ತನ್ನ ಜೀವಿತೇಶ್ವರನ ಉತ್ಕರ್ಷದಿಂದ ಸೀತೆ ಪರಮಾನಂದಭರಿತಳಾಗಿದ್ದಳು. ಆಕೆ ದೇವತೆಗೆ ಪೂಜೆ ಸಲ್ಲಿಸಿ, ಗಂಡನ ಬರವನ್ನೆ ಇದಿರು ನೋಡುತ್ತಿದ್ದಳು. ಪಟ್ಟದ ರಾಣಿಯಾಗುವ ತಾನು ಅಭಿಷಿಕ್ತನಾಗಿ ಬರುವ ತನ್ನ ಸ್ವಾಮಿಗೆ ಪಾದಾರ್ಚನಾದಿ ವಿಧಿಗಳನ್ನು ನಡೆಸಬೇಕಾಗುವುದೆಂದು ಅದಕ್ಕೆ ಅಗತ್ಯವಾದ ಸಂಭಾರಗಳನ್ನೆಲ್ಲ ಸಿದ್ಧಗೊಳಿಸಿಕೊಂಡು ಸಡಗರದಿಂದ ಶ್ರೀರಾಮಚಂದ್ರನು ಬರುವ ಹಾದಿಯ ಕಡೆ ಕಾಯುವ ಕಣ್ಣಾಗಿದ್ದಳು. ನಿರೀಕ್ಷಿಸಿದುದಕ್ಕಿಂತಲೂ ಮುಂಚೆಯೆ ಶ್ರೀರಾಮನು ಅಲ್ಲಿಗೆ ಬಂದನು. ಆದರೆ ಇದೇನು? ಆತನ ಮುಖವೇಕೆ ಹೀಗೆ ಕಂದಿಹೋಗಿದೆ? ಸ್ವಭಾವಧೀರನಾದ ಆತನ ಮೊಗದಾವರೆ ಹೀಗೆ ವಿಕಾರವಾಗಿದ್ದುದನ್ನು ಆ ಬಾಲೆ ಎಂದೂ ಕಂಡಿರಲಿಲ್ಲ. ಆದ್ದರಿಂದಲೆ ಅದನ್ನು ಕಂಡ ಆಕೆಯ ಹೃದಯ ತಲ್ಲಣಿಸಿತು. ಆತನನ್ನು ಕುರಿತು “ಪ್ರಭೂ, ಈ ಸಂತೋಷ ಸಮಯದಲ್ಲಿ ಚಿಂತೆಯೇಕೆ? ಪುಷ್ಯನಕ್ಷತ್ರ ಆಗಲೆ ಪ್ರಾಪ್ತವಾಗಿದೆ; ಪಟ್ಟಾಭಿಷೇಕ ಆಗಲೆ ನೆರವೇರಿರಬೇಕಲ್ಲವೆ? ಈ ವೇಳೆಗೆ ನಿನ್ನ ತಲೆಯಮೇಲೆ ಶ್ವೇತಚ್ಛತ್ರವೂ ಎಡಬಲಗಳಲ್ಲಿ ಚಾಮರಗಳೂ ಬೆಳಗಬೇಕಾಗಿತ್ತಲ್ಲವೆ? ಅವುಗಳೇಕೆ ಕಾಣುತ್ತಿಲ್ಲ? ಹೊಗಳುಭಟ್ಟರೇಕೆ ನಿನ್ನನ್ನು ಸುತ್ತಿಸುತ್ತಿಲ್ಲ? ವೇದಪಾರಂಗತರಾದ ಬ್ರಾಹ್ಮಣರು ಪಟ್ಟಾಭಿಷಿಕ್ತನಾದ ನಿನ್ನ ಮಂಡೆಯಲ್ಲಿ ಮಂಗಳದ್ರವ್ಯಗಳನ್ನೇಕೆ ಇನ್ನೂ ಪೂಸಿಲ್ಲ? ನಾಲ್ಕು ಕುದುರೆಗಳನ್ನು ಕಟ್ಟಿದ ರಾಜರಥವು ನಿನ್ನಾಗಮನಸೂಚಕವಾಗಿ ಮುಂದೇಕೆ ಬರಲಿಲ್ಲ? ಪಟ್ಟಾಭಿಷಿಕ್ತನಾಗಿ ನೀನು ಬರುವಾಗ ಜನರ ಕೋಲಾಹಲ ಸ್ವಲ್ಪವೂ ಕೇಳಿರಲಿಲ್ಲವಲ್ಲ. ಇದರ ಅರ್ಥವೇನು? ನನಗೇಕೊ ಭಯವಾಗುತ್ತಿದೆ” ಎಂದು ನುಡಿದಳು. ಮಾತನಾಡುತ್ತಿದ್ದಂತೆಯೆ ಆಕೆಯ ಕಣ್ಣುಗಳಲ್ಲಿ ನೀರು ತುಂಬಿ ನೋಟ ಮಂಜಾಯಿತು.

