ಅನಂತರ ಸೀತಾ ರಾಮ ಲಕ್ಷ್ಮಣರು ತಮ್ಮ ಐಶ್ವರ್ಯವನ್ನೆಲ್ಲ ಬ್ರಾಹ್ಮಣರಿಗೂ ದೀನದರಿದ್ರರಿಗೂ ಹಂಚಿ, ಮಹಾರಾಜನಿಂದ ಅಪ್ಪಣೆ ಪಡೆದು ಬರುವುದಕ್ಕಾಗಿ ಆತನ ಬಳಿಗೆ ಹೊರಟುಬಂದರು. ಅರಮನೆಯ ಬಾಗಿಲಿನಲ್ಲಿಯೆ ಸುಮಂತ್ರ ಮಂತ್ರಿ ನಿಂತಿದ್ದನು. ಆತನಾಗಲೆ ಶ್ರೀರಾಮನ ವನಪ್ರಯಾಣದ ಸುದ್ಧಿಯನ್ನು ಕೇಳಿದ್ದನು. ಆದ್ದರಿಂದ ಆತನು ಅತ್ಯಂತ ವ್ಯಥಿತಾಂತಃಕರಣನಾಗಿದ್ದನು. ಶ್ರೀರಾಮನು ಆತನನ್ನು ಕುರಿತು “ನಾನು ಬಂದಿರುವೆನೆಂದು ತಂದೆಯವರಿಗೆ ನಿವೇದಿಸು” ಎಂದು ಹೇಳಿದನು. ಸುಮಂತ್ರನು ಅದೇ ರೀತಿ ಮಾಡಲಾಗಿ ದಶರಥನು ತನ್ನ ರಾಣಿಯರನ್ನೆಲ್ಲ ಮೊದಲು ಅಲ್ಲಿಗೆ ಕರೆಸಿ, ಅನಂತರ ಶ್ರೀರಾಮನನ್ನು ಅಲ್ಲಿಗೆ ಬರಿಸಿದನು. ಆತನು ಪ್ರವೇಶಿಸುತ್ತಿರುವಂತೆಯೆ ದಶರಥ ಮಹಾರಾಜನು ಆಸನದಿಂದ ಮೇಲಕ್ಕೆದ್ದು ಆರ್ತೆಯರಾದ ಮಹಾರಾಣಿಯರೊಡನೆ ಆತನನ್ನು ಇದಿರುಗೊಳ್ಳಲು ಹೊರಟವನು ದುಃಖಾತಿಶಯದಿಂದ ನಿಂತಲ್ಲಿಯೆ ಮೂರ್ಛಿತನಾಗಿ ನೆಲಕ್ಕುರುಳಿದನು. ಶ್ರೀರಾಮನು ಒಡನೆಯೆ ಲಕ್ಷ್ಮಣನೊಡನೆ ಬಳಿಸಾರಿ ಶೈತ್ಯೋಪಚಾರಗಳಿಂದ ಆತನನ್ನು ಸಂತೈಸಿದನು. ರಾಜನು ಮೂರ್ಛೆ ತಿಳಿದೊಡನೆಯೆ ಆತನು ಅವನನ್ನು ಕುರಿತು “ತಂದೆಯೆ, ನಿನ್ನ ಅಪ್ಪಣೆಯಂತೆ ದಂಡಕಾರಣ್ಯಕ್ಕೆ ಹೊಡಲು ಇದೋ ಸಿದ್ಧನಾಗಿದ್ದೇನೆ. ಲಕ್ಷ್ಮಣನೂ ಜಾನಕಿಯೂ ಹಿಂಬಾಲಿಸುತ್ತೇವೆ ಎಂದು ಹಟ ಹಿಡಿದು ಕುಳಿತಿದ್ದಾರೆ. ಬೇಡವೆಂದು ನಾನು ಎಷ್ಟು ಹೇಳಿದರೂ ಅವರು ನನ್ನ ಮಾತನ್ನು ಕೇಳುವಂತಿಲ್ಲ. ಅವರನ್ನೂ ಕರೆದುಕೊಂಡು ಹೋಗಲು ತಾವು ಅನುಮತಿಸಬೇಕೆಂದು ಬೇಡುತ್ತೇನೆ” ಎಂದು ಹೇಳಿದನು.

ಶ್ರೀರಾಮನ ನುಡಿಗಳಿಗೆ ಉತ್ತರವಾಗಿ ದಶರಥನು “ಮಗೂ, ರಾಮಚಂದ್ರ, ಕೈಕೆಯ ಮಾತಿಗೆ ಮರುಳಾಗಿ ಹಿಂದುಮುಂದರಿಯದೆ ವರಗಳನ್ನು ಕೊಟ್ಟೆ. ಮತಿಗೆಟ್ಟ ನನ್ನನ್ನು ನೀನು ನಿಗ್ರಹಿಸಿ ಈ ರಾಜ್ಯಾಧಿಪತ್ಯವನ್ನು ಸ್ವೀಕರಿಸು” ಎಂದು ಹೇಳಿದನು. ಶ್ರೀರಾಮನು ಭಕ್ತಿಯಿಂದ ಕೈಜೋಡಿಸಿಕೊಂಡು ಆತನಿಗೆ ಹೇಳಿದನು: “ಅಪ್ಪಾ, ನೀನು ಇದುವರೆಗೂ ಧರ್ಮಿಷ್ಠನಾಗಿ ರಾಜ್ಯಭಾರ ಮಾಡಿರುವೆ. ನನ್ನ ದೆಸೆಯಿಂದ ನೀನೀಗ ಅಸತ್ಯವಂತನಾಗಬೇಕೆ? ಅದಾಗದು. ಹದಿನಾಲ್ಕು ವರ್ಷಗಳ ವನವಾಸವನ್ನುಲೀಲಾಜಾಲವಾಗಿ ಕಳೆದು, ಆಮೇಲೆ ಅಯೋಧ್ಯೆಗೆ ಹಿಂದಿರುಗಿ ಬಂದು ನಿನ್ನ ಪಾದಸೇವೆಯನ್ನು ಕೈಕೊಳ್ಳುತ್ತೇನೆ. ನನ್ನನ್ನು ಆಶೀರ್ವದಿಸಿ ಕಳುಹು. ”

ದಶರಥನು ಕಣ್ಣೀರಿನ ಕೋಡಿಯನ್ನು ಹರಿಸುತ್ತಾ, “ಮಗು, ಸತ್ಯಸಂಕಲ್ಪನಾದ ನಿನ್ನನ್ನು ನಾನು ನಿಲ್ಲಿಸಲಾರೆ. ವನವಾಸಕಾಲ ನಿನಗೆ ಮಂಗಳಕರವಾಗಿರಲಿ; ಹೋಗಿ ಬಾ. ಆದರೆ ಈದಿನ ರಾತ್ರೆ ಇಲ್ಲಿದ್ದು ನಾಳೆ ನಿನ್ನ ಪ್ರಯಾಣವನ್ನು ಬೆಳಸು. ಇನ್ನು ಸ್ವಲ್ಪಕಾಲ ನನಗೂ ನಿನ್ನ ತಾಯಿಯರಿಗೂ ನಿನ್ನನ್ನು ಕಾಣುವ ಭಾಗ್ಯವನ್ನು ಕರುಣಿಸು. ನಿನ್ನ ವನವಾಸ ಜೀವನ ನಾಳೆಯಿಂದ ಪ್ರಾರಂಭವಾಗಲಿ” ಎಂದನು.

ಆದರೆ ಶ್ರೀರಾಮನು ಆ ಮಾತನ್ನು ಒಪ್ಪಲಿಲ್ಲ. “ಅಪ್ಪಾ, ಪಿತೃವಾಕ್ಯ ಪರಿಪಾಲನೆಯನ್ನು ನೆರವೇರಿಸಬೇಕೆಂಬ ಸದ್ಬುದ್ಧಿ ನಾಳಿನವರಿಗೆ ಇರುವುದೊ ಇಲ್ಲವೊ ಕಂಡವರಾರು? ಆದುದರಿಂದ ಇಂದೇ ನಾನು ಪ್ರಯಾಣ ಮಾಡುತ್ತೇನೆ. ಮಾತೆಯಾದ ಕೈಕೆಗೆ ನೀನು ಕೊಟ್ಟಿರುವ ವರಗಳಲ್ಲಿ ಸ್ವಲ್ಪವೂ ಲೋಪವಾಗುವುದು ಬೇಡ. ಈಗಲೆ ಹೊರಡಬೇಕೆಂದು ನಾನು ಮಾಡಿರುವ ಸಂಕಲ್ಪವನ್ನು ನಡೆಸಿಕೊಡು” ಎಂದು ಆತನು ತಂದೆಯನ್ನು ಬೇಡಿಕೊಂಡನು. ಆತನ ಮಾತುಗಳನ್ನು ಕೇಳಿ ದಶರಥನು ಪುನಃ ಮೂರ್ಛೆಗೊಂಡನು. ಅದನ್ನು ಕಂಡು ಕೈಕೆಯ ಹೊರತು ಅಲ್ಲಿದ್ದ ರಾಣಿವಾಸದವರೆಲ್ಲರೂ ‘ಗೊಳೋ’ ಎಂದು ಅತ್ತರು. ಇದನ್ನು ನೋಡುತ್ತಾ ನಿಂತ ಸುಮಂತ್ರನಿಗೆ ಕೈಕೆಯ ಮೇಲೆ ತಡೆಯದಷ್ಟು ಕೋಪವುಕ್ಕಿತು. ರೋಷದಿಂದ ಬುಸುಗುಟ್ಟುತ್ತಾ ಕಟಕಟ ಹಲ್ಲುಕಡಿದು ಆಕೆಯನ್ನು ನಿಂದಿಸಿನು. “ಎಲೌ ಕೇಕಯದೇವಿ, ನಿನ್ನಪತಿಯನ್ನು ನಿಂದಿಸಿ ಆತನನ್ನು ಸಂಕಟಪಡಿಸುತ್ತಿರುವ ನೀನು ನಿಜವಾಗಿಯೂ ಕುಲಘಾತಿನಿ. ಇಕ್ಷ್ವಾಕುವಂಶದಲ್ಲಿ ರಾಜನು ತನ್ನ ಮುಪ್ಪಿನಲ್ಲಿ ಹಿರಿಯ ಮಗನಿಗೆ ಪಟ್ಟಕಟ್ಟಿ ತಾನು ವಾನಪ್ರಸ್ಥಾಶ್ರಮವನ್ನು ಕೈಕೊಳ್ಳುವುದು ಸಂಪ್ರದಾಯ. ಈ ಸತ್ಸಂಪ್ರದಾಯವನ್ನು ಮುರಿಯುವಂತೆ ಮಹಾರಾಜನನ್ನು. ಬಲಾತ್ಕರಿಸಿರುವೆಯಲ್ಲಾ! ನಿನ್ನನ್ನು ಲೋಕದ ಜನರೆಲ್ಲರೂ ಛಿಃ! ಛಿಃ! ಎಂದು ನಿಂದಿಸುವುದಿಲ್ಲವೆ? ಇದು ನಿನಗೆ ಶ್ರೇಯಸ್ಕರವೆ? ನೀನೇನು ಮಾಡುವೆ? ನಿನ್ನ ವಂಶವೆ ಕೆಟ್ಟವಂಶ. ನಿನ್ನತಾಯಿ ಪರಮ ನೀಚೆ. ನೀನು ಆಕೆಯ ಮಗಳು. ಬೇವಿನ ಮರಕ್ಕೆ ಹಾಲು ಹೊಯ್ದರೆ ಅದರ ಕಹಿ ನಾಶವಾದೀತೆ? ಹಾಗೆಯೆ ನಿನ್ನನ್ನು ಪುರಸ್ಕರಿಸಿದ ಮಾತ್ರಕ್ಕೆ ನಿನ್ನ ನೀಚ ಗುಣ ಎಲ್ಲಿ ಹೋದೀತು? ಜಗತ್ತಿನಲ್ಲಿ ಯಾರೂ ಮಾಡದ ದುಷ್ಕರ್ಮವನ್ನು ನೀನು ಮಾಡುತ್ತಿರುವೆ. ಆಯಿತು. ನಿನ್ನ ಹಟವೇ ನೆರವೇರಲಿ. ನಿನ್ನ ಮಗನೇ ಈ ರಾಜ್ಯದಲ್ಲಿ ಬಾಳಲಿ. ನಾವೆಲ್ಲರೂ ಶ್ರೀರಾಮನನ್ನು ಅನುಸರಿಸಿ ಹೊರಟುಹೋಗುತ್ತೇವೆ. ” ಹೀಗೆ ಕಠೋರವಾಕ್ಯಗಳನ್ನಾಡಿ ಅದರಿಂದ ಆಕೆಯ ಕಾಠಿಣ್ಯ ಕರಗಿರಬಹುದೆಂದು ಭಾವಿಸಿ ಆಕೆಯನ್ನು ಕುರಿತು “ಮಹಾರಾಣಿ, ಪುನಃ ನಿನಗೆ ನಮಸ್ಕರಿ ಬೇಡುತ್ತೇನೆ. ನಿನ್ನಹಟವನ್ನು ಬಿಡು. ಶ್ರೀರಾಮನ ಪಟ್ಟಾಭಿಷೇಕಕ್ಕೆ ಸಮ್ಮತಿಸಿ ನಿನ್ನ ಮತ್ತು ಲೋಕದ ಶ್ರೇಯಸ್ಸನ್ನು ಸಾಧಿಸು” ಎಂದು ಬೇಡಿಕೊಂಡನು.

ಯಾರು ಏನು ಹೇಳಿದರೂ ಕೈಕೆಯ ಪಾಷಾಣಹೃದಯದಲ್ಲಿ ಕರುಣೆ ಒಸರುವಂತಿರಲಿಲ್ಲ. ಇದನ್ನು ಕಂಡ ದಶರಥನು ಸುಮಂತ್ರನನ್ನು ಕುರಿತು “ಎಲೈ ಮಂತ್ರಿಯೆ, ಅವಳನ್ನು ವ್ಯರ್ಥವಾಗಿ ಏಕೆ ಬೇಡುವೆ? ಶ್ರೀರಾಮನು ಅರಣ್ಯಕ್ಕೆ ಹೊರಡಲಿ. ಆತನ ಜೊತೆಯಲ್ಲಿಯೆ. ನನ್ನ ಚತುರಂಗ ಸೇನೆಯೂ ಸಮಸ್ತ ಪರಿವಾರವೂ ಹೊರಡಲಿ. ನನ್ನ ಮುದ್ದು ಮಗನಾದ ಶ್ರೀರಾಮನಿಗೆ ಅರಣ್ಯದಲ್ಲಿದ್ದರೂ ಯಾವುದೊಂದು ಕೊರತೆ ಆಗದಂತೆ ಏರ್ಪಡಿಸು. ಆತನು ಅರಣ್ಯದಲ್ಲಿ ಬೇಟೆಯಾಡುತ್ತಾ ಸುಖವಾಗಿ ಕಾಲಕಳೆಯುವುದಕ್ಕೆ ಅನುಕೂಲವಾಗುವಂತೆ ವಾಧ್ಯರನ್ನು ಆತನ ಜೊತೆಯಲ್ಲಿ ಕುಳುಹಿಸು. ನನ್ನ ಭಂಡಾರದಲ್ಲಿರುವ ಧನಧಾನ್ಯವೆಲ್ಲವೂ ಆತನೊಡನೆ ಸಾಗಲಿ. ಪುಣ್ಯಕ್ಷೇತ್ರಗಳಲ್ಲಿ ಯಜ್ಞ ಯಾಗಾದಿಗಳನ್ನು ಮಾಡುತ್ತಾ ಋಷಿಗಳೊಡನೆ ಸುಖವಾಗಿ ವಾಸಿಸುತ್ತಿರಲಿ” ಎಂದು ಹೇಳಿದನು.

