ಅತ್ತ ರಾಮಚಂದ್ರನು ಅರಣ್ಯಕ್ಕೆ ಪ್ರಯಾಣ ಮಾಡುತ್ತಿರಲು ಪುರಜನರೆಲ್ಲರೂ ಆತನನ್ನು ಹಿಂಬಾಲಿಸಿದರು. ಆತನ ಗೆಳೆಯರು ಎಷ್ಟು ತಡೆದರೂ ಅವರು ಬೇರೆ ನಿಲ್ಲಲಿಲ್ಲ. ಸ್ವತಃ ರಾಮಚಂದ್ರನೆ ಅವರನ್ನು ಸಮಾಧಾನಮಾಡುತ್ತಾ “ರಾಜನಾಗಲಿರುವ ಭರತನು ಸದ್ಗುಣಸಂಪನ್ನನು. ಆತನು ನಿಮ್ಮ ಹಿತವನ್ನು ಸಾಧಿಸುವುದರಲ್ಲಿ ಸದಾ ತತ್ಪರನಾಗಿರುತ್ತಾನೆ. ನೀನು ನನ್ನಲ್ಲಿ ತೋರುತ್ತಿರುವ ಅವ್ಯಾಜ ಪ್ರೇಮವನ್ನು ಆತನಲ್ಲಿ ತೋರಬೇಕಾದುದು ನಿಮ್ಮ ಕರ್ತವ್ಯ. ನಾನು ನನ್ನ ತಂದೆಯ ಮಾತನ್ನು ನಡೆಸುವುದಕ್ಕಾಗಿ ಅರಣ್ಯಕ್ಕೆ ತೆರಳುತ್ತಿದ್ದೇನೆ. ಪೂಜ್ಯವಾದ ಆತನ ಮಾತು ನನಗೆ ಹೇಗೆ ವಿಧೇಯವೂ ಹಾಗೆಯೆ ನಿಮಗೂ ವಿಧೇಯವಾದುದು” ಎಂದು ಹೇಳಿದನು. ಆದರೆ ಶ್ರೀರಾಮಪ್ರೇಮದಲ್ಲಿ ಮುಳುಗಿ ಹೋಗಿದ್ದ ಅವರಿಗೆ ಶ್ರೀರಾಮನ ಮಾತುಗಳು ಕೇಳಿಬರಲೇ ಇಲ್ಲ. ವೃದ್ಧರಾದ ಬ್ರಾಹ್ಮಣರು ರಥದ ಹಿಂದೆ ಓಡಿ ಬರುತ್ತಾ “ಎಲೆ ರಥಾಶ್ವಗಳೇ, ಮುಂದಕ್ಕೆ ಒಂದು ಹಜ್ಜೆಯನ್ನೂ ಇಡಬೇಡಿ. ಲೋಕಪೂಜ್ಯನಾದ ಶ್ರೀರಾಮನನ್ನು ಅರಣ್ಯಕ್ಕೆ ಕೊಂಡೊಯ್ಯಬೇಡಿ” ಎಂದು ಕೂಗಿಕೊಂಡರು. ಇದನ್ನು ಕಂಡು ಶ್ರೀರಾಮನು ರಥವನ್ನು ನಿಲ್ಲಿಸಿ ಸೀತಾಲಕ್ಷ್ಮಣರೊಡನೆ ತಾನೂಪಾದಚಾರಿಯಾಗಿಯೆ ಪ್ರಮಾಣ ಬೆಳೆಸಿದನು. ಆ ಮುದಿ ಹಾರುವರನ್ನು ಹಿಂದಿರುಗಿಸಲು ಅವನಿಂದಾಗಲಿಲ್ಲ. ಶ್ರೀರಾಮನು ಸ್ವಧರ್ಮವನ್ನು ಮಾತ್ರ ಲಕ್ಷಿಸಿ ಉಳಿದ ಧರ್ಮಗಳನ್ನು ಗಾಳಿಗೆ ತೂರುವುದಾದರೆ ತಾವೂ ತಮ್ಮ ಧರ್ಮಗಳನ್ನು ಬಿಟ್ಟು ಬಿಡುವುದಾಗಿ ಹೇಳಿದರು. ಅವರು ಹೀಗೆ ವಾಗ್ವಾದ ಮಾಡುತ್ತಾ ಪ್ರಯಾಣ ಮಾಡುತ್ತಿರಲು ಶ್ರೀರಾಮಮೂರ್ತಿಯನ್ನು ಹಿಂದಿರುಗೆಂದು ಬೇಡಿ ಅಡ್ಡಬಿದ್ದಿರುವುದೊ ಎಂಬಂತೆ ದಾರಿಗೆ ಅಡ್ಡವಾಗಿ ಹರಿಯುತ್ತಿದ್ದ ತಮಸಾ ನದಿ ಕಾಣಿಸಿತು. ಆ ನಂದಿಯ ಸಮೀಪದಲ್ಲಿ ಸುಮಂತ್ರನು ರಥವನ್ನು ನಿಲ್ಲಿಸಿ, ಪ್ರಯಾಣದಿಂದ ಬಳಲಿದ್ದ ಕುದುರೆಗಳನ್ನು ರಥದಿಂದ ಬಿಚ್ಚಿ. ಅವುಗಳಿಗೆ ನೀರು ಕುಡಿಸಿ, ವಿಶ್ರಾಂತಿಗೊಳಿಸಿದನು.

ತಮಾಸಾನದಿಯ ತೀರವನ್ನು ಸೇರಿದಾಗಲೆ ಬೈಗಾಗಿತ್ತು. ಶ್ರೀರಾಮನು ಆ ಇರುಳು ಅಲ್ಲಿಯೆ ತಂಗಿದನು. ಅದು ವನವಾಸದ ಪ್ರಥಮ ರಾತ್ರಿ. ಶ್ರೀರಾಮನು ಆ ರಾತ್ರಿ ಆಹಾರವೇನನ್ನೂ ತೆಗೆದುಕೊಳ್ಳಲಿಲ್ಲ. ಸ್ವಲ್ಪ ನೀರನ್ನು ಮಾತ್ರ ಕುಡಿದು ತೃಪ್ತನಾದನು. ಸುಮಂತ್ರನು ಮರದ ಚಿಗುರುಗಳನ್ನು ಹಾಸಿ ಶ್ರೀರಾಮನಿಗೊಂದು ಹಾಸಿಗೆಯನ್ನು ಸಜ್ಜುಗೊಳಿಸಿಟ್ಟನು. ಸೀತಾ ಸಮೇತನಾದ ಶ್ರೀರಾಮನು ಆ ಹಾಸಿಗೆಯಲ್ಲಿ ಪವಡಿಸಿದನು. ತಂದೆತಾಯಿಯರು ತನಗಾಗಿ ಎಷ್ಟು ಮರುಗುತ್ತಿರುವರೊ ಎಂಬ ವ್ಯಥೆಯಿಂದಲೂ ಒರಟು ಹಾಸಿಗೆಯ ಅಭ್ಯಾಸವಿಲ್ಲವಿಲ್ಲದುದರಿಂದಲೂ ಆತನಿಗೆ ಆ ರಾತ್ರಿ ನಿದ್ರೆ ಬರಲಿಲ್ಲ. ಲಕ್ಷ್ಮಣನೂ ನಿದ್ರೆಯಿಲ್ಲದೆ ತನ್ನ ಅಣ್ಣನ ಸದ್ಗುಣಗಳನ್ನು ಸುಮಂತ್ರನೊಡನೆ ವಿವರಿಸುತ್ತಲೆ ರಾತ್ರಿಯನ್ನು ಕಳೆಯುತ್ತಿದ್ದನು. ಸೀತಾರಾಮರನ್ನು ಹಿಂಬಾಲಿಸಿ ಬಂದಿದ್ದ ಪೌರರೆಲ್ಲರೂ ಸುತ್ತಮುತ್ತಿನ ಮರಗಿಡಗಳ ಕೆಳಗೆ ತಂಗಿದ್ದರು. ಶ್ರೀರಾಮನು ಬೆಳಗಿನ ಮುಂಜಾವಕ್ಕೆ ಮೇಲಕ್ಕೆದ್ದನು. ಸುತ್ತಲೂ ಮರದ ಕೆಳಗೆ ಮಲಗಿದ್ದ ಜನರನ್ನು ಕಂಡು ಆತನಿಗೆ ಬಹು