ಪುರಜನರ ಕಣ್ಮೆರೆಸಿ ಪಯಣ ಬೆಳೆಸಿದ ಶ್ರೀರಾಮಾದಿಗಳು ಬೆಳಕು ಹರಿಯುವ ವೇಳೆಗೆ ಕೋಸಲ ದೇಶದ ಎಲ್ಲೆಯನ್ನು ಸಮೀಪಿಸಿದರು. ಶ್ರೀರಾಮನು ಹೊಲಗಳಲ್ಲಿದ್ದ ಬೆಳೆಗಳನ್ನೂ ಪುಷ್ಟಿತಗಳಾದ ತೋಟಗಳನ್ನೂ ಸೀತೆಗೆ ತೋರುತ್ತಾ, ಸುಮಂತ್ರನೊಡನೆ ಮೃಗಯಾವಿನೋದವನ್ನು ವರ್ಣಿಸುತ್ತಾ ತನ್ನ ರಾಜ್ಯದ ಎಲ್ಲೆಯನ್ನು ದಾಟಿದನು. ಒಡನೆಯೆ ಆತನು ರಥದಿಂದ ಕೆಳಕ್ಕಿಳಿದು ಮುಗಿದ ಕೈಗಳಿಂದ ಅಯೋಧ್ಯಾ ಪಟ್ಟಣಕ್ಕೆ ಅಭಿಮುಖವಾಗಿ ನಿಂತು “ಎಲೈ ಪುರುಶ್ರೇಷ್ಠನೆ, ವನವಾಸಕ್ಕೆಹೋಗಲು ದಯವಿಟ್ಟು ಅನುಮತಿಯನ್ನು ನೀಡು. ಹದಿನಾಲ್ಕು ವರ್ಷಗಳ ವನವಾಸದಿಂದ ನನ್ನ ತಂದೆಯನ್ನು ಋಣಮುಕ್ತನನ್ನಾಗಿ ಮಾಡಿದೊಡನೆಯೆ ಹಿಂದಿರುಗಿ ಬಂದು ನಿನ್ನನ್ನೂ ನನ್ನ ತಾಯಿತಂದೆಗಳನ್ನೂ ನೋಡುತ್ತೇನೆ” ಎಂದು ಪ್ರಾರ್ಥಿಸಿದನು. ಅಷ್ಟರಲ್ಲಿ ಸಮೀಪದ ಹಳ್ಳಿಯಿಂದ ಬಂದು ತನ್ನನ್ನು ದೀನವದದನದಿಂದ ನೊಡುತ್ತಾ ನಿಂತಿದ್ದ ಜನರನ್ನು ಬೀಳ್ಕೊಂಡು ಪ್ರಯಾಣವನ್ನು ಮುಂದುವರಿಸಿದನು. ದೇಶದ ಎಲ್ಲೆಗೆ ಸ್ವಲ್ಪ ದೂರದಲ್ಲಿಯೆ ಪಾವನವಾದ ದೇವ ಗಂಗಾನದಿ ಹರಿಯುತ್ತಿತ್ತು. ಶುಭ್ರಧವಳಕಾಂತಿಯಿಂದ ಹೊಳೆಯುತ್ತಿದ್ದ ಆ ನದಿಯನ್ನು ದೂರದಿಂದ ಕಾಣುತ್ತಿದ್ದಂತೆಯೆ ಶ್ರೀರಾಮನು ಭಕ್ತಿಯಿಂದ ಅದಕ್ಕೆ ವಂದನೆ ಸಲ್ಲಿಸಿದನು. ಆ ನದಿಯ ಇಕ್ಕೆಲ್ಲಗಳಲ್ಲಿಯೂ ದಟ್ಟವಾಗಿ ಬೆಳೆದಿರುವ ವೃಕ್ಷಗಳಲ್ಲಿನ ಪುಷ್ಪಗಳು ಬಗೆಬಗೆಯಾದ ಹಕ್ಕಿಗಳ ಇಂಪಾದ ಗಾನ, ನದಿಯ ಪಾತ್ರದಲ್ಲಿ ಅಲ್ಲಲ್ಲಿ ಕಾಣುತ್ತಿರುವ ಮರುಳುದಿಣ್ಣೆಗಳು, ಕುಣಿಕುಣಿದು ಹರಿಯುತ್ತಿರುವ ಪ್ರವಾಹ, ನಾನಾ ಜಲಚರಗಳು – ಇವುಗಳಿಂದ ಮನೋಹರವಾಗಿದ್ದ ಆ ನದಿತೀರದಲ್ಲಿಯೆ ಅಂದು ತಂಗಬೇಕೆನ್ನಿಸಿತು. ಆತನಿಗೆ. ಸುಮಂತ್ರನನ್ನು ಕುರಿತು, “ಎಲೈ ಸಾರಥಿಯೆ, ಮೊಗ್ಗೊಡೆದು, ಹೂ ಮೊಳೆತು ಫಲಭರಿತವಾಗಿರುವ ಈ ಇಂಗುದೀ ವೃಕ್ಷದ ಕೆಳಗಡೆಯಲ್ಲಿಯೆ ಇಳಿದುಕೊಂಡು ಮುಕ್ತಿಪ್ರದವಾದ ಗಂಗಾನದಿಯನ್ನು ಸೇವೆ ಮಾಡೋಣ” ಎಂದು ಹೇಳಿದನು. ರಥವನ್ನು ಆ ಮರದ ಬುಡದಲ್ಲಿಯೆ ನಿಲ್ಲಿಸಿ ಎಲ್ಲರೂ ಅದರಡಿಯ ಕೊಡೆನೆಳಲಲ್ಲಿ ಇಳಿದುಕೊಂಡರು.

ಗಂಗಾನದಿಯ ತೀರದಲ್ಲಿದ್ದ ಕಾಡಿಗೆಲ್ಲ ಗುಹನೆಂಬ ಬೇಡನು ರಾಜನಾಗಿದ್ದನು. ಆತನು ಶ್ರೀರಾಮನ ಪರಮಸ್ನೇಹಿತ. ರಾಮನು ಅಲ್ಲಿಗೆ ಬಂದಿರುವ ಸುದ್ದಿ ಆತನ ಕಿವಿಗೆ ಮುಟ್ಟಿತು. ಒಡನೆಯೆ ಆತನು ತನ್ನಮಂತ್ರಿಗಳ ಬಂಧುಗಳ ಸಹಿತನಾಗಿ ಷಡ್ರಸೋಪೇತವಾದ ಆಹಾರದೊಡನೆ ಶ್ರೀರಾಮನ ಬಳಿಗೆ ಬಂದನು. ಶ್ರೀರಾಮನ ಋಷಿವೇಷವನ್ನು ಕಂಡು ಆತನಿಗೆ ಬಹು ಸಂತಾಪವಾಯಿತು. ತನ್ನ ರಾಜ್ಯದಲ್ಲಿಯೆ ನಿಲ್ಲುವಂತೆ ಪ್ರಾರ್ಥಿಸಿದನು. “ಎಲೈ ಮಹಾಬಾಹು, ಈ ಭೂಮಂಡಲವೆಲ್ಲವೂ ನಿನಗೇ ಸೇರಿದುದು ನಾವೆಲ್ಲರೂ ನಿನ್ನ ಸೇವಕರು. ಈ ರಾಜ್ಯವನ್ನು ಸ್ವೀಕರಿಸಿ, ನಮ್ಮನ್ನೆಲ್ಲಾ ಪರಿಪಾಲಿಸುತ್ತಾ ಇಲ್ಲಿಯೆ ನಿಲ್ಲು” ಎಂದು ಹೇಳಿದನು. ಗೆಳೆಯನ ನುಡಿಗಳಿಗೆ ಉತ್ತರವಾಗಿ ಶ್ರೀರಾಮನು ಆತನನ್ನು ಗಾಢವಾಗಿ ಆಲಿಂಗಿಸಿಕೊಂಡನು. “ಮಿತ್ರನೆ, ನಿನ್ನ ಸ್ನೇಹಪ್ರದರ್ಶನದಿಂದ ಅತ್ಯಂತ ಸಂತುಷ್ಟನಾಗಿದ್ದೇನೆ. ನಾನೀಗ ಪಿತೃವಾಕ್ಯಪರಿಪಾಲನೆಗಾಗಿ ಋಷಿಜೀವನವನ್ನು ಕೈಕೊಂಡಿದ್ದೇನೆ. ಫಲಮೂಲಗಳನ್ನಲ್ಲದೆ ಬೇರೊಂದನ್ನು ಭುಂಜಿಸೆನು. ಈ ಕುದುರೆಗಳಿಗೆ ಸ್ವಲ್ಪ ಮೇವನ್ನು ಕೊಟ್ಟರೆ ಸಾಕು. ಮತ್ತೇನೂ ಬೇಡ. ನಮ್ಮ ತಂದೆಗೆ ಇವುಗಳಲ್ಲಿ ಬಹು ಮಮತೆ. ಇವು ತೃಪ್ತಿಹೊಂದಿದರೆ ನಾನೂ ಸುಪ್ರೀತನಾದಂತೆಯೆ” ಎಂದು ಹೇಳಿದನು.

