ಕೌಸಲ್ಯಾಕುಮಾರನಾದ ಶ್ರೀರಾಮನೂ ಭರತ ಲಕ್ಷ್ಮಣ ಶತ್ರುಘ್ನರೂ ತಾಯಿಯರ ಕಣ್ಮನಗಳಿಗೆ ಹಬ್ಬನ್ನುಂಟುಮಾಡುತ್ತಾ ಬಾಲ್ಯ ಕಳೆದು ಕೌಮಾರಕ್ಕೆ ಕಾಲಿಟ್ಟರು. ವಿದ್ಯೆ ಧನುರ್ವಿದ್ಯೆಗಳು ಅವರಿಗೆ ಕರತಲಾಮಲಕವಾದುವು. ಅದರಲ್ಲಿಯೂ ಹಿರಿಯನಾದ ಶ್ರೀರಾಮನಂತೂ ವಂಶಾಭಿವೃದ್ಧಿಯನ್ನು ಸೂಚಿಸುವ ಧ್ವಜದಂತೆ ಕಂಗೊಳಿಸುತ್ತಾ ಜನಮನಗಳಿಗೆ ಅತ್ಯಂತ ಪ್ರಿಯಕರನಾಗಿದ್ದನು. ಮಕ್ಕಳೆಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದರಾದರೂ ರಾಮ ಲಕ್ಷ್ಮಣರಿಗೆ ಬಲು ಹೊಂದಿಕೆ. ಪ್ರಾಣವೊಂದು ದೇಹವೆರಡು ಎಂಬಂತೆ ಅವರ ನಡವಳಿಕೆ. ರಾಮನು ಬೇಟೆಗೆ ಹೊರಟನೆಂದರೆ ಧನುರ್ಧಾರಿಯಾದ ಲಕ್ಷ್ಮಣ ಅವನ ಹಿಂದೆ ಸಿದ್ಧ. ಊಟ ನಿದ್ದೆಗಳಲ್ಲಿಯೂ ಅವರು ಜೊತೆಯಾಗಿಯೆ ಇರಬೇಕು. ಇದೇ ಬಗೆಯಾದ ಮೈತ್ರಿಯಿತ್ತು ಭರತ ಶತ್ರುಘ್ನರಿಗೂ. ತೇಜಃಪುಂಜರಾದ ನಾಲ್ಕು ಮಕ್ಕಳೂ ಯೌವನಕ್ಕೆ ಹೆಜ್ಜೆ ಇಡುತ್ತಿರುವುದನ್ನು ಕಂಡು ಅವರಿಗೆ ಬೇಗ ಮದುವೆ ಮಂಗಳವನ್ನು ನೆರವೇರಿಸಬೇಕೆಂದು ದಶರಥನು ಚಿಂತಿಸುತ್ತಿದ್ದನು.

ವಸಿಷ್ಠರೊಡನೆಯೂ ಬಂಧುಜನರೊಡನೆಯೂ ಕಲೆತು ಮಕ್ಕಳ ಮದುವೆಯ ವಿಚಾರವನ್ನು ಪ್ರಸ್ತಾಪ ಮಾಡುತ್ತಾ ದಶರಥ ಮಹಾರಾಜನು ಅರಮನೆಯಲ್ಲಿ ಕುಳುತಿದ್ದಾನೆ. ಇದ್ದಕ್ಕಿದ್ದಂತೆ ವಿಶ್ವಾಮಿತ್ರ ಮಹರ್ಷಿಗಳು ಆತನ ಬಳಿಗೆ ಬಂದರು. ರಾಜನು ಅವರನ್ನು ಸತ್ಕರಿಸಿದನು. ಪರಸ್ಪರ ಕುಶಲ ಪ್ರಶ್ನೆಗಳಾದ ಮೇಲೆ ಆತನು ಅವರನ್ನು ಕುರಿತು “ತಾವು ಯಮಾಡಿಸಿದುದು ಸಂತಾನವಿಲ್ಲದವರಿಗೆ ಸುಪುತ್ರ ಪ್ರಾಪ್ತಿಯಾದಷ್ಟು ಆನಂದವನ್ನುಂಟು ಮಾಡಿದೆ. ಇಂದು ನನ್ನ ಜನ್ಮ ಸಫಲವಾಯಿತು; ಬದುಕೆಲ್ಲವೂ ಸಾರ್ಥಕವಾಯಿತು. ತಮ್ಮ ಆಗಮನ ಕಾರಣಗಳನ್ನು ತಿಳುಹಿ ನನ್ನನ್ನು ಅನುಗ್ರಹಿಸಬೇಕು” ಎಂದು ಹೇಳಿದನು. ಆತನ ಮಾತಿಗೆ ಪ್ರತ್ಯುತ್ತರವಾಗಿ ವಿಶ್ವಾಮಿತ್ರನು “ಅಯ್ಯಾ ರಾಜಸಿಂಹನೆ, ನಿನ್ನ ಘನತೆಗೆ ತಕ್ಕಂತೆ ನೀನು ಮಾತನಾಡಿದೆ. ನಾನು ದೊಡ್ಡ ಸಿದ್ಧಿಯೊಂದನ್ನು ಪಡೆಯುವುದಕ್ಕಾಗಿ ಯಜ್ಞವನ್ನು ಆರಂಭಿಸಬೇಕಾಗಿದೆ. ಆ ಸತ್ಕಾರ್ಯಕ್ಕೆ ಮಾರೀಚ ಸುಬಾಹುಗಳೆಂಬ ಇಬ್ಬರು ಘೋರ ರಾಕ್ಷಸರು ವಿಘ್ನಕಾರಿಗಳಾಗಿದ್ದಾರೆ. ಯಜ್ಞವನ್ನು ಆರಂಭಿಸುತ್ತಲೆ ಆ ದುರುಳರಿಬ್ಬರೂ ಮಜ್ಜೆ ಮಾಂಸಗಳನ್ನು ತಂದು ಯಜ್ಞವೇದಿಕೆಯಲ್ಲಿ ವರ್ಷಿಸುತ್ತಾರೆ. ಅವರನ್ನು ಶಪಿಸಿ ನಾಶಮಾಡಬಹುದಾದರೂ ಯಜ್ಞದೀಕ್ಷೆಯನ್ನು ವಹಿಸಿದ ಬಳಿಕ, ಕೋಪಗೊಳ್ಳುವುದು ಉಚಿತವಲ್ಲವೆಂದು ಸುಮ್ಮನಿರಬೇಕಾಗಿದೆ. ಅವರನ್ನು ಸಂಹರಿಸಿಲು ನಿನ್ನ ಹಿರಿಯ ಮಗನಾದ ಶ್ರೀರಾಮನೊಬ್ಬನೆ ಸಮರ್ಥನು. ಆದುದರಿಂದ ಆತನನ್ನು ನನ್ನೊಡನೆ ಕಳುಹಿಸಿಕೊಡು. ಇದರಿಂದ ನಿನಗೆ ಇಹದಲ್ಲಿ ಯಶಸ್ಸೂ, ಪರದಲ್ಲಿ ಉತ್ತಮ ಪದವಿಯೂ ದೊರೆಯುತ್ತವೆ” ಎಂದನು.

