ಶ್ರೀರಾಮ ಪಟ್ಟಾಭಿಷೇಕ

ಗುರುಹಿರಿಯರೆಲ್ಲರಿಗೂ ನಮಿಸಿ ಅವರ ಮಧ್ಯೆ ಮಂಗಳಾಸನದಲ್ಲಿ ಕುಳಿತ ಶ್ರೀರಾಮಚಂದ್ರನನ್ನು ಕುರಿತು ಭರತಕುಮಾರನು ನಮಸ್ಕಾರಪೂರ್ವಕವಾಗಿ ವಿಜ್ಞಾಪಿಸಿಕೊಂಡನು – “ಅಣ್ಣ ರಾಮಚಂದ್ರ, ನನ್ನ ತಾಯಿಯ ಅಭಿಪ್ರಾಯವನ್ನು ಗೌರವಿಸಿ ಅಯೋಧ್ಯಾ ರಾಜ್ಯವನ್ನು ನನಗಿತ್ತೆ. ನೀನು ನನ್ನ ಮೇಲೆ ಹೊರಿಸಿದ ರಾಜ್ಯಭಾರವನ್ನು ಈ ಹದಿನಾಲ್ಕು ವರ್ಷಗಳೂ ಬಹಳ ಕಷ್ಟದಿಂದ ನಿರ್ವಹಿಸಿದೆ. ಈಗ ನಿನ್ನ ರಾಜ್ಯವನ್ನು ನೀನು ವಹಿಸಿಕೊಳ್ಳಬೇಕೆಂದು ಬೇಡಿಕೊಳ್ಳುತ್ತೇನೆ. ವೃಷಭ ಹೊರುವ ಭಾರವನ್ನು ಎಳಗರು ಹೇಗೆ ಹೊರಬಲ್ಲದು? ಆದ್ದರಿಂದ ನಾನು ಹೊರಲಾರದ ರಾಜ್ಯಭಾರವನ್ನು ನೀನು ಈಗಲೇ ವಹಿಸುವವನಾಗು. ಸಾಕೇತ ಸಾಮ್ರಾಜ್ಯದಲ್ಲಿ ಪಟ್ಟಭಿಷಕ್ತನಾದ ನಿನ್ನನ್ನು ಕಣ್ತುಂಬ ಕಂಡು ಪ್ರಜೆಗಳೆಲ್ಲರೂ ಆನಂದಪಡಲಿ. “

ತಮ್ಮನ ಪ್ರಾರ್ಥನೆಗೆ ಶ್ರೀರಾಮನು ‘ತಥಾಸ್ತು’ ಎಂದು ಹೇಳಿ ತಮ್ಮನೊಡನೆ ಜಟಾ ವಿಸರ್ಜನೆ ಮಾಡಿ, ಮಂಗಳ ಸ್ನಾನ ಮಾಡಿದನು. ಶತ್ರುಘ್ನನೇ ನಿಂತು ಆತನಿಗೆ ದಿವ್ಯವಾದ ವಸ್ತ್ರಾಭರಣಗಳನ್ನು ತೊಡಿಸಿದನು. ಕೌಸಲ್ಯೆಯೆ ಮೊದಲಾದ ರಾಜ ಮಾತೆಯರು ಸೀತಾದೇವಿಗೆ ಮಂಗಳ ಸ್ನಾನ ಮಾಡಿಸಿ ಮನೋಹರವಾದ ಉಡುಗೆ ತೊಡುಗೆಗಳಿಂದ ಆಕೆಯನ್ನು ಅಲಂಕರಿಸಿದರು. ಅನಂತರ ಸುಮಂತ್ರನ ತಂದು ನಿಲ್ಲಿಸಿದ ದಿವ್ಯರಥವನ್ನೇರಿ ಸಕಲ ಪರಿವಾರದೊಡನೆ ಅಯೋಧ್ಯೆಗೆ ಹೊರಟರು. ಸುಂದರವಾಗಿ ಅಲಂಕೃತರಾದ ವಾನರರೂ, ವಾನರ ಸ್ತ್ರಿಯರೂ ಪುರಜನರೊಡನೆ ಆತನ ಸುತ್ತಲೂ ವಿವಿಧ ವಾಹನಗಳಲ್ಲಿ ಕುಳಿತು ಮೆರವಣಿಗೆ ಹೊರಟರು. ಶ್ರೀರಾಮಚಂದ್ರನ ರಥದ ಸಾರಥ್ಯವನ್ನು ಸ್ವತಃ ಭರತನೆ ವಹಿಸಿದನು. ಶತ್ರುಘ್ನನು ಶ್ವೇತಚ್ಛತ್ರವನ್ನು ಎತ್ತಿ ಹಿಡಿದನು. ಲಕ್ಷ್ಮಣ ಸ್ವಾಮಿಯೂ ವಿಭೀಷಣನೂ ಚಾಮರ ಬೀಸಿದರು. ಸುಗ್ರೀವ ಮಹಾರಾಜನು ಶತ್ರುಂಜಯವೆಂಬ ಆನೆಯನ್ನೇರಿ ಮುಂದೆ ಹೊರಟನು. ವಾನರ ವೀರರೆಲ್ಲರೂ ಮಾನವ ರೂಪ ಧರಿಸಿ ಭದ್ರಗಜಗಳ ಮೇಲೆ ಕುಳಿತು ಆತನನ್ನು ಹಿಂಬಾಲಿಸಿದರು. ಶಂಖ ಭೇರಿ ಕಹಳೆ ಮೊದಲಾದ ವಾದ್ಯಗಳು ಭೋರ್ಗರೆಯುತ್ತಾ ತಮ್ಮ ಧ್ವನಿಯಿಂದ ದಿಕ್ತಟಗಳನ್ನು ತುಂಬಿದುವು. ದೇವತೆಗಳೂ ಸಿದ್ಧ ವಿದ್ಯಾಧರರೂ ಆಕಾಶದಲ್ಲಿ ನಿಂತು ರಾಮನಿಗೆ ಜಯಜಯಕಾರ ಮಾಡಿದರು.

ನಕ್ಷತ್ರಗಳೊಡಗೂಡಿದ ಪೂರ್ಣಚಂದ್ರನಂತೆ ಪರಿವಾರ ಮಧ್ಯದಲ್ಲಿ ಬೆಳಗುತ್ತಿದ್ದ ಶ್ರೀರಾಮಚಂದ್ರನು ಮಹಾ ವೈಭವದಿಂದ ಅಯೋಧ್ಯೆಯನ್ನು ಪ್ರವೇಶಿಸಿದನು. ಗುರುಗಳೂ ಪುರೋಹಿತರೂ ಆಶೀರ್ವದಿಸಿ ಆತನಿಗೆ ಶೇಷಾಕ್ಷತೆ ತಳಿದರು. ಮುತ್ತೈದೆಯರು ಸಾಲುಸಾಲಾಗಿ ಬಂದು ಲಾಜಾರತಿ ಎತ್ತಿದರು. ಪ್ರಜೆಗಳ ಸಂಭ್ರಮವಂತೂ ಹೇಳತೀರದು. ನಭೋರಾಗವನ್ನು ತುಂಬುತ್ತಿರುವ ಜಯಜಯಕಾರಗಳ ಮಧ್ಯೆ ಸಾಗಿಬಂದು ಶ್ರೀರಾಮನು ಅರಮನೆಯನ್ನು ಪ್ರವೇಶಿಸಿದನು. ಸುಗ್ರೀವ ಮಹಾರಾಜನೂ ವಿಭೀಷಣನೂ ಉಚಿತ ಗೌರವಗಳೊಂದಿಗೆ ಅರಮನೆಯಲ್ಲೇ ಉಳಿದುಕೊಂಡರು. ತಮ್ಮ ರಾಜನ ಅಪ್ಪಣೆಯಂತೆ ವಾನರರು ನಾಲ್ಕು ಸಮುದ್ರಗಳಿಂದಲೂ ಅನೇಕ ಪುಣ್ಯ ನದಿಗಳಿಂದಲೂ ಪುಣ್ಯೋದಕಗಳನ್ನು ಕೊಂಡುಬಂದರು. ಆ ಪೂರ್ಣ ಜಲಕಂಭವನ್ನು ವಸಿಷ್ಠಮಹರ್ಷಿಗಳು ಅರಮನೆಯ ದೇವಾಗಾರದಲ್ಲಿ ಇರಿಸಿದರು.

