ದೂರದಲ್ಲಿ ಅಯೋಧ್ಯೆ ಕಾಣುತ್ತಿದಂತೆಯೆ ಭರತನ ಕಳವಳ ಹೆಚ್ಚಾಯಿತು. ಏಕೊ ಆತನಿಗೆ ಪಟ್ಟಣವೆಲ್ಲ ಮಂಕಾಗಿರುವಂತೆ ಕಾಣಿಸಿತು. ಬಹುದೂರಕ್ಕೆ ಕೇಳಿಬರಬೇಕಾಗಿದ್ದ ಜನರ ಕಲಕಲ ಧ್ವನಿಯೂ ಆಗ ಕೇಳಿ ಬರುತ್ತಿರಲಿಲ್ಲ. ಊರಿನ ಹೊರವಲಯದ ಉದ್ಯಾನವನದಲ್ಲಿ ಜನರು ತಂಡ ತಂಡವಾಗಿ ವಿಹರಿಸುತ್ತಿರಬೇಕು; ಆದರೆ ಈಗ ಅದು ನಿರ್ಜನ ಪ್ರದೇಶವಾಗಿದೆ. ಕೇಳುವವರೇ ಇಲ್ಲದೆ ‘ಬಿಕೋ’ ಎಂದು ರೋಧಿಸುವಂತೆ ಕಾಣುತ್ತಿದೆ. ಅದನ್ನು ಕಂಡು ಭರತನ ಮನಸ್ಸು ಬಹು ಭಾರವಾಯಿತು. ದುಃಖದಿಂದ ಆತನ ಕಂಠ ಒತ್ತಿಬಂದಿತು. ದುಗುಡದಿಂದಲೆ ಆತನು ಪಟ್ಟಣವನ್ನು ಪ್ರವೇಶ ಮಾಡಿದನು. ಊರಿನ ಒಳಗೆ ನೋಡಿದರೆ ಎಲ್ಲೆಲ್ಲಿಯೂ ಹಾಳು ಸುರಿಯುತ್ತಿದೆ. ಬೀದಿಗಳನ್ನು ಗುಡಿಸಿ ಎಷ್ಟು ದಿನಗಳಾಗಿದ್ದುವೊ! ಹೊತ್ತು ನೆತ್ತಿಯ ಮೇಲೆ ಏರಿದ್ದರೂ ಮುಚ್ಚಿದ್ದ ಮನೆಯ ಬಾಗಿಲುಗಳು ಮುಚ್ಚಿದಂತೆಯೆ ಇವೆ. ಬೀದಿಯಲ್ಲಿ ಜನಗಳೆ ಇಲ್ಲ. ಒಬ್ಬಿಬ್ಬರು ಕಣ್ಣಿಗೆ ಬಿದ್ದರೂ ಕಂಬನಿಯನ್ನು ಸುರಿಸುತ್ತಾ ಅಲ್ಲಲ್ಲೆ ತಲೆ ಮರೆಸಿಕೊಳ್ಳುತ್ತಿದ್ದಾರೆ. ಇದನ್ನು ಕಂಡ ಭರತನಿಗೆ ತನ್ನ ಕನಸಿನ ನೆನಪಾಯಿತು. ಘೋರವಾದ ಅಪಘಾತವೊಂದು ನಡೆದಿರುವುದೆ ನಿಶ್ಚಯವೆಂದುಕೊಂಡು ಆತನು ಅರಮನೆಯನ್ನು ಪ್ರವೇಶಿಸಿದನು.

