ರಾಮನ ರಥದ ಧೂಳಿ ಕಣ್ಣಿಗೆ ಕಾಣುವವರೆಗೂದಶರಥ ಮಹಾರಾಜನು ಅದರಲ್ಲಿಯೇ ನಟ್ಟ ದಿಟ್ಟಿಯಾಗಿ ನಿಂತಿದ್ದನು.

ಶ್ರೀರಾಮನ ರಥದ ಧೂಳಿ ಕಣ್ಣಿಗೆ ಕಾಣುವವರೆಗೂ ದಶರಥ ಮಹಾರಾಜನು ಅದರಲ್ಲಿಯೇ ನಟ್ಟ ದಿಟ್ಟಿಯಾಗಿ ನಿಂತಿದ್ದನು. ಅದು ಕಣ್ಮರೆಯಾದೊಡನೆಯೆ ಆತನು ಮೂರ್ಛಿತನಾಗಿ ಬುಡ ಕಡಿದ ಮರದಂತೆ ನೆಲಕ್ಕುರುಳಿದನು. ಬಳಿಯೆ ನಿಂತಿದ್ದ ಕೌಸಲ್ಯಾದೇವಿ ಆತನನ್ನು ಉಪಚರಿಸಿ ಎಚ್ಚರಿಸಿದಳು. ಅನಂತರ ಆತನ ಬಲತೋಳನ್ನು ಹಿಡಿದುಕೊಂಡು ಅರಮನೆಯೊಳಕ್ಕೆ ಕರೆದುಕೊಂಡು ಹೊರಟಳು. ಕೈಕೆಯೂ ಸಹಾಯಕ್ಕೆ ಬಂದು ಆತನ ಎಡದೋಳನ್ನು ಹಿಡಿದುಕೊಳ್ಳಹೋದಳು. ಆದರೆ ದಶರಥನು ಆಕೆಯನ್ನು ನಿವಾರಸಿಸುತ್ತಾ, “ನೀನು ನನ್ನನ್ನು ಮುಟ್ಟಬೇಡ. ನೀನು ನನ್ನ ಹೆಂಡತಿಯಲ್ಲ. ನಿನ್ನನ್ನು ನಾನು ತ್ಯಜಿಸಿದ್ದೇನೆ. ನಿನ್ನ ಮುಖಾವಲೋಕನ ಕೂಡ ನನಗೆ ಸಹಿಸದು. ನೀನು ಮಾತ್ರವೆ ಅಲ್ಲ; ನಿನ್ನವರೆಲ್ಲರೂ ನನ್ನಿಂದ ಬಹಿಷ್ಕೃತರು. ಜ್ಯೇಷ್ಠನಿಗೆ ಸಲ್ಲಬೇಕಾದ ಈ ರಾಜ್ಯವನ್ನು ನಿನ್ನ ಮಗನು ಸ್ವೀಕರಿಸುವುದಾದರೆ ಆತನೂ ತ್ಯಾಜ್ಯನೆ. ನಾನು ಸತ್ತ ಮೇಲೆ ನನಗೆ ಆತನು ಕೊಡುವ ಜಲಾಂಜಲಿ ಕೂಡ ನನ್ನನ್ನು ಸೇರದಿರಲಿ” ಎಂದು ಹೇಳಿ ಕೌಸಲ್ಯೆಯ ಸಹಾಯದಿಂದ ಆಕೆಯ ಅಂತಃಪುರವನ್ನು ಕುರಿತು ಹೊರಟನು. ಅರಣ್ಯದಲ್ಲಿ ತನ್ನ ಮಗನು ಪಡಬಹುದಾದ ಕಷ್ಟಗಳನ್ನು ನೆನೆನೆನೆದು ಆತನು ತಲ್ಲಣಿಸುತ್ತಿದ್ದನು. ಪಾಪ! ಜನಕಮಹಾರಾಜನ ಮೋಹದ ಕುವರಿಯಾದ ಸೀತೆಗೆ ಅದೆಂತಹ ಕಷ್ಟಪ್ರಾಪ್ತಿ! ಲಕ್ಷ್ಮಣನೆಂತಹ ಸದ್ಗುಣವಂತ! ದಶರಥನ ತಲೆಯ ತುಂಬ ಇವೇ ಭಾವನೆ. ಹಂಸತೂಲಿಕಾತಲ್ಪದ ಮೇಲೆ ಹೊರಳುತ್ತಾ ಆತನು ಉನ್ಮಾದಗ್ರಸ್ತನಂತೆ ಅರಚಿಕೊಳ್ಳುತ್ತಿದ್ದನು – “ಹಾ ರಾಘವ, ನನ್ನನ್ನು ಬಿಟ್ಟು ಹೋದೆಯಾ!” “ಹಾ, ರಾಮ! ನೀನುಹಿಂದಿರುಗುವುದನ್ನು ಕಾಣುವ ಭಾಗ್ಯ ನನಗಿಲ್ಲ. ಪುಣ್ಯಾತ್ಮರಿಗೆ ಮಾತ್ರ ಅದು ಲಭ್ಯ.” “ಕೌಸಲ್ಯಾ, ನನ್ನ ದೃಷ್ಟಿ ಶ್ರೀರಾಮನ ಹಿಂದೆಯೆ ಹೊರಟು ಹೋಯಿತು ನೀನು ನನ್ನ ಕಣ್ಣಿಗೆ ಕಾಣುತ್ತಲೆ ಇಲ್ಲ. ಎಲ್ಲಿ! ಒಮ್ಮೆ ನಿನ್ನ ಕೈಯಿಂದ ನನ್ನನ್ನು ಮುಟ್ಟು.”

ದಶರಥನ ವಿಲಾಪವನ್ನು ಕಂಡು ಕೌಸಲ್ಯೆ ಆತನ ಬಳಿ ಬಂದು ಕುಳಿತಳು. ಮಗನ ಅಗಲಿಕೆಯೆಂಬುದು ಆಕೆಯ ಕರುಳಲ್ಲಿ ಕತ್ತರಿಯಾಡಿಸಿದಂತಾಗಿತ್ತು. ಹೊಟ್ಟೆಯಲ್ಲಿದ್ದ ಕಸಿವಿಸಿಯನ್ನು ಮಾತಿನಲ್ಲಿ ಹೊರಸೂಸಿದಳು. “ಪ್ರಭು, ಕೈಕೆ ತನ್ನ ಕುಟಿಲತೆಯಿಂದ ಶ್ರೀರಾಮನನ್ನು ಅಡವಿಗಟ್ಟಿ ಪೊರೆಬಿಟ್ಟ ಹಾವಿನಂತೆ ಆನಂದದಿಂದಿದ್ದಾಳೆ. ಆಕೆ ತನ್ನ ಮಗನಾದ ಭರತನಿಗೆ ಪಟ್ಟಗಟ್ಟುವಷ್ಟರಿಂದಲೆ ಸಂತೃಪ್ತಳಾಗಿದ್ದರೆ ನನ್ನ ಮಗನು ಅಯೋಧ್ಯೆಯಲ್ಲಿ ಭಿಕ್ಷೆವೆತ್ತೆಯಾದರೂ ಬಾಳುಮಾಡುತ್ತಿದ್ದ. ಅದಕ್ಕೂ ಅವಕಾಶವಿಲ್ಲದಂತೆ ಮಾಡಿಬಿಟ್ಟಳು. ದೇವತೆಗಳ ಹವಿರ್ಭಾಗವನ್ನು ರಾಕ್ಷಸರಿಗೆ ಎತ್ತಿಕೊಡುವಂತೆ ಶ್ರೀರಾಮನಿಗೆ ಸಲ್ಲಬೇಕಾದದ ಸಾಮ್ರಾಜ್ಯವನ್ನು ನೀನುಕೈಕೆಗೆ ಎತ್ತಿಕೊಟ್ಟೆ. ನಿನ್ನಭಾಷೆಯನ್ನು ಸಲ್ಲಿಸುವುದಕ್ಕಾಗಿ ಸೀತಾರಾಮ ಲಕ್ಷ್ಮಣರು ಕಾಡುಪಾಲಾದರು. ಅಡವಿಯಲ್ಲಿ ಅವರು ಎಷ್ಟು ಕಷ್ಟಗಳಿಗೆ ಒಳಗಾಗುವರೊ, ಎಂದು ಸುಕ್ಷೇಮವಾಗಿ ಹಿಂತಿರುಗುವರೊ, ಭಗವಂತನೆ ಬಲ್ಲ. ಅಯ್ಯೋ ನಾನು