ದಶರಥನ ಪತ್ನಿಯರಲ್ಲಿ ಕಿರಿಯವಳಾದ ಕೈಕೆ ಪರಮಸುಂದರಿ. ಆಕೆ ಎಷ್ಟು ಸುಂದರಿಯೊ ಆಕೆಯ ದಾಸಿ ಮಂಥರೆ ಅಷ್ಟೂ ಕುರೂಪಿಣಿ. ದೇವಿ ಕೈಕೆ ತೌರುಮನೆಯಿಂದ ಬಂದಾಗ ಇವಳು ಆಕೆಯ ಜೊತೆಯಲ್ಲಿ ಬಂದಳು. ಅಂದಿನಿಂದಲೂ ಅವಳು ತನ್ನ ಒಡತಿಯನ್ನು ಎಡೆಬಿಡದೆ ಸೇವಿಸುತ್ತಿದ್ದಳು. ಈ ಒಂದು ವಿನಾ ಅವಳಲ್ಲಿ ಮತ್ತಾವ ಸದ್ಗುಣವನ್ನೂ ಕಾಣುವಂತಿರಲಿಲ್ಲ. ಅವಳ ಆಕಾರ ಹೇಗೆ ಕುರೂಪವೊ ಬುದ್ದಿಯೂ ಹಾಗೆಯೆ ವಿಕಾರ. ಆ ಗೂನುಬೆನ್ನಿನ ವಿಕಾರಿಯನ್ನು ಕಂಡರೆ ಯಾರಿಗೂ ಆಗದು. ಆದರೂ ಮಹಾರಾಜನ ಮೋಹದ ಮಡದಿಯ ಆತ್ಮೀಯಳೆಂದು ಭಾವಿಸಿ ಅವಳನ್ನು ಕಂಡು ಎಲ್ಲರೂ ಹೆದರುತ್ತಿದ್ದರು. ಪಟ್ಟಾಭಿಷೇಕದ ಹಿಂದಿನ ಪಾಪಿಷ್ಟೆ ಬೆಳಗು ಮುಂಜಾವಿಗೆ ಎದ್ದು ಅರಮನೆಯ ಉಪ್ಪರಿಗೆಯನ್ನು ಏರಿದಳು. ಸುತ್ತಲೂ ಅಯೋಧ್ಯಾಪಟ್ಟಣದಲ್ಲಿ ಗೋಚರವಾಗುತ್ತಿದ್ದ ಸಡಗರ ಸಂಭ್ರಮಗಳನ್ನು ಕಂಡು ಅವಳಿಗೆ ಆಶ್ಚರ್ಯವಾಯಿತು. ಮನೆ ಮನೆಯೂ ಸುಣ್ಣಬಣ್ಣಗಳನ್ನು ತಳೆದು ಕಂಗೊಳಿಸುತ್ತಿವೆ. ಜನರೆಲ್ಲರೂ ವಸ್ತ್ರಾಲಂಕಾರಭೂಷಿತರಾಗಿ ಸಡಗರದಿಂದ ಓಡಾಡುತ್ತಿದ್ದಾರೆ. ಅಲ್ಲಲ್ಲಿ ಮಂಗಳವಾದ್ಯಗಳಾಗುತ್ತಿವೆ. ಇದಕ್ಕೆ ಕಾರಣವೇನೆಂದು ಆ ಕುಬ್ಜೆ ಚಡಪಡಿಸುತ್ತಿರುವಾಗ ಶುಭ್ರವಸ್ತ್ರಧಾರಿಣಿಯಾಗಿ ತುಟಿಗಳಿಂದ ಮುಗುಳ್ನಗೆಯ ಮುಗುಳುಗಳನ್ನು ಚೆಲ್ಲುತ್ತಾ ಹೋಗುತ್ತಿದ್ದ ಶ್ರೀರಾಮದೂತಿಯೊಬ್ಬಳು ಕಣ್ಣಿಗೆ ಬಿದ್ದಳು. ಮಂಥರೆ ಅವಳ ಸಮೀಪಕ್ಕೆ ಸಾರಿ “ಇದೇನಮ್ಮಾ ಈ ಸಡಗರ?” ಎಂದು ಕೇಳಿದಳು. ಶ್ರೀರಾಮನ ಅಭ್ಯುದಯದಲ್ಲಿ ಉಬ್ಬಿಹೋಗಿದ್ದ ಆ ದೂತಿಗೆ ಹಿಂದುಮುಂದಿನ ವಿವೇಚನೆಯೊಂದೂ ಇರಲಿಲ್ಲ. ಮಂಥರೆ ಮಹಾ ಅಸೂಯಾಪರಳೆಂದು ಗೊತ್ತಿದ್ದರೂ ಮೈಮರೆತು “ಇದೇನು ಮಂಥರೆ! ಹೀಗೆ ಕೇಳುತ್ತೀಯೆ? ನಾಳೆ ಶ್ರೀರಾಮಚಂದ್ರನಿಗೆ ಯುವರಾಜ ಪಟ್ಟವಲ್ಲವೆ?” ಎಂದಳು.