ಅರಮನೆಗೆ ಹೊಕ್ಕವನೆ ಭರತನು ನೇರವಾಗಿ ತನ್ನ ತಂದೆಯ ಪ್ರಾಸಾದಕ್ಕೆ ಹೋದನು. ಆದರೆ ಆತನು ಅಲ್ಲಿ ಕಾಣಿಸಲಿಲ್ಲ. ‘ಇದೇನು ಇಲ್ಲಿ ಕೇಳುವವರೆ ದಿಕ್ಕಿಲ್ಲ’ ಎಂದುಕೊಂಡು ತನ್ನ ತಾಯಿಯ ಅಂತಃಪುರಕ್ಕೆ ಹೋದನು. ಮಗನ ಬರವನ್ನು ಕಾಣುತ್ತಲೆ ಕೈಕೆ ತಾನು ಕುಳಿತಿದ್ದ ಸುವರ್ಣಪೀಠದಿಂದ ಎದ್ದುಬಂದು ಆತನನ್ನು ತಬ್ಬಿಕೊಂಡಳು. ತನ್ನ ಕಾಲು ಮುಟ್ಟಿ ನಮಸ್ಕರಿಸಿದ ಮಗನನ್ನು ಮೇಲಕ್ಕೆತ್ತಿ ತೊಡೆಯಮೇಲೆ ಕೂಡಿಸಿಕೊಂಡು “ಮಗೂ, ದೀರ್ಘಪ್ರಮಾಣದಿಂದ ನಿನಗೆ ಬಹಳ ಆಯಾಸವಾಗಿರಬೇಕಲ್ಲವೆ? ನೀನು ಹೊರಟು ಎಷ್ಟು ದಿನಗಳಾದುವು? ನನ್ನ ತಾಯಿಯ ಮನೆಯಲ್ಲಿ ಎಲ್ಲರೂ ಕ್ಷೇಮವಾಗಿದ್ದಾರೆಯೆ?” ಎಂದು ಆಕೆ ಪ್ರಶ್ನಿಸಿದಳು. ಭರತನು ಆಕೆಯ ಪ್ರಶ್ನೆಗಳಿಗೆಲ್ಲಾ ಸ್ವಲ್ಪದರಲ್ಲಿಯೆ ಉತ್ತರ ಹೇಳಿ ಆಮೇಲೆ ಆಕೆಯನ್ನು ಕುರಿತು “ಅಮ್ಮಾ, ನಿನ್ನ ಚಿನ್ನದ ಮಂಚ ಬರಿದಾಗಿರಲು ಕಾರಣವೇನು? ಪೂಜ್ಯನಾದ ತಂದೆ ಸದಾ ನಿನ್ನ ಅಂತಃಪುರದಲ್ಲಿಯೆ ಇರಬೇಕಾಗಿತ್ತಲ್ಲ? ಇಲ್ಲೇಕೆ ಈಗ ಆತ ಕಾಣಬರುತ್ತಿಲ್ಲ? ಆತನು ಕುಶಲದಿಂದಿರುವನೆ? ನಾನು ಮೊದಲು ಆತನನ್ನು ಕಾಣಬೇಕು. ಆತನು ಈಗ ಎಲ್ಲಿರುವನು?” ಎಂದು ಪ್ರಶ್ನೆಯ ಮೇಲೆ ಪ್ರಶ್ನೆಯನ್ನು ತಾಯಿಯ ಮೇಲೆ ಸುರಿಸಿದನು. ರಾಜ್ಯಲೋಭದಿಂದ ಮೋಹಿತಳಾಗಿದ್ದ ಕೈಕೆಗೆ ತನಗೆ ಇಷ್ಟವಾದುದು ಭರತನಿಗೆ ಇಷ್ಟವೆಂದೇ ಭ್ರಮೆ. ಆದ್ದರಿಂದ ತಾನು ನಡೆಸಿದ್ದುದೆಲ್ಲವನ್ನೂ ಆತನಿಗೆ ತಿಳಿಸಬೇಕೆಂದು ಬಗೆದು “ಮಗೂ, ಜಗತ್ತಿನ ಜೀವರಾಶಿಯೆಲ್ಲವೂ ಅಂತ್ಯದಲ್ಲಿ ಹೊಂದುವ ಗತಿಯನ್ನೆ ನಿನ್ನ ತಂದೆಯೂ ಹೊಂದಿದನು” ಎಂದಳು. ಆಕೆಯ ಬಾಯಿಂದ ಕರ್ಣಕಠೋರವಾದ ಆ ಮಾತು ಬರುತ್ತಿದ್ದಂತೆಯೆ ಭರತನು ಕೆಳಕ್ಕೆ ಬಿದ್ದು ಮೂರ್ಛೆ ಹೊಂದಿದನು. ಸ್ವಲ್ಪ ಹೊತ್ತಿನ ಮೇಲೆ ಎಚ್ಚತ್ತು ಕಣ್ಣೀರು ಸುರಿಸುತ್ತಾ ಮಹಾರಾಜನ ಗುಣಗಳನ್ನು ಹಾಡಿಕೊಂಡು ಎಳೆಯ ಮಗುವಿನಂತೆ ಗಟ್ಟಿಯಾಗಿ ಅತ್ತನು.

ನೆಲದ ಮೇಲೆ ಹೊರಳುತ್ತಾ ಗೋಳಿಡುತ್ತಿದ್ದ ಮಗನನ್ನು ಕೈಕೆ ಮೇಲಕ್ಕೆಬ್ಬಿಸಿ ಸಮಾಧಾನ ಮಾಡುತ್ತಾ ಎಂದಳು:

“ಮಗೂ ನಿನ್ನಂತಹ ಬುದ್ಧಿಸಂಪನ್ನರು ಹೀಗೆ ಶೋಕಿಸುವುದು ತರವಲ್ಲ. ”

ಭರತನೆಂದನು: “ಅಮ್ಮಾ, ಇಷ್ಟು ತ್ವರೆಯಾಗಿ ನನ್ನನ್ನು ಕರೆದು ಕಳುಹಿದುದು ಶ್ರೀರಾಮನ ರಾಜ್ಯಾಭಿಷೇಕಕ್ಕೊ ಅಥವಾ ಯಾವುದಾದರೂ ಯಜ್ಞಕ್ಕೊ ಇರಬೇಕೆಂದು ಕೊಂಡಿದ್ದೆ. ಆದರೆ ಇಲ್ಲಿ ತಂದೆ ಮೃತನಾಗಿರುವುದನ್ನು ಕೇಳಿ ನನ್ನ ಹೃದಯ ಬಿರಿದುಹೋಗುತ್ತಿದೆ. ಅಮ್ಮಾ, ಹೀಗೆ ಆಕಸ್ಮಿಕವಾಗಿ ತಂದೆ ಮರಣಹೊಂದಲು ಕಾರಣವೇನು? ಆತನು ಯಾವ ರೋಗಕ್ಕೆ ತುತ್ತಾದನು? ಆತನ ಅಂತ್ಯಕ್ರಿಯೆಗಳನ್ನು ಕೈಯಾರ ನೆರವೇರಿಸಿದ ರಾಮಾದಿಗಳೆ ಧನ್ಯರು! ನನಗೆ ಆ ಭಾಗ್ಯವಿಲ್ಲದಂತಾಯಿತು. ಹೀಗೆ ನಾನು ಪ್ರಯಾಣದಿಂದ ಬಳಲಿ ಬಂದಿದ್ದರೆ, ತಂದೆ ನನ್ನ ಮೈದಡವಿ, ಧೂಳನ್ನು ಒರಸಿ ತಲೆಯನ್ನು ಆಘ್ರಾಣಿಸುತ್ತಿದ್ದನು. ಆ ಪುಣ್ಯ ಇನ್ನೆಲ್ಲಿಯದು! ಅದು ಹೋಗಲಿ; ಅಮ್ಮಾ, ಅಣ್ಣನಾದ ರಾಮಚಂದ್ರನೆಲ್ಲಿ? ತಂದೆ ಗತಿಸಿದ ಮೇಲೆ ಹಿರಿಯಣ್ಣನಾದ ಆತನಲ್ಲವೆ ನನಗೆ ತಂದೆ? ಸತ್ಯಸಂಧನಾದ ಆತನ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಧನ್ಯನಾಗುತ್ತೇನೆ. ಅಮ್ಮಾ, ಇನ್ನೊಂದು ಮತು, ಸಾಯುವ ಮುನ್ನ ತಂದೆ ಏನು ಹೇಳಿದನು? ನನ್ನನ್ನು ಕುರಿತು ಯಾವುದಾದರೂ ಸಂದೇಶವನ್ನು ದಯಪಾಲಿಸಿದನೇನು?”

