ಪುಣ್ಯ ಕ್ಷೀಣಿಸಿ ಸ್ವರ್ಗಚ್ಯುತಳಾದ ಕಿನ್ನರಿಯಂತೆ ಕೈಕೆ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದಳು. ಆ ಕೋಣೆಯ ಕತ್ತಲ್ಲಿ ಕಿತ್ತೆಸೆದಿದ್ದ ಪುಷ್ಪಮಾಲಿಕೆಗಳೂ ದಿವ್ಯಾಭರಣಗಳೂ ಅಂಬರದಲ್ಲಿ ಚೆಲ್ಲಿದ ನಕ್ಷತ್ರಗಳಂತೆ ಕಾಣಿಸುತ್ತಿದ್ದುವು. ಆ ವೇಳೆಯಲ್ಲಿ ದಶರಥನು ಅಲ್ಲಿಗೆ ಪ್ರವೇಶ ಮಾಡಿದನು. ಶ್ರೀರಾಮ ಪಟ್ಟಾಭಿಷೇಕದ ಪ್ರಿಯವಾರ್ತೆಯನ್ನು ತನ್ನ ಮೋಹದ ಮಡದಿಗೆ ತಿಳಿಸಿ ಆಕೆಯನ್ನು ಸಂತೋಷಸಾಗರದಲ್ಲಿ ತೇಲಿಸುವೆ ಎಂದುಕೊಂಡು ಆತನು ಕೈಕೆಯ ಅಂತಃಪುರವನ್ನು ಪ್ರವೇಶಿಸಿದನು. ಶಯನಾಗಾರವನ್ನು ಪ್ರವೇಶಿಸುತ್ತಲೆ ಸುತ್ತಲಿನ ಸನ್ನಿವೇಶದಿಂದ ಆತನ ಮನಸ್ಸು ಕಾಮವಿಕಾರಕ್ಕೊಳಗಾಯಿತು. ಆದರೆ ಅಲ್ಲೇನಿದೆ? ಕೈಕೆಯ ಹಾಸಿಗೆ ಬರಿದಾಗಿ ಬಿಕೋ ಎನ್ನುತ್ತಿದೆ. ತನ್ನಕಾಂತೆ ಅಲ್ಲಿ ಕಾಣಬರದಿರಲು ದಶರಥನು ಚಡಪಡಿಸಿದನು. ಬಾಗಿಲಲ್ಲಿ ನಿಂತಿದ್ದ ದ್ವಾರರಕ್ಷಕಳನ್ನು ಕುರಿತು “ರಾಣೀ ಎಲ್ಲಿ?” ಎಂದನು. ಆ ದೂತಿ ಅಂಜುತ್ತಂಜುತ್ತಾ ಕೋಪಗೃಹದ ಕಡೆ ಕೈ ತೋರಿದಳು. ರಾಜನ ಹೃದಯದಲ್ಲಿ ಮೂಡಿದ್ದ ಹೊಂಗನಸು ಹಾಗೆಯೆ ಸಿಡಿದೊಡೆಯಿತು. ಮನಸ್ಸು ಕಳವಳಗೊಂಡಿತು. ಆತಂಕಪಡುತ್ತಾ ಕೋಪಗೃಹವನ್ನು ಪ್ರವೇಶಿಸಿದನು ಆ ವೃದ್ಧರಾಜ. ಅಬ್ಬ! ಅಲ್ಲಿ ಕಂಡುದೇನು? ಮುರಿದು ಬಿಸುಟ ಎಳವಳ್ಳಿಯಂತೆ ಮ್ಲಾನಮುಖಳಾಗಿ ಬಿದ್ದಿದ್ದ ಕೈಕೆಯನ್ನು ಕಂಡು ದಶರಥನು ಕಂಪಿಸಿಹೋದನು. ಮೆಲ್ಲನೆ ಅವಳ ಬಳಿ ಸಾರಿ ಬಳಿಯಲ್ಲಿ ಕುಳಿತನು. ಮೃದುವಾಗಿ ಅವಳ ಮೈಯನ್ನೆಲ್ಲಾ ಸವರುತ್ತಾ ಹೇಳತೊಡಗಿದನು. “ಕೈಕೆ! ನನ್ನ ಮುದ್ದು ಕೈಕೆ! ನಿನಗೇಕೆ ಕೋಪ? ಯಾರು ಏನೆಂದರು? ನಿನಗೇನು ಬೇಕು? ಏನುಮಾಡಿದರೆ ನಿನ್ನ ಅಸಮಾಧಾನಕ್ಕೆ ತೃಪ್ತಿಯೋದಗುತ್ತದೆ? ನಿನ್ನ ಪ್ರೇಮಪಾಶದಲ್ಲಿ ಬದ್ಧನಾದ ನಾನು ನಿನ್ನ ದಾಸನಂತಿರುವೆನಲ್ಲವೆ? ನನ್ನ ಪ್ರಾಣಕ್ಕಿಂತಲೂ ಮಿಗಿಲಾದ ನಿನಗೆ ಯಾವುದಕ್ಕೆ ಕೊರತೆ? ಮೇಲಕ್ಕೇಳು. ನಿನ್ನ ಇಷ್ಟಾರ್ಥವೇನಿದ್ದರೂ ಸಲ್ಲಿಸುತ್ತೇನೆ. “