ಈ ಮಾತುಗಳನ್ನು ಕೇಳುತ್ತಲೆ ಕೈಕೆಯ ಮುಖ ಬಾಡಿತು. ಮಹಾರಾಜನ ಎದುರಿಗೆ ಬಂದು ನಿಂತು ಆತನನ್ನು ಕುರಿತು “ಮಹಾರಾಜ, ಇದಾವ ನ್ಯಾಯ? ಜನಧನಗಳಿಲ್ಲದ ಈ ಪಟ್ಟಣದವನ್ನು ನನ್ನ ಮಗನು ಆಳಿ ತಾನೆ ಏನು ಪ್ರಯೋಜನ?” ಎಂದಳು. ಆಕೆಯ ಮಾತನ್ನು ಕೇಳಿ ದಶರಥನಿಗೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು. ಆಕೆಯನ್ನು ಕುರಿತು “ಎಲೆ ಅನಾರ್ಯೆ, ಶ್ರೀರಾಮನ ಅಗಲಿಕೆಯಿಂದ ಮೊದಲೆ ದುಃಖಿತನಾಗಿರುವ ನನ್ನನ್ನು ನಿನ್ನ ವಾಗ್ಬಾಣಗಳಿಂದ ಮತ್ತೇಕೆ ಸಂಕಟಪಡಿಸುತ್ತಿರುವೆ?” ಎಂದು ಕೋಪಿಸಿದನು. ಕೈಕೆ ಆತನಿಗಿಂತಲೂ ಹೆಚ್ಚಾಗಿ ಉರಿದೆದ್ದಳು. ಆಗ ಶ್ರೀರಾಮನೆ ಮಧ್ಯೆ ಪ್ರವೇಶಿಸಿ ಅವರ ವಾಗ್ವಾದವನ್ನು ಅಲ್ಲಿಗೇ ನಿಲ್ಲಿಸಿದನು. ದಶರಥನನ್ನು ಕುರಿತು ” ಪೂಜ್ಯನಾದ ತಂದೆಯೆ, ಸಕಲ ಭೋಗಗಳನ್ನೂ ತೊರೆದು ಋಷಿಜೀವನವನ್ನು ಕೈಕೊಂಡಿರುವ ನನಗೆ ಈ ಚತುರಂಗಬಲದಿಂದ ಏನು ಪ್ರಯೋಜನ? ಆನೆಯನ್ನು ದಾನಕೊಟ್ಟವನು ಅದನ್ನು ಕಟ್ಟುವ ಸರಪಳಿಗಾಗಿ ಮೋಹಗೊಳ್ಳುವುದೇ? ರಾಜ್ಯವನ್ನೇ ತ್ಯಾಗ ಮಾಡಿ ಹೋಗುವ ನಾನು ಧನಕನಕಾದಿಗಳನ್ನು ಆಶೀಸಲೆ? ಬೇಡ ಬೇಡ ಇವೆಲ್ಲವೂ ಭರತನ ಸ್ವತ್ತು. ಹದಿನಾಲ್ಕು ವರ್ಷ ವನವಾಸವನ್ನು ಕೈಕೊಂಡಿರುವ ನನಗೆ ಈಗ ಅಗತ್ಯವಾಗಿರುವುದು ವಲ್ಕಲ. ದಯವಿಟ್ಟು ಅವನ್ನು ತರಿಸಿಕೊಂಡು. ಆ ವಲ್ಕಲ ವಸ್ತ್ರಗಳನ್ನು ಧರಿಸಿ ರಾಜಯೋಗ್ಯವಾದ ವಸ್ತ್ರಗಳನ್ನೆಲ್ಲಾ ಇಲ್ಲಿಯೆ ತ್ಯಜಿಸಿ ಹೋಗುತ್ತೇನೆ” ಎಂದು ಹೇಳಿದನು.

ಶ್ರೀರಾಮನ ಬಾಯಿಯಿಂದ ಆ ಮಾತುಗಳು ಹೊರಡುತ್ತಿದ್ದಂತೆಯೆ ಕೈಕೆ ನಾರುಬಟ್ಟೆಗಳನ್ನು ತರಿಸಿ ಅವುಗಳನ್ನು ಆತನಿಗೆ ಕೊಟ್ಟಳು. “ಮಹಾ ಪ್ರಸಾದ” ವೆಂದು ಅವುಗಳನ್ನು ಸ್ವೀಕರಿಸಿದ ಶ್ರೀರಾಮನು ತಾನುಟ್ಟಿದ್ದ ನವುರು ಬಟ್ಟೆಗಳನ್ನು ತೆಗೆದೊಗೆದು ವಲ್ಕಲಗಳನ್ನು ಧರಿಸಿದನು. ಲಕ್ಷ್ಮಣನೂ ಅಂತೆಯೆ ಮಾಡಿದನು. ಆದರೆ ಸೀತೆ ಮಾತ್ರ ಅವುಗಳನ್ನು ಕಂಡ ಬಲೆ ಕಂಡ ಹುಲ್ಲೆಯಂತೆ ಬೆದರಿದಳು. ಕೈಕೆಯ ಕೈಲಿದ್ದ ವಲ್ಕಲಗಳನ್ನು ತೆಗೆದುಕೊಂಡಳಾದರೂ ಅವುಗಳನ್ನು ಹೇಗೆ ಉಪಯೋಗಿಸಬೇಕೆಂಬುದು ಆಕೆಗೆ ಗೊತ್ತಾಗಲಿಲ್ಲ. ಆದ್ದರಿಂದ ತನ್ನ ಗಂಡನನ್ನು ಕುರಿತು “ಸ್ವಾಮಿ, ಋಷಿಪತ್ನಿಯರು ನಾರುಸೀರೆಗಳನ್ನು ಉಡುವ ರೀತಿಯೆಂತು?” ಎಂದು ಕೇಳಿದಳು. ಜನರ ಮಧ್ಯದಲ್ಲಿ ಇಷ್ಟು ಕೇಳುವುದಕ್ಕೆ ಆಕೆಗೆ ಎಷ್ಟೋ ಸಂಕೋಚವಾದಂತಾಯಿತು. ಆ ವಲ್ಕಲಗಳನ್ನು ಕಂಠಕ್ಕೆ ಸುತ್ತಿಕೊಂಡು ಲಜ್ಜೆಯಿಂದ ತಲೆಬಾಗಿ ನಿಂತಳು. ಆಗ ಶ್ರೀರಾಮನು ಮುಂದೆ ಬಂದು ಆಕೆಯುಟ್ಟಿದ್ದ ಪಟ್ಟೆಯ ಸೀರೆಯ ಮೇಲೆಯೆ ನಾರುಮಡಿಯನ್ನು ಉಡಿಸುತ್ತಿದ್ದನು. ಅದನ್ನು ಕಂಡ ಸ್ತ್ರೀವೃಂದವೆಲ್ಲವೂ ಕಣ್ಣೀರಿನಲ್ಲಿ ಕೈತೊಳೆಯುತ್ತಾ “ರಾಮಚಂದ್ರ, ಸೀತಾದೇವಿಯ ಅರಣ್ಯಗಮನಕ್ಕೆ ಮಹಾರಾಜನು ಅನುಮತಿಯನ್ನಿತ್ತಿಲ್ಲ. ನೀನು ಅರಣ್ಯವಾಸವನ್ನು ಮುಗಿಸಿ ಬರುವವರೆಗೆ ಆಕೆ ಇಲ್ಲಿಯೆ ಇರುವಳು. ಮಂಗಳಕರಳಾದ ಆಕೆ ಅರಣ್ಯವಾಸಕ್ಕೆ ಸರ್ವಥಾ ಪಾತ್ರಳಲ್ಲ. ನಿನ್ನ ಸಹಾಯಕ್ಕೆ ಲಕ್ಷ್ಮಣ ಬರುತ್ತಾನೆ. ಆತನೊಡನೆ ನೀನು ಅರಣ್ಯವಾಸವನ್ನು ಮುಗಿಸಿ ಬಾ” ಎಂದರು. ಆದರೆ ಶ್ರೀರಾಮನು ಅವರ ಮಾತಿಗೆ ಲಕ್ಷ್ಯಕೊಡದೆ ತನ್ನ ಕಾರ್ಯವನ್ನು ಮಾಡಿ ಮುಗಿಸಿದನು.

