ಸೀತಾರಾಮಲಕ್ಷ್ಮಣರು ಗಂಗಾನದಿಯನ್ನು ದಾಟಿ ಘೋರಾರಣ್ಯವನ್ನು ಪ್ರವೇಶಿಸಿದರು. ಮಾರ್ಗವನ್ನು ತೋರಿಸುತ್ತಾ ಎಲ್ಲರಿಗೂ ಮುಂದೆ ಲಕ್ಷ್ಮಣ ಹೊರಟನು. ಆತನ ಹಿಂದೆ ಸೀತೆ ಪ್ರಯಾಣಮಾಡಿದಳು. ಅವರಿಬ್ಬರನ್ನೂ ಸಂಕ್ಷಿಸುತ್ತಾ ಶ್ರೀರಾಮನು ಹಿಂದೆ ಬರುತ್ತಿದ್ದನು. ವನವಾಸದ ಕಷ್ಟವೇನೆಂಬುದನ್ನು ಇದುವರೆಗೂ ಅವರು ಅರಿತಿರಲಿಲ್ಲ. ಅದು ಈಗ ಸ್ವಲ್ಪ ಸ್ವಲ್ಪವಾಗಿ ಅನುಭವಕ್ಕೆ ಬರಲು ಮೊದಲಾಯಿತು.

ಮಧ್ಯಾಹ್ನದ ವೇಳೆಗೆ ಹಸಿವು ಬಳಲಿಕೆಗಳು ಹೆಚ್ಚಾದುವು. ಆಗ ಜಿಂಕೆಯೊಂದನ್ನು ಬೇಟೆಯಾಡಿ ಅದರ ಮಾಂಸದಿಂದ ಹಸಿವನ್ನಡಗಿಸಿಕೊಂಡರು. ಸಂಜೆಯವರೆಗೂ ಪ್ರಯಾಣಮಾಡಿ ದೊಡ್ಡದೊಂಡು ವೃಕ್ಷದ ಕೆಳಗೆ ಆ ರಾತ್ರಿ ತಂಗಿದರು. ಲಕ್ಷ್ಮಣನು ಅಣ್ಣನಿಗಾಗಿ ಚಿಗುರಿನಿಂದ ಹಾಸಗೆಯೊಂದನ್ನು ತಯಾರಿಸಿದನು. ಆತನು ಅದರಮೇಲೆ ಕುಳಿತು ತಮ್ಮನನ್ನು “ವತ್ಸ, ಇಂದಿನಿಂದ ನಾವು ರಾತ್ರಿಯ ಕಾಲಗಳಲ್ಲಿ ಮೈಮರೆತು ನಿದ್ರಿಸದೆ ಎಚ್ಚರಿಕೆಯಿಂದಿರಬೇಕು. ಸೀತಾಸಂರಕ್ಷಣೆಯ ಕಾರ್ಯದಲ್ಲಿ ನಾವಿಬ್ಬರೂ ಮೈಯೆಲ್ಲಾ ಕಣ್ಣಾಗಿರಬೇಕು” ಎಂದು ಎಚ್ಚರಿಸಿದನು. ಅಯೋಧ್ಯೆಯಿಂದ ಅಷ್ಟುದೂರ ಬಂದಿದ್ದರೂ ಆತನ ಜೀವನವೆಲ್ಲವೂ ಅಯೋಧ್ಯೆಯಲ್ಲಿ ಇದ್ದಂತೆ ಆಗಿತ್ತು. ಕೈಕೆಯಿಂದ ದಶರಥನಿನಗೆ ಎಷ್ಟು ನೋವಾಯಿತು! ಆಕೆ ಲೋಭಿಯಾಗಿ ಎಂತಹ ಅನರ್ಥವುಂಟುಮಾಡಿದಳು! ತನ್ನ ತಾಯಿಯಾದ ಕೌಸಲ್ಯೆಗೆ ಆಕೆಯಿಂದ ಇನ್ನೂ ಏನೇನು ವಿಪತ್ತುಗಳು ಕಾದಿವೆಯೊ? ಆಲೋಚಿಸುತ್ತಾ ಹಾಗೆ ಶ್ರೀರಾಮನಿಗೆ ಲಕ್ಷ್ಮಣನನ್ನು ಹಿಂದಕ್ಕೆ ಕಳುಹಿಸಿಬಿಡಬೇಕು ಎನ್ನಿಸಿತು. ಆತನು ಹಿಂದಿರುಗಿದರೆ ತನ್ನ ಮುಪ್ಪಿನ ತಾಯ್ತಂದೆಗೆ ಇನಿತಾದರೂ ಸಮಾಧಾನವಾಗುತ್ತದೆಂದು ಆತನ ಆಶಯ. ಆದರೆ ಲಕ್ಷ್ಮಣನು ಅದಕ್ಕೆ ಒಪ್ಪಿಯಾನೆ? “ನೀನಿಲ್ಲದೆ ನನಗೆ ಸ್ವರ್ಗವೂ ರುಚಿಸದು; ನಿನ್ನನ್ನು ಅಗಲಿ ನಾನು ಜೀವಿಸಲಾರೆ” ಎಂದು ಹೇಳಿದನು. ಅವರು ಹೀಗೆ ಪರಸ್ಪರ ಮಾತನಾಡುತ್ತಿರುವಂತೆಯೆ ರಾತ್ರಿ ಕಳೆದು ಮೂಡಲು ಕೆಂಪೇರಿತು. ಮೂವರೂ ಉಪ್ಪವಡಿಸಿ ಪ್ರಾತಃಕರ್ಮಗಳನ್ನು ಮುಗಿಸಿ ತಮ್ಮ ಪ್ರಯಾಣವನ್ನು ಮುಂದುವರಿಸಿದರು.

ಕಾಡುಹಾದಿಯಲ್ಲಿ ನಡೆದೂ ನಡೆದೂ ಮಧ್ಯಾಹ್ನದ ವೇಳೆಗೆ ಗಂಗಾ ಯಮುನಾ ಸಂಗಮದೆಡೆಗೆ ಸೇರಿದರು. ದೂರದಿಂದಲೇ ಅವರಿಗೆ ಯಜ್ಞೆಶ್ವರನ ಪತಾಕೆಯಂತಿದ್ದ ಹೋಮಧೂಮ ಕಾಣಿಸಿತು. ಅದನ್ನೇ ಗುರುತಾಗಿಟ್ಟುಕೊಂಡು ಹೋಗಲು ಭರಧ್ವಾಜಾಶ್ರಮ ಗೋಚರಿಸಿತು. ಮೂವರೂ ಆಶ್ರಮವನ್ನು ಪ್ರವೇಶಿಸಿ, ಅಲ್ಲಿದ್ದ ಮಹರ್ಷಿಗೆ ಭಕ್ತಿಯಿಂದ ನಮಸ್ಕರಿಸಿದರು. ಶ್ರೀರಾಮನು ತಮ್ಮ ವೃತ್ತಾಂತವನ್ನೆಲ್ಲ ಮಹರ್ಷಿಯಲ್ಲಿ ವಿಜ್ಞಾಪಿಸಿಕೊಂಡನು. ಅದನ್ನು ಕೇಳಿ ಸುಪ್ರೀತನಾದ ಭರದ್ವಾಜ ಮಹರ್ಷಿ ಮಾನ್ಯರಾದ ಅತಿಥಿಗಳನ್ನು ಅತ್ಯಾದರದಿಂದ ಸತ್ಕರಿಸಿ, ವಾಸಯೋಗ್ಯವಾದ ಆ ಪ್ರದೇಶದಲ್ಲಿಯೆ ಅವರು ವನವಾಸದ ಅವಧಿಯನ್ನು ಕಳೆಯುವಂತೆ ತಿಳಿಸಿದನು. ಆದರೆ ಶ್ರೀರಾಮನು ಅದಕ್ಕೆ ಸಮ್ಮತಿಸಲಿಲ್ಲ. ಏಕೆಂದರೆ ಅಯೋಧ್ಯಾ ಪಟ್ಟಣಕ್ಕೂ ಕೋಸಲ ದೇಶಕ್ಕೂ ಸಮೀಪವಾಗಿತ್ತು. ಆ ಆಶ್ರಮ. ಅದು ಗೊತ್ತಾದರೆ ಜನರು ತಮ್ಮನ್ನು ಅರಸುತ್ತಾ ಬರುವ ಸಂಭವವುಂಟು. ಆದ್ದರಿಂದ ತಾವು ಇನ್ನೂ ದೂರಪ್ರದೇಶಕ್ಕೆ ಹೋಗಬೇಕಾಗಿದೆ. ಆ ಪ್ರದೇಶದಲ್ಲಿ ನೀರು ನೆರಳಿಗೂ ಗೆಡ್ಡೆ ಗೆಣಸುಗಳಿಗೂ ಅಭಾವವಿರಕೂಡದು. ಆದರೆ ಏಕಾಂತ ಸ್ಥಳವಾಗಿರಬೇಕು. ವಾಸಯೋಗ್ಯವಾದ ಅಂತಹ ಪ್ರದೇಶವಾವುದು? ಭರದ್ವಾಜರು ಅಂತಹ ಸ್ಥಳವನ್ನೆ ಶ್ರೀರಾಮನಿಗೆ ಸೂಚಿಸಿದರು. ಅವರ ಆಶ್ರಮದಿಂದ ಹತ್ತು ಕ್ರೋಶಗಳ ದೂರದಲ್ಲಿ ಚಿತ್ರಕೂಟವೆಂಬುದೊಂದು ಪರ್ವತವುಂಟು. ಅದು ಅನೇಕ ಸಸ್ಯಸಂಪತ್ತಿನಿಂದ ಸಮೃದ್ಧವದದ್ದು: ಪಕ್ಷಸಮೂಹಗಳ ಮಧುರ ಗಾನದಿಂದ ಮನೋಹರವಾದದ್ದು; ಅನೇಕ ಋಷಿಗಳು ಅದರಲ್ಲಿ ತಮ್ಮ ಆಶ್ರಮಗಳನ್ನು ಮಾಡಿಕೊಂಡಿರುವರು; ಅಲ್ಲಿ ಶ್ರೀರಾಮನು ತನ್ನ ಮಡದಿಯೊಡನೆಯೂ ತಮ್ಮನೊಡನೆಯೂ ಸುಖವಾಗಿ ಸತ್ಕಾಲಕ್ಷೇಪವನ್ನು ನಡೆಸಬಹುದು – ಎಂದು ಭರಧ್ವಾಜರು ತಿಳಿಸಿದರು. ಹೀಗೆ ಅವರು ಮಾತನಾಡುತ್ತಾ ಇರುವಷ್ಟರಲ್ಲಿ ಸಾಯಂಕಾಲವಾಗಲು ಶ್ರೀರಾಮನು ಆ ದಿನ ರಾತ್ರಿ ಅಲ್ಲಿಯೆ ತಂಗಿದನು.

