ಓಂ ತತ್ ಸತ್
ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ|
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ||

ಸತ್ಯ ಧರ್ಮ ನೀತಿಗಳಿಗೆ ಹೆಸರಾದ ಭರತಖಂಡದ ಉತ್ತರದಲ್ಲಿ ಕೋಸಲ ದೇಶವೆಂಬುದು ಯಾವಾಗಲೂ ಸಂತೋಷದಿಂದಿರುವ ಪ್ರಜೆಗಳಿಂದಲೂ, ಧನಧಾನ್ಯಗಳಿಂದ ತುಂಬಿರುವ ಭೂಮಿಯಿಂದಲೂ ಮೆರೆಯುತ್ತಿತ್ತು. ಸರಯೂ ನದಿಯ ತೀರದಲ್ಲಿದ್ದ ಅಯೋಧ್ಯೆ ಅದರ ರಾಜಧಾನಿ ಮನುಚಕ್ರವರ್ತಿ ತನ್ನ ಮನಸ್ಸಿನಿಂದ ಅದನ್ನು ನಿರ್ಮಿಸಿದನಂತೆ! ಅದರ ಉದ್ದ ಹನ್ನೆರಡು ಯೋಜನ, ಅಗಲ ಮೂರು ಯೋಜನ. ವಿಸ್ತಾರವಾದ ರಾಜಬೀದಿಗಳು, ಅವುಗಳ ಇಕ್ಕೆಲಗಳಲ್ಲಿಯೂ ಸಾಲುಮರಗಳು, ಅಲ್ಲಲ್ಲಿ ಪುಷ್ಪಸಮೃದ್ಧವಾದ ಉಪವನಗಳು, ಕಾರಂಜಿಗಳು – ಇವೇ ಮೊದಲಾದ ಸೌಂದರ್ಯಗಳಿಂದ ಅಮರಾವತಿಯಂತೆ ವೈಭವಯುಕ್ತವಾದ ಆ ಪಟ್ಟಣದಲ್ಲಿ ದೇವೇಂದ್ರನಂತೆ ಭೋಗಭಾಗ್ಯಶಾಲಿಯಾದ ದಶರಥ ಮಹಾರಾಜನು ಧರ್ಮಶೀಲನಾಗಿ ರಾಜ್ಯಭಾರ ಮಾಡುತ್ತಿದ್ದನು. ನೀತಿಶಾಸ್ತ್ರಚತುರನಾದ ಸುಮಂತ್ರನೆಂಬುವನು ಆತನ ಎಂಟು ಜನ ಪ್ರಧಾನರಲ್ಲಿ ಮೊದಲಿಗನಾಗಿದ್ದನು. ವೇದವೇದಾಂತಗಳಲ್ಲಿ ಪಾರಂಗತನಾದ ವಸಿಷ್ಠಮಹರ್ಷಿ ಆ ರಾಜನ ಪುರೋಹಿತನಾಗಿ, ಆತನ ಹಿತಸಾಧನೆಯಲ್ಲಿ ತತ್ಪರನಾಗಿದ್ದನು. ಈ ಮಂತ್ರಿ ಪುರೋಹಿತರ ದಕ್ಷತೆಯಿಂದ ರಾಜ್ಯ ಸುಭಿಕ್ಷವಾಗಿತ್ತು, ನಿಷ್ಕಂಟಕವಾಗಿತ್ತು; ರಾಜನು ಜಗದ್ವಿಖ್ಯಾತನಾಗಿದ್ದನು; ಪ್ರಜೆಗಳು ಸುಖ ಶಾಂತಿಗಳಿಂದ ಕೂಡಿ ಸ್ವಧರ್ಮನಿರತರಾಗಿದ್ದರು.

