ಬೆಳ್ಳಗೆ ಬೆಳಗಾಯಿತು. ಅಯೋಧ್ಯೆಯಲ್ಲವೊ ಶ್ರೀರಾಮಪಟ್ಟಾಭಿಷೇಕದ ಸಂಭ್ರಮದಲ್ಲಿ ತುಂಬಿಹೋಗಿದೆ. ಬೀದಿಗಳಿಗೆಲ್ಲಾ ಪನ್ನೀರು ಚೆಲ್ಲಿ, ಪುಷ್ಪಗಳನ್ನು ಹರಡಿದ್ದಾರೆ. ಮನೆಮನೆಯ ಬಾಗಿಲುಗಳೂ ಹೂವಿನ ಹಾರಗಳಿಂದ ಅಲಂಕೃತವಾಗಿವೆ. ಅಲ್ಲಲ್ಲಿ ಬಾವುಟಗಳನ್ನು ಎತ್ತಿಕೊಟ್ಟಿದ್ದಾರೆ. ಜನರು ವಸ್ತ್ರಾಭರಣಗಳಿಂದ ಅಲಂಕೃತರಾಗಿ ಸಡಗರದಿಂದ ಬೀದಿಗಳಲ್ಲಿ ಓಡಾಡುತ್ತಿದ್ದಾರೆ. ಊರಲ್ಲಿ ಎಲ್ಲಿ ನೋಡಿದರೂ ಮಂಗಳವಾದ್ಯಗಳು ಭೋರ್ಗರೆಯುತ್ತಿವೆ. ವಸಿಷ್ಠಮಹರ್ಷಿಗಳು ತಮ್ಮ ಶಿಷ್ಯರೊಡಗೂಡಿ ಪಟಾಭಿಷೇಕ ಸಾಮಗ್ರಿಗಳನ್ನು ತೆಗೆಸಿಕೊಂಡು ಅರಮನೆಯನ್ನು ಪ್ರವೇಶಿಸುತ್ತಾ ಅಲ್ಲಿದ್ದ ಸುಮಂತ್ರನನ್ನು ಕುರಿತು “ಅಯ್ಯಾ, ಸಮಸ್ತವೂ ಸಿದ್ಧವಾಗಿದೆಯೆಂದು ಹೇಳಿ ಮಹಾರಾಜನನ್ನು ತ್ವರೆಗೊಳಿಸು” ಎಂದು ಹೇಳಿದರು. ಸುಮಂತ್ರನು ಒಡನೆಯೆ ರಾಜನ ಅಂತಃಪುರವನ್ನು ಪ್ರವೇಶಿಸಿ, ಆತನನ್ನು ಎಚ್ಚರಗೊಳಿಸುವುದಕ್ಕಾಗಿ ಎಂದಿನಂತೆ ಪ್ರಾತಃಕಾಲದ ಮಂಗಳಾಶಾಸನವನ್ನು ಘೋಷಿಸಲು ಆರಂಭಿಸಿದನು. ಅದನ್ನು ಕೇಳಿ ದಶರಥನಿಗೆ ಗಾಯದ ಮೇಲೆ ಬರೆ ಎಳೆದಂತಾಯಿತು. ಅತ್ತು ಅತ್ತು ಕೆಂಪಾಗಿದ್ದ ಕಣ್ಣುಗಳಿಂದ ಅವನನ್ನು ಕೆಕ್ಕರಿಸಿ ನೋಡುತ್ತಾ “ಅಯ್ಯಾ, ಸುಮಂತ್ರ ಸಂಕಟದಿಂದ ಪರಿತಪಿಸುತ್ತಿರುವ ನನಗೆ ನಿನ್ನ ಮೂದಲೆ ಬೇರೆ ಸಾಲದಾಗಿತ್ತೆ?” ಎಂದನು. ಆ ಮಾತನ್ನು ಕೇಳಿ ಸುಮಂತ್ರನಿಗೆ ಜಂಘಾಬಲವೆ ಉಡುಗಿ ಹೋದಂತಾಯಿತು. ಮರುಮಾತಾಡದೆ ಅಲ್ಲಿಂದ ಹಿಂದಿರುಗಿದನು. ಆದರೆ ಕೈಕೆ ಅವನನ್ನು ಹಿಂದಕ್ಕೆ ಕರೆದು, “ಎಲೈ ಸುಮಂತ್ರನೆ, ಮಹಾರಾಜನಿಗೆ ರಾಮಪಟ್ಟಾಭಿಷೇಕ ಸಂಭ್ರಮದಿಂದ ರಾತ್ರಿಯೆಲ್ಲಾ ನಿದ್ರೆಯೆ ಇಲ್ಲ. ಈಗ ಸ್ವಲ್ಪ ಜೊಂಪು ಹತ್ತುವಂತಿದೆ. ನೀನು ಆತನನ್ನು ಎಚ್ಚರಗೊಳಿಸುವ ಗೋಜಿಗೆ ಹೋಗಬೇಡ. ಶ್ರೀರಾಮನನ್ನು ಇಲ್ಲಿಗೆ ಕರೆದು ತಾ” ಎಂದಳು. ಈ ಮಾತುಗಳಿಂದ ಸುಮಂತ್ರನಿಗೆ ಎಷ್ಟೋ ಸಮಾಧಾನವಾದಂತಾಯಿತು. ಶ್ರೀರಾಮನನ್ನು ಕರೆತರಲು ಆತನು ಧಾವಿಸಿದನು. ಅನೇಕ ಸಾಮಂತರೂ ಪುರನಿವಾಸಿಗಳೂ ಕಪ್ಪಕಾಣಿಕೆಗಳೊಡನೆ ಕಿಕ್ಕಿರಿದು ಅರಮನೆಯ ಬಾಗಿಲಲ್ಲಿ ನೆರೆದಿದ್ದರು. ಸುಮಂತ್ರನು ಅವರ ಮಧ್ಯದಲ್ಲಿ ನುಸುಳಿಕೊಂಡು ವೇಗವಾಗಿ ಶ್ರೀರಾಮನ ಬಳಿ ಸೇರಿದನು.

ಸುಮಂತ್ರನು ಅಂತಃಪುರವನ್ನು ಪ್ರವೇಶಿಸಿದಾಗ ಶ್ರೀರಾಮನು ಸಕಲಾಭರಣ ಭೂಷಿತನಾಗಿ ಮನೋಹರವಾದ ಪರ್ಯಂಕದಲ್ಲಿ ಕುಳಿತಿದ್ದನು. ಸೀತಾದೇವಿ ಆತನ ಪಕ್ಕದಲ್ಲಿ ನಿಂತು ಚಾಮರ ಬೀಸುತ್ತಿದ್ದಳು. ಹೀಗೆ ಚಿತ್ತಾ ನಕ್ಷತ್ರದೊಡಗೂಡಿದ ಚಂದ್ರನಂತೆ ರಾರಾಜಿಸುತ್ತಿರುವ ಶ್ರೀರಾಮನನ್ನು ಕುರಿತು ಸುಮಂತ್ರನು “ಕೌಸಲ್ಯಾಸುಪುತ್ರ, ದೇವಿ ಕೈಕೆಯೊಡನೆ ಅಂತಃಪುರದಲ್ಲಿರುವ ದಶರಥ ಮಹಾರಾಜನು ಒಡನೆಯ ನಿನ್ನನ್ನು ಕಾಣಲು ಬಯಸುತ್ತಿದ್ದಾನೆ” ಎಂದು ಹೇಳಿದನು. ಆ ಮಾತುಗಳಿಂದ ಸಂತೋಷಗೊಂಡ ಶ್ರೀರಾಮನು ತನ್ನ ಮಡದಿಯನ್ನು ಕುರಿತು “ಎಲೈ ಮದಿರಾಕ್ಷಿ, ಸೀತೆ, ಮಾತೆಯಾದ ಕೈಕೆ ನನ್ನ ಪಟ್ಟಾಭಿಷೇಕ ಸಮಾಚಾರವನ್ನು ಕೇಳಿ ಅತ್ಯಂತ ಸಂತೋಷದಿಂದ ನನಗೆ ಹೇಳಿ ಕಳುಹಿಸಿರಬೇಕೆಂದು ತೋರುತ್ತದೆ. ನಾನು ಶೀಘ್ರದಲ್ಲಿಯೆ ಅಲ್ಲಿಗೆ ಹೋಗಿ ಬರುತ್ತೇನೆ. ನೀನು ಸಖಿಯರೊಡನೆ ಸ್ವಲ್ಪಕಾಲ ವಿನೋದದಿಂದಿರು” ಎಂದು ಹೇಳಿ ಸುಮಂತ್ರನೊಡನೆ ರಥದಲ್ಲಿ ಕುಳಿತು ಕೈಕೆಯ ಅಂತಃಪುರಕ್ಕೆ ಹೊರಟನು. ದಾರಿಯಲ್ಲಿ ಕಿಕ್ಕಿರಿದು ನೆರೆದಿದ್ದ ಜನಸಂದಣಿ ಶ್ರೀರಾಮನನ್ನು ಕಾಣುತ್ತಲೆ ಜಯಕಾರ ಮಾಡಿತು. ಹಿರಿಯರೆಲ್ಲರೂ ಆನಂದಬಾಷ್ಪಗಳನ್ನು ಸುರಿಸುತ್ತಾ “ಅಖಂಡ ಭೂಮಂಡಲಕ್ಕೆ ಪ್ರಭುವಾಗಿ ಚಿರಕಾಲ ಬಾಳು!” ಎಂದು ಆಶೀರ್ವದಿಸಿದರು. ಮುತ್ತೈದೆಯರು ಉಪ್ಪರಿಗೆಯ ಮೇಲಿನಿಂದ ಆತನ ಮೇಲೆ ಹೂವೆರಚಿದರು. ಶ್ರೀರಾಮನು ಎಲ್ಲರಿಗೂ ಕೈಮುಗಿಯುತ್ತಾ ಹೊರಟು ಕೈಕೆಯ ಅಂತಃಪುರವನ್ನು ಸೇರಿದನು.

ಅಂತಃಪುರವನ್ನು ಪ್ರವೇಶಿಸುತ್ತಲೆ ಶ್ರೀರಾಮನು ಸಿಂಹಾಸನದಲ್ಲಿ ಕುಳಿತಿದ್ದ ತಂದೆಗೂ ಬಳಿಯಲ್ಲಿ ನಿಂತಿದ್ದ ಬಲತಾಯಿಗೂ ಭಕ್ತಿಯಿಂದ ನಮಸ್ಕರಿಸಿದನು. ಆತನನ್ನು ಕಾಣುತ್ತಲೆ ದಶರಥನು ಒಮ್ಮೆ “ರಾಮ!” ಎಂದು ಕೂಗಿ, ಕಣ್ತುಂಬ ನೀರು ತುಂಬಿದನು. ಆತನ ಬಾಯಿಂದ ಮುಂದೆ ಮಾತು ಹೊರಡಲಿಲ್ಲ. ಆತನ ಈ ಶೋಚನೀಯ ಸ್ಥಿತಿಯನ್ನು ಕಂಡು ಶ್ರೀರಾಮನು ಅಕಸ್ಮಾತ್ತಾಗಿ ಹಾವನ್ನು ಮೆಟ್ಟಿದವನಂತೆ ಚಕಿತನಾಗಿ ಕೈಕೆಯನ್ನು ಕುರಿತು “ಅಮ್ಮ, ತಂದೆ ಅದೇಕೆ ಹೀಗಿದ್ದಾನೆ! ಆತನಿಗೆ ನನ್ನ ಮೇಲೆ ಕೋಪವೇನಾದರೂ ಬಂದಿರುವುದೆ? ನಾನೇನು ತಪ್ಪು ಮಾಡಿದೆ? ಅಥವ ಆತನಿಗೆ ದೇಹದಲ್ಲಿ ಆಲಸ್ಯವಾಗಿರುವುದೆ? ಇಲ್ಲವೆ ಮತ್ತಾವ ಕಾರಣದಿಂದಲಾದರೂ ಆತನ ಮನಸ್ಸಿಗೆ ವ್ಯಥೆಯುಂಟಾಗಿರುವುದೊ? ಭರತ ಶತ್ರುಘ್ನರ ವಿಚಾರದಲ್ಲಿ ಕೆಟ್ಟ ಸುದ್ದಿಯೇನೂ ಬಂದಿಲ್ಲವಷ್ಟೆ? ತಂದೆಗೆ ಪರಮಪ್ರಿಯಳಾದ ನೀನಾದರೂ ಕ್ರೂರವಾಕ್ಯಗಳಿಂದ ತಂದೆಯನ್ನು ನೋಯಿಸಿದೆಯೊ? ಮಹಾರಾಜನು ಎಂದೂ ಹೀಗೆ ಇದ್ದವನಲ್ಲ. ಇಂದೇಕೆ ಕಳವಳಕ್ಕೆ ಆಸ್ಪದವಾಯಿತು? ಆತನ ಮನೋವ್ಯಥೆಯನ್ನು ಹೋಗಲಾಡಿಸದ ಮೇಲೆ ನಾನಿದ್ದು ತಾನು ಏನು ಸಾರ್ಥಕ? ಇರುವ ವಿಚಾರವನ್ನು ಮರೆಮಾಚದೆ ನನಗೆ ತಿಳಿಸು” ಎಂದು ಕೇಳಿದನು.

