ರಾಜಕುಮಾರ ಭರತನ ಅಪ್ಪಣೆಯ ಮೇರೆಗೆ ನಗರದ ಜನರೆಲ್ಲರೂ ಪ್ರಯಾಣ ಮಾಡಲು ಅನುಕೂಲವಾಗುವಂತೆ ಅಯೋಧ್ಯೆಯಿಂದ ಗಂಗಾ ನದಿಯವರೆಗೆ ರಾಜಮಾರ್ಗವೊಂದು ನಿರ್ಮಾಣವಾಯಿತು. ಕೆಲಸಗಾರರು ಮುಂದೆ ಹೊರಟು ದಾರಿಯಲ್ಲಿದ್ದ ಗಿಡಮರಗಳನ್ನು ಕತ್ತರಿಸಿ ಹಳ್ಳತಿಟ್ಟುಗಳನ್ನು ಸಮಗೊಳಿಸಿದರು. ಅಲ್ಲಲ್ಲಿ ಕುಡಿಯುವ ನೀರಿಗೆ ಅನುಕೂಲಗಳು ಕಲ್ಪಿತವಾದುವು. ರಾಜಕುಮಾರನೂ ಆತನ ಪರಿವಾರವೂ ಇಳಿದುಕೊಳ್ಳಲು ಅನುಕೂಲಿಸುವಂತೆ ಮಾರ್ಗಮಧ್ಯದಲ್ಲಿ ಅಲ್ಲಲ್ಲಿಯೆ ಮಂಟಪಗಳು ತಯಾರಾದುವು. ದಾರಿಯಲ್ಲಿ ಅಡ್ಡವಾಗಿದ್ದ ನದಿಗಳಿಗೆ ಸೇತುವೆಗಳು ಸಿದ್ಧವಾದುವು. ಶ್ರೀರಾಮನನ್ನು ಕರೆತರುವುದಕ್ಕಾಗಿ ಭರತನು ಪ್ರಯಾಣಮಾಡುವನೆಂಬ ಸುದ್ಧಿ ಊರಲ್ಲೆಲ್ಲ ಹಬ್ಬಿ ಹರಡಿತು. ಜನರು ಭರತನ ಸದ್ಗುಣಗಳನ್ನು ಹಾಡಿ ಹರಸಿದರು. ಯಾವುದೋ ದೊಡ್ಡ ಉತ್ಸವವನ್ನು ಆಚರಿಸಲಿರುವವರಂತೆ ಜನರೆಲ್ಲರೂ ಕೇವಲ ಸಂಭ್ರಮಾನ್ವಿತರಾದರು. ಶ್ರೀರಾಮನನ್ನು ಕಣ್ಣಾರೆ ಕಂಡು ಧನ್ಯರಾಗಬೇಕೆಂಬ ಆತುರದಿಂದ ನಾಮುಂದು ತಾಮುಂದು ಎಂದು ಪೌರರಲ್ಲಿ ಬಹುಜನ ಪ್ರಯಾಣಕ್ಕೆ ಅನುವಾದರು. ಕೌಸಲ್ಯೆ, ಸುಮಿತ್ರೆ, ಕೈಕೆಯರೂ ಮಂತ್ರಿ ಮುಖ್ಯರಾದವರೂ ತಮ್ಮ ತಮ್ಮ ರಥಗಳಲ್ಲಿ ಕುಳಿತು ಪ್ರಯಾಣಕ್ಕೆ ಸಿದ್ಧರಾದರು. ಎಲ್ಲರ ಬಾಯಿಯಲ್ಲಿಯೂ ರಾಮ ಸಂಬಂಧವಾದ ಕಥೆಗಳು. ಹೀಗೆ ನಲಿಯುತ್ತಿದ್ದ ದಿಬ್ಬಣ ಸಮುದ್ರಘೋಷವನ್ನೂ ನಿಂದಿಸುವ ಕೋಲಾಹಲದೊಡನೆ ಭರತನನ್ನು ಹಿಂಬಾಲಿಸಿ ಪ್ರಯಾಣ ಮಾಡಿ ಗಂಗಾನದಿಯ ತಡಿಯನ್ನು ಸೇರಿತು.

ಅಗಾಧವಾದ ಸೈನ್ಯದೊಡನೆ ಗಂಗಾತಟಿಯಲ್ಲಿ ಬಂದಿಳಿದುಕೊಂಡ ಭರತನನ್ನು ಕಂಡು ಶ್ರೀರಾಮಚಂದ್ರನ ಪರಮಮಿತ್ರನಾದ ಗುಹನಿಗೆ ಸ್ವಲ್ಪ ಸಂದೇಹ ಬಂದಿತು. ‘ಈ ಕೈಕೆಯ ಮಗ ಯಾವ ದುರಾಲೋಚನೆಯಿಂದ ಇಷ್ಟು ಅಗಾಧವಾದ ಸೈನ್ಯವನ್ನು ಕಟ್ಟಿಕೊಂಡು ಬಂದಿರಬಹುದು? ತನ್ನ ವಶವಾಗಿರುವ ಜ್ಯೇಷ್ಠನ ರಾಜ್ಯವನ್ನು ಶಾಶ್ವತವಾಗಿ ಪಡೆಯುವ ದುರಾಶೆಯಿಂದ ಶ್ರೀರಾಮಚಂದ್ರನನ್ನು ಸಂಹರಿಸಲು ಬಂದಿರಬಹುದೆ? ಹಾಗೇನಾದರೂ ದುರ್ಬುದ್ಧಿಯಿಂದ ಬಂದಿದ್ದಲ್ಲಿ ಅವನಿಗೆ ತಕ್ಕ ಬುದ್ಧಿಯನ್ನು ಕಲಿಸಬೇಕು’ ಎಂದುಕೊಂಡು ತನ್ನ ಸೈನ್ಯವನ್ನು ಐನೂರು ದೋಣಿಗಳಲ್ಲಿ ಸಿದ್ಧವಾಗಿರುವಂತೆ ಆಜ್ಞಾಪಿಸಿದನು. ಇಷ್ಟು ಸಿದ್ಧತೆಗಳನ್ನು ಮಾಡಿಕೊಂಡ ಮೇಲೆ ಆತನು ಕಾಣಿಕೆಗಳೊಡನೆ ಹೋಗಿ ಭರತನನ್ನು ಕಂಡನು. ಸಂದರ್ಭೋಚಿತವಾದ ಪರಸ್ಪರ ಕುಶಲಪ್ರಶ್ನೆಗಳಾದ ಮೇಲೆ ಭರತನು ಆ ನಿಷಾದಾಧಿಪತಿಯನ್ನು ಕುರಿತು “ಮಿತ್ರನೆ, ನಾನು ಭಾರದ್ವಾಜಾಶ್ರಮಕ್ಕೆ ಹೋಗಬೇಕಾಗಿದೆ. ಆದರೆ ಅಪಾರವಾದ ಈ ಗಂಗಾಜಲವನ್ನು ದಾಟುವುದು ಹೇಗೆ ಎಂಬುದು ದೊಡ್ಡ ಸಮಸ್ಯೆಯಾಗಿದೆ” ಎಂದನು. ಗುಹನು ತನ್ನ ದೋಣಿಗಳ ಮೂಲಕ ಆತನ ಪರಿವಾರವನ್ನೆಲ್ಲ ಆಚೆಯ ದಡಕ್ಕೆ ಸಾಗಿಸುವುದಾಗಿ ಭರವಸೆಯಿತ್ತನು. ಆದರೆ ತನ್ನ ಮನಸ್ಸಿನಲ್ಲಿದ್ದ ಸಂದೇಹವನ್ನು ಸ್ಪಷ್ಟವಾಗಿ ಬಾಯಿಬಿಟ್ಟು ಹೇಳಿದನು. “ಕೀರ್ತಿವಂತನಾದ ರಾಜಪುತ್ರನ, ಈ ಮಹತ್ತಾದ ಸೇನೆಯನ್ನು ಕಂಡು ನನಗೆ ಶಂಕೆ ಜನಿಸಿದೆ; ಆದ್ದರಿಂದ ಕೇಳುತ್ತೇನೆ; ಧರ್ಮಾತ್ಮನಾದ ಶ್ರೀರಾಮನಿಗೆ ಕೇಡನ್ನೆಸಗುವ ದುಷ್ಟಬುದ್ಧಿಯಿಂದೇನೂ ನೀನು ಹೋಗುತ್ತಿಲ್ಲವಷ್ಟೆ?”

