ಮರುದಿನ ಬೆಳಗ್ಗೆ ಪ್ರಾತಃಕೃತ್ಯಗಳನ್ನೆಲ್ಲ ಪೂರೈಸಿ ರಾಮಲಕ್ಷ್ಮಣರು ಅಗ್ನಿಪುರಷನಂತೆ ಬೆಳಗುತ್ತಿದ್ದ ವಿಶ್ವಾಮಿತ್ರನ ಬಳಿಗೆ ಹೋಗಿ “ಮುಂದೆ ನಮಗೇನು ಅಪ್ಪಣೆ?” ಎಂದು ಕೇಳಿದರು. ಅಂದು, ಸಿದ್ಧಾಶ್ರಮದ ಋಷಿಗಳೆಲ್ಲರೂ ಮಿಥಿಲಾಪಟ್ಟಣಕ್ಕೆ ಹೊರಟಿದ್ದರು. ಅಲ್ಲಿ ದೊರೆಯಾದ ಜನಕ ಮಹಾರಾಜನು ದೊಡ್ಡ ಯಾಗವೊಂದನ್ನು ಕೈಕೊಂಡಿದ್ದನು. ಋಷಿಗಳು ರಾಮಲಕ್ಷ್ಮಣರನ್ನು ತಮ್ಮೊಡನೆ ಬರುವಂತೆ ಬೇಡಿಕೊಂಡರು. “ಮಿಥಿಲಾಪಟ್ಟಣದಲ್ಲಿ ಒಂದು ಅದ್ಭುತವಾದ ಧನುಸ್ಸು ಇದೆ. ದೈವದತ್ತವಾದ ಅದು ವಂಶಪರಂಪರೆಯಾಗಿ ಜನಕ ರಾಜನಿಗೆ ಬಂದುದು. ಅದನ್ನು ಹೆದೆಯೇರಿಸುವುದು ದೇವ ದಾನವ ಮಾನವರಲ್ಲಿ ಯಾರಿಗೂ ಸಾಧ್ಯವಿಲ್ಲ. ನೀವು ಅದನ್ನು ಒಮ್ಮೆ ನೋಡಬಹುದು” ಎಂದು ಹೇಳಿ ಅವರು ಆ ರಾಜಕುಮಾರರ ಕುತೂಹಲವನ್ನು ಕೆರಳಿಸಿದರು. ಹೊರಡಲು ಸಿದ್ಧರಾದ ರಾಮಲಕ್ಷ್ಮಣರೊಡನೆ ವಿಶ್ವಾಮಿತ್ರ ಋಷಿ ಗುಂಪಿಗೆ ಮುಂದಾಳಾಗಿ ಹೊರಟನು.