“ಮಗೂ ಭರತ, ಮಹಾರಾಜನು ‘ಹಾ ರಾಮ! ಹಾ ಸೀತೆ! ಹಾ ಲಕ್ಷ್ಮಣ! ಎಂದು ವಿಲಪಿಸುತ್ತಾ, ‘ಅಯೋಧ್ಯೆಗೆ ಹಿಂದಿರುಗಿದ ಸೀತಾರಾಮಲಕ್ಷ್ಮಣರನ್ನು ಪುನಃ ಯಾರು ಕಾಣುವರೋ ಅವರೇ ಧನ್ಯರು’ ಎಂದು ಹೇಳಿ ಪ್ರಾಣಬಿಟ್ಟನು. ”

“ಅಮ್ಮಾ, ಹಾಗೆಂದರೇನು? ಸತ್ಯಸಂಧನಾದ ಶ್ರೀರಾಮಚಂದ್ರನು ಸೀತಾಲಕ್ಷ್ಮಣರೊಡನೆ ಎಲ್ಲಿಗೆ ಹೋಗಿದ್ದಾನೆ?”

“ಮಗೂ ಆತನು ವಲ್ಕಲಾಜಿನಗಳನ್ನು ಧರಿಸಿ ಹೆಂಡತಿಯೊಡನೆಯೂ ತಮ್ಮನೊಡನೆಯೂ ದಂಡಕಾರಣ್ಯಕ್ಕೆ ಹೋದನು. ”

“ಅಮ್ಮಾ, ಅಣ್ಣನು ದೇಶಭ್ರಷ್ಟನಾಗಿ ದಂಡಕಾರಣ್ಯಕ್ಕೆ ಹೋಗುವಂತಹ ಅಪರಾಧವನ್ನೇನು ಮಾಡಿದನು? ದ್ರವ್ಯವನ್ನು ಅಪಹರಿಸಿದನೆ? ನಿಷ್ಕಾರಣವಾಗಿ ಯಾರನ್ನಾದರೂ ವಧಿಸಿದನೆ? ಅಥವಾ ಪರಸ್ತ್ರೀಯರನ್ನು ಕಾಮಿಸಿದನೆ? ಶ್ರೀರಾಮನ ವಿಚಾರದಲ್ಲಿ ಇವು ಸಂಭವವಲ್ಲವಲ್ಲವೆ?”

“ಇಲ್ಲ ಮಗೂ! ಶ್ರೀರಾಮನು ಅಂತಹ ಹೀನಕಾರ್ಯಗಳಾವುವನ್ನೂ ನಡೆಸಲಿಲ್ಲ. ನಿನ್ನ ತಂದೆ ಆತನಿಗೆ ಯುವರಾಜಪಟ್ಟವನ್ನು ಕಟ್ಟಬೇಕೆಂಬ ಸಂಭ್ರಮದಿಂದ ಸಕಲ ಸಂಭಾರಗಳನ್ನೂ ಸಿದ್ಧಗೊಳಿಸಿಕೊಂಡಿದ್ದನು. ಆದರೆ ನಾನು ಆತನನ್ನು ಅರಣ್ಯಕ್ಕೆ ಅಟ್ಟಬೇಕೆಂದೂ, ನಿನಗೆ ಪಟ್ಟಾಭಿಷೇಕ ಮಾಡಬೇಕೆಂದೂ ವರಗಳನ್ನು ಬೇಡಿದೆ. ಸತ್ಯವ್ರತನಾದ ಮಹಾರಾಜನು ಅವುಗಳನ್ನು ದಯಪಾಲಿಸಿದನು. ಶ್ರೀರಾಮನು ವನವಾಸಕ್ಕೆ ಹೊರಟುಹೋಗುತ್ತಲೆ ಆ ಪ್ರಿಯಪುತ್ರನ ಅಗಲಿಕೆಯಿಂದ ಮಹಾರಾಜನು ಮೃತಿಹೊಂದಿದನು. ನೀನೀಗ ಮಹಾರಾಜ ಪದವಿಯನ್ನು ಪಡೆದಿರುವೆ. ವ್ಯರ್ಥವಾದ ದುಃಖಕ್ಕೆ ಎಡೆಗೊಡದೆ ನಿ‌ನ್ನ ಕರ್ತವ್ಯದಲ್ಲಿ ನಿರತನಾಗು. ಮಹಾರಾಜನ ಅಂತ್ಯಕ್ರಿಯೆಗಳನ್ನು ಆದಷ್ಟು ಬೇಗ ನೆರವೇರಿಸಿ, ರಾಜ್ಯಭಿಷಿಕ್ತನಾಗು. ”