ರಾಜನು ತನ್ನ ಬಲೆಗೆ ಬಿದ್ದುದನ್ನು ಕಂಡು ಕೈಕೆ ಆತನನ್ನು ತನ್ನ ಕ್ರೂರವಾದ ವಾಗ್ಬಾಣಗಳಿಂದ ಚುಚ್ಚಿ ತನ್ನ ಅಧೀನಮಾಡಿಕೊಳ್ಳಲು ಆರಂಭಿಸಿದಳು. ಆತನನ್ನು ಕುರಿತು “ಸಾಕು ಈ ನಯ ವಿನಯ! ನನ್ನ ಇಷ್ಟಾರ್ಥವನ್ನು ನೀನು ನಿಜವಾಗಿಯೂ ನಡೆಸುವವನಾದರೆ ಈಗಲೆ ಹಾಗೆಂದು ಪ್ರಮಾಣ ಮಾಡು” ಎಂದಳು. ಆ ಮಾತನ್ನು ಕೇಳಿ ದಶರಥನು ಮುಗುಳ್ನಗೆ ನಗುತ್ತಾ ” ಎಲೆ ಗರ್ವಿಷ್ಠೆ, ನನ್ನಲ್ಲಿ ಅಷ್ಟು ನಂಬಿಕೆ ಇಲ್ಲವೆ? ಆಯ್ತು. ಇಗೋ ಪ್ರಮಾಣಮಾಡಿ ಹೇಳುತ್ತೇನೆ, ಕೇಳು – “ನನ್ನ ಪ್ರಾಣಕ್ಕಿಂತಲೂ ಪ್ರಿಯತಮನಾದ ಶ್ರೀರಾಮನ ಆಣೆಯಾಗಿ ನಿನ್ನ ಅಭೀಷ್ಟವನ್ನು ಈಡೇರಿಸುವೆನು, ಹೇಳು” ಎಂದನು. ಗಿಳಿ ಹೇಳಿಕೊಟ್ಟ ಮಾತುಗಳನ್ನು ಒಪ್ಪಿಸುವಂತೆ ಕೈಕೆ ದಾಸಿ ಕಲಿಸಿಕೊಟ್ಟ ಮಾತುಗಳನ್ನು ಒಪ್ಪಿಸಿದಳು. “ಪ್ರಾಣನಾಥಾ, ದೇವಾಸುರರ ಯುದ್ಧಕಾಲದಲ್ಲಿ ನೀನು ನನಗೆ ಎರಡು ವರಗಳನ್ನು ಕೊಟ್ಟಿದ್ದೆಯಷ್ಟೆ. ಸತ್ಯಸಂಧಾನದ ನೀನು ಆ ವರಗಳನ್ನು ಈಗ ನನಗೆ ಕರುಣಿಸುವವನಾಗು. ಆ ಎರಡು ವರಗಳಲ್ಲಿ ಒಂದರಿಂದ ಭರತನ ಪಟ್ಟಾಭಿಷೇಕವನ್ನು ಯಾಚಿಸುತ್ತೇನೆ. ಈಗ ಹೇಗಿದ್ದರು ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ಸಮಸ್ತ ಸಾಮಾಗ್ರಿಗಳೂ ಸಿದ್ಧವಾಗಿವೆ; ಅವುಗಳಿಂದಲೆ ಭರತನಿಗೆ ಪಟ್ಟಾಭಿಷೇಕವಾಗಲಿ. ಇನ್ನು ಎರಡನೆಯ ವರವೆಂದರೆ – ಭರತನ ರಾಜ್ಯ ನಿಷ್ಕಂಟಕವಾಗುವುದಕ್ಕಾಗಿ ಶ್ರೀರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ಕಳಹಿಸು.”