ಗುಹನ ಅಶಂಕೆಯನ್ನು ಕಂಡು ಆಕಾಶದಂತೆ ನಿರ್ಮಲನಾದ ಭರತನಿಗೆ ಬಹು ವ್ಯಥೆಯಾಯಿತು. ಆದರೂ ಮೃದುಮಧುರವಾಗಿಯೆ ಆತನಿಗೆ ಉತ್ತರಕೊಟ್ಟನು – “ಗೆಳೆಯ, ಅಂತಹ ಆಶಂಕೆಗೆ ಕಾರಣವಿಲ್ಲ. ಶ್ರೀರಾಮನು ತನ್ನ ಹಿರಿಯಣ್ಣ. ತಂದೆಗೆ ಸಮಾನ. ವನವಾಸಿಯಾದ ಆತನನ್ನು ಹಿಂದಕ್ಕೆ ಕರೆದೊಯ್ಯಲು ನಾನೀಗ ಹೊರಟಿದ್ದೇನೆ. ಈ ಮಾತು ಸತ್ಯ. ಅನ್ಯಥಾ ಭಾವಿಸಬೇಡ”. ಈ ಸರಳವಾದ ನುಡಿಗಳಿಂದ ಗುಹನ ಸಂದೇಹ ಹಾರಿಹೋಯಿತು. ಆತನು ಭರತನ ಪರಮಮಿತ್ರನಾದನು. ಭರತನಿಗೆ ತನ್ನ ಒಳಗುದಿಯನ್ನು ತೋಡಿಕೊಳ್ಳಲು ಈಗ ಸರಿಯಾದ ಪಾತ್ರ ದೊರೆತಂತಾಯಿತು. ಪಾಪಿಯಾದ ತನ್ನ ತಾಯಿಯಿಂದ ಪ್ರಾಪ್ತವಾದ ಅನರ್ಥಪರಂಪರೆಯನ್ನೆಲ್ಲಾ ಆತನೊಡನೆ ಹೇಳಿಕೊಂಡು ಗೋಳಿಟ್ಟನು. ಆತನು ಕಣ್ಣೀರಿಡುತ್ತಿದ್ದುದನ್ನು ದೂರದಿಂದ ಕಂಡು ಕೌಸಲ್ಯೆ ಸೀತಾರಾಮ ಲಕ್ಷ್ಮಣರಿಗೆ ಏನಾದರೂ ಅಪಾಯ ಸಂಭವಿಸಿದ ಸುದ್ಧಿ ಬಂದಿರಬಹುದೇ ಎಂದು ಆಶಂಕಿಸುವಂತಾಯಿತು. ತನ್ನ ದುಃಖ ಹೀಗೆ ತಪ್ಪು ಅಭಿಪ್ರಾಯಕ್ಕೆ ಎಡೆಗೊಡುವುದನ್ನು ಕಂಡು ಭರತನು ಸಮಾಧಾನಮಾಡಿಕೊಂಡು ಗುಹನನ್ನು ಕುರಿತು, “ಮಿತ್ರನೆ, ನನ್ನ ಅಣ್ಣನಾದ ರಾಮಚಂದ್ರನು ಇಲ್ಲಿ ಇಳಿದುಕೊಂಡಿದ್ದ ರಾತ್ರಿ ಎಲ್ಲಿ ವಿಶ್ರಮಿಸಿದನು? ಸೀತಾದೇವಿ ಎಲ್ಲಿದ್ದಳು? ಲಕ್ಷ್ಮಣದೇವ ಯಾವ ಎಡೆಯಲ್ಲಿದ್ದನು? ಅವರು ಆ ದಿನ ಏನು ಊಟ ಮಾಡಿದರು? ಎಲ್ಲಿ ಮಲಗಿದ್ದರು? ಎಂದು