ಭರತ ಶತ್ರುಘ್ನರು ಮಾವನ ಮನೆಯಿಂದ ಇನ್ನೂ ಹಿಂದಿರುಗಿರಲಿಲ್ಲ. ಸೋದರಮಾವ ಯುಧಾಜಿತ್ತು ಅವರನ್ನು ತನ್ನ ಹೊಟ್ಟೆಯ ಮಕ್ಕಳಂತೆ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದನು. ಆದರೂ ವೃದ್ಧನಾದ ತಂದೆಯಿಂದ ಬಹುಕಾಲ ಅಗಲಿರುವುದು ಅವರಿಗೆ ಅನುಚಿತವೆನಿಸುತ್ತಿತ್ತು. ಇತ್ತ ದಶರಥನು ಆಗಾಗ ಆ ಮಕ್ಕಳನ್ನು ನೆನೆದುಕೊಂಡು ಹಂಬಲಿಸುತ್ತಿದ್ದನು. ಮುಪ್ಪಿನಲ್ಲಿ ಮಕ್ಕಳನ್ನು ಪಡೆದ ಆತನಿಗೆ ಇದು ಕೇವಲ ಸ್ವಾಭಾವಿಕವಾಗಿತ್ತು.

ದಶರಥನಿಗೆ ನಾಲ್ವರು ಮಕ್ಕಳಲ್ಲಿಯೂ ಅತಿಶಯವಾದ ಪ್ರೀತಿ. ಅದರಲ್ಲಿಯೂ ಶ್ರೀರಾಮನೆಂದರೆ ಆತನ ಅಂತಃಕರಣ ಕರಗಿಹೋಗುತ್ತಿತ್ತು. ಇದಕ್ಕೆ ಕಾರಣವಿಲ್ಲದೆ ಇರಲಿಲ್ಲ. ಶ್ರೀರಾಮನೆಂದರೆ ಶಾಂತಮೂರ್ತಿ; ಆತನ ಮಾತು ಮೃದು, ಮಧುರ, ಪರೋಪಕಾರ ಆತನ ಹುಟ್ಟುಗುಣ; ಕಷ್ಟದಲ್ಲಿರುವವರನ್ನು ಕಂಡರೆ ಕರಗಿಹೋಗುವನು. ಅವರಿಗೆ ಸಹಾಯಮಾಡಲು ಸದಾ ಕಾತರನಾಗಿರುವನು. ಗುರುಹಿರಿಯರಲ್ಲಿ ಭಕ್ತಿ, ಗೌರವ, ನಮ್ರತೆ, ಆತನ ಬುದ್ಧಿ ಬಹು ಸೂಕ್ಷ್ಮ. ಜ್ಞಾನಿಗಳಲ್ಲಿ ಚರ್ಚಿಸಿ ಚರ್ಚಿಸಿ ಆ ಸೂಕ್ಷ್ಮ ಬುದ್ಧಿಗೆ ಸಾಣೆ ಹಿಡಿದಂತಾಗಿತ್ತು. ಧರ್ಮ ಸೂಕ್ಷ್ಮಗಳೆಲ್ಲವೂ ಆತನಿಗೆ ಕರತಲಾಮಲಕವಾಗಿದ್ದವು. ಸತ್ಯ ಧರ್ಮಗಳಿಗೆ ಆತನೊಂದು ಊರೆಗೋಲಿನಂತಿದ್ದನು. ಈ ಜ್ಞಾನದ ಜೊತೆಗೆ ಕ್ಷತ್ರಿಯೋಚಿತವಾದ ಧನುರ್ವಿದ್ಯೆಯೂ ಆತನಿಗೆ ಕರಗತವಾಗಿತ್ತು. ಶಸ್ತ್ರಾಸ್ತ್ರಗಳ ಪ್ರಯೋಗದಲ್ಲಿ ಆತನಿಗೆ ಸಮಾನರಾದವರು ತ್ರಿಭುವನದಲ್ಲಿಯೂ ದೊರೆಯರು. ಪ್ರಿಯವಾದಿಯಾದ ಆತನಲ್ಲಿ ಹಿರಿಯರಾದವರಿಗೆ ವಾತ್ಸಲ್ಯ; ಕಿರಿಯರಾದವರಿಗೆ ಭಕ್ತಿ. ಹೀಗೆ ಪ್ರಜಾರಂಜಕನಾಗಿ ಯೌವನದಲ್ಲಿ ಕಾಲಿಡುತ್ತಿದ್ದ ಆ ಹಿರಿಯ ಮಗನನ್ನು ಕಂಡು ವೃದ್ಧನಾದ ದಶರಥನಿಗೆ ಒಂದು ಆಲೋಚನೆ ಹುಟ್ಟಿತು – “ಸಕಲ ಗುಣ ಸಂಪನ್ನನಾದ ಶ್ರೀರಾಮನಿಗೆ ಯೌವರಾಜ್ಯಾಭಿಷೇಕವನ್ನು ಏಕೆ ಮಾಡಬಾರದು? ಆತನು ಯುವರಾಜನಾದುದನ್ನು ಕಣ್ಣಾರೆ ಕಂಡರೆ ನಾನಲ್ಲಿಗೆ ಧನ್ಯನಾದಂತಾಯಿತು. ”

