‘ಶ್ರೀರಾಮಚಂದ್ರನನ್ನು ಕಾಣಬೇಕು; ಸೀತಾವೃತ್ತಾಂತವನ್ನು ನಿವೇದಿಸಬೇಕು’ – ಈ ಉತ್ಸಾಹದಲ್ಲಿದ್ದ ವಾನರರಿಗೆ ಒಂದಕ್ಕೆ ಹತ್ತರಷ್ಟು ಬಲ ಬಂದಂತಾಗಿತ್ತು. ಆದ್ದರಿಂದ ಆಕಾಶವನ್ನು ಮುಚ್ಚಿಹಾಕುವ ದಟ್ಟ ಮೋಡಗಳಂತೆ ಅವರೆಲ್ಲರೂ ಗಗನಮಾರ್ಗದಲ್ಲಿ ಹಾರಿಬಂದು ಕಿಷ್ಕಿಂಧೆಗೆ ಬಹು ಸಮೀಪದಲ್ಲಿರುವ ಸುಗ್ರೀವನ ಮಧುವನದ ಬಳಿ ನೆಲಕ್ಕಿಳಿದರು. ಆ ವನವೆಂದರೆ ಸುಗ್ರೀವನಿಗೆ ಪಂಚಪ್ರಾಣ. ಅದನ್ನು ರಕ್ಷಿಸಲು ಆತನು ತನ್ನ ಸೋದರಮಾವನಾದ ದಧಿಮುಖನೆಂಬುವನನ್ನು ನೇಮಿಸಿದ್ದನು. ಆತನು ಅಲ್ಲಿಯೆ ವಾಸಮಾಡಿಕೊಂಡು ಸದಾ ಅದರ ಸಂರಕ್ಷಣೆಯಲ್ಲಿ ನಿರತನಾಗಿದ್ದನು. ಆ ವನ ಜೇನುತುಪ್ಪಕ್ಕೆ ಪ್ರಸಿದ್ಧವಾದುದು; ಅಲ್ಲಿ ಇಳಿದ ವಾನರರು ಮಧುಸೇವನೆಗೆ ಅಪ್ಪಣೆ ಕೊಡಬೇಕೆಂದು ಯುವರಾಜನನ್ನು ಪ್ರಾರ್ಥಿಸಿದರು. ಆತನು ಜಾಂಬವಂತನೊಡನೆ ಪರಾಮರ್ಶಿಸಿ ಆತನ ಆಲೋಚನೆಯಂತೆ ಅನುಜ್ಞೆಯಿತ್ತನು. ಅಪ್ಪಣೆ ದೊರೆತುದೆ ತಡ, ಆ ಕಪಿಗಳ ಹಾವಳಿ ಹೇಳತೀರದಂತಾಯಿತು. ಹಾಡುವವರು ಯಾರೋ, ಕುಣಿಯುವವರು ಯಾರೊ, ಲಾಗಹಾಕುವವರು ಯಾರೊ, ಗಟ್ಟಿಯಾಗಿ ಕೇಕೆ ಹಾಕಿಕೊಂಡು ನಗುವವರು ಯಾರೆ, ಅಮಲೇರಿದಂತೆ ತೂರಾಡುತ್ತಿರುವವರು ಯಾರೊ! ನೆಗೆಯುವುದು, ಕೂಗುವುದು, ಪರಸ್ಪರ ಆಲಿಂಗನಮಾಡಿಕೊಳ್ಳುವುದು, ಹುಚ್ಚು ಹುಚ್ಚಾಗಿ ಕುಣಿದಾಡುವುದು! ಕೆಲವರು ಗಿಡದಿಂ ಗಿಡಕ್ಕೆ ಹಾರಿದರು; ಮತ್ತೆ ಕೆಲವರು ಮರದ ತುದಿಯಿಂದ ಕೆಳಕ್ಕೆ ಕುಪ್ಪಳಿಸಿದರು. ಒಬ್ಬ ವಾನರ ಹಾಡುತ್ತಿದ್ದರೆ ಮತ್ತೊಬ್ಬ ಅವನ ಮೇಲೆ ನಗುತ್ತಾ ಕುಪ್ಪಳಿಸಿದ. ಅದನ್ನು ಕಂಡು ಮತ್ತೊಬ್ಬ ಅವನ ಮೇಲೆ ಅಳುತ್ತಾ ಕುಪ್ಪಳಿಸಿದ. ಆ ಅಳುವವನ ಮೇಲೆ ಮತ್ತೊಬ್ಬನು ಕೂಗುತ್ತಾ ಬಿದ್ದ. ಯಥೇಚ್ಚವಾಗಿ ಮಧುಪಾನಮಾಡಿತು, ಆ ಕಪಿಸೇನೆ. ಕುಡಿದು ಕುಡಿದು ಮೈಮೇಲೆ ಪ್ರಜ್ಞೆ ತಪ್ಪಿಹೋಯಿತು. ಫಲವೃಕ್ಷಗಳನ್ನೂ ಹೂ ಕಾಯಿಗಳನ್ನೂ ಎಲೆಗಳನ್ನೂ ಕಿತ್ತುಹಾಕಲು ಮೊದಲುಮಾಡಿದರು.