ಆಗ ಶ್ರೀರಾಮನು ಮುಂದೆ ಬಂದು ಆಕೆ ಉಟ್ಟಿದ್ದ ಪಟ್ಟೆ ಸೀರೆಯ ಮೇಲೆಯೇ ನಾರುಮಡಿಯನ್ನು ಉಡಿಸುತ್ತಿದ್ದನು.

ಸೀತಾದೇವಿ ವಲ್ಕಲ ಉಟ್ಟುದನ್ನು ಕಂಡು ಕುಲಗುರುವಾದ ವಸಿಷ್ಠರಿಗೆ ತುಂಬಾ ಸಂಕಟವಾಯಿತು. ಆಕೆಗೆ ನಾರುಬಟ್ಟೆಯನ್ನು ತಂದುಕೊಟ್ಟ ಕೈಕೆಯನ್ನುಕೋಪದಿಂದ ದುರುಗುಟ್ಟಿಕೊಂಡು ನೋಡುತ್ತಾ “ಎಲೆ ಮರ್ಯಾದಾರಹಿತಳಾದ ದುಷ್ಟಳೆ, ಗಂಡನನ್ನು ವಂಚಿಸಿದುದಲ್ಲದೆ ಸಮುಚಿತ ಆಚಾರವನ್ನೂ ಮೀರಿ ನಡೆಯುತ್ತಿರುವೆಯಲ್ಲಾ. ಅಯ್ಯೋ ಕುಲನಾಶಕಳೆ! ನಿನ್ನ ದುಷ್ಟತನಕ್ಕೆ ಎಲ್ಲೆಯೇ ಇಲ್ಲವೆ? ಸೀತಾದೇವಿಗೆ ನಾರು ಮಡಿಯನ್ನು ಕೊಡಲು ನಿನ್ನ ಕೈಗಳಾದರೂ ಹೇಗೆ ಎದ್ದುವು? ಆಕೆ ಅರಣ್ಯಕ್ಕೇಕೆ ತೆರಳಬೇಕು? ಆಕೆ ಅಯೋಧ್ಯೆಯಲ್ಲಿಯೆ ಇದ್ದು, ಮಹಾರಾಜನು ಶ್ರೀರಾಮಚಂದ್ರನಿಗೆ ಕೊಟ್ಟ ರಾಜ್ಯವನ್ನು ಆತನ ಪರವಾಗಿ ಆಳುತ್ತಾ ಇರಲಿ. ಒಂದು ವೇಳೆ ಆಕೆಯು ಶ್ರೀರಾಮಚಂದ್ರನೊಡನೆ ತೆರುಳುವುದಾದರೆ ನಾವೊಬ್ಬರೂ ಈ ಪಟ್ಟಣದಲ್ಲಿರುವುದಿಲ್ಲ. ಸದ್ಗುಣಸಂಪನ್ನನಾದ ಭರತನು ಈ ವಿಚಾರವನ್ನು ಕೇಳಿದರೆ ಆತನೂ ನಾರುಡೆ ಧರಿಸಿ ವನವಾಸ ಕೈಕೊಳ್ಳುತ್ತಾನೆ. ಎಂದೆಂದಿಗೂ ಆತನು ನಿನ್ನನ್ನು ಅನುಸರಿಸುವುದಿಲ್ಲ. ನಿನ್ನ ಚರ್ಯೆಯಿಂದ ನೀನು ಆತನಿಗೆ ಅನಿಷ್ಟವನ್ನು ಕೋರುತ್ತಿರುವೆಯೆ ಹೊರತು ಮತ್ತೇನೂ ಅಲ್ಲ. ಶ್ರೀರಾಮನನ್ನು ಅನುಸರಿಸಿದ ಮಾನವನೇ ಈ ಜಗತ್ತಿನಲ್ಲಿಲ್ಲ. ಈಗಲೆ ನಿನಗೆ ಅದರ ಅನುಭವವಾದೀತು. ಮೊದಲು ಸೀತಾದೇವಿಗೆ ಉಡಿಸಿರುವ ಆ ವಲ್ಕಲವನ್ನು ತೆಗೆದುಹಾಕು. ನೀನು ವನವಾಸವನ್ನು ಬೇಡಿದುದು ಶ್ರೀರಾಮನೊಬ್ಬನಿಗೆ ಹೊರತು ಸೀತಾದೇವಿಗಲ್ಲ. ಆಕೆ ಪತಿಗತಪ್ರಾಣಳಾಗಿ ಆತನನ್ನು ಅನುಸರಿಸಿದರೂ ದಿವ್ಯಾಲಂಕಾರ ಭೂಷಿತೆಯಾಗಿಯೆ ಅನುಸರಿಸಲಿ” ಎಂದು ಹೇಳಿದನು.’