ಪ್ರಶ್ನಿಸಿದನು. ಸೀತಾರಾಮಲಕ್ಷ್ಮಣರು ಅಂದು ಬರಿಯ ನೀರನ್ನು ಕುಡಿದು ಹಸಿವು ನೀಗಿದರೆಂದೂ, ಚಿಗುರೆಲೆಗಳ ಹಾಸಿಗೆಯ ಮೇಲೆ ಸೀತಾರಾಮರು ಪವಡಿಸಿದರೆಂದೂ, ಲಕ್ಷ್ಮಣನು ರಾತ್ರಿಯೆಲ್ಲವೂ ಎಚ್ಚರದಿಂದ ಅವರನ್ನು ಕಾಯುತ್ತಾ ಧನುರ್ಧಾರಿಯಾಗಿ ಸುತ್ತಲೂ ಸಂಚಾರ ಮಾಡುತ್ತಿದ್ದನೆಂದೂ, ಮರುದಿನ ಜಟಾಧಾರಿಗಳಾದ ರಾಮಲಕ್ಷ್ಮಣರು ಸೀತೆಯೊಡನೆ ಮುಂದಕ್ಕೆ ಪ್ರಯಾಣ ಮಾಡಿದರೆಂದೂ ಗುಹನು ತಿಳಿಸಿದನು. ತನ್ನ ಅಣ್ಣ ಅತ್ತಿಗೆಯರು ಮಲಗಿದ್ದ ಎಡೆಗಳನ್ನು ಆತನು ತೋರುತ್ತಲೆ ಅದನ್ನು ಕಂಡು ಭರತನಿಗೆ ದುಃಖ ಮರುಕಳಿಸಿತು. ತಾಯಿಯರಿಗೆ ಆ ಹಾಸಿಗೆಗಳನ್ನು ತೋರಿಸಿ ಕಣ್ಣೀರು ಗರೆದನು. ಸೀತಾರಾಮಲಕ್ಷ್ಮಣರು ಆ ಪರಿಯಾದ ಕಷ್ಟವನ್ನು ಅನುಭವಿಸುತ್ತಿರುವಾಗ ತಾನು ರಾಜಭೋಗವನ್ನು ಅನುಭವಿಸುವುದು ಅನ್ಯಾಯವೆನಿಸಿತು, ಆತನಿಗೆ. ಆದ್ದರಿಂದ ಅಂದಿನಿಂದ ತಾನೂ ಜಟಾಧಾರಿಯಾಗಿ ವಲ್ಕಲವನ್ನು ಧರಿಸಿ ಕಂದಮೂಲಗಳನ್ನು ಭುಜಿಸುತ್ತಾ ಭೂಮಿಯಲ್ಲಿ ಮಲಗುವುದಾಗಿ ನಿಶ್ಚಯಿಸಿಕೊಂಡನು. ಹಿಂದಕ್ಕೆ ಬಂದು ರಾಜ್ಯಭಾರವನ್ನು ವಹಿಸುವಂತೆ ಅಣ್ಣನನ್ನು ಬೇಡಿಕೊಂಡು ಆತನಿಗೆ ಬದಲಾಗಿ ತಾನು ವನವಾಸವನ್ನು ಕೈಕೊಳ್ಳುತ್ತೇನೆ. ಒಂದು ಪಕ್ಷಕ್ಕೆ ಆತನು ಅದಕ್ಕೆ ಒಪ್ಪದಿದ್ದರೆ ತಾನು ಆತನೊಡನೆ ವನವಾಸವನ್ನು ಕೈಕೊಳ್ಳುತ್ತೇನೆ ಎಂಬುದು ಆತನ ನಿಶ್ಚಲವಾದ ನಿರ್ಧಾರವಾಗಿತ್ತು.

