ಗೌತಮ ಋಷಿಯ ಆಶ್ರಮದಲ್ಲಿ ಸ್ವಲ್ಪಕಾಲ ವಿಶ್ರಾಂತಿ ಪಡೆದು, ಎಲ್ಲರೂ ಈಶಾನ್ಯಾಭಿಮುಖವಾಗಿ ಪ್ರಯಾಣ ಬೆಳಸಿ, ಜನಕ ಮಹಾರಾಜನ ಯಜ್ಞಶಾಲೆಯನ್ನು ಸೇರಿದರು. ಅಲ್ಲಿ ವಿಶ್ವಾಮಿತ್ರ ಋಷಿ ಜನಕ ಮಹಾರಾಜನಿಗೆ ರಾಮಲಕ್ಷ್ಮಣರ ಪರಿಚಯ ಮಾಡಿಕೊಟ್ಟು, ಅವರಿಂದ ಮಾರೀಚ ಸುಬಾಹುಗಳು ಭಂಗಪಟ್ಟುದ್ದನ್ನೂ ಅಹಲ್ಯೆಯ ಶಾಪವಿಮೋಚನೆಯಾದುದನ್ನೂ ವಿಸ್ತಾರವಾಗಿ ವಿವರಿಸಿ ಹೇಳಿದನು. ತಾಯಿಯ ಶಾಪವಿಮೋಚನೆಯಾದುದನ್ನು ಕೇಳಿ ಅಲ್ಲಿ ಋಷಿಗಳೊಡನಿದ್ದ ಗೌತಮನ ಹಿರಿಯಮಗನಾದ ಶತಾನಂದನಿಗೆ ಅತ್ಯಂತ ಸಂತೋಷವಾಯಿತು. ಕ್ಷತ್ರಿಯನಾಗಿದ್ದ ವಿಶ್ವಾಮಿತ್ರನು ಬ್ರಹ್ಮ ಋಷಿಯಾದ ಕಥೆಯನ್ನು ಆತನು ವಿಸ್ತಾರವಾಗಿ ರಾಮಲಕ್ಷ್ಮಣರಿಗೆ ಅರುಹಿದನು.

“ಗಾಧಿಪುತ್ರನಾದ ವಿಶ್ವಾಮಿತ್ರ ರಾಜ್ಯಭಾರ ಮಾಡುತ್ತಾ ಇರುವಾಗ ಒಂದು ದಿನ ಸಪರಿವಾರನಾಗಿ ವಸಿಷ್ಠರ ಆಶ್ರಮಕ್ಕೆ ಹೋದ. ಅವರು ಕಾಮಧೇನುವಿನ ಸಹಾಯದಿಂದ ಆತನನ್ನೂ ಆತನ ಪರಿವಾರನ್ನೂ ಪರಿಪರಿಯಾಗಿ ಸತ್ಕರಿಸಿ ಸಂತುಷ್ಟಿಗೊಳಿಸಿದರು.

