ಶ್ರೀರಾಮಚಂದ್ರನು ಚಿತ್ರಕೂಟದ ಪರ್ಣಶಾಲೆಯಲ್ಲಿ ವಾಸಿಸತೊಡಗಿ ಒಂದು ತಿಂಗಳಾಗಿತ್ತು. ಆ ಒಂದು ತಿಂಗಳು ಸೀತಾರಾಮರ ವನವಾಸದಲ್ಲಿ ಅತ್ಯಂತ ಸುಖಮಯವಾದ ಕಾಲವೆಂದು ಹೇಳಬೇಕು. ಪ್ರತಿದಿನವೂ ಶ್ರೀರಾಮನು ತನ್ನ ಮಡದಿಗೆ ಚಿತ್ರಕೂಟದ ಅತಿ ರಮ್ಯವಾದ ಪ್ರದೇಶಗಳನ್ನು ತೋರಿಸಿ ಆಕೆಯನ್ನು ಆನಂದಪಡಿಸುವನು. ಅಲ್ಲಿಯ ಹಕ್ಕಿಗಳನ್ನೂ ಮೃಗಗಳನ್ನೂ ನೋಡುತ್ತಾ ಇಬ್ಬರೂ ವನದಲ್ಲಿ ವಿಹರಿಸುವರು; ಅಲ್ಲಲ್ಲಿ ಹರಿಯುತ್ತಿರುವ ಝರಿಗಳಲ್ಲಿ ನೀರಾಟವಾಡುವರು; ತಂಗಾಳಿಗೆ ಮೈಯೊಡ್ಡಿ ಹಕ್ಕಿಗಳ ಇಂಪಾದ ಗಾನವನ್ನು ಕೇಳುತ್ತಾ ಮೈಮರೆಯುವರು. ಮಂದಾಕಿನೀ ನದಿಯ ಮರುಳುದಿನ್ನೆಯಲ್ಲಿ ಕುಳಿತು ಹಂಸ ಸಾರಸಾದಿ ಹಕ್ಕಿಗಳನ್ನೂ, ಕಮಲಪುಷ್ಪಗಳ ಮಧ್ಯದಲ್ಲಿ ಜುಳುಜುಳು ನಾದದಿಂದ ಹರಿಯುತ್ತಿರುವ ಪ್ರವಾಹವನ್ನೂ ನೋಡಿ, ರಸನಿಮಿಷಗಳನ್ನು ಸವಿಯುವರು. ವನವಿಹಾರದ ವೇಳೆಗಳಲ್ಲಿ ಸೀತೆ ಆಶಿಸಿದ ಹೂವನ್ನೊ ಹಣ್ಣನ್ನೊ ಶ್ರೀರಾಮನು ಮಂದಹಾಸದಿಂದ ಮಡದಿಯನ್ನು ಕುರಿತು, “ಜಾನಕಿ, ಧರ್ಮಾತ್ಮನಾದ ಲಕ್ಷ್ಮಣ ನಮ್ಮ ಸಮೀಪದಲ್ಲಿದ್ದಾನೆ. ಅನುಕೂಲಳಾದ ನೀನು ಜೊತೆಯಲ್ಲಿರುವೆ. ನಿಮ್ಮ ಸಹವಾಸದಲ್ಲಿರುವ ನನಗೆ ಅಯೋಧ್ಯೆಯಾಗಲಿ, ರಾಜೈಶ್ವರಗಳಾಗಲಿ ಕಃಪದಾರ್ಥಗಳಾಗಿ ತೋರುತ್ತವೆ. ನನ್ನ ಪಾಲಿಗೆ ಅವು ಇಲ್ಲವೆಂದು ನನಗೆ ಸ್ವಲ್ಪವೂ ವ್ಯಥೆಯಾಗುತ್ತಿಲ್ಲ” ಎನ್ನುವನು. ಆ ಮಾತನ್ನು ಕೇಳಿ ಸೀತೆ ಮುಗುಳ್ನಗುವಳು.

