ಜನಕ ಮಹಾರಾಜನು ಹೇಳಿಕಳುಹಿಸಿದ್ದ ಒಸಗೆನುಡಿಗಳನ್ನು ಕೇಳಿ ದಶರಥಮಹಾರಾಜನಿಗೆ ಆದ ಆನಂದವನ್ನು ಅದಾರು ವಣಿಶಸಬಲ್ಲರು? ಆತನು ಮಂತ್ರ ಪುರೋಹಿತರ ಮುಂದೆ “ನಮ್ಮ ಕೌಸಲ್ಯಾನಂದನ ಶಿವಧನುಸ್ಸನ್ನು ಮುರಿದನಂತೆ! ಜನಕಮಹಾರಾಜನು ಆತನ ಪರಾಕ್ರಮಕ್ಕೆ ಮೆಚ್ಚಿ ತನ್ನ ಮಗಳನ್ನು ವಿವಾಹಮಾಡಿಕೊಡಲು ಬಯಸಿರುವನಂತೆ! ನಿಮಗೆಲ್ಲಾ ಇದು ಒಪ್ಪಿಗೆಯಷ್ಟೆ? ಈ ಸಂಬಂಧ ನಿಮಗೆ ಉಚಿಸುವಂತಿದ್ದರೆ ಒಡನೆಯೆ ವಿದೇಹಕ್ಕೆ ಹೊರಡೋಣ” ಎಂದು ಹೇಳಿದನು. ಮಂತ್ರಿ ಪುರೋಹಿತರು ಈ ಸಂಬಂಧವನ್ನು ಬಹುವಾಗಿ ಪ್ರಶಂಸಿಸಿ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಮದುವೆಯ ದಿಬ್ಬಣ ಅತ್ಯಂತ ಸಂಭ್ರಮದಿಂದ ಅಯೋಧ್ಯೆಯನ್ನು ಬಿಟ್ಟು ಮಿಥಿಲೆಯನ್ನು ಸೇರಿತು. ಆ ಸಂತೋಷ ಸಮಾಚಾರವನ್ನು ಕೇಳಿ ಜನಕಮಹಾರಾಜನು ಅಮೂಲ್ಯವಾದ ಕಾಣಿಕೆಗಳೊಡನೆ ರಾಮನ ತಂದೆಯನ್ನು ಇದಿರುಗೊಂಡು, “ದೇವತೆಗಳೊಡಗೂಡಿ ದೇವೇಂದ್ರನೇ ನನ್ನ ಮನೆಗೆ ಬಂದಂತಾಯಿತು” ಎಂಬ ಉಪಚಾರೋಕ್ತಿಗಳೊಡನೆ ಆತನನ್ನು ಸಂಭಾವಿಸಿದನು. ದಶರಥಮಹಾರಾಜನ ಸಂಬಂಧ ದೊರೆತುದು ತನ್ನ ಪೂರ್ವಪುಣ್ಯವೆಂದೂ ಈ ಸಂಬಂಧದಿಂದ ತನ್ನ ವಂಶ ಪಾವನವಾಯಿತೆಂದೂ ಹೇಳಿ ಆತನನ್ನು ಸಂತೋಷಪಡಿಸಿದನು. ದಶರಥನೂ ಉಚಿತವಾಗಿ ಪ್ರತ್ಯುತ್ತರ ಕೊಡುತ್ತಾ, “ನಿನಗೆ ತಿಳಿಯಗೆ ಧರ್ಮ ಯಾವುದಿದೆ? ನಿನ್ನ ಇಷ್ಟದಂತೆ ನಡೆದುಕೊಳ್ಳಲು ನಾನು ಸಿದ್ಧನಾಗಿದ್ದೇನೆ” ಎಂದು ಹೇಳಿದನು. ಪರಸ್ಪರ ಸೌಜನ್ಯದಿಂದ ಇಬ್ಬರೂ ಸಂತೋಷಗೊಂಡರು. ಅಷ್ಟರಲ್ಲಿ ರಾಮ ಲಕ್ಷ್ಮಣರು ಅಲ್ಲಿಗೆ ಬಂದರು. ದಶರಥನು ವರ್ಧಿಷ್ಣುಗಳಾದ ಮಕ್ಕಳನ್ನು ಕಣ್ಣಾರೆ ಕಂಡು ಮನವಾರೆ ನಲಿದನು.