ದಶರಥನ ರಾಣಿವಾಸ ಕೌಸಲ್ಯೆ, ಸುಮಿತ್ರೆ, ಕೈಕೆಯರೆಂಬ ಮೂವರು ಮಹಾರಾಣಿಯರಿಂದ ಕೂಡಿ ಧನ್ಯವಾದುದಾಗಿತ್ತು. ಪ್ರೇಯಸ್ಸಿಗೆ ಮಾತ್ರವಲ್ಲದೆ ಶ್ರೇಯಸ್ಸಿಗೂ ಸಾಧಕರಾದ ಈ ರಾಣಿಯರಲ್ಲಿ ರಾಜನು ಸಂಸಾರ ಸೌಖ್ಯದ ಸಾರವನ್ನು ಸವಿಯುತ್ತಾ ಬಹುಕಾಲ ಕಳೆದನು. ವಯಸ್ಸು ಇಳಿಮುಖವಾಯಿತು. ಆದರೂ ವಂಶಲತೆಯನ್ನು ಹಬ್ಬಿಸಬಲ್ಲ ಮಕ್ಕಳು ಮಾತ್ರ ಉದಯಿಸಲಿಲ್ಲ. ಯೌವನ ಕಳೆದಂತೆಲ್ಲ ಮಕ್ಕಳ ಚಿಂತೆ ಬಲವಾಯಿತು ಆತನಿಗೆ. ದೇವರಿಗೆ ಹರಕೆ ಹೊತ್ತಾಯಿತು; ಸೇವೆ ಸಲ್ಲಿಸಿದುದಾಯಿತು. ಆದರೂ ಕೋರಿಕೆ ಈಡೇರಲಿಲ್ಲ. ಕಡೆಗೆ ಪುತ್ರ ಜನನಕ್ಕಾಗಿ ಅಶ್ವಮೇಧ ಯಾಗವನ್ನು ಕೈಕೊಳ್ಳಬೇಕೆಂದು ಆತನಿಗೆ ಸ್ವಯಂ ಪ್ರೇರಣೆಯಾಯಿತು. ಮಂತ್ರ ಪುರೋಹಿತರಲ್ಲಿ ಆ ವಿಚಾರವನ್ನು ಪ್ರಸ್ತಾಪಮಾಡಿ, ಅವರ ಅಭಿಪ್ರಾಯದಂತೆ ಆತನು ಯಜ್ಞದ ಪೌರೋಹಿತ್ಯವನ್ನು ವಹಿಸಲು ಋಷ್ಯಶೃಂಗ ಮಹರ್ಷಿಯನ್ನು ಕರೆಸಿದನು. ಆತನ ಮೇಲ್ವಿಚಾರಣೆಯಲ್ಲಿ ಯಜ್ಞಕಾರ್ಯಗಳು ಸಾಂಗವಾಗಿ ವಿಜೃಂಭಣೆಯಿಂದ ನೆರವೇರಿದುವು. ದಾನಧರ್ಮಗಳೂ ಸಂತರ್ಪಣೆ ಸಮಾರಾಧನೆಗಳೂ ಯಥೇಚ್ಚವಾಗಿ ನಡೆದುವು. ಜಗತ್ತಿನ ಜನರೆಲ್ಲರೂ ದಶರಥನ ಔದಾರ್ಯದಿಂದ ತಣಿದು ತೃಪ್ತಿಗೊಂಡರು.

ಮಹಾಪುರುಷನೊಬ್ಬನು ಯಜ್ಞಕುಂಡದಿಂದ ಮೇಲೆದ್ದು ಕಾಣಿಸಿಕೊಂಡನು. ಆತನ ಕೈಯ್ಯಲ್ಲಿ ಪಾಯಸಪೂರ್ಣವಾದ ಪಾತ್ರೆ ಇತ್ತು.

ಅಶ್ವಮೇಧಾನಂತರ ಮಹಾಮತಿವಂತನಾದ ಋಷ್ಯಶೃಂಗಮುನಿ ಪುತ್ರಪ್ರದವಾದ ಪುತ್ರಕಾಮೇಷ್ಟಿಯೆಂಬ ಯಾಗವನ್ನು ದಶರಥನಿಂದ ಮಾಡಿಸಿದನು. ಆ ಯಜ್ಞಾಂತ್ಯದಲ್ಲಿ ದಿವ್ಯಾಲಂಕಾರಗಳಿಂದ ಭೂಷಿತನಾಗಿ, ಪ್ರಜ್ವಲಿಸುವ ಅಗ್ನಿಜ್ವಾಲೆಯಂತೆ ಕಾಂತಿಯುಕ್ತನಾಗಿರುವ ಮಹಾಪುರಷನೊಬ್ಬನು ಯಜ್ಞ ಕುಂಡದಿಂದ ಮೇಲೆದ್ದು ಕಾಣಿಸಿಕೊಂಡನು. ಆತನ ಕೈಯಲ್ಲಿ ಪಾಯಸಪೂರ್ಣವಾದ ಒಂದು ಪಾತ್ರೆಯಿತ್ತು. ಆ ಅಗ್ನಿದೇವನು ದಶರಥನನ್ನು ಕುರಿತು “ಎಲೈ ರಾಜನೆ, ಬ್ರಹ್ಮನಿಂದ ಪ್ರೇರಿತರಾದ ದೇವತೆಗಳು ನಿನಗಾಗಿ ಈ ದೇವನಿರ್ಮಿತವಾದ ಪಾಯಸವನ್ನು ಕಳುಹಿಸಿದ್ದಾರೆ. ಇದು ಸಂತಾನದಾಯಕವಾದುದು. ಇದನ್ನು ನಿನ್ನ ಪತ್ನಿಯರು ಸೇವಿಸಲಿ. ಇದರಿಂದ ನಿನ್ನ ಇಷ್ಟಾರ್ಥಸಿದ್ಧಿಯಾಗುತ್ತದೆ” ಎಂದು ಹೇಳಿದನು. ನಿರ್ಧನನಿಗೆ ವಿತ್ತಪ್ರಾಪ್ತಿಯಾದಷ್ಟು ಅನಂದವಾಯಿತು ದಶರಥನಿಗೆ. ಅತ್ಯಂತ ಹರ್ಷದಿಂದ ಆ ಪಾಯಸಪಾತ್ರೆಯನ್ನು ತೆಗೆದುಕೊಂಡು, ಆ ಪುರುಷನಿಗೆ ಭಕ್ತಿಯಿಂದ ನಮಸ್ಕರಿಸಿದನು. ಅಷ್ಟರಲ್ಲಿ ಆ ದೈವಶಕ್ತಿ ಅಂತರ್ಧಾನವಾಯಿತು.