ಒಂದು ದಿನ ಸೀತಾರಾಮನು ಚಿತ್ರಕೂಟದ ನಿಮ್ನಪ್ರದೇಶದಲ್ಲಿ ಕುಳಿತು ಲಕ್ಷ್ಮಣನು ತಂದಿತ್ತ ರುಚಿರುಚಿಯಾದ ಆಹಾರವನ್ನು ಸೇವಿಸುತ್ತಿದ್ದಾರೆ. ದೂರದಲ್ಲಿ ದೊಡ್ಡ ಕೋಲಾಹಲ ನಾದವೊಂದು ಕೇಳಿಸಿತು. ಜನರ ಕಾಲ್ತುಳಿತದಿಂದ ಎದ್ದ ಧೂಳೀಪ್ರವಾಹವೊಂದು ವಾಯುಮಂಡಲದಲ್ಲಿ ಕಾಣಿಸಿತು. ಅರಣ್ಯದ ಮೃಗಗಳೆಲ್ಲವೂ ಬೆದರಿ ಓಡಿಹೋಗುತ್ತಿದ್ದುವು. ಅದನ್ನು ಕಂಡ ಶ್ರೀರಾಮನು ತಮ್ಮನನ್ನು ಕುರಿತು “ಸೌಮಿತ್ರಿ, ಜನ ಕೋಲಾಹಲದಿಂದ ಬೆದರಿದ ಕಾಡುಮೃಗಗಳು ದಿಕ್ಕೆಟ್ಟು ಓಡುತ್ತಿವೆ. ಯಾವನಾದರೂ ರಾಜನೊಬ್ಬನು ಬೇಟೆಗಾಗಿ ಬಂದಿದ್ದಾನೆಯೊ ಅಥವಾ ಯಾವುದಾದರೂ ಕ್ರೂರ ಜಂತುವೊಂದು ಈ ಅರಣ್ಯವನ್ನು ಪ್ರವೇಶಿಸಿದೆಯೊ! ಪಕ್ಷಿಗಳು ಕೂಡ ಹೊರಕ್ಕೆ ಬರದೆ ಅಲ್ಲಲ್ಲಿ ಅವಿತುಕೊಂಡಿದೆಯಲ್ಲಾ; ಇದಕ್ಕೆ ಕಾರಣವೇನೊ ನೋಡು” ಎಂದನು. ಒಡನೆಯೆ ಲಕ್ಷ್ಮಣನು ಎತ್ತರವಾದ ಒಂದು ಮರವನ್ನು ಹತ್ತಿ ಸುತ್ತಲೂ ನೋಡಿದನು. ಉತ್ತರದಿಕ್ಕಿನಲ್ಲಿ ದೊಡ್ಡದೊಂದು ಸೈನ್ಯ ತಮ್ಮ ಕಡೆಗೆ ಸಾಗಿಬರುತ್ತಿರುವುದು ಕಾಣಿಸಿತು. ಅದರಲ್ಲಿದ್ದ ಅಸಂಖ್ಯತವಾದ ಆನೆಗಳನ್ನೂ ಕುದುರೆಗಳನ್ನೂ ರಥಗಳನ್ನೂ ಕಾಲಾಳುಗಳನ್ನೂ ಕಂಡು ಆತನಿಗೆ ಯಾರೊ ತಮ್ಮ ಮೇಲೆ ದಂಡೆತ್ತಿ ಬರುತ್ತಿರುವರೆಂದು ಭಾಸವಾಯಿತು. ಮರದ ನೆತ್ತಿಯಿಂದಲೆ ಕೂಗಿ ಹೇಳಿದನು” “ಅಣ್ಣಾ, ಹೊಗೆಯಾಡುತ್ತಿರುವ ನಮ್ಮ ಅಗ್ನಿ ಹೋತ್ರವನ್ನು ಮೊದಲು ಆರಿಸಿಬಿಡು. ಸೀತಾದೇವಿಯನ್ನು ಗುಹೆಯಲ್ಲಿ ಬಚ್ಚಿಟ್ಟು ಕವಚವನ್ನು ಧರಿಸು, ದನುರ್ಭಾಣಗಳು ಸಿದ್ದವಾಗಲಿ. ಯಾವುದೋ ದೊಡ್ಡ ಸೈನ್ಯವೊಂದು ಇತ್ತಕಡೆಗೆ ಬರುತ್ತಿದೆ” ಎಂದನು.

ಜನರ ಕಾಲ್ತುಳಿತದಿಂದ ಎದ್ದ ಧೂಳೀ ಪ್ರವಾಹವೊಂದು ವಾಯುಮಂಡಲದಲ್ಲಿ ಕಾಣಿಸಿತು

ಲಕ್ಷ್ಮಣನು ಗಾಬರಿಗಾಬರಿಯಾಗ ಕೂಗಿ ಹೇಳಿದರೂ ಶ್ರೀರಾಮನು ಶಾಂತವಾಗಿಯೆ ಅವನನ್ನು ಕುರಿತು “ವತ್ಸ, ಆ ಸೈನ್ಯ ಯಾರದಿರಬಹುದು? ಸ್ವಲ್ಪ ನೋಡಿ ಹೇಳು” ಎಂದನು. ಲಕ್ಷ್ಮಣನು ದೃಷ್ಟಿಸಿ ನೋಡಿದನು. ಆತನಿಗೆ ಆ ಸೈನ್ಯ ಯಾರದೆಂದು ಗೊತ್ತಾಯಿತು. ಕೋಪದಿಂದ ಕಿಡಿಕಿಡಿಯಾಗಿ ಬಿರುನುಡಿದನು. “ಅಣ್ಣಾ, ಆ ಕೈಕೆಯ ಮಗ ಸಸೈನ್ಯವಾಗಿ ಬರುತ್ತಿದ್ದಾನೆ. ಸಾಕೇತಸಾಮ್ರಾಜ್ಯದ ಪಟ್ಟಾಭಿಷೇಕದಿಂದ ತೃಪ್ತನಾಗೆ ನಮ್ಮನ್ನು ಕೊಂದು ರಾಜ್ಯವನ್ನು ನಿಷ್ಕಂಟಕವಾಗಿ ಮಾಡಿಕೊಳ್ಳಬೇಕೆಂದು ಬರುತ್ತಿದ್ದಾನೆ. ಆಗೋ ನೋಡು, ರಥದ ಮೇಲೆ ಹಾರುತ್ತಿರುವ ಕೋವಿದಾರ ಧ್ವಜವೇ ಬರುತ್ತಿರುವವನು ಭರತನೆಂದು ಸಾರಿಹೇಳುತ್ತಿದೆ. ಅಣ್ಣಾ, ಬೇಗ ಮಾಡು. ನಾನು ಧನುರ್ಧಾರಿಗಳಾಗಿ ಚಿತ್ರಕೂಟದಲ್ಲಿ ಎತ್ತರವಾದ ಒಂದು ಪ್ರದೇಶವನ್ನು ಆಶ್ರಯಿಸೋಣ. ಬರಲಿ ಆ ಭರತ. ನಮ್ಮೆಲ್ಲರ ವ್ಯಥೆಗು ಕಾರಣಭೂತನಾದ ಅವನನ್ನು ಕೊಂದುಹಾಕುತ್ತೇನೆ. ಧರ್ಮವನ್ನು ತೊರೆದ ಆ ಅಪಕಾರಿಯನ್ನು ಕೊಲ್ಲುವುದರಿಂದ ಲೇಶವಾದರೂ ಪಾಪ ಬರುವುದಿಲ್ಲ. ಅವನ ಸಾವಿನಿಂದ ಅವನ ತಾಯಿ ಅಪಾರವಾದ ವ್ಯಥೆಯನ್ನು ಹೊಂದಲಿ. ಅವಳು ಸಂಕಟಪಟ್ಟುದಾದ ಮೇಲೆ ಅವಳನ್ನೂ ಸಂಹಾರ ಮಾಡುತ್ತೇನೆ. ಇಷ್ಟು ಮಾಡಿದ ಮೇಲೆ ಪಾಪಾತ್ಮರಾದವರೆಲ್ಲರೂ ಮಡಿದು ಭೂಭಾರ ಕಡಿಮೆಯಾದಂತಾಗುತ್ತದೆ. ನನ್ನ ಕ್ರೋಧಾಗ್ನಿಯಿಂದ ಈ ಸೇನಾರೂಪದ ಕಂಟಕವೆಲ್ಲವೂ ಉರಿದು ಹೋಗಲಿ. ನನ್ನ ತೀಕ್ಷ್ಣವಾದ ಬಾಣಗಳಿಗೆ ಬಲಿಯಾದ ಈ ಸೈನ್ಯದ ರಕ್ತದಿಂದ ಚಿತ್ರಕೂಟ ಪರ್ವತದ ಅರಣ್ಯವೆಲ್ಲವೂ ನೆನೆದುಹೋಗಲಿ. ಈ ಚತುರಂಗಸೇನೆಯ ಮಾಂಸ ಸೇವೆಯಿಂದ ಈ ಅರಣ್ಯದ ಶ್ವಾಪದಗಳೆಲ್ಲವೂ ತಣಿದುಹೋಗಲಿ. ಈ ಭರತನನ್ನು ಅವನ ಸೈನ್ಯಸಹಿತವಾಗಿ ಸಂಹಾರ ಮಾಡುತ್ತೇನೆ; ಇದರಲ್ಲಿ ಸಂಶಯವಿಲ್ಲ. ”

