ಅಂಜನಾಸುತನ ತಾನು ತಂದಿದ್ದ ಚೂಡಾಮಣಿಯನ್ನು ಶ್ರೀರಾಮನಿಗೆ ಕೊಟ್ಟನು.

ದಧಿಮುಖನು ದೀನವದನದಿಂದ ಸುಗ್ರೀವನಲ್ಲಿ ಅರಿಕೆಮಾಡಿಕೊಳ್ಳುತ್ತಿದ್ದುದನ್ನು ಕಂಡ ಲಕ್ಷ್ಮಣನು “ಏನಿದು, ಸುಗ್ರೀವ ಮಹಾರಾಜ? ಇವನು ನಿನ್ನಲ್ಲಿ ಹೇಳುತ್ತಿರುವುದೇನು?” ಎಂದು ಕೇಳಿದನು. ಆಗ ಆತನು “ಪೂಜ್ಯನೆ, ನಾನು ಸೀತಾನ್ವೇಷಣಕ್ಕಾಗಿ ದಕ್ಷಿಣ ದಿಕ್ಕಿಗೆ ಕಳುಹಿಸಿದ್ದ ಅಂಗದಾದಿ ಮಹಾವೀರರರು ಈಗ ಹಿಂದಿರುಗಿ ರಾಜೋದ್ಯಾನದ ಮಧುವನ್ನೆಲ್ಲಾ ಪಾನಮಾಡಿದರೆಂದು ಈತನು ತಿಳಿಸುತ್ತಾನೆ. ಇದನ್ನು ನೋಡಿದರೆ ಆ ವಾನರರು ಕೃತಕಾರ್ಯರಾಗಿ ಹಿಂದಿರುಗಿ ಬಂದಿರುವಂತೆ ತೋರುತ್ತಿದೆ. ಇಲ್ಲದಿದ್ದರೆ ಮಧುವನವನ್ನು ಪ್ರವೇಶಿಸಿ, ಮಧುವನ್ನು ಸೇವಿಸುವಷ್ಟು ಧೈರ್ಯವಿರುತ್ತಿರಲಿಲ್ಲ. ನನಗೆ ಮಧುವನ ಎಷ್ಟು ಪ್ರಿಯವೆಂಬುದೂ ನನ್ನ ಆಜ್ಞೆ ಎಷ್ಟು ಕಠಿಣವೆಂಬುದೂ ಅವರಿಗೆ ಗೊತ್ತಿದೆ. ಆದ್ದರಿಂದ ಮಹಾಕಾರ್ಯವನ್ನು ಸಾಧಿಸಿದ ಹೊರತು ಈ ಧೈರ್ಯ ಅವರಲ್ಲಿ ಹುಟ್ಟಿರಲಾರದು. ಆ ಗುಂಪಿನಲ್ಲಿ ನಮ್ಮ ಆಂಜನೇಯ ಇದ್ದಾನೆ. ಆತ ಮಹಾ ಶೂರ, ಬಹು ಜಾಣ, ಆತ ಇದ್ದಕಡೆ ಕಾರ್ಯಸಿದ್ಧಿ ಸ್ವತಸ್ಸಿದ್ಧ. ಅಲ್ಲದೆ ಜಾಂಬವಂತ ನೇತೃವಾಗಿ, ಅಂಗದ ಸೇನಾನಾಯಕನಾಗಿ, ಆಂಜನೇಯ ಕಾರ್ಯ ನಿರ್ವಾಹಕನಾಗಿ ನಿಂತಮೇಲೆ ಹಿಡಿದ ಕಾರ್ಯ ಯಶಸ್ವಿಯಾಗದೆ ಇರಲು ಸಾಧ್ಯವೇ ಇಲ್ಲ. ಆದ್ದರಿಂದ ನಿಸ್ಸಂದೇಹವಾಗಿಯೂ ಆ ವಾನರ ವೀರರು ಸೀತಾದೇವಿಯನ್ನು ಸಂದರ್ಶಿಸಿಯೆ ಬಂದಿರಬೇಕು” ಎಂದನು.

