ಕೈಕೆಯ ಅಂತಃಪುರದ ಬಾಗಿಲಿನ ಬಳಿಯಲ್ಲಿಯೆ ಲಕ್ಷ್ಮಣನು ನಿಂತಿದ್ದನು. ಶ್ರೀರಾಮನು ಮುಗುಳ್ನಗೆಯಿಂದ ಆತನನ್ನು ಆದರಿಸುತ್ತಾ ಕೌಸಲ್ಯೆಯ ಅಂತಃಪುರಕ್ಕೆ ಆತನೊಡನೆ ಬಂದನು. ಅವರು ಅಂತಃಪುರವನ್ನು ಪ್ರವೇಶಿಸಿದಾಗ ಕೌಸಲ್ಯಾದೇವಿ ಮಗನ ಶ್ರೇಯಸ್ಸನ್ನು ಕೋರುತ್ತಾ ದೇವತಾ ಪ್ರಾರ್ಥನೆಯಲ್ಲಿ ತೊಡಗಿದ್ದಳು. ಮಗನನ್ನು ಕಾಣುತ್ತಲೆ ಆಕೆ ಹೆಣ್ಣು ಕುದುರೆ ಮರಿಯ ಬಳಿಗೆ ಧಾವಿಸುವಂತೆ ಶೀಘ್ರವಾಗಿ ಆತನ ಬಳಿ ಸಾರಿ ಆತನನ್ನು ಆಲಿಂಗಿಸಿಕೊಂಡಳು; ನೆತ್ತಿ ಮೂಸಿದಳು. ಮತ್ತೆ ಆತನನ್ನು ಕುರಿತು “ರಘುವಂಶದ ರಾಜರ್ಷಿಗಳಂತೆ ನೀನು ಕೀರ್ತಿಶಾಲಿಯಾಗಿ ಚಿರಾಯುವಾಗು. ಸತ್ಯಪ್ರತಿಜ್ಞನಾದ ಮಹಾರಾಜನು ಇಂದು ನಿನ್ನನ್ನು ಯುವರಾಜಪಟ್ಟದಲ್ಲಿ ಕುಳ್ಳಿರಿಸುವವನು” ಎಂದು ಹೇಳಿ ಆತನನ್ನು ರತ್ನಖಚಿತವಾದ ಆಸನದಲ್ಲಿ ಕುಳ್ಳಿರಿಸಿ ಭೋಜನಕ್ಕೆ ಸಿದ್ಧಪಡಿಸಿದಳು. ತಾಯಿಯ ಸಂಭ್ರಮವನ್ನು ಕಂಡ ಶ್ರೀರಾಮನು ನಾಚಿಕೆಯಿಂದ ತಲೆತಗ್ಗಿಸಿದವನಾಗಿ ಆಕೆಯನ್ನು ಕುರಿತು “ಅಮ್ಮಾ, ಈಗ ಪ್ರಾಪ್ತವಾಗಿರುವ ಮಹಾಭಯವನ್ನು ನೀನರಿಯೆ; ಮಾತೆಯಾದ ನಿನಗೂ ಪ್ರಿಯೆಯಾದ ಸೀತೆಗೂ ಅಣುಗುದಮ್ಮನಾದ ಲಕ್ಷ್ಮಣನಿಗೂ ಬಹು ವ್ಯಸನವನ್ನುಂಟುಮಾಡುವಂತಹ ಸುದ್ದಿಯೊಂದನ್ನು ನಾನು ಹೇಳಬೇಕಾಗಿದೆ. ಕೇಳು, ನಾನು ಈ ದಿನವೇ ದಂಡಕಾರಣ್ಯಕ್ಕೆ ತೆರಳಬೇಕಾಗಿದೆ. ಅಂತಹ ನನಗೆ ಈ ರತ್ನಖಚಿತವಾದ ಪೀಠವೇತಕ್ಕೆ? ನನಗೆ ಇನ್ನು ಮೇಲೆ ದರ್ಭಾಸನವೆ ಆಸನ. ಈ ಷಡ್ರಸೋಪೇತವಾದ ಆಹಾರವೇತಕ್ಕೆ? ನನಗೇನಿದ್ದರೂ ಕಂದಮೂಲ ಫಲಗಳೆ ಆಹಾರ. ನಾನು ಹದಿನಾಲ್ಕು ವರ್ಷಗಳ ಕಾಲ ವನವಾಸವನ್ನು ಕೈಗೊಳ್ಳಬೇಕೆಂದೂ ನನ್ನ ತಮ್ಮನಾದ ಭರತನು ಪಟ್ಟಾಭಿಷಿಕ್ತನಾಗಬೇಕೆಂದೂ ತಂದೆ ವಿಧಿಸಿರುವನು” ಎಂದು ಹೇಳಿದನು. ಮಗನ ಮಾತುಗಳನ್ನು ಕೇಳಿ ಕೌಸಲ್ಯಾದೇವಿ ಬುಡಕಡಿದ ಬಾಳೆಯ ಮರದಂತೆ ಮೂರ್ಛಿತಳಾಗಿ ನೆಲಕ್ಕೆ ಬಿದ್ದಳು. ಶ್ರೀರಾಮನು ಆಕೆಯನ್ನು ಉಪಚರಿಸಿ ಮೇಲಕ್ಕೆಬ್ಬಿಸಿದನು.