ಅಸಂಖ್ಯಾತ ಜನರಿಗೆ ಷಡ್ರಸೋಪೇತವಾದ ಆಹಾರವನ್ನು ಒದಗಿಸಿದ ಆ ಧೇನುವಿನಲ್ಲಿ ರಾಜನಿಗೆ ಮನಸ್ಸಾಯಿತು. ಅದನ್ನು ತನಗೆ ಕೊಟ್ಟುಬಿಡುವಂತೆ ವಸಿಷ್ಟರನ್ನು ಪ್ರಾರ್ಥಿಸಿದ. ಆದರೆ ನಿತ್ಯಾನುಷ್ಠಾನಗಳಿಗೆ ಮುಖ್ಯ ಅಧಿಕಾರಿಗಳಾಗಿದ್ದು ಆ ಧೇನುವನ್ನು ಬಿಟ್ಟು ಕಳುಹಲು ಅವರುಒಪ್ಪಲಿಲ್ಲ. ಆದ್ದರಿಂದ ವಿಶ್ವಾಮಿತ್ರ ಅದನ್ನು ಬಲಾತ್ಕಾರವಾಗಿ ಸೆಳೆದ. ಆಗ ಧೇನು ವಸಿಷ್ಠರ ಅಪ್ಪಣೆ ಪಡೆದು ಅಸಂಖ್ಯಾತವಾದ ಸೈನ್ಯವನ್ನು ಸೃಷ್ಟಿಸಿ ವಿಶ್ವಾಮಿತ್ರನ ಸೇನೆಯೆಲ್ಲವನ್ನೂ ಧ್ವಂಸಮಾಡಿತು. ವಿಶ್ವಾಮಿತ್ರನ ನೂರ್ವರು ಮಕ್ಕಳೂ ವಸಿಷ್ಠರ ಹೂಂಕಾರ ಮಾತ್ರದಿಂದಲೆ ಭಸ್ಮವಾಗಿ ಹೋದರು. ಹೀಗೆ ಭಂಗಿತನಾದ ಆ ರಾಜನು ಉಳಿದೊಬ್ಬ ಮಗನಿಗೆ ರಾಜ್ಯವನ್ನು ವಹಿಸಿ, ತಾನು ಹಿಮವತ್ಪರ್ವತದಮೇಲೆ ಪರಶಿವನನ್ನು ಕುರಿತು ತಪಸ್ಸು ಮಾಡುತ್ತಾ ಕುಳಿತನು. ಆತನ ತಪಸ್ಸಿಗೆ ಮೆಚ್ಚಿ ಪರಮೇಶ್ವರನು ಸಕಲ ದಿವ್ಯಾಸ್ತ್ರಗಳನ್ನೂ ಆತನಿಗೆ ಕರುಣಿಸಿದನು. ಆಗ ವಿಶ್ವಾಮಿತ್ರನು ಮತ್ತೊಮ್ಮೆ ವಸಿಷ್ಠಾಶ್ರಮವನ್ನು ಸೇರಿ, ಆ ಆಶ್ರಮವನ್ನೆಲ್ಲ ಧ್ವಂಸಮಾಡತೊಡಗಿದನು. ಇದನ್ನು ಕಂಡು ಕುಪಿತರಾದ ವಸಿಷ್ಠರು ತಮ್ಮ ಬ್ರಹ್ಮದಂಡವನ್ನು ಪ್ರಯೋಗಿಸಲು, ಅದು ಆ ರಾಜನ ಶಸ್ತ್ರಾಸ್ತ್ರಗಳನ್ನೆಲ್ಲ ನುಂಗಿಹಾಕಿತು. ಬ್ರಹ್ಮಾಸ್ತ್ರ ಪ್ರಯೋಗವು ಕೂಡ ವಸಿಷ್ಠ ಋಷಿಯ ಮುಂದೆ ವ್ಯರ್ಥವಾಗಿ ಹೋಯಿತು. ಆಗ ಆ ಕ್ಷತ್ರಿಯ ಪುಂಗವನು “ಧಿಕ್ ಬಲಂ ಕ್ಷತ್ರಿಯಬಲಂ, ಬ್ರಹ್ಮತೇಜೋ ಬಲಂ ಬಲಂ!” (ಕ್ಷತ್ರಿಯ ಬಲಕ್ಕೆ ಧಿಕ್ಕಾರ; ಬಲವೆಂದರೆ ಬಲ ಬ್ರಹ್ಮತೇಜಸ್ಸು) ಎಂದುಕೊಂಡು ಬ್ರಹ್ಮ ಋಷಿಯಾಗುವುದಕ್ಕಾಗಿ ಮತ್ತೊಮ್ಮೆ ಭಯಂಕರವಾದ ತಪಸ್ಸನ್ನು ಕೈಕೊಂಡನು. ಅದರಿಂದ ಆತನಿಗೆ ಅಸಾಧಾರಣವಾದ ಶಕ್ತಿ ಸಾಮರ್ಥ್ಯಗಳು ಸಿದ್ಧಿಸಿದುವು. ತ್ರಿಶಂಕು ಮಹಾರಾಜನಿಗಾಗಿ ಒಂದು ಪ್ರತ್ಯೇಕ ಸ್ವರ್ಗವನ್ನೆ ನಿರ್ಮಿಸಿಕೊಟ್ಟನು. ಆದರೂ ಆತನು ಬ್ರಹ್ಮ ಋಷಿಯ ಪದವಿಯನ್ನು ಮಾತ್ರ ಪಡೆಯಲಿಲ್ಲ. ಅದಕ್ಕಾಗಿ ಮತ್ತೆ ಮತ್ತೆ ತಪವನ್ನಾಚರಿಸಿದನು. ಆತನಿಗೆ ಬಂದ ವಿಘ್ನಗಳು ಒಂದಲ್ಲ, ಎರಡಲ್ಲ. ಅವುಗಳನ್ನೆಲ್ಲ ನಿಗ್ರಹಿಸಿಕೊಂಡು ಆತನು ಸಿದ್ಧಿ ಪಡೆದನು. ಕಡೆಗೆ ವಸಿಷ್ಠರ ಬಾಯಿಂದಲೆ “ನೀನು ಬ್ರಹ್ಮ ಋಷಿಯಾದ” ಎಂದು ಹೊಗಳಿಸಿಕೊಂಡನು.

ಶ್ರೀರಾಮನು ಒಡೆನೆಯೆ ಆ ಧನುಸ್ಸಿನ ಮಧ್ಯವನ್ನು ಹಿಡಿದು ಲೀಲಾ ಜಾಲವಾಗಿ ಮೇಲಕ್ಕೆತ್ತಿ ಹೆದೆಯೇರಿಸಿದನು. ಅನಂತರ ಅದನ್ನು ಬಿಗಿ ಮಾಡುವುದಕ್ಕಾಗಿ ಬಿಲ್ಲನ್ನು ಮತ್ತಷ್ಟು ಬಗ್ಗಿಸಿದನು. ಅದು ಮಧ್ಯಕ್ಕೆ ಸರಿಯಾಗಿ ಮುರಿದುಹೋಯಿತು.

ರಾಗದ್ವೇಷಗಳಿಂದ ತುಂಬಿ ತುಳುಕುತ್ತಿದ್ದ ಆ ರಾಜನು ಶಮದಮಾದಿಗಳಿಂದ ಕೂಡಿ ಮಹರ್ಷಿಯಾದ ಕಥೆಯನ್ನು ಕೇಳಿ ರಾಮಲಕ್ಷ್ಮಣರು ಅತ್ಯಂತ ಸಂತೋಷ ಗೊಂಡವರಾಗಿ, ವಿಶ್ವಾಮಿತ್ರನೊಡನೆ ತಮ್ಮ ಬಿಡಾರಕ್ಕೆ ತೆರಳಿ ವಿಶ್ರಾಂತಿಗೊಂಡರು.