ಸುಗ್ರೀವನ ಮಾತುಗಳನ್ನು ಕೇಳಿ ಲಕ್ಷ್ಮಣನಿಗೆ ಆನಂದವಾಯಿತು. ಆತನು ತನ್ನ ಅಣ್ಣನಿಗೆ ಆ ಸಮಾಚಾರವನ್ನು ತಿಳಿಸುತ್ತಿರಲು ಇತ್ತ ಸುಗ್ರೀವನು ದಧಿಮುಖನನ್ನು ಕುರಿತು “ಎಲೈ ವಾನರ ವೀರನೆ, ಅಂಗದನೇ ಮೊದಲಾದವರು ಕೃತಕಾರ್ಯರಾಗಿಯೆ ಹಿಂದಿರುಗಿ ಬಂದಿರಬೇಕು. ಇಲ್ಲದಿದ್ದರೆ ಎಷ್ಟುಮಾತ್ರಕ್ಕೂ ಮಧುವನ ವಿನಾಶಕ್ಕೆ ಇಷ್ಟು ಧೈರ್ಯಮಾಡುತ್ತಿರಲಿಲ್ಲ. ಮಹಾಕಾರ್ಯವನ್ನು ಸಾಧಿಸಿ ಬಂದಿರುವ ಅವರನ್ನು ನಾನು ಕ್ಷಮಿಸಿದ್ದೇನೆ. ನಾನು ರಾಮಲಕ್ಷ್ಮಣರೂ ಅವರಿಂದ ಸೀತಾ ವೃತ್ತಾಂತವನ್‌ಉ ಕೇಳಲು ಅತ್ಯಂತ ಕುತೂಹಲಿಗಳಾಗಿದ್ದೇವೆ. ಈ ವಿಚಾರವನ್ನು ಅವರಿಗೆ ತಿಳಿಸಿ ಈಗಲೆ ಅವರನ್ನು ಇಲ್ಲಿಗೆ ಕಳುಹಿಸು” ಎಂದು ಹೇಳಿದನು.

ಆತನ ಮಾತುಗಳನ್ನು ಕೇಳಿ ದಧಿಮುಖನ ಕೋಪವೂ ಇಳಿದುಹೋಯಿತು. ಆತನು ಕೂಡಲೇ ತನ್ನ ಸ್ವಾಮಿಗೂ ರಾಮಲಕ್ಷ್ಮಣರಿಗೂ ನಮಸ್ಕರಿಸಿ ಮಧುವನಕ್ಕೆ ಹಿಂತಿರುಗಿದನು. ಆ ವೇಳೆಗೆ ಅಲ್ಲಿದ್ದ ವಾನರರಿಗೆಲ್ಲ ತಲೆಗೇರಿದ ಮತ್ತು ಬಹುಮಟ್ಟಿಗೆ ಇಳಿದುಹೋಗಿತ್ತು. ದಧಿಮುಖನು ಅಂಗದನ ಬಳಿಗೆ ಹೋಗಿ, “ಸೌಮ್ಯನಾದ ಅಂಗದನೆ, ನಿನ್ನನ್ನು ತಡೆದುದಕ್ಕಾಗಿ ನನ್ನನ್ನು ಕ್ಷಮಿಸು. ನಿನ್ನ ಚಿಕ್ಕಪ್ಪನಾದ ಸುಗ್ರೀವನು ನಿಮ್ಮೆಲ್ಲರ ಆಗಮನವನ್ನು ಕೇಳಿ ಅತ್ಯಂತ ಸಂತೋಷದಿಂದ ಈಗಲೇ ನಿಮ್ಮನ್ನು ಕರೆತರುವಂತೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.