ಮೂರ್ಛೆಯಿಂದ ಎಚ್ಚೆತ್ತ ಕೌಸಲ್ಯೆ ತನ್ನ ಮಗನ ದುರ್ದೆಶೆಗಾಗಿ ಹಲುಬಿ ಹಂಬಲಿಸಿ ಗೋಳಿಟ್ಟಳು. “ಮಗೂ, ನೀನು ನನ್ನ ಹೊಟ್ಟೆಯಲ್ಲೇಕೆ ಹು‌ಟ್ಟಿದೆ? ನಾನು ಬಂಜೆಯಾಗಿದ್ದರೆ ಈ ದಾರುಣ ದುಃಖವಾದರೂ ತಪ್ಪುತ್ತಿತ್ತು. ನಾನು ನಿನ್ನನ್ನು ಹೆತ್ತುದು ಈ ದುಃಖವನ್ನು ನೋಡುವುದಕ್ಕಾಗಿಯೆ ಏನು? ನನ್ನ ಬಾಳೆಲ್ಲವೂ ಬರಿಯ ದುಃಖವೆ ಆದಂತಾಯಿತು. ಪತಿಪ್ರೇಮದಿಂದ ವಂಚಿತಳಾಗಿದ್ದ ನಾನು ಮಗನ ದೆಸೆಯಿಂದಲಾದರೂ ಸುಖವನ್ನು ಕಂಡೇನೆಂದುಕೊಂಡಿದ್ದೆ. ಹೆಸರಿಗೆ ನಾನೊಬ್ಬ ಪಟ್ಟದ ರಾಣಿ. ಆದರೆ ನನಗೆ ದೊರೆಯುತ್ತಿರುವುದು ಬರಿಯ ತಿರಸ್ಕಾರವೊಂದೇ. ಸರ್ವ ಲೋಕಪ್ರಿಯನಾದ ನೀನು ನನ್ನ ಸಮೀಪದಲ್ಲಿರುವಾಗಲೆ ನನ್ನ ಸ್ಥಿತಿ ಹೀಗಿರುವಾಗ ನೀನು ಅರಣ್ಯಕ್ಕೆ ತೆರಳಿದ ಮೇಲೆ ನನ್ನ ಗತಿಯೇನು? ಬಹುಶಃ ಕೈಕೆಯ ದಾಸಿಯರಿಗಿಂತಲೂ ನಾನು ಕೀಳಾಗಿ ಹೋಗುತ್ತನೆಂದು ತೋರುತ್ತದೆ. ಮೊದಲೆ ಕಾಲಕಸದಂತಿದ್ದ ನಾನು ಕೈಕೆಯ ಮಗನು ಪಟ್ಟಕ್ಕೆ ಬಂದ ಮೇಲೆ ಇನ್ನೆಂತಹ ಅಪವಾದಕ್ಕೆ ಗುರಿಯಾಗಬೇಕೊ! ಹೀಗೆ ನಿರ್ಭಾಗ್ಯಳಾಗಿ ಬಾಳುವುದಕ್ಕಿಂತ ಮರಣ ಎಷ್ಟೋ ಮೇಲು. ಹಾಳು ಆ ಯಮನಿಗೂ ನಾನು ಬೇಡದವಳಾಗಿರುವೆನೆನೊ! ನನಗೆ ಯಮಸದನದಲ್ಲಿ ಎಡೆಯೇ ಇಲ್ಲವೊ! ನಾನು ನಡೆಸಿದ ದಾನಧರ್ಮಗಳೂ ಮಾಡಿದ ಪೂಜೆಪುರಸ್ಕಾರಗಳೂ ಊಷರಕ್ಷೇತ್ರದಲ್ಲಿ ಬಿತ್ತಿದ ಬೀಜದಂತೆ ವ್ಯಥವಾದುವೆಂದು ತೋರುತ್ತವೆ. ಸಾವು ಸ್ವೇಚ್ಛೆಯಿಂದ ಬರುವಂತಿದ್ದರೆ ನಾನೀಗಲೆ ಸಂತೋಷದಿಂದ ಅದನ್ನು ಆಲಿಂಗಿಸುತ್ತಿದ್ದೆ. ನನಗೀಗ ಉಳಿದಿರುವುದು ಒಂದೇ ಮಾರ್ಗ. ಕರುವಿನ ಮೇಲಿನ ವಾತ್ಸಲ್ಯಯದಿಂದ ಹಸು ಅದನ್ನನುಸರಿಸುವಂತೆ ನಾನು ನಿನ್ನನ್ನು ಅನುಸರಿಸಿ ಅರಣ್ಯಕ್ಕೆ ಹೊರಟು ಬರುತ್ತೇನೆ. ನನ್ನನ್ನೂ ನಿನ್ನ ಜೊತೆಯಲ್ಲಿ ಕರೆದುಕೊಂಡು ಹೋಗು” ಎಂದು ಕಂಬನಿಗರೆಯುತ್ತಾ ಹಂಬಲಿಸಿದಳು.

ಕೌಸಲ್ಯಾದೇವಿಯ ರೋದನವನ್ನು ಆಲಿಸುತ್ತ ನಿಂತಿದ್ದ ಲಕ್ಷ್ಮಣನಿಗೆ ಕೋಪದುರಿ ಕೆರಳಿತು. ಆತನು ಆಕೆಯನ್ನು ಕುರಿತು “ಅಮ್ಮಾ, ಹೆಂಗಸಿನ ಮಾತಿಗೆ ಒಳಗಾಗಿ ಅಣ್ಣನು ರಾಜ್ಯತ್ಯಾಗ ಮಾಡುತ್ತಿರುವುದು ನನಗೆ ಸರ್ವಥಾ ಸಮ್ಮತವಿಲ್ಲ. ವೃದ್ಧನಾದ ತಂದೆ ಕಾಮುಕನಾಗಿ ಅಕಾರ್ಯಕ್ಕೆ ಕೈಹಾಕಿದ್ದಾನೆ. ಆತನು ಹೇಳುವ ಮಾತಿಗೆ ಬೆಲೆಯುಂಟೆ?” ಎಂದು ಹೇಳಿದನು. ಅನಂತರ ಅವನು ಶ್ರೀರಾಮನ ಕಡೆ ತಿರುಗಿ “ಅಣ್ಣಾ ಕಾಮುಕನಾದ ತಂದ ಅಧರ್ಮಕ್ಕೆ ಕೈಹಾಕಿರುವುದರಿಂದ ಆತನನ್ನು ಕೊಂದು ಹಾಕಿಬಿಡುತ್ತೇನೆ. ದೇವತಾಸದೃಶನಾದ ನಿನ್ನನ್ನು ತ್ಯಜಿಸುತ್ತಿರುವ ತಂದೆಗೆ ಬುದ್ಧಿ ಸ್ವಾಧೀನದಲ್ಲಿದೆಯೆ? ರಾಜನೀತಿಯನ್ನು ತಿಳಿದ ನೀನು ಈ ಅವಿವೇಕಕ್ಕೆ ಆಸ್ಪದ ಕೊಡಬೇಡ. ಇಗೋ, ಈಗಲೆ ರಾಜ್ಯವನ್ನು ನಿನ್ನ ಸ್ವಾಧೀನಕ್ಕೆ ತೆಗೆದುಕೊ. ಧನುರ್ಧಾರಿಯಾದ ನಾನು ನಿನ್ನ ಪಾರ್ಶ್ವದಲ್ಲಿ ನಿಂತು ಎದುರಾದವರನ್ನು ಯಮಾಲಯಕ್ಕೆ ಕಳುಹುತ್ತೇನೆ. ಭರತನ ಪಕ್ಷವನ್ನು ವಹಿಸುವವರೆಲ್ಲರೂ ಇಂದು ಪತನವಾಗಿಹೋಗಲಿ. ಕಾರ್ಯಾಕಾರ್ಯಗಳನ್ನು ಅರಿಯದ ದಶರಥ ಮಹಾರಾಜನು ದಂಡನಾರ್ಹನಾಗಿದ್ದಾನೆ. ನನ್ನನ್ನೂ ನಿನ್ನನ್ನೂ ಎದುರಿಸಿ ಕೈಕೆಗೆ ಆತನು ಹೇಗೆ ರಾಜ್ಯವನ್ನು ಒಪ್ಪಿಸಿಕೊಡುವನೊ ನೋಡಿಯೆ ಬಿಡುತ್ತೇನೆ” ಎಂದು ಗರ್ಜಿಸಿದನು.