ಈ ಕಪಿಗಳ ಹಾವಳಿಯನ್ನು ದಧಿಮುಖ ನೋಡಿದ. “ಅಯ್ಯೋ! ಈ ವನವನ್ನು ಹೀಗೆ ಹಾಳುಮಾಡಕೂಡದು. ನೀವು ಈಗಲೆ ಇಲ್ಲಿಂದ ಹೊರಟು ಹೋಗಿರಿ” ಎಂದು ಆತನು ಆ ಕಪಿಗಳನ್ನೆಲ್ಲಾ ಗದರಿಸಿದ. ಅವನ ಮಾತು ಒಂದು ಕಪಿಗೂ ಕಿವಿಗೆ ಬಿದ್ದಂತೆ ಕಾಣಲಿಲ್ಲ. ತಮ್ಮ ಚೇಷ್ಟೆಗಳನ್ನು ಅವರು ಮುಂದುವರಿಸಿದರು. ದಧಿಮುಖನಿಗೆ ಕೋಪ ಬಂತು. ಒಬ್ಬರಿಬ್ಬರನ್ನು ಹಿಡಿದು ಗದರಿಸಿ ನಾಲ್ಕು ಒದೆಗಳನ್ನೂ ಕೊಟ್ಟ. ಆಗ ಆ ವಾನರರೆಲ್ಲಾ ಸೇರಿಕೊಂಡು ಅವನನ್ನು ಗೇಲಿಮಾಡುತ್ತಾ ಅತ್ತ ಇತ್ತ ಎಳೆದಾಡಿದರು. ಕೆಲವರು ಉಗುರುಗಳಿಂದ ಪರಚಿದರು, ಕೆಲವರು ಹಲ್ಲುಗಳಿಂದ ಕಡಿದರು, ಇನ್ನು ಕೆಲವರು ಮುಷ್ಟಿಗಳಿಂದ ಗುದ್ದಿದರು, ಮತ್ತೆ ಕೆಲವರು ಕಾಲಿನಿಂದ ಒದ್ದರು. ವನದಲ್ಲಿದ್ದ ಮಧುವೆಲ್ಲಾ ನಿಶ್ಶೇಷವಾಯಿತು. ವನವೆಲ್ಲಾ ಹಾಳಾಯಿತು. ಆದರೂ ಅವರಲ್ಲಿ ಒಬ್ಬರಾದರೂ ಪಶ್ಚಾತ್ತಾಪಪಡಲಿಲ್ಲ. ಅವರಿಗೆ ಮುಂದಾಳಾಗಿದ್ದ ಹನುಮಂತನೆ ಕೂಗಿ ಹೇಳಿದ – “ಎಲೆ ವಾನರರಿರಾ, ನೀವೆಲ್ಲರೂ ಹೆದರಬೇಡಿ, ಕುಡಿಯಿರಿ, ಚೆನ್ನಾಗಿ ಕುಡಿಯಿರಿ. ನಿಮ್ಮ ಮೇಲೆ ಕೈಮಾಡಲು ಯಾರು ಬಂದರೂ ನಾನು ನೋಡಿಕೊಳ್ಳುತ್ತೇನೆ. ” ಅಂಗದನು ಆ ಮಾತನ್ನು ಅನುಮೋದಿಸಿದನು. “ಹೌದು. ಆಂಜನೇಯ ಹೇಳಿದಂತೆ ಮಾಡಿರಿ. ಆತನು ಕಾರ್ಯವನ್ನು ಸಾಧಿಸಿಕೊಂಡು ಬಂದಿದ್ದಾನೆ, ಆದ್ದರಿಂದ ಆತನು ಹೇಳಿದ ಮೇಲೆ ಅದು ಅಕಾರ್ಯವಾದರೂ ಮಾಡಲೇಬೇಕು. ಕುಡಿಯಿರಿ, ಚೆನ್ನಾಗಿ ಕುಡಿಯಿರಿ ಮದ್ಯವನ್ನು” ಎಂದನು. ಇಷ್ಟು ಪ್ರೋತ್ಸಾಹ ಸಿಕ್ಕಮೇಲೆ ಇನ್ನು ಕೇಳಬೇಕೆನು! ಮೊದಲೇ ಕಾರ್ಯಸಾಧನೆಯ ಉತ್ಸಾಹದಿಂ ಕೊಬ್ಬಿಹೋಗಿದ್ದರು. ಈಗ ಮಧುವಿನ ಕೊಬ್ಬು ಜೊತೆಗೆ ಸೇರಿ, ಒಡೆಯರ ಆಜ್ಞೆಯೂ ಪ್ರೋತ್ಸಾಹವೂ ಸಿಕ್ಕಮೇಲೆ ಕೇಳಬೇಕಾದ್ದೇನು! ಅಲ್ಲಿದ್ದ ಕಾವಲುಗಾರರನ್ನೆಲ್ಲಾ ಹೊಡೆದೋಡಿಸಿಬಿಟ್ಟರು. ತೃಪ್ತಿಯಾಗುವವರೆಗೂ ಮಧುವನ್ನು ಕುಡಿದರು. ಅಲ್ಲಿದ್ದ ರಸಭರಿತವಾದ ಹಣ್ಣುಗಳನ್ನೆಲ್ಲಾ ತಿಂದುಹಾಕಿದರು. ಕುಣಿದು ಕುಪ್ಪಳಿಸಿದರು. ಕುಡಿದು ಹೆಚ್ಚಾದ ಮಧುವನ್ನು ನೆಲದ ಮೇಲೆಲ್ಲಾ ಚೆಲ್ಲಿದರು. ಅವರ ಕೂಗು ಅವರ ನಗುವೂ ಅವರ ಕುಣಿತವೂ ಕೊನೆಮೊದಲಿಲ್ಲವಾಯಿತು. ಅವರಲ್ಲಿ ಕೆಲವರು ದಧಿಮುಖನ ಸೇವಕರನ್ನು ಹಿಡಿದುಕೊಂಡು ವಿಚಿತ್ರವಾಗಿ ಹಿಂಸಿಸಿದರು. ಇದನ್ನು ತಾಳಲಾರದೆ ಅವರು ಓಡಿಹೋಗಿ ಒಡೆಯನಲ್ಲಿ ದೂರಿಕೊಂಡರು. ಆತನು ಕಾವಲುಗಾರರ ದೊಡ್ಡದೊಂದು ತಂಡವನ್ನೆ ಕರೆತಂದನು, ಆ ಕಪಿಗಳನ್ನು ಹೊಡೆದಟ್ಟಲು.

ಕಪಿಗಳಲ್ಲಿ ದೊಡ್ಡದೊಂದು ಕಾಳಗವೆ ಆರಂಭವಾದಂತಾಯಿತು. ಅಷ್ಟರಲ್ಲಿ ದೊಡ್ಡದೊಂದು ಮರವನ್ನು ಕೈಲಿ ಹಿಡಿದುಕೊಂಡು ವನಧ್ವಂಸಕರನ್ನು ಶಿಕ್ಷಿಸುವುದಕ್ಕಾಗಿ ಬರುತ್ತಿದ್ದ ದಧಿಮುಖನು ಅಂಗದನ ಕಣ್ಣಿಗೆ ಬಿದ್ದನು. ಆತನು ಮಧುಸೇವನೆಯಿಂದ ಮದಿಸಿ ಮೈಮೇಲೆ ಪ್ರಜ್ಞೆಯಿಲ್ಲದೆ, ದಧಿಮುಖನು ತನಗೆ ಹಿರಿಯನೆಂಬುದನ್ನೂ ಮರೆತು ಅವನನ್ನು ತನ್ನೆರಡು ಕೈಗಳಿಂದಲೂ ಅಪ್ಪಳಿಸಿದನು. ಆ ಹೊಡೆತಕ್ಕೆ, ಪಾಪ, ಆತನು ಪ್ರಜ್ಞೆತಪ್ಪಿ ನೆಲಕ್ಕೆ ಬಿದ್ದನು. ಸ್ವಲ್ಪಹೊತ್ತಿನ ಮೇಲೆ ಪ್ರಜ್ಞೆ ಬರಲು, ಆತನು ಈ ವಾನರರ ಕೈಯಿಂದ ತಪ್ಪಿಸಿಕೊಂಡು ಸ್ವಾಮಿಯಾದ ಸುಗ್ರೀವನ ಬಳಿಗೆ ಹೋಗಿ ನಡೆದ ಸಮಾಚಾರವನ್ನೆಲ್ಲ ಆತನಿಗೆ ಅರುಹಬೇಕೆಂದು ನಿಶ್ಚಯಿಸಿದನು. “ಈ ಮಧುವನ ಸುಗ್ರೀವನ ತಾತ ಮುತ್ತಾತಂದಿರ ಕಾಲದಿಂದಲೂ ರಾಜಭೋಗದ ಕುರುಹಾಗಿ ಇದ್ದುದು. ಇದು ಹಾಳಾದುದನ್ನು ಕೇಳಿದೊಡನೆಯೆ ಆತನು ಅತ್ಯಂತ ರೋಷಾವಿಷ್ಟನಾಗುವನು. ಈ ಅಂಗದಾದಿಗಳಿಗೆ ಏನೋ ಕೇಡುಗಾಲ. ರಾಜಾಜ್ಞೆಯನ್ನು ಉಲ್ಲಂಘಿಸಿರುವ ಈ ದುರ್ಮಾರ್ಗರು ವರ್ಧಾರ್ಹರೆ ಸರಿ” ಹೀಗೆಂದುಕೊಂಡು, ಆ ದಧಿಮುಖನು ಕೆಲವು ಆಳುಗಳೊಡನೆ ಸುಗ್ರೀವನ ಬಳಿಗೆ ಓಡಿಬಂದು ಆತನ ಪದತಲದಲ್ಲಿ ಅಡ್ಡಬಿದ್ದನು.

ದಧಿಮುಖನು ಬಂದು ಅಡ್ಡಬಿದ್ದಾಗ ಸುಗ್ರೀವನು ರಾಮಲಕ್ಷ್ಮಣರೊಡನೆ ಮಂತ್ರಾಲೋಚನೆಯಲ್ಲಿ ಮಗ್ನನಾಗಿದ್ದನು. ಆತನು ತನ್ನ ಸೋದರಮಾವನ ಕಂಗೆಟ್ಟ ಮುಖವನ್ನು ಕಂಡು “ಇದೇನು ವಾನರವೀರ, ನನ್ನ ಕಾಲುಗಳ ಮೇಲೆ ಬೀಳಲು ಕಾರಣವೇನು? ಇದೋ ಅಭಯವಿತ್ತಿದ್ದೇನೆ. ನಿನ್ನ ವೃತ್ತಾಂತವನ್ನು ವಿಸ್ತಾರವಾಗಿ ತಿಳಿಸು” ಎಂದನು. ಆಗ ದಧಿಮುಖನು ಮೇಲಕ್ಕೆದ್ದು “ಮಹಾರಾಜ, ಪಿತೃಪಿತಾಮಹರ ಕಾಲದಿಂದಲೂ ರಾಜರಿಗೆ ಮಾತ್ರ ಮೀಸಲಾಗಿದ್ದ ಮಧುವನ್ನು ಇಂದು ಅಂಗದಾದಿಗಳು ಹಾಳುಮಾಡಿದರು. ಅವರು ವನಪಾಲಕರನ್ನೆಲ್ಲಾ ಬಡಿದೋಡಿಸಿದರು; ಹಣ್ಣು ಹಂಪಲುಗಳನ್ನೆಲ್ಲ ಯಥೇಚ್ಛವಾಗಿ ತಿಂದು ಜೇನನ್ನೆಲ್ಲಾ ಕುಡಿದುಬಿಟ್ಟಿದ್ದಾರೆ. ಅವರು ಕುಡಿದು ಉಳಿದುದೆಲ್ಲವೂ ನೆಲದ ಪಾಲಾಯಿತು. ‘ಅಯ್ಯೋ ಬೇಡ’ ಎಂದು ಕೇಳಿಕೊಂಡ ವನಪಾಲಕರನ್ನು ಪರಿಪರಿಯಾಗಿ ಹಿಂಸಿಸಿದುದು ಮಾತ್ರ ಅಲ್ಲದೆ, ಮಧುಪಾನಮತ್ತರಾಗಿ ವನವನ್ನೆಲ್ಲಾ ತುಳಿದು ಹಾಳುಮಾಡಿದರು” ಎಂದು ಕೈಜೋಡಿಸಿ ಅರಿಕೆಮಾಡಿಕೊಂಡನು.