"ಮಾರೀಚ ಸುಬಾಹುಗಳನ್ನು ಸಂಹರಿಸಲು ನಿನ್ನ ಹಿರಿಯ ಮಗನಾದ ಶ್ರೀರಾಮನೊಬ್ಬನೆ ಸಮರ್ಥನು. ಆದುದರಿಂದ ಆತನನ್ನು ನನ್ನೊಡನೆ ಕಳುಹಿಸಿಕೊಡು"

ವಿಶ್ವಾಮಿತ್ರನ ಮಾತನ್ನು ಕೇಳಿ ದಶರಥನು ಭಯದಿಂದ ನಡುಗಿ ಹೋದನು. “ಇನ್ನೂ ಹನ್ನೆರಡು ವರುಷದ ಹಾಲುಹಸುಳೆಯಾದ ಶ್ರೀರಾಮನನ್ನು ರಾಕ್ಷಸರೊಡನೆ ಯುದ್ಧಕ್ಕೆ ಕಳುಹಿಸುವುದೆಂದರೆ ಏನು? ನಾನೆ ಬಂದು ಆ ರಾಕ್ಷಸರೊಡನೆ ಕಾದಾಡುತ್ತೇನೆ. ಬಹುಕಾಲದ ಮೇಲೆ ಈ ಮುಪ್ಪಿನ ಕಾಲದಲ್ಲಿ ಪಡೆದ ಸುಕುಮಾರನನ್ನು ಅಗಲಿ ನಾನು ಒಂದು ಕ್ಷಣವೂ ನಿಲ್ಲಲಾರೆ” ಎಂದು ಆತನು ಪಡಿನುಡಿದನು. ಆತನ ಉತ್ತರವನ್ನು ಕೇಳಿ ವಿಶ್ವಾಮಿತ್ರನು ಆಜ್ಯಾಹುತಿಯಿಂದ ಪ್ರಜ್ವಲಿಸುವ ಅಗ್ನಿಜ್ವಾಲೆಯಂತೆ ವಿಜೃಂಭಿಸುತ್ತಾ “ಅಯ್ಯಾ ರಾಜನೆ, ಇಂತಹ ಮಾತು ರಘುಕುಲದ ರಾಜರಿಗೆ ತಕ್ಕುದಲ್ಲ. ನಾನು ಹೇಳಿದುದು ನಿನಗೆ ಸರಿದೋರದಿದ್ದ ಮೇಲೆ ನಾನು ಬಂದ ಹಾದಿಯನ್ನು ಹಿಡಿದು ಹಿಂದಿರುಗುತ್ತೇನೆ. ನೀನು ಮಿಥ್ಯಾ ಪ್ರತಿಜ್ಞನಾಗಿ ಬಾಂಧವಸಹಿತ ಸುಖವಾಗಿರು” ಎಂದು ಹೇಳಿ ಕುಳಿತಲ್ಲಿಂದ ಮೇಲಕ್ಕೆದ್ದನು. ಅದನ್ನು ಕಂಡು ಕುಲಪುರೋಹಿತನಾದ ವಸಿಷ್ಠನು ಆತನನ್ನು ಸಾಂತ್ವವಚನಗಳಿಂದ ಸಮಾಧಾನಮಾಡಿ ಕುಳ್ಳಿರಿಸಿ, ದಶರಥನಿಗೆ ಸಮಯೋಚಿತವಾದ ಬುದ್ಧಿವಾದ ಹೇಳಿದನು. “ಮಹಾರಾಜಾ, ನೀನು ಧರ್ಮವನ್ನು ಬಿಡಬೇಡ. ಶ್ರೀರಾಮನನ್ನು ವಿಶ್ವಾಮಿತ್ರ ಮಹರ್ಷಿಯ ಜೊತೆಯಲ್ಲಿ ಕಳುಹಿಸಿಕೊಡು. ಆತನ ಜೊತೆಯಲ್ಲಿರುವ ಶ್ರೀರಾಮನು ಅಗ್ನಿಚಕ್ರದ ಮಧ್ಯದಲ್ಲಿರುವ ಅಮೃತದಂತೆ ಸುಕ್ಷೇಮದಿಂದಿರುವನು. ಈ ಕೌಶಿಕನನ್ನು ನೀನು ಏನೆಂದು ತಿಳಿದಿರುವೆ? ಆತನು ಸಕಲಶಸ್ತ್ರಾಸ್ತ್ರಗಳ ಪ್ರಯೋಗದಲ್ಲಿಯೂ ಅತ್ಯಂತ ಕುಶಲನು. ಅಲ್ಲದೆ ಸಕಲ ಧರ್ಮಕ್ಕು ಸ್ಥಾನಭೂತನಾದವನು. ಈತನ ಜೊತೆಯಲ್ಲಿ ನಿನ್ನ ಮಗನನ್ನು ಕಳುಹಿಸುವುದರಿಂದ ಅವನಿಗೆ ಪರಮ ಶ್ರೇಯಸ್ಸು ಉಂಟಾಗುತ್ತದೆ. ”

ವಸಿಷ್ಠನ ಮಾತುಗಳಿಂದ ದಶರಥನಿಗೆ ಸಮಾಧಾನವಾದಂತಾಯಿತು. ಆಶೀರ್ವಾದಶತಗಳಿಂದ ಮಗನನ್ನು ಹರಸಿ, ವಿಶ್ವಾಮಿತ್ರನ ಜೊತೆಯಲ್ಲಿ ಆತನನ್ನು ಕಳುಹಿಸಿದನು. ಶ್ರೀರಾಮನನ್ನು ಎಡೆಬಿಡದೆ ಅನುಸರಿಸಿಕೊಂಡಿದ್ದ ಲಕ್ಷ್ಮಣನೂ ಅಣ್ಣನ ಜೊತೆಯಲ್ಲಿ ಪ್ರಯಾಣ ಮಾಡಿದನು. ಬ್ರಹ್ಮನನ್ನು ಅನುಸರಿಸುವ ಅಶ್ವಿನಿದೇವತೆಗಳಂತೆ ತನ್ನನ್ನು ಅನುಸರಿಸಿ ಬರುತ್ತಿದ್ದ ಆ ರಾಜಕುಮಾರರೊಡನೆ ವಿಶ್ವಾಮಿತ್ರನು ಒಂದೂವರೆಗಾವುದದಷ್ಟು ಪ್ರಯಾಣ ಮಾಡಿ ಸರಯೂ ನದಿಯ ತೀರವನ್ನು ಸೇರಿದನು. ಅಲ್ಲಿ ಶ್ರೀರಾಮನು ಗುರುವಿನ ಅಪ್ಪಣೆಯಂತೆ ಆಚಮನ ಮಾಡಿ ಬಲ ಮತ್ತು ಅತಿಬಲ ಎಂಬ ಎರಡು ಮಂತ್ರಗಳ ಉಪದೇಶವನ್ನು ಪಡೆದನು. ಆದರ ಮಹಿಮೆಯಿಂದ ಹಸಿವು ನೀರಡಿಕೆಗಳಾಗಲಿ, ನಿದ್ರೆ ಬಳಕಲಿಕೆಗಳಾಗಲಿ ಆತನನ್ನು ಬಾಧಿಸುವಂತಿರಲಿಲ್ಲ. ಈ ಮಂತ್ರದ ಮಹಿಮೆಯಿಂದ ಬೆಳಗುತ್ತಿದ್ದ ರಘುರಾಮನು ತಮ್ಮೊಡನೆ ಗುರುಶುಶ್ರೂಷೆ ಮಾಡುತ್ತಾ ಆ ರಾತ್ರಿಯನ್ನು ನದಿಯ ತೀರದಲ್ಲಿಯೆ ಕಳೆದನು.