ಕೌಸಲ್ಯಾದೇವಿಗೆ ಲಕ್ಷ್ಮಣನ ಮಾತುಗಳು ಬಹು ಹಿತಕರವಾಗಿ ತೋರಿದುವು. ಆಕೆ ಲಕ್ಷ್ಮಣನ ವಾಗ್ಧೋರಣೆಯನ್ನೆ ಅನುಸರಿಸಿ “ವತ್ಸಾ, ರಾಮಚಂದ್ರ, ಲಕ್ಷ್ಮಣನ ಮಾತುಗಳನ್ನು ಕೇಳಿದೆಯಷ್ಟೆ? ನೀನೀಗ ಏನು ಹೇಳುವೆ? ನಿನಗೆ ಮಹಾರಾಜನ ಮಾತು ಹೇಗೆ ಸೇವ್ಯವೋ ಹಾಗೆಯೆ ನನ್ನ ನುಡಿಗಳೂ ಮಾನ್ಯವಾದುವೇ. ನಾನೀಗ ನಿನಗೆ ಹೇಳುತ್ತಿದ್ದೇನೆ – ನೀನು ನನ್ನನ್ನು ತೊರೆದು ಹೋದರೆ ನಾನು ಪ್ರಾಯೋಪವೇಶವನ್ನಾದರೂ ಮಾಡಿ ಪ್ರಾಣತ್ಯಾಗ ಮಾಡುತ್ತೇನೆ. ನೀನು ಮಾತೃಹತ್ಯಾದೋಷಕ್ಕೆ ಗುರಿಯಾಗುವೆ” ಎಂದು ಹೇಳಿದಳು.

ಯಾರು ಏನು ಹೇಳಿದರೂ ಮಂದರಧೀರನಾದ ಶ್ರೀರಾನ ದೃಢಮನಸ್ಸು ಕದಲಲಿಲ್ಲ. ಆತನ ನಿಶ್ಚಯ ನಿಶ್ಚಲವಾದುದು. ಅಮೃತವರ್ಷದಂತಿರುವ ಮಾತುಗಳಿಂದ ತಾಯಿಗೆ ಸಮಾಧಾನ ಹೇಳಿದನು; “ಅಮ್ಮಾ, ಪಿತೃವಾಕ್ಯ ಪರಿಪಾಲನೆ ಬಹು ದೊಡ್ಡ ಧರ್ಮ. ಆ ಧರ್ಮದಿಂದ ಅತ್ಯಲ್ಪವಾದ ಚ್ಯುತಿಯೂ ಆಶ್ರೇಯಸ್ಕರ. ಆದುದರಿಂದ ತಂದೆಯ ಅಣತಿಯಂತೆ ನಾನು ಅರಣ್ಯಕ್ಕೆ ಹೊರಡುವುದೇ ಸರಿ. ನೀನು ಬಾಯ್ತುಂಬ ಹರಸಿ ನನ್ನನ್ನು ಅರಣ್ಯಕ್ಕೆ ಕಳುಹುವವಳಾಗು. ಸ್ವರ್ಗಚ್ಯುತನಾದ ಯಯಾತಿ ಪುನಃ ಸ್ವರ್ಗವನ್ನು ಸೇರಿದಂತೆ ನಾನು ಪುನಃ ಅಯೋಧ್ಯೆಗೆ ಹಿಂದಿರುಗುತ್ತೇನೆ ನಾನಾಗಲಿ ನೀನಾಗಲಿ ಹಿರಿಯನಾದ ತಂದೆಯ ಆಜ್ಞೆಯಂತೆ ನಡೆದುಕೊಳ್ಳಬೇಕು. ನ್ಯಾಯವೊ ಅನ್ಯಾಯವೊ, ತಂದೆ ಆಜ್ಞೆ ವಿಧೇಯವಾದುದು. ಅದನ್ನು ನಡಸದವನು