ಶ್ರೀರಾಮನ ಮದುವೆಯ ಜೊತೆಯಲ್ಲಿಯೆ ಲಕ್ಷ್ಮಣ, ಭರತ, ಶತ್ರುಘ್ನರ ಮದುವೆಗಳೂ ನಡೆಯಲೆಂದು ವಸಿಷ್ಠರೂ ವಿಶ್ವಾಮಿತ್ರರೂ ಸೂಚಿಸಿದರು. ಆ ಮಾತನ್ನು ದಶರಥ ಜನಕರಿಬ್ಬರೂ ಸಂತೋಷದಿಂದ ಒಪ್ಪಿದರು. ಜನಕರಾಜನ ಔರಸಪುತ್ರಿಯಾದ ಊರ್ಮಿಳೆಯನ್ನು ಲಕ್ಷ್ಮಣನಿಗೂ ಜನಕಮಾಹರಾಜನ ಸೋದರನಾದ ಕುಶಧ್ವಜನ ಪುತ್ರಿಯಾದ ಮಾಂಡವಿ ಶ್ರುತಕೀರ್ತಿಯರನ್ನು ಭರತ ಶತ್ರುಘ್ನರಿಗೂ ವಿವಾಹ ಮಾಡಿಕೊಡುವುದೆಂದು ನಿಶ್ಚಯವಾಗಯಿತು. ಬೀಗರಿಬ್ಬರೂ ತಮ್ಮ ವಂಶ ಪ್ರವರಗಳನ್ನು ಹೇಳಿ ಗುರುಗಿರಿಯರ ಇದಿರಿನಲ್ಲಿ ಕೊಳುಕೊಡೆಯನ್ನು ನಿಶ್ಚಿಯಿಸಿದರು. ಮರುದಿನ ಮದುವೆ ಎಂದಿರುವಾಗ ದಶರಥನು ದೇವತಾಪೂಜೆ ನಾಂದೀಕಾರ್ಯಗಳನ್ನು ನಡೆಸಿ ಯಥೇಚ್ಛವಾಗಿ ದಾನಧರ್ಮ ಮಾಡಿದನು. ಆ ದಿನವೇ ಕೈಕೆಯ ಅಣ್ಣನಾದ ಯುಧಾಜಿತ್ತು ಅಲ್ಲಿಗೆ ಬಂದನು. ಆತನ ತಂದೆಯಾದ ಕೇಕಯ ರಾಜನು ತನ್ನ ಮೊಮ್ಮಗನಾದ ಭರತನನ್ನು ನೋಡಬೇಕೆಂದು ಅಪೇಕ್ಷಿಸಿದುರಿಂದ ಆತನನ್ನು ಕರೆದುಕೊಂಡು ಹೋಗಬೇಕೆಂದು ಆತನು ಅಯೋಧ್ಯೆಗೆ ಹೋಗಿ ಅಲ್ಲಿಂದ ಎಲ್ಲರೂ ಮಿಥಿಲಾ ನಗರಿಗೆ ಹೋಗಿರುವ ಸುದ್ದಿಯನ್ನು ಕೇಳಿ ಬಂದಿದ್ದನು. ಈ ಪ್ರಿಯಬಂಧುವಿನ ಆಗಮನದಿಂದ ದಶರಥರಾಜನ ಸಂತೋಷ ಇಮ್ಮಡಿಸಿತು.