ದಶರಥನು ತನ್ನ ಮನಸ್ಸಿನಲ್ಲಿ ಹುಟ್ಟಿದ ಆಲೋಚನೆಯನ್ನು ಮಂತ್ರಿಗಳಲ್ಲಿ ವಿವೇಚಿಸಿದನು. ಅಯೋಧ್ಯೆಯ ನಾಗರೀಕರನ್ನೂ ದೇಶದ ಪ್ರಮುಖ ಪ್ರಜೆಗಳನ್ನೂ ಸಾಮಂತ್ರನ್ನೂ ಕರೆಸಿ ಅವರಿಗೆ ತನ್ನ ಅಭಿಪ್ರಾಯವನ್ನು ತಿಳಿಸಿ, ಅವರ ಸಲಹೆಯನ್ನು ಕೇಳಿದನು – “ನಾನು ಮುದುಕನಾದೆ, ರಾಜ್ಯಭಾರದ ಕ್ಲೇಶಗಳನ್ನು ಸಹಿಸಲಾರೆ. ನನಗಿನ್ನು ವಿಶ್ರಾಂತಿ ಅಗತ್ಯ. ನನ್ನಹಿರಿಯ ಮಗನಾದ ಶ್ರೀರಾಮನನ್ನು ಯುವರಾಜನನ್ನಾಗಿ ಮಾಡಬೇಕೆಂಬುದು ನನ್ನ ಇಷ್ಟ. ತಮಗೆ ಇದು ಉಚಿತವೆಂದು ತೋರಿದರೆ ತಮ್ಮ ಅನುಮತಿ ನೀಡಬೇಕು. ”

ಅಮೃತವರ್ಷದಂತಿದ್ದ ದಶರಥನ ಮಾತುಗಳನ್ನು ಕೇಳಿ ನೆರೆದಿದ್ದವರೆಲ್ಲರೂ ನವಿಲುಗಳಂತೆ ಕುಕಿಲ್ವರಿದು ಹರ್ಷಧ್ವನಿ ಮಾಡಿದರು. “ಮಹಾರಾಜ, ನಿನ್ನ ಯೋಚನೆ ಬಹು ಶ್ಲಾಘ್ಯವಾದುದು. ಶ್ರೀರಾಮನ ಯುವರಾಜ ವೈಭವವನ್ನು ಕಾಣಲು ನಮ್ಮ ಕಣ್ಣುಗಳು ತವಕಿಸುತ್ತಿವೆ” ಎಂದು ಎಲ್ಲರೂ ಒಮ್ಮತದಿಂದ ನುಡಿದರು. ಪ್ರಜಾಭಿಪ್ರಾಯವು ತನ್ನ ಇಷ್ಟಕ್ಕನುಸಾರವಾಗಿಯೆ ಇರುವುದನ್ನು ಕಂಡು ದಶರಥನು ಸಂತೋಷದಿಂದ ಉಬ್ಬಿಹೋದನು. ಆತನು ಆ ಮಂಗಳ ಕಾರ್ಯಕ್ಕೆ ಅಗತ್ಯವಾದ ಸಾಮಗ್ರಿಗಳನ್ನೆಲ್ಲಾ ಸಿದ್ಧಗೊಳಿಸುವಂತೆ ವಸಿಷ್ಠ ವಾಮದೇವರಿಗೆ ನೇಮಿಸಿದನು. ಅನಂತರ ಶ್ರೀರಾಮನನ್ನು ತನ್ನ ಬಳಿಗೆ ಕರೆಸಿಕೊಂಡನು. ತನ್ನ ಎಳೆತನದ ಪ್ರತಿಬಿಂಬದಂತಿದ್ದ ಆ ಮಗನನ್ನು ಕಂಡು ಆತನ ಆನಂದಕ್ಕೆ ಪಾರವಿಲ್ಲ. ತನ್ನ ಬಳಿಗೆ ಬಂದ ಮಗನನ್ನು ಆಲಿಂಗಿಸಿಕೊಂಡು ಅನರ್ಘ್ಯವಾದ ಆಸನದಲ್ಲಿ ಕುಳ್ಳಿರಿಸಿದನು. ಕಣ್ಣುಗಳಲ್ಲಿ ಆನಂದಬಾಷ್ಪವನ್ನು ಸುರಿಸುತ್ತಾ ಅವನನ್ನು ಕುರಿತು” ಮಗು ರಾಮಚಂದ್ರ, ನಿನ್ನ ಸದ್ಗುಣಗಳಿಂದ ಮುಗ್ಧರಾದ ಪ್ರಜೆಗಳು ನಿನ್ನನ್ನು ಯುವರಾಜನನ್ನಾಗಿ ಮಾಡಬೇಕೆಂದು ಕೋರುತ್ತಾರೆ. ನಾಳೆ ಪುಷ್ಯನಕ್ಷತ್ರದಲ್ಲಿ ಆ ಮಂಗಳಕಾರ್ಯವು ನೆರವೇರಬೇಕಾಗಿದೆ. ಸುಪುತ್ರನಾದ ನೀನು ಯುವರಾಜ ಪದವಿಯನ್ನು ಸ್ವೀಕರಿಸಿ ನನ್ನ ಮನಸ್ಸನ್ನು ಸಂತೋಷಪಡಿಸು. ಪ್ರಜಾವತ್ಸಲನಾಗಿ ಬಾಳು!” ಎಂದನು.