ಸುಗ್ರೀವನ ಅಪೇಕ್ಷೆಯಂತೆ ಹನುಮಂತಾದಿ ವಾನರ ವೀರರೆಲ್ಲರೂ ಅಂಗದನನ್ನು ಮುಂದಿಟ್ಟುಕೊಂಡು ಆತನ ಬಳಿಗೆ ಹೋದರು. ಅವರ ಮಹೋತ್ಸವವನ್ನು ನೋಡಿದೊಡನೆಯೆ ಅವರು ಕೃತಕಾರ್ಯರಾಗಿರುವರೆಂದು ಭಾವಿಸಬಹುದಾಗಿತ್ತು. ಅವರೆಲ್ಲರೂ ಜಯಜಯ ಶಬ್ದಮಾಡುತ್ತಾ ಶ್ರೀರಾಮನಿಗೂ ಸುಗ್ರೀವನಿಗೂ ನಮಸ್ಕರಿಸಿದರು. ಅನಂತರ ಹನುಮಂತನು ಮುಂದೆ ಬಂದು ಮತ್ತೊಮ್ಮೆ ಶ್ರೀರಾಮ ಸುಗ್ರೀವರಿಗೆ ನಮಸ್ಕರಿಸಿ

“ಪ್ರಭು, ಸೀತಾದೇವಿ ಯಾವ ಅಪಾಯವೂ ಇಲ್ಲದೆ ಪತಿವ್ರತಾನಿಯಮದಿಂದ ಕ್ಷೇಮವಾಗಿದ್ದಾಳೆ!” ಎಂದು ಹೇಳಿದನು.

ಕೇಳಿದವರ ಕಿವಿಯಲ್ಲಿ ಸೊದೆಯನ್ನು ಹುಯ್ದಂತಾಯಿತು. ಶ್ರೀರಾಮನಂತೂ, ಪ್ರೀತಿಗೌರವಗಳಿಂದ ತುಂಬಿದ ಸ್ನಿಗ್ಧದೃಷ್ಟಿಯಿಂದ ಆತನನ್ನು ನೋಡುತ್ತಾ ಕುಳಿತಿರಲು ಹನುಮಂತನು ತಾನು ಸಾಧಿಸಿಕೊಂಡು ಬಂದಿದ್ದ ಮಹಾತ್ಕಾರ್ಯವನ್ನು ಆತನಿಗೆ ಸೂಕ್ಷ್ಮವಾಗಿ ತಿಳಿಸಿದನು. “ಪ್ರಭು, ರಾಮಚಂದ್ರ, ಸೀತಾಮಾತೆಯನ್ನು ರಾವಣಾಸುರನು ಕದ್ದೊಯ್ದು ತನ್ನ ಅಂತಃಪುರಕ್ಕೆ ಸೇರಿದ ಅಶೋಕವನದಲ್ಲಿಟ್ಟಿರುವನು. ಭಯಂಕರ ರಾಕ್ಷಸಿಯರು ಆಕೆಗೆ ಕಾವಲಾಗಿರುವರು. ಅವರು ನಿರಂತರವೂ ಆಕೆಯನ್ನು ಹೆದರಿಸುತ್ತಾ ರಾವಣನಲ್ಲಿ ಅನುರಾಗವನ್ನು ಹುಟ್ಟಿಸಲು ಪ್ರಯತ್ನಿಸುತ್ತಿರುವರು. ಆದರೆ ಪತಿವ್ರತಾ ಶಿರೋಮಣಿಯಾದ ಸೀತಾದೇವಿ ಅವರ ನಿರ್ಬಂಧಕ್ಕೆ ಒಳಗಾಗದೆ ನಿನ್ನಲ್ಲಿಯೇ ನಟ್ಟ ಮನಸ್ಸುಳ್ಳವಳಾಗಿದ್ದಾಳೆ. ಆ ಪಾಪಿ ರಾವಣನು ಒಂದು ಗಡುವಿನೊಳಗಾಗಿ ತನ್ನನ್ನು ವರಿಸದಿದ್ದರೆ ಕೊಲ್ಲುವೆನೆಂದು ಆಕೆಗೆ ಹೇಳಿರುತ್ತಾನೆ” ಎಂದನು.