ದಳ್ಳುರಿಯಂತೆ ಕಿಡಿಗಾರುತ್ತಿರುವ ತಮ್ಮನನ್ನು ಶಾಂತನಾದ ಶ್ರೀರಾಮಚಂದ್ರ ಮೂರ್ತಿ ಮೃದುಮಧುರವಾದ ಕಂಠದಿಂದ ಸಮಾಧಾನಪಡಿಸಿದನು. – “ಅಯ್ಯಾ, ಪ್ರಾಜ್ಞನಾದ ಭರತನು ತಾನೇ ಸ್ವತಃ ಇಲ್ಲಿಗೆ ಬರುತ್ತಿರುವಾಗ ಧನುಸ್ಸು, ಕತ್ತಿ, ಕವಚಗಳನ್ನು ತೆಗೆದುಕೊಂಡು ಏನು ಮಾಡಬೇಕು? ಬಂಧುವಧೆಯಿಂದ ಬರುವ ಸಂಪತ್ತು ವಿಷಮಿಶ್ರವಾದ ಅನ್ನವಿದ್ದಂತೆ. ಅಲ್ಲದೆ ಈ ರಾಜ್ಯವನ್ನು ಸ್ವಸುಖಕ್ಕಾಗಿ ನಾನೆಂದೂ ಕಾಮಿಸಿದವನಲ್ಲ. ರಾಜ್ಯ ಬಂದರೂ ಅದು ಸೋದರರಾದ ನಿಮ್ಮ ಸಂತೋಷಕ್ಕಾಗಿಯೆ ಹೊರತು ನನ್ನ ಪ್ರಯೋಜನಕ್ಕಾಗಿ ಅಲ್ಲ. ಅನ್ಯಾಯದಿಂದ ಇಂದ್ರಪದವಿ ಬರುವಂತಿದ್ದರೂ ಅದು ನನಗೆ ಬೇಡ. ಹೀಗಿರುವಲ್ಲಿ ಭರತನನ್ನು ಕೊಂದು ಆತನ ರಾಜ್ಯವನ್ನು ನಾನು ಸ್ವೀಕರಿಸಲೆ? ವತ್ಸ, ಭರತನು ನನ್ನಲ್ಲಿ ಬಹುವಾತ್ಸಲ್ಯವುಳ್ಳವನು. ಎಂದಾದರೂ ಭರತನು ಮತ್ತೊಬ್ಬರಿಗೆ ಅನ್ಯಾಯವನ್ನು ಮಾಡಿದ್ದಾನೆಯೆ? ಅವನಲ್ಲಿ ಸಂದೇಹಪಡುವುದು ನಿನಗೆ ಯಾವ ನ್ಯಾಯ? ನೀನಿನ್ನು ಆತನ ವಿಚಾರದಲ್ಲಿ ಕಠಿಣವಾದ ನುಡಿಗಳನ್ನಾಡಬೇಡ. ಇದೋ ನಿನಗೆ ರಾಜ್ಯದ ಮೇಲೆ ಅಷ್ಟು ಅಪೇಕ್ಷೆಯಿದ್ದರೆ ನಾನು ಆತನಿಗೆ ಹೇಳಿ ರಾಜ್ಯವನ್ನು ನಿನಗೆ ಕೊಡಿಸುತ್ತೇನೆ. ನಾನು ಹೇಳಿದರೆ ಆತನು ಎಂದಿಗೂ ಹಿಂದೆಗೆಯನು” ಎಂದನು.