ಮರುದಿನ ಬೆಳಗ್ಗೆ ವಿಶ್ವಾಮಿತ್ರನು ತನ್ನ ಬಳಿಗೆ ಬಂದ ಜನಕ ಮಹಾರಾಜನನ್ನು ಕುರಿತು ಧನುರ್ವಿದ್ಯಾವಿಶಾರದರಾದ ರಾಮಲಕ್ಷ್ಮಣರಿಗೆ ಆತನ ಬಳಿ ಇರುವ ದಿವ್ಯಧನುಸ್ಸನ್ನು ತೋರಿಸುವಂತೆ ಕೇಳಿಕೊಂಡನು. ಜನಕ ಮಹಾರಾಜನು ಆ ಧನುಸ್ಸಿನ ಕಥೆಯನ್ನು ಹೇಳುತ್ತಾ “ಇದು ಪರಮೇಶ್ವರನ ಧನುಸ್ಸು. ದಕ್ಷಯಜ್ಞವನ್ನು ಧ್ವಂಸಸಮಾಡುವ ಕಾಲದಲ್ಲಿ ಸ್ವತಃ ಪರಶಿವನೇ ಅನುಸಂಧಾನಮಾಡಿದ್ದನು. ಆಗ ದೇವತೆಗಳೆಲ್ಲರೂ ಆತನನ್ನು ಪರಿಪರಿಯಾಗಿಸುತ್ತಿಸಿ ಪ್ರಾರ್ಥಿಸಲು ಸುಪ್ರೀತನಾದ ಶಂಕರನು ಅದನ್ನು ದೇವತೆಗಳಿಗೆ ಕೊಟ್ಟನು. ನಮ್ಮ ವಂಶದಲ್ಲಿ ಆರನೆಯವನಾದ ದೇವರಾತನು ಮಾಡಿದ ಯಜ್ಞದಿಂದ ಸುಪ್ರೀತರಾದ ದೇವತೆಗಳು ಆ ಧನುಸ್ಸನ್ನು ಆತನಿಗೆ ಕೊಟ್ಟರು. ಅಂದಿನಿಂದಲೂ ಇದು ನಮ್ಮ ವಂಶದ ಒಂದು ಹಿರಿಯ ಆಸ್ತಿಯಾಗಿ ಉಳಿದುಕೊಂಡು ಬಂದಿದೆ. ನಾನು ಯಜ್ಞಕ್ಕಾಗಿ ಭೂಶೋಧನೆ ಮಾಡುತ್ತಿದ್ದಾಗ ಅನುಪಮಸುಂದರಿಯಾದ ಕನ್ಯೆಯೊಬ್ಬಳು ನೇಗಿಲಿಗೆ ಸಿಕ್ಕಿದಳು. ಆಕೆಗೆ ಸೀತೆಯೆಂದು ಹೆಸರಿಟ್ಟು ಅತ್ಯಂತ ಮೋಹದಿಂದ ಬೆಳೆಸಿರುತ್ತೇನೆ. ನನ್ನಲ್ಲಿರುವ ಧನುಸ್ಸನ್ನು ಬಗ್ಗಿಸಬಲ್ಲವರಿಗೆ ಅಯೋನಿಜೆಯಾದ ಆ ನನ್ನ ಸಾಕುಮಗಳನ್ನು ವಿವಾಹಮಾಡಿ ಕೊಡಬೇಕೆಂದಿದ್ದೇನೆ. ಇದುವೆಗೆ ಹಲವಾರು ರಾಜಪುತ್ರರು ಆ ಬಿಲ್ಲನ್ನು ಬಗ್ಗಿಸಹೊರಟು ವಿಫಲ ಮನೋರಥರಾಗಿದ್ದಾರೆ. ಈ ರಾಜಕುಮಾರರಿಗೂ ಆ ಧನಸ್ಸನ್ನು ತೋರಿಸುತ್ತೇನೆ. ಒಂದು ವೇಳೆ ಶ್ರೀರಾಮನು ಆ ಬಿಲ್ಲನ್ನು ಬಾಗಿಸಿ ಸೀತೆಯನ್ನು ಪ್ರಾಣಿಗ್ರಹಣ ಮಾಡುವಂತಾದರೆ ಬಹಳ ಸಂತೋಷ”

ಅನಂತರ ಜನಕಮಹಾರಾಜನು ಆ ಧನಸ್ಸನ್ನು ಅಲ್ಲಿಗೆ ತರಿಸುವಂತೆ ಮಂತ್ರಿಗಳಿಗೆ ಆಜ್ಞಾಪಿಸಿದನು. ಆ ಬಿಲ್ಲನ್ನು ಎಂಟು ಚಕ್ರಗಳುಳ್ಳ ರಥದಲ್ಲಿಟ್ಟುಕೊಂಡು ಐದು ಸಹಸ್ರಜನ ಯೋಧರು ಅದನ್ನು ನೂಕಿಕೊಂಡು ಬಂದರು. ಆಗ ವಿಶ್ವಾಮಿತ್ರನು ರಾಮನನ್ನು ಕುರಿತು “ವತ್ಸರಾಮ, ಆ ಧನುಸ್ಸನ್ನು ನೋಡು” ಎಂದನು. ಶ್ರೀರಾಮನು ಆ ಬಿಲ್ಲನ್ನು ನೋಡಿ ವಿಶ್ವಾಮಿತ್ರನನ್ನು ಕುರಿತು.