ಘಾತುಕನಾಗುತ್ತಾನೆ. ನನ್ನಂತೆಯೆ ಲಕ್ಷ್ಮಣನಾದರೂ ತಂದೆಯ ಆಜ್ಞೆಯನ್ನು ಮನ್ನಿಸಬೇಕೆ ಹೊರತು ವಿರೋಧಿಸಬಾರದು. ನಮ್ಮೆಲ್ಲರಿಗೂ ಆತನೆ ಗತಿ. ಮತಿ. ತಂದೆ ಜೀವಂತನಾಗಿರುವಾಗ ನೀನು ಪತಿವಿಹೀನೆತಂತೆ ನನ್ನೊಡನೆ ಹೊರಡಲು ಯತ್ನಿಸುವುದು ಸ್ವಲ್ಪವೂ ಯುಕ್ತವಲ್ಲ. ಪತಿಯನ್ನು ನೆರಳಿನಂತೆ ಅನುಸರಿಸುವುದೆ ಸತಿಯಾದವಳ ಕರ್ತವ್ಯ. ನಾನು ವನವಾಸಿಯಾಗಿ, ನೀನೂ ಆತನನ್ನು ನೀಚಕಾರ್ಯವನ್ನು ನೀನೆಂದಿಗೂಕೈಗೊಳ್ಳಬೇಡ. ಆತನು ಜೀವಂತನಾಗಿರುವ ವರೆಗೂ ಆತನ ಶುಶ್ರೂಷೆಯಲ್ಲಿ ತೊಡಗಿರುವುದೆ ನಿನಗೆ ಪರಮಧರ್ಮ.

ಅನಂತರ ಶ್ರೀರಾಮನು ಲಕ್ಷ್ಮಣನ ಕಡೆಗೆ ತಿರುಗಿದನು. ಆತನು ಮಾನವ ಪ್ರಯತ್ನವನ್ನು ಪುರಸ್ಕರಿಸತಕ್ಕವನು. ಧರ್ಮವೆಂಬುದು ದುರ್ಬಲರ ಆಸ್ತ್ರವೆಂದು ಆತನ ಭಾವನೆ. ಹೆಡೆ ಮೆಟ್ಟಿದ ಸರ್ಪದಂತೆ ಆತನು ಬುಸುಗುಟ್ಟುತ್ತಾ ಶ್ರೀರಾಮನನ್ನು ಧರ್ಮಮೋಹಿತನೆಂದು ನಿಂದಿಸಿದನು. ಕ್ಷತ್ರಿಯ ಧರ್ಮವನ್ನು ಗಾಳಿಗೆ ತೂರಬೇಡವೆಂದು ಆತನಿಗೆ ಬುದ್ದಿ ಹೇಳಿದನು. ಆತನ ಮಾತುಗಳನ್ನು ಕೇಳಿ ಶ್ರೀರಾಮನ ಕಣ್ಣು ಕಂಬನಿದುಂಬಿದುವು. “ವತ್ಸ, ಲಕ್ಷ್ಮಣ, ಈಗ ನಡೆದಿರುವ ಕಾರ್ಯ ದೈವಿಕವಲ್ಲದೆ ಮತ್ತೇನು? ನಾವು ನಿಶ್ಚಯಿಸಲಾಗದ ಮೇಲೆ ನಮ್ಮ ಪುರುಷಪ್ರಯತ್ನದಿಂದ ಏನು ಪ್ರಯೋಜನ? ನಾನು ಹೇಳುವುದೊಂದೆ – ನಾನು ಜನಕನಾಜ್ಞೆಗೆ ಒಳಗಾಗಿದ್ದೇನೆ. ಹೀಗಿರುವುದೆ ಧರ್ಮ” ಎಂದನು.

