ಶ್ರೀರಾಮನು ಸೀತಾಲಕ್ಷ್ಮಣಸಮೇತನಾಗಿ ಗಂಗಾ ನದಿಯನ್ನು ದಾಟಿ ಕಣ್ಮರೆಯಾದೊಡನೆಯೆ ಮಂತ್ರಿ ಸುಮಂತ್ರನು ಕಣ್ಣೀರು ಸುರಿಸುತ್ತಾ, ನಿಟ್ಟಿಸಿರಿಟ್ಟು, ತನ್ನನ್ನೂ ರಥಾಶ್ವಗಳನ್ನೂ ಮನಸಾರೆ ಹಳಿದುಕೊಳ್ಳುತ್ತಾ ಅಯೋಧ್ಯೆಗೆ ಹಿಂತಿರುಗಿದನು. ಬರಿಯ ರಥದೊಡನೆ ಪುರಪ್ರದೇಶ ಮಾಡಿದ ಆತನನ್ನು ಕಾಣುತ್ತಲೆ ಪುರನಿವಾಸಿಗಳೆಲ್ಲರೂ ರಥದ ಸುತ್ತಲೂ ನೆರೆದು “ಶ್ರೀರಾಮನೆಲ್ಲಿ? ಎಲ್ಲಿದ್ದಾನೆ?” ಎಂದು ಉತ್ಸುಕರಾಗಿ ಪ್ರಶ್ನಿಸಿದರು. ಆತನು ಗಂಗಾನದಿಯನ್ನು ದಾಟಿ ಕಾಲ್ನಡಗೆಯಿಂದ ಅರಣ್ಯಪ್ರವೇಶ ಮಾಡಿದುದನ್ನು ಕೇಳಿ ಅವರೆಲ್ಲರೂ ಕಣ್ಣೀರುತುಂಬಿ “ಹಾ! ರಾಮ! ಹಾ! ರಾಮ!” ಎಂದು ರೋದಿಸಿದರು. ಆ ಗೋಳಿನ ಹೊಳೆಯಲ್ಲಿ ಈಸಾಡುತ್ತಾ ಸುಮಂತ್ರನು ಅರಮನೆಯನ್ನು ಪ್ರವೇಶಿಸಿದನು. ಆತನನ್ನು ಕಾಣುತ್ತಲೆ ದಶರಥನು ದುಃಖದಿಂದ ಮೂರ್ಛಿತನಾದನು. ರಾಣಿವಾಸದವರೆಲ್ಲರೂ ಗೊಳೋ ಎಂದು ಗಟ್ಟಿಯಾಗಿ ಅತ್ತರು. ಒಮ್ಮೆ ಆ ಗೋಳಿನ ತೆರೆ ಏರಿ ಬಂದು ನೆರೆವುಕ್ಕಿ ಹೋದಮೇಲೆ ದಶರಥನು ಸುಮಂತ್ರನನ್ನು ಕುರಿತು ವನವಾಸಿಗಳಾದ ತನ್ನ ಮಕ್ಕಳ ವಿಚಾರವಾಗಿ ಪ್ರಶ್ನೆಗಳ ಸುರಿಮಳೆಯನ್ನೆ ಕರೆದನು – “ಕಷ್ಟದ ಗಂಧವನ್ನೇ ಅರಿಯದ ಶ್ರೀರಾಮನು ಯಾವ ವೃಕ್ಷವನ್ನಾಶ್ರಯಿಸಿ ವಾಸಮಾಡುತ್ತಿದ್ದಾನೆ? ಏನು ಊಟಮಾಡಿಕೊಂಡಿದ್ದಾನೆ? ಅವನು ಮಲಗುವುದಕ್ಕೇನು ಮಾಡುತ್ತಾನೆ? ನೆಲದ ಮೇಲೆ ಕಾಲಿಟ್ಟರಿಯದ ಅವನು ವನದಲ್ಲಿ ಹೇಗೆ ಸಂಚರಿಸುತ್ತಾನೆ? ವನಪ್ರವೇಶ ಮಾಡುವ ಮುನ್ನ ಆತನು ನಿನ್ನೊಡನೆ ಏನು ಹೇಳಿದ? ಲಕ್ಷ್ಮಣನೇನೆಂದ? ಸುಮಕೋಮಲೆಯಾದ ಸೀತೆ ವನವಾಸದ ಕಷ್ಟವನ್ನು ಹೇಗೆ ಸಹಿಸುತ್ತಿದ್ದಾಳೆ? ನೀನು ಹೊರಟು ಬರುವ ಮುನ್ನ ಆಕೆ ಏನು ಹೇಳಿದಳು?”

ಸುಮಂತ್ರನು ಸೀತಾರಾಮಲಕ್ಷ್ಮಣರು ಅಡವಿಯಲ್ಲಿದ್ದ ಪರಿಯನ್ನು ತಿಳಿಸಿ, ಪ್ರತ್ಯೇಕ ಪ್ರತ್ಯೇಕವಾಗಿ ಪ್ರತಿಯೊಬ್ಬರಿಗೂ ಆತನು ಕಳುಹಿಸಿದ್ದ ಸಂದೇಶಗಳನ್ನು ವಿವರಿಸಿ ಹೇಳಿದನು: “ಶ್ರೀರಾಮನು ತಂದೆಗೂ ತಾಯಿಯರಿಗೂ ತನ್ನ ನಮಸ್ಕಾರಗಳನ್ನು ತಿಳಿಸುವಂತೆ ಹೇಳಿ, ಮಾತೆಯಾದ ಕೌಸಲ್ಯಾದೇವಿ ಮಹಾರಾಜರನ್ನು ಭಕ್ತಿಯಿಂದ ಸೇವಿಸುವಂತೆಯೂ ತಮ್ಮನಾದ ಭರತನು ವೃದ್ಧನಾದ ತಂದೆಗೆ ಅತ್ಯಂತ ವಿಧೇಯನಾಗಿ ವರ್ತಿಸುವಂತೆಯೂ ತಿಳಿಸಿದನು. ತಾಯಿಯನ್ನು ನೆನೆಯುತ್ತಲೆ ಆತನು ಕಂಬನಿ ತುಂಬಿ ಆಕೆಯನ್ನು ತನ್ನ ತಾಯಿಯಂತೆಯೆ ಕಾಣಬೇಕೆಂಬುದಾಗಿ ಭರತನಿಗೆ ತಿಳಿಸುವಂತೆ ಹೇಳಿದನು. ಲಕ್ಷ್ಮಣನಾದರೋ ನಿರಪರಾಧಿಗಳಾದ ತಾವು ವನವಾಸಕ್ಕೆ ಗುರಿಯಾದುದಕ್ಕಾಗಿ ಕೈಕೆಯನ್ನೂ ಮಹಾರಾಜನನ್ನೂ ಕಟುವಾಗಿ ನಿಂದಿಸಿ ‘ನನಗೆ ಅಣ್ಣನಾದ ಶ್ರೀರಾಮನೇ ಪ್ರಭು, ಆತನೇ ಬಂಧು. ತಂದೆ ಕೂಡ ಆತನೇ, ಲೋಕಪ್ರಿಯನಾದ ಆತನನ್ನು ಕಾಡಿಗಟ್ಟಿದ ಮಹಾರಾಜನು ಪ್ರಜೆಗಳ ಪರಮ ಶತ್ರುವೇ ಹೌದು. ಆತನು ರಾಜಕಾರ್ಯಗಳನ್ನು ನಿರ್ವಹಿಸುವುದು ಹೇಗೊ!” ಎಂದನು. ಮಂಗಳಾಂಗಿಯಾದ ಸೀತಾದೇವಿ ಏನನ್ನೂ ಹೇಳಲಿಲ್ಲ. ಮುಖದಲ್ಲಿ ಸದಾ ನರ್ತಿಸುತ್ತಿದ್ದ ಮುಗುಳ್ನಗೆ ಮಾದುಹೋಗಿ ದುಗುಡವಾವರಿಸಿತ್ತು. ಆಕೆ ಬಾಯಿಂದ ಮಾತಾಡಲಿಲ್ಲ. ಕಣ್ಣುಗಳಿಂದ ಒಮ್ಮೆ ಪತಿಯ ಕಡೆ ನೋಡಿ ನಿಟ್ಟುಸಿರು ಬಿಟ್ಟಳಷ್ಟೆ!”

ಗಂಗಾನದಿಯನ್ನು ದಾಟಿ ಆ ಮೂವರೂ ಪ್ರಯಾಣ ಮಾಡಿದುದನ್ನು ವಿವರಿಸುತ್ತಾ “ಜಟಾಧಾರಿಗಳಾಗಿ ವಲ್ಕಲವನ್ನುಟ್ಟ ರಾಮಲಕ್ಷ್ಮಣರು ಸೀತೆಯೊಡನೆ ಪ್ರಯಾಗಕ್ಷೇತ್ರದ ಕಡೆ ಹೊರಟರು. ಎಲ್ಲರಿಗೂ ಮುಂದೆ ಲಕ್ಷ್ಮಣಸ್ವಾಮಿ, ಆತನ ಹಿಂದೆ ಸೀತಾಮಾತೆ, ಅವರಿಬ್ಬರ ಹಿಂದೆ ಸಂರಕ್ಷಣೆಗಾಗಿ ಶ್ರೀರಾಮಚಂದ್ರ ಈ ಕ್ರಮದಿಂದ ಅವರು ಪ್ರಯಾಣ ಮಾಡಿದರು. ಅವರ ವನಗಮನದಿಂದ ರಥದ ಕುದುರೆಗಳು ಕೂಡ ಕಣ್ಣೀರಿಡುತ್ತಾ ಹಿಂದಿರುಗಿದುವು” ಎಂದನು.

ಸುಮಂತ್ರನು ಮಾತುಗಳಿಂದ ದಶರಥನ ವ್ಯಥೆ ಶತಾಧಿಕವಾಗಿ ಉಲ್ಬಣಗೊಂಡಿತು. ಸ್ತ್ರೀವ್ಯಾಮೋಹದಿಂದ ತಾನು ಮಾಡಬಾರದುದನ್ನು ಮಾಡಿದಂತಾಯಿತು; ಇದು ತನ್ನ ವಂಶನಾಶಕ್ಕೆ ಕಾರಣವಾಗಬಹುದು – ಎಂದುಕೊಂಡನು. ತನ್ನನ್ನು ಒಡನೆಯೆ ಶ್ರೀರಾಮನ ಬಳಿಗೆ ಕರೆದೊಯ್ಯುವಂತೆ ಸುಮಂತ್ರನಲ್ಲಿ ಮೊರೆಯಿಟ್ಟನು. ತನ್ನ ಪ್ರಾಣಗಳು ಶ್ರೀರಾಮನನ್ನಗಲಿ ಬಹುಕಾಲ ನಿಲ್ಲಲಾರವಾದುದರಿಂದ ಆತನನ್ನು ಕಾಣದೆಯೆ ತಾನು ಸಾಯಬೇಕಾಗುವುದೆಂದು ಹಲುಬಿದನು. ಆತನ ಮಾತುಗಳನ್ನು ಕೇಳಿ ಕೌಸಲ್ಯೆಗೂ ಶ್ರೀರಾಮನನ್ನು ಕಾಣಬೇಕೆಂಬ ಬಯಕೆ ಬಲಿಯಿತು. “ಸುಮಂತ್ರಾ, ಸೀತಾರಾಮ ಲಕ್ಷ್ಮಣರನ್ನು ಕಾಣದೆ ನಾನು ಕ್ಷಣಮಾತ್ರವೂ ಜೀವಿಸಲಾರೆ. ತತ್‌ಕ್ಷಣವೆ ರಥವನ್ನು ಸಜ್ಜುಗೊಳಿಸು. ಒಡನೆಯೆ ನನ್ನನ್ನು ದಂಡಕಾರಣ್ಯಕ್ಕೆ ಕರೆದುಕೊಂಡುಹೋಗು” ಎಂದು ಮೊರೆಯಿಟ್ಟಳು. ಆಕೆಯನ್ನು ಸಮಾಧಾನ ಮಾಡುವುದರೊಳಗಾಗಿ ಸುಮಂತ್ರನಿಗೆ ಸಾಕುಸಾಕಾಯಿತು. “ಅಡವಿಯಲ್ಲಿದ್ದರೂ ಸೀತಾರಾಮಲಕ್ಷ್ಮಣರು ಸಂತೋಷದಿಂದ ಇರುವರು. ಪಿತೃವಾಕ್ಯ ಪರಿಪಾಲನೆಯಿಂದ ಶಾಶ್ವತವಾದ ಕೀರ್ತಿಗೆ ಪಾತ್ರನಾಗಿರುವ ಆತನನ್ನು ಕುರಿತು ಸಂತೋಷಪಡಬೇಕೆ ಹೊರತು ದುಃಖಿಸಬಾರದು. ” ಇತ್ಯಾದಿಯಾಗಿ ಎಷ್ಟೋ ಸಮಾಧಾನದ ಮಾತುಗಳನ್ನು ಸುಮಂತ್ರನು ಆಡಿದನು. ಆದರೂ ಆ ತಾಯಿಗೆ ಸಮಾಧಾನವಾಗದು. ಒಮ್ಮೆ ದುರದೃಷ್ಟವನ್ನು ಹಳಿದುಕೊಳ್ಳುವಳು. ಮತ್ತೊಮ್ಮೆ ತನ್ನ ಮಗನನ್ನು ಅಡವಿಗೆ ಅಟ್ಟಿದ ದಶರಥನ ಮೇಲೆ ಸಿಟ್ಟಾಗುವಳು – “ಮಹಾರಾಜ, ನೀನು ದಯಾಶಾಲಿಯೆಂದುಮೂರುಲೋಕಗಳಲ್ಲಿಯೂ ವಿಖ್ಯಾತನಾಗಿದ್ದೆ. ಆದರೆ ಅದೆಷ್ಟು ಬೇಗ ಆ ಕೀರ್ತಿಯೆಲ್ಲವನ್ನೂ ಹಾಳುಮಾಡಿಕೊಂಡೆ! ಪಾಪ! ಕೋಮಲದೇಹದ ಆ ಬಾಲೆ. ಸೀತೆ ಬಿಸಿಲು ಚಳಿ ಮಳೆಗಳನ್ನು ಅದೆಂತು ಸಹಿಸಲಾಪಳು? ಆ ರಾಜಕುಮಾರಿ ಗೆಡ್ಡೆ ಗೆಣಸುಗಳನ್ನು ತಿನ್ನುತ್ತಾ ಅದೆಂತು ಜೀವಿಸಬಲ್ಲಳು? ಅದೆಂತು ಕಠಿನವಾದ ನೆಲದ ಮೇಲೆ ಮಲಗಿ ನಿದ್ರಿಸಬಲ್ಲಳು? ನನ್ನ ಮಗನಾದ ಶ್ರೀರಾಮ ದಿಕ್ಕಿಲ್ಲದವನಂತೆ ಅರಣ್ಯದಲ್ಲಿ ಅಲೆಯುವಂತಹ ಅಪರಾಧವನ್ನೇನು ಎಸಗಿದ್ದನು? ಸೀತಾಲಕ್ಷ್ಮಣರನ್ನು ನಿಷ್ಕಾರಣವಾಗಿ ಅರಣ್ಯಕ್ಕೆ ಅಟ್ಟಿದೆಯಲ್ಲವೆ? ಜ್ಯೇಷ್ಠನೂ ಶ್ರೇಷ್ಠನೂ ಆದ ಶ್ರೀರಾಮನು ಅಡವಿಪಾಲಾದನು. ಕನಿಷ್ಠನಾದವನುರಾಜ್ಯಾಧಿಪತ್ಯವನ್ನು ಸ್ವೀಕರಿಸುವನು. ಇದೆಂತಹ ನ್ಯಾಯ? ನಿನ್ನ ಪ್ರಿಯ ಪತ್ನಿಯಾದ ಕೈಕೆಗೂ ಆಕೆಯ ಮಗನಾದ ಭರತನಿಗೂ ಆನಂದವನ್ನು ಒದಗಿಸುವುದಕ್ಕಾಗಿ ಅದೆಷ್ಟು ಜನರಿಗೆ ಅಪ್ರಿಯವನ್ನುಂಟುಮಾಡಿದೆ? ಇದರಿಂದ ನಿನಗಾದರೂ ಆನಂದವಾಯಿತೆ! ನೀನೂ ಹಾಳಾದೆ; ನನ್ನನ್ನೂ ಹಾಳುಮಾಡಿದೆ! ಕೋಸಲ ರಾಜ್ಯವನ್ನೆ ದುಃಖದಲ್ಲಿ ಮುಳುಗಿಸಿದರೆ. ನೀನೆಂತಹ ಕ್ರೂರಕಾರ್ಯವನ್ನು ಎಸಗಿದೆ?” ಎಂದೆಲ್ಲ ಆಕೆ ದಶರಥನನ್ನು ಕಟುವಾಗಿ ನಿಂದಿಸಿದಳು.

