ಇದ್ದಕ್ಕಿದ್ದಂತೆ ಆಕಾಶದಿಂದ ಘೋರವಾದ ಶಬ್ದವೊಂದು ಕೇಳಿಬಂತು. ಗಗನಮಂಡಲವೆಲ್ಲವೂ ಮೋಡ ಮುಸುಕಿದಂತಾಯ್ತು.

ವಿಶ್ವಾಮಿತ್ರಮಹರ್ಷಿ ಸಮೀಪದಲ್ಲಿಯೆ ಕಾಣುತ್ತಿದ್ದ ತನ್ನ ಆಶ್ರಮವನ್ನು ಶ್ರೀರಾಮನಿಗೆ ತೋರಿಸಿ ಅದರ ಪೂರ್ವಕಥೆಯನ್ನೆಲ್ಲ ವಿಸ್ತಾರವಾಗಿ ಅರುಹಿದನು. “ಹಿಂದೆ ಮಹಾವಿಷ್ಣು ವಾಮನಾವತಾರಕಾಲದಲ್ಲಿ ಈ ವನದಲ್ಲಿಯೆ ತಪಸ್ಸು ಮಾಡುತ್ತಿದ್ದನು. ಇಲ್ಲಿ ತಪಸ್ಸು ಮಾಡುವವನು ಸಿದ್ಧ ಪುರುಷನಾಗುವುದರಿಂದ ಇದಕ್ಕೆ ಸಿದ್ಧಾಶ್ರಮ ಎಂದು ಹೆಸರು” ಎಂದು ಹೇಳಿ, ವಾಮನನಾಗಿದ್ದಾಗ ವಿಷ್ಣು ತ್ರಿವಿಕ್ರಮಾವತಾರವನ್ನು ತಾಳಿ ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದ ಕಥೆಯನ್ನು ವಿಸ್ತಾರವಾಗಿ ತಿಳಿಸಿದನು. ಕಥೆ ಮುಗಿಯುವ ಹೊತ್ತಿಗೆ ಅವರು ಆಶ್ರಮನಕ್ಕೆ ಬಂದಿದ್ದರು. ಆಶ್ರಮವಾಸಿಗಳೆಲ್ಲರೂ ವಿಶ್ವಾಮಿತ್ರ ಮಹರ್ಷಿಯನ್ನೂ ರಾಜಪುತ್ರರನ್ನೂ ಕಂಡು ಆನಂದಭರಿತರಾದರು. ಅವರ ಆದರಾತಿಥ್ಯಗಳಿಂದ ಸಂತುಷ್ಟರಾದ ರಾಮಲಕ್ಷ್ಮಣರು ಸ್ವಲ್ಪಕಾಲ ವಿಶ್ರಮಿಸಿಕೊಂಡಮೇಲೆ ಅಕ್ಷಣವೇ ಯಜ್ಞದೀಕ್ಷೆಯನ್ನು ವಹಿಸುವಂತೆ ವಿಶ್ವಾಮಿತ್ರರನ್ನು ಪ್ರಾರ್ಥಿಸಿದರು. ಅವರ ಇಷ್ಟದಂತೆ ಮಹರ್ಷಿಯೂ ಒಡೆನೆಯೆ ದೀಕ್ಷಾಬದ್ಧನಾದನು.