ಮರುಕುವುಂಟಾಯಿತು. ಆತನು ಲಕ್ಷ್ಮಣನನ್ನು ಕರೆದು “ತಮ್ಮಾ, ಈ ಜನರ ಮೈತ್ರಿಯನ್ನು ನೋಡಿದೆಯಾ! ಇವರು ಪ್ರಾಣಗಳನ್ನಾದರೂ ತೊರೆಯುವರೆ ಹೊರತು ನಮ್ಮನ್ನು ತೊರೆಯುವಂತೆ ಕಾಣುವುದಿಲ್ಲ. ನನಗಾಗಿ ಇವರು ಇಷ್ಟು ಕಷ್ಟಕ್ಕೆ ಈಡಾಗುವುದನ್ನು ನಾನು ಸಹಿಸಲಾರೆ. ಅವರಿಗೆ ಈ ಕಷ್ಟವನ್ನು ತಪ್ಪಿಸಲು ಈಗ ಇರುವುದು ಒಂದೇ ದಾರಿ. ಸುಮಂತ್ರನನ್ನೆಬ್ಬಿಸು. ಈ ಕ್ಷಣದಲ್ಲಿಯೆ ನಾವು ಇಲ್ಲಿಂದ ಹೊರಟುಹೋಗೋಣ. ಬೆಳಗಾದ ಮೇಲೆ ಈ ಪೌರರು ನಮ್ಮನ್ನು ಕಾಣದೆ ಹಂಬಲಿಸುತ್ತಾ ಅಯೋಧ್ಯೆಗೆ ಹಿಂತಿರುಗುವರು” ಎಂದು ಹೇಳಿದನು.

ಶ್ರಿರಾಮನ ಅಪ್ಪಣೆಯಂತೆ ತೇರು ಸಿದ್ಧವಾಯಿತು. ಸೀತಾ ರಾಮ ಲಕ್ಷ್ಮಣರು ರಥವನ್ನೇರಿದರು. ಸುಮಂತ್ರನು ರಥವನ್ನು ನಡೆಸಿದನು. ಕ್ಷಣ ಮಾತ್ರದಲ್ಲಿ ತಮಸಾನದಿಯನ್ನು ದಾಟಿ ಇದಿರು ದಡವನ್ನು ಸೇರಿದುದಾಯಿತು. ಒಡನೆಯೆ ರಥದಲ್ಲಿದ್ದವರು ಕೆಳಕ್ಕಿಳಿದರು. ಶ್ರೀರಾಮನು ಸುಮಂತ್ರನನ್ನು ಕುರಿತು “ಎಲೈ ಸುಮಂತ್ರನೆ, ನೀನೊಬ್ಬನೆ ರಥದಲ್ಲಿ ಕುಳಿತು ಅಯೋಧ್ಯೆ ಕಡೆಗೆ ಅದನ್ನು ಸ್ವಲ್ಪ ದೂರ ನಡೆಸಿಕೊಂಡು ಹೊಗಿ ಪುನಃ ಹಿಂದಿರುಗಿ ಬರುವವನಾಗು. ಪೌರರು ನಾನು ಅಯೋಧ್ಯೆಗೆ ಹೋಗಿರುವೆನೆಂಬ ಭ್ರಾಂತಿಯಿಂದ ಹಿಂದಿರುಗಿ ಊರಿಗೆ ಹೋಗುವರು. ಅವರು ವೃಥಾ ನನ್ನನ್ನು ಹಿಂಬಾಲಿಸಿ ಇಲ್ಲಿ ಸಂಕಟಪಡುವುದು ಬೇಡ” ಎಂದನು. ಸುಮಂತ್ರನು ಆತನ ಅಪ್ಪಣೆಯನ್ನು ಪರಿಪಾಲಿಸಿ ರಥವನ್ನು ತಂದು ನಿಲ್ಲಿಸಲು. ಶ್ರೀರಾಮಾದಿಗಳು ಪುನಃ ರಥವೇರಿದರು. ತೇರು ವೇಗದಿಂದ ತಪೋವನಾಭಿಮುಖವಾಗಿ ಧಾವಿಸಿತು.