ದಾಸಿಯ ಮಾತುಗಳನ್ನು ಕೇಳಿದ ಮಂಥರೆಗೆ ಹೊಟ್ಟೆಯಲ್ಲಿ ಬಹು ಕಸಿವಿಸಿಯಾಯಿತು. ಬೀಳುವುದೇಳುವುದನ್ನೂ ಲೆಕ್ಕಿಸದೆ ಉಪ್ಪರಿಗೆಯಿಂದ ಕೆಳಗಿಳಿದು ದೇವಿ ಕೈಕೆಯ ಶಯನಗೃಹವನ್ನು ಪ್ರವೇಶಿಸಿದಳು. ಯಾವ ಪಾಪವನ್ನೂ ಅರಿಯದೆ ಕೈಕೆ ಇನ್ನೂ ನಿದ್ದೆಯಲ್ಲಿದ್ದಳು. ಮಂಥರೆ ಕೊಠಡಿಯನ್ನು ಪ್ರವೇಶಿದವಳೆ ಅವಳನ್ನು ಅಲುಗಿಸಿ ಎಬ್ಬಿಸುತ್ತಾ “ದೇವಿ, ನಿನಗೆ ಮಹಾ ವಿಪತ್ತು ಸಂಭವಿಸಿದೆ. ಏಳು. ಬೇಗ ಮೇಲೇಳು” ಎಂದು ಕಿರುಚಿಕೊಂಡಳು. ಕೈಕೆ ಗಾಬರಿಯಿಂದ ಮೇಲಕ್ಕೆದ್ದು ಪ್ರಶ್ನಾರ್ಥಕ ದೃಷ್ಟಿಯಿಂದ ಆ ಕುಬ್ಜೆಯ ಕಡೆ ನೋಡಿದಳು. ಒಡನೆಯೆ ಆ ಡೊಂಕಿ “ಮಹಾರಾಣಿ! ಸರ್ವನಾಶ! ಸರ್ವನಾಶ! ಮಹಾರಾಜನಿಗೆ ನಿನ್ನಲ್ಲಿ ಅತಿಶಯ ಪ್ರೇಮವೆಂದು ಹೇಳಿಕೊಂಡು ನಿನ್ನ ಭಾಗ್ಯಕ್ಕೆ ಎಣೆಯೇ ಇಲ್ಲವೆಂದು ಹೆಮ್ಮೆಪಟ್ಟುಕೊಳ್ಳುತ್ತಿದ್ದೆಯಲ್ಲಾ! ಈಗ ಆಗಿರುವುದನ್ನು ನೋಡು. ಮಹಾರಾಜನು ನಾಳೆ ಶ್ರೀರಾಮನಿಗೆ ಪಟ್ಟಗಟ್ಟುತ್ತಾನಂತೆ! ಈ ಕರ್ಣಕಠೋರವಾದ ವಾರ್ತೆಯನ್ನು ಕೇಳಿ ನನ್ನ ಹೊಟ್ಟೆಯಲ್ಲಿ ಒಂದು ಮೊರ ಬೆಂಕಿಯನ್ನು ಹೊಯ್ದಂತಾಗಿದೆ. ನಿನ್ನ ಗಂಡ ಎಂತ ಕಪಟಿಯೆ ತಾಯಿ!” ಎಂದು ಹಲುಬಿದಳು.