ಮರುದಿನ ಬೆಳಗ್ಗೆ ಶ್ರೀರಾಮನು ಸೀತಾಲಕ್ಷ್ಮಣರೊಡನೆ ಪ್ರಯಾಣ ಸನ್ನದ್ಧನಾಗಲು, ಭರದ್ವಾಜರು ಅವರಿಗೆ ಚಿತ್ರಕೂಟದ ಮಾರ್ಗವನ್ನು ವಿವರಿಸುತ್ತಾ ಸ್ವಲ್ಪ ದೂರದವರೆಗೆ ಅವರನ್ನು ಸಾಗಕಳುಹಿಸಿ, ತನ್ನ ಆಶ್ರಮಕ್ಕೆ ಹಿಂದಿರುಗಿದನು. ಚಿತ್ರಕೂಟಕ್ಕೆ ಹೋಗಬೇಕಾದರೆ ಯಮುನಾನದಿಯನ್ನು ದಾಟಬೇಕು. ಆದರೆ ಅದು ಬಹು ವೇಗವಾಗಿ ಪ್ರವಹಿಸುತ್ತಿತ್ತು. ಕಾಲ್ನಡಗೆಯಲ್ಲಿ ಅದನ್ನು ದಾಟುವುದು ಸಾಧ್ಯವಿರಲಿಲ್ಲ. ಆದ್ದರಿಂದ ರಾಮಲಕ್ಷ್ಮಣರು ಕಟ್ಟಿಗೆಗಳಿಂದಲೂ ಒಣಗಿದ ಬಿದಿರುಗಳಿಂದಲೂ ಒಂದು ತೆಪ್ಪವನ್ನು ಮಾಡಿ ಅದನ್ನು ಲಾವಂಚದ ಬಳ್ಳಿಯಿಂದ ಬಲವಾಗಿ ಬಿಗಿದರು. ಅದರ ಮೇಲೆ ಎಳೆಯ ರೆಂಬೆಗಳನ್ನೂ ಚಿಗುರುಗಳನ್ನು ಹಾಕಿ ಸಿತಾದೇವಿಗಾಗಿ ಒಂದು ಮೆತ್ತನೆಯ ಆಸನವನ್ನು ತಯಾರಿಸಿದರು. ಅನಂತರ ಶ್ರೀರಾಮನು ಲಜ್ಜೆಯಿಂದ ನಸುಬಾಗಿ ಮುಗಳ್ನಗೆ ನಗುತ್ತಿದ್ದ ಸೀತಾದೇವಿಯನ್ನು ತಾನೇ ಕೈಹಿಡಿದು ಕರೆತಂದು ತೆಪ್ಪಕ್ಕೆ ಹತ್ತಿಸಿದನು. ಆಕೆಯ ವಸ್ತ್ರಾಭರಣಗಳನ್ನು ತೆಪ್ಪಕ್ಕೇರಿಸಿದ ಮೇಲೆ ರಾಮಲಕ್ಷ್ಮಣರು ಅದನ್ನೇರಿ ಮುಂಬರಿದರು. ಅವರು ನದಿಯ ಮೇಲಿದ್ದಷ್ಟು ಕಾಲವೂ ಸೀತಾದೇವಿ ಯಮುನೆಯನ್ನು ಕುರಿತು “ತಾಯಿ, ನನ್ನ ಪತಿ ವನವಾಸ ವ್ರತವನ್ನು ಮುಗಿಸಿಕೊಂಡು ಸುಕ್ಷೇಮದಿಂದ ಹಿಂದಿರುಗುವಂತೆ ಅನುಗ್ರಹಿಸು. ಅಯೇಧ್ಯೆಯನ್ನು ಸೇರಿದ ಮೇಲೆ ನಿನ್ನ ಪ್ರೀತ್ಯರ್ಥವಾಗಿ ಸಾವಿರಾರು ಗೋದಾನಗಳನ್ನು ಮಾಡಿ, ನೂರಾರು ಘಟಗಳ ಮದ್ಯವನ್ನು ನಿನಗರ್ಪಿಸುವೆನು” ಎಂದು ಪ್ರಾರ್ಥಿಸಿದಳು.