ಆ ಮಾತುಗಳನ್ನು ಕೇಳಿ ಶ್ರೀರಾಮನ ಕಣ್ಣುಗಳಲ್ಲಿ ನೀರು ಉಕ್ಕಿತು. ಗದ್ಗದಸ್ವರದಿಂದ ಹನುಮಂತನನ್ನು ಪ್ರಶ್ನಿಸಿದನು.

“ಮಿತ್ರಶ್ರೇಷ್ಠ, ಸೀತೆ ಹೇಗಿದ್ದಾಳೆ? ಆಕೆ ನನಗೆ ಏನು ಹೇಳಿದಳು? ಆಕೆಯನ್ನು ನೀನು ಕಂಡುದು ಹೇಗೆ? ಎಲ್ಲವನ್ನೂ ವಿಸ್ತಾರವಾಗಿ ಹೇಳು. ”

ಹನುಮಂತನು ತಾನು ಲಂಕೆಗೆ ಹೋಗಿಬಂದ ವೃತ್ತಾಂತವನ್ನೆಲ್ಲಾ ವಿಸ್ತಾರವಾಗಿ ತಿಳುಹತೊಡಗಿದನು.

“ಪ್ರಭು, ನಾನು ಶತಯೋಜನ ವಿಸ್ತೀರ್ಣವಾದ ಸಮುದ್ರವನ್ನು ಹಾರಿ ದಕ್ಷಿಣ ಸಮುದ್ರ ತೀರದಲ್ಲಿರುವ ರಾವಣನ ಲಂಕೆಗೆ ಹೋದೆ. ಅಲ್ಲಿ ಸೀತಾದೇವಿಯನ್ನು ಅರಸುತ್ತಾ ಹೋಗಲು, ಆಕೆ ರಾವಣನ ಅಂತಃಪುರಕ್ಕೆ ಸೇರಿದ ಅಶೋಕವನದಲ್ಲಿ ಕಾಣಬಂದಳು. ಆಕೆ ಸದಾ ನಿನ್ನನ್ನೇ ಧ್ಯಾನಿಸುತ್ತಾ, ಆ ನಾಮಮಹಿಮೆಯಿಂದಲೇ ಬದುಕಿರುತ್ತಾಳೆ. ಆಕೆಯ ಸುತ್ತಲೂ ಅನೇಕ ರಾಕ್ಷಸಸ್ತ್ರೀಯರು ಮುತ್ತಿಕೊಂಡು ಆಕೆಯನ್ನು ಸದಾ ಪೀಡಿಸುತ್ತಿರುವುದರಿಂದ ಆಕೆ ಚಿರದುಃಖಿನಿಯಾಗಿದ್ದಾಳೆ. ಕೇಶ ಸಂಸ್ಕಾರವೆ ಇಲ್ಲದೆ ಆಕೆಯ ಕೂದಲುಗಳೆಲ್ಲವೂ ಜಡೆ ಕಟ್ಟಿಹೋಗಿವೆ. ಭೂಶಯ್ಯೆಯಿಂದ ಆಕೆಯ ದೇಹವೂ ವಸನವೂ ಮಲಿನವಾಗಿ ಹೋಗಿವೆ. ಆಕೆ ರಾಕ್ಷಸಿಯರ ಬಾಧೆಯನ್ನು ತಾಳಲಾರದೆ ಪ್ರಾಣವನ್ನು ನೀಗಲು ಸಿದ್ದಳಾಗಿದ್ದಾಗ ನಾನು ಆಕೆಯನ್ನು ಕಂಡೆ. ಆಕೆಯೆ ಸೀತೆಯೆಂದು ನೀನು ಹೇಳಿದ್ದ ಗುರುತುಗಳ ಮೇಲೆ ನಿಶ್ಚಯಿಸಿ, ಆಕೆಗೆ ನನ್ನಲ್ಲಿ ನಂಬುಗೆ ಹುಟ್ಟುವುದಕ್ಕಾಗಿ ಇಕ್ಷ್ವಾಕುವಂಶವನ್ನು ವರ್ಣಿಸಿದೆ. ಅದರಿಂದ ಆಕೆಗೆ ವಿಶ್ವಾಸ ಹುಟ್ಟಿ ನನ್ನೊಡನೆ ಮಾತನಾಡಿದಳು. ನಾನು ಆಕೆಯೊಡನೆ ನಿನಗೂ ಸುಗ್ರೀವನಿಗೂ ಉಂಟಾಗಿರುವ ಸಖ್ಯವನ್ನು ಹೇಳಿ ಇಲ್ಲಿನ ವಿದ್ಯಮಾನಗಳನ್ನೆಲ್ಲಾ ವಿವರವಾಗಿ ತಿಳಿಸಿದೆ. ಅನಂತರ ಅಲ್ಲಿಂದ ಹಿಂತಿರುಗಲು ಸಿದ್ಧನಾಗಿ,. ನಿನಗೆ ತೋರುವುದಕ್ಕಾಗಿ ಯಾವುದಾದರೊಂದು ಗುರುತನ್ನು ದಯಪಾಲಿಸುವಂತೆ ಬೇಡಿದೆ. ಆಕೆ ಚಿತ್ರಕೂಟಾಚಲದಲ್ಲಿ ನಿನ್ನೊಡನಿದ್ದಾಗ ನಡೆದ ಒಂದು ಕಾಗೆಯ ಕಥೆಯನ್ನು ನನಗೆ ಗುರುತಾಗಿ ತಿಳಿಸಿದಳು. ಅಲ್ಲದೆ ಒಂದು ದಿನ ಆಕೆಯ ಮುಖ ದಲ್ಲಿ ತಿಲಕ ಅಳಿಸಿಹೋಗಿದ್ದಾಗ ನೀನು ಮಣಿಶಿಲೆಯಿಂದ ತಿಲಕವನ್ನು ರಚಿಸಿದುದನ್ನು ಜ್ಞಾಪಿಸುವಂತೆ ಆಕೆ ನನಗೆ ತಿಳಿಸಿದ್ದಾಳೆ. ಅನಂತರ ಆಕೆ ತನ್ನಲ್ಲಿದ್ದ ಆ ಚೂಡಾಮಣಿಯನ್ನು ನನ್ನ ಕೈಗೆ ಕೊಟ್ಟು ‘ಎಲೈ ಮಾರುತಿ, ನಾನು ಮಹಾಪ್ರಯತ್ನಪಟ್ಟು ಇಟ್ಟುಕೊಂಡಿದ್ದ ಈ ಮಣಿಯನ್ನು ಶ್ರೀರಾಮನಿಗೆ ಕೊಡು. ಈ ಮಹಾ ವ್ಯಸನದಲ್ಲಿಯೂ ನಾನು ಇದನ್ನು ನೋಡಿ ಶ್ರೀರಾಮಚಂದ್ರನನ್ನು ಕಂಡಂತೆಯೆ ಸಂತೋಷಿಸುತ್ತಿದ್ದೆ. ‘ ಇಷ್ಟು ಹೇಳುವುದರೊಳಗಾಗಿ ಆಕೆಗೆ ತಡೆಯಲಾರದಷ್ಟು ದುಃಖವುಂಟಾಗಲು ಗಳಗಳ ಅಳುತ್ತಾ ಕಣ್ಣೀರುಗರೆದಳು. ಅನಂತರ ಸ್ವಲ್ಪ ಸಮಾಧಾನವನ್ನು ತಂದುಕೊಂಡು ‘ನಾನು ಒಂದು ತಿಂಗಳು ಮಾತ್ರ ಜೀವಿಸಿರುವೆನು. ಆ ಬಳಿಕ ಖಂಡಿತ ಬದುಕಿರಲಾರೆ’ ಎಂದು ಆಕೆ ನಿನಗೆ ತಿಳಿಸುವಂತೆ ಹೇಳಿದಳು. ”