ಶ್ರೀರಾಮನು ತಂದೆ ಮಾತಿಗೆ ಪ್ರತಿ ಏನನ್ನೂ ಹೇಳಲಿಲ್ಲ. ಕೇವಲ ಮೌನದಿಂದಲೇ ತನ್ನ ಸಮ್ಮತಿಯನ್ನು ಸೂಚಿಸಿ, ತನ್ನರಮನೆಗೆ ಹಿಂದಿರುಗಿದನು. ಅಷ್ಟರಲ್ಲಿ ಆತನ ಗೆಳೆಯರು ಈ ಸಂತೋಷವಾರ್ತೆಯನ್ನು ಕೊಂಡೊಯ್ದು ಕೌಸಲ್ಯೆಗೆ ಅರುಹಿದರು. ಅದನ್ನು ಕೇಳಿದ ಆಕೆಯ ಸಂತೋಷಕ್ಕೆ ಪಾರವಿಲ್ಲ. ಸುದ್ದಿಯನ್ನು ತಂದವರಿಗೆ ಅಮೂಲ್ಯವಾದ ರತ್ನಾಭರಣಗಳನ್ನು ಬಹುಮಾನವಾಗಿ ಕೊಟ್ಟಳು. ಆಕೆ ಸಡಗರದಲ್ಲಿ ತೊಡಗಿರುವಾಗ ತಂದೆಯ ಅಪ್ಪಣೆಯಂತೆ ಶ್ರೀರಾಮ ಮತ್ತೊಮ್ಮೆ ಆತನನ್ನು ಸಂದರ್ಶಿಸಿ ಅನೇಕ ಬುದ್ದಿವಾದಗಳನ್ನು ಪಡೆದು ತಾಯಿಯನ್ನು ಕಾಣಲು ಆಕೆಯ ಬಳಿಗೆ ಬಂದನು. ಆತನು ಬಂದಾಗ ಕೈಸಲ್ಯೆ ಮಗನ ಶ್ರೇಯಸ್ಸಿಗಾಗಿ ಇಷ್ಟದೇವತಾ ಪ್ರಾರ್ಥನೆಯಲ್ಲಿ ತೊಡಗಿದ್ದಳು. ಶ್ರೀರಾಮನು ಆಕೆಗೆ ನಮಸ್ಕರಿಸಿ. “ಅಮ್ಮಾ, ನಾಳೆಯ ನಾನು ಯುವರಾಜ ಪಟ್ಟವನ್ನುವಹಿಸುವಂತೆ ತಂದೆಯ ಅಪ್ಪಣೆಯಾಗಿರುವುದು. ಈ ದಿನ ರಾತ್ರಿ ನಾನು ಸೀತೆಯೊಡನೆ ಉಪವಾಸವನ್ನು ಆಚರಿಸಬೇಕು” ಎಂದು ಹೇಳಿದನು. ತಾಯಿ ಮಗನನ್ನು ಬಾಯಿತುಂಬ ಹರಸಿ “ಮಗು ನನ್ನ ವ್ರತ ಉಪವಾಸಾದಿ ಸತ್ಕರ್ಮಗಳು ಇಂದು ಸಫಲವಾದುವು. ನಾನಿಂದು ಧನ್ಯೆ!” ಎಂದಳು.