ಶ್ರೀರಾಮನು ಮಾತುಗಳನ್ನು ಕೇಳಿ ಲಕ್ಷ್ಮಣನಿಗೆ ಬಹು ನಾಚಿಕೆಯಾಯಿತು. ದೇಹ ಕುಗ್ಗಿ, ತಲೆ ತಗ್ಗಿ ಆತ ಹೇಳಿದ – “ಅಣ್ಣಾ, ನಿನ್ನನ್ನು ಕಾಣಲು ತಂದೆಯಾದ ದಶರಥನೆ ಬಂದಿದ್ದರೂ ಬಂದಿರಬಹುದು. ” ತಮ್ಮನ ದುರವಸ್ಥೆಯನ್ನು ಕಂಡು ಶ್ರೀರಾಮನಿಗೆ “ಪಾಪ” ಎನ್ನಿಸಿತು. ಆತನನ್ನು ಸಮಾಧಾನಪಡಿಸುವುದಕ್ಕಾಗಿ “ಇರಬಹುದು, ಮಗೂ; ನಮ್ಮನ್ನು ಹಿಂದಕ್ಕೆ ಕರೆದೊಯ್ಯಲು ತಂದೆಯ ಬಂದಿದ್ದರೂ ಬಂದಿರಬಹುದು. ಕಡೆಯಪಕ್ಷ ಸುಕುಮಾರಿಯಾದ ಜಾನಕಿಯನ್ನಾದರೂ ಕರೆದುಕೊಂಡು ಹೋಗಲು ಆತನು ನಿಶ್ಚಯಿಸಿಕೊಂಡು ಬಂದಿರಬಹುದು. ನೋಡು! ತಂದೆಯ ಆನೆ ಆ ಶತ್ರುಂಜಯ ಹೇಗೆ ಸೇನೆಯ ಮುಂಭಾಗದಲ್ಲಿ ಗಂಭೀರವಾಗಿ ಬರುತ್ತಾ ಇದೆ. ಆದರೆ, ಲಕ್ಷ್ಮಣಾ! ಇದೇನು ಶ್ವೇತಚ್ಛತ್ರವೆ ಕಾಣಬರುತ್ತಿಲ್ಲವಲ್ಲಾ! ನನಗೇಕೊ ಸಂದೇಹವಾಗುತ್ತಿದೆ. ವೃಕ್ಷಾಗ್ರದಿಂದ ನೀನು ಬೇಗ ಇಳಿದು ಬಾ” ಎಂದನು. ಅಣ್ಣನ ಆಜ್ಞೆಯಂತೆ ಲಕ್ಷ್ಮಣನು ಕೆಳಗಿಳಿದು ಬಂದನು.

ಇತ್ತ ಭರತನು ಸೇನೆಯನ್ನೆಲ್ಲ ಚಿತ್ರಕೂಟ ಪರ್ವತದ ಬುಡದಲ್ಲಿ ನಿಲ್ಲಿಸಿ, ತನ್ನ ಅಣ್ಣದೇವನನ್ನು ಕಾಣುವುದಕ್ಕಾಗಿ ಕಾಲ್ನಡಗೆಯಿಂದಲೆ ಹೊರಟನು. ಶತ್ರುಘ್ನ, ಗುಹ, ಸುಮಂತ್ರ ಮೊದಲಾದ ಪ್ರಮುಖರೂ ಆತನನ್ನು ಹಿಂಬಾಲಿಸಿದರು. ಆತನ ತಲೆಯ ತುಂಬ ಶ್ರೀರಾಮನಿಗೆ ಸಂಬಂಧಿಸಿದ ಭಾವನೆಗಳೆ. ಶ್ರೀರಾಮಚಂದ್ರನ ಮುಖಚಂದ್ರನನ್ನು ಸದಾ ಕಾಣುತ್ತಿರುವ ಲಕ್ಷ್ಮಣನು ಎಂತಹ ಪುಣ್ಯವಂತ! ಗಂಡನನ್ನು ಅನುಸರಿಸಿ ಬಂದಿರುವ ಪತಿವ್ರತಾ ಶಿರೋಮಣಿಯಾದ ಸೀತಾದೇವಿ ಎಂತಹ ಕೃತಕೃತ್ಯಳು! ಶ್ರೀರಾಮನಿಗೆ ವಸತಿಯನ್ನು ಕಲ್ಪಿಸಿಕೊಟ್ಟಿರುವ ಈ ಚಿತ್ರಕೂಟ ಎಂತಹ ಭಾಗ್ಯಶಾಲಿ! ಆಲೋಚನೆಗಳಿಗೆ ತಾಳಹಾಕುತ್ತಾ ಆತನ ಕಾಲುಗಳು ಮುಂದುವರಿಯುತ್ತಿದ್ದುವು. ಗಿಡಬಳ್ಳಿಗಳನ್ನು ತೂರಿ ತೂರಿ ಹೋಗುತ್ತಿರಲು ಎದುರಿಗೆ ಪರ್ಣಶಾಲೆಯೊಂದು ಗೋಚರವಾಯಿತು. ಅದೇ ಶ್ರೀರಾಮನ ಪರ್ಣಶಾಲೆ ಇರಬಹುದೆ? ಅದರ ಸಮೀಪದಲ್ಲಿಯೆ ರಾತ್ರಿ ಚಳಿಕಾಯಿಸಿಕೊಳ್ಳಲು ಕೂಡಿಟ್ಟಿರುವ ಕಟ್ಟಿಗೆಗಳ ರಾಶಿಯೊಂದು ಕಡೆ; ಪೂಜೆಗಾಗಿ ಕೊಯ್ದಿಟ್ಟಿರುವ ಹೂಗಳ ರಾಶಿಯೊಂದು ಕಡೆ. ಸಮೀಪದಲ್ಲಿಯೆ ಗಿಡದ ರೆಂಬೆಗಳಿಗೆ ಕಟ್ಟಿರುವ ನಾರುಮಡಿಗಳು – ಇವು ಕಣ್ಣಿಗೆ ಬಿದ್ದುವು. ಗಿಡದ ರಂಬೆಗಳಿಗೆ ಕಟ್ಟಿರುವ ಹಳೆಯ ಬಟ್ಟೆಯ ತುಂಡುಗಳನ್ನು ಕಂಡು ಆವೇಳೆಯಲ್ಲಿ ದಾರಿಯನ್ನು ಗುರುತಿಸುವುದಕ್ಕಾಗಿ ಲಕ್ಷ್ಮಣನು ಅವುಗಳನ್ನು ಕಟ್ಟಿರಬೇಕೆಂದು ಆತನು ತರ್ಕಿಸಿದನು. ಅದು ಶ್ರೀರಾಮನ ಪರ್ಣಶಾಲೆಯೆ ಇರಬೇಕೆಂದು ಮನಸ್ಸಿಗೆ ಬೋಧೆಯಾಯಿತು. ಸೀತಾರಾಮರನ್ನು ಕಾಣಬೇಕೆಂಬ ಉತ್ಸಾಹದಿಂದ ಕಾಲುಗಳು ಚುರುಕಾದುವು. ಸಮೀಪಕ್ಕೆ ಬಂದಂತೆಲ್ಲಾ ಪರ್ಣಶಾಲೆಯ ಒಳಭಾಗವೂ ಸ್ಪಷ್ಟವಾಗಿ ಗೋಚರಿಸಲಾರಂಭವಾಯಿತು. ನಿಜ. ಇದು ಶ್ರೀರಾಮನ ಎಲೆವನೆಯೆ! ಅಲ್ಲಿ ನೇತುಹಾಕಿರುವ ಧನಸ್ಸೂ ಬತ್ತಳಿಕೆಯೂ ಆತನವೆ. ಆಗೋ, ನಾರುಮಡಿಯನ್ನುಟ್ಟು ಜಟಾಧಾರಿಯಾಗಿ ಪರ್ಣಶಾಲೆಯ ಮಧ್ಯದಲ್ಲಿ ಅಗ್ನಿಹೋತ್ರದಂತೆ ಪ್ರಕಾಶಮಾನವಾಗಿ ಕಾಣುತ್ತಿರುವ ಆ ಮಹಾಬಾಹು ಸಾಕ್ಷಾತ್ ಶ್ರೀರಾಮನೆ!