ಯಮುನೆಯ ಆ ಕಡೆಯ ತಡಿಯನ್ನು ಸೇರಿದೊಡನೆಯ ಸೀತಾ ರಾಮಲಕ್ಷ್ಮಣರು ತೆಪ್ಪದಿಂದ ಕೆಳಗಿಳಿದು ಚಿತ್ರಕೂಟಾಭಿಮುಖವಾಗಿ ಹೊರಟರು. ಎರಡು ಗಂಡಾನೆಗಳ ಮಧ್ಯದಲ್ಲಿ ಹೋಗುವ ಹೆಣ್ಣಾನೆಯಂತೆ ರಾಮಲಕ್ಷ್ಮಣರ ನಡುವೆ ನಡೆಯುತ್ತಿದ್ದ ಸೀತೆ ತಾನೆಂದೂ ಕಾಣದ ಮರವನ್ನೊ ಬಳ್ಳಿಯನ್ನೊ ಶ್ರೀರಾಮನಿಗೆ ತೋರಿಸಿ ಅದರ ಹೆಸರನ್ನು ಕೇಳಿ ತಿಳಿದುಕೊಳ್ಳುವಳು. ಒಮ್ಮೊಮ್ಮೆ ಮನೋಹರವಾಗಿದ್ದ ಪುಷ್ಪವನ್ನೊ ಫಲವನ್ನೊ ಕಂಡು ಆಕೆ ಅದನ್ನು ಆಶಿಸುವಳು. ಒಡನೆಯೆ ಆ ಸೋದರರಲ್ಲಿ ಒಬ್ಬನು ಅದನ್ನು ಆಕೆಗೆ ತಂದುಕೊಡವನು. ಅವುಗಳನ್ನು ಕಂಡು ಸೀತೆಯ ಮುಖ ಅರಳುವುದು. ಹೀಗೆ ಸಂತೋಷದಿಂದ ಮಾರ್ಗಕ್ರಮಣ ಮಾಡುತ್ತಾ ಎರಡು ದಿನಗಳಲ್ಲಿ ಅವರು ಚಿತ್ರಕೂಟ ಪರ್ವತದ ತಪ್ಪಲನ್ನು ಸೇರಿದರು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಂಡು ಸೀತಾರಾಮಲಕ್ಷ್ಮಣರ ಆನಂದಕ್ಕೆ ಪಾರವೆ ಇರದಾಯಿತು. ಶ್ರೀರಾಮನು ತನ್ನ ಮಡದಿಯನ್ನು ಕುರಿತು “ಎಲೆ ಕಮಲನೇತ್ರೆ, ಅಲ್ಲಿ ನೋಡು. ಪುಷ್ಪಸಮೃದ್ಧಿಯಿಂದ ಆ ವೃಕ್ಷಗಳು ಹೇಗ ಹೂದಂಡೆಗಳಿಂದ ಅಲಂಕೃತವಾದಂತೆ ಕಾಣುತ್ತಿವೆ. ಈಗತಾನೆ ಶಿಶಿರ ಋತು ಕಳೆದು ವಸಂತ ಋತು ಪ್ರಾಪ್ತವಾಗಿರುವುದರಿಂದ ಮುತ್ತುಗದ ಮರಗಳು ಪುಷ್ಪಭರಿತವಾಗಿ ಜ್ವಲಿಸುತ್ತಿರುವಂತೆ ಕಾಣುತ್ತಿವೆ. ಫಲಭರಿತವಾದ ಆ ಗೇರು ಮರಗಳನ್ನು ನೋಡು. ಇಷ್ಟುದೂರ ಬಂದು ಹಣ್ಣು ಕೀಳುವವರೆ ಯಾರೂ ಇಲ್ಲವೆಂದು ತೋರುತ್ತದೆ. ಆದ್ದರಿಂದಲೆ ಫಲಭಾರದಿಂದ ರೆಂಬೆಗಳೆಲ್ಲವೂ ನೆಲಕ್ಕೆ ಬಾಗಿಹೋಗಿವೆ. ಜಾನಕಿ. ಈ ಕಡೆ ನೋಡು. ಜೇನು ಹಲ್ಲೆಗಳು ಹೇಗೆ ಮರ ಮರದಲ್ಲಿಯೂ ಜೋಲು ಬಿದ್ದಿವೆ! ಒಂದೊಂದರಲ್ಲಿಯೂ ಬಹುಶಃ ಒಂದು ಕೋಲಗದಷ್ಟು ಜೇನುತುಪ್ಪ ದೊರೆಯಬಹುದು. ಇಲ್ಲಿನೆಲವೂ ಹೆಚ್ಚು ಹಳ್ಳತಿಟ್ಟುಗಳಿಲ್ಲದೆ ವಾಸಕ್ಕೆ ಯೋಗ್ಯವಾಗಿದೆ. ನಾವು ಇಲ್ಲಿಯೆ ಎಲ್ಲಿಯಾದರೂ ಒಂದು ಆಶ್ರಮವನ್ನು ಕಟ್ಟಿಕೊಳ್ಳಬಹುದು. ಪ್ರಿಯೆ, ಕೇಕಾಧ್ವನಿ! ಅದೊ ನೋಡು. ಗರಿಗೆದರಿ ನರ್ತಿಸುತ್ತಿರುವ ಆ ನವಿಲನ್ನು ನೋಡಿದೆಯಾ! ಆಹಾ ಅದೆಷ್ಟು ರಮ್ಯ ಈ ಪ್ರದೇಶ!” ಎಂದು ಬಣ್ಣಿಸಿದನು.

