ಪರಸ್ಪರ ಕುಶಲಪ್ರಶ್ನೆಗಳಾದ ಮೇಲೆ ಶ್ರೀರಾಮನು ಭರತನನ್ನು ಕುರಿತು, “ವತ್ಸ, ನೀನೇಕೆ ಈ ಜಟೆಯನ್ನೂ ನಾರುಮಡಿಯನ್ನೂ ಧರಿಸಿರುವೆ? ರಾಜ್ಯಭಾರ ಕಾರ್ಯವನ್ನು ಬಿಟ್ಟು ಈ ಅರಣ್ಯಕ್ಕೇಕೆ ಬಂದೆ?” ಎಂದು ಕೇಳಿದನು. ತಾನು ಬಂದ ಉದ್ದೇಶವನ್ನು ಭರತನು ತನ್ನ ಅಣ್ಣನಿಗೆ ವಿವರಿಸಿ ಹೇಳಿದನು – “ಪೂಜ್ಯನೆ, ತಂದೆ ಪುತ್ರಶೋಕ ಪೀಡಿತನಾಗಿ ಸ್ವರ್ಗಸ್ಥನಾದನು. ನನ್ನ ತಾಯಿಯಾದ ಕೈಕೆ ಸಾಮಾನ್ಯಸ್ತ್ರೀಯಂತೆ ತಂದೆಯನ್ನು ದುಷ್ಕಾರ್ಯದಲ್ಲಿ ನಿಯೋಜಿಸಿ ಆತನಿಗೆ ಅಪಕೀರ್ತಿ ತಂದಳು; ತಾನೂ ವಿಧವೆಯಾಗಿ ಅಗಾಧಾವಾದ ದುಃಖಕ್ಕೆ ಈಡಾದಳು. ಆಕೆ ಆಶೆಗಳೆಲ್ಲವೂ ವ್ಯರ್ಥವಾದುವು. ಆಕೆ ಪಡೆದುಕೊಂಡುದೆಂದರೆ ಘೋರವಾದ ನರಕವೊಂದನ್ನೆ. ಅಣ್ಣಾ, ನಡೆದುದನ್ನು ನೆನೆದು ಇನ್ನು ಪ್ರಯೋಜನವಿಲ್ಲ. ನಾನು ನಿನ್ನ ದಾಸ. ನಿನ್ನನ್ನು ಶರಣು ಹೊಕ್ಕಿದ್ದೇನೆ. ನನ್ನನ್ನು ಅನುಗ್ರಹಿಸು. ಕೃಪೆಯಿಟ್ಟು ಅಯೋಧ್ಯೆಗೆ ಹಿಂತಿರುಗಿ ರಾಜ್ಯವನ್ನು ಸ್ವೀಕರಿಸು. ಪ್ರಜೆಗಳೂ ಮಂತ್ರಿಗಳೂ ಮಾತೆಯರೂ ದಿಕ್ಕಿಲ್ಲದವರಾಗಿ ನಿನ್ನ ಬಳಿಗೆ ಬಂದಿದ್ದಾರೆ. ಇವರನ್ನು ಅನುಗ್ರಹಿಸಿ ಆನಂದಪಡಿಸು. ನಾವೆಲ್ಲರೂ ನಿನ್ನಲ್ಲಿ ಈ ಭಿಕ್ಷೆಯನ್ನು ಯಾಚಿಸುತ್ತಿದ್ದೇವೆ. ತಂದೆಯ ತರುವಾಯ ಹಿರಿಯ ಮಗನು ಪಟ್ಟಾಭಿಷಿಕ್ತನಾಗುವುದು ಧರ್ಮ; ನಮ್ಮ ವಂಶದಲ್ಲಿ ಅನಾದಿ ಕಾಲದಿಂದಲೂ ಬಂದಿರುವ ಸಂಪ್ರದಾಯ. ಆ ಸತ್ಸಂಪ್ರದಾಯವನ್ನು ಉಳಿಸಿ, ಧರ್ಮವನ್ನು ಪಾಲಿಸು. ” ಇಂತೆಂದು ಬೇಡುತ್ತಾ ಭರತನು ಅಣ್ಣನ ಪಾದಗಳನ್ನು ಹಿಡಿದು ನಮಸ್ಕರಿಸಿದನು.