ಕೈಕೆಯ ಮಾತುಗಳು ಕಿವಿಗೆ ಬೀಳುತ್ತಲೆ ಭರತನಿಗೆ ಸುಟ್ಟ ಹುಣ್ಣಿನ ಮೇಲೆ ಉಪ್ಪು ಇಟ್ಟಂತಾಯಿತು. ದುಃಖಕ್ರೋಧಗಳಿಂದ ಪರಿತಪಿಸುತ್ತಾ ಹೇಳಿದನು – “ಅಯ್ಯೋ ಪಾಪಿ? ಎಂತಹ ಅಕಾರ್ಯ ಮಾಡಿದೆ! ನೀನು ನನಗೆ ತಾಯಿಯಲ್ಲ; ಪರಮ ಶತ್ರು! ತಂದೆ ಮೃತನಾದನು; ಅಣ್ಣ ಕಾಡು ಪಾಲಾದನು; ದುಃಖದ ಮೇಲೆ ದುಃಖ ಪ್ರಾಪ್ತವಾದುವು. ನೀನು ನಮ್ಮ ವಂಶವನ್ನು ನಾಶಗೊಳಿಸುವುದಕ್ಕಾಗಿ ಬಂದ ಕಾಳರಾತ್ರಿಯೆ ಹೊರತು ಹೆಣ್ಣಲ್ಲ. ಸೀತಾರಾಮಲಕ್ಷ್ಮಣರನ್ನು ಅಡವಿಗಟ್ಟಿದ್ದರಿಂದ ನಿನಗೆ ಬಂದ ಭಾಗ್ಯವೇನಾ? ಕೌಸಲ್ಯಾಸುಮಿತ್ರೆಯರು ಪುತ್ರಶೋಕದ ಪರಿತಾಪಕ್ಕೆ ಒಳಗಾದರಲ್ಲವೆ? ತನ್ನ ತಾಯಿಗಿಂತಲೂ ಹೆಚ್ಚು ಮಮತೆಯಿಂದ ನಿನ್ನನ್ನು ಕಾಣುತ್ತಿದ್ದ ಶ್ರೀರಾಮನಿಗೆ ನಾರುಬಟ್ಟೆಯನ್ನುಡಿಸಿ ಅಡವಿಗಟ್ಟಿದರೂ ನಿನಗೆ ಸ್ವಲ್ಪವೂ ಸಂಕಟವಾಗಲಿಲ್ಲವೆ? ಶ್ರೀರಾಮನಲ್ಲಿ ನನಗಿದ್ದ ಪರಮಭಕ್ತಿ ರಾಜ್ಯಲುಬ್ದಳಾದ ನಿನಗೆ ಹೇಗೆ ಗೋಚರವಾಗಬೇಕು? ಆತನಿಗೆ ಸಲ್ಲಬೇಕಾದ ಈ ರಾಜ್ಯಭಾರವನ್ನು ನಾನು ವಹಿಸುವೆನೆ? ಎತ್ತು ಹೊರುವ ಭಾರವನ್ನು ಕರು ಹೊರಬಲ್ಲುದೆ? ಒಂದು ಪಕ್ಷಕ್ಕೆ ಹೊರಬಲ್ಲೆನಾದರೂ ನಿನಗೆ ಅಸಂತೋಷವನ್ನು ಉಂಟು ಮಾಡುವುದಕ್ಕಾಗಿಯಾದರೂ ನಾನು ಅದನ್ನು ಸ್ವೀಕರಿಸುವುದಿಲ್ಲ. ಶ್ರೀರಾಮನು ನಿನ್ನಲ್ಲಿ ಜನನಿಯೆಂಬ ಗೌರವವನ್ನಿಟ್ಟಿರುವುದರಿಂದ ನಿನ್ನನ್ನೀಗ ಕ್ಷಮಿಸಬೇಕಾಗಿದೆ. ಇಲ್ಲದಿದ್ದರೆ ಸದಾಚಾರಹೀನಳಾದ ನಿನ್ನನ್ನು ತ್ಯಜಿಸಿ, ನಿಗ್ರಹಿಸುತ್ತಿದ್ದೆ. ಹುಟ್ಟಿದ ಮತ್ತು ಸೇರಿದ ಕುಲಗಳೆರಡನ್ನೂ ನರಕಕ್ಕೆ ಅಟ್ಟಿದ ಕುಲಘಾತಕಿ! ನಿನ್ನ ಪಾಪ ನಿನ್ನ ದುರಾಶೆಯನ್ನು ನಿಷ್ಪಲಗೊಳಿಸಿ, ನೀನು ನೋಡುತ್ತಿರುವಂತೆಯೆ ಅರಣ್ಯಕ್ಕೆ ಹೊರಟುಹೋಗುತ್ತೇನೆ. ನಿಷ್ಕಲ್ಮಷನೂ ಬಂಧುಪ್ರಿಯನೂ ಆದ ಹಿರಿಯಣ್ಣ ರಾಮಚಂದ್ರನನ್ನು ಕರೆದುತಂದು, ಆತನಿಗೆ ಪಟ್ಟಕಟ್ಟಿ ನಾನು ಆತನ ದಾಸನಾಗಿರುತ್ತೇನೆ.”