ಮರುದಿನ ಗಂಗಾ ಸರಯೂ ನದಿಗಳ ಸಂಗಮದವರೆಗೆ ಪ್ರಯಾಣ ಮುಂದುವರೆಯಿತು. ಅ ಸಂಗಮ ಸಮೀಪದಲ್ಲಿಯೆ ಒಂದು ಋಷ್ಯಾಶ್ರಮವಿತ್ತು ಅದು ಹಿಂದೆ ಪರಮಶಿವನು ತಪಸ್ಸು ಮಾಡುತ್ತಾ ತನ್ನ ತಪಸ್ಸಿಗೆ ವಿಘ್ನವನ್ನು ತಂದೊಡ್ಡಿದ್ದ ಮನ್ಮಥನನ್ನು ಸುಟ್ಟುರುಹಿದ ಪವಿತ್ರವಾದ ಆಶ್ರಮ. ಅಲ್ಲಿ ವಾಸವಾಗಿದ್ದ ಋಷಿಗಳು ತಮ್ಮ ಆಶ್ರಮಕ್ಕೆ ಬಂದ ಶ್ರೀರಾಮ ಲಕ್ಷ್ಮಣರನ್ನೂ ವಿಶ್ವಾಮಿತ್ರನನ್ನೂ ಅತ್ಯಾದರದಿಂದ ಉಪಚರಿಸಿದರು. ಮೂವರೂ ಆ ದಿನ ಅಲ್ಲಿಯೆ ತಂದಿದ್ದು ವಿಶ್ರಾಂತಿಗೊಂಡರು. ಮರುದಿನ ಬೆಳಿಗ್ಗೆ ಅವರು ಗಂಗಾನದಿಯನ್ನು ದೋಣಿಯಲ್ಲಿ ದಾಟಿ ಮುಂದಕ್ಕೆ ಪ್ರಯಾಣ ಬೆಳೆಸಿದರು. ರಾಜಕುಮಾರರಿಗೆ ಆಯಾಸವಾಗದಂತೆ ವಿಶ್ವಾಮಿತ್ರ ಋಷಿ ಸುತ್ತಮುತ್ತಿನ ಸುಂದರ ದೃಶ್ಯಗಳನ್ನು ಅವರಿಗೆ ತೋರಿಸುತ್ತಾ ಅವುಗಳ ವಿಚಾರವಾಗಿ ಅನೇಕ ಕಥೆಗಳನ್ನು ಹೇಳಿ ಮನಸ್ಸನ್ನು ವಿನೋದಗೊಳಿಸುತ್ತಾ ಹೋಗುತ್ತಿದ್ದನು. ಬರುಬರುತ್ತಾ ಕಾಡು ದಟ್ಟವಾಗುತ್ತಾ ಬಂತು. ಸುತ್ತಮುತ್ತ ಎಲ್ಲಿಯೂ ಋಷಿಗಳ ಆಶ್ರಮವಾಗಲಿ ಮಾನವ ಸಂಚಾರದ ಕುರುಹುಗಳಾಗಲಿ ಕಂಡುಬರಲಿಲ್ಲ. ವಿಶ್ವಾಮಿತ್ರನು ಆ ದಟ್ಟಡವಿಯ ವಿಚಾರವನ್ನು ಕುರಿತು ಹೇಳುತ್ತಾ “ಇದು ಸಾವಿರ ಆನೆಗಳ ಬಲವುಳ್ಳ ತಾಟಕಿಯೆಂಬ ರಾಕ್ಷಸಿಗೆ ಸೇರಿದ ವನ. ಅವಳಿಗೆ ಮಾರೀಚನೆಂಬ ಮಗನಿದ್ದಾನೆ. ಆ ತಾಯಿ ಮಕ್ಕಳು ತಪಸ್ವಿಗಳಿಗೆ ಯಮಸ್ವರೂಪರಾಗಿದ್ದಾರೆ. ಅವರನ್ನು ಸಂಹರಿಸಲು ನೀನೇ ಶಕ್ತ. ಸ್ತ್ರೀವಧೆ ಮಾಡುವುದು ಹೇಗೆಂದು ಹಿಂದೆ ಮುಂದೆ ನೋಡಬೇಡ. ಧರ್ಮರಕ್ಷಣೆಗಾಗಿ ಆ ಕಾರ್ಯ ನಡೆಸುವುದು ಅತ್ಯಗತ್ಯ” ಎಂದು ತಿಳಿಸಿದನು.

ಋಷಿಯ ಮಾತಿನಂತೆ ಶ್ರೀರಾಮನು ಆ ರಾಕ್ಷಸಿಯನ್ನು ಕಂಡೊಡನೆಯೆ ಸಂಹಾರಮಾಡಬೇಕೆಂದು ನಿಶ್ಚಯಿಸಿದನು. ತನ್ನ ಮನಸ್ಸಿನ ನಿಶ್ಚಯವನ್ನು ಹೊರದೋರುವುದಕ್ಕಾಗಿ ಆತನು ಧನುಸ್ಸನ್ನು ಹೆದೆಯೇರಿಸಿ ಒಮ್ಮೆ ಬಿಲ್ಲಿನ ಹಗ್ಗವನ್ನು ಮಿಡಿದನು. ಆ ಠಂಕಾರದಿಂದ ಅಡವಿಯೆಲ್ಲವೂ ಪ್ರತಿಧ್ವನಿತವಾದಂತಾಯಿತು. ಮರುನಿಮಿಷದಲ್ಲಿಯೆ ನೋಡುವವರ ಎದೆಯೊಡೆಯುವಂತಹ ಭಯಂಕರವಾದ ರಾಕ್ಷಸಿ ಎರಡು ಭುಜಗಳನ್ನೂ ಮೇಲೆತ್ತಿಕೊಂಡು, ‘ಹೋ’ ಎಂದು ಕೂಗುತ್ತಾ ಅವರಿಗೆ ಇದಿರಾದಳು. ವಿಶ್ವಾಮಿತ್ರನು ಹುಂಕಾರದಿಂದ ಅವಳನ್ನು ಹಿಮ್ಮೆಟ್ಟಿಸಲು ಯತ್ನಿಸುತ್ತಿರಲು, ಅವಳು ರಾಜಕುಮಾರರ ಮೇಲೆ ಶಿಲಾವರ್ಷವನ್ನು ಕರೆಯಲು ಮೊದಲು ಮಾಡಿದಳು. ಆಗ ಶ್ರೀರಾಮನು ನಿಶಿತವಾದ ಬಾಣವೊಂದನ್ನು ಪ್ರಯೋಗಿಸಿ ಅವಳ ಕೈಗಳನ್ನು ಕತ್ತರಿಸಿ ಹಾಕಿದನು. ಲಕ್ಷ್ಮಣನೂ ಬಾಣಗಳನ್ನು ಬಿಟ್ಟು ಆ ರಕ್ಕಸಿಯ ಕಿವಿ ಮೂಗುಗಳನ್ನು ಕತ್ತರಿಸಿದನು. ಅಷ್ಟರಲ್ಲಿ ಆ ರಾಕ್ಷಸಿ ಮಾಯವಾಗಿ ಹೋದಳು. ಅವಳು ಕರೆಯುತ್ತಿದ್ದ ಕಲ್ಮಳೆ ಮಾತ್ರ ಅವಿರಳವಾಗಿ ಮುಂದುವರಿಯಿತು. ಇದನ್ನು ಕಂಡು ಶ್ರೀರಾಮನು ವಿಶ್ವಾಮಿತ್ರರ ಸೂಚನೆಯಂತೆ ಅವಳನ್ನು ಸಂಹರಿಸುವುದಕ್ಕಾಗಿ ದಿವ್ಯ ಬಾಣವೊಂದನ್ನು ತೊಟ್ಟನು. ಆತನು ಪ್ರಯೋಗಿಸಿದ ಬಾಣದಿಂದ ಆ ರಾಕ್ಷಸಿಯ ಮಾಯೆಯೆಲ್ಲವೂ ಹರಿದು ಹೋಯಿತು. ಅವಳು ಆರ್ಭಟಿಸುತ್ತಾ ರಾಮಲಕ್ಷ್ಮಣರ ಕಡೆ ಓಡಿಬರುತ್ತಿದ್ದಳು. ಶ್ರೀರಾಮನು ಮತ್ತೊಂದು ಬಾಣವನ್ನು ಅವಳ ಎದೆಗೆ ಗುರಿಯಿಟ್ಟು ಹೊಡೆದನು. ಆ ರಾಕ್ಷಸಿ ಧೊಪ್ಪನೆ ಕೆಳಗೆ ಬಿದ್ದು ಸತ್ತುಹೋದಳು. ಆ ವೇಳೆಗೆ ಹೊತ್ತು ಮುಳುಗಿ ಕತ್ತಲಾದುದರಿಂದ ಅವರೆಲ್ಲರೂ ತಾಟಕಾವನದಲ್ಲಿಯೆ ವಿಶ್ರಾಂತಿಗೊಂಡರು.