ವಸಿಷ್ಠರ ಮಾತು ಮುಗಿಯುವಷ್ಟರಲ್ಲಿ ಸುತ್ತಲಿದ್ದ ಹೆಂಗಸರು ಸೀತೆಯ ದುರವಸ್ಥೆಯನ್ನು ನೋಡಲಾರದೆ ದಶರಥನನ್ನು ಕಟುವಾಗಿ ನಿಂದಿಸತೊಡಗಿದರು. ಅದನ್ನು ಕೇಳಿದ ದಶರಥನು ಮನಸ್ಸಿನಲ್ಲಿ ಅಸಹ್ಯ ವೇದನೆಯನ್ನು ಅನುಭವಿಸುತ್ತಾ ಕೈಕೆಯನ್ನು ಕುರಿತು “ಎಲೈ ಕುಲನಾಶಕಿ, ಸುಕುಮಾರಿಯಾದ ಸೀತೆ ಇನ್ನೂ ಎಳೆಯ ಹರಯದವಳು. ಇಷ್ಟು ಜನರ ಮುಂದೆ ಅವಳಿಗೆ ನಾರುಸೀರೆ ಉಡಿಸುವಷ್ಟು ಕಠಿಣ ಹೃದಯಳಾದೆಯಲ್ಲ! ಆಕೆ ನಿನಗೆಸಗಿದ ಅಪರಾಧವೇನು? ವಸಿಷ್ಠರು ಹೇಳಿದಂತೆ ಆಕೆ ಸರ್ವಾಲಂಕಾರ ಭೂಷಿತೆಯಾಗಿಯೆ ವನಕ್ಕೆ ತೆರಳಲಿ” ಎಂದು ಹೇಳಿದನು.

ವನಪ್ರಯಾಣಕ್ಕೆ ಸಿದ್ಧನಾದ ಶ್ರೀರಾಮನು ತಂದೆಯನ್ನು ಬೀಳ್ಕೊಳ್ಳುವ ಮುನ್ನ ಆತನನ್ನು ಕುರಿತು “ಅಪ್ಪಾ, ಪುತ್ರವಿಯೋಗವನ್ನು ಎಂದೂ ಕಾಣದ ನನ್ನ ಮಾತೆಯನ್ನು ಸಂತವಿಡುವ ಭಾರ ನಿನ್ನದು. ನಾನು ಹೋಗಿ ಬರುತ್ತೇನೆ” ಎಂದು ಹೇಳಿ ನಮಸ್ಕರಿಸಿದನು. ಋಷಿವೇಷದಲ್ಲಿದ್ದ ಮಗನನ್ನು ಕಂಡು ದಶರಥ ಮಹಾರಾಜನ ಗಂಟಲು ಕಟ್ಟಿ ಮಾತುಗಳೆ ಹೊರಡದಂತಾಯಿತು. “ರಾಮ! ರಾಮ!” ಎಂದು ಹೇಳಿ ಆತನು ಕಣ್ಣೀರುಗರೆದನು; ಕೈಕೆಯನ್ನು ಮನಸಾರ ಶಪಿಸಿದನು. ಅನಂತರ ಸುಮಂತ್ರನನ್ನು ಕುರಿತು “ಅಯ್ಯಾ, ಉತ್ತಮಾಶ್ವಗಳನ್ನು ಕಟ್ಟಿದ ರಥದಲ್ಲಿ ಇವರನ್ನು ಕುಳ್ಳಿರಿಸಿಕೊಂಡು ಹೋಗಿ ನಮ್ಮ ರಾಜ್ಯದ ಎಲ್ಲೆಯವರೆಗೂ ಬಿಟ್ಟು ಬರುವವನಾಗು” ಎಂದು ಆಜ್ಞಾಪಿಸಿದನು. ಆತನ ಅಪ್ಪಣೆಯಂತೆ ರಥ ಸಿದ್ಧವಾಗಿ ಅರಮನೆಯ ಬಾಗಿಲಲ್ಲಿ ಬಂದು ನಿಂತಿತು. ಅನಂತರ ರಾಜನ ಅಪ್ಪಣೆಯಂತೆ ಸೀತಾದೇವಿಗಾಗಿ ಹದಿನಾಲ್ಕು ವರ್ಷಗಳವರೆಗೆ ಬೇಕಾಗುವಷ್ಟು ವಸ್ತ್ರಾಭರಣಗಳನ್ನು ರಥದಲ್ಲಿ ಅಡಕದರು. ವಸ್ತ್ರಾಭರಣಗಳಿಂದ ಅಲಂಕೃತಗಳಾಗಿ ಪ್ರಭಾತದ ಸೂರ್ಯನಂತೆ ಆಸ್ಥಾನವನ್ನೆಲ್ಲಾ ಬೆಳಗುತ್ತಿದ್ದ ಸೀತೆ, ಹೊರಡಲು ಸಿದ್ಧಳಾಗಿ, ಅತ್ತೆಗೆ ಸಮಸ್ಕರಿಸಿದಳು. ಕೌಸಲ್ಯೆ ಆಕೆಯನ್ನು ಹಿಡಿದೆತ್ತಿ ಆಲಿಂಗಿಸಿಕೊಂಡು, ಕಣ್ತುಂಬ ನೀರು ತುಂಬಿರಲು, ಆಕೆಯನ್ನು ಕುರಿತು “ಮಗು, ಜಾನಕಿ, ನೀನೇನೂ ನಾಡಾಡಿ ಹೆಣ್ಣಲ್ಲ. ನಿನಗೆ ಬುದ್ಧಿವಾದ ಹೇಳಬೇಕಾದ ಅಗತ್ಯವೂ ಇಲ್ಲ. ಕುಲಸ್ತ್ರೀಯರಿಗೆ ಪತಿಯೇ ಪರದೈವವಲ್ಲವೆ? ನಿನ್ನ ಪರದೈವದಂತಿರುವ ಶ್ರೀರಾಮನ ಕಷ್ಟಸುಖಗಳೆರಡರಲ್ಲಿಯೂ ಸಮವಾಗಿ ನೆರಳಿನಂತೆ ಅನುಸರಿಸು. ಎಂತಹ ಸಂದರ್ಭದಲ್ಲಿಯೂ ಆತನಿಗೆ ಅವಮನ್ನಣೆ ಮಾಡಬೇಡ” ಎಂದಳು. ಸೀತೆ ಅತ್ತೆಯ ಮಾತಿಗೆ “ಮಹಾಪ್ರಸಾದ”ವೆಂದು ಹೇಳಿ, ಅತ್ತೆಗೆ ಹೀಗೆಂದು ಭರವಸೆಯಿತ್ತಳು: “ಪ್ರಬೆ ಚಂದ್ರನನ್ನು ಅನುಸರಿಸುವಂತೆ ನಾನು ಪತಿಯನ್ನು ಅನುಸರಿಸುತ್ತೇನೆ”.