ಅಣ್ಣನನ್ನು ಕಾಣುತ್ತಲೆ ಭರತನು ಆತನ ಬಳಿಗೆ ಎಳೆಯ ಮಗುವಿನಂತೆ ಓಡಿಬಂದನು. ಆತನ ಕಣ್ಣುಗಳಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. “ಆರ್ಯಾ! ಅಣ್ಣಾ!” ಎಂದು ಕೂಗಿ ಮುಂದೆ ಮಾತನಾಡಲಾರದೆ ಆತನ ಪಾದಮೂಲದಲ್ಲಿ ಬಿದ್ದನು. ಆತನ ಹಿಂದೆಯೆ ಶತ್ರುಘ್ನನೂ ಓಡಿಬಂದು ಅಳುತ್ತಾ ಹಿರಿಯಣ್ಣನಿಗೆ ನಮಸ್ಕರಿಸಿದನು. ತಮ್ಮಂದಿರನ್ನು ಕಂಡು ಶ್ರೀರಾಮನ ಕಣ್ಣುಗಳೂ ಹನಿಗೂಡಿದುವು. ಇಬ್ಬರನ್ನೂ ಬಾಚಿ ತಬ್ಬಿಕೊಂಡನು. ಆ ವೇಳೆಗೆ ಉಳಿದವರೂ ಅಲ್ಲಿಗೆ ಬಂದರು. ಎಲ್ಲರೂ ಕ್ಷಣಕಾಲ ಮೌನವಾಗಿದ್ದರು. ಎಲ್ಲರ ಕಣ್ಣುಗಳೂ ಒದ್ದೆಯಾಗಿದ್ದುವು.