ಮರುದಿನ ಬೆಳಗ್ಗೆ ಗುಹನ ಸಹಾಯದಿಂದ ಭರತನೂ ಅವನ ಪರಿವಾರವು ಗಂಗಾನದಿಯನ್ನು ದಾಟಿತು. ಅದರ ಆಚೆಯ ದಡದಲ್ಲಿ ಭರದ್ವಾಜನ ಆಶ್ರಮ. ಭರತನು ತನ್ನ ಪರಿವಾರವನ್ನೆಲ್ಲಾ ದೂರದಲ್ಲಿಯೆ ನಿಲ್ಲಿಸಿ, ಪುರೋಹಿತರಾದ ವಸಿಷ್ಠರೊಡನೆ ಆಶ್ರಮವನ್ನು ಪ್ರವೇಶಿಸಿದನು. ಭರದ್ವಾಜರು ಅತಿಥಿಗಳನ್ನು ಅರ್ಘ್ಯಪಾದ್ಯಗಳಿಂದ ಸತ್ಕರಿಸಿದ ಮೇಲೆ ಪರಸ್ಪರ ಕುಶಲಪ್ರಶ್ನೆಗಳಾದುವು. ಗುಹನಂತೆ ಭರದ್ವಾಜರಿಗೂ ಭರತನ ಆಗಮನ ವಿಚಾರದಲ್ಲಿ ಸ್ವಲ್ಪ ಸಂದೇಹ ತಲೆದೋರಿತು. ತಮ್ಮ ಸಂದೇಹವನ್ನು ಬಾಯಿಬಿಟ್ಟು ತಿಳಿಸಿದರು. ‘ಅಯ್ಯಾ ರಾಜಕುಮಾರ, ಸಾಮ್ರಾಜ್ಯ ಪಾಲನಾ ಕಾರ್ಯವನ್ನು ಬಿಟ್ಟು ನೀನಿಲ್ಲಿಗೆ ಬಂದು ಕಾರಣವೇನು? ದಶರಥ ಮಹಾರಾಜನು ತನ್ನ ಹೆಂಡತಿಯ ಮೋಹಕ್ಕೊಳಗಾಗಿ ಕೌಸಲ್ಯಾನಂದನನ್ನು ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕಾಗಿ ಅಟ್ಟಿದನು. ಈಗ ರಾಜನಾದ ನೀನು ನಿನ್ನ ರಾಜ್ಯವನ್ನು ನಿಷ್ಕಂಟಕವಾಗಬೇಕೆಂದು ಬಗೆದು ಸತ್ಯಸಂಧನಾದ ಆ ಶ್ರೀರಾಮನಿಗೆ ಏನಾದರೂ ಕೇಡನ್ನು ಬಯಸಿ ಇಲ್ಲಿಗೆ ಬಂದಿರುವೆಯೊ ಹೇಗೆ? ಇಷ್ಟು ಸೈನ್ಯದೊಡನೆ ನೀನು ಬಂದಿರುವ ಉದ್ದೇಶವೇನು?”

ಭರದ್ವಾಜರಾಡಿದ ಕರ್ಣಕಠೋರವಾದ ನುಡಿಗಳನ್ನು ಕೇಳಿ ಭರತನು ಬಹು ದುಃಖಿತನಾದನು. ಆತನು ಅವರನ್ನು ಕುರಿತು, “ಮಹಾತ್ಮ, ನೀವೂ ಹಾಗೆ ಭಾವಿಸಿದಿರಾ? ಅಯ್ಯೋ ನಾನು ಕೆಟ್ಟೆ! ನನ್ನ ತಾಯಿಯಾದ ಕೈಕೆ ನಾನಿಲ್ಲದಾಗ ಮಾಡಿದ ಕಾರ್ಯಕ್ಕೆ ನಾನು ಹೊಣೆಯೆ? ಆಕೆಯ ಅಭಿಪ್ರಾಯವನ್ನು ನಾನು ಅನುಮೋದಿಸಿಲ್ಲ; ಈಗ ನಾನು ಹೊರಟಿರುವುದು ಆ ಪುರುಷಶ್ರೇಷ್ಠನನ್ನು ಹಿಂದಕ್ಕೆ ಕರೆತರಬೇಕೆಂದೇ. ಈ ಕಾರ್ಯದಲ್ಲಿ ನನಗೆ ವಿಜಯವಾಗಬೇಕೆಂದು ಆಶೀರ್ವದಿಸಿ ಅನುಗ್ರಹಿಸಿ. ಆತನು ಎಲ್ಲಿರುವನೆಂಬುದನ್ನು ನನಗೆ ದಯವಿಟ್ಟು ತಿಳಿಸಿ” ಎಂದನು. ಈ ಮಾತುಗಳನ್ನು ಕೇಳಿ ಭರದ್ವಾಜರಿಗೆ ಆನಂದವಾಯಿತು. “ವತ್ಸ ಭರತ, ರಘುವಂಶಜನಿಗೆ ಉಚಿತವಾದ ಮಾತನ್ನೆ ನೀನು ಆಡಿದೆ. ನಿನ್ನ ಸ್ವಭಾವ ನನಗೆ ತಿಳಿದಿದ್ದಿತಾದರೂ ನೀನು ಅಣ್ಣನಲ್ಲಿ ಮಹಾಪ್ರೇಮ ಉಳ್ಳವನೆಂಬ ಕೀರ್ತಿಯನ್ನು ಪ್ರಕಟಗೊಳಿಸುವುದಕ್ಕಾಗಿ ಈ ರೀತಿ ಹೇಳಿದೆ. ನೀನು ಅನ್ಯಥಾ ಭಾವಿಸಬೇಡ. ಶ್ರೀರಾಮನು ಸೀತಾಲಕ್ಷ್ಮಣರೊಡನೆ ಚಿತ್ರಕೂಟ ಪರ್ವತದಲ್ಲಿ ವಾಸ ಮಾಡುತ್ತಿದ್ದಾನೆ. ನೀನು ನಿನ್ನ ಪರಿವಾರದೊಂದಿಗೆ ಇಲ್ಲಿಯ ತಂಗಿದ್ದು ನಮ್ಮ ಆತಿಥ್ಯವನ್ನು ಸ್ವೀಕರಿಸಿ, ನಾಳೆ ಇಲ್ಲಿಂದ ಮುಂದಕ್ಕೆ ಪ್ರಯಾಣ ಮಾಡು” ಎಂಬುದಾಗಿ ಭರತನನ್ನು ಸಮಾಧಾನಪಡಿಸಿದರು.