ಮರುದಿನ ವಿವಾಹ ಅತ್ಯಂತ ವೈಭವದಿಂದ ನಡೆಯಿತು. ಬಂಧುಬಾಂಧವರೂ ಇಷ್ಟ ಮಿತ್ರರೂ ಋಷಿಗಳೂ ಬ್ರಾಹ್ಮಣಾದಿ ಪ್ರಜಾವರ್ಗದವರೂ ಅಸಂಖ್ಯಾತರಾಗಿ ನೆರೆದಿದ್ದಾರೆ. ವಿವಾಹ ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ಮಾಡಿದ ವೇದಿಕೆಯ ಮೇಲಿನ ಅಗ್ನಿಯಲ್ಲಿ ವಸಿಷ್ಠ ಋಷಿಗಳು ಹೋಮಕಾರ್ಯವನ್ನು ನೆರವೇರಿಸಿದರು. ಅನಂತರ ಜನಕಮಹಾರಾಜನು ಸರ್ವಾಲಂಕಾರಭೂಷಿತೆಯಾದ ತ್ರಿಭುವನ ದೇವತೆಯಂತೆ ಕಂಗೊಳಿಸುತ್ತಿದ್ದ ಸೀತಾದೇವಿಯನ್ನು ಕೈಹಿಡಿದು ಕರೆದುತಂದು, ಶ್ರೀರಾಮನಿಗೆ ಇದಿರಾಗಿ ವೇದಿಕೆಯ ಮುಂದೆ ನಿಲ್ಲಿ, “ಕುಮಾರ, ಇಗೋ ಈ ಕನ್ಯಾಮಣಿ ಸೀತೆ ನನ್ನ ಮಗಳು; ಇಂದಿನಿಂದ ಇವಳು ನಿನ್ನ ಧರ್ಮಪತ್ನಿ; ಮಹಾಪತಿವ್ರತೆಯಾಗಿ ನಿನ್ನನೆಳಲಿನಂತೆ ನಿನ್ನನ್ನು ಅನುವರ್ತಿಸುವಳು; ಇವಳನ್ನು ಕೈಹಿಡಿ” ಎಂದು ಹೇಳಿದನು. ಧಾರಾಪೂರ್ವಕವಾಗಿ ಆಕೆಯನ್ನು ಶ್ರೀರಾಮನಿಗೆ ಒಪ್ಪಿಸುತ್ತಿರಲು ನೆರೆದಿದ್ದವರೆಲ್ಲರೂ ಸಂತೋಷದಿಂದ ಆನಂದಬಾಷ್ಪಗಳನ್ನು ಸುರಿಸುತ್ತಾ ನೂತನ ದಂಪತಿಗಳನ್ನು ಮನಸ್ಸು ತುಂಬಿ ಬಾಯ್ತುಂಬ ಹರಸಿದರು. ಆಕಾಶದಲ್ಲಿ ದೇವದುಂದುಭಿ ಮೊಳಗಿದುವು; ಪುಷ್ಪವೃಷ್ಟಿಯಾಯಿತು. ಅನಂತರ ಜನಕಮಹಾರಾಜನು ಊರ್ಮಿಳೆಯನ್ನು ಲಕ್ಷ್ಮಣನಿಗೂ, ತನ್ನ ತಮ್ಮನ ಪುತ್ರಿಯರನ್ನು ಭರತ ಶತ್ರುಘ್ನರಿಗೂ ಧಾರೆಯೆರೆದುಕೊಟ್ಟನು. ರಾಜಪುತ್ರರು ನಾಲ್ವರೂ ತಮ್ಮ ತಮ್ಮ ಮಡದಿಯರ ಕೈಹಿಡಿದುಕೊಂಡು ಯಜ್ಞೇಶ್ವರನಿಗೆ ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ, ಹಿರಿಯರ ಆಶೀರ್ವಾದಗಳೊಡನೆ ತಮ್ಮ ಬಿಡಾರಕ್ಕೆ ತೆರಳಿದರು.

* * *