ಪ್ರಿಯ ಪತ್ನಿಯ ಎದೆಕುದಿಹವನ್ನು ಶ್ರೀರಾಮನಿಗೆ ಸಂಕಟವಾಯಿತು. ಕುಸುಮಕೋಮಲೆಯಾದ ಆಕೆಗೆ ಎಂತಹ ಭಯಂಕರವಾದ ವಿಪತ್ತು ಕಾದಿದೆ! ಕಠೋರವದ ವಾರ್ತೆಯನ್ನು ಆಕೆಗೆ ಹೇಳುವುದು ಹೇಗೆ? ಆ ಕಾರಣವೆ ಶ್ರೀರಾಮನು ಅಷ್ಟೊಂದು ಅಧೀರನಾಗಿದ್ದುದು. ಆದರೆ ಗತ್ಯಂತರವಿಲ್ಲ; ಆಕೆಗೆ ಸುದ್ದಿಯನ್ನು ತಿಳಿಸಲೇಬೇಕು. ಆದ್ದರಿಂದ ತಂದೆ ಕೈಕೆಗೆ ಕೊಟ್ಟಿದ್ದ ವರಗಳನ್ನೂ, ಕೈಕೆ ಆ ವರಗಳಿಂದ ಸಾಧಿಸಿದ್ದ ದುಷ್ಟ ಪ್ರಯೋಜನಗಳನ್ನೂ ವಿವರವಾಗಿ ತಿಳಿಸಿ ಹೇಳಿದನು. ಅನಂತರ ಆಕೆಯನ್ನು ಕುರಿತು ಹೀಗೆಂದನು: “ಮನೋಹರಿ, ನಾನಿಂದೇ ಅರಣ್ಯಕ್ಕೆ ತೆರಳಬೇಕಾಗಿದೆ. ನಾನು ಹಿಂತಿರುಗಿ ಬರುವವರೆಗೂ ನೀನು ನಿಶ್ಚಲಚಿತ್ತಳಾಗಿ ದೇವರ ಧ್ಯಾನದಲ್ಲಿಯೂ ಗುರುಹಿರಿಯರ ಶುಶ್ರೂಷೆಯಲ್ಲಿಯೂ ಕಾಲ ಕಳೆಯುತ್ತಿರು. ಭರತನಿಗೆ ಕನಸಿನಲ್ಲಿಯೂ ಕೆಟ್ಟದನ್ನು ಎಣಿಸಬೇಡ. ಆತನು ನನಗೆ ಪರಮ ಪ್ರಿಯನೆಂಬುದನ್ನು ದೇಶಕ್ಕೆ ರಾಜನೆಂಬುವುದನ್ನೂ ಮರೆತೀಯೆ. ಸಕಲ ಸದ್ಗುಣಸಂಪನ್ನಳಾದ ನಿನಗೆ ಹೇಳಬೇಕಾದುದೇನು? ಇಹಪರಗಳೆರಡಕ್ಕೂ ಸಾಧಕವಾದ ಧರ್ಮವನ್ನು ಮರೆಯಬೇಡ; ಅಷ್ಟೆ.”