ಶ್ರೀರಾಮನ ವಚನಾಮೃತದಿಂದ ಕೌಸಲ್ಯಾದೇವಿಗೆ ಎಷ್ಟೋ ಸಮಾಧಾನ ಆದಂತಾಯಿತು. ಆಕೆ ಮಗನ ವನಪ್ರಯಾಣಕ್ಕೆ ಸಮ್ಮತಿಸಿ ಆತನನ್ನು ಬಾಯ್ತುಂಬ ಹರಸಿದಳು: “ಮಗು ರಾಮಚಂದ್ರನ, ಪ್ರಯಾಣೋನ್ಮುಖನಾಗಿರುವ ನಿನ್ನನ್ನು ತಡೆಯಬಾರದು. ವನಕ್ಕೆ ಹೋಗಿ ಬೇಗ ಹಿಂದಿರುಗುವವನಾಗು. ನೀನು ಆಚರಿಸುತ್ತಿರುವ ನಿನ್ನ ಧರ್ಮವೆ ನಿನ್ನನ್ನು ಕಾಪಾಡಲಿ. ಬ್ರಹ್ಮಾಂಡದಲ್ಲಿರುವ ಚರಾಚರಾತ್ಮಕವಾದ ಸಮಸ್ತ ಸೃಷ್ಟಿಯೂ ನಿನಗೆ ಸನ್ಮಂಗಳವನ್ನುಂಟುಮಾಡಲಿ. ದೇವತೆಗಳೂ ಗ್ರಹತಾರೆಗಳೂ ಮಹರ್ಷಿಗಳೂ ನಿನಗೆ ಸನ್ಮಂಗಳನ್ನುಂಟುಮಾಡಲಿ. ವೃತ್ರಾಸುರನ ಸಂಹಾರಕಾಲದಲ್ಲಿ ದೇವವಂದಿತನಾದ ಸಹಸ್ರಾಕ್ಷನಿಗೆ ಯಾವ ಮಂಗಳವುಂಟಾಯಿತೋ ಆ ಮಂಗಳ ನಿನಗೆ ಲಭಿಸಲು. ಅಮೃತವನ್ನು ಅಪೇಕ್ಷಿಸಿದ ಗರುಡನಿಗೆ ಆತನ ತಾಯಿಯಾದ ವಿನುತೆ ಯಾವ ಮಂಗಳವನ್ನುಕೋರಿದಳೊ ಆ ಮಂಗಳ ನಿನಗುಂಟಾಗಲಿ. ಅಮೃತಾಸ್ವಾದದ ಸಮಯದಲ್ಲಿ ರಾಕ್ಷಸರನ್ನೆಲ್ಲಾ ಸಂಹರಿಸಿದ ದೇವೇಂದ್ರನಿಗೆ ಆತನ ತಾಯಿಯಾದ ಅದಿತಿ ಯಾವ ಮಂಗಳವನ್ನು ಕೋರಿದಳೊ ಆ ಮಂಗಳ ನಿನಗೆ ಸಂಭವಿಸಲಿ. ಅರಣ್ಯವಾಸದಲ್ಲಿರುವಾಗ ಯಾವುದೊಂದು ಈತಿ ಬಾಧೆಯೂ ಇಲ್ಲದಂತೆ ಸುಕ್ಷೇಮವಾಗಿದ್ದು ಹಿಂದಿರುಗು. ಹೀಮದಿರುಗಿ ಬಂದ ನಿನ್ನನ್ನು ನೂತನವಾಗಿ ಉದಿಸಿದ ಚಂದ್ರನನ್ನು ಕಾಣುವಂತೆ ಆನಂದದಿಂದ ಕಾಣುತ್ತೇನೆ.” ಇಂತು ಹರಸಿ, ಮಗನಿಗೆ ಮಂಗಳವುಂಟಾಗಲೆಂದು ಆಕೆ ಮತ್ತೆ ದೇವತೆಗಳಿಗೆ ಭಕ್ತಿಯಿಂದ ನಮಸ್ಕರಿಸಿದಳು.

ತಾಯಿಯಿಂದ ಆಶೀರ್ವಾದ ಪಡೆದ ಶ್ರೀರಾಮನು ಆಕೆಗೆ ದೀರ್ಘದಂಡ ನಮಸ್ಕಾರಮಾಡಿ ಅಲ್ಲಿಂದ ತೆರಳಿದನು. ಸೀತೆಯ ಅಂತಃಪುರಕ್ಕಾಗಿ.

* * *