ಹನುಮಂತನು ತಾನು ಲಂಕೆಗೆ ಹೋಗಿಬಂದ ಸಮಾಚಾರವನ್ನು ವಿಸ್ತಾರವಾಗಿ ತಿಳಿಸಿ, ಮುಂದೇನು ಮಾಡಬೇಕು ಎಂಬುದನ್ನು ಸಮಾಲೋಚಿಸುವಂತೆ ಕಪಿವೀರರಲ್ಲಿ ಬಿನ್ನಯಿಸಿಕೊಂಡನು. ಇತರರು ಅಭಿಪ್ರಾಯಕೊಡುವುದಕ್ಕೆ ಮುನ್ನ ತನ್ನ ಅಭಿಪ್ರಾಯವನ್ನು ಆತ ತಿಳಿಸಿದನು. “ಮಿತ್ರರೆ, ಆ ರಾಕ್ಷಸರೇಶ್ವರನಾದ ರಾವಣ ಸಾಮಾನ್ಯನಲ್ಲ. ಅವನ ತಪೋಬಲವೊಂದೇ ಸಾಕು, ಮೂರು ಲೋಕಗಳನ್ನೂ ನಡುಗಿಸುವುದಕ್ಕೆ. ಮಹಾ ಪತಿವ್ರತೆಯಾದ ಸೀತಾದೇವಿಯನ್ನು ಕೈಯಿಂದ ಮುಟ್ಟಿದರೂ ಭಸ್ಮವಾಗದೆ ಇರಬೇಕಾದರೆ ಅವನ ತಪೋಮಹಿಮೆಯನ್ನು ಎಷ್ಟೆಂದು ಹೇಳೋಣ? ಸೀತಾಮಾತೆಯಾದರೊ ತನ್ನ ಪತಿಯ ಕೈಯಿಂದಲೇ ರಾವಣನನ್ನು ಕೊಲ್ಲಿಸಬೇಕೆಂಬ ವೀರಧರ್ಮವನ್ನು ಕೈಕೊಂಡಿರುವಂತೆ ತೋರುತ್ತದೆ. ಅಲ್ಲಿನ ಪರಿಸ್ಥಿತಿ ಹೀಗಿದೆ. ಆದರೆ ನನ್ನನ್ನು ಕೇಳಿದರೆ, ನಾವೆಲ್ಲರೂ ಒಟ್ಟಾಗಿ ಮತ್ತೊಮ್ಮೆ ಲಂಕೆಗೆ ಹೋಗಿ, ಸೀತಾದೇವಿಯನ್ನು ಕರೆದುಕೊಂಡೆ ಶ್ರೀರಾಮಚಂದ್ರನು ಬಳಿಗೆ ಹೋಗುವುದು ಯುಕ್ತವೆಂದೂ ತೋರುತ್ತದೆ. ನಾನೊಬ್ಬನೆ ಆ ಸಮಸ್ತರಾಕ್ಷಸರನ್ನೂ – ಆ ರಾವಣನನ್ನು ಸಹ – ಸಂಹರಿಸಬಲ್ಲೆ. ನೀವು ಜೊತೆಯಲ್ಲಿದ್ದರಂತೂ ಅದು ಲೀಲಾಜಾಲವಾಗಿ ನಡೆದು ಹೋಗುತ್ತದೆ. ಮತ್ತೊಮ್ಮೆ ಆ ಇಂದ್ರಜಿತು ಬ್ರಹ್ಮಾಸ್ತ್ರ, ಐಂದಾಸ್ತ್ರ, ರೌದ್ರಾಸ್ತ್ರ – ಇನ್ನೂ ಯಾವ ಯಾವ ಘೋರಾಸ್ತ್ರಗಳು ಅವನ ಬಳಿಯಲ್ಲಿವೆಯೊ ಅವೆಲ್ಲವನ್ನೂ ತಂದು ನನ್ನ ಮೇಲೆ ಪ್ರಯೋಗಿಸಲಿ. ನಾನು ಅವುಗಳೆಲ್ಲವನ್ನೂ ವ್ಯರ್ಥಮಾಡಬಲ್ಲೆ. ನನ್ನ ವಿಚಾರ ಹಾಗಿರಲಿ. ಈ ಜಾಂಬವಂತನನ್ನು ಇದಿರಿಸಿ ಬದುಕಬಲ್ಲವನಾರು? ವೀರಸೇನಾನಿಯಾದ ನಮ್ಮ ಅಂಗದ ರಾಜಕುಮಾರನೊಬ್ಬನೆ ಆ ರಾಕ್ಷಸರನ್ನೆಲ್ಲಾ ಆಪೋಶನ ತೆಗೆದುಕೊಳ್ಳಬಲ್ಲ. ಈ ಮೈಂದ ದ್ವಿವಿದರು ಅಶ್ವಿನೀ ದೇವತೆಗಳ ಅಂಶವುಳ್ಳವರು; ಬ್ರಹ್ಮನ ವರದಿಂದ ಅಜೇಯರಾಗಿ ಇರುವವರು. ನಾವೆಲ್ಲರೂ ಒಟ್ಟಾಗಿ ಆ ಲಂಕೆಯಮೇಲೆ ಏಕೆ ಏರಿಹೋಗಬಾರದು? ನಾನು ಹೇಗಿದ್ದರೂ ಆ ಲಂಕೆಯನ್ನು ಸುಟ್ಟು ಬೀದಿ ಬೀದಿಯಲ್ಲೂ ನಮ್ಮ ಖ್ಯಾತಿಯನ್ನು ಹರಡಿ ಬಂದಿದ್ದೇನೆ. ನನಗೆ ಅಶೋಕವನದಲ್ಲಿ ದುಃಖದಿಂದ ಕೊರಗುತ್ತಾ ಕುಳಿತಿರುವ ಸೀತಾಮಾತೆಯನ್ನು ನೆನೆದೊಡನೆಯೆ ಹಿಂದಕ್ಕೆ ಹೋಗಲು ಕಾಲುಗಳೇಳುವುದಿಲ್ಲ. ಎಡೆಬಿಡದೆ ರಾಮಧ್ಯಾನ ಮಾಡುತ್ತಾ ಏಕವಸ್ತ್ರಧಾರಿಣಿಯಾಗಿ ಮಂಜುಮುಸುಕಿದ ತಾವರೆಯ ಬಳ್ಳಿಯಂತೆ ಕಳೆಗೆಟ್ಟಿರುವಳು. ಆ ರಾವಣನ ಪ್ರಬಲ ಪ್ರಲೋಭನಗಳನ್ನು ತಳ್ಳಿಹಾಕಿ ಭೂಶಯ್ಯೆಯ ಸಂಕಟವನ್ನನುಭವಿಸುತ್ತಾ ಆತ್ಮಹತ್ಯೆಗೆ ಕೂಡ ಸಿದ್ಧಳಾಗಿದ್ದಾಳಲ್ಲಾ! ಆಕೆಯ ಸದಾಚಾರವೂ ಪತಿಭಕ್ತಿಯೂ ಲೋಕೋತ್ತರವಾದುವು. ರಾವಣನ ವಧೆಗೆ ಶ್ರೀರಾಮನು ನಿಮಿತ್ತ ಮಾತ್ರಕ್ಕೆ ಬೇಕು, ಅಷ್ಟೆ; ಸೀತೆಯೆ ಆ ಪಾಪಿಯ ಮೃತ್ಯುವಿಗೆ ಪ್ರಧಾನ ಕಾರಣಳು. ಮಿತ್ರರೆ, ದಿನದಿನಕ್ಕೂ ಆಕೆ ಕರಗಿಹೋಗುತ್ತಿದ್ದಾಳೆ. ಇದಕ್ಕೆ ಹೇಗೆ ಪ್ರತೀಕಾರ ಮಾಡಬೇಕೊ ಅದನ್ನು ನೀವು ಸೂಚಿಸಿ. ನನ್ನ ಅಭಿಪ್ರಾಯವನ್ನು ನಾನು ತಿಳಿಸಿದ್ದೇನೆ” ಎಂದನು.