ಭರದ್ವಾಜರ ಅಪ್ಪಣೆಯಂತೆ ಭರತನ ಅಸಂಖ್ಯಾತ ಸೇನೆ ಆಶ್ರಮವನ್ನು ಪ್ರವೇಶಿಸಿತು. ಮಹರ್ಷಿಗಳಾದ ಅವರ ತಪಃಪ್ರಭಾವದಿಂದ ಐದು ಯೋಜನೆಗಳಷ್ಟು ವಿಸ್ತಾರವಾದ ಪ್ರದೇಶವು ಹಳ್ಳತಿಟ್ಟುಗಳಿಲ್ಲದ ಸಮಪ್ರದೇಶವಾಯಿತು. ಮೆತ್ತನೆಯ ಹುಲ್ಲಿನಿಂದ ತುಂಬಿದ ಆ ಪ್ರದೇಶದಲ್ಲಿ ಸೈನಿಕರು ಇಳಿದುಕೊಂಡರು. ಭರತನಿಗೂ ರಾಜಮಾತೆಯರಿಗೂ ಅನುಕೂಲಿಸುವಂತಹ ಅರಮನೆಯೊಂದು ಅಲ್ಲಿ ನಿರ್ಮಾಣವಾಯಿತು. ಸುಗಂಧಯುಕ್ತವಾದ ತಂಗಾಳಿ ಬೀಸಿ ಪ್ರಯಾಣಿಕರ ಆಯಾಸವನ್ನು ಪರಿಹರಿಸಿತು. ಗಂಧರ್ವಗಾನದಿಂದ ಅವರೆಲ್ಲರೂ ಆನಂದಭರಿತರಾದರು. ಷಡ್ರಸೋಪೇತವಾದ ರಾಜಭೋಜನದಿಂದ ಪರಿವಾರದವರೆಲ್ಲರೂ ತಣಿದುಹೋದರು. ಜನರು ಮಾತ್ರವೆ ಅಲ್ಲ. ಪ್ರಯಾಣ ಮಾಡುತ್ತಿದ್ದ ಆನೆ, ಕುದುರೆ ಮೊದಲಾದ ಪ್ರಾಣಿಗಳೂ ಕೂಡ ತಮ್ಮ ಆಹಾರವನ್ನು ತಿಂದು ತೇಗಿದುವು. ಯಾರಿಗೂ ಯಾವುದಕ್ಕೂ ಕೊರತೆಯಿಲ್ಲದಂತೆ ಆತಿಥ್ಯ ನಡೆಯಿತು. ಭೋಜನಪಾನೀಯಗಳಿಂದ ತೃಪ್ತಿಗೊಂಡ ಜನ ನಂದನವನದಂತಿದ್ದ ತಪೋವನದಲ್ಲಿ ದೇವತೆಗಳಂತೆ ವಿಹರಿಸುತ್ತಿದ್ದರು.