ಶ್ರೀರಾಮನು ಭರತನ ಪ್ರಾರ್ಥನೆಯನ್ನು ಅಂಗೀಕರಿಸಲು ಒಪ್ಪಲಿಲ್ಲ. “ಮಗೂ, ತಾಯಿತಂದೆಯರನ್ನು ದೂಷಿಸಬೇಡೆ. ಅದು ಪಾಪಕರ. ನಿರ್ದೋಷನಾದ ನಿನ್ನಂತಹವನು ಪಾಪಕಾರ್ಯವನ್ನು ಆಚರಿಸುವುದುಂಟೆ? ಭಾರ್ಯಾಪುತ್ರರ ವಿಚಾರದಲ್ಲಿ ಮನಸ್ಸು ಬಂದಂತೆ ನಡೆಸಿಕೊಳ್ಳಲು ಹಿರಿಯರಾದವರಿಗೆ ಅಧಿಕಾರವುಂಟು. ತಂದೆ ನನ್ನನ್ನು ವನವಾಸಕ್ಕೆ ಹೋಗೆಂದು ವಿಧಿಸಿರುವನು. ಜಟಾವಲ್ಕಲಧಾರಿಯಾಗಿ ನಾನು ಆ ಕಾರ್ಯವನ್ನು ಕೈಗೊಂಡಿದ್ದೇನೆ. ಅದೇ ತಂದೆಯೆ ರಾಜ್ಯಭಾರವನ್ನು ವಹಿಸೆಂದು ನಿನಗೂ ಆಜ್ಞಾಪಿಸಿದನು. ನೀನು ಆ ಕಾರ್ಯವನ್ನು ತಲೆಯಲ್ಲಿ ಹೊತ್ತು ನಡೆಸಬೇಕು. ಆತನ ಮಾತು ನಮ್ಮಿಬ್ಬರಿಗೂ ಸಮಾನವಾಗಿಯೆ ಪ್ರಮಾಣ; ಇಬ್ಬರೂ ಆತನ ಆಣತಿಯನ್ನು ನಡೆಸಬೇಕು. ನನ್ನ ವನವಾಸದ ಅವಧಿ ಮುಗಿದೊಡನೆಯೆ ನಾನು ಹಿಂದಿರುಗಿ ರಾಜ್ಯಭಾರವನ್ನು ಸ್ವೀಕರಿಸುತ್ತೇನೆ. ಅಲ್ಲಿಯವರೆಗೆ ನೀನು ಆ ಕಾರ್ಯವನ್ನು ನಿರ್ವಹಿಸುತ್ತಿರು” ಎಂದನು.

ಶ್ರೀರಾಮನ ಮಾತಿನ ಧಾಟಿ ಭರತನಿಗೆ ಸೇರಲಿಲ್ಲ. “ಅಣ್ಣಾ, ನನ್ನ ತಾಯಿ ಸಾಕೇತ ಸಾಮ್ರಾಜ್ಯವನ್ನು ನನಗೆ ಸಂಪಾದಿಸಿಕೊಟ್ಟಳು. ಅದನ್ನು ನಾನೀಗ ನಿನಗೆ ಕೊಡುತ್ತೇನೆ. ದಯಮಾಡಿ ಸ್ವೀಕರಿಸು. ಈ ಅಪಾರವಾದ ರಾಜ್ಯವನ್ನು ವಹಿಸಲು ನನಗೆ ಶಕ್ತಿಯಿಲ್ಲ. ಕುದುರೆಗೆ ಸಮಾನವಾಗಿ ಕತ್ತೆ ಓಡಬಲ್ಲುದೆ? ನಿನ್ನಷ್ಟು ಸಾಮರ್ಥ್ಯದಿಂದ ನಾನು ರಾಜ್ಯಕಾರ್ಯವನ್ನು ನಡೆಸುವುದು ಸಾಧ್ಯವೆ? ನಾನೊಬ್ಬನೆ ಅಲ್ಲ, ಇಡೀ ಸಾಮ್ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ನಿನ್ನನ್ನು ಬೇಡುತ್ತಿರುವನೆಂದು ಭಾವಿಸಿ ನನ್ನ ಕೋರಿಕೆಯನ್ನು ಈಡೇರಿಸು” ಎಂದು ಅಣ್ಣನನ್ನು