ಶ್ರೀರಾಮನ ನುಡಿಗಳನ್ನು ಕೇಳಿ ಸೀತೆ ಅಳಲಿಲ್ಲ. ಹಲುಬಿ ಹಂಬಲಿಸಲಿಲ್ಲ. ಆ ರಾಜಕುಮಾರಿಗೆ ಗಂಡನು ದಂಡಾಕರಣ್ಯಕ್ಕೆ ಹೋಗುವನೆಂದು ದುಃಖವುಂಟಾಗಲಿಲ್ಲ; ಆತನ ಮಾತುಗಳನ್ನು ಕೇಳಿ ಸ್ವಲ್ಪ ಕೋಪ ಬಂದಿತು. ಶ್ರೀರಾಮನನ್ನು ಕುರಿತು ಹೇಳಿದಳು – “ಕ್ಷತ್ರಿಯ ಕುಮಾರ, ಹೆಂಗಸಾದ ನಾನು ನಗುವಂತಹ ಮಾತುಗಳನ್ನು ರಾಜಪುತ್ರನಾದ ನೀನು ಹೇಳುತ್ತಿರುವೆಯಲ್ಲ! ಪತ್ನಿ ಪತಿಯ ಅರ್ಧಾಂಗಿ. ನಿನಗೆ ವನವಾಸವನ್ನು ವಿಧಿಸಿದ್ದರೆ ಅದನ್ನು ನನಗೂ ವಿಧಿಸಿದಂತೆ ಆಗಲಿಲ್ಲವೆ? ಇಹಪರಗಳಲ್ಲಿ ನೀನೇ ನನಗೆ ಗತಿಮತಿಯಲ್ಲವೆ? ನೀನು ಘೋರವಾದ ಅರಣ್ಯವನ್ನು ಪ್ರವೇಶಿಸುವುದಾದರೆ ನಿನ್ನ ಧರ್ಮಪತ್ನಿಯಾದ ನಾನು ನಿನ್ನ ದಾರಿಗೆ ಅಡ್ಡವಾಗಿರುವ ಮುಳ್ಳುಗಳನ್ನು ಆಯ್ದು ಎತ್ತಿ ಹಾಕುತ್ತಾ ನಿನ್ನ ಮುಂದೆಯೆ ಪ್ರಯಾಣ ಮಾಡುತ್ತೇನೆ. ನಿನ್ನನ್ನುಳಿದು ಉಪ್ಪರಿಗೆಯಲ್ಲಿ ವಾಸಿಸುವುದಕ್ಕಿಂತಲೂ ನಿನ್ನೊಡನೆ ಅರಣ್ಯವಾಸದಲ್ಲಿರುವುದು ನನಗೆ ಅತ್ಯಂತ ಪ್ರಿಯಕರ. ನಿನ್ನಜೊತೆಯಲ್ಲಿರುವಾಗ ಅರಣ್ಯ ನನಗೆ ತೌರುಮನೆಯಂತೆ ಅನಂದದಾಯಕವಾಗಿರುವುದು. ನಿನ್ನ ಸೇವೆಯೆ ನನ್ನ ಪರಮಸೇವೆಯೆ ನನ್ನ ಪರಮಸಂತೋಷ. ಜಗತ್ತನ್ನೆ ರಕ್ಷಿಸಲು ಸಮರ್ಥನಾದ ನೀನು ನಿನ್ನ ಪ್ರಿಯಪತ್ನಿಯನ್ನು ಸಂತರಿಸಲಾರೆಯಾ? ನಾನು ನಿನ್ನೊಡನೆ ಬರುವುದೇ ಸರಿ. ನಿನ್ನನ್ನು ಅಗಲುವುದಾದರೆ ನನಗೆ ಸ್ವರ್ಗವೂ ತ್ಯಾಜ್ಯ; ನಿನ್ನನ್ನು ಅಗಲಿ ನಾನು ಕ್ಷಣಕಾಲವೂ ಜೀವಿಸಲಾರೆ.