ಮರುದಿನ ಬೆಳಗ್ಗೆ ಭರತನು ಭರದ್ವಾಜರಿಂದ ಬೀಳ್ಕೊಳ್ಳಲು ಅವರ ಬಳಿಗೆ ಹೋದನು. ಆತನ ಜೊತೆಯಲ್ಲಿ ರಾಜಮಾತೆಯರು ಋಷಿಸಂದರ್ಶನಕ್ಕಾಗಿ ಹೋದರು. ಅವರನ್ನು ಮಹರ್ಷಿಗಳಿಗೆ ಪರಿಚಯಮಾಡಿಕೊಡುತ್ತಾ ಭರತನು ತನ್ನ ತಾಯಿಯ ಸರದಿ ಬಂದಾಗ “ಇವಳು ನನ್ನ ತಾಯಿ, ಕೈಕೆ. ಅಣ್ಣನಾದ ಶ್ರೀರಾಮನು ಅನಾಥನಂತೆ ವನವಾಸ ಕೈಗೊಂಡುದಕ್ಕೂ, ಪುತ್ರವಿಹೀನನಂತೆ ನನ್ನ ತಂದೆ ಮರಣಹೊಂದಿದುದಕ್ಕೂ ಇವಳೆ ಕಾರಣಳು. ಇವಳು ಬಹುಕೋಪಿಷ್ಠೆ. ತನ್ನ ಸಮಾನರಾದ ಸುಂದರಿಯರೇ ಇಲ್ಲವೆಂಬ ಗರ್ವದಿಂದ ತುಂಬಿದವಳು. ಐಶ್ವರ್ಯಲೋಭದಿಂದ ಯಾವ ಪಾಪ ಮಾಡುವುದಕ್ಕೂ ಹೇಸದವಳು. ನಮ್ಮೆಲ್ಲರ ಕಷ್ಟಗಳಿಗೂ ಮೂಲ ಕಾರಣಳಾದ ಮಹಾಪಾಪಿ ಈಕೆ” ಎಂದು ಹೇಳಿ ಕಣ್ಣೀರಿಟ್ಟನು. ಕೃತಕಾರ್ಯ ಪಾಶ್ಚಾತ್ತಾಪದಿಂದ ಮೊದಲೇ ಸಂಕಟಪಡುತ್ತಿದ್ದ ಕೈಕೆ ಈಗ ಮತ್ತೂ ಬಾಗಿ ಭೂಮಿಗಿಳಿದಳು. ಆಗ ಭರದ್ವಾಜರು ಭರತನನ್ನು ಕುರಿತು “ಭರತಕುಮಾರ, ನಿನ್ನ ತಾಯಿಯಲ್ಲಿ ದೋಷವನ್ನು ಆರೋಪಿಸಬೇಡ. ಆಕೆಯ ಆಕಾರ್ಯವೇ ಲೋಕಕ್ಕೆ ಮಹದುಪಕಾರವಾಗಿ ಪರಿಣಮಿಸುತ್ತದೆ. ಶ್ರೀರಾಮನ ಅರಣ್ಯಗಮನವು ಮಾನವರಿಗೂ ದೇವತೆಗಳಿಗೂ ಪರಮ ಕಲ್ಯಾಣಕರವಾಗಿ ಪರಿಣಮಿಸುತ್ತದೆ” ಎಂದು ಹೇಳಿ ಆತನನ್ನು ಸಮಾಧಾನ ಪಡಿಸಿದರು.