ರಾಮಚಂದ್ರನ ಪಟ್ಟಾಭಿಷೇಕಕ್ಕಾಗಿ ಸಮಸ್ತ ಸಂಭಾರಗಳೂ ಸಿದ್ಧವಾದುವು. ಅನಂತರ ವಸಿಷ್ಠಮಹರ್ಷಿ ಇತರ ಪುರೋಹಿತರೊಡಗೂಡಿ ಮಂತ್ರವನ್ನು ಜಪಿಸುತ್ತಾ ಸೀತಾಸಮೇತನಾದ ಶ್ರೀರಾಮಚಂದ್ರನನ್ನು ರತ್ನಸಿಂಹಾಸನದ ಮೇಲೆ ಕುಳ್ಳಿರಿಸಿದರು. ವಾಮದೇವ, ಜ್ಯಾಬಾಲಿ, ಗೌತಮ, ಕಶ್ಯಪ ಮೊದಲಾದ ಮಹಷಿಗಳು ಆತನೊಡನೆ ಸೇರಿ ಶ್ರೀರಾಮಚಂದ್ರನಿಗೆ ತೀರ್ಥೋದಕದಿಂದ ಅಭಿಷೇಕ ಮಾಡಿದರು. ಪುರೋಹಿತರೂ ಋತ್ವಿಕ್ಕುಗಳೂ ಅಭಿಷೇಕ ಕಾರ್ಯವನ್ನು ನೆರವೇರಿಸಿದ ಮೇಲೆ ಮಂತ್ರಿಗಳೂ ಪ್ರಜಾಪ್ರಮುಖರೂ ಆತನಿಗೆ ಅಭಿಷೇಕ ಮಾಡಿದರು. ಪೂರ್ವದಲ್ಲಿ ಮನು ಮಹಾರಾಜನು ಧರಿಸಿ ವಂಶಾನುಕ್ರಮವಾಗಿ ಬಂದ ರತ್ನಕಿರೀಟವನ್ನು ವಸಿಷ್ಠರು ತಮ್ಮ ಸ್ವಹಸ್ತದಿಂದ ಶ್ರೀರಾಮನ ತಲೆಯ ಮೇಲೆ ಇರಿಸಿದರು. ಅದಾದ ಮೇಲೆ ಉಳಿದ ಋತ್ವಿಜರು ವಿವಿಧ ಭೂಷಣಗಳಿಂದ ಆತನನ್ನು ಅಲಂಕರಿಸಿದರು. ಆಗ ಶತ್ರುಘ್ನನು ಆತನ ತಲೆಯ ಮೇಲೆ ಶ್ವೇತಚ್ಛತ್ರವನ್ನು ಎತ್ತಿ ಹಿಡಿದನು. ಸುಗ್ರೀವನೂ ವಿಭೀಷಣನೂ ಚಾಮರವನ್ನು ಹಿಡಿದು ಸೇವೆ ಸಲ್ಲಿಸಿದರು. ವಾಯುದೇವನು ಮಹೇಂದ್ರನಿಂದ ಪ್ರೇರಿತನಾಗಿ ಆತನಿಗೆ ರತ್ನಹಾರವನ್ನು ಅರ್ಪಿಸಿದನು. ದೇವಗಂಧರ್ವರು ಮಧುರವಾಗಿ ಗಾನ ಮಾಡಿದರು. ಅಪ್ಸರೆಯರು ನಾಟ್ಯ ಮಾಡಿದರು. ಭೂಮಿಯೆಲ್ಲವೂ ಸಸ್ಯ ಸಮೃದ್ಧವಾಯಿತು. ವೃಕ್ಷಗಳೆಲ್ಲವೂ ಫಲಪುಷ್ಪಭರಿತವಾದುವು.