ತಮ್ಮಂದಿರನ್ನು ಕಂಡು ಆನಂದದಿಂದ ಪರವಶನಾಗಿದ್ದ ಶ್ರೀರಾಮಚಂದ್ರನು ಸ್ವಲ್ಪಕಾಲದ ಮೇಲೆ ಚಚ್ಚರಗೊಂಡು ಬಂದಿದ್ದವರೆಲ್ಲರ ಯೋಗಕ್ಷೇಮವನ್ನೂ ವಿಚಾರಿಸಿದನು. ಭರತನನ್ನು ಸೆಳೆದು ತೊಡೆಯ ಮೇಲೇರಿಸಿಕೊಂಡು “ಅಪ್ಪಾ ಭರತ, ಬಹುಕಾಲಕ್ಕೆ ನಿನ್ನನ್ನು ಕಂಡಂತಾಯಿತು. ನೀನಿದ್ದ ಕೇಕಯ ನಗರವೆಲ್ಲಿ, ಈ ಅರಣ್ಯವೆಲ್ಲಿ? ಎಷ್ಟು ದೂರ! ಈ ಪ್ರಯಾಣ ಎಷ್ಟು ಕ್ಲೇಶಕರ? ಈಗ ಅರಣ್ಯಕ್ಕೆ ಏಕೆ ಬಂದೆ? ಮುಪ್ಪಿನ ತಂದೆಯಿಂದ ಆಗಲಿ ಹೀಗೆ ಬರಬಹುದೆ ಆತನು ಕ್ಷೇಮವಾಗಿರುವನೆ? ತಾಯಿಯರೆಲ್ಲರೂ ಕುಶಲದಿಂದಿರುವರೆ? ನಿನ್ನ ರಾಜ್ಯಭಾರ ಸುಗಮವಾಗಿ ನಡೆಯುತ್ತಿರುವುದೆ?” ಎಂದು ಪ್ರಶ್ನಿಸಿದನು. ಭರತನು ಆತನಿಗೆ ಉತ್ತರ ಕೊಡುತ್ತಾ “ಅಣ್ಣಾ, ನೀನಿಲ್ಲದ ಈ ರಾಜ್ಯ ನನಗೇಕೆ? ನನಗೆ ಬೇಕಾದುದು ನಿನ್ನ ಸೇವೆ. ನೀನು ಅಯೋಧ್ಯೆಗೆ ಹಿಂದಿರುಗಿ ರಾಜ್ಯಭಾರವನ್ನು ಸ್ವೀಕರಿಸು. ಈಗ ನನಗೆ ನೀನೇ ತಂದೆ. ನೀನಿತ್ತ ಅರಣ್ಯಕ್ಕೆ ಹೊರಟುಬಂದೆ; ನಾನಿನ್ನೂ ಕೇಕೆಯ ರಾಜ್ಯದಲ್ಲಿಯೆ ಇದ್ದೆ; ನಾವೊಬ್ಬರೂ ಇಲ್ಲದ ಹೊತ್ತು ಪೂಜ್ಯನಾದ ತಂದೆ ಸ್ವರ್ಗಸ್ಥನಾದನು. ಸೀತಾಲಕ್ಷ್ಮಣರೊಡನೆ ವನವಾಸವನ್ನು ಕೈಕೊಂಡ ನಿನ್ನನ್ನೇ ಸ್ಮರಿಸುತ್ತಾ ಅದೇ ದುಃಖದಲ್ಲಿಯೆ ಆತನು ಅಸುದೊರೆದನು. ಆದ್ದರಿಂದ ನೀನು ಮೊದಲು ತಂದೆ ತಿಲೋದಕಾದಿಗಳನ್ನೂ ಕರ್ಮಗಳನ್ನೂ ಸಲ್ಲಿಸಿ ಬರುವವನಾಗು. ಆಮೇಲೆ ಉಳಿದ ವಿಚಾರವನ್ನು ಮಾತನಾಡೋಣ” ಎಂದನು.

ದಾರುಣವಾದ ತಂದೆಯ ಮರಣವಾರ್ತೆಯನ್ನು ಕೇಳಿ ಶ್ರೀರಾಮನು ದುಃಖದಿಂದ ನಿಶ್ಚೇತನನಾಗಿ ನೆಲಕ್ಕೆ ಬಿದ್ದನು. ಆತನ ತಮ್ಮಂದಿರೂ ಸೀತಾದೇವಿಯೂ ಕಳವಳಗೊಂಡು ಆತನಿಗೆ ಶೈತ್ಯೋಪಚಾರಗಳನ್ನು ನಡಸಿದರು. ಅದರಿಂದ ಎಚ್ಚೆತ್ತ ಶ್ರೀರಾಮನು ಅತಿ ದೀನನಂತೆ ಗೋಳಿಟ್ಟನು. ತಂದೆಯ ಮರಣಕಾಲದಲ್ಲಿ ಸಮೀಪದಲ್ಲಿದ್ದು ಆತನ ಪ್ರೇತಕಾರ್ಯಗಳನ್ನು ನಡೆಸುವ ಪುಣ್ಯ ತನ್ನ ಪಾಲಿಗೆ ತಪ್ಸಿಹೋದುದಕ್ಕಾಗಿ ಆತನು ಪರಿತಪಿಸಿದನು. ವನವಾಸದ ಅವಧಿ ಮುಗಿದ ಮೇಲೂ ತಾನು ಮತ್ತೊಮ್ಮೆ ತಂದೆಯಿಲ್ಲದ ಅಯೋಧ್ಯೆಗೆ ಹಿಂದಿರುಗಬಾರದು ಎನ್ನಿಸಿತು. ಹೆಂಡತಿಯನ್ನು ಕುರಿತು “ದೇವಿ, ನಿಮ್ಮ ಮಾವ ಸ್ವರ್ಗಸ್ಥನಾದ!” ಎಂದು ಅತ್ತನು. ಲಕ್ಷ್ಮಣನೊಡನೆ “ಲಕ್ಷ್ಮಣಾ, ನೀನು ತಂದೆಯಿಲ್ಲದ ತಬ್ಬಲಿಯಾದೆ” ಎಂದು ಗೋಳಾಡಿದನು. ಸೀತೆಯ ಕೋಮಲ ಹೃದಯ ಆ ದುಃಖವಾರ್ತೆಯಿಂದ ಕರಗಿ ಕಣ್ಣೀರಾಗಿ ಹರಿಯುತ್ತಿತ್ತು. ಹೊಟ್ಟೆಯ ದುಃಖ ಕಣ್ಣೀರಿನ ರೂಪದಿಂದ ಹರಿದು ಸ್ವಲ್ಪ ಸಮಾಧಾನಕ್ಕೆ ಬಂದಮೇಲೆ ಶ್ರೀರಾಮನು ಲಕ್ಷ್ಮಣನನ್ನು ಕುರಿತು “ಮಗೂ, ಮಂದಾಕಿನೀ ನದಿಗೆ ಹೋಗಿ ತಂದೆಗೆ ತಿಲೋದಕ ಕೊಟ್ಟು ಬರೋಣ. ಜಾನಕಿ ಮುಂದೆ ಹೋಗಲಿ. ಅವಳ ಹಿಂದೆ ಹೋಗು. ನಾನು ಕಡೆಯಲ್ಲಿ ಬರುತ್ತೇನೆ ಇದೇ ಸರಿಯಾದ ಕ್ರಮ” ಎಂದು ಹೇಳಿ ಮೂವರೂ ನದೀತೀರದಲ್ಲಿ ಸೇರಿದರು. ಅಲ್ಲಿ ಮೂವರೂ ಮಿಂದು ತಿಲತರ್ಪಣವನ್ನು ಕೊಟ್ಟಮೇಲೆ, ಇಂಗುದೀ ಪಿಷ್ಟಕ್ಕೆ ಬೋರೆಹಣ್ಣಿನ ರಸವನ್ನು ಮಿಶ್ರಮಾಡಿ ತಂದೆಗೆ ಪಿಂಡಪ್ರದಾನ ಮಾಡಿದರು. ರಾಜಾಧಿರಾಜನಾದ ದಶರಥನಿಗೆ ಇಂತಹ ಪಿಂಡವನ್ನು ಕೊಡುತ್ತಿರುವುದಕ್ಕಾಗಿ ಶ್ರೀರಾಮನಿಗೆ ಸಂಕಟವಾಯಿತಾದರೂ ತಾನು ತಿನ್ನುತ್ತಿರುವುದನ್ನೆ ಪರಲೋಕದಲ್ಲಿರುವ ತಂದೆಗೂ ಅರ್ಪಿಸುತ್ತಿರುವೆನೆಂದು ತಿಳಿದು ಸಮಾಧಾನಗೊಂಡನು. ಹೀಗೆ ಪ್ರೇತಕರ್ಮಗಳನ್ನುನೆರವೇರಿಸಿದ ಮೇಲೆ ಮೂವರೂ ಒದ್ದೆಬಟ್ಟೆಗಳಲ್ಲಿಯೆ ತಮ್ಮ ಆರ್ಶರಮಕ್ಕೆ ಹಿಂದಿರುಗಿದರು. ಮತ್ತೊಮ್ಮೆ ರೋದನಧ್ವನಿ ಕಾನನವನ್ನೆಲ್ಲ ತುಂಬಿತು.