ಇಷ್ಟು ಹೇಳಿ ಅಂಜನಾತನಯನು ತಾನು ತಂದಿದ್ದ ಚೂಡಾಮಣಿಯನ್ನು ಶ್ರೀರಾಮನಿಗೆ ಕೊಟ್ಟನು. ಶ್ರೀರಾಮನು ಸೀತಾದೇವಿಯ ಚೂಡಾಮಣಿಯನ್ನು ತೆಗೆದುಕೊಂಡು ತನ್ನ ವಕ್ಷಸ್ಥಳದಲ್ಲಿರಿಸಿಕೊಂಡು ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತನು. ಅನಂತರ ಸುಗ್ರೀವನಿಗೆ ಆ ರತ್ನವನ್ನು ಕೊಡುತ್ತಾ

“ಎಲೈ ಸುಗ್ರೀವ, ಕರುವನ್ನು ಕಂಡೊಡನೆಯೆ ಆಕಳಿಗೆ ಕ್ಷೀರ ಸ್ರವಿಸುವಂತೆ, ಇದನ್ನು ಕಂಡೊಡನೆಯೆ ನನ್ನ ಮನಸ್ಸು ಸ್ರವಿಸುತ್ತಿದೆ. ನನ್ನ ಮಾವನಾದ ಜನಕಮಹಾರಾಜನು ಮಹಾಯಜ್ಞವೊಂದನ್ನು ಮಾಡಿದಾಗ ಅದರಿಂದ ಪ್ರೀತನಾದ ಇಂದ್ರನು ಇದನ್ನು ಆತನಿಗೆ ಕೊಟ್ಟನು. ಆ ಅಮೂಲ್ಯವಾದ ರತ್ನವನ್ನು ಕಾಣುತ್ತಲೆ ನನ್ನ ತಂದೆಯಾದ ದಶರಥ ಮಹಾರಾಜನೂ ಮಾವನಾದ ಜನಕಮಹಾರಾಜನೂ ಏಕಕಾಲದಲ್ಲಿಯೆ ಜ್ಞಾಪಕಕ್ಕೆ ಬರುತ್ತಾರೆ. ಅಲ್ಲದೆ ಅದನ್ನು ಧರಿಸುತ್ತಿದ್ದ ಸೀತಾದೇವಿಯ ಚಿತ್ರವೂ ಕಣ್ಣೆದುರಿಗೆ ಕಟ್ಟಿದಂತಾಗುತ್ತದೆ” ಎಂದು ಹೇಳಿ ಲಕ್ಷ್ಮಣನ ಕಡೆ ನೋಡುತ್ತಾ “ತಮ್ಮಾ, ಸೀತೆಯನ್ನು ಕಾಣುತ್ತಿಲ್ಲ; ಆಕೆ ಧರಿಸಿದ್ದ ರತ್ನವನ್ನು ಮಾತ್ರ ನೋಡುತ್ತಿದ್ದೇನೆ ಇದೆಂತಹ ಸಂಕಟಕರವಾದ ವಿಷಯ! ಆ ಕುವಲನೇತ್ರೆಯನ್ನು ಕಾಣದೆ ನಾನು ಒಂದು ಕ್ಷಣವಾದರೂ ಜೀವಿಸಲಾರೆ” ಎಂದನು.

ಅನಂತರ ಹನುಮಂತನನ್ನು ಕುರಿತು ಇಂತೆಂದನು: “ಎಲೈ ಮಾರುತಿ, ನೀನು ಈಗಲೆ ನನ್ನನ್ನು ಸೀತೆಯ ಬಳಿಗೆ ಕರೆದುಕೊಂಡು ಹೋಗು. ಆ ನನ್ನ ಪ್ರಿಯೆಯ ವೃತ್ತಾಂತವನ್ನು ಕೇಳಿದ ಮೇಲೆ ನಾನೊಂದು ಕ್ಷಣವೂ ಇಲ್ಲಿರಲಾರೆ. ಎಷ್ಟು ಕಾಂತಿಗುಂದಿರುವಳೊ ಆ ಭೀರು!”