ವಾಲಿಪುತ್ರನಾದ ಅಂಗದನು ಹನುಮಂತನ ಅಭಿಪ್ರಾಯವನ್ನು ಸಂಪೂರ್ಣವಾಗಿ ಅನುಮೋದಿಸಿದನು. “ಮಿತ್ರರೆ, ಸೀತೆಯನ್ನು ಕರೆದುಕೊಂಡೆ ನಾವು ಹಿಂದಿರುಗಬೇಕು. ಶ್ರೀರಾಮನ ಮುಂದೆ ನಿಂತು ‘ನಾವು ಸೀತೆಯನ್ನು ನೋಡಿಬಂದೆವೆ ಹೊರತು ಕರೆತರಲಿಲ್ಲ’ ಎಂದು ಹೇಳುವುದು ನಮ್ಮ ಮರ್ಯಾದೆಗೆ ಉಚಿತವಲ್ಲದ ಮಾತು. ನಾವು ತ್ರಿಭುವನ ಪರಾಕ್ರಮಿಗಳೆಂದು ಪ್ರಖ್ಯಾತರಾದವರು. ಅಲ್ಲದೆ, ನಮ್ಮ ಮಿತ್ರನಾದ ಹನುಮಂತನು ಈಗಾಗಲೆ ಅನೇಕ ರಾಕ್ಷಸರನ್ನು ಸಂಹರಿಸಿ ಬಂದಿರುವನು. ಇನ್ನು ನಾವು ಮಾಡಬೇಕಾದ ಮಹತ್ಕಾರ್ಯ ತಾನೆ ಏನು? ಸೀತಾದೇವಿಯನ್ನು ಕರೆತಂದು ಶ್ರೀರಾಮಚಂದ್ರಮೂರ್ತಿಗೆ ಒಪ್ಪಿಸೋಣ” ಎಂದನು. ಎಲ್ಲ ವಾನರರಿಗೂ ಆ ಮಾತೇ ಸರಿಯೆಂದು ತೋರಿತು. ಆದರೆ ವಾನರರಲ್ಲೆಲ್ಲಾ ಹಿರಿಯವನಾದ ಜಾಂಬವಂತನು ಅಂಗದನನ್ನು ಕುರಿತು “ಕುಮಾರ, ನಿನ್ನ ಆಲೋಚನೆ ಯುಕ್ತವೇ ಸರಿ. ನಾವು ಸಮರ್ಥರೆಂಬ ವಿಚಾರದಲ್ಲಿಯೂ ಸಂದೇಹವಿಲ್ಲ. ಆದರೆ ನಾವು ಶ್ರೀರಾಮನ ಆಜ್ಞೆಯನ್ನು ಅನುಸರಿಸಿಯಲ್ಲವೆ ಕಾರ್ಯವನ್ನು ಮಾಡಬೇಕಾದುದು? ಆದ್ದರಿಂದ ಮೊದಲು ಆತನ ಮನಸ್ಸಿನಲ್ಲಿ ಏನಿದೆಯೊ ಅದನ್ನು ತಿಳಿದುಕೊಳ್ಳೋಣ. ಆತನ ಅಭಿಪ್ರಾಯಕ್ಕೆ ತಕ್ಕಂತೆ ಮುಂದಿನ ಕಾರ್ಯವನ್ನು ಮಾಡೋಣ” ಎಂದನು. ಆ ಮಾತು ಎಲ್ಲರಿಗೂ ಒಪ್ಪಿಗೆಯಾಯಿತು. ಎಲ್ಲರೂ ಹನುಮಂತನನ್ನು ಮುಂದಿಟ್ಟುಕೊಂಡು ಕಿಷ್ಕಿಂಧೆಗೆ ಹಿಂದಿರುಗಿ ಹೊರಟರು.