ಮಡದಿಯ ಮಾತುಗಳನ್ನು ಕೇಳಿ ಶ್ರೀರಾಮನಿಗೆ ದುಃಖ ಉಕ್ಕಿಬಂತು. ಆ ಪುಟ್ಟಗಾತ್ರದಲ್ಲಿ ಅದೆಷ್ಟು ಪ್ರೇಮ! ಈ ಸುಕುಮಾರಿಗೆ ಅರಣ್ಯವಾಸದ ಕಡುಕಷ್ಟವನ್ನು ತಂದೊಡ್ಡುವುದೆ? ಶ್ರೀರಾಮನು ನೊಂದು ನುಡಿದನು – “ಜಾನಕಿ, ಅರಣ್ಯವೆಂದರೆ ಎಂತಹ ಭಯಂಕರ ಪ್ರದೇಶವೆಂದು ನಿನಗೇನು ಗೊತ್ತು! ಬರಿಯ ಪುಷ್ಪಗಳಿಂದಲೂ ಗಿಡಮರಗಳಿಂದಲೂ ಇಂಪಾದ ಧ್ವನಿಯಿಂದ ಕಲಕಲರವವನ್ನು ಮಾಡುತ್ತಿರು ಹಕ್ಕಿಗಳಿಂದಲೂ ತುಂಬಿ ಕಣ್ಮನಗಳಿಗೆ ಇಂಪನ್ನೀಯುವ ತಾಣವೆಂದು ಭಾವಿಸಿದೆಯೇನು? ಸೀತಾ, ಅರಣ್ಯವು ಕ್ರೂರಮೃಗಗಳಿಂದಲೂ ಭಯಂಕರವಾದ ಸರ್ಪಗಳಿಂದಲೂ ತುಂಬಿ ಅಪಾಯಕೋಟಿಗಳಿಗೆ ಆವಾಸಸ್ಥಾನವಾದುದು. ಹುಲ್ಲೇ ಅಲ್ಲಿ ಹಾಸಿಗೆ; ಮರಗಿಡಗಳೆ ಮಾಳಿಗೆ. ಕಲುಮುಳ್ಳುಗಳಿಂದ ತುಂಬಿದ ಕಾಡುದಾರಿಯಲ್ಲಿ ಪ್ರಯಾಣ ಮಾಡಬೇಕಾಗುವುದು. ಗೆಡ್ಡೆಗೆಣಸುಗಳೊ ಆಹಾರ. ಬಿರುಗಾಳಿ ಮಳೆಗಳಿಂದ ರಕ್ಷಣೆ ದೊರೆಯುವುದೆ ಕಷ್ಟ. ಕುಡಿಯಲು ನೀರಿಲ್ಲದೆಯೆ ಅನೇಕ ದಿನಗಳನ್ನು ಕಳೆಯಬೇಕಾಗುವುದು. ಹೀಗಿರುವುದರಿಂದ ಅರಣ್ಯವಾಸ ನಿನಗೆ ಯೋಗ್ಯವಾದುದಲ್ಲ. ”

ಶ್ರೀರಾಮನು ಏನು ಹೇಳಿದರೂ ಸೀತಾದೇವಿ ಹಿಡಿದ ಪಟ್ಟನ್ನು ಬಿಡಲಿಲ್ಲ. ತನ್ನ ಹೃದಯೇಶ್ವರನಂತಹ ವಿಕ್ರಮಶಾಲಿ ಸಮೀಪದಲ್ಲಿರುವಾಗ ತನಗೆ ಭಯವೆಂದರೇನು? ದೇವೇಂದ್ರನು ಕೂಡ ಆಕೆಯನ್ನು ಹೆದರಿಸಲಾರ. ಅಲ್ಲದೆ ಆಕೆಯ ಬಾಲ್ಯದಲ್ಲಿಯೇ ಒಬ್ಬ ಭಿಕ್ಷುಣಿ ಆಕೆಗೆ ವನವಾಸಯೋಗವುಂಟೆಂದು ಭವಿಷ್ಯನುಡಿದಿದ್ದಳು. ಅದು ಈಗ ಪ್ರಾಪ್ತವಾಗಿದೆ. ಆದ್ದರಿಂದ ತಾನು ಆತನೊಡನೆ ಹೊರಡುವುದೆ ಸರಿ. ಆಕೆ ಹೇಳಿದ ನುಡಿಗಳೆಲ್ಲವೂ ನಿಜವಾಗಿದ್ದರೂ ಶ್ರೀರಾಮನಿಗೆ ಆಕೆಯನ್ನು ಕರೆದುಕೊಂಡು ಹೋಗಲು ಇಷ್ಟವಾಗಲಿಲ್ಲ. ಅದನ್ನು ಕಂಡು ಸೀತೆಗೆ ಮುನಿಸು