕೆಗಳಿಂದ ಸುಂದರವಾಗಿ ಅಲಂಕರಿಸಿದರು. ಜನರೆಲ್ಲರೂ ನೂತನ ವಸ್ತ್ರಾಭರಣಗಳಿಂದ ಅಲಂಕೃತರಾದರು. ಎಲ್ಲರೂ ಶ್ರೀರಾಮನನ್ನು ಇದಿರುಗೊಳ್ಳುವುದಕ್ಕಾಗಿ ಅಯೋಧ್ಯೆಗೆ ಒಂದು ಕ್ರೋಶ ದೂರದಲ್ಲಿದ್ದ ನಂದಿಗ್ರಾಮಕ್ಕೆ ಹೊರಟು ಬಂದರು.

ಸಮಸ್ತ ಪರಿವಾರದೊಡನೆ ಪುರಜನರೊಡನೆಯೂ ಭರತನು ಶ್ರೀರಾಮಚಂದ್ರನ ಆಗಮನವನ್ನೆ ಇದಿರು ನೋಡುತ್ತ ನಿಂತನು. ಒಂದೊಂದು ಕ್ಷಣವೂ ಆತನಿಗೆ ಒಂದೊಂದು ಯುಗದಂತೆ ತೋರುತ್ತಿತ್ತು. ಅಷ್ಟರಲ್ಲಿ ದೂರದಿಂದ ವಾನರರ ಹರ್ಷಧ್ವನಿ ಕೇಳಿಬಂದಿತು. ಹನುಮಂತನು ಭರತನನ್ನು ಕುರಿತು “ರಾಘವಾನುಜ, ಅಗೋ ನೋಡು ವಾನರರ ಗುಂಪು ನಡೆದು ಬರುತ್ತಿರುವುದರಿಂದ ಎದ್ದ ಧೂಳು ಗೋಮತೀ ತೀರದಲ್ಲಿ ಕಾಣಬರುತ್ತಿದೆ. ಅಗೋ! ಅಗೋ! ಚಂದ್ರಕಾಂತಿ ವಿರಾಜಿತವಾಗಿ ಪುಷ್ಪಕ ವಿಮಾನ, ಅದರಲ್ಲಿ ಸೀತಾರಾಮಲಕ್ಷ್ಮಣರೂ, ವಾನರ ರಾಜನಾದ ಸುಗ್ರೀವನೂ, ರಾಕ್ಷಸ ರಾಜನಾದ ವಿಭೀಷಣನೂ ಕುಳಿತಿದ್ದಾರೆ. ” ಎಂದನು. ಆ ಮಾತನ್ನು ಕೇಳುತ್ತಲೇ ಅಬಾಲವೃದ್ಧರೆಲ್ಲರೂ ಜಯಜಯಕಾರ ಮಾಡಿದರು. ಆ ಜಯ ಶಬ್ದ ಆಕಾಶವನ್ನೆಲ್ಲಾ ವ್ಯಾಪಿಸಿತು.