ಬೇಡಿಕೊಂಡನು. ಭರತನ ಈ ಮಾತುಗಲು ಧರ್ಮಸಮ್ಮತವಲ್ಲವೆಂದು ಶ್ರೀರಾಮನ ವಾದ. ಅಲ್ಲದೆ ಯಾವ ಕಾರ್ಯದಲ್ಲಿಯು ಪುರುಷನು ಸ್ವತಂತ್ರನಲ್ಲ; ಸರ್ವತಂತ್ರ ಸ್ವತಂತ್ರವಾದ ದೈವಕ್ಕೆ ಆತನು ಅಧೀನ. ಅದು ನಡಸಿದಂತೆ ಆತನು ನಡೆಯಬೇಕು. ಆದ್ದರಿಂದ ಇಲ್ಲದುದನ್ನು ಹಚ್ಚಿಕೊಂಡು ಹಳಹಳಿಸಬೇಡ. ನಾನು ಅರಣ್ಯ ವಾಸ ಮಾಡಬೇಕೆಂಬುದು ದೈವೇಚ್ಛೆ. ತಂದೆಯ ಅಪ್ಪಣೆಯ ರೂಪದಲ್ಲಿ ಅದು ಕಾಣಿಸಿಕೊಂಡಿದೆ. ಅದಕ್ಕೆ ವಿಧೇಯನಾಗದೆ ಗತ್ಯಂತರವಿಲ್ಲ. ಅಲ್ಲದೆ ತಂದೆಯ ಸಾವಿಗಾಗಿಯೂ ಸುಮ್ಮನೆ ಸಂಕಟಪಡಬೇಡ. ಕಳಿತ ಹಣ್ಣು ಕೆಳಕ್ಕೆ ಬಿದ್ದುಹೋಗುವಂತೆ ಗಳಿತವಾದ ಶರೀರ ಬಿದ್ದುಹೋಗಲೇಬೇಕು. ವಿವೇಕಿಯಾದವನು ಅದಕ್ಕಾಗಿ ವ್ಯಸನಪಡಬಾರದು” ಎಂದನು.

ಭರತನಿಗೆ ಅಣ್ಣನ ವೇದಾಂತವೆಲ್ಲವೂ ಅರ್ಥವಾಗಲಿಲ್ಲ. ಅಣ್ಣನನ್ನು ಕುರಿತು ಹೇಳಿದನು. . “ಆರ್ಯಾ, ಸಂತೋಷದಲ್ಲಿ ಸಂತೋಷವನ್ನೂ ವ್ಯಥೆಯ ಕಾಲದಲ್ಲಿ ವ್ಯಸನವನ್ನೂ ಹೊಂದಿರುವುದು ಪರಮ ಜ್ಞಾನಿಯಾದ ನಿನಗೊಬ್ಬನಿಗೆ ಮಾತ್ರ ಸಾಧ್ಯ; ನನ್ನಂತಹ ಸಾಮಾನ್ಯನಿಗೆ ಅದು ಸಾಧ್ಯವಿಲ್ಲ. ನಾನು ಹೇಳುವುದಿಷ್ಟೆ. . . . ನನ್ನ ನಿಮಿತ್ತವಾಗಿ ನನ್ನ ತಾಯಿ ಪಾಪ ಕಾರ್ಯವನ್ನು ಎಸಗಿದಳು. ಅದು ನನಗೆ ಎಷ್ಟು ಮಾತ್ರವೂ ಸಮ್ಮತವಾದುದಲ್ಲ. ಧರ್ಮಪಾಶದಿಂದ ಬದ್ಧನಗಿಲ್ಲದಿದ್ದರೆ ದಂಡಾರ್ಹಳಾದ ಆಕೆಗೆ ಕಠಿಣವಾದ ಶಿಕ್ಷೆಯನ್ನು ವಿಧಿಸುತ್ತಿದ್ದೆ. ತಂದೆಯಾದರೊ ಆಕೆಯ ಮೇಲೆ ಮೋಹದಿಂದ ಆಕಾರ್ಯವನ್ನೆ ಎಸಗ ಅಪಕೀರ್ತಿಗೆ ಭಾಜನನಾದನು. ಸತ್ಪುತ್ರನದ ನೀನು ಆತನಿಗೆ ಬಂದಿರುವ ಅಪಕೀರ್ತಿಯನ್ನು ಹೋಗಲಾಡಿಸಬೇಕಲ್ಲವೆ? ಹಿರಿಯನಾದ ನೀನಿರುವಾಗ ಕಿರಿಯನಾದ ನಾನು