ನಿಷ್ಠುರಳಾದ ಕೈಕೆ ಸ್ವಲ್ಪವೂ ನಾಚಿಕೆಯಿಲ್ಲದೆ ಶ್ರೀರಾಮನಿಗೆ ಉತ್ತರವಿತ್ತಳು – “ಎಲೈ ಶ್ರೀರಾಮನೆ, ನಿಮ್ಮ ತಂದೆಗೆ ಕೋಪವೂ ಇಲ್ಲ, ವ್ಯಥೆಯೂ ಇಲ್ಲ. ಆತನ ಮನಸ್ಸಿನಲ್ಲಿ ಯಾವುದೊ ಒಂದು ಅಭಿಪ್ರಾಯವಿದೆ. ಅದು ನಿನಗೆ ಅಪ್ರಿಯವಾದುದು. ಪ್ರಿಯಪುತ್ರನಾದ ನಿನಗೆ ಆ ಅಪ್ರಿಯವಾದ ಮಾತುಗಳನ್ನು ಹೇಳಲು ಆತನ ನಾಲಿಗೆ ಏಳುತ್ತಿಲ್ಲ. ಆತನ ಮಾತನ್ನು ನಡಸುತ್ತೇನೆಂದು ನೀನು ಅಭಿವಚನ ಕೊಡುವಂತಿದ್ದರೆ ನಾನು ಎಲ್ಲವನ್ನೂ ನಿನಗೆ ವಿವರಿಸಿ ಹೇಳುತ್ತೇನೆ” ಎಂದಳು. ಆಕೆಯ ಮಾತುಗಳನ್ನು ಕೇಳಿ ಶ್ರೀರಾಮನ ಮನಸ್ಸಿಗೆ ಬಹು ನೋವಾಯಿತು. ತಂದೆಯ ಮಾತನ್ನು ತಾನು ನಡೆಸುವ ವಿಚಾರದಲ್ಲಿ ಸಂದೇಹವೆ? “ಅಮ್ಮಾ, ತಂದೆಯ ಅಪ್ಪಣೆಯಾಗುವುದಾದರೆ ಬೆಂಕಿಯಲ್ಲಿ ಧುಮ್ಮಿಕ್ಕುವೆನು; ವಿಷ ಪಾನಮಾಡುವುದಕ್ಕೂ ಹಿಂದುಮುಂದು ನೋಡುವುದಿಲ್ಲ. ನಿನಗೆ ಸ್ವಲ್ಪವೂ ಸಂಶಯ ಬೇಡ. ತಂದೆಯ ಅಪ್ಪಣೆ ಏನೆಂಬುದನ್ನು ಹೇಳು. ಆತನ ಮಾತನ್ನು ನಡಸುವೆನೆಂದು ಪ್ರಾಮಾಣ ಮಾಡಿ ಹೇಳುತ್ತೇನೆ. ರಾಮನು ಎರಡು ಮಾತನ್ನಾಡುವನಲ್ಲ” ಎಂದನು.