ಆ ವೇಳೆಗೆ ದಶರಥನ ರಾಣಿವಾಸದವರೆಲ್ಲರೂ ಶ್ರೀರಾಮನನ್ನು ಕಾಣುವುದಕ್ಕಾಗಿ ವಸಿಷ್ಠರ ಜೊತೆಯಲ್ಲಿ ಹೊರಟು ಮಂದಾಕಿನೀ ದಡಕ್ಕೆ ಬಂದರು. ಆಗತಾನೆ ರಾಮಾದಿಗಳು ಅಲ್ಲಿಟ್ಟು ಹೋಗಿದ್ದ ಇಂಗುದೀ ಪಿಷ್ಟದ ಪಿಂಡಗಳನ್ನು ಕಂಡು ಕೌಸಲ್ಯೆಗೆ ಬಹು ಸಂಕಟವಾಯಿತು. ಶ್ರೀರಾಮನಂತಹ ಜಗದ್ವಿಖ್ಯಾತ ಪರಾಕ್ರಮಿ ತನ್ನ ತಂದೆಗೆ ಈ ಕದನ್ನವನ್ನು ಅರ್ಪಿಸಬೇಕಾಗಿ ಬಂದಿರುವ ಈ ದುರವಸ್ಥೆಯನ್ನು ಕಣ್ಣಾರೆಕಂಡು ತನ್ನ ಹೃದಯವೇಕೆ ಸಾವಿರ ಹೋಳುಗಳಾಗಿ ಸೀಳಿಹೋಗಲಿಲ್ಲವೆಂದು ಆಕೆ ಗೋಳಾಡಿದಳು. ಆದರೆ ಆಕೆಯ ಸಪತ್ನಿಯರು ಆಕೆಯನ್ನು ಸಮಾಧಾನಪಡಿಸಿ ಶ್ರೀರಾಮನ ಬಳಿಗೆ ಕೊಂಡೊಯ್ದರು. ಸ್ವರ್ಗಚ್ಯುತನಾದ ದೇವತೆಯಂತೆ ಸಕಲ ಭೋಗಗಳಿಂದಲೂ ವಿರಹಿತನಾಗಿದ್ದ ಶ್ರೀರಾಮಮೂರ್ತಿಯನ್ನು ಕಂಡು ರಾಣಿಯರೆಲ್ಲರೂ ಗಟ್ಟಿಯಾಗಿ ಅಳುತ್ತಾ ಧಾರೆಧಾರೆಯಾಗಿ ಕಣ್ಣೀರು ಸುರಿಸಿದರು. ಅವರನ್ನು ಕಾಣುತ್ತಲೆ ರಾಮಚಂದ್ರನು ಆಸನದಿಂದೆದ್ದು ಅವರ ಪಾದಗಳನ್ನು ಹಿಡಿದು ನಮಸ್ಕರಿಸಿದನು. ಆತನ ಹಿಂದೆಯೆ ಲಕ್ಷ್ಮಣನೂ ಸೀತೆಯೂ ಅವರಿಗೆ ನಮಸ್ಕರಿಸಿದರು. ತನ್ನ ಪಾದವನ್ನು ಹಿಡಿದು ನಮಸ್ಕರಿಸುವ ಸೀತಾದೇವಿಯನ್ನು ಕಾಣುತ್ತಲೆ ಕೌಸಲ್ಯೆಗೆ ಕರುಳು ಕರಗಿಹೋಯಿತು, ತಾಯಿ ಮಗಳನ್ನು ಆಲಿಂಗಿಸಿಕೊಳ್ಳುವಂತೆ ಅವಳನ್ನು ಎದೆಗಪ್ಪಿಕೊಂಡಳು. “ಅಯ್ಯೋ ಕಂದಾ, ಹುಟ್ಟಿದುದು ಜನಕರಾಜನ ಹೊಟ್ಟೆಯಲ್ಲಿ; ಕೈ ಹಿಡಿದುದು ಶ್ರೀರಾಮನನ್ನು; ಆದರೂ ನಿನ್ನ ಪಾಲಿಗೆ ಬಂದುದು ಈ ವನವಾಸ. ಬಿಸಲಿನ ಬೇಗೆಯಿಂದ ಬಾಡಿದ ಕಮಲದಂತೆ ಸೊರಗಿ ಹೋಗಿರುವೆಯಲ್ಲಾ! ಮುಗಿಲು ಮುಚ್ಚಿದ ಚಂದ್ರನಂತೆ ನಿನ್ನ ಮುಖ ಕಳೆಗುಂದಿಹೋಗಿದೆ. ನಿನ್ನನ್ನು ನೋಡಿ ನನ್ನ ಹೊಟ್ಟೆ ಉರಿದುಹೋಗುತ್ತಿದೆಯಲ್ಲಾ!” ಎಂದು ಹಳಹಳಿಸಿದಳು. ಅಷ್ಟರಲ್ಲಿಯೆ ಶ್ರೀರಾಮನು ಕುಲಪುರೋಹಿತರಾದ ವಸಿಷ್ಠರಿಗೆ ನಮಸ್ಕರಿಸಿ ಅವರನ್ನು ಉಚಿತವಾದ ಆಸನದಲ್ಲಿ ಕುಳ್ಳಿರಿಸ ತಾನೂ ಸಮೀಪದಲ್ಲಿ ಕುಳಿತನು. ಭರತ ಶತ್ರುಘ್ನರೂ ಸುಮಂತ್ರನೇ ಮೊದಲಾದ ಇತರ ಪ್ರಮುಖರೂ ಆತನ ಸುತ್ತಲೂ ಕುಳಿತುಕೊಂಡರು.