ಹೇಗೆ ರಾಜ್ಯವನ್ನು ಸ್ವೀಕರಿಸಲಿ? ಇಗೋ ಪಟ್ಟಾಭಿಷೇಕದ ಸಕಲ ಸಾಮಗ್ರಿಗಳನ್ನೂ ನನ್ನ ಜೊತೆಯಲ್ಲಿಯೆ ಕೊಂಡುಬಂದಿದ್ದೇನೆ. ವಸಿಷ್ಠರೂ, ಇತರ ಮಂತ್ರಿಗಳೂ, ಪ್ರಜೆಗಳೂ ಇಲ್ಲಿಯೆ ನೆರೆದಿದ್ದಾರೆ. ಇಲ್ಲಿಯೆ ನಿನ್ನ ಪಟ್ಟಾಭಿಷೇಕ ಮಹೋತ್ಸವ ನಡೆದುಹೋಗಲಿ. ಆಮೇಲೆ ಅಯೋಧ್ಯೆಗೆ ಹಿಂದಿರುಗಿ ಪ್ರಭುಪದವಿಯನ್ನು ನಿರ್ವಹಿಸು. ಅಣ್ಣಾ, ನೀನು ನನ್ನ ಈ ಬೇಡಿಕೆಯನ್ನು ನಡೆಸಿಕೊಡದಿದ್ದರೆ ನಾನು ಇಲ್ಲಿಂದ ಹಿಂದಿರುಗುವುದಿಲ್ಲ. ನಾನು ನಿನ್ನೊಡನೆ ಅರಣ್ಯದಲ್ಲಿಯೆ ಇದ್ದುಬಿಡುತ್ತೇನೆ” ಎಂದನು.

ತಮ್ಮನ ಅಗಾಧ ಪ್ರೇಮವನ್ನು ಕಂಡು ಶ್ರೀರಾಮನು ಕ್ಷಣಕಾಲ ಮೂಕನಂತಾದನು. ಆದರೆ ರಾಜ್ಯಸ್ವೀಕಾರ ಮಾತ್ರ ಸದ್ಯಕ್ಕೆ ಆಗದ ಮಾತು. ಅಣ್ಣ ಸ್ವೀಕರಿಸ; ತಮ್ಮ ಬಿಡೆ. ಇವರ ಈ ವಾಗ್ವಾದವನ್ನು ಕೇಳುತ್ತಾ ಕುಳಿತಿದ್ದ ಪ್ರೇಕ್ಷಕ ವೃಂದದಿಂದ ಜಾಬಾಲಿ ಖುಷಿ ಮುಂದೆ ಬಂದು ಹೇಳಿದನು – “ರಾಮಚಂದ್ರ, ನೀನು ದೊಡ್ಡ ತಪಸ್ವಿ, ಪರಮಜ್ಞಾನಿ. ಅದೇಕೆ ಹೀಗೆ ಪ್ರಾಕೃತನಂತೆ ಮಾತನಾಡುವೆ? ಪ್ರಪಂಚದಲ್ಲಿ ಯಾರಿಗೆ ಯಾರು ಬಂಧು? ಹುಟ್ಟುತ್ತಾ ಒಂಟಿಯಾಗಿ ಬಂದವನು ಸಾಯುವಾಗ ಒಂಟಿಯಾಗಿಯೆ ಹೊರಟು ಹೋಗುತ್ತಾನೆ. ಪ್ರಯಾಣಿಕನು ಮಾರ್ಗಮಧ್ಯದಲ್ಲಿ ತಂಗುವಂತೆ ತಾಯಿ, ತಂದೆ, ಮನೆ, ಮಠಗಳೆಂಬುವು ಕೆಲವು ಕಾಲ ಮಾತ್ರ ಆಶ್ರಯಸ್ಥಾನಗಳಾಗಿರುವುವೆ ಹೊರತು ಅವು ಶಾಶ್ವತವಲ್ಲ. ಎಂದ ಮೇಲೆ ದಶರಥ ಮಹಾರಾಜನು ಪರಮಗುರುವೆಂಬುದೂ ಆತನ ಮಾತನ್ನು ನೀನು ಮೀರಬಾರದೆಂಬುದೂ ಎಲ್ಲಿಯ ವ್ಯಾಮೋಹ? ಪಿತೃರಾಜ್ಯವನ್ನು ಪರಿತ್ಯಜಿಸಿ ದುಃಖಕರವಾದ ಅರಣ್ಯವಾಸವನ್ನು ಕೈಗೊಳ್ಳುವುದು ಶುದ್ಧ ಕಾಪಥವೇ ಸರಿ. ತಂದೆಯ ಮಾತನ್ನು ನಡೆಸಬೇಕೆಂಬ ನಿನ್ನ ಚಾಪಲ್ಯವನ್ನು ಬದಿಗಿರಿಸಿ ರಾಜ್ಯಭೋಗವನ್ನು ಆದರದಿಂದ ಅನುಭವಿಸು. ಪ್ರತ್ಯಕ್ಷವೆ ಪ್ರಮಾಣವಾದುದರಿಂದ ಪರಲೋಕವೆಂದು ಹಲುಬುವುದು ಹುಚ್ಚು. ”