ಕೌಸಲ್ಯೆಯ ಕಟುನುಡಿಗಳಿಂದ ಬೇಗುದಿಗೊಂಡ ದಶರಥನು ಕಣ್ಣೀರುಗರೆಯುತ್ತಾ ಆಕೆಯನ್ನು ಕುರಿತು “ದೇವಿ, ರಾಮಮಾತೆ, ಪ್ರಸನ್ನಳಾಗು! ನಾನೀಗ ಕರುಣೆಗೆ ಪಾತ್ರನೆ ಹೊರತುಕೋಪಕ್ಕಲ್ಲ. ಕೈಮುಗಿದು ಬೇಡುತ್ತೇನೆ. ನನ್ನನ್ನು ಕ್ಷಮಿಸು. ನನ್ನ ಪೂರ್ವಾರ್ಜಿತ ಕರ್ಮ ನನಗೆ ಈ ಸಂಕಟ ತಂದೊಡ್ಡಿದೆ” ಎಂದು ಹೇಳಿ ತನಗೆ ಬಹುಕಾಲದ ಹಿಂದೆ ಪ್ರಾಪ್ತವಾಗಿದ್ದ ಋಷಿಶಾಪವೊಂದನ್ನು ಆಕೆಗೆ ವಿವರಿಸಿ ಹೇಳಿದನು: “ದೇವಿ ನಾನಿನ್ನೂ ಮದುವೆಯಿಲ್ಲದ ಬಾಲಕನಾಗಿದ್ದಾಗ ನಡೆದ ಅಚಾರ್ತುರ್ಯವೊಂದನ್ನು ತಿಳಿಸುತ್ತೇನೆ ಕೇಳು. ಆಗ ನನ್ನ ತಂದೆ ಇನ್ನೂ ಜೀವಂತನಾಗಿದ್ದನು. ನಾನುಯುವರಾಜನಾಗಿದ್ದೆ. ನನಗೆ ಆಗ ಧನುರ್ವಿದ್ಯೆಯಲ್ಲಿ ಬಹುಗೀಳು. ಶಬ್ದವನ್ನು ಕೇಳಿ ಗುರಿಯನ್ನು ಸಾಧಿಸಬಲ್ಲ ಶಬ್ದ ವೇಧಿಯಲ್ಲಿಯೂ ನಾನು ನಿಪುಣನಾಗಿದ್ದೆ. ಒಂದು ವರ್ಷಾಕಾಲದ ದಿನ ನಾನು ಮೃಗಯಾವಿಹಾರಕ್ಕಾಗಿ ಸರಯೂ ನದಿಯೂ ನದಿಯ ತೀರವನ್ನು ಸೇರಿದೆ. ರಾತ್ರಿಯ ವೇಳೆಯಲ್ಲಿ ಮೃಗಗಳು ನೀರು ಕುಡಿಯಲು ಬರುವ ಸಮಯವನ್ನೆ ಕಾಯುತ್ತಾ ಧನುರ್ಧಾರಿಯಾಗಿ ಹೊಂಚಿ ಕುಳಿತಿರಲು ಅರ್ಧರಾತ್ರಿಯ ವೇಳೆಯಲ್ಲಿ ನದಿಯ ತೀರದಿಂದ ‘ಗುಳುಗುಳು’ ಶಬ್ದ ಕೇಳಿಬಂದಿತು. ಯಾವುದೊ ಒಂದು ಆನೆ ನೀರು ಕುಡಿಯುತ್ತಿರಬೇಕೆಂದು ಭಾವಿಸಿದ ನಾನು ಧ್ವನಿಗೆ ಗುರಿಯಿಟ್ಟು ತೀಕ್ಷ್ಣವಾದ ಬಾಣವೊಂದನ್ನು ಪ್ರಯೋಗಿಸಿದೆ. ಮರುಕ್ಷಣದಲ್ಲಿಯೆ ‘ಹಾ! ಅಯ್ಯೋ!’ ಎಂಬ ಮಾನವನ ಧ್ವನಿ ಅದೇ ದಿಕ್ಕಿನಿಂದ ಕೇಳಿಸಿತು. ನಾನು ದಿಕ್ಕು ತೋಚದವನಾಗಿ ಕೂಗು ಕೇಳಿಬಂದ ಕಡೆಗೆ ಧಾವಿಸಿದೆ. ಕೌಸಲ್ಯೆ, ನೆನೆದರೆ ಈಗಲೂ ಎದೆ ನಡುಗುತ್ತದೆ. ಜಟಾವಲ್ಕಲಗಳನ್ನು ಧರಿಸಿದ್ದ ಋಷಿಕುಮಾರನೊಬ್ಬನು ಕೆನ್ನೀರಿನಲ್ಲಿ ಮುಳುಗಿ ಮಲಗಿದ್ದನು. ಆತನು ನನ್ನನ್ನು ಕಾಣುತ್ತಲೆ “ಅಯ್ಯೋ! ರಾಜನೆ! ವನವಾಸಿಯಾದ ನಾನು ನಿನಗಾವ ಅಪರಾಧ ಮಾಡಿದ್ದೆ? ನನ್ನನ್ನು ಕೊಲ್ಲುವುದರಿಂದ ನಿನಗೇನು ಲಾಭ? ಅಯ್ಯೋ! ನನ್ನ ಮುಪ್ಪಿನ ತಾಯ್ತಂದೆಗಳ ಬಾಯಾರಿಕೆಯನ್ನು ಹೋಗಲಾಡಿಸುವುದಕ್ಕಾಗಿ ಈ ನದೀ ತೀರಕ್ಕೆ ಬಂದೆ. ನನ್ನ ಗತಿ ಇಲ್ಲಿ ಹೀಗಾಗಿದೆ. ಪಾಪ! ಕಂಗಾಣದ ಆ ತಾಯ್ತಂದೆಗಳ ಗತಿಯೇನೊ! ಇನ್ನು ಒಂದು ಕ್ಷಣದಲ್ಲಿ ನನ್ನ ಪ್ರಾಣಗಳು ಹಾರಿಹೋಗುತ್ತವೆ. ಆಮೇಲೆ ಅವರಿಗೆ ಯಾರು ದಿಕ್ಕು? ಅಯ್ಯಾ, ನನ್ನ ಹೃದಯದಲ್ಲಿ ನಟ್ಟಿರುವ ಈ ಬಾಣ ಮರ್ಮಸ್ಥಾನವನ್ನು ಕೊರೆಯುತ್ತಿದೆ. ನಾನಿದನ್ನು ಸಹಿಸಲಾರೆ. ಮೊದಲು ಇದನ್ನು ಕಿತ್ತು ಹಾಕು ಅನಂತರ ಇಲ್ಲಿಯೆ ಸಮೀಪದಲ್ಲಿರುವ ನನ್ನ ತಾಯ್ತಂದೆಗಳಿಗೆ ನನ್ನ ಸ್ಥಿತಿಯನ್ನು ಅರುಹು” ಎಂದು ಹೇಳಿದ. ಆತನ ದುಃಖವನ್ನುನೋಡಲಾರದೆ ನಾನು ಬಾಣವನ್ನು ಕಿತ್ತುಹಾಕಿದೆ. ಒಡನೆಯೆ ಆತನ ಪ್ರಾಣ ಹಾರಿಹೋಯಿತು. ಸ್ವಲ್ಪ ಹೋತ್ತು ಭಯದಿಂದ ನನಗೆ ಏನೂ ತೋಚದಂತಾಯಿತು. ಆಮೇಲೆ ಧೈರ್ಯ ತಂದುಕೊಂಡು ಅಲ್ಲಿದ್ದ ನೀರು ತುಂಬಿದ ಕುಂಭದೊಡನೆ ಆ ವೃದ್ಧ ಋಷಿದಂಪತಿಗಳ ಬಳಿಗೆ ಹೋದೆ. ರೆಕ್ಕೆಯುದುರಿದ ಹಕ್ಕಿಗಳಂತೆ ಮುದುರಿ ಕುಳಿತಿದ್ದ ಅವರು ಹೆಜ್ಜೆಯ ಸಪ್ಪಳವನ್ನು ಕೇಳುತ್ತಲೆ ಮಗನೇ ಬಂದನೆಂದುಕೊಂಡು “ವತ್ಸ, ನೀರು ತರಲು ಎಷ್ಟು ತಡಮಾಡಿದೆಯಪ್ಪ! ಇಷ್ಟು ಹೊತ್ತು ಜಲಕ್ರೀಡೆಯಾಡುತ್ತಿದ್ದೆಯೇನು? ನೀನು ಬಾರದುದರಿಂದ ನಿನ್ನ ತಾಯಿ ಎಷ್ಟೋ ತಳಮಳ ಪಡುತ್ತಿದ್ದಳು” ಎಂದು ಆ ವೃದ್ಧ ಋಷಿ ಶೂನ್ಯದೃಷ್ಟಿಯನ್ನು ಶಬ್ದ ಬಂದಕಡೆಗೆ ತಿರುಗಿಸಿದನು. ನಾನು ಅನಿವಾರ್ಯವಾಗಿ ನಡೆದುದನ್ನು ನಡೆದಂತೆ ತಿಳಿಸಿ, ಕೈಲಿದ್ದ ನೀರಿನ ಭಾಂಡವನ್ನು ಅವರ ಮುಂದೆ ಇರಿಸಿದೆ. ಆದರೆ ಅವರು ನೀರು ಕುಡಿಯಲಿಲ್ಲ. ಗಟ್ಟಿಯಾಗಿ ರೋದಿಸುತ್ತಾ ಸತ್ತು ಬಿದ್ದಿದ್ದ ಮಗನ ಬಳಿಗೆ ನನ್ನ ಸಹಾಯದಿಂದ ಬಂದು ಆತನ ಮೈಮೇಲೆ ಕೈಯಾಡಿಸುತ್ತಾ ಹಲುಬಿ ಹಂಬಲಿಸಿ ಕಲ್ಲು ಕರಗುವಂತೆ ಗೋಳಿಟ್ಟರು. ಆಮೇಲೆ ನನ್ನನ್ನು ಕುರಿತು ‘ಅಯ್ಯಾ ರಾಜನೆ, ಈಗ ನಾನಾವ ರೀತಿಯಲ್ಲಿ ಪುತ್ರವ್ಯಸನದಿಂದ ಪೀಡಿತನಾಗಿ ಮರಣಹೊಂದು’ ಎಂದು ಶಪಿಸಿದನು. ಹೀಗೆ ಶಾಪವನ್ನು ಕೊಟ್ಟ ಆ ವೃದ್ಧ ಮುನಿ ಸತಿಯೊಂದಿಗೆ ಚಿತಾಪ್ರವೇಶ ಮಾಡಿದನು. ದೇವಿ, ಮುನಿಶಾಪ ಈಗ ಮೈವೆತ್ತು ನಿಂತಿದೆ”.