“ಗುರುದೇವ ಇದು ಬಹು ದೊಡ್ಡ ಬಿಲ್ಲೇ ಸರಿ. ನಾನು ಇದನ್ನು ಮುಟ್ಟಿ ನೋಡಲೆ? ಸಾಧ್ಯವಾದರೆ ಹೆದೆಯೇರಿಸುವುದಕ್ಕೂ ಪ್ರಯತ್ನಿಸುತ್ತೇನೆ” ಎಂದನು.

ಜನಕ ಮಹಾರಾಜನು “ಆಗಬಹುದು” ಎಂದನು.

ಶ್ರೀರಾಮನು ಒಡನೆಯೆ ಆ ಧನುಸ್ಸಿನ ಮಧ್ಯವನ್ನು ಹಿಡಿದು ಲೀಲಾಜಾಲವಾಗಿ ಮೇಲಕ್ಕೆತ್ತಿ ಹೆದೆಯೇರಿಸಿದನು. ಅನಂತರ ಅದನ್ನು ಬಿಗಿ ಮಾಡುವುದಕ್ಕಾಗಿ ಬಿಲ್ಲನ್ನು ಮತ್ತಷ್ಟು ಬಗ್ಗಿಸಿದನು. ಅದು ಮಧ್ಯಕ್ಕೆ ಸರಿಯಾಗಿ ಮುರಿದುಹೋಯಿತು. ಆಗ ಉಂಟಾದ ಶಬ್ದದಿಂದ ಭೂಮಿ ನಡುಗಿಹೋಯಿತು; ಅಲ್ಲಿದ್ದ ಜನರೆಲ್ಲರೂ ಸ್ತಬ್ದರಾಗಿ ಮೈಮರೆತು ಭೂಮಿಯಮೇಲೆ ಬಿದ್ದರು.

ಸ್ವಲ್ಪ ಹೊತ್ತಾದಮೇಲೆ ಮೂರ್ಛೆಗೊಂಡಿದ್ದವರೆಲ್ಲರೂ ಮೇಲಕ್ಕೆದ್ದರು. ಶ್ರೀರಾಮನ ಪರಾಕ್ರಮವನ್ನು ಕಂಡು ಜನರೆಲ್ಲರೂ ವಿಸ್ಮಿತರಾದರು. ಜನಕ ಮಹಾರಾಜನ ಸಂತೋಷಕ್ಕೆ ಪಾರವೇ ಇರಲಿಲ್ಲ. “ಈ ಎಳೆಯ ಬಾಲಕನ ಬಾಹುಗಳಲ್ಲಿ ಅದೆಷ್ಟು ಶಕ್ತಿ ತುಂಬಿದೆ! ಇಂತಹ ಗಂಡನನ್ನು ಪಡೆದ ನನ್ನ ಮಗಳು ಧನ್ಯಳೇ ಸರಿ. ನನ್ನ ಪ್ರಾಣಕ್ಕಿಂತಲೂ ಅಧಿಕಳಾದ ಸೀತೆಯನ್ನು ವರಿಸಲು ರಾಮನೇ ಅರ್ಹ” ಎಂದು ವಿಶ್ವಾಮಿತ್ರನಿಗೆ ತಿಳಿಸಿ, ಒಡನೆಯೆ ದಶರಥನನ್ನು ಕರೆತರುವಂತೆ ಹೇಳಿ ಮಂತ್ರಿಗಳನ್ನು ಅಯೋಧ್ಯೆಗೆ ಅಟ್ಟಿದನು.

* * *