ತಾಯಿಯ ಆಶೀರ್ವಾದವನ್ನು ಸ್ವೀಕರಿಸಿದ ಶ್ರೀರಾಮನು ಸಮೀಪದಲ್ಲಿಯೆ ನಿಂತಿದ್ದ ಲಕ್ಷ್ಮಣನನ್ನು ಕುರಿತು “ಮಗು ಲಕ್ಷ್ಮಣಾ, ನೀನು ನನ್ನ ಬಹಿಃಪ್ರಾಣದಂತಿರುವೆ, ನಿನ್ನ ಸುಖವೇ ನನ್ನ ಸುಖ. ನಾನು ಯುವರಾಜನಾದರೆ ನೀನು ಯುವರಾಜನಾದಂತೆಯೆ. ನಿನಗೆ ಬೇಕಾದ ಸುಖ ಸೌಖ್ಯಗಳನ್ನು ಯಥೇಚ್ಚವಾಗಿ ಅನುಭವಿಸು” ಎಂದು ಹೇಳಿದನು. ಅನಂತರ ಆತನು ತಾಯಿಯ ಬಳಿ ನಿಂತಿದ್ದ ಜಾನಕಿಯನ್ನು ನೋಡಿದನು. ಅಂತಃಕರಣದ ಆನಂದವೆಲ್ಲ ಹೊರಸೂಸುತ್ತಿತ್ತು, ಆಕೆಯ ಕುಡಿನೋಟದಲ್ಲಿ. ತುಟಿಗಳ ಮೇಲೆ ನರ್ತಿಸುತ್ತಿತ್ತು. ನಲ್ಮೆಯ ಮುಗುಳ್ನಗೆ. ಶ್ರೀರಾಮನು ತನ್ನ ಕಾಂತೆಯನ್ನು ತನ್ನೊಡನೆ ಕರೆದೊಯ್ಯಲು ತಾಯಿಯಿಂದ ಅನುಜ್ಞೆ ಪಡೆದು ಆಕೆಗೂ ಆಕೆಯ ಜೊತೆಯಲ್ಲಿದ್ದ ಸುಮಿತ್ರೆಗೂ ನಮಸ್ಕರಿಸಿ ತನ್ನ ಅರಮನೆಗೆ ಜಾನಕಿಯೊಡನೆ ಹಿಂದಿರುಗಿದನು.

ಮರುದಿನ ಪಟ್ಟಾಭಿಷೇಕ; ಪುರಜನರ ಸಡಗರಕ್ಕೆ ಕೊನೆಮೊದಲಿಲ್ಲ. ಮನೆ ಮನೆಗಳ ಮೇಲೂ ಬಾವುಟಗಳು ಹಾರಾಡುತ್ತಿದ್ದುವು. ಬೀದಿಗಳೆಲ್ಲವೂ ಸ್ವಚ್ಚವಾಗಿ ಸಿಂಗರಗೊಂಡುವು. ಬಾಗಿಲುಗಳ ಮುಂದೆ ಚಿತ್ರ ವಿಚಿತ್ರವಾದ ರಂಗವಲ್ಲಿ ರಂಜಿಸಿದುವು. ಸ್ತ್ರೀಪುರುಷರು ನೂತನ ವಸ್ತ್ರಾಲಂಕಾರಗಳಿಂದ ಪರಿಶೋಭಿತರಾದರು. ಮನೆಮನೆ ಯಲ್ಲಿಯೂ ದೊಡ್ಡ ಹಬ್ಬ. ತಳಿರುತೋರಣಗಳು ಎಲ್ಲೆಲ್ಲಿಯೂ ಕಂಗೊಳಿಸುತ್ತಿವೆ. ಯಾರ ಬಾಯಲ್ಲಿಯೇ ನೋಡಲಿ “ಆಹಾ! ದಶರಥ ಎಂತಹ ಪುಣ್ಯಾತ್ಮ. ಶ್ರೀರಾಮನು ನಮ್ಮ ರಾಜನಾಗಲು ನಾವೇನು ಪುಣ್ಯಮಾಡಿದ್ದೆವೊ!” ಎಂಬ ಮಾತು. ಚಿಕ್ಕ ಮಕ್ಕಳು ಕೂಡ ತಾವು ಮಾತನಾಡುತ್ತಿರುವುದು ತಮಗೆ ಅರ್ಥವಾಗದಿದ್ದರೂ “ಶ್ರೀರಾಮನು ಯುವರಾಜನಾಗುತ್ತಾನೆ; ನಮ್ಮ ಪುಣ್ಯ!” ಎಂದು ತೊದಲುತ್ತಿದ್ದುವು. ಈ ಮಂಗಳ ಮಹೋತ್ಸವಕ್ಕಾಗಿ ದಿಕ್ಕುದಿಕ್ಕುಗಳಿಂದಲೂ ಬಂದಿದ್ದ ಜನರು ಕಿಕ್ಕಿರಿದು ತುಂಬಿದ್ದರು. ಅವರ ಕೋಲಾಹಲಧ್ವನಿ ಸಮುದ್ರಘೋಷದಂತೆ ದಶದಿಕ್ಕುಗಳನ್ನೂ ತುಂಬಿತು.

* * *