* * *

fau��: � `` w Roman”;color:black’>ಮೊದಲಾದ ಪ್ರಮುಖರು ಸಭೆ ಸೇರಿ, ಒಡನೆಯೆ ಆತನಿಗೆ ಪಟ್ಟಗಟ್ಟಬೇಕೆಂದು ಆಲೋಚಿಸುತ್ತಿದ್ದರು. ಅವರೆಲ್ಲರೂ ಆತನ ಬಳಿಗೆ ಬಂದರು, “ರಾಜಕುಮಾರ, ಪಟ್ಟಾಭಿಷೇಕಕ್ಕೆ ಎಲ್ಲವೂ ಸಿದ್ಧವಾಗಿದೆ, ಒಡನೆಯೆ ನೀನು ರಾಜ್ಯಭಾರವನ್ನು ಸ್ವೀಕರಿಸಿ ಅರಾಜಕವಾಗಿರುವ ಕೋಸಲ ದೇಶವನ್ನು ಸನಾಥವಾಗಿ ಮಾಡು” ಎಂದರು. ಭರತನು ಅದಕ್ಕೊಪ್ಪದೆ “ಜ್ಯೇಷ್ಠನಾದವನು ರಾಜನಾಗುವುದು ಉಚಿತ. ನಮ್ಮ ವಂಶದಲ್ಲಿ ಪರಂಪರೆಯಾಗಿ ಬಂದಿರುವ ಈ ಪದ್ಧತಿಯನ್ನು ತಿಳಿದೂ ತಿಳಿದೂ ಹಿರಿಯರಾದ ನೀವು ಈ ರೀತಿ ಹೇಳಬಹುದೆ? ಶ್ರೀರಾಮನು ರಾಜನಾಗಲಿ; ಆತನಿಗೆ ಬದಲಾಗಿ ನಾನು ಹದಿನಾಲ್ಕು ವರ್ಷಗಳು ವನವಾಸ ಮಾಡುತ್ತೇನೆ. ಚತುರಂಗಬಲವೆಲ್ಲವೂ ನನ್ನೊಡನೆ ಹೊರಡುವುದಕ್ಕೆ ಸಜ್ಜಾಗಲಿ. ಸಿದ್ಧವಾಗಿರುವ ಅಭಿಷೇದ ಸಾಮಗ್ರಿಗಳೊಡನೆ ನಾನು ಅಡವಿಗೆ ತೆರಳಿ ಅಲ್ಲಿಯೆ ಆತನಿಗೆ ಪಟ್ಟಾಭಿಷೇಕವನ್ನು ನೆರವೇರಿಸುತ್ತೇನೆ. ಅನಂತರ ‘ಯಜ್ಞಶಾಲೆಯಿಂದ ಸ್ವಗೃಹಕ್ಕೆ ಅಗ್ನಿಹೋತ್ರವನ್ನು ತರುವಂತೆ’ ಶ್ರೀರಾಮಚಂದ್ರನನ್ನು ಅರಣ್ಯದಿಂದ ಅಯೋಧ್ಯೆಗೆ ಕರೆತರುತ್ತೇನೆ” ಎಂದರು.

 

ಭರತನ ಮಾತುಗಳನ್ನು ಕೇಳಿ ನೆರೆದಿದ್ದವರೆಲ್ಲರೂ ಆತನನ್ನು ಬಾಯ್ತುಂಬ ಹೊಗಳಿದರು. ಶೀಘ್ರದಲ್ಲಿಯೆ ಶ್ರೀರಾಮಾನ್ವೇಷಣೆಗಾಗಿ ತೆರಳುತ್ತೇನೆಂದು ಸರ್ವರೂ ಸಂಭ್ರಮಾನ್ವಿತರಾದರು.

* * *