ಗಂಡನು ಹೇಳಿದ ಕತೆಯನ್ನು ಕೇಳಿ ಕೌಸಲ್ಯಾದೇವಿ ನಡುಗಿದಳು. ಶ್ರೀರಾಮನು ಅರಣ್ಯಕ್ಕೆ ಪ್ರಯಾಣಮಾಡಿ ಅಂದಿಗೆ ಆರು ದಿನಗಳಾಗಿದ್ದುವು. ಆ ಆರು ದಿನಗಳಲ್ಲಿ ದಶರಥಮಹಾರಾಜನು ನಿದ್ರಾಹಾರಗಳಿಲ್ಲದೆ ಕೃಶನಾಗಿ ಹೋಗಿದ್ದನು. ಋಷಿಶಾಪದ ವೃತ್ತಾಂತವನ್ನು ಹೇಳಿ ಮುಗಿಸುವಷ್ಟರಲ್ಲಿ ಆತನಲ್ಲಿದ್ದ ಅಲ್ಪ ಶಕ್ತಿಯೂ ಉಡುಗಿ ಹೋಗುತ್ತಿರುವಂತೆ ಕಾಣಿಸಿತು. ಆತನು ಪುನಃ ಕೌಸಲ್ಯೆಯನ್ನು ಕುರಿತು “ಎಲೈ ಮಂಗಳಾಂಗಿ, ನನಗೀಗ ಅವಸಾನಕಾಲ ಪ್ರಾಪ್ತವಾಗಿದೆ. ಶ್ರೀರಾಮನು ಒಮ್ಮೆ ನನ್ನನ್ನು ಸ್ಪರ್ಶಿಸಿದರೆ ಮಾತ್ರ ಬದುಕಬಲ್ಲೆ. ಆದರೆ ಅದೆಲ್ಲಿ ಸಾಧ್ಯ? ಕೌಸಲ್ಯೆ, ನನ್ನ ದೃಷ್ಟಿಶೂನ್ಯವಾಗಿದೆ. ನನ್ನ ಕಣ್ಣಿಗೆ ನೀನು ಕಾಣುತ್ತಲೆ ಇಲ್ಲ. ನನ್ನ ಬಾಃಯಪ್ರಜ್ಞೆಯೂ ತಪ್ಪುತ್ತಾ ಇದೆ. ಅದೋ! ಯಮದೂತರು ನನ್ನನ್ನು ತ್ವರೆಗೊಳಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಶ್ರೀರಾಮನು ಸಮೀಪದಲ್ಲಿ ಇಲ್ಲವಲ್ಲಾ! ಅಯ್ಯೊ! ಪ್ರಪಂಚದಲ್ಲಿ ಇದಕ್ಕಿಂತ ಮಹತ್ತರವಾದ ದುಃಖ ಬೇರೊಂದುಂಟೆ? ವನವಾಸವನ್ನು ಮುಗಿಸಿ ಹಿಂದಿರುಗುವ ನನ್ನ ಶ್ರೀರಾಮನ ಮೂರ್ತಿಯನ್ನು ಕಾಣುವವರೆ ಧನ್ಯರು. ಅವರು ಮಾನವರಲ್ಲ, ದೇವತೆಗಳು! ಹಾ ಕಷ್ಟ! ಓ ರಾಮಾ! ರಾಮಚಂದ್ರಾ! ಮಹಾಬಾಹೋ! ಪಿತೃಪ್ರಿಯ! ಕುಮಾರ! ಕಂದ! ಎಲ್ಲಿ ಹೋದೆ? ಹಾ ಕೌಸಲ್ಯೆ! ಸುಮಿತ್ರೆ! ನಿಮಗಿನ್ನಾರು ಗತಿ? ಪಾಪಿ ಕೈಕೆ, ನನಗೆ ನೀನೇ ಮೃತ್ಯಸ್ವರೂಪಳಾದೆಯಲ್ಲವೆ? ಹಾ ರಾಮ! ಹಾ ಲಕ್ಷ್ಮಣಾ! ಹಾ ಸೀತೆ!. . . . . ”

ಕಡೆಯ ಮಾತು ಬಾಯಿಂದ ಬರುತ್ತಿದ್ದಂತೆಯೆ ದಶರಥನ ಪ್ರಾಣಪಕ್ಷಿ ದೇಹಪಂಜರದಿಂದ ಹಾರಿಹೋಯಿತು. ಆಗ ರಾತ್ರಿ ಅರ್ಧ ಕಳೆದಿತ್ತು. ಹೊರಗೆ ಸುತ್ತಲೂ ದಟ್ಟವಾಗಿ ಕಗ್ಗತ್ತಲು ಮುಸುಕಿತ್ತು. ಅರಮನೆಯೊಳಗೆ ಎಲ್ಲರೂ ನಿದ್ರಾವಶರಾಗಿದ್ದುದರಿಂದ ಶ್ಮಶಾನ ಮೌನ ಎಲ್ಲೆಲ್ಲೂ ಹಬ್ಬಿ ಶವದಂತೆ ಬಿದ್ದಿತ್ತು.

* * *