ರಾತ್ರಿ ಕಳೆದು ಬೆಳಗಾಗುತ್ತಲೆ ವಿಶ್ವಾಮಿತ್ರನು ಶ್ರೀರಾಮನನ್ನು ಕುರಿತು ಮುಗುಳ್ನಗೆಯೊಡನೆ, “ಮಹಾಶಯನಾದ ರಾಮಚಂದ್ರ, ತಾಟಕಾ ವಧೆಯಿಂದ ನಾನು ಪರಮ ಸಂತುಷ್ಟನಾಗಿದ್ದೇನೆ. ನಿನಗೆ ಶುಭವಾಗಲಿ, ನನಗೆ ಗೊತ್ತಿರುವ ಸಮಸ್ತ ಮಂತ್ರಾಸ್ತ್ರಗಳನ್ನೂ ಈಗಲೆ ನಿನಗೆ ಧಾರೆಯೆರೆದು ಕೊಡುತ್ತೇನೆ” ಎಂದು ಹೇಳಿ, ಸ್ನಾನದಿಂದ ಪರಿಶುದ್ಧನಾಗಿ ಪೂರ್ವಾಭಿಮುಖವಾಗಿ ನಿಂತು, ದೇವತೆಗಳಿಂದಲೂ ಹೊಂದಲಶಕ್ಯವಾದ ಆ ಮಂತ್ರಾಸ್ತ್ರಗಳನ್ನು ಆತನಿಗೆ ಉಪದೇಶಿಸಿದನು. ಆಗ ಆ ಮಂತ್ರಾಧಿದೇವತೆಗಳು ಪ್ರತ್ಯಕ್ಷವಾಗಿ ರಾಮನ ಬಳಿಗೈದಿ “ರಾಘವ, ನಾವೆಲ್ಲ ನಿನಗೆ ಕಿಂಕರರಾಗಿತ್ತೇವೆ. ನಮ್ಮನ್ನು ಪರಿಗ್ರಹಿಸು” ಎಂದು ಕೇಳಿಕೊಂಡುವು. ಆಗ ಶ್ರೀರಾಮನು ಅವುಗಳನ್ನು ಹಸ್ತದಿಂದ ಪರಿಗ್ರಹಿಸಿ “ನೀವೆಲ್ಲರೂ ನನ್ನ ಮನೋಗತರಾಗಿರಿ” ಎಂದು ಅಪ್ಪಣೆ ಮಾಡಿದನು. ಇಷ್ಟಾದ ಮೇಲೆ ಶ್ರೀರಾಮನು ತಮ್ಮನೊಡನೆ ಗುರುಗಳನ್ನು ಅನುಸರಿಸಿ ಪ್ರಯಾಣ ಮುಂದುವರಿಸಿದನು. ದಾರಿಯಲ್ಲಿ ವಿಶ್ವಾಮಿತ್ರನು ಆತನಿಗೆ ಅಸ್ತ್ರಗಳು ಉಪಸಂಹಾರವನ್ನೂ ಉಪದೇಶಿಸಿ, ಆ ಮಂತ್ರಗಳನ್ನೆಲ್ಲ ಲಕ್ಷ್ಮಣನಿಗೂ ತಿಳಿಸುವಂತೆ ಹೇಳಿದನು. ಶ್ರೀರಾಮನು ಅವರ ಅಪ್ಪಣೆಯನ್ನು ಸಂತೋಷದಿಂದ ನೆರವೇರಿಸಿದನು. ಅಷ್ಟು ಹೊತ್ತಿಗೆ ವಿಶ್ವಾಮಿತ್ರಾಶ್ರಮ ಸಮಿಪಗತವಾಯಿತು.

* * *