ಪೂರ್ವಜನ್ಮದಲ್ಲಿ ಎಷ್ಟು ಪಾಪಗಳನ್ನು ಮಾಡಿದ್ದೆನೊ! ಎಷ್ಟು ಜನ ತಾಯಿಯಂರಿಂದ ಮಕ್ಕಳನ್ನು ಅಗಲಿಸಿದ್ದೆನೊ! ಮಹಾರಾಜ, ಪುತ್ರಶೋಕದಿಂದ ನನ್ನ ಹೊಟ್ಟೆ ಉರಿದುಹೋಗುತ್ತಿದೆ!” ಆಗ ಸಮೀಪದಲ್ಲಿಯೇ ಇದ್ದ ಸುಮಿತ್ರೆ ಆಕೆಯನ್ನು ಸಮಾಧಾನಪಡಿಸುತ್ತಾ “ಅಕ್ಕ, ಪುರುಷೋತ್ತಮನಾದ ಶ್ರೀರಾಮಚಂದ್ರನಿಗೆ ಎಲ್ಲಿದ್ದರೆ ತಾನೇ ಏನು ಭಯ? ತಂದೆಯ ಸತ್ಯಪ್ರತಿಜ್ಞೆಯನ್ನು ನೆರವೇರಿಸುವುದಕ್ಕಾಗಿ ಆನಂದದಿಂದ ಅರಣ್ಯವಾಸವನ್ನು ಕೈಕೊಂಡಿರುವ ಆತನಿಗಾಗಿ ನೀನು ಹೆಮ್ಮೆಪಡಬೇಕೆ ಹೊರತು ವ್ಯಥೆಪಡಬಾರದು. ಆತನ ಸೇವೆಗೆ ಲಕ್ಷ್ಮಣನಿದ್ದಾನೆ. ಆತನ ಮನಸ್ಸನ್ನು ರಮಿಸಲು ಸೀತೆಯಿರುತ್ತಾಳೆ. ಇವರಿಬ್ಬರ ಜೊತೆಯಲ್ಲಿ ಆತನು ಆನಂದದಿಂದ ಕಾಲ ಕಳೆಯುತ್ತಾನೆ. ಅಲ್ಲದೆ ಧರ್ಮಮೂರ್ತಿಯಾದ ನಿನ್ನ ಮಗನಲ್ಲಿ ಸೂರ್ಯನು ತನ್ನ ಕಿರಣಗಳ ಉಗ್ರತೆಯನ್ನು ಪ್ರಶಾಂತಗೊಳಿಸುತ್ತಾನೆ; ವಾಯು ಹಿತಕರನಾಗಿ ಬೀಸುತ್ತಾನೆ; ಅಡವಿ ಋತುವಿಗನುಗುಣಗಳಿಂದ ಆತನನ್ನು ಸಂತೋಷಪಡಿಸುತ್ತಾನೆ. ಆದ್ದರಿಂದ ಶ್ರೀರಾಮನು ಅಡವಿಯಲ್ಲಿಯೂ ಅರಮನೆಯಲ್ಲಿರುವಂತೆಯೆ ನಿರ್ಭಯನಾಗಿ ಸುಖವಾಗಿರುತ್ತಾನೆ. ಆತನನ್ನು ಇದಿರಿಸುವವರು ಈ ಜಗತ್ತಿನಲ್ಲಿಯೆ ಯಾರೂ ಇಲ್ಲ. ವನವಾಸವನ್ನು ಸುಖವಾಗಿ ಮುಗಿಸಿ ಹಿಂದಿರುಗಿದ ಕುಮಾರನನ್ನು ಕಂಡು ನೀನು, ಮೇಘವು ಪರ್ವತದ ಮೇಲೆ ಮಳೆಗರೆಯುವಂತೆ, ಆನಂದಬಾಷ್ಪಗಳನ್ನು ಸುರಿಸುತ್ತೀಯೆ. ಎಂದಳು. ತಂಗಿ ಸುಮಿತ್ರೆಯ ಸಂತೈಕೆಯ ಮಾತುಗಳಿಂದ ಕೌಸಲ್ಯೆಯ ಹೃದಯಲ್ಲಿ ಒಂದಿನಿತು ಧೈರ್ಯ ಸಂಚಾರವಾದಂತಾಯಿತು.

* * *