ಸತ್ಯನಿಷ್ಠನಾದ ಶ್ರೀರಾಮನ ಪ್ರಮಾಣವಚನದಿಂದ ಕೈಕೆಗೆ ತನ್ನ ಅಭೀಷ್ಟಸಿದ್ಧೆಯಾಯಿತೆಂದು ಸಮಾಧಾನವಾಯಿತು. ಕಠೋರವಾದ ತನ್ನ ದುರಭಿಸಂಧಿಯನ್ನು ಆತನಿಗೆ ತಿಳಿಸಿದಳು. “ಎಲೈ ರಾಘವ, ಪೂರ್ವದಲ್ಲಿ ದೇವಾಸುರ ಯುದ್ಧಕಾಲದಲ್ಲಿ ನಿನ್ನ ತಂದೆ ಅಪಾಯಕ್ಕೊಳಗಾಗಿದ್ದಾಗ ನಾನು ಆತನನ್ನು ಉಪಚರಿಸಿ ಆತನ ಪ್ರಾಣರಕ್ಷಣೆ ಮಾಡಿದೆ. ಸಂತುಷ್ಟನಾದ ಈತನು ನನಗೆ ಎರಡು ವರಗಳನ್ನು ಕೊಟ್ಟನು. ನಾನು ಅಂದು ಅವುಗಳನ್ನು ಬಳಸಿಕೊಳ್ಳಲಿಲ್ಲ. ಇಂದು ಆ ವರಗಳನ್ನು ಆತನಲ್ಲಿ ಯಾಚಿಸುತ್ತಿದ್ದೇನೆ. ಒಂದು ವರದಿಂದ ಭರತನ ಪಟ್ಟಾಭಿಷೇಕವನ್ನೂ, ಮತ್ತೊಂದರಿಂದ ನಿನ್ನ ವನವಾಸನ್ನೂ ಬೇಡುತ್ತಿದ್ದೇನೆ. ನಿನ್ನ ವನವಾಸವನ್ನೂ ಬೇಡುತ್ತಿದ್ದೇನೆ. ನಿನ್ನ ಪಟ್ಟಾಭಿಷೇಕಕ್ಕಾಗಿ ಸಿದ್ಧವಾಗಿರುವ ಸಂಭಾರಗಳಿಂದಲೆ ಭರತನಿಗೆ ಪಟ್ಟಾಭಿಷೇಕವಾಗಲಿ; ನೀನು ಜಟಾಜಿನಗಳನ್ನು ಧರಿಸಿ ಹದಿನಾಲ್ಕು ವರ್ಷ ವನವಾಸ ಕೈಗೊಳ್ಳುವವನಾಗು. ನಿನ್ನ ತಂದೆಯ ಮಾತನ್ನು ನೀನು ನಡಸುವುದೆ ನಿಜವಾದರೆ ಈ ಕಾರ್ಯಗಳನ್ನು ತ್ವರಿತವಾಗಿ ನಡೆಸು. ನಿನ್ನ ತಂದೆಯ ಸತ್ಯಕ್ಕೆ ಲಫಬಾರದಂತೆ ಆಚರಿಸು. ”

ಕೈಕೆಯ ನುಡಿಗಳನ್ನು ಕೇಳಿ ಶ್ರೀರಾಮನು ಬೆಚ್ಚಲಿಲ್ಲ, ಬೆದರಲಿಲ್ಲ. ಪ್ರಸನ್ನವಾದ ಆತನ ಮುಖಮುದ್ರೆಯಲ್ಲಿ ವಿಕಾರದ ಒಂದು ಸೂಚನೆ ಕೂಡ ಸುಳಿಯಲಿಲ್ಲ. ಪ್ರಶಾಂತನಾಗಿ ಆತನು ಪ್ರತ್ಯುತ್ತರ ಕೊಟ್ಟನು. “ಅಮ್ಮಾ ಇದಾವ ಮಹಾಕಾರ್ಯ? ತಂದೆಯ ಪ್ರತಿಜ್ಞೆ ನೆರವೇರಲಿ. ನಿನ್ನ ಅಪೇಕ್ಷೆಯಂತೆ ನಾನು ವನವಾಸ ಕೈಗೊಳ್ಳುತ್ತೇನೆ. ಭರತನಿಗೆ ರಾಜ್ಯಾಭಿಷೇಕವಾಗುವುದಕ್ಕಿಂತಲೂ ಹೆಚ್ಚಿನ ಸಂತೋಷವಾಗುವುದು? ಆತನಿಗಾಗಿ ನಾನು