ಆ ರಾತ್ರಿಯೆಲ್ಲವೂ ಗುಹನು ಶ್ರೀರಾಮನ ಬಳಿಯಲ್ಲಿಯೆ ನಿಂತನು. ಆತನೂ ಲಕ್ಷ್ಮಣನೂ ಶ್ರೀರಾಮನ ಗುಣಗಳನ್ನು ಕೊಂಡಾಡುತ್ತಾ, ವಿಶ್ರಮಿಸುತ್ತಿದ್ದ ಸೀತಾರಾಮರಿಗೆ ಕಾವಲಾಗಿ ಕುಳಿತಿದ್ದರು. ಗುಹನು ತನ್ನ ಗೆಳೆಯನ ರಕ್ಷಣೆಗಾಗಿ ತಾನು ನಿಂತಿರುವಾಗ ಸುಕುಮಾರನಾದ ಲಕ್ಷ್ಮಣನು ವಿಶ್ರಾಂತಿ ಹೊಂದಬಹುದೆಂದು ಹೇಳಿದನು. ಆದರೆ ಅಣ್ಣ ಅತ್ತಿಗೆಯರು ಹಾಗೆ ನೆಲದ ಮೇಲೆ ಮಗುವಂತಹ ದುಃಸ್ಥಿತಿಯಿರುವಾಗ ತನಗೆ ನಿದ್ರೆ ಬರುವುದು ಅಸಾಧ್ಯವೆಂದು ಹೇಳಿ ಲಕ್ಷ್ಮಣನು ಆತನ ಜೊತೆಯಲ್ಲಿಯೆ ಕಾದು ಕುಳಿತಿದ್ದನು. ಅಯೋಧ್ಯೆಯಲ್ಲಿ ಆ ವೇಳೆಗೆ ಏನೇನು ಅನರ್ಥ ನಡೆದಿರಬಹುದೆಂದು ಊಹಿಸುತ್ತಾ ಲಕ್ಷ್ಮಣನು ಗುಹನೊಡನೆ ಅದನ್ನು ವಿವರಿಸುತ್ತಾ ಕುಳಿತಿರುವಷ್ಟರಲ್ಲಿ ಆ ರಾತ್ರಿ ಕಳೆದು ಬೆಳ್ಳಂಬೆಳಗಾಯಿತು. ಆದಷ್ಟು ಬೇಗ ಗಂಗಾನದಿಯನ್ನು ದಾಟಿ ಹೋಗಬೇಕೆಂದು ಶ್ರೀರಾಮನು ನಿಶ್ಚಯಿಸಿದ್ದನು. ಆದುದರಿಂದ ದೊಡ್ಡ ದೋಣಿಯೊಂದನ್ನು ಸಿದ್ದಪಡಿಸುವಂತೆ ಗುಹನು ತನ್ನ ಕಡೆಯವರಿಗೆ ಆಜ್ಞಾಪಿಸಿದನು. ಕ್ಷಣಮಾತ್ರದಲ್ಲಿ ಬಲವಾದ ಒಂದು ದೋಣಿ ಪ್ರಯಾಣಕ್ಕೆ ಸಿದ್ಧವಾಯಿತು. ನಾವೆಯನ್ನೇರುವ ಮುನ್ನ ಶ್ರೀರಾಮನು ಸುಮಂತ್ರನನ್ನು ಕುರಿತು, “ಎಲೈ ಸಾರಥಿ, ಒಡನೆಯೆ ನೀನು ಅಯೋಧ್ಯೆಗೆ ಹಿಂದಿರುಗಿ ಮಹಾರಾಜರ ಸೇವೆಯಲ್ಲಿ ತತ್ಪರನಾಗಿರು. ಇನ್ನು ನಾನು ಕಾಲ್ನಡಿಗೆಯಿಂದಲೆ ಪ್ರಯಾಣವನ್ನು ಮುಂದುವರಿಸುತ್ತೇನೆ. ನನಗೆ ಹೋಗಿಬರಲು ಅನುಮತಿ ಕೊಡು” ಎಂದನು.