ಪಟ್ಟಾಭಿಷೇಕ ಕಾಲದಲ್ಲಿ ಶ್ರೀರಾಮಚಂದ್ರನು ಒಂದು ಲಕ್ಷ ಕುದುರೆಗಳನ್ನೂ ಒಂದು ಲಕ್ಷ ಗೋಗಳನ್ನೂ ಬುಧರಿಗೆ ದಾನ ಮಾಡಿಸಿದನು. ಆಭರಣಗಳನ್ನೂ ವಿವಿಧ ವಸ್ತ್ರಗಳನ್ನೂ ಸ್ವರ್ಣನಾಣ್ಯಗಳನ್ನೂ ಅಸಂಖ್ಯಾತವಾಗಿ ದಾನ ಮಾಡಿದನು. ಸುಗ್ರೀವನಿಗೆ ರತ್ನಮಯವಾದ ಸ್ವರ್ಣಹಾರವನ್ನೂ ರತ್ನವಿರಾಜಿತವಾದ ಅಂಗದಗಳನ್ನು ವಾಲಿ ಪುತ್ರನಾದ ಅಂಗದನಿಗೂ ಬಹುಮಾನವಾಗಿ ಕೊಟ್ಟನು. ಚಂದ್ರಕಿರಣಗಳಿಗೆ ಸಮಾನವಾದ ಕಾಂತಿಯುಳ್ಳ ಮುಕ್ತಹಾರವನ್ನು ಅಮೂಲ್ಯವಾದ ವಸ್ತ್ರಾಭರಣಗಳನ್ನು ಆತನು ಸೀತಾದೇವಿಗೆ ಕೊಡಲು ಆಕೆ ಪಾದದ ಬಳಿ ಕೈ ಮುಗಿದು ಕುಳಿತಿದ್ದ ಮಾರುತಿಗೆ ಅದೆಲ್ಲವನ್ನೂ ಕೊಟ್ಟು ಬಹುಮಾನಿಸಿದಳು. ಇಷ್ಟೆ ಅಲ್ಲ, ತನ್ನ ಕೊರಳಲ್ಲಿದ್ದ ಅಮೂಲ್ಯ ರತ್ನಹಾರವನ್ನು ಕೈಗೆ ತೆಗೆದುಕೊಂಡು ಅದನ್ನು ಮಾರುತಿಗೆ ಕೊಡಬೇಕೆಂಬ ಅಭಿಪ್ರಾಯದಿಂದ ಶ್ರೀರಾಮನ ಮುಖವನ್ನು ನೋಡಿದಳು. ಇಂಗಿತಜ್ಞನಾದ ಆತನು ಆಕೆಯನ್ನು ಕುರಿತು “ನಿನಗೆ ಅತ್ಯಂತ ಪ್ರಿಯಕರವಾದ ರೀತಿಯಲ್ಲಿ ನಡೆದುಕೊಂಡಿರುವ ಮಾರುತಿಗೆ ಆ ಹಾರವನ್ನು ಕೊಡು” ಎಂದನು. ಆಕೆ ಕೊಟ್ಟ ಹಾರವನ್ನು ಹನುಮಂತನು ಭಕ್ತಿಯಿಂದ ಧರಿಸಿ, ಬಿಳಿಮುಗಿಲುಗಳ ಮಣಿಯನ್ನು ಧರಿಸಿರುವ ಪರ್ವತದಂತೆ ಕಂಗೊಳಿಸಿದನು. ಶ್ರೀರಾಮನ ಅಪ್ಪಣೆಯಿಂದ ಉಳಿದ ವಾನರ ವೀರರಿಗೂ ವಿಭೀಷಣ ಮತ್ತು ಅವನ ಪರಿವಾರದವರಿಗೂ ಅನರ್ಘ್ಯ ವಸ್ತ್ರಭೂಷಣಗಳನ್ನು ಬಹುಮಾನವಾಗಿ ಹಂಚಲಾಯಿತು.

ಶ್ರೀರಾಮಚಂದ್ರನ ಪಟ್ಟಾಭಿಷೇಕ ಸಮಯದಲ್ಲಿ ಯಥೇಷ್ಟವಾಗಿ ಪುರಸ್ಕಾರವನ್ನು ಹೊಂದಿ ತೃಪ್ತರಾದ ವಾನರರೂ ರಾಕ್ಷಸವೀರರೂ ತಮ್ಮತಮ್ಮ ರಾಜಧಾನಿಗಳಿಗೆ ಹಿಂದಿರುಗಿದರು. ಶ್ರೀರಾಮಚಂದ್ರನು ಮಹಾ ವೈಭವದಿಂದ ರಾಜ್ಯವಾಳುತ್ತಾ ಲಕ್ಷ್ಮಣಸ್ವಾಮಿಯನ್ನು ಕುರಿತು “ಸೌಮಿತ್ರಿ ಈ ಭೂಮಂಡಲವನ್ನು ನನ್ನೊಡನೆ ನೀನೂ ಪಾಲಿಸುತ್ತಾ ನನ್ನೊಡನೆ ಸಮಾನ ಸುಖವನ್ನು ಅನುಭವಿಸುವವನಾಗು” ಎಂದು ಹೇಳಿದನು. ಆದರೆ ಸೌಮಿತ್ರಿ ಇದಕ್ಕೆ ಒಪ್ಪಲಿಲ್ಲ. ಆದ್ದರಿಂದ ಭರತನು ಯುವರಾಜನಾದನು. ಶ್ರೀರಾಮನು ಅನೇಕ ಯಜ್ಞಯಾಗಾದಿಗಳನ್ನು ನೆರವೇರಿಸುತ್ತಾ ಹತ್ತುಸಾವಿರ ವರ್ಷಕಾಲ ಸುಖವಾಗಿ ರಾಜ್ಯಭಾರ ಮಾಡುತ್ತಿದ್ದನು. ಆತನ ಆಳ್ವಿಕೆಯಲ್ಲಿ ಕ್ಷಾಮಡಾಮರಗಳಾಗಲೀ ಆಕಾಲ ಮರಣವಾಗಲೀ ಕಂಡು ಕೇಳಿದುದಿಲ್ಲ. ಲೋಕವೇ ಆನಂದದಿಂದ ಇದ್ದಿತು. ಜನರೆಲ್ಲರೂ ಧರ್ಮಪರರಾಗಿದ್ದರು. ಎಲ್ಲೆಲ್ಲಿಯೂ ಶ್ರೀರಾಮಕಥಾಲಾಪ ಕೇಳಿಬರುತ್ತಿತ್ತು. ಜಗತ್ತೇ ರಾಮಮಯವಾಯಿತು. ವೃಕ್ಷಗಳೆಲ್ಲವೂ ನಿತ್ಯ ಫಲಪುಷ್ಪಭರಿತಗಳಾಗಿದ್ದುವು. ಕಾಲಕಾಲಕ್ಕೆ ಮಳೆ ಬರುತ್ತಿತ್ತು. ಎಲ್ಲರೂ ನಿತ್ಯತೃಪ್ತರಾಗಿದ್ದರು.