ಮಂಥರೆಯ ಮಾತುಗಳನ್ನು ಕೇಳಿ ರಾಣಿ ಕೈಕೆ ಗಹಗಹಿಸಿ ನಕ್ಕಳು. “ಅಯ್ಯೊ ಬೆಪ್ಪೆ! ಏನೋ ಮಹತ್ಪ್ರಳಯವಾದಂತೆ ನನ್ನನ್ನು ಎಷ್ಟು ಹೆದರಿಸಿದೆ! ಎಂತಹ ಸಂತೋಷ ಸಮಾಚಾರವನ್ನು ಎಷ್ಟು ಭಯಂಕಾರವಾದುದೆಂಬಂತೆ ಹೇಳಿದೆಯಲ್ಲಾ! ಈ ಸಂತೋಷವಾರ್ತೆಯನ್ನು ತಂದ ನಿನಗೆ ಏನನ್ನು ಕೊಟ್ಟರೂ ಅಲ್ಪವೆ ಸರಿ. ಇದೋ ಈ ಪಾರಿತೋಷಕವನ್ನು ತೆಗೆದಕೊ” ಎಂದು ಹೇಳಿ ತಾನು ಧರಿಸಿದ್ದ ದಿವ್ಯಾಭರಣವನ್ನು ತೆಗೆದು ಆ ಕುಬ್ಜೆಗೆ ಕೊಟ್ಟಳು.

ಒಡತಿಯ ಚರ್ಯೆಯನ್ನು ಕಂಡು ಮಂಥರೆಯ ಕೋಪ ಕೆಂಡವಾಯಿತು. ಆಕೆ ಕೊಟ್ಟ ಆಭರಣವನ್ನು ನೆಲಕ್ಕೆಸೆದು “ಸಂಕಟಸಮಯದಲ್ಲಿ ಸಂತೋಷಪಡುತ್ತಿರುವ ಹುಚ್ಚಿ! ಶ್ರೀರಾಮಪಟ್ಟಾಭಿಷೇಕ ನಿನಗೆ ಸಂತೋಷವಾರ್ತೆಯೆ? ಪಟ್ಟಾಭಿಷೇಕಕ್ಕಿಂತಲೂ ನಿನ್ನ ಬೆಪ್ಪಿಗಾಗಿ ಹೆಚ್ಚು ವ್ಯಸನಪಡಬೇಕಾಗಿದೆ. ಸವತಿಯ ಮಗನ ಶ್ರೇಯಸ್ಸು ನಿನಗೆ ಸಂತೋಷಕರವಾದರೆ ವ್ಯಸನಕರವಾದುದಿನ್ನಾವುದು? ರಾಮನಿಗೆ ರಾಜ್ಯಭಾರ ದೊರೆತರೆ ಭರತನ ಗತಿಯೇನು? ತಂತ್ರಿಯಾದ ರಾಮನು ರಾಜನಾದ ಮೇಲೆ ಋಜುಬುದ್ಧಿಯಾದ ಭರತನ ಗತಿ ಏನಾಗುವುದೊ! ಯಾವ ಅಪಾಯ ಆತನಿಗೆ ಸಂಭವಿಸುವುದೊ! ಅದೂ ಹಾಗಿರಲಿ. ನಿನ್ನ ಸವತಿಯಾದ ಕೌಸಲ್ಯೆ ರಾಜಮಾತೆಯಾದ ಮೇಲೆ ನಿನ್ನ ಗತಿ ಏನು? ಸ್ವಲ್ಪ ಯೋಚಿಸಿ ನೋಡು. ನೀನು ಆಕೆಯ ದಾಸಿಯಾಗಿ ಬಿದ್ದಿರಬೇಕಾಗುತ್ತದೆ. ನಿನ್ನ ಮಗ ಶ್ರೀರಾಮನಿಗೆ ದಾಸ; ನೀನು ಕೌಸಲ್ಯೆಗೆ ದಾಸಿ. ಆ ನಿನ್ನ ಸವತಿಯ ಸೊಸೆ ಪಟ್ಟದ ರಾಣಿಯಾಗಿ ಮೆರೆಯಬೇಕು. ನಿನ್ನ ಸೊಸೆ ಮ್ಲಾನವದನದಿಂದ ಕೊರಗುತ್ತಾ ಬಿದ್ದಿರಬೇಕು” ಎಂದಳು.