ಮಾತನಾಡುತ್ತಾ ಹೋದಂತೆಲ್ಲ ಭರತನ ಕೋಪ ಏರುತ್ತಾ ಹೋಯಿತು. ಹೆಡೆ ತುಳಿದ ಹಾವಿನಂತೆ ಬುಸುಗುಟ್ಟುತ್ತಾ “ನೃಶಂಸೆ, ದುಷ್ಟಚಾರಿಣಿ, ಕುಲನಾಶಕಿ” ಎಂದು ಬಯ್ದನು. “ನೀನು ನರಕಕ್ಕೆ ಬಿದ್ದು ಹೋಗು. ಪಾಪಾತ್ಮಳಾದ ನಿನಗೆ ಪರಲೋಕದಲ್ಲಿಯೂ ಪತಿಸಮಾಗಮ ಲಭಿಸದಿರಲಿ” ಎಂದು ಶಪಿಸಿದನು. “ನನ್ನ ತಂದೆಯನ್ನು ಕೊಂದೆ; ಅಣ್ಣನನ್ನು ಅರಣ್ಯಕಟ್ಟಿದೆ; ನನಗೆ ದಾರುಣವಾದ ಅಪಕೀರ್ತಿಯನ್ನು ಜೋಡಿಸಿದೆ. ನೀನು ನನ್ನ ಪರಮಶತ್ರು. ಇಗೋ, ಈಗಲೇ ರಾಜ್ಯವನ್ನು ಬಿಟ್ಟು ತೊಲಗಿಹೋಗು. ನಿನ್ನ ದರ್ಶನ ಸಂಭಾಷಣೆಗಳು ಮಹಾಪಾಪಕರವಾದವುಗಳು. ಎಲೈ ಪಾಪಿನಿ, ನಿನ್ನ ಪಾಪಕಾರ್ಯವನ್ನು ಸಹಿಸಲಾರೆ. ಲೋಕಕ್ಕೆಲ್ಲ ದುಃಖವನ್ನು ತಂದೊಡ್ಡಿದ ಪಾಪಿಷ್ಠಳ, ಏಕೆ ಈ ಹಾಳು ಬಾಳುಹೊರೆಯುತ್ತಿದ್ದೀಯೆ? ಬೆಂಕಿಯಲ್ಲಿ ಬಿದ್ದೋ, ಉರುಳು ಹಾಕಿಕೊಂಡೋ ಸಾಯಬಾರದೆ? ಅಥವಾ ದಂಡಕಾರಣ್ಯಕ್ಕಾದರೂ ತೊಲಗಿಹೋಗು. ನಿನಗೆ ಬೇರೆ ಗತಿಯೇ ಇಲ್ಲ. ನಾನಾದರೊ ಶ್ರೀರಾಮನನ್ನು ಕರೆತಂದು ಸಿಂಹಾಸನದಲ್ಲಿ ಪ್ರತಿಷ್ಠಿಸುತ್ತೇನೆ. ” ಎಂದೆಂದು ಬೆಂದು, ಬೇಯಿಸುವಂತೆ ನುಡಿದು, ಹೃದಯದ ಅಸಹ್ಯವೇದನೆಯಿಂದ ಮೂರ್ಛಿತನಾಗಿ ನೆಲದಮೇಲೆ ಬಿದ್ದನು.

ಮೂರ್ಛೆಗೊಂಡು ನೆಲದ ಮೇಲೆ ಬಿದ್ದ ಭರತನು ಬಹು ಹೊತ್ತಿನ ಮೇಲೆ ಎಚ್ಚರಗೊಂಡು ಮೇಲಕ್ಕೆದ್ದನು. ಅಷ್ಟುಹೊತ್ತಿಗೆ ಆತನನ್ನು ಕಾಣುವುದಕ್ಕಾಗಿ ಮಂತ್ರಿಗಳು ಬಂದು ನಿಂತಿದ್ದರು. ಅವರನ್ನು ಕಾಣುತ್ತಲೆ ಆತನ ಕಣ್ಣುಗಳಲ್ಲಿ ನೀರುತುಂಬಿತು. ಅವರನ್ನು ಕುರಿತು ಆತನು “ನಾನು ಎಂದೂ ಈ ರಾಜ್ಯವನ್ನು ಆಶಿಸಿದವನಲ್ಲ. ಈ ಕೈಕೆ ನಡಸಿದ ಕುತಂತ್ರಗಳೊಂದನ್ನೂ ನಾನರಿಯೆ. ಶತ್ರುಘ್ನನೊಡನೆ ದೂರದೇಶದಲ್ಲಿದ್ದ ನನಗೆ ಇಲ್ಲಿ ನಡೆದಿರುವ ಸೀತಾರಾಮಲಕ್ಷ್ಮಣರ ವನವಾಸ ವಿಚಾರವೇನೂ ತಿಳಿಯದು” ಎಂದು ಅಳುತ್ತಾ ಹೇಳಿದನು. ಅಷ್ಟರಲ್ಲಿ ಆತನ ಧ್ವನಿಯನ್ನು ಕೇಳಿ ಕೌಸಲ್ಯಾದೇವಿ ಆತನ ಬಳಿಗೆ ಬಂದಳು. ಆತನು ಎಂತನ ಸದ್ಗುಣಶಾಲಿಯೆಂಬುದದು ಆಕೆಗೆ ಗೊತ್ತು. ಆದರೂ ಹೊಟ್ಟೆಯ ಸಂಕಟದಲ್ಲಿ ಹಿಂದು ಮುಂದು ನೋಡದೆ, “ಕುಮಾರ, ರಾಜ್ಯಕಾಮನಾದ ನಿನಗೆ ಅಕಂಟಕವಾದ ರಾಜ್ಯ ದೊರೆಯಿತಷ್ಟೆ? ಇನ್ನು ಯಥೇಷ್ಟವಾಗಿ ಅದನ್ನು ಅನುಭವಿಸು. ಆದರೆ ಕೈಕೆ ಎಂತಹ ಅಕೃತ್ಯ ಎಸಗಿದ್ದಾಳೆ! ನನ್ನ ಮಗನಿಗೆ ನಾರುಮಡಿಗಳನ್ನುಡಿಸಿ ಅಡವಿಗಟ್ಟಿದಳಲ್ಲಾ! ಅದರಿಂದ ಆಕೆಗೆ ಬಂದ ಭಾಗ್ಯವೇನು? ಆಕೆ ಕ್ಷಿಪ್ರದಲ್ಲಿಯೆ ನನ್ನನ್ನೂ ಅಡವಿಗಟ್ಟುವಳೆಂದು ತೋರುತ್ತದೆ. ಅಥವಾ ಆಕೆ ಅಟ್ಟುವುದೇನು? ನಾನೇ ಸುಮಿತ್ರೆಯೊಡನೆ ನನ್ನ ಮಗನಿರುವ ಬಳಿಗೆ ಹೋಗುತ್ತೇನೆ. ಆ ಪುರುಷವ್ಯಾಘ್ರನು ತಪಸ್ಸು ಮಾಡುತ್ತಿರುವ ಕಾಡಿಗೆ ನನ್ನುನ್ನು ಕರೆದೊಯ್ದು ಬಿಡಬಾರದೆ? ಧನಧಾನ್ಯ ಸಮೃದ್ಧವಾದ ಈ ದೊಡ್ಡ ಕೋಸಲರಾಜ್ಯವನ್ನು ನಿನ್ನ ತಾಯಿ ನಿನಗೆ ಸಂಪಾದಿಸಿಕೊಟ್ಟಿದ್ದಾಳೆ. ಈ ರಾಜ್ಯವನ್ನು ನಿರಾತಂಕವಾಗಿ ಆಳಿಕೊಂಡು ನೀನು ಸುಖವಾಗಿರು” ಎಂದು ಬಹು ಕ್ರೂರವಾಗಿ ಮಾತಾಡಿದಳು.