ಧನ್ಯವಾದ ಈ ವಾಲ್ಮೀಕಿ ರಾಮಾಯಣವನ್ನು ಪಠಿಸಿದವನು ಪಾಪರಹಿತನಾಗುತ್ತಾನೆ. ಪುತ್ರರನ್ನು ಬೇಡುವವನು ಪುತ್ರವಂತನಾಗುತ್ತಾನೆ. ಧನಕಾಮುಕರು ಧನಾಢ್ಯರಾಗುತ್ತಾರೆ. ಇದನ್ನು ಕೇಳಿದವರು ಹಿಡಿದ ಸಮಸ್ತ ಕಾರ್ಯಗಳಲ್ಲಿಯೂ ವಿಜಯಶಾಲಿಗಳಾಗುತ್ತಾರೆ. ದೀರ್ಘಾಯುಷ್ಯವನ್ನು ಹೊಂದುತ್ತಾರೆ. ಇದನ್ನು ಕೇಳಿದ ಸ್ತ್ರಿಯರು ರಾಮನನ್ನು ಪಡೆದ ಕೌಸಲ್ಯೆಯಂತೆ ನಿತ್ಯಸಂತೋಷಭರಿತರಾಗಿ ಪುತ್ರಪೌತ್ರಾದಿಗಳನ್ನು ಪಡೆದು ಚಿರಸಂತೋಷವನ್ನು ಹೊಂದುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಆರಾರಿಗೆ ಆವಾವುದರಲ್ಲಿ ಆಶೆಯೋ ಅದನ್ನು ಪಡೆಯುತ್ತಾರೆ. ಸಮಸ್ತ ಕಷ್ಟಗಳಿಂದಲೂ ಮುಕ್ತರಾಗಿ ಸುಖವನ್ನು ಹೊಂದುತ್ತಾರೆ. ಅಲ್ಲದೆ ಅವರು ದೇವತೆಗಳ ಕೃಪೆಗೂ ಪಾತ್ರರಾಗುತ್ತಾರೆ. ಇದನ್ನು ಪೂಜಿಸುವವರೂ ಪಠಿಸುವವರೂ ಸಕಲ ಪಾಪರಹಿತರಾಗಿ ದೀರ್ಘಾಯುಷ್ಯ ಹೊಂದಿ ಶ್ರೀಮನ್ನಾರಾಯಣನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಆದ್ದರಿಂದ ಎಲೈ ಮಾನವರಿರಾ, ಪುರಾತನವಾದ ರಾಮಾಯಣವನ್ನು ಭಕ್ತಿಯಿಂದ ಪಠನ ಮಾಡಿ ಧನ್ಯರಾಗಿ! ನಿಮಗೆ ಮಂಗಳವಾಗಲಿ!

ಸಮಸ್ತ ಸನ್ಮಂಗಳಾನಿ ಭವಂತು
ಎಲ್ಲರ್ಗಮೆಲ್ಲ ಮಂಗಳಮಕ್ಕೆ!
ಓಂ ತತ್ಸತ್

* * *