ಮಂಥರೆ ಏನು ಹೇಳಿದರೂ ಕೈಕೆಗೆ ರಾಮನಲ್ಲಿ ವಿರಸ ಹುಟ್ಟಲಿಲ್ಲ. ಆತನ ಶುಭ್ರಧವಳವಾದ ಧರ್ಮಬುದ್ಧಿಯಲ್ಲಿ ಆಕೆಗೆ ಸಂದೇಹ ಹುಟ್ಟಿದ್ದು. ಉಳಿದವರು ಎಂತಹವರಾದರೂ ಶ್ರೀರಾಮನು ಮಾತ್ರ ಅಧರ್ಮಕ್ಕೆ ಎಂದಿಗೂ ಆಸ್ಪದ ಕೊಡುವವನಲ್ಲವೆಂದು ಆಕೆಯ ದೃಢನಂಬಿಕೆ. ಇದನ್ನು ಕಂಡು ಮಂಥರೆಗೆ ಅಸಹ್ಯವಾದ ವ್ಯಥೆಯುಂಟಾಯಿತು. ಕಣ್ಣೀರು ಸುರಿಸುತ್ತಾ ಹೇಳಿದಳು. . . . “ಅಯ್ಯೋ ಕೈಕೆ! ಸ್ವಸ್ವರೂಪ ಜ್ಞಾನವನ್ನು ನಿನಗೆ ಹೇಗೆ ಮಾಡಿಕೊಡಲಿ? ಜನರ ಮರೆ ಮೋಸಗಳು ಅಕುಟಿಲಳಾದ ನಿನಗೆ ಗೋಚರವಾಗುವುದು ತಾನೆ ಹೇಗೆ? ಆಯ್ತು, ನಿನ್ನ ಹಣೆಯಲ್ಲೇನೊ ಸವತಿಗೆ ದಾಸಿಯಾಗುವ ಪ್ರಾಪ್ತಿ ಬರೆದಿದೆ. ಹಿಂದೆ ನೀನು ಅವಳನ್ನು ಅನೇಕ ವೇಳೆ ಬಹು ತಿರಸ್ಕಾರದಿಂದ ನೋಡಿದ್ದೀಯೆ. ಬಳ್ಳಕ್ಕೆ ಕಂಡುಗವಾಗಿ ಅವಳು ಅದರ ಮುಯ್ಯನ್ನು ತೀರಿಸುತ್ತಾಳೆ. ನೀನು ದಾಸಿಯಾಗಿ ನಿನ್ನ ಬಾಳನ್ನು ಸವೆಸು. ಆದರೆ ನಿನ್ನ ಮಗನನ್ನು ಮಾತ್ರ ಎಲ್ಲಿಯಾದರೂ ದೇಶಾಂತರಕ್ಕೆ ಕಳುಹಿಸಿಬಿಡು. ಪಾಪ ಎಲ್ಲಿಯಾದರೂ ಸುಖವಾಗಿ ಬದುಕಿಕೊಂಡಿರಲಿ. ಮೋಸಗಾರನಾದ ಈ ಮಹಾರಾಜನು ಭರತನಿಗೆ ಸುದ್ದಿಯನ್ನು ಕೂಡ ಕೊಡದೆ ಈ ಪಟ್ಟಾಭಿಷೇಕಕ್ಕಾಗಿ ಯತ್ನಿಸುತ್ತಿರುವನಲ್ಲ! ಇದೆಲ್ಲ ನಿನಗೆಲ್ಲ ಅರ್ಥವಾದೀತು!” ಹೀಗೆ ಕೈಕೆಗೆ ಬುದ್ದಿ ಕಲಿಸುವುದರಲ್ಲಿಯೆ ಆ ದಿನ ಕಳೆದು ಹೋಯಿತು. 