ಭರತನು ಭರದ್ವಾಜ ಋಷಿಗಳಿಗೆ ಪ್ರದಕ್ಷಿಣ ನಮಸ್ಕಾರ ಮಾಡಿ ಸಕಲ ಪರಿವಾರದೊಡನೆ ಪ್ರಯಾಣ ಬೆಳಸಿದನು. ಆನೆ, ಕುದುರೆ, ರಥಗಳಿಂದ ಕೂಡಿದ ಆ ಸೇನೆ ದೊಡ್ಡ ಮೇಘದಂತೆ ದಕ್ಷಿಣ ದಿಗ್ಭಾಗವನ್ನು ವ್ಯಾಪಿಸಿ ಗಂಗಾತಟಿಯ ಅರಣ್ಯವನ್ನು ದಾಟಿತು. ಭರತನು ದೂರದಲ್ಲಿ ಕಾಣುತ್ತಿದ್ದ ಪರ್ವತವನ್ನು ವಸಿಷ್ಠರಿಗೆ ತೋರಿಸಿ “ಓ ಋಷಿಶ್ರೇಷ್ಠರೆ, ಭರದ್ವಾಜ ಋಷಿಗಳು ವರ್ಣಿಸಿದ ಪ್ರದೇಶವಿದೆ. ಅಲ್ಲಿ ಕಾಣುತ್ತಿರುವ ಪರ್ವತವೆ ಚಿತ್ರಕೂಟ ಪರ್ವತವೆಂದು ತೋರುತ್ತದೆ” ಎಂದು ಹೇಳಿದನು. ಅನಂತರ ತಮ್ಮನ ಕಡೆಗೆ ತಿರುಗಿ “ವತ್ಸಾ, ಶತ್ರುಘ್ನ, ನಾವು ಬರುವುದಕ್ಕೆ ಮುಂಚೆ ನಿಶ್ಯಬದ್ದವಾಗಿದ್ದ ಈ ಕಾನನ ಪ್ರಾಂತವು ಈಗ ನಮ್ಮ ಜನರಿಂದ ತುಂಬಿಕೊಂಡು ಅಯೋಧ್ಯೆಯಂತೆ ಜನನಿಬಿಡವಾಗಿದೆ. ನಮ್ಮ ಸೈನ್ಯದಿಂದ ಭಯಗೊಂಡು ತಮ್ಮ ನಿವಾಸಸ್ಥಾನಗಳಿಗೆ ಓಡುತ್ತಿರುವ ಈ ಮಯೂರಗಳನ್ನು ನೋಡು, ಎಷ್ಟು ಮನೋಹರವಾಗಿವೆ! ಕುಸುಮದಿಂದ ಅಲಂಕೃತವಾಗಿರುವಂತೆ ಬಿಳಿಯ ಚುಕ್ಕಿಗಳಿಂದ ಮನೋಜ್ಞವಾಗಿರುವ ಆ ಜಿಂಕೆಗಳನ್ನು ನೋಡು, ಹೆಣ್ಣು ಜಿಂಕೆಗಳೊಡನೆ ಹೇಗೆ ವಿಹರಿಸುತ್ತಿವೆ! ಋಷಿಗಳು ವಾಸಿಸಲು ಯೋಗ್ಯವಾದ ಈ ವನವು ನನಗೆ ಇಂದ್ರನ ಅಮರಾವತಿಯಂತೆ ಸುಂದರವಾಗಿ ತೋರುತ್ತಿದೆ. ಪುರುಷೋತ್ತಮರಾದ ಶ್ರೀರಾಮಲಕ್ಷ್ಮಣರು ಇಲ್ಲಿಯೆ ಎಲ್ಲಿಯೊ ವಾಸಿಸುತ್ತಿರಬೇಕು. ಅವರಿರುವ ಸ್ಥಳವನ್ನು ಹುಡುಕಿಕೊಂಡು ಬರುವಂತೆ ದೂತರನ್ನು ಕಳುಹಿಸು” ಎಂದನು. ಆತನ ಅಪ್ಪಣೆಯಂತೆ ಹೊರಟ ದೂತರು ಅಲ್ಲಲ್ಲಿ ಹುಡುಕುತ್ತಿರುವಾದ ದೂರದಲ್ಲಿ ಹೊಗೆಯೇಳುವುದನ್ನು ಕಂಡು ಅದನ್ನು ಭರತನಿಗೆ ಅರುಹಿದರು. ಆಗ ಭರತನು ಸೈನ್ಯಕ್ಕೆ ಅಲ್ಲಿಯೆ ತಳವೂರುವಂತೆ ತಿಳುಹಿಸಿ, ಸುಮಂತ್ರನನ್ನೂ ವಸಿಷ್ಠರನ್ನೂ ಕರೆದುಕೊಂಡು ಹೊಗೆಯೇಳುತ್ತಿದ್ದ ಸ್ಥಳಕ್ಕೆ ಹೊರಟನು. ಇನ್ನೇನು ಬೇಗನೆ ಶ್ರೀರಾಮನನ್ನು ಕಾಣುವೆವೆಂಬ ಸಂತೋಷದಿಂದ ಹಿಗ್ಗಿ ಸಮಸ್ತ ಪರಿವಾರವೂ ಹೊಗೆಯ ಶಿಖರಭಾಗದಂತಿದ್ದ ತುದಿಯನ್ನೆ ದಿಟ್ಟಿಸಿ ನೋಡುತ್ತಿತ್ತು.

* * *