ರಾಜ್ಯವನ್ನು ಮಾತ್ರವೇ ಅಲ್ಲ, ನನ್ನ ಪ್ರಾಣಕ್ಕಿಂತಲೂ ಪ್ರಿಯತಮಳಾದ ಸೀತೆಯನ್ನು ಕೂಡ ತ್ಯಾಗಮಾಡಲು ಸಿದ್ಧವಾಗಿದ್ದೇನೆ. ಕಂಬನಿ ಸುರಿಸುತ್ತಿರುವ ತಂದೆಯನ್ನು ಮೊದಲು ಸಮಾಧಾನ ಮಾಡು” ಎಂದನು. ಶ್ರೀರಾಮನ ನುಡಿಗಳನ್ನು ಕೇಳಿ ಕೈಕೆಯ ಪಾಷಾಣಹೃದಯ ಸ್ವಲ್ಪವೂ ಕರಗಲಿಲ್ಲ. ಅದಕ್ಕೆ ಬದಲಾಗಿ ಆಕೆ ಶ್ರೀರಾಮನನ್ನು ವನಪ್ರಯಾಣಕ್ಕೆ ತ್ವರೆಗೊಳಿಸುವುದಕ್ಕಾಗಿ ಆತನನ್ನು ಕುರಿತು “ಎಲೈ ರಾಮಚಂದ್ರ, ನಿನ್ನ ಇಷ್ಟದಂತೆ ಆಗಲಿ, ಇಗೊ ಭರತನನ್ನು ಕರೆದು ತರಲು ಈ ಕ್ಷಣದಲ್ಲಿಯೆ ದೂತರನ್ನು ಅಟ್ಟುತ್ತೇನೆ. ನಿನ್ನ ವನಪ್ರಯಾಣ ತ್ವರಿತಗೊಳ್ಳಲಿ. ನೀನು ಪ್ರಯಾಣ ಮಾಡುವವರೆಗೂ ಮಹಾರಾಜನು ಸ್ನಾನಭೋಜನಾದಿಗಳನ್ನು ಕೂಡ ನೆರವೇರಿಸುವುದಿಲ್ಲ” ಎಂದಳು.

ಕೈಕೆಯ ಮಾತುಗಳನ್ನು ಕೇಳುತ್ತಿದ್ದ ದಶರಥನಿಗೆ ಇನ್ನು ತಡೆಯಲಾಗಲಿಲ್ಲ. ಆತನು “ಹಾ ಕಷ್ಟ!” ಎಂದು ಚೀರಿ ಪ್ರಜ್ಞೆ ತಪ್ಪಿದವನಾಗಿ ಮಂಚದ ಮೇಲೆ ಬಿದ್ದನು. ಅದನ್ನುಕಂಡು ಕಶಾಪ್ರಹಾರಿತವಾದ ಕುದುರೆಯಂತೆ ಶ್ರೀರಾಮನು ಚಕಿತನಾದನು. ಒಡನೆಯೆ ವನಪ್ರಯಾಣಕ್ಕೆ ಉದ್ಯುಕ್ತನಾಗಿ ಕೈಕೆಯನ್ನು ಕುರಿತು “ಅಮ್ಮಾ, ನನ್ನ ತಾಯಿಯಾದ ಕೌಸಲ್ಯೆಯಿಂದ ಅಪ್ಪಣೆ ಪಡೆದು ಜಾನಕಿಯನ್ನು ಸಮಾಧಾನಗೊಳಿಸುವಷ್ಟು ವ್ಯವಧಾನವನ್ನು ಅನುಗ್ರಹಿಸು. ಇಂದೇ ನಾನು ದಂಡಕಾರಣ್ಯವನ್ನು ಕುರಿತು ಪ್ರಯಾಣ ಮಾಡುತ್ತೇನೆ” ಎಂದು ಹೇಳಿ ಆಕೆಗೂ, ಮೂರ್ಛಿತನಾಗಿ ಬಿದ್ದಿದ್ದ ತಂದೆಗೂ ನಮಸ್ಕರಿಸಿ, ತಾಯಿ ಕೌಸಲ್ಯೆಯ ಅಂತಃಪುರಕ್ಕಾಗಿ ಹೊರಟು ಬಂದನು. ದಶರಥನ ಬಯಲ್ಲಿ “ಹಾ ರಾಮ! ಹಾ ರಾಮ!” ಎಂಬ ಉದ್ಗಾರ ಅಪ್ರಯತ್ನವಾಗಿ ಹೊರಡುತ್ತಿತ್ತು.

* * *