ಕಂದ ಮೂಲ ಫಲಗಳು ಸಮೃದ್ಧವಾಗಿದ್ದ ಆ ಪ್ರದೇಶದಲ್ಲಿಯೆ ವಾಸ ಮಾಡಬೆಕೆಂದು ಸೀತಾರಾಮಲಕ್ಷ್ಮಣರು ನಿಶ್ಚಯಿಸಿದರು.

ಚಿತ್ರಕೂಟ ಪರ್ವತದಲ್ಲಿ ನೂರಾರು ಋಷ್ಯಾಶ್ರಮಗಳಿದ್ದುವು. ಅವುಗಳಲ್ಲಿ ವಾಲ್ಮೀಕಿ ಋಷಿಗಳ ಆಶ್ರಮದ ಸಮೀಪದಲ್ಲಿಯೆ ಸೀತಾರಾಮಲಕ್ಷ್ಮಣರು ತಮ್ಮ ಪರ್ಣಶಾಲೆಯನ್ನು ನಿರ್ಮಿಸಿಕೊಂಡರು. ಆ ಪರ್ಣಶಾಲೆ ನೋಡುವುದಕ್ಕೆ ಅಂದವಾಗಿದ್ದುದಲ್ಲದೆ ಗಾಳಿಮಳೆಗಳನ್ನು ತಡೆಯುವುದಕ್ಕೆ ತಕ್ಕುದಾಗಿತ್ತು. ಅದರ ಸಮೀಪದಲ್ಲಿಯೆ ಮಾಲ್ಯವತೀ ನದಿ ಹರಿಯುತ್ತಿತ್ತು. ಪರ್ಣಶಾಲೆಯ ಸುತ್ತಲೂ ರಂಗು ರಂಗಿನ ಹೂಗೊಂಚಲುಗಳಿಂದ ಕಣ್ಮನಗಳನ್ನು ತಣಿಸುವ ಗಿಡಬಳ್ಳಿಗಳು ಬೆಳೆದಿದ್ದವು. ಸದಾ ಕಾಲವೂ ಹಕ್ಕಿಗಳ ಕಲಕಲರವದಿಂದ ಕರ್ಣಾನಂದವಾಗುತ್ತಿತ್ತು. ಇಂತಹ ರಸಮಯವಾದ ಸನ್ನಿವೇಶದಲ್ಲಿದ್ದ ಸೀತಾರಾಮಲಕ್ಷ್ಮಣರಿಗೆ ತಾವು ಅಯೋಧ್ಯೆಯನ್ನು ಬಿಟ್ಟು ಬಂದುದೂ ಅರಣ್ಯದಲ್ಲಿ ವಾಸವಾಗಿದ್ದುದೂ ಮರೆತುಹೋಯಿತು. ಅವರು ಅತ್ಯಂತ ಸಂತೋಷದಿಂದ ಕಾಲಯಾಪನೆ ಮಾಡುತ್ತಾ ಇದ್ದರು.

* * *