ರಾತ್ರಿ ಪೂರೈಸಿ ಬೆಳಗಾಯಿತು. ತಮಸಾನದಿ ತೀರದಲ್ಲಿದ್ದ ಪೌರರೆಲ್ಲರೂ ಎಚ್ಚತ್ತು ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ ಸೀತಾರಾಮರು ಇಳಿದುಕೊಂಡಿದ್ದ ಎಡೆಯನ್ನು ನೋಡಿದರು. ಅದು ಬರಿದಾಗಿತ್ತು. ಮೆಟ್ಟಿಬಿದ್ದು ಕಣ್ಣರಳಿಸಿದರು. ಸೀತಾರಾಮಲಕ್ಷ್ಮಣರೂ ಅವರು ಬಂದಿದ್ದ ರಥವೂ ಕಣ್ಮರೆಯಾಗಿದ್ದವು. ಜನರು ತಮ್ಮ ನಿದ್ರೆಯನ್ನು ನಿಂದಿಸುತ್ತಾ ಕೊಡವಿಕೊಂಡು ಮೇಲಕ್ಕೆದ್ದರು. ತೇರಿನ ಗಾಲಿಗಳು ಹರಿದುಹೋಗಿದ್ದ ಜಾಡನ್ನು ಅನುಸರಿಸಿ ಶ್ರೀರಾಮನನ್ನು ಹಿಂಬಾಲಿಸಲು ಅವರು ಪ್ರಯತ್ನ ಮಾಡಿದರು. ಆದರೆ ರಥಮಾರ್ಗ ಉತ್ತರ ದಿಕ್ಕನ್ನು ಸೂಚಿಸುತ್ತಿತ್ತು. ಸ್ವಲ್ಪ ದೂರ ಹೋದ ಮೇಲೆ ಅದೂ ಕಣ್ಣಿಗೆ ಬೀಳಲಿಲ್ಲ. ಊರಿಗೆ ಹಿಂದಿರುಗುವುದೆಂದರೆ ಅವರಿಗೆ ಹೇಗೆ ಹೇಗೊ ಆಗುತ್ತಿತ್ತು. ಊರಿನಲ್ಲಿ ಕೇಳಿದವರಿಗೆಲ್ಲ ಏನೆಂದು ಉತ್ತರವೀಯುವುದು? ಶ್ರೀರಾಮನು ಪಯಣ ಬೆಳಸಿದಾಗ ತಾವು ಸುಖವಾಗಿ ನಿದ್ರೆಹೋಗುತ್ತಿದ್ದೆವೆನ್ನುವುದೆ? ಏನು ಮಾಡಬೇಕೆಂಬುದೆ ತೋಚದಷ್ಟು ಮೂಢರಾಗಿ ಅವರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದರು. ಶ್ರೀರಾಮನ ವನವಾಸದಲ್ಲಿ ಮೊದಲರಾತ್ರಿಯನ್ನು ಅವನೊಡನೆ ತಾವು ಕಳೆದೆವೆಂಬ ಸಮಾಧಾನವೆಷ್ಟೋ ಅಷ್ಟೆ ಅವರಿಗೆ ದೊರೆತಂತಾಯಿತು.

* * *