ಅನಂತರ ಶ್ರೀರಾಮನು ತಾಯಿಯ ಪಾದಗಳನ್ನು ಹಿಡಿದು ನಮಸ್ಕರಿ “ಅಮ್ಮಾ, ನಿನ್ನ ದುಃಖದ ಆಳವನ್ನು ನಾನು ಅರಿಯಬಲ್ಲೆ. ಆದರೆ ತಂದೆಯನ್ನು ಸಂತವಿಸುವ ಭಾರ ನಿನ್ನದು. ಹದಿನಾಲ್ಕು ವರ್ಷಗಳು ಒಂದು ರಾತ್ರಿಯಂತೆ ಕಳೆದುಹೋಗುತ್ತದೆ. ನೀನು ಚಿಂತಿಸಬೇಡ. ಅವಧಿ ಮುಗಿದೊಡನೆಯ ಕೃತಕೃತ್ಯನಾದ ನಾನು ನಿನ್ನ ಪಾದಸನ್ನಿಧಿಯಲ್ಲಿ ಸಿದ್ಧನಾಗುತ್ತೇನೆ” ಎಂದು ಹೇಳಿದನು. ದಶರಥನ ಉಳಿದ ಮುನ್ನೂರ ಐವತ್ತು ಮಂದಿ ಭಾರ್ಯೆಯರೂ ಅಲ್ಲಿಯೆ ಇದ್ದರು. ಅವರೆಲ್ಲರಿಗೂ ಪ್ರತ್ಯೇಕ ಪ್ರತ್ಯೇಕವಾಗಿ ನಮಸ್ಕರಿಸಿ “ತಾಯಿಯರಿರ, ಅಜ್ಞಾನದಿಂದಾಗಲಿ ಅತಿ ಸಲಿಗೆಯಿಂದಾಗಲಿ ನಿಮ್ಮಲ್ಲಿ ನಾನು ಏನು ಅಪರಾಧ ಮಾಡಿದ್ದರೂ ಅದನ್ನು ಕ್ಷಮಿಸಿ” ಎಂದು ಕೈಜೋಡಿಸಿ ಬೇಡಿಕೊಂಡನು. ಆತನ ಮಾತುಗಳನ್ನು ಕೇಳಿದ ರಾಣಿಯರೆಲ್ಲರೂ ಕೈಕೆಯ ಹೊರತು ಕಣ್ಣೀರುಗರೆದು ಗೋಳಿಟ್ಟರು. ಆವೊತ್ತು ಬೆಳಗಾದಂದು ಮಂಗಳವಾದ್ಯಗಳು ಭೋರ್ಗರೆಯುತ್ತಿದ್ದ ಅರಮನೆಯಲ್ಲಿ ಈಗ ರೋದನಧ್ವನಿ ತುಂಬಿಹೋಯಿತು.

ತರುವಾಯ ಲಕ್ಷ್ಮಣನ ಸರದಿ. ಆತನು ಮೊದಲು ಕೌಸಲ್ಯಗೆ ನಮ್ಕರಿಸಿದನು. ಅನಂತರ ತನ್ನ ತಾಯಿಗೆ ಅಡ್ಡಬಿದ್ದನು. ಆಕೆ ಆತನನ್ನು ಮೇಲಕ್ಕೆತ್ತಿ ಆಲಿಂಗಿಸಿಕೊಂಡು. “ಮಗೂ! ಕಿರಿಯನು ಹಿರಿಯಣ್ಣನನ್ನು ಅನುಸರಿಸುವುದು ಈ ಇಕ್ಷ್ವಾಕುವಂಶದ ಧರ್ಮ. ನಿನ್ನ ಅಣ್ಣನನ್ನೂ ಅತ್ತಿಗೆಯನ್ನೂ ಅಡವಿಯಲ್ಲಿ ಭಕ್ತಿಯಿಂದ ಸೇವಿಸು. ಶ್ರೀರಾಮಚಂದ್ರನೇ ನಿನಗೆ ತಂದೆಯೆಂದು ಭಾವಿಸು. ಸೀತಾದೇವಿಯನ್ನು ನಾನೆಂದೇ ಪರಿಗಣಿಸು. ನೀನು ಪ್ರವೇಶಿಸಿದ ಅರಣ್ಯವೇ ನಿನಗೆ ಅಯೋಧ್ಯೆಯಾಗಲಿ. ಸಂತೋಷದಿಂದ ಹೋಗಿ ಬಾ” ಎಂದು ಹರಸಿದಳು.