ದಶರಥನು ಪಾಯಸಪಾತ್ರೆಯೊಡನೆ ಅರಮನೆಯನ್ನು ಪ್ರವೇಶಿಸಿದನು. ಶರತ್ಕಾಲದ ಚಂದ್ರಕಿರಣಗಳಿಂದ ಅಂತರಿಕ್ಷ ಉಲ್ಲಾಸಗೊಳ್ಳುವಂತೆ ಸಂತೋಷದ ಸುದ್ದಿಯಿಂದ ಅಂತಃಪುರ ಸಂತಸಗೊಂಡಿತು. ದಶರಥನು ಪಾತ್ರೆಯಲ್ಲಿದ್ದ ಪಾಯಸದಲ್ಲಿ ಅರ್ಧವನ್ನು ಪಟ್ಟದ ರಾಣಿಯಾದ ಕೌಸಲ್ಯೆಗೆ ಕೊಟ್ಟನು. ಉಳಿದುದರಲ್ಲಿ ಅರ್ಧವನ್ನು ಸುಮಿತ್ರೆಗೆ ಕೊಟ್ಟು, ಮಿಕ್ಕುದರಲ್ಲಿ ಅರ್ಧವನ್ನು ಕೈಕೆಗೂ ಉಳಿದುದನ್ನು ಪುನಃ ಸುಮಿತ್ರೆಗೂ ಕೊಟ್ಟನು. ಪಾಲಿಗೆ ಬಂದ ಪಾಯಸವನ್ನು ಸೇವಿಸುತ್ತಲೆ ಆ ರಾಣಿಯರು ಸೂರ್ಯನಂತೆಯೂ ಅಗ್ನಿಯಂತೆಯೂ ತೇಜೋವಿಶಿಷ್ಟರಾದರು. ಕೆಲವು ದಿನಗಳಲ್ಲಿ ಆ ಮುವರು ಮಹಾರಾಣಿಯರೂ ಗರ್ಭವನ್ನು ಧರಿಸಿ ದಶರಥನ ಕಣ್ಣುಗಳಿಗೂ ಮನಸ್ಸಿಗೂ ಮಹದಾನಂದವನ್ನು ಒದಗಿಸಿದರು. ಆತನು ಪುತ್ರ ಜನನವನ್ನೇ ನಿರೀಕ್ಷಿಸುತ್ತಾ ಇರಲು, ಪುತ್ರಕಾಮೇಷ್ಟಿಯಾಗಿ ಒಂದು ವರುಷ ಉರುಳಿತು. ಚೈತ್ರ ಶುಕ್ಲ ನವಮಿಯ ಶುಭದಿನದಲ್ಲಿ ಗ್ರಹಗಳೆಲ್ಲವೂ ಉಚ್ಚಸ್ಥಾನದಲ್ಲಿರುವಾಗ ಕೌಸಲ್ಯೆ ಸುಕುಮಾರನನ್ನು ಹೆತ್ತಳು.

ದಶರಥನ ಭಾಗ್ಯ ಕಣ್ದೆರೆಯಿತು. ಆನಂದದ ಮೇಲೆ ಆನಂದ. ಕೌಸಲ್ಯೆ. ಹೆತ್ತ ಮರುಕ್ಷಣದಲ್ಲಿಯೆ ಕೈಕೆ ಭರತನನ್ನು ಹೆತ್ತಳು. ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಸುಮಿತ್ರೆಗೆ ಲಕ್ಷ್ಮಣ ಶತ್ರುಘ್ನರೆಂಬ ಅವಳಿ ಮಕ್ಕಳು ಉದಿಸಿದರು. ಅರಮನೆ ಆನಂದದ ಅಗರವಾಯಿತು. ಅಯೋಧ್ಯೆಯಲ್ಲಾದ ಉತ್ಸವಗಳಿಗೆ ಇತಿಮಿತಿಯಿಲ್ಲ. ದಶರಥನ ರಾಜ್ಯವೆಲ್ಲವೂ ಆನಂದ ಸಾಮ್ರಾಜ್ಯವಾಯಿತು. ರಾಜನು ಧನ್ಯನಾದನು, ಪ್ರಜೆಗಳು ಧನ್ಯರಾದರು, ಜಗತ್ತೂ ಧನ್ಯವಾಯಿತು.

* * *