ಉರಿಯಿತು. ಗಂಡನನ್ನು ಕುರಿತು “ಏನು ಅನ್ಯಾಯವಿದು? ನೀನು ಆಕಾರದಲ್ಲಿ ನಮ್ಮ ತಂದೆ ನನ್ನನ್ನು ನಿನಗೆ ವಿಆಹ ಮಾಡಿಕೊಟ್ಟನೆಂದು ಕಾಣುತ್ತದೆ. ಅಯೋನಿಜೆಯಾದ ನನ್ನನ್ನು, ನಾರಾಯಣಾಂಶನೆಂದು ಭಾವಿಸಿ ನಿನಗೆ ಧಾರೆಯೆರೆದು ಕೊಟ್ಟನಲ್ಲ! ನಿನ್ನಲ್ಲಿರುವುದು ಬರಿಯ ದೇಹ ಸೌಂದರ್ಯವೆ ಹೊರತು ಪೌರುಷವೇನೂ ಇಲ್ಲವೆಂದು ತೋರುತ್ತದೆ. ಧರ್ಮಪತ್ನಿಯಾದ ನನ್ನನ್ನು ಜಾಯಾಜೀವಿಯಂತೆ ಪರರ ಪಾಲು ಮಾಡಿ ಹೋಗಬೇಡಿ. ಇದು ನಿನಗೆ ತಕ್ಕುದಲ್ಲ. ನೀನು ಕಾಡಿನಲ್ಲಿ ಕಷ್ಟಪಡುವುದಾದರೆ ನಾನೂ ಸಂತೋಷದಿಂದ ಆ ಕಷ್ಟಗಳನ್ನು ಸಹಿಸುತ್ತೇನೆ. ಪತಿವ್ರತೆಯಾದ ನನಗೆ ನಿನ್ನೊಡನಿರುವುದೆ ಸ್ವರ್ಗ; ನಿನ್ನಿಂದ ಅಗಲುವುದೆ ನರಕ. ದೃಢಮನಸ್ಕಳಾದ ನನ್ನ ಪ್ರಾರ್ಥನೆಯನ್ನು ನೀನು ನಿರಾಕರಿಸುವುದಾದರೆ ನಾನು ವಿಷಪ್ರಾಶನದಿಂದಲೊ, ನೀರಿನಲ್ಲಿ ಮುಳಗುವುದರಿಂದಲೊ ಪ್ರಾಣತ್ಯಾಗ ಮಾಡುತ್ತೇನೆ” ಎಂದು ಕಡಿತುಂಡಾಗಿ ನುಡಿದುಬಿಟ್ಟಳು. ಆಕೆಯ ಮಾತುಗಳಿಂದ ಶ್ರೀರಾಮನ ನಿಶ್ಚಯ ಕದಲಿಹೋಯಿತು. ಆಕೆಯನ್ನು ತನ್ನೊಡನೆ ಕರೆದೊಯ್ಯಲು ಒಪ್ಪಿಕೊಂಡನು.

ಸೀತೆಯ ಅರಣ್ಯಗಮನಕ್ಕೆ ಅಣ್ಣನು ಅನುಮತಿಯಿತ್ತುದನ್ನು ಕಂಡು ಲಕ್ಷ್ಮಣನು ಅನುಮತಿ ಬೇಡಿದನು. “ಅಣ್ಣಾ, ನೀನೆಲ್ಲಿಯೊ ನಾನಲ್ಲಿ. ಸುಖದಲ್ಲಿ ಪಾಲುಗಾರನಾದ ನಾನು ಕಷ್ಟದಲ್ಲಿ ಬೇಡವೆ? ನೀನು ಸೀತಾ ಮಾತೆಯೊಡನೆ ಅರಣ್ಯ ಸಂಚಾರಕ್ಕೆ ಹೊರಟಾಗ ನಾನು ಪೊದೆಗಳನ್ನು ಸವರಿ ನಿಮಗೆ ದಾರಿಮಾಡಿಕೊಡುತ್ತೇನೆ; ತಂಗಲು ತಾಣಗಳನ್ನು ಸಿದ್ದ ಮಾಡಿಕೊಡುತ್ತೇನೆ; ಕಂದಮೂಲ ಫಲಗಳನ್ನು ತಂದುಕೊಡುತ್ತೇನೆ. ನೀವು ಮಲಗಿ ನಿದ್ರಿಸುತ್ತಿರುವಾಗ ಜಾಗರೂಕತೆಯಿಂದ ಕಾವಲು ಕಾಯುತ್ತೇನೆ; ಹೆಂಡತಿಯೊಡನೆ ಹೊರಡುವ ನಿನಗೆ ನನ್ನ ಸೇವೆ ಅಗತ್ಯವಾಗಿಯೂ ಬೇಕು” ಎಂದು ಹೇಳಿದನು. ಶ್ರೀರಾಮನು ಅವನ ಮಾತಿಗೆ ಒಡನೆಯೆ ಒಪ್ಪದಿದ್ದರೂ ಮತ್ತೆ ಮತ್ತೆ ಆ ಮಾತುಗಳನ್ನು ಹೇಳಲು ಒಪ್ಪಿಕೊಂಡನು. “ವತ್ಸಾ, ಲಕ್ಷ್ಮಣ, ಒಡನೆಯೆ ಹೋಗಿ ಪ್ರಿಯ ಜನರೆಲ್ಲರಿಗೂ ಈ ವಿಚಾರವನ್ನು ತಿಳಿಸಿ ಬಾ. ಕುಲಗುರುಗಳಾದ ವಸಿಷ್ಠರ ಮನೆಯಲ್ಲಿರುವ ನಮ್ಮ ದಿವ್ಯಧನಸ್ಸುಗಳನ್ನೂ ಅಭೇಧ್ಯ ಕವಚಗಳನ್ನೂ ಅಕ್ಷಯನಿಷಂಗವನ್ನೂ ಕೊಂಡು ಬಾ” ಎಂದು ಹೇಳಿದನು. ಆ ಕ್ಷಣದಲ್ಲಿಯೆ ಲಕ್ಷ್ಮಣನು ಅಣ್ಣನ ಆಣತಿಯ ಎಲ್ಲ ಕಾರ್ಯವನ್ನೂ ನೆರವೇರಿಸಿ ಅವನೊಡನೆ ಅರಣ್ಯಕ್ಕೆ ಹೊರಡಲು ಸಿದ್ಧವಾದನು.

* * *

� VP;o0Z �Y :Tunga;mso-ascii-font-family:”Times New Roman”; mso-hansi-font-family:”Times New Roman”‘>ಮಂಗಳವುಂಟಾಯಿತೋ ಆ ಮಂಗಳ ನಿನಗೆ ಲಭಿಸಲು. ಅಮೃತವನ್ನು ಅಪೇಕ್ಷಿಸಿದ ಗರುಡನಿಗೆ ಆತನ ತಾಯಿಯಾದ ವಿನುತೆ ಯಾವ ಮಂಗಳವನ್ನುಕೋರಿದಳೊ ಆ ಮಂಗಳ ನಿನಗುಂಟಾಗಲಿ. ಅಮೃತಾಸ್ವಾದದ ಸಮಯದಲ್ಲಿ ರಾಕ್ಷಸರನ್ನೆಲ್ಲಾ ಸಂಹರಿಸಿದ ದೇವೇಂದ್ರನಿಗೆ ಆತನ ತಾಯಿಯಾದ ಅದಿತಿ ಯಾವ ಮಂಗಳವನ್ನು ಕೋರಿದಳೊ ಆ ಮಂಗಳ ನಿನಗೆ ಸಂಭವಿಸಲಿ. ಅರಣ್ಯವಾಸದಲ್ಲಿರುವಾಗ ಯಾವುದೊಂದು ಈತಿ ಬಾಧೆಯೂ ಇಲ್ಲದಂತೆ ಸುಕ್ಷೇಮವಾಗಿದ್ದು ಹಿಂದಿರುಗು. ಹೀಮದಿರುಗಿ ಬಂದ ನಿನ್ನನ್ನು ನೂತನವಾಗಿ ಉದಿಸಿದ ಚಂದ್ರನನ್ನು ಕಾಣುವಂತೆ ಆನಂದದಿಂದ ಕಾಣುತ್ತೇನೆ.” ಇಂತು ಹರಸಿ, ಮಗನಿಗೆ ಮಂಗಳವುಂಟಾಗಲೆಂದು ಆಕೆ ಮತ್ತೆ ದೇವತೆಗಳಿಗೆ ಭಕ್ತಿಯಿಂದ ನಮಸ್ಕರಿಸಿದಳು.

 

ತಾಯಿಯಿಂದ ಆಶೀರ್ವಾದ ಪಡೆದ ಶ್ರೀರಾಮನು ಆಕೆಗೆ ದೀರ್ಘದಂಡ ನಮಸ್ಕಾರಮಾಡಿ ಅಲ್ಲಿಂದ ತೆರಳಿದನು. ಸೀತೆಯ ಅಂತಃಪುರಕ್ಕಾಗಿ.

* * *