ಭರತನ ಆಕಾಶದಲ್ಲಿ ಬರುತ್ತಿರುವ ಪುಷ್ಪಕವಿಮಾನದ ಕಡೆ ಕೈ ಮುಗಿದುಕೊಂಡೆ ನಿಂತಿದ್ದನು. ಮೇರುಪರ್ವತದ ಶಿಖರದ ಮೇಲೆ ಉದಯಿಸುವ ಸೂರ್ಯನಂತೆ ಕಂಗೊಳಿಸುತ್ತಿದ್ದ ಶ್ರೀರಾಮನನ್ನು ಕಾಣುತ್ತಲೆ ಆತನು ಭಕ್ತಿಯಿಂದ ನಮಸ್ಕರಿಸಿದನು. ಕ್ಷಣಮಾತ್ರದಲ್ಲಿ ವಿಮಾನ ಕೆಳಕ್ಕಿಳಿಯಿತು. ಭರತನು ಓಡಿಹೋಗಿ ಅದರಲ್ಲಿ ಕುಳಿತಿದ್ದ ಅಣ್ಣನ ಕಾಲುಗಳನ್ನು ಹಿಡಿದು ನಮಸ್ಕರಿಸಿದನು. ಅನಂತರ ಅತ್ತಿಗೆಗೂ ಲಕ್ಷ್ಮಣ ಸ್ವಾಮಿಗೂ ಅಭಿವಾದನ ಮಾಡಿ, ಅಲ್ಲಿದ್ದ ವಾನರ ವೀರರನ್ನೆಲ್ಲಾ ಉಪಚಾರೋಕ್ತಿಗಳಿಂದ ಮನ್ನಣೆ ಮಾಡಿದನು. ಸುಗ್ರೀವನನ್ನಂತೂ ಆತನು “ಇದುವರೆಗೆ ನಾವು ನಾಲ್ವರು ಸೋದರರಾಗಿದ್ದೆವು. ಈಗ ನೀನು ಐದನೆಯವನಾದೆ” ಎಂದು ಆಲಿಂಗಿಸಿದನು. ಅಷ್ಟರಲ್ಲಿ ಶ್ರೀರಾಮನು ವಿಮಾನದೊಳಗೆ ಪ್ರವೇಶಿಸಿದ ಮಾತೆಯರಿಗೂ ಗುರುಹಿರಿಯರಿಗೂ ನಮಸ್ಕಾರ ಮಾಡಿ ಅಲ್ಲಿದ್ದ ಪ್ರಜೆಗಳೆಲ್ಲರ ಕ್ಷೇಮ ವಿಚಾರಿಸಿದನು. ಆತನನ್ನು ಕಂಡು ಪ್ರಜೆಗಳೆಲ್ಲರೂ ಆನಂದಬಾಷ್ಪ ಸುರಿಸುತ್ತಾ “ಆಹಾ! ರಾಮಚಂದ್ರನು ಹಿಂದಿರುಗಿದನಲ್ಲವೆ” ಎಂದುಕೊಂಡರು.

ಧರ್ಮಪ್ರಜ್ಞನಾದ ಭರತಕುಮಾರನು ಸಿಂಹಾಸನದಲ್ಲಿ ತಾನು ಪ್ರತಿಷ್ಠಿಸಿದ್ದ ಪಾದುಕೆಗಳನ್ನು ಹೊತ್ತು ತಂದು ಶ್ರೀರಾಮನ ಪಾದಗಳಿಗೆ ತೊಡಿಸುತ್ತಾ “ಅಣ್ಣಾ ನೀನು ನ್ಯಾಸವಾಗಿರಿಸಿದ್ದ ಈ ರಾಜ್ಯವನ್ನು ನಿನ್ನ ಅಪ್ಪಣೆಯಂತೆ ಇದುವರೆಗೆ ಸಂರಕ್ಷಿಸುತ್ತಿದ್ದೆನು. ಇಗೋ ಈ ಭಾರವನ್ನು ನೀನೀಗ ವಹಿಸಿಕೋ. ಇಂದು ನನ್ನ ಮನೋರಥ ಸಫಲವಾಯಿತು. ನನ್ನ ಜನ್ಮ ಸಾರ್ಥಕವಾಯಿತು” ಎಂದನು. ತಮ್ಮನ ನುಡಿಗಳಿಂದ ಆರ್ದ್ರಹೃದಯನಾದ ರಾಮಚಂದ್ರನ ಆತನನ್ನು ತಬ್ಬಿ ತೊಡೆಯಮೇಲೆ ಕುಳ್ಳಿರಿಸಿಕೊಂಡು ವಿಮಾನದಲ್ಲಿಯೆ ಭರತನ ಆಶ್ರಮಕ್ಕೆ ಹೊರಟು ಬಂದನು. ಅನಂತರ ತನ್ನ ಪರಿವಾರದೊಡನೆ ಕೆಳಕ್ಕಿಳಿದು, ವಿಮಾನವನ್ನು ಅದರ ಪೂರ್ವದ ಯಜಮಾನನಾದ ಕುಬೇರನಬಳಿಗೆ ಹಿಂದಿರುಗುವಂತೆ ಅಪ್ಪಣೆ ಮಾಡಿದನು. ಅದು ಆಕಾಶಕ್ಕೆ ಹಾರಿ ಹೊರಟುಹೋಯಿತು.