ಜಾಬಾಲಿ ಋಷಿಯ ಮಾತುಗಳನ್ನೆಲ್ಲ ತಾಳ್ಮೆಯಿಂದ ಕೇಳಿದ ಶ್ರೀರಾಮನು ಆತನನ್ನು ಕುರಿತು “ಅಯ್ಯಾ ಋಷಿಯೆ, ನನ್ನ ಮೇಲ್ಮೆಯನ್ನೆ ದೃಷ್ಟಿಯಲ್ಲಿಟ್ಟುಕೊಂಡು ನೀನು ಈ ಮಾತುಗಳನ್ನು ಆಡಿರಬಹುದಾದರೂ ಅವು ಎಂತಹ ಅನುಚಿತವಾದ ಮಾತುಗಳು! ಈ ರಾಜ್ಯವೆಂಬುದು ಸತ್ಯ ರೂಪವಾದುದು. ಸತ್ಯದಲ್ಲಿಯೆ ಈ ಜಗತ್ತು ನಿಂತಿದೆ. ಇಂತಹ ಸತ್ಯವನ್ನು ನಾನೀಗ ತ್ಯಜಿಸಿಬಿಡಲೇ? ಸತ್ಯವೆ ಜಗತ್ತಿನಲ್ಲಿ ಸರ್ವೋತ್ತಮವಾದುದೆಂದು ದೇವತೆಗಳೂ ಋಷಿಗಳೂ ಪರಿಗಣಿಸಿದ್ದಾರೆ. ಸತ್ಯವಾದಿಯಾದವನು ಉತ್ತಮ ಲೋಕಗಳನ್ನು ಪಡೆಯುತ್ತಾನೆ. ಸತ್ಯವೆ ಈಶ್ವರ. ಆ ಸತ್ಯಕ್ಕಿಂತಲು ಅಧಿಕವಾದ ಧರ್ಮವಿನ್ನಿಲ್ಲ. ದಾನ, ಯಾಗ, ಹೋಮ, ತಪಸ್ಸು, ಎಲ್ಲಕ್ಕೂ ಸತ್ಯವೆ ಆಧಾರ. ಸತ್ಯವಂತನಿಂದ ಸಕಲ ಜಗತ್ತೂ ಉದ್ಧಾರವಾಗುತ್ತದೆ. ಇದನ್ನು ಅರಿತ ನಾನು ಸತ್ಯಕ್ಕೆ ತಪ್ಪುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದೇನೆ. ಅಂತಹ ನಾನು ಈಗ ತಂದೆಯ ಸತ್ಯಕ್ಕೆ ಭಂಗತರಲೆ? ಆತನ ಇದಿರಿನಲ್ಲಿ ನಾನು ವನವಾಸ ಕೈಗೊಳ್ಳುವೆನೆಂದು ಪ್ರತಿಜ್ಞೆ ಮಾಡಿದೆ. ಇದರಿಂದ ಮಾತೆಯಾದ ಕೈಕೆ ಸಂತುಷ್ಟಳಾದಳು. ಈಗ ಪ್ರತಿಜ್ಞೆಯನ್ನು ಮುರಿಯಲೆ? ನಾಸ್ತಿಕ ಮತವನ್ನು ಬೋಧಿಸುತ್ತಿರುವ ನಿನ್ನ ಮಾತುಗಳು ನನಗೆ ಸಹಿಸಲಶಕ್ಯವಾಗಿವೆ. ನನ್ನ ತಂದೆಯ ಆಸ್ಥಾನದಲ್ಲಿ ನಿನ್ನಂತಹವನಿಗೆ ಸ್ಥಾನ ದೊರೆತುದಕ್ಕಾಗಿ ಅನುತಾಪಪಡಬೇಕಾಗಿದೆ” ಎಂದನು.

ಶ್ರೀರಾಮನ ಇಷ್ಠುರೋಕ್ತಿಗಳನ್ನು ಕೇಳಿ ವಸಿಷ್ಠ ಮಹರ್ಷಿಗಳು ಜಾಬಾಲಿಯ ಪರವಾಗಿ ಮಾತನ್ನಾಡುತ್ತಾ ಆತನನ್ನು ಕುರಿತು “ರಾಮಚಂದ್ರ ನೀನು ರಾಜ್ಯಭಾರವನ್ನು ವಹಿಸಲೆಂಬ ಉದ್ದೇಶದಿಂದ ಜಾಬಾಲಿ ಋಷಿ ಹಾಗೆ ಹೇಳಿದರೆ ಹೊರತು ಅವರು ನಾಸ್ತಿಕರಲ್ಲ. ಇಕ್ಷ್ವಾಕು ವಂಶದಲ್ಲಿ ಹಿರಿಯ ಮಗನೆ ಅರಸನಾಗಬೇಕು. ಕಿರಿಯವನಿಗೆ ಪಟ್ಟುಗಟ್ಟುವ ಪದ್ಧತಿಯಿಲ್ಲ. ಜ್ಯೇಷ್ಠಪುತ್ರನಾದ ನೀನು ನಿಮ್ಮ ವಂಶಪರಂಪರೆಯಾಗಿ ಬಂದಿರುವ ಈ ಧರ್ಮವನ್ನು ಪಾಲಿಸಲೇಬೇಕು. ನಾನು ನಿನ್ನ ಕುಲಪುರೋಹಿತ. ನಿನಗೆ ಮಾತ್ರವೆ ಅಲ್ಲದೆ ನಿಮ್ಮ ತಂದೆಗೂ ಆಚಾರ್ಯನಾಗಿದ್ದವನು. ಅಂತಹ ನಾನು ಹೇಳುತ್ತಿದ್ದೇನೆ – ರಾಜ್ಯಭಾರವನ್ನು ಕೈಗೊಂಡು ಪ್ರಜೆಗಳನ್ನು ಪಾಲಿಸುವುದು ನಿನ್ನ ಪರಮ ಧರ್ಮ. ಭರತನ ಪ್ರಾರ್ಥನೆಯನ್ನು ಮನ್ನಿಸಿ ಪಟ್ಟಾಭಿಷಕ್ತನಾಗು. ಇದರಿಂದ ವೃದ್ಧಳೂ ಧರ್ಮಶೀಲಳೂ ಆದ ನಿನ್ನ ತಾಯಿಯನ್ನು ನೀನು ಸೇವಿಸಲೂ ಅನುಕೂಲವಾಗುತ್ತದೆ” ಎಂದರು.

ಯಾರು ಏನು ಹೇಳಿದರೂ ಶ್ರೀರಾಮನ ಮನಸ್ಸು ಚಲಿಸಲಿಲ್ಲ. ದೃಢ ನಿಶ್ಚಯವಾಗಿ ಹೇಳಿದನು. “ದಶರಥ ಮಹಾರಾಜನು ನನ್ನ ಹೆತ್ತ ತಂದೆ. ಆತನ ಅಪ್ಪಣೆಯಂತೆ ನಡೆಯುವುದಾಗಿ ನಾನು ಪ್ರತಿಜ್ಞೆ ಮಾಡಿದ್ದೇನೆ. ಆ ಪ್ರತಿಜ್ಞೆಗೆ ಎಂದಿಗೂ ಭಂಗಬರಕೂಡದು. ” ಆತನ ಆ ನಿಶ್ಚಿತ ಮನೋಧರ್ಮವನ್ನು ಕಂಡು ಅಣ್ಣನು ಪ್ರಸನ್ನನಾಗುವವರೆಗೆ ತಾನೂ ದರ್ಭಾಸನದಲ್ಲಿ ಪವಡಿಸುತ್ತಾ ಅರಣ್ಯದಲ್ಲಿಯೆ ಇದ್ದುಬಿಡುವುದಾಗಿ ಭರತನು ಹೇಳಿದನು. “ಕೊಟ್ಟ ಸಾಲದ ಹಣವನ್ನು ಹಿಂಪಡೆಯಲೆಳಸುವ ಬ್ರಾಹ್ಮಣನಂತೆ ನಾನು ಅನಾಹಾರಿಯಾಗಿ ಈ ಪರ್ಣಶಾಲೆಯ ಮುಂದೆಯೆ ತಲೆಯ ಮೇಲೆ ಮುಸುಕು ಹಾಕಿಕೊಂಡು ಮಲಗಿಬಿಡುತ್ತೇನೆ” ಎಂದು ಹೇಳಿ, ಹೇಳಿದುದನ್ನು ಕಾರ್ಯತಃ ಮಾಡಿ ತೋರಿಸುವುದಕ್ಕಾಗಿ ದರ್ಭೆಗಳನ್ನು ಹಾಸಿದನು. ಸುತ್ತಲಿದ್ದ ಜನರೆಲ್ಲರೂ “ರಾಘವ, ನಿನ್ನ ತಮ್ಮನ ಪ್ರಾರ್ಥನೆಯನ್ನು ಸಲ್ಲಿಸಬಾರದೆ?” ಎಂದು ಬೇಡಿಕೊಂಡರು. ಸೋದರರ ಈ ಪರಸ್ಪರ ಪ್ರೇಮವನ್ನೂ ಧರ್ಮಶ್ರದ್ಧೆಯನ್ನೂ ಕಂಡು ಅವರು ಪರಮಾಶ್ಚರ್ಯಭರಿತರಾಗಿದ್ದರು. “ಇಂತಹ ಸತ್ಪುತ್ರರನ್ನು ಪಡೆದ ದಶರಥನು ನಿಜವಾಗಿಯೂ ಧನ್ಯನೆ ಸರಿ” ಎಂದುಕೊಂಡರು. “ಅಣ್ಣಾ, ನಾನು ರಾಜ್ಯವಾಳಲು ಸಮರ್ಥನಲ್ಲ” ಎಂದು ಭರತನು ಹೇಳಿದರೆ “ತಮ್ಮ, ನಿನ್ನಂತಹ ಸಮರ್ಥನು ಇನ್ನೊಬ್ಬನಿಲ್ಲ” ಎಂದು ಶ್ರೀರಾಮನು ಸಮಾಧಾನ ಹೇಳುವನು. “ನಾನು ಇಲ್ಲೆ ಇರುವೆನು” ಎಂದರೆ, “ತಂದೆಯ ಮಾತು ಇಬ್ಬರಿಗೂ ವಿಧೇಯ; ನಾನು ನಡೆಸುತ್ತಿರುವೆನು, ನೀನೂ ನಡೆಸು” ಎನ್ನುವನು. ಯರು ಏನು ಹೇಳಿದರೂ ಶ್ರೀರಾಮನ ನಿಶ್ಚಯ ಕದಲುವಂತಿರಲಿಲ್ಲ. ಕೊನೆಗೆ ಭರತನೆ ಸೋಲಬೇಕಾಯಿತು. ಆತನು ಅಣ್ಣನನ್ನು ಕುರಿತು “ಪೂಜ್ಯನೆ, ನಾನು ಎಷ್ಟು ಬೇಡಿದರೂ ನೀನು ರಾಜ್ಯಭಾರವನ್ನು ಸ್ವೀಕರಿಸಲಿಲ್ಲ. ನಾನಾದರೂ ಸ್ವತಂತ್ರವಾಗಿ ರಾಜ್ಯಭಾರವನ್ನು ನಡೆಸಲು ಒಪ್ಪುವುದಿಲ್ಲ. ನಿನ್ನ ಪಾದುಕೆಗಳನ್ನು ದಯಪಾಲಿಸು. ಅವುಗಳೆ ಜನರ ಯೋಗಕ್ಷೇಮವನ್ನು ವಹಿಸಲಿ” ಎಂದನು. ತಮ್ಮನ ಈ ಕೋರಿಕೆಯನ್ನು ಶ್ರೀರಾಮನು ಒಡನೆಯೆ ಸಲ್ಲಿಸಿದನು. ತನ್ನ ಪಾದುಕೆಗಳನ್ನು ಒಮ್ಮೆ ಮೆಟ್ಟಿ, ಅವುಗಳನ್ನು ಆತನಿಗೆ ಒಪ್ಪಿಸಿದನು.