ಸೀತಾರಾಮಲಕ್ಷ್ಮಣರು ಹಿರಿಯರಿಂದ ಬೀಳ್ಕೊಳ್ಳುವ ಹೊತ್ತಿಗೆ ಸುಮಂತ್ರನು ಪ್ರವೇಶಿಸಿ, ರಥ ಸಿದ್ಧವಾಗಿರುವುದಾಗಿ ನಿವೇದಿಸಿದನು. ಮೊದಲು ಸೀತಾದೇವಿಯನ್ನು ರಥದಲ್ಲಿ ಕುಳ್ಳಿರಿಸಿ, ಅನಂತರ ರಾಮ ಲಕ್ಷ್ಮಣರು ರಥವನ್ನೇರಿದರು. ಅವರ ಕವಚಗಳನ್ನೂ ದಿವ್ಯಾಯುಧಗಳನ್ನೂ ಸುಮಂತ್ರನೆ ರಥದಲ್ಲಿ ತಂದಿರಿಸಿದನು. ದಶರಥ ಮಹಾರಾಜನೂ ಆತನ ಮಡದಿಯರೂ ಪರಿವಾರದವರೂ ಕಣ್ಣೀರಿಡುತ್ತಿರಲು ರಥ ಹೊರಟಿತು. ಆದರೆ ರಾಜಬೀದಿಯನ್ನು ಪ್ರವೇಶಿಸಿದೊಡನೆಯೆ ಅವರ ಪ್ರಯಾಣವೇ ಸಾಗದಂತೆ ಅಬಾಲವೃದ್ಧರಾದ ಪುರಜನರು ದಟ್ಟವಾಗಿ ಮುತ್ತಿಕೊಂಡರು ಅವರೆಲ್ಲರೂ ಗಳಗಳನೆ ಕಣ್ಣೀರು ಸುರಿಸುತ್ತಾ “ಅಪ್ಪಾ, ಸುಮಂತ್ರ, ರಥವನ್ನು ಮೆಲ್ಲಗೆ ನಡಸು. ಕಣ್ತುಂಬ ಒಮ್ಮೆ ಶ್ರೀರಾಮಚಂದ್ರನನ್ನು ದರ್ಶನ ಮಾಡುತ್ತೇವೆ; ಇನ್ನು ನಮಗೆ ಆತನದರ್ಶನ ದೊರೆಯುವುದೆಲ್ಲಿ? ಆಹಾ! ಶ್ರೀರಾಮಚಂದ್ರ, ದೇವ ಸದೃಶನಾದ ನಿನ್ನನ್ನು ತೊರೆದು ಕೌಸಲ್ಯಾದೇವಿ ಹೇಗೆ ಬದುಕಿರಬಹುದು! ಅಮ್ಮಾ ಸೀತಾದೇವಿ, ನೆಳಲಿನಂತೆ ಪತಿಯನ್ನು ಅನುಸರಿಸಿ ಕಾಡಿಗೆ ಹೋಗುತ್ತಿರುವ ನೀನೆಂತಹ ಮಾನ್ಯೆ! ಲಕ್ಷ್ಮಣಸ್ವಾಮಿ ನೀನೇ ಧನ್ಯ! ಶ್ರೀರಾಮನ ಸೇವೆ ನಿನಗೆ ಯಥೇಚ್ಚವಾಗಿ ದೊರಕಿತು!” ಎಂದು ಕೊರಳೆತ್ತಿ ಕೂಗುತ್ತಾ ರಥವನ್ನು ಹಿಂಬಾಲಿಸಿದು. ಅತ್ತ ಅಳುತ್ತಾ ನಿಂತಿದ್ದ ತಂದೆಯನ್ನೂ ಇತ್ತ ಚೀರುತ್ತಾ ಬರುವ ಜನಸಮೂಹವನ್ನೂ ಕಂಡು ಶ್ರೀರಾಮನು ಈ ದುಃಖಸನ್ನಿವೇಶದಿಂದ ಆದಷ್ಟು ಬೇಗ ಹೊರಟು ಹೋಗಬೇಕೆಂದುಕೊಂಡು ರಥವನ್ನು ಅತಿವೇಗವಾಗಿ ನಡೆಯಿಸುವಂತೆ ಸುಮಂತ್ರನಿಗೆ ಅಪ್ಪಣೆಮಾಡಿದನು. ಆದರೆ ಸುತ್ತಲಿದ್ದ ಜನ ಅದಕ್ಕೆ ಅಸ್ಪದ ಕೊಡುವಂತಿರಲಿಲ್ಲ. ಅಷ್ಟರಲ್ಲಿ ಅರಮನೆಯ ಬಾಗಿಲಿನ ಬಳಿ ರಥದ ಕಡೆ ನೋಡುತ್ತಾ ನಿಂತಿದ್ದ ಮಹಾರಾಜನು ದುಃಖವನ್ನು ತಡೆಯಲಾರದೆ ಮೂರ್ಛಿತನಾದನು. ರಾಣಿಯರೆಲ್ಲರೂ ‘ಹೋ’ ಎಂದು ಗೋಳೀಟ್ಟರು. ರಥದ ಹಿಂದೆ ಬರುತ್ತಿದ್ದ ಜನ “ಹಾ! ರಾಮಚಂದ್ರ!” ಎಂದೂ “ದೇವಿ ಕೌಸಲ್ಯೆ!” ಎಂದೂ ಕೂಗಿಕೊಂಡರು. ಅಷ್ಟರಲ್ಲಿ ಕೌಸಲ್ಯಾದೇವಿ, “ಹಾ ರಾಮ! ಹಾ ಜಾನಕಿ! ಹಾ ಲಕ್ಷ್ಮಣ! ಮಕ್ಕಳಿರ, ಸ್ವಲ್ಪ ನಿಲ್ಲಿ” ಎಂದು ಕೂಗುತ್ತಾ ಪ್ರಯಾಣಮಾಡುತ್ತಿದ್ದ ರಥದ ಹಿಂದೆ ಓಡಿ ಬಂದಳು. ದಶರಥನು ರಥವನ್ನು ನಿಲ್ಲಿಸುವಂತೆ ಸುಮಂತ್ರನಿಗೆ ಕೂಗಿ ಅಪ್ಪಣೆಮಾಡಿದನು. ಆದರೆ ಅದನ್ನು ಗಮನಿಸಕೊಡದೆಂದೂ ರಥವನ್ನುವೇಗವಾಗಿ ನಡೆಯಿಸಬೇಕೆಂದೂ ಶ್ರೀರಾಮನು ಸುಮಂತ್ರನಿಗೆ ಬೆಸಸಿದನು. ಅರೆಚಣದಲ್ಲಿಯೆ ತೇರು ಅರಮನೆಗೆ ಕಣ್ಮರೆಯಾಯಿತು.

* * *