ಗಾಯದ ಮೇಲೆ ಸೂಜಿಯಿಂದ ಚುಚ್ಚಿದಂತಾಯಿತು ಭರತನಿಗೆ, ಕೌಸಲ್ಯೆಯ ಕ್ರೂರನುಡಿಗಳನ್ನು ಕೇಳಿ. ಆಕೆಯ ಎದುರಿಗೆ ಕೈಗಳನ್ನು ಜೋಡಿಸಿಕೊಂಡು ಹೇಳಿಕೊಂಡನು. “ಆರ್ಯೆ, ಏನೂ ಅರಿಯದ ನನ್ನನ್ನು ಏಕೆ ನಿಂದಿಸುವೆ? ರಾಘವನಲ್ಲಿ ನನಗಿರುವ ಸ್ಥಿರಪ್ರೀತಿ ನಿನಗೆ ಗೊತ್ತಿಲ್ಲವೆ? ಸತ್ಯಸಂಧನಾದ ಶ್ರೀರಾಮಚಂದ್ರಮೂರ್ತಿಯ ವನವಾಸಕ್ಕೆ ನಾನು ಅನುಮತಿಸಿದ ಪಕ್ಷದಲ್ಲಿ ಗುರುಮುಖದಿಂದ ನಾನು ಕಲಿತಿರುವ ವಿದ್ಯೆಯೆಲ್ಲವೂ ನಶಿಸಿಹೋಗಲಿ! ನಿದ್ರಿಸುವ ಗೋವನ್ನು ಕಾಲಿನಿಂದ ಒದ್ದವನ ಗತಿ ನನಗಾಗಲಿ! ಯುದ್ಧದಲ್ಲಿ ಹಿಮ್ಮೆಟ್ಟಿ ಫಲಾಯನ ಮಾಡುವವನ ದುಗತಿ ನನಗಾಗಲಿ! ಪಂಚಮಹಾಪಾತಕಗಳನ್ನು ಮಾಡಿದವನು ಬಿದ್ದುಹೋಗುವ ನರಕದಲ್ಲಿ ನಾನು ಬಿದ್ದುಹೋಗುವಂತಾಗಲಿ! ನಾನು ಸಂಸಾರರಹಿತನಾಗಿ ಹೋಗಲಿ!. . . ”

ಹೀಗೆ ಘೋರ ಶಪಥಗಳಿಂದ ತನ್ನ ನಿರ್ದೋಷವನ್ನು ಸ್ಥಾಪಿಸುತ್ತಿರುವ ಭರತನನ್ನು ಕೌಸಲ್ಯಾದೇವಿ ಸಮೀಪಕ್ಕೆ ಬರಸೆಳೆದು ತೊಡೆದು ಮೇಲೆ ಕೂಡಿಸಿಕೊಂಡು ಸಮಾಧಾನ ಮಾಡಿದಳು: “ವತ್ಸಾ, ನಿನ್ನ ಘೋರ ಶಪಥವನ್ನು ಕೇಳಿ ನನ್ನ ಪ್ರಾಣ ತಳಮಳಿಸುತ್ತಿದೆ. ಬೇಡ ಮಗು. ನೀನು ಧರ್ಮನಿರತನಾಗಿರುವುದು ನನ್ನ ಭಾಗ್ಯ. ಸತ್ಯಪ್ರತಿಜ್ಞನಾದ ನಿನಗೆ ಸದ್ಗತಿಯೆ ಹೊರತು ದುರ್ಗತಿಯೇಕೆ ಪ್ರಾಪ್ತವಾಗುತ್ತದೆ?”

ಮರುದಿನ ಭರತಕುಮಾರನು ವಸಿಷ್ಠರ ಆದೇಶದಂತೆ ತಂದೆಯ ಅಂತ್ಯಕ್ರಿಯೆಗಳನ್ನು ನಡಸಿದನು. ತೈಲಪಾತ್ರದಲ್ಲಿದ್ದ ದಶರಥನ ದೇಹವನ್ನು ಹೊರತೆಗೆದು ಅಲಂಕೃತವಾದ ಪಲ್ಲಕ್ಕಿಯಲ್ಲಿಟ್ಟುಕೊಂಡು ಮಂತ್ರಾಗ್ನಿಯೊಡನೆ ಶ್ಮಶಾನಕ್ಕೆ ಕೊಂಡೊಯ್ದರು. ಅಲ್ಲಿ ಮೊದಲೇ ಸಿದ್ಧಪಡಿಸಿಟ್ಟಿದ್ದ ಚಿತೆಯ ಮೇಲೆ ಮೃತಕಳೇಬರವನ್ನು ಇಟ್ಟುದಾಯಿತು. ಪುರೋಹಿತರ ವೇದಘೋಷಗಳ ಮಧ್ಯೆ ಭರತನು ಸೂಡಿಗೆ ಬೆಂಕಿ ಸೋಕಿಸಿದನು. ಸುತ್ತ ನೆರೆದಿದ್ದ ರಾಣಿಯರೂ ಬಂಧುಬಾಂಧವರೂ ಮತ್ತೊಮ್ಮೆ ಬಿಕ್ಕಿ ಬಿಕ್ಕಿ ಅತ್ತರು. ನೋಡ ನೋಡುತ್ತಿರುವಲ್ಲಿ ದಶರಥನ ದೇಹ ಅಗ್ನಿಗೆ ಆಹುತಿಯಾಯಿತು. ಶ್ಮಶಾನಯಾತ್ರೆಗೆ ಬಂದಿದ್ದವರೆಲ್ಲರೂ ಸರಯೂನದಿಗೆ ಹೋಗಿ ಸ್ನಾನ ಮಾಡಿ, ಮೃತರ ಆತ್ಮಕ್ಕೆ ಶಾಂತಿಯಾಗಲೆಂದು ಜಲತರ್ಪಣ ಕೊಟ್ಟರು. ಹಿರಿಯ ಮಗನಾದ ಶ್ರೀರಾಮಚಂದ್ರನು ಸಮೀಪದಲ್ಲಿಲ್ಲದ ಕೊರತೆಯನ್ನು ಬಿಟ್ಟರೆ ಉಳಿದುದೆಲ್ಲವೂ ಸಾಂಗವಾಗಿಯೆ ನೆರವೇರಿದಂತಾಯಿತು.

ಹತ್ತು ದಿನಗಳ ಅಶೌಚ ಕಳೆದ ಮೇಲೆ ಪುಣ್ಯಾಹವಾಚನದಿಂದ ಪರಿಶುದ್ಧನಾದ ಭರತನು ಹನ್ನೆರಡನೆಯ ದಿನ ಪಿತೃಶ್ರಾದ್ಧವನ್ನು ಭಕ್ತಿಯಿಂದ ನೆರವೇರಿಸಿದನು. ಅಗಣಿತವಾದ ದಾನದಕ್ಷಿಣೆಗಳಿಂದ ಬ್ರಾಹ್ಮಣರು ತಣಿದು ಹೋದರು. ಈ ಕರ್ಮಗಳನ್ನೆಲ್ಲಾ ಮುಗಿಸಿ ಅಣ್ಣನನ್ನು ಕರೆತರುವುದಕ್ಕಾಗಿ ಅರಣ್ಯಕ್ಕೆ ತೆರಳಬೇಕೆಂದು ಭರತನು ಯೋಚಿಸಿದ್ದನು. ಆ ವಿಚಾರವನ್ನೆ ಕುರಿತು ಭರತಶತ್ರುಘ್ನರು ಆಲೋಚಿಸುತ್ತಾ ಕುಳಿತಿರುವಾಗ ಸರ್ವಾಲಂಕಾರಭೂಷಿತೆಯಾಗಿ ಒಯ್ಯಾರದಿಂದ ಓಡಾಡುತ್ತಿದ್ದ ಮಂಥರೆ ಅವರ ಕಣ್ಣಿಗೆ ಬಿದ್ದಳು. ಹಗ್ಗಗಳಿಂದ ಬಂಧಿತಳಾದ ಹೆಣ್ಣುಕೋತಿಯಂತೆ ಕಂಠಾಭರಣಾದಿ ಒಡವೆಗಳಿಂದ ಅಲಂಕೃತಳಾಗಿದ್ದ ಅವಳನ್ನು ದ್ವಾರಪಾಲಕನೊಬ್ಬನು ಎಳತಂದು ಶತ್ರುಘ್ನನ ಎದುರಿಗೆ ನಿಲ್ಲಿಸಿದನು. ಆತನು ಅವಳನ್ನು ಹಿಡಿದುಕೊಂಡು “ಈ ಅನರ್ಥಕ್ಕೆಲ್ಲಾ ಮೂಲಕಾರಣಳಾದ ಈ ಮಾರಿಗೆ ಈಗಲೆ ತಕ್ಕ ಶಿಕ್ಷೆ ಕೊಡುತ್ತೇನೆ” ಎಂದು ಅಬ್ಬರಿಸಿದನು. ಆತನು ಅಷ್ಟು ಹೇಳಿದುದರಿಂದಲೆ, ಮಂಥರೆ ಮನೆಯೆಲ್ಲವೂ ಸೆಲೆಹೋಗುವಂತೆ ಗಟ್ಟಿಯಾಗಿ ಕಿರಿಚಿಕೊಂಡಳು. ಅದನ್ನು ಕೇಳಿ ಇನ್ನೇನು ಅನರ್ಥ ನಡೆಯುವುದೊ ಎಂದು ಹೆದರಿದ ದಾಸಿಯರೆಲ್ಲರೂ ದಿಕ್ಕಾಪಾಲಾಗಿ ಓಡಿಹೋಗಿ ಕೌಸಲ್ಯೆಯನ್ನು ಮರೆಹೊಕ್ಕರು. ಇತ್ತ ಶತ್ರುಘ್ನನು ಕಿರಿಚಿಕೊಳ್ಳುತ್ತಿದ್ದ ಮಂಥರೆಯನ್ನು ಒಂದು ಸಲ ಸೆಳೆದು ನೆಲಕ್ಕೆ ಕುಕ್ಕಿದನು. ಅವಳು ತೊಟ್ಟಿದ್ದ ಆಭರಣಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ನೆಲದ ಮೇಲೆ ಬಿದ್ದುವು. ಶತ್ರುಘ್ನನು ಅಷ್ಟಕ್ಕೇ ಅವಳನ್ನು ಬಿಡದೆ ದರದರನೆ ಎಳೆದುಕೊಂಡು ಹೋಗುತ್ತಿರಲು ಕೈಕೆ ಅಡ್ಡಬಂದು ತನ್ನ ದಾಸಿಯನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದಳು. ಆದರೆ ಶತ್ರುಘ್ನನು ಆಕೆಯನ್ನು ಗದರಿಸಿ, ಕಠಿಣವಾಕ್ಯಗಳಿಂದ ಅವಳನ್ನು ನಿಂದಿಸಿದನು. ಆಗ ಆಕೆ ಹೆದರಿ ಭರತನನ್ನು ಮರೆಹೊಕ್ಕಳು. ಆತನು ತಮ್ಮನನ್ನು ಸಮಾಧಾನ ಮಾಡಿ ಆತನಿಂದ ಆಗುತ್ತಿದ್ದ ಸ್ತ್ರೀಹತ್ಯೆಯನ್ನು ತಪ್ಪಿಸಿದನು.