ಅಣ್ಣನಿಂದ ಪಾದುಕೆಗಳನ್ನು ಪಡೆದ ಭರತನು ಅವುಗಳನ್ನು ಕಣ್ಣಿಗೆತ್ತಿಕೊಂಡು “ಅಣ್ಣಾ ರಾಮಚಂದ್ರ, ನಾನು ಹದಿನಾಲ್ಕು ವರ್ಷಗಳ ಕಾಲ ಜಟಾಜಿನಧರನಾಗಿ ಫಲಮೂಲಗಳನ್ನು ಭುಜಿಸುತ್ತಾ ನಿನ್ನ ಆಗಮನವನ್ನೆ ನಿರೀಕ್ಷಿಸಿಕೊಂಡಿರುತ್ತೇನೆ. ನೀನು ಹಿಂದಿರುಗಿ ಬರುವವರೆಗೂ ನಿನ್ನ ಪಾದುಕಗಳು ರಾಜ್ಯಭಾರವನ್ನು ವಹಿಸಿರುತ್ತವೆ. ನಿರ್ದಿಷ್ಟ ಕಾಲವಾದ ಮೇಲೆ ವಸಂತ ಋತುವಿನ ಪ್ರಥಮ ದಿನವೆ ನೀನು ಹಿಂತಿರುಗಬೇಕು. ಆ ದಿನ ನೀನು ಹಿಂದಿರುಗದಿದ್ದರೆ ನಾನು ಅಗ್ನಿಪ್ರವೇಶ ಮಾಡುತ್ತೇನೆ” ಎಂದನು. ಶ್ರೀರಾಮನು ‘ಹಾಗೆಯೆ ಆಗಲಿ’ ಎಂದು ಹೇಳಿ ಆತನನ್ನು ಆಲಿಂಗಿಸಿದನು. ಅನಂತರ ಆಗಲೆ ಭರತನನ್ನು ತನ್ನ ಪರಿವಾರದೊಡನೆ ಹಿಂದಿರುಗುವಂತೆ ತ್ವರೆಗೊಳಿಸಿದನು. ಸಪರಿವಾರನಾಗಿ ಹಿಂದಿರುಗುವ ಆತನನ್ನು ಶ್ರೀರಾಮನು ಬೀಳ್ಕೊಳ್ಳುವ ಮುನ್ನ ಅಪ್ಪಿಕೊಂಡು, “ಭರತ, ನಿನ್ನ ತಾಯಿಯನ್ನು ಉಚಿತ ರೀತಿಯಲ್ಲಿ ಮನ್ನಿಸುತ್ತಿರು. ಇಗೋ, ನನ್ನ ಮತ್ತು ಸೀತೆ ಮೇಲೆ ಆಣೆಯಿಟ್ಟು ಹೇಳುತ್ತಿದ್ದೆನೆ. ಆಕೆಯ ವಿಷಯದಲ್ಲಿ ಕಫಮಾಡುವುದನ್ನು ಬಿಟ್ಟುಬಿಡು” ಎಂದನು. ಆನಂತರ ಶತ್ರುಘ್ನ, ಸುಮಂತ್ರ ಮೊದಲಾದ ಪ್ರಮುಖರನ್ನೂ ವಸಿಷ್ಠರೇ ಮೊದಲಾದ ಗುರುಗಳನ್ನೂ ಉಚಿತ ರೀತಿಯಲ್ಲಿ ಬೀಳ್ಕೊಟ್ಟು ಕಳುಹಿಸಿದನು. ಕೌಸಲ್ಯೆ ಮೊದಲಾದ ರಾಜಮಾತೆಯರು ಶ್ರೀರಾಮನನ್ನು ಬಿಟ್ಟು ಅಗಲಲಾರದೆ ಕಣ್ಣೀರುಗರೆಯುತ್ತಾ ನಿಂತಿದ್ದರು. “ಹೋಗಿ ಬರುತ್ತೇವೆ” ಎಂದು ಹೇಳುವುದಕ್ಕೂ ಸಾಧ್ಯವಾಗದಂತೆ ಅವರ ಗಂಟಲು ಕಟ್ಟಿಹೋಗಿತ್ತು. ಶ್ರೀರಾಮನೆ ಅವರ ಬಳಿಗೆ ಹೋಗಿ ಒಬ್ಬೊಬ್ಬರಿಗೂ ಪ್ರತ್ಯೇಕ್ಷವಾಗಿ ನಮಸ್ಕರಿಸಿ ಅವರನ್ನು ಬೀಳ್ಕೊಂಡನು. ಅವರು ಅತ್ತ ಹೆಜ್ಜೆಯಿಡುತ್ತಲೆ ಇತ್ತ ಶ್ರೀರಾಮನು ಅಳುತ್ತಳುತ್ತ ಪರ್ಣಶಾಲೆಯನ್ನು ಪ್ರವೇಶಿಸಿದನು.

* * *