ದಾರಿ ನಡೆಯುತ್ತಿರುವಾಗ ರಾಜಕುಮಾರರಿಗೆ ಬಳಲಿಕೆ ಕಾಣದಂತೆ ಮಾಡಲು ವಿಶ್ವಾಮಿತ್ರನು ಅನೇಕ ರಮ್ಯವಾದ ಕಥೆಗಳನ್ನು ಹೇಳುತ್ತಾ ಹೋದನು – ಕಾಂಪಿಲ್ಯನಗರಿಯ ಬ್ರಹ್ಮದತ್ತನು ಕುಶನಾಭನ ನೂರು ಮಂದಿ ಕುವರಿಯರನ್ನು ಮದುವೆಯಾದ ಕಥೆ; ಗಂಗೆ ಗೌರಿಯರ ವೃತ್ತಾಂತ; ಕುಮಾರಸ್ವಾಮಿಯ ಜನನ ಪ್ರಸಂಗ; ಸಗರ ಕುಮಾರರು ಕಪಿಲ ಋಷಿಶಾಪದಿಂದ ದಗ್ಧರಾಗಿ, ಭಗೀರಥನಿಂದ ಮುಕ್ತಿಯನ್ನು ಪಡೆದುದು; ದೇವದಾನವರ ಸಮುದ್ರಮಂಥನ – ಮೊದಲಾದ ಮನೋಹರವಾದ ಕಥೆಗಳನ್ನು ತಲ್ಲೀನರಾಗಿ ಕೇಳುತ್ತಾ ಎಲ್ಲರೂ ಹೋಗುತ್ತಿರಲು, ಸಮೀಪದಲ್ಲಿಯೆ ಒಂದು ಋಷ್ಯಾಶ್ರಮ ಕಾಣಿಸಿತು. ಶ್ರೀರಾಮನು ಕುತೂಹಲದಿಂದ ಅದರ ಕತೆಯನ್ನು ಕೇಳಿದನು. ವಿಶ್ವಾಮಿತ್ರ ಋಷಿ ಹೇಳಿದನು – “ಇದು ಮಹಾ ಮನಸ್ವಿಯಾದ ಗೌತಮ ಋಷಿಯ ಆಶ್ರಮ. ಆತನು ತನ್ನ ಮಡದಿಯಾದ ಅಹಲ್ಯೆಯೊಡನೆ ಇಲ್ಲಿ ಬಹುಕಾಲ ತಪಸ್ಸುಮಾಡುತ್ತಿದ್ದನು. ಆಮಹರ್ಷಿ ಇಲ್ಲದಿರುವ ಸಮಯವನ್ನು ಸಾಧಿಸಿ, ದೇವೇಂದ್ರನು ಋಷಿಯ ವೇಷದಿಂದ ಆಕೆಯ ಬಳಿಗೆ ಬಂದು “ಸುಂದರಿ, ನಿನ್ನೊಡನೆ ಸಮಾಗಮ ಸುಖವನ್ನು ಬಯಸುತ್ತೇನೆ” ಎಂದು ಹೇಳಿದನು. ಅಹಲ್ಯೆಗೆ ಆತನು ಇಂದ್ರನೆಂದು ತಿಳಿದರೂ ದೇವರಾಜನಾದ ಆತನಲ್ಲಿ ಕುತೂಹಲಿಯಾಗಿ ರತಿಕ್ರೀಡೆಯಲ್ಲಿ ನಿರತಳಾದಳು. ತನ್ನ ಮನೋರಥ ಸಿದ್ಧಿಯಾದ ಮೇಲ ಆಕೆ ದೇವೇಂದ್ರನನ್ನು ಕುರಿತು “ಎಲೈ ಸುರಶ್ರೇಷ್ಠನೆ, ನಾನು ಕೃತಾರ್ಥಳಾದೆ. ಇನ್ನು ಬೇಗ ತೆರಳು. ನಮ್ಮಿಬ್ಬರ ಮಾನವನ್ನು ಕಾಪಾಡುವ ಭಾರ ನಿನ್ನದು” ಎಂದು ಹೇಳಿದಳು. ಇಂದ್ರನೂ “ಎಲ್ಲೆ ಸುಶ್ರೋಣಿಯೆ, ನಾನು ಸಂತುಷ್ಟನಾದೆ. ಹೋಗಿ ಬರುತ್ತೇನೆ” ಎಂದು ಹೇಳಿ ಹೊರಡುವಷ್ಟರಲ್ಲಿ ಗೌತಮನು ಅಲ್ಲಿಗೆ ಬಂದನು. ದಿವ್ಯದೃಷ್ಟಿಯಿಂದ ಎಲ್ಲವನ್ನೂ ಅರಿತ ಆತನು ಆ ಪಾಪಿಗಳಿಬ್ಬರನ್ನೂ ಶಪಿಸಿ, ತಾನು ಕೈಲಾಸಪರ್ವತಕ್ಕೆ ಹೊರಟುಹೋದನು. ಆತನ ಶಾಪದಿಂದ ಅಹಲ್ಯೆ ಬೂದಿಯಲ್ಲಿ ಬಿದ್ದು ಹೊರಳುತ್ತಾ, ಯಾರ ಕಣ್ಣಿಗೂ ಬೀಳದೆ, ಈ ತಪೋವನದಲ್ಲಿ ಬಿದ್ದಿರುತ್ತಾಳೆ. ನಿನ್ನ ದರ್ಶನದಿಂದ ಆಕೆಯ ಶಾಪವಿಮೋಚನೆಯಾಗುವುದು. ಆದ್ದರಿಂದ ಈ ವನವನ್ನು ಪ್ರವೇಶಿಸು. ”

ಒಡನೆಯೆ ಅಹಲ್ಯೆ ಆತನ ಕಣ್ಣಿಗೆ ಕಾಣಿಸಿದಳು.

ಗುರುವಿನ ಅಪ್ಪಣೆಯಂತೆ ಶ್ರೀರಾಮನು ಎಲ್ಲರೊಡನೆ ಆ ಆಶ್ರಮವನ್ನು ಪ್ರವೇಶಿಸಿದನು. ಒಡೆನೆಯೆ ಅಹಲ್ಯೆ ಆತನ ಕಣ್ಣಿಗೆ ಕಾಣಿಸಿದಳು. ಬ್ರಹ್ಮನು ಪ್ರಯತ್ನಪೂರ್ವಕವಾಗಿ ಸೃಷ್ಟಿಸಿದ ಮಾಯೆಯಂತೆಯೂ, ಮೋಡ ಮುಚ್ಚಿದ ಚಂದ್ರಲೇಖೆಯಂತೆಯೂ, ಜಲಮಧ್ಯದಲ್ಲಿ ಜ್ವಲಿಸುವ ಸೂರ್ಯಬಿಂಬದಂತೆಯೂ ಬೆಳಗುತ್ತಿದ್ದ ಆಕೆಗೆ ರಾಮಲಕ್ಷ್ಮಣರು ಕಾಲುಮುಟ್ಟಿ ನಮಸ್ಕರಿಸಿದರು. ಆಕೆಯೂ ಅವರನ್ನು ಅರ್ಘ್ಯಪಾದ್ಯಾದಿಗಳಿಂದ ಸತ್ಕರಿಸಿದಳು. ಆ ವೇಳೆಗೆ ಗೌತಮ ಋಷಿ ಅಲ್ಲಿ ಪ್ರತ್ಯಕ್ಷನಾಗಿ. ತಪಸ್ಸಿನಿಂದ ಪರಿಶುದ್ಧಳಾದ ತನ್ನ ಪತ್ನಿಯನ್ನು ಪುನಃ ಸ್ವೀಕರಿಸಿ, ಶ್ರೀರಾಮನನ್ನು ಸತ್ಕಾರದಿಂದ ಸಂತೋಷಪಡಿಸಿದನು.

* * *