ದಾಸಿಯ ಸಮಯಸ್ಫೂರ್ತಿಯನ್ನು ಕಂಡು ಮೆಚ್ಚಿದ ರಾಣಿ ಅವಳನ್ನು ಬಹುವಾಗಿ ಸನ್ಮಾನಿಸಿದಳು.

ಕಡೆಗೂ ಮಂಥರೆಯ ಮೊನಚಾದ ಮಾತುಗಳು ಹೃದಯದಲ್ಲಿ ಆಳವಾಗಿ ನಾಟಿದವು. ಸವತಿಗೆ ತಾನು ದಾಸಿಯಾಗಬೇಕಾಗುವುದೋ ಎಂಬ ಒಂದು ಭಾವನೆಯೆ ಸಾಕಾಗಿತ್ತು ಆಕೆಯನ್ನು ಕೆರಳಿಸಲು. ರೋಷಗೊಂಡ ನಾಗಿಣಿಯಂತೆ ಆಕೆ ಬುಸುಗುಟ್ಟುತ್ತಾ “ಪ್ರಿಯ ಮಂಥರಾ, ನಿನ್ನ ಮಾತು ನಿಜ; ಏನಾದರೂ ಮಾಡಿ ಈ ಪಟ್ಟಾಭಿಷೇಕ ಕಾರ್ಯವನ್ನು ನಿಲ್ಲಿಸಬೇಕು. ನನ್ನ ಮಗನಿಗೆ ರಾಜ್ಯಾಭಿಷೇಕವಾಗುವಂತೆ ಮಾಡಬೇಕು. ಕುಶಲಳಾದ ನೀನು ಇದಕ್ಕೊಂದು ಉಪಾಯ ಸೂಚಿಸು” ಎಂದಳು. ಮಂಥರೆ ಉಪಾಯಕ್ಕಾಗಿ ಬೆದಕಬೇಕಾಗಿರಲಿಲ್ಲ. ಅದನ್ನಾಗಲೆ ಅವಳು ಆಲೋಚಿಸಿ ಸಿದ್ದವಾಗಿಟ್ಟುಕೊಂಡಿದ್ದಳು. ಹಿಂದೆ ದೇವಾಸುರ ಯುದ್ಧವಾದಾಗ ದಶರಥನು ದೇವತೆಗಳ ಸಹಾಯಕ್ಕಾಗಿ ಹೋಗಿದ್ದನು. ತನ್ನ ಮೋಹದ ಮಡದಿಯನ್ನು ಜೊತೆಯಲ್ಲಿ ಕೊಂಡೊಯ್ದಿದ್ದನು. ಯುದ್ಧದಲ್ಲಿ ದಶರಥನ ಜೀವಕ್ಕೆ ಅಪಾಯವೊದಗಿದ್ದಾಗ ಎರಡುಬಾರಿ ಕೈಕೆಯ ಕೌಶಲ್ಯದಿಂದ ಆತನ ಪ್ರಾಣ ಉಳಿಯಿತು. ರಥಚೋದನೆಯಲ್ಲಿ ಜಾಣ್ಮೆಯನ್ನು ಮೆರೆದು ಆಕೆ ಆತನನ್ನು ಅಪಾಯದಿಂದ ಪಾರುಮಾಡಿದ್ದಳು. ಅದಕ್ಕಾಗಿ ದಶರಥನು ಆಕೆಗೆ ಎರಡು ವರಗಳನ್ನು ದಯಪಾಲಿಸಿದ್ದನು. ಆಕೆ ಆ ವರಗಳನ್ನು ಸ್ವೀಕರಿಸಿರಲಿಲ್ಲ. ಬೇಕಾದಾಗ ಕೇಳುವೆನೆಂದು ಹೇಳಿ ಆತನನ್ನು ಒಪ್ಪಿಸಿದಳು. ಮಂಥರೆ ಅದನ್ನು ಈಗ ಕೈಕೆಯ ನೆನಪಿಗೆ ತಂದಳು. “ಮಹಾರಾಣಿ, ಒಂದು ವರದಿಂದ ನಿನ್ನ ಮಗ ರಾಜನಾಗಲಿ; ಇನ್ನೊಂದು ವರ ರಾಮನನ್ನು ವನವಾಸಕ್ಕೆ ಅಟ್ಟಲಿ?” ಎಂದಳು.