ವಿಶ್ವಾಮಿತ್ರ ಋಷಿಯ ಯಜ್ಞಕಾಲದಲ್ಲಿ ರಾಮಲಕ್ಷ್ಮಣರು ಮೈಯೆಲ್ಲಾ ಕಣ್ಣಾಗಿ ಹಗಲೂ ರಾತ್ರಿಯೂ ಒಂದೇ ಸಮನಾಗಿ ಕಾವಲು ನಿಂತಿದ್ದರು. ಅವರ ಎಚ್ಚರವನ್ನು ಕಂಡು ಆಶ್ರಮದಲ್ಲಿದ್ದ ತಪಸ್ವಿಗಳೆಲ್ಲರೂ ಅವರನ್ನು ಬಾಯ್ತುಂಬ ಹೊಗಳಿದರು. ಮೊದಲ ಆರು ದಿನಗಳು ಯಾವ ತೊಂದರೆಯೂ ಇಲ್ಲದೆ ಕಳೆದುಹೋದುವು. ಏಳನೆಯ ದಿನವೆ ಯಜ್ಞ ಸಮಾಪ್ತಿಯಾಗುವ ದಿನ. ಶ್ರೀರಾಮನ ತಮ್ಮನನ್ನು ಕುರಿತು, “ಲಕ್ಷ್ಮಣಾ, ಈ ದಿನ ಬಹಳ ಎಚ್ಚರಿಕೆಯಿಂದಿರಬೇಕು” ಎಂದು ಹೇಳಿ ಬಿಲ್ಲಿಗೆ ಬಾಣ ಹೂಡಿಕೊಂಡೆ ಸಿದ್ಧವಾಗಿ ಕಾದು ನಿಂತಿದ್ದನು. ಯಜ್ಞವೇದಿಕೆಯಲ್ಲಿದ್ದ ಅಗ್ನಿಪುರುಷನು ಉಜ್ವಲವಾಗಿ ಪ್ರಜ್ವಲಿಸುತ್ತಿದ್ದನು. ಋತ್ವಿಕ್ಕುಗಳು ಮಂತ್ರಗಳನ್ನು ಪಠಿಸುತ್ತಾ ಇದ್ದರು. ಇದ್ದಕ್ಕಿದ್ದಂತೆ ಆಕಾಶದಿಂದ ಘೋರವಾದ ಶಬ್ದವೊಂದು ಕೇಳಿಬಂತು. ಗಗನಮಂಡಲವೆಲ್ಲವೂ ಮೋಡ ಮುಸುಕಿದಂತಾಯಿತು. ಮಾರೀಚ ಸುಬಾಹುಗಳೂ ಅವರ ಅನುಚರರೂ ಆಶ್ರಮದ ಮೇಲೆಲ್ಲ ನೆತ್ತರುಮಳೆ ಸುರಿಸಲು ಮೊದಲು ಮಾಡಿದರು. ಶ್ರೀರಾಮನು ತನ್ನಕಣ್ಣೆದುರಿಗೆ ನಡೆಯುತ್ತಿರುವ ಅತ್ಯಾಚಾರವನ್ನು ಕಂಡು ಕೆಂಗಣ್ಣಿನಿಂದ ರಕ್ಕಸರ ಕಡೆ ನೋಡುತ್ತಾ, ಮಾರೀಚನಿಗೆ ಗುರಿಯಿಟ್ಟು ಮಾನಸಾಸ್ರ‍್ರವನ್ನು ಪ್ರಯೋಗಿಸಿದನು. ಅದು ಅವನನ್ನು ಬಿರುಗಾಳಿಯಲ್ಲಿನ ತರಗಲೆಯಂತ ಎತ್ತಿಕೊಂಡು ಹೋಗಿ ಸಾಗರದಲ್ಲಿ ಕೆಡಹಿತು. ಅನಂತರ ಶ್ರೀರಾಮನು ಆಗ್ನೇಯಾಸ್ತ್ರವನ್ನು ಪ್ರಯೋಗಿಸಿ ಸುಬಾಹುವನ್ನು ಸಂಹರಿಸಿ ನೆಲಕ್ಕೆ ಕೆಡವಿದನು. ಉಳಿದ ನೀಚರೆಲ್ಲರೂ ಶ್ರೀರಾಮನ ವಾಯುವ್ಯಾಸ್ತ್ರಕ್ಕೆ ತುತ್ತಾಗಿ ಹಾರಿಹೋದರು. ಆಮೇಲೆ ಯಾವುದೊಂದು ತೊಂದರೆಯೂ ಇಲ್ಲದೆ ಯಜ್ಞ ಮುಂದುವರಿದು ಸಾಂಗವಾಗಿ ನೆರವೇರಿತು.

ಯಜ್ಞಾಂತ್ಯದಲ್ಲಿ ಮಹರ್ಷಿಯಾದ ವಿಶ್ವಾಮಿತ್ರನು ರಾಮಚಂದ್ರನನ್ನು ಬರಸೆಳೆದು ಬಿಗಿಯಾಗಿ ಅಪ್ಪಿಕೊಂಡು “ಮಹಾಭುಜಶಾಲಿಯಾದ ರಘುನಂದನ, ನಿನ್ನಿಂದ ನಾನು ಕೃತಾರ್ಥನಾದೆ. ನಿನ್ನ ತಂದೆಯ ಆಜ್ಞೆಯನ್ನು ನೆರೆವೇರಿಸಿದ ನೀನೂ ಯಶೋವಂತನಾದೆ. ಇದೀಗ ಈ ಆಶ್ರಯದ ಹೆಸರೂ ಸಾರ್ಥಕವಾಯಿತು” ಎಂದು ಹೇಳಿದನು. ಋಷಿಗಳೆಲ್ಲರೂ ಆ ರಾಜಪುತ್ರರನ್ನು ಪರಿಪರಿಯಾದ ಉಪಚಾರೋಕ್ತಿಗಳಿಂದ ಗೌರವಿಸಿದರು. ಮಂಗಳದಲ್ಲಿ ಮುಕ್ತಾಯವಾದ ಯಜ್ಞವನ್ನು ಕಂಡು ಎಲ್ಲರೂ ಸಂತೋಷಭರಿತರಾದರು.

* * *