ಸುಮಂತ್ರನಿಗೆ ಶ್ರೀರಾಮನನ್ನು ಅಗಲುವುದೆಂದರೆ ಅತಿ ದಾರುಣವಾದ ವ್ಯಥೆಯಾಯಿತು. ಅದನ್ನು ಸಹಿಸಲಾರದ ಆತನು ಎಳೆಯ ಮಗುವಿನಂತೆ ಅತ್ತುಬಿಟ್ಟನು. ಶ್ರೀರಾಮನು ಆತನನ್ನು ಸಮಾಧಾನಪಡಿಸಿ, ತಂದೆಗೂ ತಾಯಿಯರಿಗೂ ತನ್ನಮತ್ತು ಸೀತಾಲಕ್ಷ್ಮಣರ ನಮಸ್ಕಾರಗಳನ್ನು ಅರುಹುವಂತೆ ಹೇಳಿದನು. ಅನಂತರ ಗುಹನಿಂದ ಆಲದ ಹಾಲನ್ನು ತರಸಿ. ಅದರ ಲೇಪನ ಸಹಾಯದಿಂದ ತಾನೂ ಲಕ್ಷ್ಮಣನೂ ಜಟಾಧಾರಿಗಳಾಗಿ ಸೀತೆಯೊಡನೆ ನಾವೆಯನ್ನೇರಿದರು. ನಿಷಾದರಿಗೆಲ್ಲ ಅಧಿಪತಿಯಾದ ಗುಹನು ತನ್ನವರಿಗೆ ನಾವೆಯನ್ನು ನಡೆಸಲು ಅಣತಿಯಿತ್ತನು. ಮಂದಗಮನದಿಂದ ನಾವೆ ಮುಂದುವರಿಯಿತು. ನದಿಯ ಮಧ್ಯಭಾಗವನ್ನು ಸೇರಿದ ಮೇಲೆ ಸೀತಾದೇವಿ ಗಂಗೆಗೆ ಅಭಿನಂದಿಸಿ “ತಾಯಿ, ಗಂಗಾಮಾತೆ, ಧರ್ಮಶೀಲರಾದ ರಾಮ ಲಕ್ಷ್ಮಣರೊಡನೆ ನಾನು ವನವಾಸವನ್ನು ಮುಗಿಸಿ ಸುಕ್ಷೇಮದಿಂದ ಹಿಂದಿರುಗುವಂತೆ ಅನುಗ್ರಹಿಸು. ಹಾಗೆ ನಾವು ಹಿಂತಿರುಗಿ ಪುನಃ ರಾಜ್ಯಭಾರದಲ್ಲಿ ನೆಲಸಿದ ಮೇಲೆ ರಸವತ್ತಾದ ಮಾಂಸಾನ್ನವನ್ನೂ ಸುರಾಘಟಗಳನ್ನೂ ನಿನಗರ್ಪಿಸಿ, ನಿನ್ನ ಪ್ರೀತ್ಯರ್ಥವಾಗಿ ದಾನಧರ್ಮಗಳನ್ನೂ ಮಾಡುತ್ತೇನೆ” ಎಂದು ಹರಸಿಕೊಂಡಳು. ಆಕೆಯ ಪ್ರಾರ್ಥನೆ ಮುಗಿಯುವಷ್ಟರಲ್ಲಿ ನಾವೆ ದಡವನ್ನು ಸೇರಿತು. ಮೂವರೂ ಅದರಿಂದ ಇಳಿದು ಕಾಲ್ನಡಿಗೆಯಿಂದ ತಮ್ಮ ವನಪ್ರಯಾಣವನ್ನು ಮುಂದುವರಿಸಿದರು.

ಮತ್ತೊಂದು ದಡದಲ್ಲಿ ನಿಂತು ನಟ್ಟ ದೃಷ್ಟಿಯಿಂದ ಇವರ ಕಡೆಗೇ ನೋಡುತ್ತ ನಿಂತಿದ್ದ ಗೆಳೆಯ ಗುಹನೂ ಸಾರಥಿ ಸುಮಂತ್ರನೂ ಅವರು ಕಣ್ಮರೆಯಾಗುತ್ತಲೆ ನಿಟ್ಟುಸಿರುಬಿಟ್ಟು ಅಲ್ಲಿಂದ ಹಿಂದಿರುಗಿದರು.

* * *