ಅಣ್ಣನ ಅನ್ವೇಷಣೆಗಾಗಿ ಅರಣ್ಯಕ್ಕೆ ತೆರಳಬೇಕೆಂದು ಭರತನು ಯೋಚಿಸುತ್ತಿದ್ದಾಗ ಮಂತ್ರಿಗಳೇ ಮೊದಲಾದ ಪ್ರಮುಖರು ಸಭೆ ಸೇರಿ, ಒಡನೆಯೆ ಆತನಿಗೆ ಪಟ್ಟಗಟ್ಟಬೇಕೆಂದು ಆಲೋಚಿಸುತ್ತಿದ್ದರು. ಅವರೆಲ್ಲರೂ ಆತನ ಬಳಿಗೆ ಬಂದರು, “ರಾಜಕುಮಾರ, ಪಟ್ಟಾಭಿಷೇಕಕ್ಕೆ ಎಲ್ಲವೂ ಸಿದ್ಧವಾಗಿದೆ, ಒಡನೆಯೆ ನೀನು ರಾಜ್ಯಭಾರವನ್ನು ಸ್ವೀಕರಿಸಿ ಅರಾಜಕವಾಗಿರುವ ಕೋಸಲ ದೇಶವನ್ನು ಸನಾಥವಾಗಿ ಮಾಡು” ಎಂದರು. ಭರತನು ಅದಕ್ಕೊಪ್ಪದೆ “ಜ್ಯೇಷ್ಠನಾದವನು ರಾಜನಾಗುವುದು ಉಚಿತ. ನಮ್ಮ ವಂಶದಲ್ಲಿ ಪರಂಪರೆಯಾಗಿ ಬಂದಿರುವ ಈ ಪದ್ಧತಿಯನ್ನು ತಿಳಿದೂ ತಿಳಿದೂ ಹಿರಿಯರಾದ ನೀವು ಈ ರೀತಿ ಹೇಳಬಹುದೆ? ಶ್ರೀರಾಮನು ರಾಜನಾಗಲಿ; ಆತನಿಗೆ ಬದಲಾಗಿ ನಾನು ಹದಿನಾಲ್ಕು ವರ್ಷಗಳು ವನವಾಸ ಮಾಡುತ್ತೇನೆ. ಚತುರಂಗಬಲವೆಲ್ಲವೂ ನನ್ನೊಡನೆ ಹೊರಡುವುದಕ್ಕೆ ಸಜ್ಜಾಗಲಿ. ಸಿದ್ಧವಾಗಿರುವ ಅಭಿಷೇದ ಸಾಮಗ್ರಿಗಳೊಡನೆ ನಾನು ಅಡವಿಗೆ ತೆರಳಿ ಅಲ್ಲಿಯೆ ಆತನಿಗೆ ಪಟ್ಟಾಭಿಷೇಕವನ್ನು ನೆರವೇರಿಸುತ್ತೇನೆ. ಅನಂತರ ‘ಯಜ್ಞಶಾಲೆಯಿಂದ ಸ್ವಗೃಹಕ್ಕೆ ಅಗ್ನಿಹೋತ್ರವನ್ನು ತರುವಂತೆ’ ಶ್ರೀರಾಮಚಂದ್ರನನ್ನು ಅರಣ್ಯದಿಂದ ಅಯೋಧ್ಯೆಗೆ ಕರೆತರುತ್ತೇನೆ” ಎಂದರು.

ಭರತನ ಮಾತುಗಳನ್ನು ಕೇಳಿ ನೆರೆದಿದ್ದವರೆಲ್ಲರೂ ಆತನನ್ನು ಬಾಯ್ತುಂಬ ಹೊಗಳಿದರು. ಶೀಘ್ರದಲ್ಲಿಯೆ ಶ್ರೀರಾಮಾನ್ವೇಷಣೆಗಾಗಿ ತೆರಳುತ್ತೇನೆಂದು ಸರ್ವರೂ ಸಂಭ್ರಮಾನ್ವಿತರಾದರು.

* * *