ಕೈಕೆಯ ಮಾತುಗಳು ಕಿವಿಗೆ ಬೀಳುತ್ತಿದ್ದಂತೆಯೆ ದಶರಥನು ಮೂರ್ಛಿತನಾಗಿ ನೆಲದ ಮೇಲೆ ಬಿದ್ದನು. ಕ್ಷಣಕಾಲದ ಮೇಲೆ ಆತನಿಗೆ ಹಾಗೆಯೆ ಪ್ರಜ್ಞೆ ತಿಳಿಯಿತು. ತಾನು ಎಚ್ಚರದಿಂದಿರುವೆನೊ ಸ್ವಪ್ನಗತನಾಗಿರುವೆನೊ ತಿಳಿಯದಂತಾಗಿತ್ತು ಆತನಿಗೆ. ಶ್ರೀರಾಮನಲ್ಲಿ ಅಪಾರವಾದ ವಾತ್ಸಲ್ಯವಿದ್ದ ಕೈಕೆ ನಿಜವಾಗಿಯೂ ಆತನ ವನವಾಸವನ್ನುಅಪೇಕ್ಷಿಸಿರಬಹುದೆ? ಕೈಕೆ ಹೇಳಿದ ಮಾತುಗಳನ್ನೆಲ್ಲ ಜ್ಞಾಪಿಸಿಕೊಂಡಂತೆಲ್ಲಾ ಆತನಿಗೆ ಮೈಮೇಲಿನ ಪ್ರಜ್ಞೆಯೆ ತಪ್ಪಿಹೋಗುವುದು? ಪುನಃ ಹೇಗೊ ಚೇತರಿಸಿಕೊಳ್ಳುವನು. ಹೀಗೆಯೆ ಬಹುಕಾಲ ಕಳೆದು ಹೋಯಿತು. ಪರಮಸುಂದರಿಯಾಗಿ ತನ್ನ ಕಣ್ಣಿಗೆ ಸದಾ ಸೊಗಸಿಕಾಣುತ್ತಿದ್ದ ಕಯಕೆ ಇಂದು ಘೋರ ವಿಷಸರ್ಪದಂತೆ ಕಾಣಿಸಿದಳು. ಕಿಡಿ ಕಾರುತ್ತಿರುವ ತನ್ನ ಕಣ್ಣುಗಳಿಂದ ಅವಳನ್ನು ಸುಟ್ಟುಹಾಕುವನಂತೆ ದುರುಗುಟ್ಟಿಕೊಂಡು ನೋಡುತ್ತಾ “ಎಲೆ ನೀಚೆ, ನಿನಗೇಕೆ ಈ ವಿಪರೀತ ಬುದ್ದಿ ಹುಟ್ಟಿತು? ರಾಮಚಂದ್ರನು ನಿನಗೇನು ಅಪರಾಧ ಎಸಗಿದನು? ಯಾವ ಅಪರಾಧಕ್ಕಾಗಿ ಆ ವಂಶವರ್ಧನನನ್ನು ಅಡವಿಗಟ್ಟಲಿ? ಲೋಕಾನಂದಕರನಾದ ಆತನು ನಿನ್ನ ಅಮಂಗಳ ಶಾಸನಕ್ಕೆ ಹೇಗೆ ಪಾತ್ರನು? ಆತನನ್ನು ಅಗಲುವುದೆಂದರೆ ನನ್ನ ಪ್ರಾಣಗಳನ್ನು ಅಗಲುವುದೆಂದೇ. ಸೂರ್ಯನಲ್ಲದೆ ಜೀವಲೋಕ ಬದುಕಿದರೂ ಬದುಕಬಹುದು; ಮಳೆಯಿಲ್ಲದೆ ಸಸ್ಯಜಗತ್ತು ಜೀವಿಸಿದರೂ ಜೀವಿಸಬಹುದು; ಆದರೆ ಶ್ರೀರಾಮನಿಲ್ಲದೆ ದಶರಥನು ಮಾತ್ರ ಕ್ಷಣಮಾತ್ರವಾದರೂ ಬದುಕುವುದು ಅಸಂಭವ. ಕೈಕೆ, ನಿನಗೇಕೆ ಹುಟ್ಟಿತು ಈ ದುರ್ಬುದ್ಧಿ? ಈ ವಿಷಭೀಜವನ್ನು ನಿನ್ನ ಹೃದಯದಲ್ಲಿ ಬಿತ್ತಿದವರಾರು? ಸುಕುಮಾರನಾದ ಶ್ರೀರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ಅಟ್ಟುವಷ್ಟು ಕಠಿನ ಹೃದಯ ನಿನ್ನಲ್ಲಿ ಹೇಗೆ ಉದಯಿಸಿತು? ಶ್ರೀರಾಮನನ್ನು ಅಗಲಿ ಸುಕೋಮಲೆಯಾದ ಸೀತೆ ಉಳಿಯುತ್ತಾಳೆಯೆ? ಮಗನ ಪಟ್ಟಾಭಿಷೇಕ ತಪ್ಪಿ ವನವಾಸ ಪ್ರಾಪ್ತವಾದರೆ ಕೌಸಲ್ಯೆಯ ಮಾತೃಹೃದಯ ಒಡೆದು ಚೂರಾಗದೆ? ಕೈಕೆ, ನಿನ್ನ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತೇನೆ, ನನ್ನಲ್ಲಿ ಪ್ರಸನ್ನಳಾಗು. ಸಕಲಗುಣಸಂಪನ್ನನಾದ ಶ್ರೀರಾಮನನ್ನು ಅಡವಿಗಟ್ಟುವಷ್ಟು ಕಠಿನಳಾಗಬೇಡ. ನಿನಗೆ ಬೇಕಾದರೆ ರಾಜ್ಯಕೋಶಾದಿಗಳನ್ನೆಲ್ಲಾ ತೆಗೆದುಕೋ! ನನ್ನನ್ನು ದುಃಖಸಾಗರದಿಂದ ಉದ್ಧಾರ ಮಾಡು” ಎಂದು ಹಲುಬಿ ಹಂಬಲಿಸಿದನು.

ಮಹಾರಾಜನ ಕಠಿನ ನುಡಿಗಳಾಗಲಿ ಆತನ ದೀನ ಪ್ರಾರ್ಥನೆಯಾಗಲಿ ಕೈಕೆಯ ಮನಸ್ಸನ್ನು ತಿರುಗಿಸುವಂತಿರಲಿಲ್ಲ. ರಾಜನನ್ನು ಕುರಿತು “ಎಲೈ ರಾಜನೆ, ಕೊಟ್ಟ ಮಾತನ್ನು ನಡೆಸಲು ಇಷ್ಟು ಸಂಕಟಪಡುವುದು ಯಾವ ನ್ಯಾಯ? ಕ್ಷತ್ರಿಯನಾದ ನಿನಗೆ ಇದು ಉಚಿತವೆ? ಶ್ರೀರಾಮನಿಗೆ ಪಟ್ಟಗಟ್ಟಿ ಕೌಸಲ್ಯೆಯೊಡನೆ ಸುಖಭೋಗದಲ್ಲಿ ತಲ್ಲೀನನಾಗಬೇಕೆಂದಿರುವ ನಿನಗೆ ಸತ್ಯವು ಅಷ್ಟೇನೂ ದೊಡ್ಡದಾಗಿ ಕಾಣಿಸುವುದಿಲ್ಲವೇನು? ಹೆಚ್ಚು ಮಾತಿನಿಂದೇನು? ಶ್ರೀರಾಮನಿಗೆ ಪಟ್ಟಾಭಿಷೇಕವಾಗುವ ನಿಮಿಷದಲ್ಲಿಯೇ ನಾನು ಘೋರ ವಿಷಪಾನದಿಂದ ಪ್ರಾಣತ್ಯಾಗ ಮಾಡುತ್ತೇನೆ. ಭರತನ ಆಣೆಯಾಗಿಯೂ ಇದು ನಿಶ್ಚಯ” ಎಂದು ಕರ್ಣಕಠೋರವಾಗಿ ನುಡಿದಳು. ಅದನ್ನು ಕೇಳಿ ದಶರಥನು ಮುಂಗಾಣದಂತಾದನು. ದೀರ್ಘವಾಗಿ ನಿಟ್ಟುಸಿರುಬಿಡುತ್ತಾ “ಹಾ! ರಾಮಚಂದ್ರ!” ಎಂದು ಚೀರಿಕೊಂಡು ಬುಡಕಡಿದ ಮರದಂತೆ ನೆಲದ ಮೇಲೆ ಬಿದ್ದನು. ಬಹುಕಾಲದ ಮೇಲೆ ಮೂರ್ಛೆ ತಿಳಿದವನಾಗಿ ಕೈಕೆಯನ್ನು ಪರಿಪರಿಯಾಗಿ ಪ್ರಾರ್ಥಿಸಿ ದಾರಿಗೆ ತರಲು ಪ್ರಯತ್ನಿಸಿದನು; ಅವಳನ್ನು ಮತ್ತೊಮ್ಮೆ ಕಠೀನವಾಕ್ಯಗಳಿಂದ ನಿಂದಿಸಿ ನೋಡಿದನು; ತನ್ನನ್ನೂ ಪರಿಪರಿಯಾಗಿ ಹಳಿದುಕೊಂಡನು. ಕೊನೆಗೆ ಶ್ರೀರಾಮನು ಅರಣ್ಯಕ್ಕೆ ಹೋದರೆ ತಾನು ಸತ್ತು ಹೋಗುವುದಾಗಿಯೂ ಕೈಕೆ ವಿಧವೆಯಾಗುವುದಾಗಿಯೂ ಹೇಳಿ ನೋಡಿದನು. ಅವಳು ಮಾಡುತ್ತಿರುವ ಕಾರ್ಯದಿಂದ ಮಹಾ ಪ್ರಳಯವುಂಟಾಗುವುದೆಂದು ಹೆದರಿಸಿದನು. ಕೌಸಲ್ಯಾ ಸುಮಿತ್ರೆಯರೂ ಅಯೋಧ್ಯೆಯ ಬಹು ಜನರೂ ಶ್ರೀರಾಮನ ವನಪ್ರಯಾಣದಿಂದ ಅಸುದೊರೆವರೆಂದೂ ಹೆದರಿಸಿದನು. “ನೋಡು, ನಿನ್ನ ಮಗನಾದ ಭರತನಿಗೆ ಕೂಡ ನೀನು ಮಾಡುವ ಕಾರ್ಯ ಪ್ರಿಯವಾಗುವುದಿಲ್ಲ” ಎಂದು ಹೇಳಿದನು.

ಆದರೆ ಎಲ್ಲವೂ ಗೋರ್ಕಲ್ಲ ಮೇಲೆ ಮಳೆಗರೆದಂತಾಯಿತು. ಕೈಕೆ ಹಿಡಿದ ಹಟವನ್ನು ಬಿಡಲಿಲ್ಲ.

ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು. ದಶರಥನೂ ಕೈಕೆಯ ಇಷ್ಟಾರ್ಥವನ್ನು ಸಲ್ಲಿಸುವುದಾಗಿ ಪ್ರಮಾಣಪೂರ್ವಕವಾಗಿ ಮಾತುಕೊಟ್ಟು ಮುಂಗಾಣದಂತಾದನು. ಕೊಟ್ಟ ಮಾತನ್ನು ತಪ್ಪುವುದಕ್ಕಿಲ್ಲ; ಅದನ್ನು ನಡೆಸಹೊರಟು ಪ್ರಾಣಕ್ಕಿಂತಲೂ ಪ್ರಿಯನಾದ ಶ್ರೀರಾಮನನ್ನು ಅಗಲುವುದಕ್ಕೂ ಇಲ್ಲ. ಇಕ್ಕುಳದಲ್ಲಿ ಸಿಕ್ಕ ಹುಳದಂತೆ ಆತನು ಪರಿತಪಿಸುತ್ತಿರಲು ಕೈಕೆ ಕೇವಲ ನಿರ್ದಯಳಾಗಿ “ಎಲೈ ಮಹಾರಾಜನೆ, ಸತ್ಯದೂರನಾಗಿ ಮಹಾಪಾತಕಕ್ಕೊಳಗಾಗಬೇಡ. ಅಳುತ್ತಾ ನೆಲದಮೇಲೆ ಹೊರಳಾಡಿದರೆ ಏನಾದಂತಾಯಿತು? ಶಿಬಿಚಕ್ರವರ್ತಿ ಆಡಿದ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ತನ್ನ ದೇಹವನ್ನೆ ಗಿಡುಗನಿಗೆ ಆಹಾರವಾಗಿ ಕೊಡಲಿಲ್ಲವೆ? ಅಲಕ್ಷನು ತನ್ನ ಕಣ್ಣುಗಳನ್ನೆ ಕಿತ್ತುಕೊಡಲಿಲ್ಲವೆ? ಈ ದೇಹಕ್ಕಿಂತಲೂ ಕೀರ್ತಿ ಮುಖ್ಯವಾದುದು. ಆ ಕೀರ್ತಿಯನ್ನು ಗಾಳಿಗೆ ತೂರಬಹುದೆ?” ಎಂದಳು. ಅವಳ ಮಾತುಗಳಿಂದ ದಶರಥನಿಗೆ ಅವಳನ್ನು ದಾರಿಗೆ ತರುವ ಆಶೆ ಹಾರಿಹೋಯಿತು. ಆ ವೇಳೆಗೆ ರಾತ್ರಿ ಕಳೆದು ಮೂಡಲಲ್ಲ ಕೆಂಪು ಹರಿಯುತ್ತಿತ್ತು. ಇನ್ನು ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ಜನರು ಬಂದು ತನ್ನನ್ನು ತ್ವರೆಪಡಿಸುವರೆಂದುಕೊಂಡು ಆ ವೃದ್ಧರಾಜನು ಅಸಹ್ಯವೇದನೆಯನ್ನು ಅನುಭವಿಸುತ್ತಾ, ಕೈಕೆಯನ್ನು ಕುರಿತು “ಎಲೆ ನೀಚೆ, ಧರ್ಮಪಾಶಕ್ಕೆ ಕಟ್ಟುಬಿದ್ದ ನಾನು ನಿನ್ನ ಇಷ್ಟವನ್ನೇನೂ ನಡೆಸುತ್ತೇನೆ. ಆದರೆ ಇನ್ನು ನೀನು ನನ್ನ ಹೆಂಡತಿಯಲ್ಲ. ನಿನ್ನ ಮಗನು ನನ್ನ ಮಗನೂ ಅಲ್ಲ. ಹೇಗಿದ್ದರೂ ಈ ವ್ಯಥೆಯಿಂದ ನಾನು ಸಾಯುವುದು ನಿಶ್ಚಯ. ನಾನು ಸತ್ತ ಮೇಲೆ ನೀನಾಗಲಿ ನಿನ್ನ ಮಗನಾಗಲಿ ನನಗೆ ತರ್ಪಣವನ್ನೂ ಸಹ ಕೊಡಬೇಕಾದುದಿಲ್ಲ” ಎಂದು ಹೇಳಿ ನಿರ್ವಿಣ್ಣನಾಗಿ ಹಾಸಗೆಯ ಮೇಲೆ ದೊಪ್ಪನೆ ಕೆಡೆದನು.

* * *