ದಾಸಿಯ ಸಮಯಸ್ಫೂರ್ತಿಯನ್ನು ಕಂಡು ಮೆಚ್ಚಿದ ರಾಣಿ ಅವಳನ್ನು ಬಹುವಾಗಿ ಹೊಗಳಿ ಸನ್ಮಾನಿಸಿದಳು. ಇದರಿಂದ ಸಂತುಷ್ಟಳಾಗಿ ಹುರಿಗೊಂಡ ಆ ನೀಚದಾಸಿ ವೃದ್ಧರಾಜನಿಂದ ವರಗಳನ್ನು ಪಡೆಯುವುದು ಹೇಗೆಂಬುದನ್ನು ವಿವರಿಸಿದಳು – “ನೀನೀಗಲೆ ಕೋಪಗೃಹವನ್ನು ಪ್ರವೇಶಿಸಿ, ಮಲಿನವಸ್ತ್ರಗಳನ್ನು ಧರಿಸಿ, ಕೂದಲನ್ನು ಬಿರಿಹೊಯ್ದುಕೊಂಡು ನೆಲದ ಮೇಲೆ ಹೊರಳಾಡುತ್ತಿರಬೇಕು. ಇದನ್ನು ಕೇಳಿ ರಾಜನು ನಿನ್ನಬಳಿಗೆ ಬರುವನು. ಆತನು ನಿನ್ನ ಬಳಿಗೆ ಬರುತ್ತಲೆ ನೀನು ಗಟ್ಟಿಯಾಗಿ ರೋದಿಸಲು ಆರಂಭಿಸಬೇಕು. ಆತನು ಎಷ್ಟು ಸಮಾಧಾನ ಮಾಡಿದರೂ ನೀನು ರೋದನವನ್ನು ನಿಲ್ಲಿಸಕೂಡದು. ಆತನಿಗೆ ನಿನ್ನಲ್ಲಿ ತನ್ನ ಪ್ರಾಣಕ್ಕಿಂತಲೂ ಹೆಚ್ಚು ಮಮತೆ. ಮಹದೈಶ್ವರ್ಯಗಳ ಪ್ರಲೋಭನೆಯನ್ನು ಒಡ್ಡಿ ನಿನ್ನನ್ನು ಸಮಾಧಾನಪಡಿಸಲು ಆತನು ಯತ್ನಿಸಬಹುದು. ನೀನು ಅದಕ್ಕೆಲ್ಲಾ ಬಲಿ ಬೀಳಕೂಡದು. ನಿನಗೆ ಕೊಡಬೇಕಾಗಿರುವ ವರಗಳನ್ನು ಕೊಡುವಂತೆ ಆತನನ್ನು ಬೇಡು. ಅದನ್ನು ಸಲ್ಲಿಸುವೆನೆಂದು ಪ್ರಮಾಣ ಮಾಡುವವರೆಗೂ ನೀನು ಮೇಲಕ್ಕೇಳಬೇಡ. ಇಷ್ಟಾದ ಮೇಲೆ ನಿನ್ನ ಬೇಡಿಕೆಗಳನ್ನು ಆತನ ಮುಂದಿಡು. ”

ವಿವೇಕವನ್ನು ಸೂರೆಗೊಟ್ಟಿದ್ದ ಕೈಕೆ. ದಾಸಿಯ ಮಾತಿಗೆ ‘ಅಸ್ತು’ ಅಂದಳು.

* * *